Jal Jeevan Mission| ಗ್ರಾಮೀಣ ಕರ್ನಾಟಕ: ಪೈಪುಗಳಿವೆ, ನಲ್ಲಿಗಳಿವೆ- ಆದರೆ ʼಜಲ ಬರʼದು!
x

Jal Jeevan Mission| ಗ್ರಾಮೀಣ ಕರ್ನಾಟಕ: ಪೈಪುಗಳಿವೆ, ನಲ್ಲಿಗಳಿವೆ- ಆದರೆ ʼಜಲ ಬರʼದು!

ಜಲಜೀವನ್ ಮಿಷನ್ ಅಡಿ ಪೈಪ್‌ಲೈನ್ ಅಳವಡಿಸುವುದು ಸುಲಭ. ಆದರೆ ಆ ಪೈಪುಗಳಿಗೆ ಹರಿಸಲು ನೀರು ಎಲ್ಲಿಂದ ಬರಬೇಕು ಎಂಬ ಯೋಜನೆ ಸಮರ್ಪಕವಾಗಿಲ್ಲ.


Click the Play button to hear this message in audio format

ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಅಡಿ ಪ್ರತಿ ಮನೆಗೂ ನೀರು ಎಂಬ ಘೋಷವಾಕ್ಯ ಕರ್ನಾಟಕದ ಮಟ್ಟಿಗೆ ಬರೀ ಘೋಷಣೆಯಷ್ಟೇ ಎನ್ನುವಂತಾಗಿದೆ! ಯೋಜನೆ ಅನುಷ್ಠಾನದ ಹಂತದಲ್ಲಿ ತಾಂತ್ರಿಕ ದೋಷಗಳು, ಮೂಲಸೌಕರ್ಯದ ಕೊರತೆ ಹಾಗೂ ನಿರ್ವಹಣೆಯ ವೈಫಲ್ಯದಿಂದಾಗಿ ರಾಜ್ಯದ ಹಲವು ಹಳ್ಳಿಗಳಲ್ಲಿ ಪೈಪುಗಳು ಮನೆಬಾಗಿಲಿಗೆ ಬಂದಿವೆಯೇ ಹೊರತು, ಅವುಗಳಲ್ಲಿ ನೀರು ಮಾತ್ರ ಬರುತ್ತಿಲ್ಲ.

ಕೇಂದ್ರ ಸರ್ಕಾರದ ಈ ಯೋಜನೆ 2024-25ರ ವೇಳೆಗೆ ಎಲ್ಲೆಡೆ ನೀರನ್ನು ಒದಗಿಸಲಾಗುವ ಸಂಕಲ್ಪದಿಂದ ಜಾರಿಯಾಗಿದ್ದು, 2026ಕ್ಕೆ ವಿಸ್ತರಣೆಯಾಗಿದೆ. ಆದರೂ ಈ ವರ್ಷವೂ ಈ ಯೋಜನೆ ಯಶಸ್ಸು ಆಗುವುದು ಅನುಮಾನ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಸುಮಾರು 91.19 ಲಕ್ಷ ಗ್ರಾಮೀಣ ಕುಟುಂಬಗಳಿವೆ ಎಂದು ದಾಖಲೆಗಳು ಹೇಳುತ್ತವೆ. ಅಂಕಿ-ಅಂಶಗಳು ಕಾಗದದ ಮೇಲೆ ಹೆಚ್ಚಿನ ಪ್ರಗತಿಯನ್ನು ತೋರಿಸುತ್ತಿದ್ದರೂ, ವಾಸ್ತವದಲ್ಲಿ ಕೇವಲ ಶೇ. 31.2 ರಷ್ಟು (ಸುಮಾರು 28.44 ಲಕ್ಷ) ಕುಟುಂಬಗಳಿಗೆ ಮಾತ್ರ ನಿಗದಿತ ಪ್ರಮಾಣದಲ್ಲಿ ಕೊಳವೆ ಮೂಲಕ ನೀರು ಲಭ್ಯವಾಗುತ್ತಿದೆ. ಉಳಿದ ಕುಟುಂಬಗಳ ಪರಿಸ್ಥಿತಿ, "ಪೈಪ್ ಇದೆ, ಕೊಳವೆ ಇದೆ- ಆದರೆ ನೀರಿಲ್ಲ," ಎಂಬಂತಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಈ ಭಾಗದ ಅನೇಕ ಹಳ್ಳಿಗಳಲ್ಲಿ ರಸ್ತೆಗಳನ್ನು ಅಗೆದು ಪೈಪುಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳನ್ನು ನೀರಿನ ಮೂಲಕ್ಕೆ ಸಂಪರ್ಕಿಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಯೋಜನೆಯ ವೈಫಲ್ಯಕ್ಕೆ ಪ್ರಮುಖ ಕಾರಣಗಳುಸುಸ್ಥಿರ ನೀರಿನ ಮೂಲದ ಕೊರತೆ

ಜಲಜೀವನ್ ಮಿಷನ್ ಅಡಿಯಲ್ಲಿ ಪೈಪ್‌ಲೈನ್ ಅಳವಡಿಸುವುದು ಸುಲಭ. ಆದರೆ ಆ ಪೈಪುಗಳಿಗೆ ಹರಿಸಲು ನೀರು ಎಲ್ಲಿಂದ ಬರಬೇಕು ಎಂಬ ಯೋಜನೆ ಸಮರ್ಪಕವಾಗಿಲ್ಲ. ಅನೇಕ ಕಡೆಗಳಲ್ಲಿ ಅಂತರ್ಜಲವನ್ನೇ ಅವಲಂಬಿಸಿ ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ. ಬೇಸಿಗೆ ಕಾಲದಲ್ಲಿ ಅಂತರ್ಜಲ ಕುಸಿದಾಗ ನಲ್ಲಿಗಳು ಒಣಗುತ್ತವೆ. ನದಿ ಮೂಲಗಳಿಂದ ನೀರು ತರುವ ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಗಳು ಹೇಳಿವೆ.

ಯೋಜನೆಯನ್ನು ಶೀಘ್ರವಾಗಿ ಮುಗಿಸುವ ಧಾವಂತದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಿಲ್ಲ. ಪೈಪುಗಳನ್ನು ಸರಿಯಾದ ಆಳದಲ್ಲಿ ಹೂಳದೆ ಇರುವುದು, ಕಳಪೆ ಗುಣಮಟ್ಟದ ನಲ್ಲಿಗಳನ್ನು ಅಳವಡಿಸಿರುವುದು ಮತ್ತು ಕಾಮಗಾರಿ ಮುಗಿದ ನಂತರ ಸರಿಯಾಗಿ ರಸ್ತೆಗಳನ್ನು ದುರಸ್ತಿ ಮಾಡದಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಕಡೆಗಳಲ್ಲಿ ಪರೀಕ್ಷಾರ್ಥ ಚಾಲನೆ ಮಾಡದೆಯೇ ಬಿಲ್ ಪಾವತಿ ಮಾಡಿಸಿಕೊಳ್ಳಲಾಗಿದೆ ಎಂಬ ಆರೋಪಗಳಿವೆ.

ಅಸಮರ್ಪಕ ವಿದ್ಯುತ್ ಸರಬರಾಜು

ಗ್ರಾಮೀಣ ಭಾಗದಲ್ಲಿ ನೀರು ಪಂಪ್ ಮಾಡಲು ಬೇಕಾದ ತ್ರೀ-ಫೇಸ್ ವಿದ್ಯುತ್ ಸರಬರಾಜು ಅಸಮರ್ಪಕವಾಗಿದೆ. ಪಂಪ್ ಹೌಸ್‌ಗಳಿದ್ದರೂ, ವಿದ್ಯುತ್ ಇಲ್ಲದೆ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಇದು ಇಡೀ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದೆ. ಪೈಪುಗಳನ್ನು ಅಳವಡಿಸಿದ ನಂತರ ಅವುಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗಳಿಗೆ ವಹಿಸಲಾಗುತ್ತದೆ. ಆದರೆ, ಗ್ರಾಮ ಪಂಚಾಯತಿಗಳಲ್ಲಿ ತಾಂತ್ರಿಕ ಸಿಬ್ಬಂದಿಯ ಕೊರತೆ ಮತ್ತು ಹಣಕಾಸಿನ ಮುಗ್ಗಟ್ಟಿನಿಂದಾಗಿ ಸಣ್ಣಪುಟ್ಟ ಸೋರಿಕೆಗಳಾದರೂ ಅವುಗಳನ್ನು ಸರಿಪಡಿಸಲು ತಿಂಗಳುಗಟ್ಟಲೆ ಬೇಕಾಗುತ್ತದೆ.

ಉತ್ತಮ ಪ್ರಗತಿ ಸಾಧಿಸಿರುವ ಜಿಲ್ಲೆಗಳು

ಕೆಲವು ಜಿಲ್ಲೆಗಳಲ್ಲಿ ಭೌಗೋಳಿಕ ಅನುಕೂಲತೆ ಮತ್ತು ನದಿ ಮೂಲಗಳ ಲಭ್ಯತೆಯಿಂದಾಗಿ ಪೈಪ್ ಅಳವಡಿಕೆ ಮತ್ತು ನೀರು ಸರಬರಾಜು ಪ್ರಕ್ರಿಯೆ ವೇಗವಾಗಿ ನಡೆದಿದೆ. ಕರ್ನಾಟಕದ ಧಾರವಾಡ, ಬೆಳಗಾವಿ, ಗದಗ, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಯೋಜನೆಯು ಉತ್ತಮ ಫಲಿತಾಂಶ ಕಂಡಿದೆ. ಈ ಜಿಲ್ಲೆಗಳಲ್ಲಿ ಶೇ.80ರಷ್ಟು ಯಶಸ್ವಿಯಾಗಿದೆ. ಗದಗ ಜಿಲ್ಲೆಯಲ್ಲಿ ಬಹುತೇಕ ಹಳ್ಳಿಗಳಲ್ಲಿ ಮನೆ ಮನೆಗೆ ಕೊಳವೆ ಸಂಪರ್ಕ ಕಲ್ಪಿಸಲಾಗಿದೆ.

ಆದರೆ, ಬೇಸಿಗೆಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗುವುದು ಇಲ್ಲಿನ ದೊಡ್ಡ ಸವಾಲು. ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಯೋಜನೆಯು ಶೇ. 80ಕ್ಕೂ ಹೆಚ್ಚು ಪ್ರಗತಿ ಸಾಧಿಸಿದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಮಲಪ್ರಭಾ ಮತ್ತು ಕೃಷ್ಣಾ ನದಿ ಮೂಲಗಳಿಂದ ನೀರು ಪೂರೈಸುವ 'ಬಹುಗ್ರಾಮ ಯೋಜನೆ'ಗಳು ಇಲ್ಲಿ ಪೂರಕವಾಗಿವೆ.

ಮಂಡ್ಯ, ಮೈಸೂರು ಕಾವೇರಿ ನದಿ ಪಾತ್ರದ ಜಿಲ್ಲೆಗಳಾಗಿದ್ದು, ನೀರಿನ ಮೂಲದ ಸಮಸ್ಯೆ ಇಲ್ಲದಿರುವುದರಿಂದ, ಪೈಪ್‌ಲೈನ್ ಅಳವಡಿಕೆಯಾದ ತಕ್ಷಣ ನೀರು ಒದಗಿಸುವುದು ಸುಲಭವಾಗಿದೆ. ಇಲ್ಲಿನ ಸಾಧನೆ ತೃಪ್ತಿದಾಯಕವಾಗಿದೆ. ಕೊಡಗು, ಚಿಕ್ಕಮಗಳೂರು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ನೈಸರ್ಗಿಕ ಜಲಮೂಲಗಳು ಹೆಚ್ಚಿವೆ. ಗುಡ್ಡಗಾಡು ಪ್ರದೇಶಗಳಲ್ಲಿ ಪೈಪ್ ಅಳವಡಿಸುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿತ್ತು.

ಹಿನ್ನಡೆ ಅನುಭವಿಸಿರುವ ಜಿಲ್ಲೆಗಳು

ನೀರಿನ ಮೂಲದ ಕೊರತೆ ಮತ್ತು ಅತಿಯಾದ ಫ್ಲೋರೈಡ್ ಸಮಸ್ಯೆಯಿಂದಾಗಿ ರಾಯಚೂರು, ಯಾದಗಿರಿ, ಕೊಪ್ಪಳ, ಕಲಬುರಗಿ ಜಿಲ್ಲೆಗಳಲ್ಲಿ ಯೋಜನೆ ಕುಂಟುತ್ತಾ ಸಾಗಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಯ ನೀರಿದ್ದರೂ, ಎತ್ತರದ ಪ್ರದೇಶದಲ್ಲಿರುವ ಹಳ್ಳಿಗಳಿಗೆ ನೀರು ಪಂಪ್ ಮಾಡುವುದು ದೊಡ್ಡ ಸವಾಲಾಗಿದೆ. ವಿದ್ಯುತ್ ವ್ಯತ್ಯಯದಿಂದಾಗಿ ಇಲ್ಲಿನ ನಲ್ಲಿಗಳಲ್ಲಿ ನೀರು ಸರಿಯಾಗಿ ಬರುವುದಿಲ್ಲ.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಸಾವಿರ ಅಡಿಗಳಿಗಿಂತ ಕೆಳಗೆ ಹೋಗಿದೆ. ಪೈಪ್ ಮತ್ತು ಕೊಳವೆಗಳನ್ನು ಮನೆ ಮನೆಗೆ ಅಳವಡಿಸಿದ್ದರೂ, ಹರಿಸಲು ನೀರೇ ಇಲ್ಲದಂತಾಗಿದೆ. ಎತ್ತಿನಹೊಳೆ ಯೋಜನೆಯ ನೀರು ಬರುವವರೆಗೆ ಇಲ್ಲಿನ ಜಲಜೀವನ್ ಮಿಷನ್ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗುವುದು ಕಷ್ಟ. ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಕಾಮಗಾರಿಗಳ ವೇಗ ಬಹಳ ನಿಧಾನವಾಗಿದೆ. ಇಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವುದರಿಂದ, ಶುದ್ಧೀಕರಣ ಘಟಕಗಳ ಸ್ಥಾಪನೆ ವಿಳಂಬವಾಗುತ್ತಿದೆ.

ಕರಾವಳಿಯಲ್ಲೂ ಬತ್ತಿಹೋಗುತ್ತಿವೆ ತೊರೆಗಳು!

ಕರಾವಳಿ ಜಿಲ್ಲೆಗಳಲ್ಲಿ ಮಳೆ ಹೆಚ್ಚು ಬಂದರೂ, ಬೇಸಿಗೆಯಲ್ಲಿ ಸಣ್ಣ ತೊರೆಗಳು ಬತ್ತಿ ಹೋಗುತ್ತವೆ. ಇಲ್ಲಿ ಮನೆಗಳು ದೂರದೂರ ಇರುವುದರಿಂದ ಪೈಪ್‌ಲೈನ್ ವೆಚ್ಚ ಹೆಚ್ಚಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನಗರೀಕರಣದಿಂದಾಗಿ ನೀರಿನ ಮೂಲಗಳು ಕಲುಷಿತಗೊಂಡಿವೆ. ಇಲ್ಲಿ ಕಾವೇರಿ 5ನೇ ಹಂತದ ಯೋಜನೆ ಅಥವಾ ಕೆಸಿ ವ್ಯಾಲಿ ನೀರನ್ನು ಸಂಸ್ಕರಿಸಿ ಬಳಸುವ ಅನಿವಾರ್ಯತೆ ಇದೆ.

ಮಾರ್ಚ್ 2026ರ ಗುರಿ ತಲುಪಲು ಕಷ್ಟಕರ

ಕೇಂದ್ರ ಸರ್ಕಾರವು ಈ ಹಿಂದೆ 2024-25ರ ಗಡುವನ್ನು ನೀಡಿತ್ತು. ಆದರೆ ಕೆಲಸದ ನಿಧಾನಗತಿಯಿಂದಾಗಿ ಇದನ್ನು 2026ಕ್ಕೆ ವಿಸ್ತರಿಸಲಾಗಿದೆ. ಪ್ರಸ್ತುತ ವೇಗವನ್ನು ಗಮನಿಸಿದರೆ, ಕರ್ನಾಟಕದ ಎಲ್ಲಾ ಮನೆಗಳಿಗೆ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿ ತಲುಪುವುದು ಕಷ್ಟಕರವೆಂದು ಹೇಳಲಾಗಿದೆ. ಕೇವಲ ಪೈಪ್ ಅಳವಡಿಕೆಯನ್ನೇ ಸಾಧನೆ ಎಂದು ಬಿಂಬಿಸುವ ಬದಲಿಗೆ, ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ.

ಮನೆಬಾಗಿಲಿಗೆ ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಮಹಿಳೆಯರು ಈಗಲೂ ಬಹಳಷ್ಟು ಗ್ರಾಮಗಳಲ್ಲಿ ದೂರದಿಂದ ನೀರು ತರುವ ಪರಿಸ್ಥಿತಿ ಇದೆ. ಇದು ಅವರ ಆರೋಗ್ಯ ಮತ್ತು ಸಮಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೊಳವೆ ನೀರು ಬಾರದಿದ್ದಾಗ ಜನರು ಅನಿವಾರ್ಯವಾಗಿ ಕೆರೆ ಅಥವಾ ಕಲುಷಿತ ಮೂಲಗಳ ನೀರನ್ನು ಬಳಸುತ್ತಿದ್ದಾರೆ.

ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅಳವಡಿಸಿದ ಪೈಪುಗಳು ನೀರಿಲ್ಲದೆ ತುಕ್ಕು ಹಿಡಿಯುತ್ತಿವೆ ಅಥವಾ ರಸ್ತೆ ಕಾಮಗಾರಿಗಳ ವೇಳೆ ಒಡೆದು ಹೋಗುತ್ತಿವೆ. ಇದು ತೆರಿಗೆದಾರರ ಹಣದ ಪೋಲು ಎಂಬ ಮಾತುಗಳು ಕೇಳಿಬಂದಿವೆ.

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ರೈತಪರ ಹೋರಾಟಗಾರ ಎಚ್‌.ನಿಂಗಪ್ಪ, "ಜಲಜೀವನ್‌ ಮಿಷನ್‌ ಅಡಿ ಪೈಪ್‌ಗಳನ್ನು ಹಾಕಲಾಗಿದೆ. ಕೆಲವೆಡೆ ಕೊಳವೆಗಳನ್ನು ಜೋಡಿಸಿಲ್ಲ. ಕೆಲವೆಡೆ ಕೊಳವೆಗಳನ್ನು ಜೋಡಿಸಲಾಗಿದೆ. ಆದರೆ, ನೀರು ಮಾತ್ರ ಬಂದಿಲ್ಲ. ಅನಗತ್ಯವಾಗಿ ದುಡ್ಡು ಖರ್ಚು ಮಾಡಲಾಗಿದೆ," ಎಂದರು.

"ಯಾವ ಕಾರಣಕ್ಕಾಗಿ ನೀರು ಬಿಡುತ್ತಿಲ್ಲ ಎಂಬುದು ಸಹ ಸ್ಪಷ್ಟವಾಗಿ ಸರ್ಕಾರ ಹೇಳುತ್ತಿಲ್ಲ. ಕಲಬುರಗಿ, ಯಾದಗಿರಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೀರು ಬರುತ್ತಿಲ್ಲ. ಮಾಧ್ಯಮಗಳಲ್ಲಿ ಯೋಜನೆ ಬಗ್ಗೆ ಯಶಸ್ವಿ ಎಂದು ಬಿಂಬಿಸಿಕೊಳ್ಳಲಾಗುತ್ತಿದೆ. ಆದರೆ, ವಾಸ್ತವವಾಗಿ ನಮ್ಮ ಭಾಗದಲ್ಲಿ ನೀರು ಬರುತ್ತಿಲ್ಲ," ಎಂದೂ ಅವರು ಹೇಳಿದರು.

Read More
Next Story