ಮಾನವ-ವನ್ಯಜೀವಿ ಸಂಘರ್ಷ| ಚಿರತೆ ಹಾವಳಿಗೆ ನಲುಗಿದ ಜನ; ನಿದ್ದೆಗೆಡಿಸಿದ ಮದಗಜಗಳ ಹಿಂಡು
x

ಮಾನವ-ವನ್ಯಜೀವಿ ಸಂಘರ್ಷ| ಚಿರತೆ ಹಾವಳಿಗೆ ನಲುಗಿದ ಜನ; ನಿದ್ದೆಗೆಡಿಸಿದ ಮದಗಜಗಳ ಹಿಂಡು

ಆಹಾರ ಹುಡುಕಾಟದಲ್ಲಿ ನಗರ ಪ್ರದೇಶಗಳಿಗೆ ನುಗ್ಗುತ್ತಿರುವ ಚಿರತೆ ಹಾಗೂ ಆನೆಗಳ ಹಿಂಡಿನಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳೆ ನಾಶ, ಜಾನುವಾರು ಮೇಲಿನ ದಾಳಿಯಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.


ಕಾಡಂಚಿನ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ನಗರಗಳಿಗೂ ಲಗ್ಗೆ ಇಟ್ಟಿವೆ. ದಿನ ಕಳೆದಂತೆ ಚಿರತೆಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ರಾಜಾರೋಷವಾಗಿ ರಸ್ತೆಗಿಳಿಯುತ್ತಿವೆ. ಸಂಜೆ ಆರು ಗಂಟೆ ನಂತರ ಜನರು ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಇನ್ನು ಆನೆ ಕಾರಿಡಾರ್‌ ವ್ಯಾಪ್ತಿಯ ಗ್ರಾಮಗಳಲ್ಲಿ ಮದಗಜಗಳ ಹಿಂಡು ದಿಢೀರ್‌ ಪ್ರತ್ಯಕ್ಷವಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಆದರೆ, ಈಗ ಸದ್ದಿಲ್ಲದೆ ಪಟ್ಟಣಕ್ಕೂ ವನ್ಯಜೀವಿಗಳು ಎಂಟ್ರಿ ಕೊಡುವ ಮೂಲಕ ಜನರ ನಿದ್ದೆಗೆಡಿಸಿವೆ.

ಅತೀ ಹೆಚ್ಚು ಚಿರತೆ ಹೊಂದಿರುವ ರಾಜ್ಯ

ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಬಿಡದಿ ಪಟ್ಟಣದಲ್ಲಿ ವಾರದ ಹಿಂದೆ ಒಂದೇ ದಿನ ಮೂರು ಚಿರತೆಗಳು ನಡುರಸ್ತೆಯಲ್ಲಿ ಓಡಾಡಿವೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಕಳೆದ ಒಂದು ವರ್ಷದಲ್ಲಿ ಸುಮಾರು 40 ಕ್ಕೂ ಹೆಚ್ಚು ಚಿರತೆಗಳು ಬಿಡದಿ ಭಾಗದಲ್ಲಿಯೇ ಕಾಣಿಸಿಕೊಂಡಿವೆ.

ಬೆಂಗಳೂರು ಸುತ್ತಮುತ್ತ ಅರಣ್ಯ ಮತ್ತು ಪೊದೆಗಳಿರುವ ಪ್ರದೇಶಗಳಲ್ಲಿ ಸುಮಾರು 80 ರಿಂದ 85 ಚಿರತೆಗಳು ಇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳೇ ಅಂದಾಜಿಸಿದ್ದಾರೆ. 2019ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಾಡಿನೊಳಗೆ 54 ಚಿರತೆಗಳಿವೆ. ಉಳಿದ ಸುಮಾರು 30 ಚಿರತೆಗಳು ನಗರದ ಅಂಚಿನಲ್ಲಿರುವ ಮೀಸಲು ಅರಣ್ಯ ಮತ್ತು ಖಾಸಗಿ ತೋಟಗಳಲ್ಲಿ ವಾಸಿಸುತ್ತಿವೆ. 2026 ರಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.

ಭಾರತದಲ್ಲಿ ಚಿರತೆಗಳ ಸ್ಥಿತಿಗತಿ ವರದಿ ನೋಡುವುದಾದರೆ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶವಿದೆ. ಇತ್ತೀಚಿನ ಗಣತಿಯ ಅಂದಾಜಿನಂತೆ ರಾಜ್ಯದಲ್ಲಿ ಸುಮಾರು 1,879ಕ್ಕೂ ಹೆಚ್ಚು ಚಿರತೆಗಳಿವೆ. ಅದರಲ್ಲೂ ಚಾಮರಾಜನಗರ, ಮೈಸೂರು, ರಾಮನಗರ, ತುಮಕೂರು, ಬಳ್ಳಾರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚಿರತೆಗಳ ಸಾಂದ್ರತೆ ಹೆಚ್ಚಿದೆ.

ಚಿರತೆ ಹೆಚ್ಚಲು ಕಾರಣಗಳೇನು?

ನವೆಂಬರ್‌ನಿಂದ ಫೆಬ್ರವರಿವರೆಗೆ ಚಿರತೆಗಳ ಸಂತಾನಾಭಿವೃದ್ಧಿ ಸಮಯ. ಒಂದು ಹೆಣ್ಣು ಚಿರತೆ ಸಾಮಾನ್ಯವಾಗಿ ಒಂದು ಬಾರಿಗೆ 2 ರಿಂದ 4 ಮರಿಗಳಿಗೆ ಜನ್ಮ ನೀಡುತ್ತದೆ. ಕಬ್ಬಿನ ಗದ್ದೆಗಳನ್ನೇ ಚಿರತೆಗಳಿಗೆ 'ಕೃತಕ ಕಾಡು'ಗಳಾಗಿ ರಕ್ಷಣೆ ಒದಗಿಸಲಿವೆ. ಅಲ್ಲಿ ಮರಿಗಳನ್ನು ಅಡಗಿಸಿಡಲು ಮತ್ತು ಸಾಕಲು ಸುರಕ್ಷಿತ ವಾತಾವರಣ ಸಿಗುವುದರಿಂದ ಮರಿಗಳ ಬದುಕುಳಿಯುವ ದರ ಹೆಚ್ಚಾಗಿದೆ.

ವನ್ಯಜೀವಿಗಳಲ್ಲಿಯೇ ಅತ್ಯಂತ ಬುದ್ಧಿವಂತ ಮತ್ತು ಹೊಂದಾಣಿಕೆ ಗುಣ ಹೊಂದಿರುವ ಚಿರತೆಗಳಿಗೆ ಬದುಕಲು ದಟ್ಟ ಅರಣ್ಯವೇ ಬೇಕೆಂದಿಲ್ಲ. ಸಣ್ಣ ಪೊದೆಗಳು, ಕಬ್ಬಿನ ಗದ್ದೆಗಳು, ಗುಡ್ಡಗಾಡು ಪ್ರದೇಶ ಅಥವಾ ಪಾಳುಬಿದ್ದ ಕಟ್ಟಡಗಳಲ್ಲೂ ವಾಸಿಸಬಲ್ಲವು. ಈ ಗುಣವೇ ಅವುಗಳ ಸಂತತಿ ಹೆಚ್ಚಲು ಕಾರಣ ಎಂಬುದು ವನ್ಯಜೀವಿ ತಜ್ಞರ ಅಭಿಮತವಾಗಿದೆ.

ಕಾಡಂಚು ಮತ್ತು ಜನವಸತಿ ಪ್ರದೇಶಗಳಲ್ಲಿ ಚಿರತೆಗಳಿಗೆ ಶ್ರಮವಿಲ್ಲದೆ ಆಹಾರ ಸಿಗುತ್ತಿದೆ. ನಗರದ ಹೊರವಲಯದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವುದು ಚಿರತೆಗಳಿಗೆ ವರದಾನವಾಗಿದೆ. ಮಾಂಸದ ಅಂಗಡಿಗಳ ತ್ಯಾಜ್ಯ ಮತ್ತು ಸತ್ತ ಪ್ರಾಣಿಗಳನ್ನು ನಗರದ ಹೊರವಲಯದಲ್ಲಿ ಸುರಿಯುವುದರಿಂದ ಅಲ್ಲಿಗೆ ನಾಯಿಗಳು ಬರುತ್ತವೆ. ಈ ನಾಯಿಗಳನ್ನು ಹುಡುಕುತ್ತಾ ಚಿರತೆಗಳು ಬರುತ್ತವೆ. ಚಿರತೆಗಳು ನಿಂತಲ್ಲೇ ನಿಲ್ಲದೆ ದಿನಕ್ಕೆ 22 ಕಿ.ಮೀ. ಸುತ್ತಾಡುತ್ತದೆ. ಯಾವುದೇ ಪ್ರದೇಶದಲ್ಲಿ ಸುಲಭವಾಗಿ ಕೋಳಿ, ನಾಯಿ ಮಾಂಸ ತ್ಯಾಜ್ಯಗಳು ದೊರೆಯುವ ಲಕ್ಷಣ ಕಂಡು ಬಂದರೆ ಆ ವ್ಯಾಪ್ತಿಯಲ್ಲಿ ಹೆಚ್ಚಾಗಿ ವಾಸ್ತವ್ಯ ಹೂಡಲು ಪ್ರಯತ್ನಿಸಲಿವೆ.

ಚಿರತೆಗಳ ನೈಸರ್ಗಿಕ ವಾಸಸ್ಥಾನವಾಗಿದ್ದ ಗುಡ್ಡಗಾಡು ಪ್ರದೇಶಗಳಲ್ಲಿ ಗಣಿಗಾರಿಕೆ, ರೆಸಾರ್ಟ್‌ಗಳು ಮತ್ತು ಲೇಔಟ್‌ಗಳು ನಿರ್ಮಾಣವಾಗಿವೆ. ಇದರಿಂದ ಅವುಗಳ ಪ್ರದೇಶ ಸಂಕುಚಿತಗೊಂಡು ಮಾನವ ಸಂಪರ್ಕಕ್ಕೆ ಬರುತ್ತಿವೆ. ಕತ್ತಲಾಗುತ್ತಿದ್ದಂತೆ ನಾಡಿನ ಕಡೆಗೆ ದಾಳಿಯಿಟ್ಟು ಬೀದಿ ನಾಯಿ, ಕುರಿ, ಮೇಕೆ, ದನಕರುಗಳು ಸೇರಿದಂತೆ ಜಾನುವಾರು ಹೊತ್ತೊಯ್ಯಲಿವೆ. ಕಷ್ಟ ಕಾಲದಲ್ಲಿ ನೆರವಿಗೆ ಬರಲೆಂದು ಜೋಪಾನದಿಂದ ಸಾಕುತ್ತಿರುವ ಜಾನುವಾರುಗಳು ಚಿರತೆ ಬಾಯಿಗೆ ಸಿಲುಕುತ್ತಿವೆ. ಇದರಿಂದ ರೈತನಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗುತ್ತಿದೆ.

ಬಿಡದಿ ಪುರಸಭೆ ವ್ಯಾಪ್ತಿಯ ಕಲ್ಲುಗೋಪಹಳ್ಳಿ, ತಮ್ಮಣ್ಣನದೊಡ್ಡಿ ಗ್ರಾಮಗಳ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ತಮ್ಮಣ್ಣನದೊಡ್ಡಿಯ ರವಿ ಎಂಬುವರ ಮನೆಗೆ ನುಗ್ಗಿದ ಚಿರತೆ ಒಂದು ಮೇಕೆಯನ್ನು ಕೊಂದು ರಕ್ತಕುಡಿದು ಮತ್ತೊಂದನ್ನು ಹೊತ್ತುಕೊಂಡು ಹೋಗಿದೆ. ತಮ್ಮಣ್ಣನದೊಡ್ಡಿ ಗ್ರಾಮದ ಹೊರವಲಯದಲ್ಲಿರುವ ಮುತ್ತುರಾಯಸ್ವಾಮಿ ದೇವಾಲಯದ ಆಸುಪಾಸಿನಲ್ಲಿ ಚಿರತೆಗಳು ಹಗಲಿನಲ್ಲಿಯೇ ಕಾಣಿಸಿಕೊಂಡು ಜನರಿಗೆ ಭಯ ಹುಟ್ಟಿಸಿವೆ. ಇನ್ನು ಕಲ್ಲುಗೋಪಹಳ್ಳಿಯಲ್ಲಿ ಬೆಳಗಿನ ಜಾವದ ಸಮಯದಲ್ಲಿ ಮೂರು ಚಿರತೆಗಳು ಒಟ್ಟಾಗಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದು ಗ್ರಾಮದ ತುಂಬಾ ರಸ್ತೆಗಳಲ್ಲಿ ಓಡಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಹಾರ ಹುಡುಕುತ್ತಾ ಬಂದಿರುವ ಚಿರತೆಗಳು ಗ್ರಾಮದಲ್ಲಿ ಮನೆಗಳ ಕಾಂಪೌಂಡ್ ಹಾಗೂ ಮನೆಯ ಮೇಲೇರಿ ಬೀದಿ ನಾಯಿ ಹಾಗೂ ಜಾನುವಾರುಗಳನ್ನು ಹುಡುಕಾಡಿವೆ. ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು ಗ್ರಾಮದಲ್ಲಿದ್ದ ಸಾಕು ನಾಯಿಗಳನ್ನು ಚಿರತೆಗಳು ಹೊತ್ತು ಹೋಗಿವೆ. ಇದರ ರುಚಿಯಲ್ಲೇ ಮತ್ತೆ ಗ್ರಾಮಕ್ಕೆ ಬಂದಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ನಿಲ್ಲದ ಆನೆಗಳ ಹಾವಳಿ

ರಾಜ್ಯದಲ್ಲಿ ಚಿರತೆಗಳ ಹಾವಳಿಯಂತೆಯೇ ಆನೆಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಇಡೀ ದೇಶದಲ್ಲೇ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಮೊದಲ ರಾಜ್ಯವಾಗಿರುವ ಕರ್ನಾಟಕದಲ್ಲಿ ಒಟ್ಟು 6,395 ಆನೆಗಳಿವೆ. 2017ರ ಗಣತಿಯಲ್ಲಿ ಆನೆಗಳ ಸಂಖ್ಯೆ 6,049 ಇತ್ತು. ಕಳೆದ ಗಣತಿಗೆ ಹೋಲಿಸಿದರೆ ರಾಜ್ಯದಲ್ಲಿ ಆನೆಗಳ ಸಂಖ್ಯೆ ಸುಮಾರು 346ರಷ್ಟು ಹೆಚ್ಚಾಗಿದೆ. ಭಾರತದ ಒಟ್ಟು ಆನೆಗಳ ಸಂಖ್ಯೆಯಲ್ಲಿ ಶೇ. 25 ರಷ್ಟು ಆನೆಗಳು ರಾಜ್ಯದಲ್ಲಿಯೇ ಇರುವುದು ವಿಶೇಷ.

ಹೀಗಾಗಿ, ಕಾಫಿ ನಾಡು ಕೊಡಗು, ಹಾಸನ, ಚಾಮರಾಜನಗರ ಮತ್ತು ರಾಮನಗರದ ಅಂಚಿನ ಪ್ರದೇಶಗಳಲ್ಲಿ ಆನೆಗಳ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ರಾಮನಗರದಲ್ಲಿ ನೆನ್ನೆ ರಾತ್ರಿ ನಾಲ್ಕು ಆನೆಗಳ ಹಿಂಡು ನಗರದ ಸಮೀಪದಲ್ಲಿನ ಸುಗ್ಗನಹಳ್ಳಿಯಲ್ಲಿ ಕಾಣಿಸಿಕೊಂಡಿದೆ. ಇದೇ ರೀತಿ ಕಳೆದ ವರ್ಷ ಚನ್ನಪಟ್ಟಣದ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಆನೆಗಳನ್ನು ನಾಲ್ಕು ಬಾರಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ, ಅರಣ್ಯಕ್ಕೆ ಅಟ್ಟಲಾಗಿತ್ತು.ಆದರೂ ಅವುಗಳ ತಿರುಗಾಟು ನಿಂತಿರಲಿಲ್ಲ.

ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ರಿಂದ 40 ಜನರು ಆನೆ ದಾಳಿಗೆ ಬಲಿಯಾಗುತ್ತಿದ್ದಾರೆ. 2022-23 ನೇ ಸಾಲಿನಲ್ಲಿ 29, 2023-24 ನೇ ಸಾಲಿನಲ್ಲಿ 42 ಮಂದಿ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. 2024-25 ರಲ್ಲಿ ಸುಮಾರು 46 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ.

ಹಾಸನದ ಸಕಲೇಶಪುರ ಭಾಗದಲ್ಲಿ ಆನೆಗಳ ದಂಡು ಕಾಯಂ ಆಗಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ರೈತರ ಪ್ರಾಣಕ್ಕೆ ಕಂಟಕವಾಗಿದೆ. ಕೊಡಗಿನ ಕಾಫಿ ಮತ್ತು ಬತ್ತದ ಬೆಳೆಗಳು ಆನೆಗಳ ಪಾಲಾಗುತ್ತಿವೆ. ಬಂಡೀಪುರ ಮತ್ತು ನಾಗರಹೊಳೆ ಅಂಚಿನ ಗ್ರಾಮಗಳಲ್ಲಿ ನಿರಂತರ ಆನೆ ದಾಳಿ ನಡೆಯುತ್ತಿದ್ದು, ಬನ್ನೇರುಘಟ್ಟದಿಂದ ಹೊರಬರುವ ಆನೆಗಳು ರಾಮನಗರ-ಚನ್ನಪಟ್ಟಣ ಭಾಗದ ರೇಷ್ಮೆ ಮತ್ತು ಮಾವಿನ ತೋಟಗಳನ್ನು ನಾಶಪಡಿಸುತ್ತಿರುವುದು ಸಾಮಾನ್ಯ ಎನ್ನುವಂತಾಗಿದೆ.

ಆನೆ ಹಾವಳಿಗೆ ಕಾರಣಗಳೇನು?

ಆನೆಗಳು ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಹೋಗುವ ದಾರಿಗಳಲ್ಲಿ (ಆನೆ ಕಾರಿಡಾರ್) ರೆಸಾರ್ಟ್‌ಗಳು, ರಸ್ತೆಗಳು ಮತ್ತು ಲೇಔಟ್‌ಗಳು ನಿರ್ಮಾಣವಾಗಿವೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಿಂದಾಗಿ ಬಿಡದಿ ಬಳಿ ಆನೆ ಕಾರಿಡಾರ್‌ಗೆ ಸಂಪರ್ಕ ಕಡಿತಗೊಂಡಿದೆ. ಬನ್ನೇರುಘಟ್ಟದಲ್ಲಿ ರೈಲ್ವೆ ಬ್ಯಾರಿಕೇಡ್‌ ನಿರ್ಮಿಸುವುದರಿಂದ ಆನೆಗಳು ಬಿ.ಎಂ.ಕಾವಲ್‌ ಮೂಲಕ ಸಾವನದುರ್ಗ ಪ್ರವೇಶಿಸದೇ ರಾಮನಗರ, ಚನ್ನಪಟ್ಟಣ ಮೂಲಕ ತೆರಳಲಿವೆ. ಕೆಲವೊಮ್ಮೆ ರೈತರು ವಿದ್ಯುತ್ ಸಂಪರ್ಕ ನೀಡಿರುವ ಸೋಲಾರ್ ಬೇಲಿ ಮೇಲೆ ಮರಗಳನ್ನು ಹಾಕಿ, ದಾಟುವಷ್ಟು ಚಾಣಾಕ್ಷತೆ ಹೊಂದಿರುವ ಆನೆಗಳನ್ನು ನಿಯಂತ್ರಿಸುವುದು ಅಸಾಧ್ಯದ ಕೆಲಸ. ಹೀಗಾಗಿ ಅವುಗಳ ಆವಾಸ ಆಕ್ರಮಿಸುವುದನ್ನು ಬಿಟ್ಟರೆ ಸಾಕು ಎನ್ನುತ್ತಾರೆ ವನ್ಯಜೀವಿ ತಜ್ಞರು.

ಕಾಡಿನೊಳಗೆ ಆನೆಗಳಿಗೆ ಬೇಕಾದ ಬಿದಿರು ಮತ್ತು ಇತರ ಮೇವು ಕಡಿಮೆಯಾಗಿರುವುದು ಅವುಗಳನ್ನು ನಾಡಿನತ್ತ ಸೆಳೆಯುತ್ತಿದೆ. ಭತ್ತ, ಕಬ್ಬು, ಬಾಳೆ ಮತ್ತು ರಾಗಿ ಬೆಳೆಗಳ ರುಚಿಗೆ ಮಾರುಹೋದ ಆನೆಗಳು ಕಾಡಿಗೆ ಮರಳಲು ಹಿಂಜರಿಯುತ್ತಿರುವುದು ವಿಶೇಷ.

ಗ್ರಾಮಸ್ಥರ ಆತಂಕ

ಗ್ರಾಮದಲ್ಲಿ ಚಿರತೆ-ಆನೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕತ್ತಲಾಗುತ್ತಿದ್ದಂತೆ ಮಹಿಳೆಯರು ಮಕ್ಕಳಾದಿಯಾಗಿ ಯಾರೂ ಮನೆಯಿಂದ ಹೊರಬರಲು ಭೀತಿ ಹುಟ್ಟಿಸಿದೆ. ಅಲ್ಲದೆ ಮನೆಗಳ ಮುಂದೆ ಜಾನುವಾರು, ಮೇಕೆ, ಕುರಿಗಳನ್ನು ಕಟ್ಟಿಹಾಕಲು ಭಯಪಡುವಂತಾಗಿದೆ. ಗ್ರಾಮದಲ್ಲಿ ಹಗಲು ರಾತ್ರಿಯೆನ್ನದೆ ರಾಜಾರೋಷವಾಗಿ ಓಡಾಡುತ್ತಾ ಆತಂಕ ಸೃಷ್ಟಿಸಿರುವ ಚಿರತೆಗಳನ್ನು ಕೂಡಲೇ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಬಿಡದಿಯ ವಲಯ ಅರಣ್ಯಾಧಿಕಾರಿ ಭೈರವ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ಕಲ್ಲುಗೋಪಹಳ್ಳಿ ಮತ್ತು ತಮ್ಮಣ್ಣನದೊಡ್ಡಿ ಭಾಗದಲ್ಲಿ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಕೇಳಿ ಬಂದಿವೆ. ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಲ್ಲುಗೋಪಹಳ್ಳಿ ಬಳಿ ಈಗಾಗಲೇ ಬೋನು ಇರಿಸಲಾಗಿದೆ. ಆದರೆ ಚಿರತೆ ಬೋನಿನತ್ತ ಸುಳಿದಿಲ್ಲ. ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ತಮ್ಮಣ್ಣನದೊಡ್ಡಿ ಸಮೀಪವೂ ಮತ್ತೊಂದು ಬೋನು ಇರಿಸಲು ಇಲಾಖಾಧಿಕಾರಿಗಳ ಗಮನ ಸೆಳೆಯಲಾಗುವುದು. ಚಿರತೆಗಳು ಹುಲಿಹಾರ್ ಅರಣ್ಯ ಪ್ರದೇಶದಿಂದ ಆಹಾರ ಹುಡುಕುತ್ತಾ ಬಂದಿರಬಹುದು" ಎಂದರು.

Read More
Next Story