
ಹರಾಜು ಕೇಂದ್ರದಲ್ಲಿನ ತಾಜ್ ಮಹಲ್(ಕೆಂಪು ಗುಲಾಬಿ) ಹಾಗೂ ಇತರೆ ಗುಲಾಬಿ ಹೂವುಗಳು (ಫೋಟೋ: ರಘು ಆರ್.ಡಿ.)
ಈ ಗುಲಾಬಿ.. ನಿನಗಾಗಿ! ಪ್ರೇಮಿಗಳ ಸಡಗರಕ್ಕೆ ವಿದೇಶಕ್ಕೆ ʼಹಾರುತ್ತಿರುವʼ ಬೆಂಗ್ಳೂರ ಗುಲಾಬಿ!
ಬೆಂಗಳೂರಿನಲ್ಲಿರುವ ʼಅಂತರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರಕ್ಕೆʼ ಪ್ರತಿದಿನ 5 ಲಕ್ಷ ಹೂವುಗಳು ಹರಾಜಿಗೆ ಬರುತ್ತವೆ.
ಬೆಂಗಳೂರು ಸುತ್ತಲಿನ ಬಯಲು ಸೀಮೆ ಎಂದೇ ಕರೆಯಲ್ಪಡುವ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ ಹಾಗೂ ರಾಮನಗರ ಭಾಗದಲ್ಲಿ ಬೆಳೆಯುವ ಗುಲಾಬಿ ಹೂವು ದೇಶಿಯ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿವೆ. ಪ್ರೇಮಿಗಳ ದಿನಾಚರಣೆ ಹತ್ತಿರವಾಗುತ್ತಿರುವ ಈ ವೇಳೆಯಲ್ಲಿ ಇವುಗಳ ಬೇಡಿಕೆಯೂ ಹೆಚ್ಚಾಗಿದೆ.
ಯುವ ಪ್ರೇಮಿಗಳಿಗೆ ಅಚ್ಚುಮೆಚ್ಚಿನ ತಾಜ್ ಮಹಲ್ ತಳಿಯ ಕೆಂಪು ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದ್ದು, ಬೆಂಗಳೂರಿನಲ್ಲಿರುವ ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಇಲ್ಲಿ ಸಿಗುವ ವಿವಿಧ ಗುಲಾಬಿಗಳಿಗೆ ಮಾರು ಹೋಗದ ಮನಸುಗಳೇ ಇಲ್ಲ, ಪ್ರೇಮಿಗಳೂ ಇಲ್ಲ!
ಹತ್ತು ಲಕ್ಷ ಹೂವುಗಳ ನಿರೀಕ್ಷೆ
ಬೆಂಗಳೂರಿನ ಹೆಬ್ಬಾಳದಲ್ಲಿರುವ ʼಅಂತರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರಕ್ಕೆʼ ಪ್ರತೀ ದಿನ 5 ಲಕ್ಷ ಹೂವುಗಳು ಹರಾಜಿಗೆ ಬರುತ್ತವೆ. ಆದರೆ ಪ್ರೇಮಿಗಳ ದಿನಾಚರಣೆ ಇರುವುದರಿಂದ ಸುಮಾರು 8-10 ಲಕ್ಷ ಹೂವುಗಳು ಹರಾಜು ಕೇಂದ್ರಕ್ಕೆ ಬರುವ ನೀರಿಕ್ಷೆಯಿದ್ದು, ಉತ್ತಮವಾದ ದರವೂ ಸಿಗುತ್ತಿದೆ. ಇದರಿಂದ ರೈತರಿಗೆ ಹಾಗೂ ಸ್ಥಳೀಯ ಮತ್ತು ರಫ್ತುದಾರರಿಗೆ ಉತ್ತಮ ಆದಾಯವೂ ಲಭ್ಯವಾಗಲಿದೆ.
ವಿವಿಧ ತಳಿಯ ಗುಲಾಬಿ ಹೂವುಗಳು (ಫೋಟೋ: ರಘು ಆರ್.ಡಿ)
ವ್ಯಾಲೆಂಟೈನ್ಸ್ ಸೀಸನ್‌ನಲ್ಲಿ ರಫ್ತು ಹೆಚ್ಚಳ
ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ. ವಿಶ್ವನಾಥ್ ಅವರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, " ಡಚ್ ರಿವರ್ಸ್ ಕ್ಲಾಕ್ ಸಿಸ್ಟಮ್ ಅನ್ವಯ ಬೇಗ ಹಾಳಾಗುವಂತಹ ಉತ್ಪನ್ನವಾದ ಹೂವುಗಳನ್ನು ರೈತರಿಂದ ಸ್ವೀಕರಿಸಿದ ಒಂದು ದಿನದ ನಂತರ ಹರಾಜು ಹಾಕಲಾಗುವುದು. ಖರೀದಿದಾರರಿಂದ ಶೇ. 1.5 ರೂ. ಹಾಗೂ ರೈತರಿಂದ ಶೇ.3.5 ರೂ. ಕಮಿಷನ್ ಪಡೆಯಲಾಗುವುದು. ಪ್ರೇಮಿಗಳ ದಿನಾಚರಣೆ ನಮಗೆ ಬಹಳ ಮುಖ್ಯವಾದ ಸಂದರ್ಭವಾಗಿದ್ದು, ಇದರ ಜೊತೆಗೆ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಆಚರಣೆಗೂ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಗುಲಾಬಿ ಬೆಳೆಯಲು ಸೂಕ್ತವಾಗಿದೆ," ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ರೈತರಿಗೂ ಹೆಚ್ಚಿನ ದರ ದೊರೆಯುತ್ತದೆ. ಪಾಲಿಹೌಸ್‌ನಲ್ಲಿ ಪುಷ್ಪ ಕೃಷಿ ಮಾಡುತ್ತಿರುವುದರಿಂದ ಕಳೆದ ಐದು ವರ್ಷಗಳಿಂದ ಉತ್ತಮ ಗುಣಮಟ್ಟದ ಗುಲಾಬಿ ಹೂವು ಹರಾಜು ಕೇಂದ್ರಕ್ಕೆ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಶೇ.15 ಬೆಳೆಯ ಪ್ರಮಾಣ ಹೆಚ್ಚಳವಾಗುತ್ತಿದ್ದು, ಕಳೆದ ವರ್ಷದಂತೆ ಈ ವರ್ಷವೂ ರಫ್ತು ಪ್ರಮಾಣ ಉತ್ತಮವಾಗಿದೆ ಎಂದು ತಿಳಿಸಿದರು.
ಹರಾಜು ಪ್ರಕ್ರಿಯೆ ಸಂಪೂರ್ಣ ಡಿಜಿಟಲ್
ಹೆಬ್ಬಾಳದಲ್ಲಿರುವ ಪುಷ್ಪ ಹರಾಜು ಕೇಂದ್ರದಲ್ಲಿ ಹರಾಜು ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಆಗಿರುವುದರಿಂದ ಇದರಲ್ಲಿ ಯಾರದೇ ಹಸ್ತಕ್ಷೇಪವಿಲ್ಲ. ಆನ್‌ಲೈನ್ ಮೂಲಕವೂ ಭಾಗವಹಿಸಬಹುದಾಗಿದೆ. ಖರೀದಿದಾರರು ಪ್ರತೀ ದಿನ ಹಣ ನೀಡಿ ಹೂವುಗಳನ್ನು ಖರೀದಿಸುತ್ತಾರೆ. ಕೇಂದ್ರದಿಂದ ರೈತರಿಗೆ ವಾರಕ್ಕೊಮ್ಮೆ ಹಣ ಸಂದಾಯಮಾಡಲಾಗುವುದು. ಶೇ.5 ಕಮಿಷನ್‌ನಲ್ಲಿ ಕೇಂದ್ರದ ದೈನಂದಿನ ಕಾರ್ಯ, ಸಿಬ್ಬಂದಿ ವೇತನಕ್ಕೆ ಬಳಸಲಾಗುವುದು. ಅತ್ಯಂತ ಪಾರದರ್ಶಕವಾಗಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಡಾ.ಎಂ. ವಿಶ್ವನಾಥ್ ಹೇಳಿದರು.
ಪಾರದರ್ಶಕವಾಗಿ ನಡೆಯುವ ಹರಾಜು ಪ್ರಕ್ರಿಯೆ (ಫೋಟೋ: ರಘು ಆರ್.ಡಿ)
4.4 ಕೋಟಿ ರೂ. ಮೌಲ್ಯದ ಹೂವು ರಫ್ತು!
ದೇಶೀಯವಾಗಿ ದೆಹಲಿ, ತಿರುವನಂತಪುರಂ, ಚೆನ್ನೈ, ವೈಜಾಗ್ ಹಾಗೂ ಚಂಡೀಗಢಕ್ಕೆ ಹೂವು ಸರಬರಾಜಾಗುತ್ತದೆ. ಖರೀದಿದಾರು ಹಾಗೂ ರೈತರಿಂದ ದುಬೈ, ನ್ಯೂಜಿಲ್ಯಾಂಡ್, ಸಿಂಗಾಪುರ, ಮಲೇಷ್ಯಾ ಸೇರಿದಂತೆ ಯುರೋಪ್ ರಾಷ್ಟ್ರಗಳಿಗೂ ರಫ್ತು ಮಾಡಲಾಗುವುದು. ವ್ಯಾಲೆಂಟೈನ್ಸ್ ಸೀಸನ್‌ನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 2025ರಲ್ಲಿ 4.4 ಕೋಟಿ ರೂ. ಮೌಲ್ಯದ ಸುಮಾರು 1.649 ಮೆಟ್ರಿಕ್ ಟನ್ ಹೂವುಗಳನ್ನು ರಫ್ತು ಮಾಡಲಾಗಿದೆ.
ಕೇವಲ ಪ್ರೇಮಿಗಳ ದಿನಾಚಾರಣೆ ಮಾತ್ರವಲ್ಲದೆ ಮದುವೆ, ಶುಭ ಸಮಾರಂಭಗಳಿಗೂ ಹೂವುಗಳನ್ನು ಬಳಸಲಾಗುವುದು. ಹರಾಜು ಕೇಂದ್ರದಿಂದ ರೈತರಿಗೆ ಪುಷ್ಪ ಕೃಷಿ ಮಾಡಲು ತರೆಬೇತಿ ನೀಡಲಾಗುವುದು. ಯಾವ ಸಂದರ್ಭದಲ್ಲಿ ಹೂವುಗಳನ್ನು ಬೆಳೆಸಬೇಕು. ಅವುಗಳ ಆರೈಕೆ ಹಾಗೂ ಪ್ಯಾಕಿಂಗ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಿಳಿಸಲಾಗುವುದು. ಇದು ಸಂಪೂರ್ಣ ಉಚಿತ ತರಬೇತಿಯಾಗಿರುವುದರಿಂದ ಆಸಕ್ತ ರೈತರು ಆಗಮಿಸಿ ತರಬೇತಿ ಪಡೆಯಬಹುದು.
ತಾಜ್‌ಮಹಲ್ ಗುಲಾಬಿಗೆ ಬೇಡಿಕೆ
ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದ ಮೇಲ್ವಿಚಾರಕರಾದ ಗಗೀತ್ ಬಿ.ಎಲ್. ಮಾತನಾಡಿ " ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳ ರೈತರು ಉತ್ತಮ ದರ್ಜೆಯ ಗುಲಾಬಿಗಳನ್ನು ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಹರಾಜು ಕೇಂದ್ರದಲ್ಲಿ ಶೀತಲ ಕೇಂದ್ರವಿರುವುದರಿಂದ ಸುಮಾರು ಹತ್ತು ಲಕ್ಷ ಹೂವುಗಳನ್ನು ಸಂಗ್ರಹಿಸಿಡಬಹುದಾದ ವ್ಯವಸ್ಥೆಯಿದೆ," ಎಂದರು.
ಮುಂದುವರಿದು ಮಾತನಾಡಿದ ಅವರು,. ತಾಜ್ ಮಹಲ್ ಗುಲಾಬಿಯಲ್ಲಿ 16, 14, ಹಾಗೂ 12 ಇಂಚಿನ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಒಂದು ಹೂವು ಸುಮಾರು 54ರೂ. ಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. ಡ್ರೈ ಫ್ಲವರ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಅಗರಬತ್ತಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುವುದು," ಎಂದೂ ವಿವರಿಸಿದರು.
ಗುಲಾಬಿ ಹೂವುಗಳನ್ನು ಸಂಗ್ರಹಿಸುತ್ತಿರುವ ಸಿಬ್ಬಂದಿ (ಫೋಟೋ: ರಘು ಆರ್.ಡಿ)
ಗುಣಮಟ್ಟ ಖಾತ್ರಿ ನಂತರ ಹರಾಜು
ಗುಣಮಟ್ಟ ಅಧಿಕಾರಿ ತನುಷಾ ಮಾತನಾಡಿ, "ರೈತರಿಂದ ಹರಾಜು ಕೇಂದ್ರಕ್ಕೆ ಬರುವ ಹೂವುಗಳ ಗುಣಮಟ್ಟವನ್ನು ಪರಿಶೀಲನೆ ಮಾಡಲಾಗುವುದು. ಹೂವಿಗೆ ಯಾವುದಾದರೂ ಫಂಗಸ್ ಹರಡಿದೆಯೇ ಎಂದು ಖಾತರಿಪಡಿಕೊಂಡು ನಂತರ ಶೀತಲ ಕೇಂದ್ರಕ್ಕೆ ವರ್ಗಾಯಿಸಲಾಗುವುದು. ಇಲ್ಲದಿದ್ದರೆ ಇತರೆ ಹೂವುಗಳಿಗೂ ಅದು ಪಸರಿಸುವ ಸಾಧ್ಯತೆಯಿದೆ. ಸಾಗಾಟದ ಸಮಯದಲ್ಲಿ ಅಥವಾ ಹೂವನ್ನು ಪ್ಯಾಕ್ ಮಾಡುವ ಸಂದರ್ಭದಲ್ಲಿ ಡ್ಯಾಮೇಜ್ ಆಗಿದೆಯೇ ಅಥವಾ ಇಲ್ಲವೇ ಎಂದಿ ಖಾತ್ರಿ ಪಡಿಸಿಕೊಳ್ಳಲಾಗುವುದು. ಡ್ಯಾಮೇಜ್ ಆಗಿದ್ದರೆ ಪ್ರಾರಂಭಿಕ ಹಂತದಲ್ಲಿಯೇ ತಿರಸ್ಕರಿಸಲಾಗುವುದು" ಎಂದು ಹೇಳಿದರು.
ಉತ್ತಮ ವಹಿವಾಟು, ಖರೀದಿದಾರರು ಖುಷ್!
ಖರೀದಿದಾರರು ಹಾಗೂ ʼಶಿವಾನಿ ಪ್ಲಾರಿಸ್ಟ್ʼ ಸಂಸ್ಥಾಪಕರಾದ ರಶ್ಮಿ ಮಾತನಾಡಿ, " ಗುಲಾಬಿಗೆ ಪ್ರೇಮಿಗಳ ದಿನಾಚರಣೆಯಂದು ಬಹು ಬೇಡಿಕೆ ಇರುತ್ತದೆ. ಈ ಸೀಸನ್‌ಗೂ ಮುನ್ನವೇ ಉತ್ತಮ ವಹಿವಾಟು ನಡೆದಿದೆ. ಉತ್ತಮ ದರ್ಜೆಯ ಗುಲಾಬಿಗೆ ಉತ್ತಮ ಬೆಲೆಯೂ ದೊರೆತಿದೆ. ಬೆಂಗಳೂರು ಗುಲಾಬಿಗೆ ದೇಶಾದ್ಯಂತ ಉತ್ತಮ ಬೇಡಿಕೆಯಿದೆ. ಇದರಿಂದ ರೈತರಿಗೂ ಲಾಭ ದೊರಕುತ್ತದೆ. ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಎಲ್ಲರಿಗೂ ಉತ್ತಮ ಸೇವೆ ಒದಗಿಸುತ್ತಿದೆ," ಎಂದರು೬
"ಮಾರುಕಟ್ಟೆಯಲ್ಲಿ ಹಲವು ಏರಿಳಿತಗಳು ಸಂಭವಿಸಿದರೂ ನಾವು ಅದನ್ನು ಸರಿದೂಗಿಸಿಕೊಂಡು ಹೋಗಬೇಕು. ಖಾಸಗಿ ನರ್ಸಿಂಗ್ ಕಾಲೇಜು ಪ್ರಾಧ್ಯಪಾಕಿ ಹುದ್ದೆಯನ್ನು ಬಿಟ್ಟು ನಾನು ಈ ಉದ್ಯಮವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ದೆಹಲಿ, ಚಂಡಿಗಢ, ಕಲ್ಕತ್ತಾ, ತಮಿಳುನಾಡಿಗೆ ವಿಮಾನದ ಮೂಲಕ ಸರಬರಾಜು ಮಾಡಲಾಗುವುದು. ಚಂಡಿಗಢದಿಂದ ಅಲ್ಲಿನ ಖರೀದಿದಾರರು ಪಾಕಿಸ್ತಾನ ಮತ್ತು ಕಲ್ಕತ್ತಾದಿಂದ ನೇಪಾಳಕ್ಕೂ ಅದನ್ನು ರಫ್ತು ಮಾಡುತ್ತಾರೆ. ಹರಾಜು ಕೇಂದ್ರದಿಂದ ವಿಮಾನ ನಿಲ್ದಾಣಕ್ಕೆ ಉತ್ತಮ ಸಾರಿಗೆ ಸಂಪರ್ಕವಿರುವುದರಿಂದ ಸರಿಯಾದ ಸಮಯಕ್ಕೆ ಹೂವು ತಲುಪಿಸಲು ಸಾಧ್ಯವಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

