
ರೈತರು ಎದುರಿಸುತ್ತಿರುವ ಹೂವು-ಕಾಯಿ ಉದುರುವಿಕೆ ಮತ್ತು ಹಣ್ಣು ಕೊಳೆಯುವ ಸಮಸ್ಯೆಗೆ ಮುಖ್ಯ ಕಾರಣ ಸರಿಯಾದ ಪರಾಗಸ್ಪರ್ಶವಾಗದಿರುವುದು ಮತ್ತು ಪೋಷಕಾಂಶಗಳ ಕೊರತೆ.
ಕಲ್ಲಂಗಡಿ ಹೂ ಪರಾಗಸ್ಪರ್ಷಕ್ಕೆ ಜೇನುನೊಣಗಳೇ ಇಲ್ಲ! ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ಸೊರಗಲು ಇದೇ ಕಾರಣ..
ಕಲ್ಲಂಗಡಿ ಬೆಳೆಯಲ್ಲಿ ಶೇ. 80-90 ರಷ್ಟು ಪರಾಗಸ್ಪರ್ಶವು ಜೇನುನೊಣಗಳಿಂದಲೇ ನಡೆಯುತ್ತದೆ. ಹೆಣ್ಣು ಹೂವು ಅರಳಿದ ದಿನ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಮಾತ್ರ ಸಕ್ರಿಯವಾಗಿರುತ್ತದೆ.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಕಲ್ಲಂಗಡಿಯನ್ನು ಬೆಳೆಯುತ್ತಿರುವ ರೈತರನ್ನು ಇತ್ತೀಚಿನ ದಿನಗಳಲ್ಲಿ ಹೂವು ಮತ್ತು ಕಾಯಿ ಉದುರುವಿಕೆ ಹಾಗೂ ಹಣ್ಣಿನ ಆಕಾರದಲ್ಲಿ ಬದಲಾವಣೆಯಂತಹ ಗಂಭೀರ ಸಮಸ್ಯೆಗಳು ಚಿಂತಿಗೀಡುಮಾಡಿವೆ.
ಮುಖ್ಯವಾಗಿ ಮೈಸೂರು ಮತ್ತು ಗೌರಿಬಿದನೂರು ಭಾಗದ ಕಲ್ಲಂಗಡಿ ತೋಟಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ. ಆದರೆ ಈ ಸಮಸ್ಯೆಗೆ ಮೂಲಕ ಕಾರಣವಾಗಿರುವುದು ವೈಜ್ಞಾನಿಕವಾಗಿ ಸರಿಯಾದ ಪರಾಗಸ್ಪರ್ಶವಾಗದಿರುವುದು ಮತ್ತು ಪೋಷಕಾಂಶಗಳ ಕೊರತೆ ಇದೆ ಎಂಬುದಾಗಿ ಕೃಷಿ ವಿಜ್ಞಾನಿಗಳ ಅಧ್ಯಯನದಿಂದ ತಿಳಿದುಬಂದಿದೆ.
ಜೇನು ನೊಣಗಳೇ ಕಲ್ಲಂಗಡಿಯ ಜೀವನಾಡಿ
ಕಲ್ಲಂಗಡಿ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೂವುಗಳು ಪ್ರತ್ಯೇಕವಾಗಿರುತ್ತವೆ. ಉತ್ತಮವಾದ ಕಾಯಿ ಕಟ್ಟಲು ಗಂಡು ಹೂವಿನ ಪರಾಗ ರೇಣುಗಳು ಹೆಣ್ಣು ಹೂವಿಗೆ ಸೇರುವುದು ಕಡ್ಡಾಯ. ಕಲ್ಲಂಗಡಿಯಲ್ಲಿ ಶೇ. 80-90 ರಷ್ಟು ಪರಾಗಸ್ಪರ್ಶ ಪ್ರಕ್ರಿಯೆಯು ಜೇನು ನೊಣಗಳಿಂದಲೇ ನಡೆಯುತ್ತದೆ. ವಿಶೇಷವೆಂದರೆ, ಹೆಣ್ಣು ಹೂವು ಅರಳಿದ ಕೇವಲ ಒಂದು ದಿನ ಮಾತ್ರ, ಅರಳಿ ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಮಾತ್ರ ಪರಾಗವನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರುತ್ತದೆ. ಈ ಅಲ್ಪ ಅವಧಿಯಲ್ಲಿ ಜೇನು ನೊಣಗಳ ಚಟುವಟಿಕೆ ಇಲ್ಲವಾದರೆ ಇಳುವರಿ ಸಂಪೂರ್ಣ ಕುಸಿಯುತ್ತದೆ. ಒಂದು ಸಮರ್ಪಕ ಗಾತ್ರದ ಮತ್ತು ಸಿಹಿಯಾದ ಹಣ್ಣು ಪಡೆಯಲು ಕನಿಷ್ಠ 500 ರಿಂದ 1000 ಪರಾಗ ರೇಣುಗಳ ಅವಶ್ಯಕತೆಯಿದ್ದು, ಇದಕ್ಕಾಗಿ ಜೇನು ನೊಣಗಳು ಒಂದು ಹೆಣ್ಣು ಹೂವಿಗೆ ಕನಿಷ್ಠ 10 ರಿಂದ 15 ಬಾರಿ ಭೇಟಿ ನೀಡಲೇಬೇಕು ಎಂದು ಬೆಳೆ ಶರೀರ ಶಾಸ್ತ್ರಜ್ಞ ಡಾ. ಪ್ರವೀಣ್ ಹೆಚ್. ಜಿ. ಅವರು ʼ `ದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕೀಟನಾಶಕಗಳ ಸಿಂಪಡಣೆಯಿಂದ ಜೇನುನೊಣಗಳು ಹೂಗಳ ಹತ್ತಿರ ಸುಳಿಯುವುದಿಲ್ಲ!
ಆದರೆ ಇತ್ತೀಚೆಗೆ ಹೆಚ್ಚಿನ ಇಳುವರಿಯ ಆಸೆಯಿಂದ ರೈತರು ವಾರಕ್ಕೆ ಎರಡು-ಮೂರು ಬಾರಿ ಕೀಟನಾಶಕ ಹಾಗೂ ಶಿಲೀಂಧ್ರನಾಶಕಗಳನ್ನು ಸಿಂಪಡಿಸುತ್ತಿದ್ದಾರೆ. ಇದರಿಂದ ಹೂವುಗಳಿಗೆ ಜೇನುನೊಣಗಳು ಬರುವುದು ಸಂಪೂರ್ಣವಾಗಿ ನಿಂತುಹೋಗುತ್ತಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಬೆಳೆಯುವ ಕಲ್ಲಂಗಡಿ ತಳಿಗಳು 35 ರಿಂದ 45 ದಿನಗಳ ಅವಧಿಯಲ್ಲಿ ಹೂವು ಬಿಡುತ್ತವೆ. ಈ ಹಂತವು ಬೆಳೆಯ ಅತ್ಯಂತ ನಿರ್ಣಾಯಕ ಸಮಯವಾಗಿದೆ. ಹೂವು ಬಿಡುವ ಸಮಯದಲ್ಲಿ ರಾಸಾಯನಿಕಗಳ ಸಿಂಪಡಣೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಜೇನುನೊಣಗಳು ಬರದಿದ್ದರೆ ಪರಾಗಸ್ಪರ್ಶ ಸರಿಯಾಗಿ ನಡೆಯದೆ ಇಳುವರಿ ಕುಂಠಿತವಾಗುತ್ತದೆ. ಆದ್ದರಿಂದ ಕೀಟನಾಶಕಗಳನ್ನು ಯಾವಾಗ ಮತ್ತು ಹೇಗೆ ಬಳಸಬೇಕು ಎಂಬ ಅರಿವು ರೈತರಿಗೆ ಇರಬೇಕು ಎಂದು ಡಾ. ಪ್ರವೀಣ್ ಹೆಚ್.ಜಿ. ತಿಳಿಸಿದರು.
ಹೂ ಬಿಡುವ ಹಂತದಲ್ಲಿ ರೈತರು ಕಠಿಣ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಜೇನುನೊಣಗಳು ಸತ್ತುಹೋಗುತ್ತಿವೆ ಅಥವಾ ತೋಟಕ್ಕೆ ಬರುತ್ತಿಲ್ಲ. ಇದರಿಂದ ಪರಾಗಸ್ಪರ್ಶ ಸರಿಯಾಗಿ ನಡೆಯುತ್ತಿಲ್ಲ. ಸರಿಯಾದ ಸಮಯದಲ್ಲಿ ಎನ್.ಪಿ.ಕೆ ಮತ್ತು ಇತರ ಪೋಷಕಾಂಶಗಳನ್ನು ನೀಡದಿದ್ದರೆ ಹೂವಿನಲ್ಲಿ ಭಂಡಾರ (Pollen) ಉತ್ಪತ್ತಿಯಾಗುವುದಿಲ್ಲ. ಇದರಿಂದ ಜೇನುನೊಣಗಳು ಆಕರ್ಷಿತವಾಗುವುದಿಲ್ಲ. ಬೆಳಗಿನ ಜಾವ 7 ರಿಂದ 10 ಗಂಟೆಯ ಅವಧಿಯು ಜೇನುನೊಣಗಳ ಓಡಾಟಕ್ಕೆ ಮುಖ್ಯವಾದ ಸಮಯ. ಆದರೆ ಮಂಜು ಹೆಚ್ಚಾದಾಗ ಹೂವುಗಳಲ್ಲಿ ನೀರು ತುಂಬಿಕೊಂಡು ಪರಾಗಸ್ಪರ್ಶಕ್ಕೆ ಅಡ್ಡಿಯಾಗುತ್ತದೆ. ಕೆಲವೊಂದು ಕಡೆ ವೈರಸ್ ಬಾಧೆ ಕೂಡ ಹೆಚ್ಚಾಗಿದೆ. ಚಾಮರಾಜನಗರ ಭಾಗದಲ್ಲಿ ಈ ವೈರಸ್ ಬಾಧೆ ಹೆಚ್ಚಾಗಿದೆ. ಈ ವೈರಸ್ ಬಂದ ಗಿಡಗಳು ಆಹಾರವನ್ನು ತೆಗೆದುಕೊಳ್ಳುವುದಿಲ್ಲ, ಇದರಿಂದ ಕಲ್ಲಂಗಡಿ ಇಳುವರಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಲ್ಲಂಗಡಿ ಬೆಳೆ ಮತ್ತು ಇಳುವರಿ ಎರಡೂ ಕಡಿಮೆಯಾಗಿದೆ ಎಂದು ಚಾಮರಾಜನಗರದ ಡೀಲರ್ ಆಗಿರುವ ಕೆ. ಶಶಿಧರ್ ಚಾಮರಾಜನಗರ ಅವರು ʼ ದ ಫೆಡರಲ್ ಕರ್ನಾಟಕ್ಕೆʼ ತಿಳಿಸಿದರು.
ಕಲ್ಲಂಗಡಿ ಬೆಳೆಗಾರ ಸತೀಶ್ ಗೌರಿಬಿದನೂರು ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡುತ್ತಾ, "ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆಲವು ಕಡೆ ಹೂವು ಉದುರುವುದು ಮತ್ತು ಪೀಚು ಕಚ್ಚದೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ಅತಿಯಾದ ರಾಸಾಯನಿಕಗಳ ಬಳಕೆಯಿಂದ ಜೇನುನೊಣಗಳು ಬರುತ್ತಿಲ್ಲ, ಇದರಿಂದ ಪರಾಗಸ್ಪರ್ಶ ಕ್ರಿಯೆಗೆ ತೊಂದರೆಯಾಗುತ್ತಿದೆ ಹೇಳುತ್ತಾರೆ. ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳ ಮಾರ್ಗದರ್ಶನ ಮತ್ತು ಸರಿಯಾದ ಪೋಷಕಾಂಶಗಳ ನಿರ್ವಹಣೆಯಿಂದ ಇಳುವರಿಯನ್ನು ಸುಧಾರಿಸಬಹುದು. ಈ ಬಾರಿ ಬೆಳೆ ನಾಟಿ ಮಾಡುವುದು ಸುಮಾರು 15 ದಿನ ತಡವಾಗಿದೆ, ಸರಿಯಾದ ಸಮಯಕ್ಕೆ ನಾಟಿ ಮಾಡಿದ್ದರೆ ಈ ವೇಳೆಗೆ ಕಾಯಿ ಬರುವ ಹಂತದಲ್ಲಿ ಇರುತ್ತಿತ್ತು ಎಂದು ಅವರು ʼ ದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ರೈತರು ಏನು ಮಾಡಬೇಕು?
ರೈತರು ಕಲ್ಲಂಗಡಿ ನಾಟಿ ಮಾಡಿದ 30-45 ದಿನಗಳ ಅವಧಿಯಲ್ಲಿ ಹೂವು ಬಿಡುವ ಹಂತದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಹೂ ಬಿಡುವ ಸಮಯದಲ್ಲಿ ಕೀಟನಾಶಕಗಳ ಸಿಂಪಡನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಏಕೆಂದರೆ ಔಷಧದ ವಾಸನೆ ಮತ್ತು ವಿಷಕ್ಕೆ ಜೇನು ನೊಣಗಳು ಸಾಯುತ್ತವೆ ಅಥವಾ ತೋಟಕ್ಕೆ ಭೇಟಿ ನೀಡುವುದಿಲ್ಲ. ಪರಾಗಸ್ಪರ್ಶದ ವೇಗವನ್ನು ಹೆಚ್ಚಿಸಲು ಪ್ರತಿ ಹೆಕ್ಟೇರಿಗೆ 2-3 ಜೇನು ಪೆಟ್ಟಿಗೆಗಳನ್ನು ತೋಟದ ಮಧ್ಯಭಾಗದಲ್ಲಿ ಇರಿಸುವುದು ಉತ್ತಮ. ಹೂವಿನ ಬೆಳವಣಿಗೆ ಮತ್ತು ರೇಣು ಉತ್ಪತ್ತಿ ಹೆಚ್ಚಿಸಲು ಬೊರಾನ್ ಮತ್ತು ಪೊಟ್ಯಾಶಿಯಮ್ ಪೋಷಕಾಂಶಗಳನ್ನು ಸಮರ್ಪಕವಾಗಿ ನೀಡಬೇಕು. ಇದರಿಂದ ಜೇನು ನೊಣಗಳು ಆಕರ್ಷಿತವಾಗಿ ಪರಾಗಸ್ಪರ್ಶ ಕ್ರಿಯೆ ಚುರುಕುಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಜೇನು ನೊಣಗಳನ್ನು ಆಕರ್ಷಿಸುವ ತಂತ್ರಗಳು ಇವು...!
ಕಲ್ಲಂಗಡಿ ನಾಟಿ ಮಾಡುವ 15 ದಿನಗಳ ಮುಂಚಿತವಾಗಿಯೇ ತೋಟದ ಸುತ್ತ ಸಾಸಿವೆ, ಸೂರ್ಯಕಾಂತಿ, ಎಳ್ಳು ಅಥವಾ ಚೆಂಡು ಹೂವಿನಂತಹ ಗಿಡಗಳನ್ನು ಬೆಳೆಸುವುದರಿಂದ ಜೇನು ನೊಣಗಳನ್ನು ತೋಟಕ್ಕೆ ಆಕರ್ಷಿಸಬಹುದು. ಅಲ್ಲದೆ, ಬೆಳಿಗ್ಗೆ 5.30 ರಿಂದ 6.00 ಗಂಟೆಯ ಒಳಗೆ ಪ್ರತಿ ಲೀಟರ್ ನೀರಿಗೆ 5-10 ಗ್ರಾಂ ಬೆಲ್ಲ ಅಥವಾ ಸಕ್ಕರೆಯನ್ನು ಬೆರೆಸಿ ಗಿಡಗಳಿಗೆ ಸ್ಪ್ರೇ ಮಾಡುವುದರಿಂದಲೂ ಜೇನು ನೊಣಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತವೆ. ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ತೋಟದಲ್ಲಿ ಕೆಲಸ ಮಾಡುವುದು ಅಥವಾ ಕಳೆ ಕೀಳುವುದನ್ನು ತಪ್ಪಿಸಿದರೆ ಜೇನು ನೊಣಗಳ ಚಟುವಟಿಕೆಗೆ ಅಡ್ಡಿಯಾಗುವುದಿಲ್ಲ. ರೈತರು ಕೇವಲ ರಾಸಾಯನಿಕಗಳ ಮೇಲೆ ಅವಲಂಬಿತವಾಗದೆ, ನೈಸರ್ಗಿಕ ಪರಾಗಸ್ಪರ್ಶಕ್ಕೆ ಆದ್ಯತೆ ನೀಡಿದಾಗ ಮಾತ್ರ ಗುಣಮಟ್ಟದ ಮತ್ತು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಡಾ. ಪ್ರವೀಣ್ ಹೆಚ್.ಜಿ. ಅಭಿಪ್ರಾಯಪಟ್ಟಿದ್ದಾರೆ.
ಎಷ್ಟು ಪ್ರಮಾಣದಲ್ಲಿ ಏರುಪೇರಾಗಿವೆ?
ಕರ್ನಾಟಕದಲ್ಲಿ ಕಲ್ಲಂಗಡಿ ಉತ್ಪಾದನೆಯಲ್ಲಿ ಏರುಪೇರು ಕಂಡುಬಂದಿದೆ. 2021ರಲ್ಲಿ 270.85 ಸಾವಿರ ಟನ್ ಉತ್ಪಾದನೆಯಾಗಿದ್ದು, 2022ರಲ್ಲಿ ಇದು 298.39 ಸಾವಿರ ಟನ್‌ಗೆ ಏರಿಕೆಯಾಗಿತ್ತು. ಆದರೆ 2023ರಲ್ಲಿ ತೀವ್ರ ಕುಸಿತ ಕಂಡು 169.40 ಸಾವಿರ ಟನ್‌ಗೆ ಇಳಿದಿತ್ತು. 2024ರಲ್ಲಿ ಸ್ವಲ್ಪ ಸುಧಾರಣೆ ಕಾಣಿಸಿಕೊಂಡು 186.29 ಸಾವಿರ ಟನ್ ಕಲ್ಲಂಗಡಿ ಬೆಳೆಯಲಾಗಿದೆ.
ರಾಜ್ಯದಲ್ಲಿ ಪ್ರತಿ ಹೆಕ್ಟೇರ್‌ಗೆ ಸರಾಸರಿ 25 ರಿಂದ 30 ಟನ್ ಇಳುವರಿ ಬರುತ್ತಿದೆ. ಆಧುನಿಕ ಕೃಷಿ ತಂತ್ರಗಳನ್ನು ಅಳವಡಿಸಿಕೊಂಡ ರೈತರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ. ಹನಿ ನೀರಾವರಿ ಮತ್ತು ಮಲ್ಚಿಂಗ್ ತಂತ್ರಜ್ಞಾನವನ್ನು ಬಳಸುವ ರೈತರು ಪ್ರತಿ ಎಕರೆಗೆ 10 ರಿಂದ 12 ಟನ್ ವರೆಗೆ ಇಳುವರಿ ಪಡೆಯುತ್ತಿದ್ದಾರೆ. ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಗಳು ಕಲ್ಲಂಗಡಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಕಲ್ಲಂಗಡಿ ಬೆಳೆಯ ಪ್ರಮಾಣ ಹೆಚ್ಚಿದ್ದರೂ ಒಟ್ಟು ಇಳುವರಿ ಕಡಿಮೆಯಾಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಇಳುವರಿ ಕ್ಷೀಣಿಸಲು ಕಾರಣವಾದ ಅಂಶಗಳಲ್ಲಿ ಜೇನು ಹುಳುಗಳ ಪರಾಗಸ್ಪರ್ಶವೂ ಪ್ರಮುಖ ಎಂದು ಕೃಷಿ ತಜ್ಞ ಪ್ರವೀಣ್ ಹೇಳುತ್ತಾರೆ.

