Water Crisis| ಬಯಲು ಸೀಮೆಗೆ ನೇತ್ರಾವತಿ  ಹರಿಯುತ್ತಿಲ್ಲ, ಕೃಷ್ಣೆ ತಿರುವಿಗೆ ಅಡ್ಡಿ ತಪ್ಪಿಲ್ಲ!
x

ಎತ್ತಿನಹೊಳೆ ಯೋಜನೆಯ ಸಂಗ್ರಹ ಚಿತ್ರ

Water Crisis| ಬಯಲು ಸೀಮೆಗೆ ನೇತ್ರಾವತಿ ಹರಿಯುತ್ತಿಲ್ಲ, ಕೃಷ್ಣೆ ತಿರುವಿಗೆ ಅಡ್ಡಿ ತಪ್ಪಿಲ್ಲ!

2014ರಲ್ಲಿ ಪ್ರಾರಂಭಗೊಂಡ ಎತ್ತಿನಹೊಳೆ ಯೋಜನೆ ವೆಚ್ಚ 8 ಸಾವಿರ ಕೋಟಿ ರೂ.,ಗಳಿಂದ 33 ಸಾವಿರ ಕೋಟಿ ರೂ.,ಗಳಿಗೆ ಏರಿಕೆಯಾಗಿದ್ದರೆ, ನೀರಿನ ಲಭ್ಯತೆ 24 ಟಿಎಂಸಿಯಿಂದ 8 ಟಿಎಂಸಿಗಿಳಿದಿದೆ.


Click the Play button to hear this message in audio format

ನೀರಿನ ವಿಚಾರದಲ್ಲಿ "ನತದೃಷ್ಟ ಜಿಲ್ಲೆ"ಗಳ ಪಟ್ಟಿಯಲ್ಲಿರುವ "ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ" ಜಿಲ್ಲೆಗಳು ಸೇರಿವೆ. ಈ ಜಿಲ್ಲೆಗಳ ಪಾಲಿಗೆ ನೀರು ಹರಿಸುವ ಯೋಜನೆಗಳೇ ರಾಜಕೀಯ ಪ್ರತಿಷ್ಠೆಯಾಗಿ ಪರಿಣಮಿಸಿವೆ. ಹತ್ತಾರು ವರ್ಷಗಳಿಂದ ಪ್ರಗತಿಯಲ್ಲಿರುವ ಎತ್ತಿನಹೊಳೆ ಯೋಜನೆ ಒಂದೆಡೆಯಾದರೆ, ಮತ್ತೊಂದೆಡೆ ಕೃಷ್ಣಾ ನದಿ ನೀರಿಗಾಗಿ ಹೋರಾಟಗಳು ಪ್ರಾರಂಭಗೊಂಡಿವೆ.

ಪಶ್ಚಿಮಘಟ್ಟದಿಂದ ಕರಾವಳಿಗೆ ಹರಿಯುವ ನೇತ್ರಾವತಿ ನದಿಯ ನೀರನ್ನು ಪಂಪ್‌ ಮೂಲಕ ಘಟ್ಟದ ಮೇಲೆತ್ತಿ ಪೂರ್ವದ ಬಯಲು ಸೀಮೆಗೆ ಹರಿಸುವ ಎತ್ತಿನಹೊಳೆ ಯೋಜನೆ, ಕೃಷ್ಣಾ ನದಿಯಿಂದ ಆಂಧ್ರಪ್ರದೇಶಕ್ಕೆ ಸೇರಿದ ಕರ್ನಾಟಕದ ಗಡಿಭಾಗಗಳಾದ ಹಿಂದೂಪುರ, ಕುಪ್ಪಂ ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ಇದೇ ಕಾಲುವೆಗಳ ಮೂಲಕ ರಾಜ್ಯದ ಚಿಕ್ಕಬಳ್ಳಾಪುರ- ಕೋಲಾರ ಕೆರೆಗಳಿಗೆ ನೀರು ಹರಿಸಬಹುದೆಂಬ ಹೊಸ ಆಸೆ ಚಿಗುರೊಡೆದಿದೆ.

ಹೀಗೆ ಪಶ್ಚಿಮದ ನೇತ್ರಾವತಿ, ಉತ್ತರದ ಕೃಷ್ಣೆಯನ್ನು ಪೂರ್ವದ ಬಯಲುಸೀಮೆ ಜಿಲ್ಲೆಗಳಿಗೆ ಹರಿಸುವ ಯೋಜನೆಗಳು ರಾಜಕೀಯ ಆಶ್ವಾಸನೆಗಳಾಗಿ ಉಳಿದಿವೆಯೇ? ಅಥವಾ ಅವೆಲ್ಲಾ ಅವೈಜ್ಞಾನಿಕ ಯೋಜನೆಗಳೇ, ಯೋಚನೆಗಳೇ? ಈ ಬಗ್ಗೆಉತ್ತರವಿಲ್ಲದೆ ಬಯಲುಸೀಮೆ ಜನರು ಕಂಗಾಲಾಗಿದ್ದಾರೆ.

2014 ರಲ್ಲಿ ಪ್ರಾರಂಭಗೊಂಡ ನೇತ್ರಾವತಿ ನದಿ ತಿರುವು ಯೋಜನೆ ಅಥವಾ ಎತ್ತಿನಹೊಳೆ ಯೋಜನೆಯ ವೆಚ್ಚ 8 ಸಾವಿರ ಕೋಟಿ ರೂ.,ಗಳಿಂದ 33 ಸಾವಿರ ಕೋಟಿ ರೂ.,ಗಳಿಗೆ ಏರಿಕೆಯಾಗಿದ್ದರೆ, ಇಲ್ಲಿನ ನೀರಿನ ಲಭ್ಯತೆ ಮಾತ್ರ 24 ಟಿಎಂಸಿಯಿಂದ 8 ಟಿಎಂಸಿಗಿಳಿದಿದೆ. ಈ ಯೋಜನೆ ಮೂಲಕ ನೀರು ನೀಡುತ್ತೆವೆ ಎಂದು ರಾಜ್ಯ ಸರಕಾರ ಸದಾ ಆಶ್ವಾಸನೆಗಳನ್ನು ನೀಡುತ್ತಲೇ ಇದೆ.

ಪರಿಸರ ಪ್ರೇಮಿಗಳು ಈ ಯೋಜನೆ ಮೂಲಕ ನಿರೀಕ್ಷಿತ ನೀರು ಹರಿಯಲು ಸಾಧ್ಯವೇ ಇಲ್ಲ. ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ ಎನ್ನುತ್ತಿದ್ದಾರೆ. ಈ ನಡುವೆ ಬರದ ನಾಡಿಗೆ ಎತ್ತಿನಹೊಳೆ ಬದಲಿಗೆ ಆಂಧ್ರದ ಮೂಲಕ ಕೃಷ್ಣಾ ನದಿ ನೀರು ಹರಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡುತ್ತಿದ್ದಾರೆ.

ಈ ಎಲ್ಲ ನೀರಾವರಿ ಆಶ್ವಾಸನೆಗಳು "ಹಳೆ ಬಾಟಲಿಗೆ ಹೊಸ ಮದ್ಯ ಸುರಿದಂತೆ" ಘೋಷಣೆಗಳಿಗಷ್ಟೆ ಸೀಮಿತವಾಗುವ ಅವಕಾಶವಿದೆ. ಇಲ್ಲಿನ ಜನರ ಬರಪೀಡಿತ ಹಣೆಪಟ್ಟಿ ದೂರವಾಗುವುದೇ ಎಂಬ ಬಗ್ಗೆ "ದ ಫೆಡರಲ್‌ ಕರ್ನಾಟಕ" ಬೆಳಕು ಚೆಲ್ಲಿದೆ.

ಈ ಎಲ್ಲ ಯೋಜನೆಗಳಿಂದ ಬೇಸತ್ತಿರುವ ಇಲ್ಲಿನ ಜನ, ಯಾವುದಾದರೂಂದು ಯೋಜನೆ ಮೂಲಕ ನೀರು ಸಿಕ್ಕರೆ ಸಾಕು. ಕಲುಷಿತ ನೀರಿನಿಂದಾಗಿ ಸೃಷ್ಟಿಯಾಗುತ್ತಿರುವ ಫ್ಲೋರೋಸಿಸ್‌ ರೋಗದಿಂದ ಮುಕ್ತಿ ಸಿಕ್ಕರೆ ಸಾಕು. ಈಗ ಪತ್ತೆಯಾಗಿರುವ ಯುರೇನಿಯಂ ಹೊಂದಿರುವ ನೀರಿನಿಂದ ಹೊಸ ರೋಗ ಸೃಷ್ಟಿಯಾಗದಿದ್ದರೆ ಅದೇ ನಮ್ಮ ಪುಣ್ಯ ಎನ್ನುತ್ತಿದ್ದಾರೆ. ಹತ್ತಾರು ವರ್ಷಗಳಾದರೂ ಎತ್ತಿನಹೊಳೆಯಿಂದ ನೀರು ಹರಿದಿಲ್ಲ. ಬದಲಿಗೆ ಯೋಜನೆ ಹೆಸರಿನಲ್ಲಿ ಹಣದ ಹೊಳೆ ಹರಿಯುತ್ತಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.

ಎತ್ತಿನಹೊಳೆ ಯೋಜನೆಯ ಮ್ಯಾಪ್‌ (ಚಿತ್ರಕೃಪೆ ಗೂಗಲ್‌)

ಹೇಗಿದೆ ಜಿಲ್ಲೆ..

ಚಿಕ್ಕಬಳ್ಳಾಪುರ- ಕೋಲಾರ ಜಿಲ್ಲೆಗಳ ಜನರು ಅಂರ್ತಜಲದ ನೀರನ್ನೆ ಅವಲಂಭಿಸಿದ್ದಾರೆ. ಈಗಾಗಲೇ 1500 ಅಡಿವರೆಗೂ ನೀರಿನ ಲಭ್ಯತೆ ಪತ್ತೆಯಾಗುತ್ತಿಲ್ಲ. ಕಲುಷಿತ ನೀರಿನಿಂದಾಗಿ ಫ್ಲೋರೋಸಿಸ್‌ ರೋಗ ಹರಡುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವರದಿಯಂತೆ ಯುರೇನಿಯಂ ಅಂಶವು ಸಹ ಪತ್ತೆಯಾಗಿದೆ. ಕೆ.ಸಿ. ಹಾಗೂ ಎಚ್.ಎನ್‌ ವ್ಯಾಲಿ ಯೋಜನೆಗಳ ಮೂಲಕ ಕೇವಲ ಎರಡು ಹಂತದ ಶುದ್ದೀಕರಿಸಿದ ನೀರನ್ನಷ್ಟೆ ಈ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದೆ. ಹೀಗಾಗಿ ಇನ್ನಷ್ಟು ಮಾರಾಣಾಂತಿಕ ಕಾಯಿಲೆಗಳು ಉಲ್ಬಣಿಸುವ ಆತಂಕವು ಇದೆ. ಮೂರನೇ ಹಂತದ ಶುದ್ದೀಕರಿಸಿದ ನೀರಿಗಾಗಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಸರಕಾರ ತಲೆ ಕೆಡಿಸಿಕೊಂಡಿಲ್ಲ.

ಏನಿದು ಯೋಜನೆ ಕಥೆ-ವ್ಯಥೆ..

ಬರಗಾಲ ಪೀಡಿತ ಜಿಲ್ಲೆಗಳ ಪಟ್ಟಿಯಲಿರುವ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆ ಮೂಲಕ ನದಿ ನೀರು ಹರಿಸಲು 2014 ರಲ್ಲಿ ಅಂದಿನ ಕಾಂಗ್ರೆಸ್‌ ಸರಕಾರವು, 8 ಸಾವಿರ ಕೋಟಿ ರೂ.,ಗಳಲ್ಲಿ ಯೋಜನೆ ಆರಂಭಿಸಿತ್ತು. 2 ವರ್ಷಗಳಲ್ಲಿ ನೀರು ಹರಿಸಲಾಗುವುದು ಎಂಬ ಭರವಸೆಯಲ್ಲಿಯೇ ಚುನಾವಣೆ ಅಂತ್ಯಗೊಂಡಿತ್ತು.

ಪಶ್ಚಿಮ ಘಟ್ಟದ ಸಕಲೇಶಪುರ ತಾಲೂಕಿನಿಂದ ಕರಾವಳಿಗೆ ಹರಿಯುವ ನೇತ್ರಾವತಿ ನದಿಯ ಎತ್ತಿನಹೊಳೆ ಮತ್ತು ಇತರ ಉಪನದಿಗಳಿಂದ ಹರಿಯುವ ನೀರನ್ನು ಪೂರ್ವಕ್ಕೆ ತಿರುಗಿಸಿ, ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಇದರ ಮೂಲ ಗುರಿ. ಮಳೆಗಾಲದಲ್ಲಿ ಪಶ್ಚಿಮಕ್ಕೆ ಹರಿಯುವ ನೇತ್ರಾವತಿ ನದಿ ನೀರನ್ನು ಎತ್ತರಕ್ಕೆ ಪಂಪ್ ಮಾಡಿ (Lift Irrigation), ಕಾಲುವೆ ಮತ್ತು ಪೈಪ್‌ಲೈನ್‌ಗಳ ಮೂಲಕ ಪೂರ್ವದ ಜಿಲ್ಲೆಗಳಿಗೆ ಸಾಗಿಸುವುದು. ಈ ಯೋಜನೆಯಿಂದ ಸುಮಾರು 7 ಜಿಲ್ಲೆಗಳ 29 ತಾಲೂಕುಗಳಿಗೆ ಕುಡಿಯುವ ನೀರು ತಲುಪಿಸುವ ಗುರಿ ಹೊಂದಲಾಗಿತ್ತು.

ಆದರೆ, ರಾಜ್ಯ ಸರಕಾರ ಕಳೆದ 12 ವರ್ಷಗಳಿಂದಲೂ ಈ ಯೋಜನೆ ಪೂರ್ಣಗೊಳಿಸಿಲ್ಲ. ಸರಕಾರದ ಲೆಕ್ಕಚಾರದಂತೆ 24 ಟಿಎಂಸಿ ನೀರಿನ ಲಭ್ಯತೆ ಇದೆ. ಆದರೆ, ವರದಿಗಳು ಹೇಳುವಂತೆ ಕೇವಲ 8 ಟಿಎಂಸಿ ನೀರು ದೊರೆಯುವುದು ಸಹ ಅನುಮಾನ. ಕೇಂದ್ರದ ಜಲಸಂಶೋಧನ ಸಂಸ್ಥೆಯು 2012 ರಲ್ಲಿ ನಡೆಸಿದ ಸರ್ವೇಯು, 24 ಟಿಎಂಸಿ ನೀರಿನ ಲಭ್ಯತೆ ಸಾಧ್ಯವೇ ಇಲ್ಲ ಎಂದು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದೆ. ಹೀಗಿದ್ದರೂ, ರಾಜ್ಯ ಸರಕಾರ ಗುತ್ತಿಗೆದಾರರನ್ನು ನಂಬಿ ಯೋಜನೆ ಮುಂದುವರಿಸಿತ್ತು. ಬಳಿಕ 2015 ರಲ್ಲಿ ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗಳು ಸಹ ಇದೇ 24 ಟಿಎಂಸಿ ನೀರಿನ ಬಗ್ಗೆಅನುಮಾನ ವ್ಯಕ್ತ ಪಡಿಸಿ, ವರದಿ ಸಿದ್ದಪಡಿಸಿತ್ತು. 2018 ರಲ್ಲಿ ರಾಜ್ಯ ಸರಕಾರ ನಿಯೋಜಿಸಿದ ತಂಡವು ಸಹ 2013 ರಲ್ಲಿ ಕೇಂದ್ರ ಸಂಸ್ಥೆಗಳ ವರದಿಯನ್ನೆ ಎತ್ತಿ ಹಿಡಿದಿತ್ತು.

ಎರಡು ಹಂತಗಳಲ್ಲಿ ನಡೆಯುತ್ತಿರುವ ಈ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, 2024 ರ ಸೆಪ್ಟೆಂಬರ್‌ 6 ರm ಪ್ರಾಯೋಗಿಕವಾಗಿ ಚಾಲನೆ ನೀಡಿತ್ತು. ಎರಡನೇ ಹಂತದ 252 .61 ಕಿ.ಮೀ ಉದ್ದದ ಗುರುತ್ವ ಮುಖ್ಯ ಕಾಲುವೆ ನಿರ್ಮಾಣ ಫೀಡರ್‌ ಪೈಫ್‌ ಲೈನ್‌ ಕಾಲುವೆ ನಿರ್ಮಾಣ ಮತ್ತು ಸಮತೋಲನ ಜಲಾಶಯ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲ ಕಾಮಗಾರಿಗಳು ಇಂದಿಗೂ ಪ್ರಾರಂಭಗೊಂಡಿಲ್ಲ.

ನೇತ್ರಾವತಿ- ಹೇಮಾವತಿ ನದಿ ಜೋಡಣೆ

ಎತ್ತಿನಹೊಳೆ ಯೋಜನೆ ಅನುಷ್ಠಾನದ ಬಳಿಕ ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಯಾವುದೇ ಹೆಚ್ಚುವರಿ ನೀರು ಲಭ್ಯವಿಲ್ಲ ಎಂಬ ಕಾರಣಕ್ಕೆ ನೇತ್ರಾವತಿ-ಹೇಮಾವತಿ ಜೋಡಣೆಯನ್ನು ಕೈ ಬಿಡಬಹುದು ಎಂದು ಕೇಂದ್ರ ಸರಕಾರ ಪುನರುಚ್ಚರಿಸಿದೆ. ಜತೆಗೆ ಎತ್ತಿನಹೊಳೆ ಮೂಲಕ ದೊರೆಯಬಹುದಾದ 8 ಟಿಎಂಸಿ ನೀರನ್ನು ಪಂಪ್‌ ಮಾಡುವೇ ವೇಳೆ ಇನ್ನಷ್ಟು ನೀರಿನ ಪ್ರಮಾಣ ಕಡಿಮೆಯಾಗಲಿದ್ದು, ನಿರೀಕ್ಷಿತ ಟಿಎಂಸಿಯಷ್ಟು ನೀರು ಸಹ ಎತ್ತಿನಹೊಳೆ ಮೂಲಕ ಹರಿಯುದು ಕಷ್ಟ. ಅಲ್ಪ ಪ್ರಮಾಣದಲ್ಲಿ ಹರಿದರೂ ಇನ್ನೆಷ್ಟು ವರ್ಷಗಳ ಬಳಿಕ ನೀರು ಕಾಣಿಸಿಕೊಳ್ಳಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಉತ್ತರದ ಕೃಷ್ಣೆಯೇ ಬಯಲುಸೀಮೆಗೆ ಆಧಾರ..

2007 ರಲ್ಲಿ ನ್ಯಾಷನಲ್‌ ವಾಟರ್‌ ಡೆವಲಪ್‌ಮೆಂಟ್‌ ಏಜೆನ್ಸಿಯು (NWDA)ಬರಗಾಲ ಹಾಗೂ ಕುಡಿಯುವ ನೀರನ್ನು ಗಮನದಲ್ಲಿಟ್ಟುಕೊಂಡು ನದಿಗಳನ್ನು ಜೋಡಿಸುವ ಕೆಲಸದ ಕಾರ್ಯಸಾದುಗಳ ಬಗ್ಗೆ ವಿಸ್ಕೃತ ವರದಿ ನೀಡಿತ್ತು. ಅದರಂತೆ ಆಂಧ್ರ ಪ್ರದೇಶಕ್ಕೆ ನೀಡಿದ್ದ ಆರು ಯೋಜನೆಗಳನ್ನು "ಜಲಯಜ್ಞಂ" ಎಂಬ ಹೆಸರಿನ ಮೂಲಕ ಆಂಧ್ರ ಸರಕಾರ ಅನುಷ್ಠಾನಗೊಳಿಸಿದೆ. ಇದೇ ಮಾದರಿಯಲ್ಲಿ ಕೃಷ್ಣಾ (ಆಲಮಟ್ಟಿ) -ಪೆನ್ನಾರ್‌ ನದಿ ಜೋಡಿಸಲು ಸಹ ವರದಿ ನೀಡಿತ್ತು. ಕೇಂದ್ರ ಸರಕಾರವು ಸಹ ಈ ಸಂಬಂಧ 2025 ರ ಸೆಪ್ಟೆಂಬರ್‌ನಲ್ಲಿ ವಿವರವಾದ ಯೋಜನಾ ವರದಿ ಸಿದ್ದಪಡಿಸಿದೆ.

ಆಂಧ್ರಪ್ರದೇಶಕ್ಕೆ ಸೇರಿದ ಕರ್ನಾಟಕದ ಗಡಿಯಲ್ಲಿ ಹಿಂದೂಪುರ, ಕುಪ್ಪಂ ಕಾಲುವೆಗಳಲ್ಲಿ ಕೃಷ್ಣೆ ಹರಿಯುತ್ತಿದೆ. ಈ ಮೂಲಕ ಅಲ್ಲಿನ ಎಲ್ಲ ಕೆರೆಗಳು ಸಮೃದ್ದಗೊಂಡಿವೆ. ಇದೇ ಕಾಲುವೆಗಳ ಮೂಲಕ ರಾಜ್ಯದ ಚಿಕ್ಕಬಳ್ಳಾಪುರ- ಕೋಲಾರ ಕೆರೆಗಳಿಗೆ ನೀರು ಹರಿಸಬಹುದೆಂಬ ಕೊನೆ ಆಸೆ ಇಲ್ಲಿನ ಜನರನ್ನು ಇನ್ನೂ ಜೀವಂತಗೊಳಿಸಿದೆ. 2024 ರ ಲೋಕಸಭಾ ಚುನಾವಣೆ ವೇಳೆ ಹಾಲಿ ಹಾಗೂ ಮಾಜಿ ಪ್ರಧಾನಿಗಳಿಬ್ಬರು ಒಂದೇ ವೇದಿಕೆಯಲ್ಲಿ ಕುಳಿತು, ಕೃಷ್ಣಾ ನದಿ ನೀರನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ಭರವಸೆ ನೀಡಿದ್ದರು. ಆದರೆ, ಕಳೆದೆರೆಡು ಬಜೆಟ್‌ಗಳಲ್ಲಿಯು ಕೇಂದ್ರ ಸರಕಾರ ಈ ಬಗ್ಗೆ ಪ್ರಸ್ತಾಪಿಸಿಲ್ಲ.

ಈ ಬಗ್ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿ, ಎತ್ತಿನಹೊಳೆ ಯೋಜನೆ ಮೂಲಕ ಕಾಮಗಾರಿ ವೆಚ್ಚ ಏರಿಕೆಯಾಗುತ್ತಲೇ ಇದೆ. ಆದರೆ, ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಈ ಯೋಜನೆ ಸರಕಾರಕ್ಕೆ ಎಟಿಎಂ ಆಗಿದೆ. ಈಗಾಗಲೇ ಆಂಧ್ರದಲ್ಲಿ ಕೃಷ್ಣಾ ನದಿ ಸಮೃದ್ಧಿಯಾಗಿ ಹರಿಯುತ್ತಿದೆ. ಇಲ್ಲಿನ ಕಾಲುವೆಗಳ ಮೂಲಕ ಕೃಷ್ಣಾ ನದಿ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸಬಹುದು. ನಮ್ಮ ಜಿಲ್ಲೆಗಳ ನೀರು ಈಗಾಗಲೇ ವಿಷವಾಗಿ ಪರಿಣಮಿಸಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ನೀಡಿದ್ದ ಆಶ್ವಾಸನೆಯಂತೆ ಕೃಷ್ಣಾ ಮೂಲಕ ನಮಗೆ ನೀರು ಹರಿಸಬೇಕು. ಈ ಬಗ್ಗೆ ಹೋರಾಟಗಳು ನಡೆಯುತ್ತಿವೆ ಎಂದರು.

ಕಾರ್ಯಸಾದು ಹೇಗೆ?

ಕೃಷ್ಣಾ ಮೇಲ್ದಂಡೆ ಯೋಜನೆ (Upper Krishna Project - UKP) ಅಡಿಯಲ್ಲಿ ಬರುವ 'ಕೃಷ್ಣಾ ಎ ಸ್ಕೀಂ' ಯೋಜನೆಯು ಉತ್ತರ ಕರ್ನಾಟಕದ ಪಾಲಿಗೆ ಜೀವನಾಡಿದರೆ, "ಬಿ ಸ್ಕೀಂ" ಯೋಜನೆಯು ಬಯಲು ಸೀಮೆ ಜಿಲ್ಲೆಗಳಿಗೆ ವರದಾನವಾಗಿದೆ. ಬ್ರಿಜೇಶ್ ಕುಮಾರ್ ನ್ಯಾಯಾಧಿಕರಣದ (KWDT-II) ತೀರ್ಪಿನ ಅನ್ವಯ, ಎ ಸ್ಕೀಂ ನಲ್ಲಿ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗಾಗಿ 734 ಟಿಎಂಸಿ ನೀರು ಬಳಸಿಕೊಳ್ಳಬಹುದಾಗಿದೆ. ಇದರಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಮೂಲಕ ಸುಮಾರು 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ.

ಬಿ ಸ್ಕೀಂನಲ್ಲಿಅಣೆಕಟ್ಟಿನ ಎತ್ತರವನ್ನು 524.256 ಮೀಟರ್‌ಗಳಿಗೆ ಹೆಚ್ಚಿಸಿ, ಹೆಚ್ಚುವರಿ 130 ಟಿಎಂಸಿ ನೀರನ್ನು ಪೆನ್ನಾರ್‌ ನದಿ ಮೂಲಕ ಬಳಸಿಕೊಳ್ಳುವ ಯೋಜನೆಯಾಗಿದೆ. ಆದರೆ, ಈ ವರೆಗೂ ಒಂದು ಟಿಎಂಸಿ ನೀರನ್ನು ಸಹ ರಾಜ್ಯ ಸರಕಾರ ಬಳಕೆ ಮಾಡಿಕೊಂಡಿಲ್ಲ. ಈ ಯೋಜನೆ ಮೂಲಕ ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಸುವ ವಿಶಿಷ್ಟ ಯೋಜನೆ ಇದು.

ಮೊದಲ ಪ್ಲಾನ್: ಕರ್ನಾಟಕ ಹಾಗೂ ಆಂಧ್ರದ ಗಡಿಗಳಲ್ಲಿ ಈಗಾಗಲೇ ನಿರ್ಮಿಸಿರುವ ಕಾಲುವೆಗಳ ಮೂಲಕ ಆಂಧ್ರ ಸರಕಾರದೊಂದಿಗೆ ಸೌಹರ್ದ ಮಾತುಕತೆ ನಡೆಸಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕನಿಷ್ಟ ತಲಾ 10 ಟಿಎಂಸಿ ನೀರನ್ನಾದರೂ ಬಳಸಿಕೊಳ್ಳಬಹುದು.

ಎರಡನೇ ಪ್ಲಾನ್: ರಾಜ್ಯದಲ್ಲಿ ಕೃಷ್ಣಾ ನದಿ ಹರಿಯುವ ಮಾರ್ಗಗಳಲ್ಲಿ ಕಾಲುವೆ ಇಲ್ಲವೆ ಗುರುತ್ವಾಕರ್ಷಣೆಯ ಪೈಪ್‌ಲೇನ್‌ಗಳ ಮೂಲಕ ಈ ಜಿಲ್ಲೆಗಳಿಗೆ ನೀರು ಹರಿಸಬಹುದು.

ರಾಜ್ಯಕ್ಕೂ ಕೇಂದ್ರಕ್ಕೂ ಜಟಾಪಟಿ !

ಯಾವುದೇ ಕಾರಣಕ್ಕೂ ಕೃಷ್ಣಾ ನದಿ ಮೂಲಕ ಬಯಲು ಸೀಮೆ ಜಿಲ್ಲೆಗಳಿಗೆ ಹನಿ ನೀರನ್ನು ನೀಡುವುದಿಲ್ಲ ಎಂದು ರಾಜ್ಯ ಸರಕಾರದ ಸಚಿವ ಎಂ.ಬಿ.ಪಾಟೀಲ್‌ ಪ್ರತಿಪಾದಿಸುತ್ತಿದ್ದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ. ಅವರ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಅವರ ಸಹಕಾರ ತೆಗೆದುಕೊಳ್ಳುವ ಕೆಲಸ‌ ಮಾಡುತ್ತೇವೆ ಎನ್ನುತ್ತಿದ್ದಾರೆ. ಮತ್ತೊಂದೆಡೆ ರಾಜ್ಯದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌, ಇನ್ನೆನ್ನು ಎತ್ತಿನಹೊಳೆ ನೀರನ್ನು ಹರಿಸುತ್ತೆವೆ ಎನ್ನುವ ಮೂಲಕ ಕೃಷ್ಣಾ ನದಿ ನೀರಿನ ಬಗ್ಗೆ ತುಟಿಬಿಚ್ಚುತ್ತಿಲ್ಲ. ಈಗ ಇದೇ ಯೋಜನೆಗಳು ರಾಜಕೀಯ ಜಟಾಪಟಿಗೂ ಕಾರಣವಾಗಿದೆ.

Read More
Next Story