
ತಮಿಳುನಾಡಿಗೆ ಹೆಚ್ಚಿನ ಯೋಜನೆ, ನಿಧಿಗೆ ಬಿಗಿ ಪಟ್ಟು: ಒಕ್ಕೂಟ ವ್ಯವಸ್ಥೆಯ ಪರ ಬ್ಯಾಟ್ ಬೀಸಿದ ವಿಜಯ್
ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡ ವಿಜಯ್ ಶಿಕ್ಷಣ ನಿಧಿಯಲ್ಲಿ 3284 ಕೋಟಿ ರೂ. ಬಿಡುಗಡೆ ಮಾಡುವಂತೆ ಹಕ್ಕೊತ್ತಾಯ ಮಂಡಿಸಿದರು. ಕೇಂದ್ರದ ಬೆಂಬಲವನ್ನು ಕೋರಿದರು.
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಗುರುವಾರ (ಜೂನ್ 11) ಕೇಂದ್ರ ಸರ್ಕಾರದೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದರು. ಅದೇ ವೇಳೆ ಬಾಕಿ ಉಳಿದಿರುವ ನಿಧಿಯನ್ನು ಶೀಘ್ರ ಬಿಡುಗಡೆ ಮಾಡುವುದು ಮತ್ತು ಪ್ರಮುಖ ವಲಯಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಕೇಂದ್ರದ ಮುಂದೆ ಮಂಡಿಸಲು ಅವರು ಮರೆಯಲಿಲ್ಲ. ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರದ ಮನೋಭಾವ ಮತ್ತು ತಮಿಳುನಾಡಿನ ಹಿತಾಸಕ್ತಿಗಳ ಪರವಾಗಿ ದೃಢವಾದ ಪ್ರತಿಪಾದನೆ ಎರಡನ್ನೂ ಎತ್ತಿ ತೋರಿಸಿದರು.
ರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದ ಅವರು, ಬೆಳವಣಿಗೆಗಾಗಿ ತಮಿಳುನಾಡಿನ ದೃಷ್ಟಿಕೋನವನ್ನು ವಿವರಿಸುತ್ತಾ, ಸಹಕಾರಿ ಒಕ್ಕೂಟದ ಪ್ರಾಮುಖ್ಯತೆಯನ್ನು ವಿಜಯ್ ಒತ್ತಿ ಹೇಳಿದರು. "ರಾಷ್ಟ್ರದ ಆಕಾಂಕ್ಷೆಗಳನ್ನು ತಮಿಳುನಾಡು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಸಬಲೀಕರಣಗೊಂಡ ರಾಜ್ಯಗಳು, ಸಹಕಾರಿ ಒಕ್ಕೂಟ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಮೂಲಕ ಮಾತ್ರ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಾಧ್ಯ ಎಂದು ನಾವು ದೃಢವಾಗಿ ನಂಬುತ್ತೇವೆ" ಎಂದು ಹೇಳಿದರು.
ಶಿಕ್ಷಣ ನಿಧಿ: ಸಮಗ್ರ ಶಿಕ್ಷಣ ಯೋಜನೆಯಡಿ ಬಾಕಿ ಇರುವ 13,284 ಕೋಟಿ ರೂ.ಗಳನ್ನು ಹೊಸ ಶಿಕ್ಷಣ ನೀತಿ ಅಥವಾ ತ್ರಿಭಾಷಾ ಸೂತ್ರಕ್ಕೆ ಜೋಡಿಸದೆ ತಕ್ಷಣವೇ ಬಿಡುಗಡೆ ಮಾಡುವಂತೆ ವಿಜಯ್ ಒತ್ತಾಯಿಸಿದರು. "ವಿದ್ಯಾರ್ಥಿಗಳ ಕಲ್ಯಾಣ, ಶೈಕ್ಷಣಿಕ ಸೇವೆಗಳ ನಿರಂತರತೆ ಮತ್ತು ಸಹಕಾರಿ ಒಕ್ಕೂಟದ ರಕ್ಷಣೆಯ ಹಿತದೃಷ್ಟಿಯಿಂದ ಇದನ್ನು ಮಾಡಬೇಕು" ಎಂದು ಅವರು ಒತ್ತಿ ಹೇಳಿದರು.
ವಸತಿ ಮತ್ತು ಬಡತನ ನಿರ್ಮೂಲನೆ: 'ಬಡತನ ಮುಕ್ತ ತಮಿಳುನಾಡು ಮಿಷನ್' ಮತ್ತು ಕೈಗೆಟುಕುವ ದರದ ವಸತಿಗಾಗಿ ಕೇಂದ್ರದ ನೆರವನ್ನು ಅವರು ಕೋರಿದರು. ಇದರ ಜೊತೆಗೆ, ಗ್ರಾಮೀಣ ವಸತಿ ಯೋಜನೆಗಳಿಗಾಗಿ ವಿಬಿ-ಜಿ ರಾಮ್-ಜಿ ಯೋಜನೆಯಡಿ ಉದ್ಯೋಗ ಸೃಷ್ಟಿಸಲು ಅನುಮತಿಯನ್ನು ಕೇಳಿದರು.
ಆರೋಗ್ಯ ರಕ್ಷಣೆ: ಕೊಯಮತ್ತೂರಿನಲ್ಲಿ ಎರಡನೇ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಕೋರಿಕೆ ಸಲ್ಲಿಸಿದರು ಮತ್ತು ಅದಕ್ಕೆ ಅಗತ್ಯವಾದ ಭೂಮಿಯನ್ನು ಒದಗಿಸಲು ರಾಜ್ಯ ಸಿದ್ಧವಿದೆ ಎಂದು ತಿಳಿಸಿದರು.
ಯುವಜನತೆ ಮತ್ತು ಕೌಶಲ್ಯ: ವಾರ್ಷಿಕವಾಗಿ ಐದು ಲಕ್ಷ ಯುವಕರಿಗೆ ಪ್ರಯೋಜನವಾಗುವಂತೆ 'ಯುವ ಕೌಶಲ್ಯ ಮತ್ತು ಉದ್ಯೋಗ ಮಿಷನ್'ನ್ನು ವಿಜಯ್ ಪ್ರಸ್ತಾಪ ಮಾಡಿದರು. ಕೃತಕ ಬುದ್ಧಿಮತ್ತೆ, ಡೀಪ್ ಟೆಕ್, ಸೈಬರ್ ಭದ್ರತೆ, ಇವಿ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ಗಳ ಮೇಲೆ ವಿಶೇಷ ಗಮನಹರಿಸಿ, ಪ್ರತಿ ಜಿಲ್ಲೆಯಲ್ಲೂ ಉದಯೋನ್ಮುಖ ತಂತ್ರಜ್ಞಾನ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರದ ಬೆಂಬಲ ನೀಡಬೇಕು ಎಂದು ಅವರು ಕೋರಿಕೆ ಸಲ್ಲಿಸಿದರು.
ಮೀನುಗಾರರ ಸಮಸ್ಯೆಗಳು: ಪಾಕ್ ಜಲಸಂಧಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕಾ ಹಕ್ಕುಗಳನ್ನು ರಕ್ಷಿಸಲು, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಬಂಧಿತರಾಗಿರುವ ತಮಿಳುನಾಡು ಮೀನುಗಾರರನ್ನು ಬಿಡುಗಡೆ ಮಾಡಲು ಮತ್ತು ಕರಾವಳಿ ಪ್ರದೇಶದಲ್ಲಿ ಪ್ರವಾಹ ತಡೆಗಟ್ಟುವ ಕ್ರಮಗಳಿಗೆ ಹೆಚ್ಚಿನ ಬೆಂಬಲ ನೀಡುವಂತೆ ವಿಜಯ್ ಅವರು ಕೇಂದ್ರವನ್ನು ಒತ್ತಾಯಿಸಿದರು.
ಮೂಲಸೌಕರ್ಯ: ಜಿಎಸ್ಟಿ ರಸ್ತೆಯ ಮುಖ ಭಾಗಗಳ ಆರು ಪಥಗಳ ವಿಸ್ತರಣೆ ಮತ್ತು ಚೆನ್ನೈ-ಕನ್ಯಾಕುಮಾರಿ ಹೈ-ಸ್ಪೀಡ್ ರೈಲು ಕಾರಿಡಾರ್ ಸೇರಿದಂತೆ ಹಲವು ಹೆದ್ದಾರಿ ಮತ್ತು ರೈಲ್ವೆ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡುವಂತೆ ಅವರು ಮನವಿ ಮಾಡಿದರು. ಅಲ್ಲದೆ, ಕುಲಶೇಖರಪಟ್ಟಣಂನಲ್ಲಿರುವ ಬಾಹ್ಯಾಕಾಶ ಉತ್ಪಾದನಾ ಕೇಂದ್ರವನ್ನು ರಾಷ್ಟ್ರೀಯ ಕೇಂದ್ರವಾಗಿ ಘೋಷಿಸಬೇಕೆಂದು ಅವರು ಕೋರಿದರು.
ಕೇಂದ್ರದೊಂದಿಗೆ ರಚನಾತ್ಮಕ ಸಂಬಂಧಗಳು
2047ರ ವೇಳೆಗೆ 'ವಿಕಸಿತ ಭಾರತ'ದ ರಾಷ್ಟ್ರೀಯ ಗುರಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು, 2036ರ ವೇಳೆಗೆ ತಮಿಳುನಾಡನ್ನು 1.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ರಾಜ್ಯದ ಮಹತ್ವಾಕಾಂಕ್ಷೆಯನ್ನು ನೀತಿ ಆಯೋಗದ ಮುಂದೆ ವಿಜಯ್ ಪುನರುಚ್ಚರಿಸಿದರು. ಹಣಕಾಸಿನ ಜವಾಬ್ದಾರಿ ಮತ್ತು ಜನಸಂಖ್ಯೆ ಸ್ಥಿರತೆಯನ್ನು ಸಾಧಿಸುವ ರಾಜ್ಯಗಳಿಗೆ ಸಂಪನ್ಮೂಲ ಹಂಚಿಕೆಯಲ್ಲಿ ಅನ್ಯಾಯವಾಗಬಾರದು ಎಂದು ಅವರು ಒತ್ತಿ ಹೇಳಿದರು.
ಮುಖ್ಯಮಂತ್ರಿಯವರ ಈ ದೃಢವಾದ ಮತ್ತು ರಚನಾತ್ಮಕ ಧೋರಣೆಯನ್ನು ಹಿಂದಿನ ಡಿಎಂಕೆ ಸರ್ಕಾರದ ಅವಧಿಗಿಂತ ಭಿನ್ನವಾದ ಮಾರ್ಗ ಎಂದು ವ್ಯಾಪಕವಾಗಿ ವಿಶ್ಲೇಷಿಸಲಾಗುತ್ತಿದೆ. ಹಿಂದಿನ ಅವಧಿಯಲ್ಲಿ ವಿಪತ್ತು ಪರಿಹಾರ ನಿಧಿ ಹಂಚಿಕೆ ಮತ್ತು ಜಿಎಸ್ಟಿ ಆದಾಯ ಹಂಚಿಕೆಯ ವಿಷಯದಲ್ಲಿ ಕೇಂದ್ರದೊಂದಿಗೆ ಗಮನಾರ್ಹ ಭಿನ್ನಾಭಿಪ್ರಾಯಗಳಿದ್ದವು. ಇದೀಗ ವಿಜಯ್ ಅವರ ಸರ್ಕಾರವು ರಾಜ್ಯದ ಮೂಲ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಜೊತೆಗೆ ಸಂವಾದ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿರುವುದು ಶ್ಲಾಘನಾರ್ಹ ಕ್ರಮ ಎಂದು ಬಣ್ಣಿಸಲಾಗಿದೆ.
ರಾಜಕೀಯ ವಿಶ್ಲೇಷಕ ಸುಮಂತ್ ಸಿ. ರಾಮನ್ ಅವರ ಪ್ರಕಾರ, ವಿಜಯ್ ಅವರ ಸರ್ಕಾರವು ಸ್ಪಷ್ಟವಾದ ರೆಡ್ ಲೈನ್ಗಳನ್ನು ಎಳೆದಿದೆ. "ಟಿವಿಕೆ ಸರ್ಕಾರವು ಪ್ರಮುಖ ವಿಷಯಗಳಲ್ಲಿ ರಾಜಿ ಮಾಡಿಕೊಂಡಿಲ್ಲ. ಕ್ಷೇತ್ರ ವಿಂಗಡಣೆಯ ಸಮಯದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವುದನ್ನು ಒಪ್ಪುವುದಿಲ್ಲ ಮತ್ತು ದ್ವಿಭಾಷಾ ನೀತಿಯ ವಿಷಯದಲ್ಲಿ ದೃಢವಾಗಿ ನಿಂತಿದೆ" ಎಂಬ ಅಭಿಪ್ರಾಯವನ್ನು ಅವರು ಮಂಡಿಸಿದ್ದಾರೆ.

