Tiger Death| ನಾಗರಹೊಳೆ ಗಡಿಯಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವು; ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ
x
ಹುಲಿ ಸಾಂದರ್ಭಿಕ ಚಿತ್ರ

Tiger Death| ನಾಗರಹೊಳೆ ಗಡಿಯಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವು; ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ

ಉರುಳು ತೆರವಿಗೆ ಸರ್ಕಾರ ಪದೇ ಪದೇ ಸೂಚನೆ ನೀಡುತ್ತಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇದನ್ನು ಸಹಿಸುವುದಿಲ್ಲ ಎಂದು ಸಚಿವ ಈಶ್ವರ್‌ ಖಂಡ್ರೆ ಎಚ್ಚರಿಸಿದ್ದಾರೆ.


ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಗಡಿ ಭಾಗದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಮೂರು ವರ್ಷದ ಗಂಡು ಹುಲಿ ಮೃತಪಟ್ಟಿದೆ. ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ ಅರಣ್ಯ ಸಿಬ್ಬಂದಿಯ ಕರ್ತವ್ಯ ಲೋಪದ ಕುರಿತು ತನಿಖೆ ನಡೆಸುವಂತೆಯೂ ಆದೇಶಿಸಿದ್ದಾರೆ.

ನಾಗರಹೊಳೆ ವ್ಯಾಪ್ತಿಯ ಮೇಟಿಕುಪ್ಪೆ ವಲಯದ ಅರಣ್ಯ ಗಡಿಯಿಂದ ಕೇವಲ 300 ಮೀಟರ್ ದೂರದಲ್ಲಿರುವ ಖಾಸಗಿ ಜಮೀನಿನಲ್ಲಿ ಈ ಘಟನೆ ನಡೆದಿದೆ. ಕಾಡು ಪ್ರಾಣಿಗಳ ಬೇಟೆಗಾಗಿ ದುಷ್ಕರ್ಮಿಗಳು ಅಕ್ರಮವಾಗಿ ತಂತಿ ಉರುಳು ಅಳವಡಿಸಿದ್ದರು. ಆಹಾರ ಅರಸಿ ಬಂದಿದ್ದ 3 ವರ್ಷ ಪ್ರಾಯದ ಹುಲಿ ಉರುಳಿಗೆ ಸಿಲುಕಿ, ಮೃತಪಟ್ಟಿದೆ.

ತನಿಖೆಗೆ ಅರಣ್ಯ ಸಚಿವರ ಸೂಚನೆ

ಹುಲಿ ಸಾವಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖೆ ಆದೇಶ ಹೊರಡಿಸಿದ್ದಾರೆ.

ಅರಣ್ಯದ ಅಂಚಿನಲ್ಲಿ ನಿರಂತರ ಗಸ್ತು ನಡೆಯಬೇಕಿತ್ತು. ಇಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದಾರೆ. ಅಲ್ಲದೇ ಕಾಡಿನಂಚಿನ ಜಮೀನುಗಳಲ್ಲಿ ಅಕ್ರಮವಾಗಿ ಹಾಕಿರುವ ಉರುಳುಗಳನ್ನು ಪತ್ತೆಹಚ್ಚಿ ತೆರವುಗೊಳಿಸಲು ವಿಶೇಷ ಅಭಿಯಾನ ನಡೆಸುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.

ಉರುಳು ಅಳವಡಿಸಿದ ಜಮೀನು ಮಾಲೀಕರು ಅಥವಾ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಉರುಳು ತೆರವಿಗೆ ಸರ್ಕಾರ ಪದೇ ಪದೇ ಸೂಚನೆ ನೀಡುತ್ತಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇದನ್ನು ಸಹಿಸುವುದಿಲ್ಲ ಎಂದು ಸಚಿವ ಈಶ್ವರ್‌ ಖಂಡ್ರೆ ಎಚ್ಚರಿಸಿದ್ದಾರೆ.

ಕಾಡಿನಂಚಿನ ಗ್ರಾಮಗಳಲ್ಲಿ ಅಪಾಯ

ನಾಗರಹೊಳೆ ಮತ್ತು ಬಂಡೀಪುರದಂತಹ ಪ್ರದೇಶಗಳಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ ಸಾಮಾನ್ಯವಾಗಿದೆ. ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು, ಇಲ್ಲವೇ ಬೇಟೆಗಾರರು ಮಾಂಸಕ್ಕಾಗಿ ಕಾಡುಪ್ರಾಣಿಗಳ ಸೆರೆಗೆ ಅಕ್ರಮವಾಗಿ ವಿದ್ಯುತ್ ತಂತಿ ಅಥವಾ ತಂತಿ ಉರುಳು ಹಾಕಿರುವುದು ಈ ಹಿಂದೆಯೂ ಪತ್ತೆಯಾಗಿತ್ತು.

ಕಳೆದ ಒಂದು ವರ್ಷದಿಂದ ಹುಲಿ ಮತ್ತು ಚಿರತೆಗಳು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅರಣ್ಯ ಇಲಾಖೆಯಲ್ಲಿ ಕೆಳಹಂತದ ಸಿಬ್ಬಂದಿ ಕೊರತೆಯಿಂದಾಗಿ ಗಡಿಭಾಗಗಳಲ್ಲಿ ನಿರಂತರ ಕಣ್ಗಾವಲು ಸವಾಲಾಗಿದ್ದು, ಕಳ್ಳಬೇಟೆಗಾರರಿಗೆ ಇದೇ ವರದಾನವಾಗಿದೆ.

ಉರುಳು ಹಾಕುವುದು ಅಪರಾಧ

ಜಮೀನಿನಲ್ಲಿ ಕಾಡು ಪ್ರಾಣಿಗಳ ಬೇಟೆಗಾಗಿ ಉರುಳು ಹಾಕುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗಂಭೀರ ಅಪರಾಧವಾಗಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದರಿಂದ ಜನರಲ್ಲಿ ಭಯ ಕಡಿಮೆಯಾಗಿದೆ. ಅರಣ್ಯ ಇಲಾಖೆಯು ಈಗಲಾದರೂ ಎಚ್ಚೆತ್ತುಕೊಂಡು ಆಧುನಿಕ ತಂತ್ರಜ್ಞಾನದ ಮೂಲಕ ಗಡಿ ಕಾವಲು ಬಲಪಡಿಸಬೇಕಿದೆ ಎಂದು ವನ್ಯಜೀವಿ ಪ್ರಿಯರು ಆಗ್ರಹಿಸಿದ್ದಾರೆ.

ಮಾ.17 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಅಡವಿ ಮಠದ ಸಮೀಪ ಹುಲಿಯೊಂದು ಮೃತಪಟ್ಟಿತ್ತು. ಕೃಷಿ ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಸುಮಾರು ಎರಡು ವರ್ಷದ ಗಂಡು ಹುಲಿಯೊಂದು ಬಲಿಯಾಗಿತ್ತು.

ಕೇರಳ ಮೂಲದ ರವಿಚಂದ್ರ ಎಂಬುವರಿಗೆ ಸೇರಿದ ಈ ಜಮೀನನ್ನು ಪರಮೇಶ ಎಂಬುವರು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು. ಈ ಜಮೀನಿನ ಬೆಳೆ ರಕ್ಷಣೆಗಾಗಿ ಕಾನೂನುಬಾಹಿರವಾಗಿ ವಿದ್ಯುತ್ ತಂತಿಗಳನ್ನು ಅಳವಡಿಸಲಾಗಿತ್ತು. ಸೋಮವಾರ ರಾತ್ರಿ ಇದೇ ತಂತಿ ಸ್ಪರ್ಶಿಸಿದ ಹುಲಿ, ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲೇ ಮೃತ ಪಟ್ಟಿತ್ತು.

Read More
Next Story