
ಕರುನಾಡ ಕಣ್ಣಲ್ಲಿ ಪಂಚರಾಜ್ಯ ಚುನಾವಣೆ| ʼವಂಗನಾಡಿನʼ ವಲಸಿಗರ ಮತ ಸೆಳೆಯಲು ಬೆಂಗಳೂರಿನಲ್ಲಿ ಕಸರತ್ತು!
ಪಶ್ಚಿಮ ಬಂಗಾಳ ಮೂಲದ ಐಟಿ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ವೈಟ್ ಫೀಲ್ಡ್, ಮಾರತ್ತಹಳ್ಳಿ ಹಾಗೂ ಇಂದಿರಾನಗರದಲ್ಲಿ ಚುನಾವಣೆಯ ಬಿಸಿ ಕೊಂಚ ಏರಿಕೆಯಾಗಿದೆ.
ರಾಜಕೀಯ ಸಂಘರ್ಷದಿಂದಲೇ ಸದ್ದು ಮಾಡುತ್ತಿರುವ ವಂಗನಾಡಿನ (ಪಶ್ಚಿಮ ಬಂಗಾಳ) ಚುನಾವಣೆಯ ಕಾವು ಬೆಂಗಳೂರಿನಲ್ಲಿ ಬಿಸಿ ಏರಿಸುತ್ತಿದೆ.
1,879 ಕಿ.ಮೀ. ದೂರದಲ್ಲಿರುವ ಪಶ್ಚಿಮ ಬಂಗಾಳದ ಚುನಾವಣೆಗೂ, ರಾಜಧಾನಿ ಬೆಂಗಳೂರಿಗೂ ಎತ್ತಣಿಂದೆತ್ತ ಸಂಬಂಧ ಎನ್ನುವವರಿಗೆ ʼವಲಸೆಯ ನಂಟುʼ ಕಾಣಲಿದೆ. ಪಶ್ಚಿಮ ಬಂಗಾಳ ಮೂಲದ ಸುಮಾರು 10 ಲಕ್ಷದಷ್ಟು ಕಾರ್ಮಿಕರು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಹಾಗಾಗಿ, ಅವರ ಮತ ಸೆಳೆಯುವುದು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿದೆ.
ಬೆಂಗಳೂರಿನ ಐಟಿ ವೃತ್ತಿಪರರು, ಎಂಜಿನಿಯರ್‌ಗಳು, ಆಭರಣ ತಯಾರಿಕೆ, ಹೋಟೆಲ್ ಉದ್ಯಮ, ಮನೆಕೆಲಸ, ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿ ಹಾಗೂ ಆನ್‌ಲೈನ್ ಪ್ಲಾಟ್‌ಫಾರಂಗಳಲ್ಲಿ ದುಡಿಯುತ್ತಿರುವ ಗಿಗ್ ಕಾರ್ಮಿಕರು ಪಶ್ಚಿಮ ಬಂಗಾಳದಲ್ಲಿ ಮತದಾನದ ಹಕ್ಕು ಹೊಂದಿದ್ದು, ಅವರ ಮತ ಸೆಳೆಯುವುದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಅನಿವಾರ್ಯವಾಗಿದೆ.
ಪಶ್ಚಿಮ ಬಂಗಾಳ ಮೂಲದ ಐಟಿ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ವೈಟ್ ಫೀಲ್ಡ್, ಮಾರತ್ತಹಳ್ಳಿ ಹಾಗೂ ಇಂದಿರಾನಗರದಲ್ಲಿ ಚುನಾವಣೆಯ ಬಿಸಿ ಕೊಂಚ ಏರಿಕೆಯಾಗಿದೆ. ಐಟಿ ವಲಯದ ಸೆಕ್ಯುರಿಟಿ ಗಾರ್ಡ್‌ಗಳಿಂದ ಹಿಡಿದು ರಸ್ತೆ ನಿರ್ಮಾಣ ಮತ್ತು ಕಟ್ಟಡ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರವರೆಗೆ ಎಲ್ಲರನ್ನೂ ಸೆಳೆಯಲು ರಾಜಕೀಯ ಪಕ್ಷಗಳು ಅಖಾಡಕ್ಕಿಳಿದಿವೆ.
ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಳ
2011 ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಅಂದಾಜು 87,541 ಜನರು ಮಾತೃಭಾಷೆ ಬಂಗಾಳಿ ಎಂದು ನೋಂದಾಯಿಸಿಕೊಂಡಿದ್ದರು. ಆ ಮೂಲಕ ಕರ್ನಾಟಕದಲ್ಲಿ ಪಶ್ಚಿಮ ಬಂಗಾಳ ಮೂಲದವರು 80 ಸಾವಿರ ಮೇಲ್ಪಟ್ಟು ಎಂಬುದು ಅಂಕಿಅಂಶಗಳಿಂದ ತಿಳಿದು ಬಂದಿತ್ತು.
ಕಳೆದ 13-14 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಆಗಿರುವ ಐಟಿ ಕ್ರಾಂತಿ ಮತ್ತು ನಿರ್ಮಾಣ ವಲಯದ ಬೆಳವಣಿಗೆಯಿಂದಾಗಿ ಈಗ ಪಶ್ಚಿಮ ಬಂಗಾಳ ಮೂಲದವರ ಜನಸಂಖ್ಯೆ ಬರೋಬ್ಬರಿ 10 ರಿಂದ 12 ಲಕ್ಷಕ್ಕೆ ಏರಿದೆ ಎನ್ನಲಾಗಿದೆ.
ಕಾರ್ಮಿಕ ಇಲಾಖೆ ಮಾಹಿತಿ ಪ್ರಕಾರ, ರಾಜ್ಯದಲ್ಲಿರುವ ಅಂತರ್ ರಾಜ್ಯ ವಲಸೆ ಕಾರ್ಮಿಕರಲ್ಲಿ ಪಶ್ಚಿಮ ಬಂಗಾಳವು ಉತ್ತರ ಪ್ರದೇಶ ಮತ್ತು ಬಿಹಾರದ ನಂತರದ ಸ್ಥಾನದಲ್ಲಿದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದಿಂದ ಬಂದಿರುವವರಲ್ಲಿ ಅನೇಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರ ಹೆಸರು ಯಾವುದೇ ಅಧಿಕೃತ ದಾಖಲೆಗಳಲ್ಲಿ ನೋಂದಣಿಯಾಗಿಲ್ಲ. ಹೀಗಾಗಿ ನಿಖರ ಜನಸಂಖ್ಯೆ ಕಷ್ಟವಾದರೂ ಮುಂದಿನ ಜನಗಣತಿಯಲ್ಲಿ ಮಾತ್ರ ಸ್ಪಷ್ಟ ಸಂಖ್ಯೆ ಸಿಗಲಿದೆ ಎಂದು ತಿಳಿದು ಬಂದಿದೆ.
ವಲಸೆ ಕಾರ್ಮಿಕರೇ 'ಟ್ರಂಪ್ ಕಾರ್ಡ್'?
ಕರ್ನಾಟಕದಲ್ಲಿ ಸುಮಾರು 10ರಿಂದ 12 ಲಕ್ಷ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಿದ್ದಾರೆ. ಈ ಕಾರ್ಮಿಕರನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ನಡುವೆ ನೇರ ಹಣಾಹಣೆ ಇದ್ದರೂ ಕಾಂಗ್ರೆಸ್ ಕೂಡ 284 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಹಿನ್ನೆಲೆ ಕರ್ನಾಟಕ ಕಾಂಗ್ರೆಸ್ ಕೂಡ ವಲಸೆ ಕಾರ್ಮಿಕರ ಮನವೊಲಿಕೆ ಪ್ರಯತ್ನ ಆರಂಭಿಸಿದೆ.
ಇನ್ನು ಕರ್ನಾಟಕ, ಅದರಲ್ಲೂ ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರನ್ನು ಮತದಾನದಿಂದ ದೂರ ಉಳಿಯದಂತೆ ನೋಡಿಕೊಳ್ಳಲು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್, ಸ್ಥಳೀಯ ನಾಯಕರಿಗೆ ಟಾಸ್ಕ್ ನೀಡಿರುವುದರಿಂದ ವಂಗನಾಡಿನ ಬಿಸಿ ಬೆಂಗಳೂರಿನಲ್ಲಿ ಕಾವೇರುವಂತೆ ಮಾಡಿದೆ.
ಬೆಂಗಳೂರಿನಲ್ಲಿ ಬಂಗಾಳಿ ಭಾಷಿಕರು ವಾಸ ಮಾಡುವ ಪ್ರದೇಶಗಳಲ್ಲಿ ಉಭಯ ಪಕ್ಷಗಳು ಪ್ರಚಾರ ಆರಂಭಿಸಿವೆ. ಬಿಜೆಪಿ ಮುಖಂಡರು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ, ನುಸುಳುಕೋರರ ಸಮಸ್ಯೆ ಮುಂದಿಟ್ಟುಕೊಂಡು ಮತಯಾಚಿಸಿದರೆ, ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿ ನೀಡುತ್ತಿರುವ ಕೊಡುಗೆಗಳು, ಪಶ್ಚಿಮ ಬಂಗಾಳವನ್ನು ಕಾಡುತ್ತಿರುವ ರಾಜಕೀಯ ಸಂಘರ್ಷ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಪ್ರಚಾರ ಆರಂಭಿಸಿದೆ.
"ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳ, ಕೇರಳ ಮೂಲದ ಕಾರ್ಮಿಕರಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಅದನ್ನು ಕಾಂಗ್ರೆಸ್ಸಿನ ಕಾರ್ಮಿಕ ಘಟಕವು ನೋಡಿಕೊಳ್ಳುತ್ತಿದೆ" ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮತದಾನಕ್ಕೆ ವಿಶೇಷ ರೈಲು?
ಕಾರ್ಮಿಕರು ಮತದಾನ ಮಾಡಲು ಸಾವಿರಾರು ಕಿ. ಮೀ ದೂರ ಪ್ರಯಾಣಿಸಬೇಕಿರುವ ಹಿನ್ನೆಲೆ ಬೆಂಗಳೂರಿನಿಂದ ಕೋಲ್ಕತ್ತಾ, ಮಾಲ್ಡಾ ಮತ್ತು ಮುರ್ಷಿದಾಬಾದ್‌ಗೆ ವಿಶೇಷ ರೈಲು ಆರಂಭಿಸಲು ರಾಜಕೀಯ ಪಕ್ಷಗಳು ರೈಲ್ವೆ ಸಚಿವಾಲಯದ ಮೇಲೆ ಒತ್ತಡ ಹಾಕುತ್ತಿವೆ. ನಿರ್ಮಾಣ ಕಂಪನಿಗಳು ಮತ್ತು ಐಟಿ ಸೆಕ್ಯುರಿಟಿ ಏಜೆನ್ಸಿಗಳ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಮತದಾನದ ದಿನದಂದು ರಜೆ ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ತಂತ್ರ ʼರಾಜಕೀಯ ಸಂಘರ್ಷʼ
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ವಲಸೆ ಕಾರ್ಮಿಕರಲ್ಲಿ ಭೀತಿ ಮೂಡಿಸಿತ್ತು. ಇದೇ ವಿಷಯ ಮುಂದಿಟ್ಟುಕೊಂಡು ತೃಣಮೂಲ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಹೊರಹಾಕುವ ಶಪಥ ಮಾಡಿ ಎಸ್ಐಆರ್‌ಗೆ ಸ್ಪಷ್ಟನೆ ನೀಡಿತ್ತು.
“ಬೆಂಗಳೂರಿನಲ್ಲಿರುವ ಪ್ರತಿಯೊಬ್ಬ ಬಂಗಾಳಿ ಕಾರ್ಮಿಕರು ಮುಖ್ಯ. ಅವರು ತಮ್ಮ ಹಕ್ಕು ಚಲಾಯಿಸಲು ಎಲ್ಲಾ ರೀತಿಯ ಸೌಲಭ್ಯಗಳನ್ನು ರಾಜ್ಯ ಬಿಜೆಪಿ ಘಟಕದಿಂದ ಒದಗಿಸಲಾಗುವುದು. ಪಶ್ಚಿಮ ಬಂಗಾಳದ ಮತದಾನದಂದು ವಿಶೇಷ ರೈಲು ಸೌಲಭ್ಯ ಒದಗಿಸುವಂತೆ ಈಗಾಗಲೇ ರೈಲ್ವೆ ಸಚಿವಾಲಯವನ್ನು ಕೋರಲಾಗಿದೆ ” ಎಂದು ಬಿಜೆಪಿ ಮುಖಂಡರೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

