
Kogilu Layout | 3 ತಿಂಗಳಾದರೂ ಬಗೆಹರಿಯದ ಕೋಗಿಲು ಬಡಾವಣೆಯ ಜನರ ಬವಣೆ; ಸಂತ್ರಸ್ತರ ಪರಿಸ್ಥಿತಿ ಅಯೋಮಯ!
ನಾಲ್ಕು ವರ್ಷಗಳ ಹಿಂದೆ ಮನೆಗಾಗಿ ಅರ್ಜಿ ಸಲ್ಲಿಸಿದ್ದ 10ಮಂದಿಗಷ್ಟೇ ಬೈಯಪ್ಪನಹಳ್ಳಿ ಮನೆ ಹಂಚಿಕೆ ಮಾಡಲಾಗಿದೆ. ಆದರೆ, ಫಕೀರ್ ಲೇಔಟ್ ಬಡಾವಣೆಯಲ್ಲಿ ಮನೆ ಕಳೆದುಕೊಂಡವರು ಇಂದಿಗೂ ತಗಡು ಹಾಗೂ ಟಾರ್ಪಲ್ ಕೆಳಗಿನ ಗುಡಾರಗಳಲ್ಲೇ ಬದುಕು ಸಾಗಿಸುತ್ತಿದ್ದಾರೆ.
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಯಲಹಂಕದ ಕೋಗಿಲು ಬಡಾವಣೆಯ 'ಫಕೀರ್ ಲೇಔಟ್' ಒತ್ತುವರಿ ತೆರವು ಪ್ರಕರಣ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕೇರಳದ ಮುಖ್ಯಮಂತ್ರಿಯಿಂದ ಹಿಡಿದು ರಾಷ್ಟ್ರೀಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರವರೆಗೆ ಚರ್ಚೆಯ ಕೇಂದ್ರಬಿಂದುವಾಗಿದ್ದ ಈ ಪ್ರಕರಣದಲ್ಲಿ ಸಂತ್ರಸ್ತ ರಾಜ್ಯ ಸರ್ಕಾರ ನೀಡಿದ್ದ ಭರವಸೆಗಳು ಬರೀ ಕಾಗದದ ಮೇಲೆ ಉಳಿದಿವೆ.
ಕೋಗಿಲು ಕ್ರಾಸ್ ನಿವಾಸಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಮಾಹಿತಿ ಬೆನ್ನತ್ತಿ 'ದ ಫೆಡರಲ್ ಕರ್ನಾಟಕ' ಸ್ಥಳಕ್ಕೆ ತೆರಳಿ ವಸ್ತುಸ್ಥಿತಿ ಅವಲೋಕಿಸಿದಾಗ ನಿಜವಾದ ಸಂತ್ರಸ್ತರಿಗೆ ಮನೆ ಹಂಚಿಕೆ ಮರೀಚಿಕೆಯಾಗಿದೆ. ನಾಲ್ಕು ವರ್ಷಗಳ ಹಿಂದೆ ಮನೆಗಾಗಿ ಅರ್ಜಿ ಸಲ್ಲಿಸಿದ್ದ 10ಮಂದಿಗಷ್ಟೇ ಬೈಯಪ್ಪನಹಳ್ಳಿ ಮನೆ ಹಂಚಿಕೆ ಮಾಡಲಾಗಿದೆ. ಆದರೆ, ಫಕೀರ್ ಲೇಔಟ್ ಬಡಾವಣೆಯಲ್ಲಿ ಮನೆ ಕಳೆದುಕೊಂಡವರು ಇಂದಿಗೂ ತಗಡು ಹಾಗೂ ಟಾರ್ಪಲ್ ಕೆಳಗಿನ ಗುಡಾರಗಳಲ್ಲೇ ಬದುಕು ಸಾಗಿಸುತ್ತಿದ್ದಾರೆ. ಸಂತ್ರಸ್ತ ಬವಣೆ ಅಯೋಮಯವಾಗಿದೆ.
"ನಮ್ಮ ಮನೆಗಳನ್ನು ಕೆಡವಿ ಮೂರು ತಿಂಗಳ ಮೇಲಾಯಿತು. ಮನೆ ಸಿಗುವ ನಿರೀಕ್ಷೆಯಲ್ಲೇ ಬದುಕು ದೂಡುತ್ತಿದ್ದೇವೆ. ನನಗೆ ಶುಗರ್, ಬಿಪಿ ಇದೆ. ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ಬಂದಿದ್ದೇನೆ. ಮನೆ ಇಲ್ಲದೆ ಹೇಗೆ ಜೀವನ ನಡೆಸಬೇಕು ಎಂಬುದೇ ಅರ್ಥವಾಗುತ್ತಿಲ್ಲ, ಹಜ್ ಕಮಿಟಿಯವರು ನಮ್ಮನ್ನು ಕರೆದು ಕೆಲ ದಾಖಲೆಗಳನ್ನು ಕೇಳಿ ಪಡೆದುಕೊಂಡಿದ್ದರು. ಆ ಬಳಿಕ ಏನಾಯಿತು ಎಂಬುದೇ ಗೊತ್ತಿಲ್ಲ, ಮನೆ ಕೊಡದೇ ನಾವು ಇಲ್ಲಿಂದ ಎಲ್ಲಿಗೂ ಹೋಗುವುದಿಲ್ಲ ಎಂದು ಸ್ಥಳೀಯ ನಿವಾಸಿ ಖರ್ಷಿದ್ ಅಳಲು ತೋಡಿಕೊಂಡರು.
ಪರ್ಯಾಯ ಮನೆಯ ಭರವಸೆ ಕೊಟ್ಟಿದ್ದ ಸರ್ಕಾರ
ಕೋಗಿಲು ಬಡಾವಣೆಯ ಫಕೀರ್ ಲೇಔಟ್‌ನಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ಕೇವಲ ಸ್ಥಳೀಯ ಸಮಸ್ಯೆಯಾಗಿರಲಿಲ್ಲ. ಈ ಜಾಗದಲ್ಲಿ ವಾಸವಿದ್ದವರ ಪರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಧ್ವನಿ ಎತ್ತಿದ್ದರು. ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಕೋರಿದ್ದರು. ಈ ರಾಜಕೀಯ ಒತ್ತಡದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಸಭೆ ನಡೆಸಿ, "ಒಂದು ವಾರದೊಳಗೆ ನಿರಾಶ್ರಿತರಿಗೆ ಪರ್ಯಾಯವಾಗಿ ಮನೆ ನೀಡಲಾಗುವುದು" ಎಂಬ ಮಹತ್ವದ ಭರವಸೆ ನೀಡಿದ್ದರು.
"ಫಕೀರ್ ಬಡಾವಣೆಯ ಒಬ್ಬರಿಗೂ ಮನೆ ನೀಡಿಲ್ಲ. ಡೆಮಾಲಿಷನ್ ಆದಾಗ ಬಂದು ಮಾತನಾಡಿದವರು ಈಗ ಯಾರೂ ಮಾತನಾಡುತ್ತಿಲ್ಲ. ನಮಗೆ ಎಲ್ಲಾದರೂ ಮನೆ ಕೊಡಲಿ. ಮನೆ ಇಲ್ಲದೆ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಸ್ಥಳೀಯ ನಿವಾಸಿ ಮೆಹಬೂಬ್ ಪಾಷಾ ಹೇಳಿದರು.
ಕೋಗಿಲು ಬಡಾವಣೆಯ ನೆಲಸಮವಾಗಿರುವ ಫಕೀರ್ ಲೇಔಟ್
ಇಂದಿಗೂ ಟಾರ್ಪಲ್ ಕೆಳಗೆ ಬದುಕು
ಮೂರು ತಿಂಗಳ ಹಿಂದೆ ಜೆಸಿಬಿಗಳು ಗುಡಿಸಲುಗಳನ್ನು ಧರೆಗುರುಳಿಸಿದಾಗ ಜನ ಎಲ್ಲಿ ವಾಸಿಸುತ್ತಿದ್ದರೋ ಇಂದಿಗೂ ಅಲ್ಲೇ ಇದ್ದಾರೆ. 150ಕ್ಕೂ ಹೆಚ್ಚು ಕುಟುಂಬಗಳು ತಾತ್ಕಾಲಿಕವಾಗಿ ಟಾರ್ಪಲ್ ಹಾಕಿಕೊಂಡು ವಾಸಿಸುತ್ತಿದ್ದಾರೆ.
ಮನೆಗಳ ಒತ್ತುವರಿ ತೆರವಿನ ಬಳಿಕ ಲೇಔಟ್ನ ಬಹುತೇಕ ಸಂತ್ರಸ್ತರ ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಶಾಲಾ ಶಿಕ್ಷಕಿಯರು ಮನೆ ಮನೆಗೆ ಬಂದು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಮನವಿ ಮಾಡುತ್ತಿದ್ದರೂ ವಾಸಕ್ಕೆ ಸರಿಯಾದ ನೆಲೆ ಇಲ್ಲದೇ ಪೋಷಕರು ಅಸಹಾಯಕರಾಗಿ ಮಕ್ಕಳನ್ನೂ ಶಾಲೆಯಿಂದ ದೂರ ಇರಿಸಿದ್ದಾರೆ. ಮಳೆ ಬಂದರೆ ಇಡೀ ಜಾಗ ಸೋರುತ್ತದೆ, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ದಿನ ದೂಡುವಂತಾಗಿದೆ.
ಸರ್ಕಾರದ ದ್ವಂದ್ವ ನಿಲುವು
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜೀವ್ ಗಾಂಧಿ ವಸತಿ ನಿಗಮದ ಅಡಿ 30 ಜನರಿಗೆ ಮನೆ ನೀಡಿರುವುದಾಗಿ ಮಾಹಿತಿ ನೀಡಿದ್ದರು. ಇದರಿಂದ ಫಕೀರ್ ಲೇಔಟ್ ನಿವಾಸಿಗಳಿಗೂ ನ್ಯಾಯ ಸಿಕ್ಕಿದೆ ಎನ್ನುವ ಭಾವನೆ ಸಾರ್ವಜನಿಕರಲ್ಲಿ ಮೂಡಿತ್ತು. ಆದರೆ, ವಾಸ್ತವದಲ್ಲಿ ಫಕೀರ್ ಲೇಔಟ್‌ನ ಒಬ್ಬರಿಗೂ ಈವರೆಗೆ ಮನೆ ಸಿಕ್ಕಿಲ್ಲ.
"ನಮಗೆ ಮನೆ ಸಿಕ್ಕಿದೆ ಎಂದು ಹೊರಗಡೆ ಸುದ್ದಿಯಾಗುತ್ತಿದೆ. ಆದರೆ ನಮಗಿನ್ನೂ ಮನೆ ಕೊಟ್ಟಿಲ್ಲ. ಅಂದು ಫೋಟೋ ತೆಗೆಸಿಕೊಳ್ಳಲು ಬಂದಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಂತರ ಇತ್ತ ಮುಖ ಮಾಡಿಲ್ಲ, ಮನೆ ಇಲ್ಲದೆ ನಾವು ಬಹಳ ಕಷ್ಟದಲ್ಲಿದ್ದೇವೆ. ಎರಡು ದಿನ ಮಳೆ ಬಂದಾಗ ನಾವು ಪರದಾಡಿದೆವು. ಆಲಿಕಲ್ಲು ಮಳೆಯಿಂದ ಪರದಾಡುತ್ತಿದ್ದರೂ ನಮ್ಮನ್ನೂ ಕೇಳುವವರೇ ಇರಲಿಲ್ಲ. ಸರ್ಕಾರ ನಮಗೆ ಸುಳ್ಳು ಹೇಳಬಾರದು, ಮೊದಲು ಮನೆ ಕೊಡುತ್ತೇವೆ ಎಂದು ಹೇಳಿ ಈಗ ಇನ್ನೂ ಕೊಟ್ಟಿಲ್ಲ. ಮನೆ ಕೊಡದೆ ನಾವು ಜಾಗ ಬಿಡುವುದಿಲ್ಲ ಎಂದು ಮಬೀನಾ ʼದ ಫೆಡರಲ್ ಕರ್ನಾಟಕʼದ ಬಳಿ ದುಃಖ ತೋಡಿಕೊಂಡರು.
ನ್ಯಾಯಾಲಯದ ಅಂಗಳಲ್ಲಿ ವಿವಾದ
ಕೋಗಿಲು ಬಡಾವಣೆಯ ಫಕೀರ್ ಲೇಔಟ್ ಜಾಗ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವುದು ಕಾನೂನುಬದ್ಧ. ಆದರೆ, ತೆರವುಗೊಳಿಸಿದ ನಂತರ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಪ್ರಸ್ತುತ, ಫಕೀರ್ ಲೇಔಟ್ ನಿವಾಸಿಗಳು ಇತ್ತ ಒತ್ತುವರಿದಾರರೂ ಅಲ್ಲ, ಸ್ವಾಧೀನದಾರರೂ ಅಲ್ಲ. ರಾಜಕೀಯ ಮೇಲಾಟ ಹಾಗೂ ಕಾನೂನು ತೊಡಕುಗಳ ನಡುವೆ ಈ ಕುಟುಂಬಗಳ ಬದುಕು ಹದಗೆಟ್ಟಿದೆ.
"ಫಕೀರ್ ಬಡಾವಣೆಯಲ್ಲಿ ಯಾರಿಗೂ ಮನೆ ಹಂಚಿಕೆ ಮಾಡಿಲ್ಲ, ಕೋಗಿಲು ಬಡಾವಣೆ ನಿವಾಸಿಗಳಿಗೆ ಮನೆ ನೀಡಿದ್ದಾರೆ, ಆದರೆ, ಫಕೀರ್ ಲೇಔಟ್ ವಾಸಿಗಳಿಗೆ ಮನೆ ನೀಡಿಲ್ಲ. ಮೊನ್ನೆ ಮಳೆ ಬಂದಾಗ ನೀರು ಬಂದು ರಾತ್ರಿ ಕಳೆಯುವುದೇ ಕಷ್ಟವಾಗಿತ್ತು. ಮನೆ ಕೊಡಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೇವೆ, ಕೋರ್ಟಿನಲ್ಲಿ ಏನು ತೀರ್ಪು ಬರಲಿದೆಯೋ ನೋಡಬೇಕು" ಸ್ಥಳೀಯ ನಿವಾಸಿ ಸೈಯದ್ ಹುಸೇನ್ ತಿಳಿಸಿದರು.
ಮತ್ತೊಬ್ಬ ನಿವಾಸಿ ಅಲ್ಲಾಭಕ್ಷ್ ಮಾತನಾಡಿ, ನಮಗೆ ಎಲ್ಲೂ ನೆಲೆಯಿಲ್ಲ. ನಮ್ಮ ಮನೆಗಳನ್ನು ಧ್ವಂಸ ಮಾಡಿದ ಬಳಿಕ ಪುನರ್ವಸತಿ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಈವರೆಗೂ ಯಾರೂ ಇತ್ತ ಸುಳಿಯಲಿಲ್ಲ. ಬಾಡಿಗೆ ಮನೆ ಮಾಡಿಕೊಳ್ಳೋಣ ಎಂದರೆ ಅಡ್ವಾನ್ಸ್ ಹಣ ನೀಡುವುದಕ್ಕೂ ನಮಗೆ ಶಕ್ತಿ ಇಲ್ಲ. ಅನಿವಾರ್ಯವಾಗಿ ಇದೇ ಜಾಗದಲ್ಲಿ ವಾಸ ಮಾಡುತ್ತಿದ್ದೇವೆ. ನಮಗೆ ಕನಿಷ್ಠ ನೆಲೆಯಾದರೂ ಕಲ್ಪಿಸಿಕೊಡಲು ಸರ್ಕಾರ ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು.

