
Save the Tigers- Part-3|Exclusive: ಹುಲಿಗಳ ಅವೈಜ್ಞಾನಿಕ ಸೆರೆ, ಬಿಡುಗಡೆ: ಡಾ. ಉಲ್ಲಾಸ ಕಾರಂತ ಕಿಡಿ
ಅರಣ್ಯ ಇಲಾಖೆ ಅಧಿಕಾರಿಗಳ ದೂರದೃಷ್ಟಿಯ ಕೊರತೆಯಿಂದಲೇ ಮಾನವ-ಪ್ರಾಣಿ ಸಂಘರ್ಷ ತಾರಕಕ್ಕೇರಿದೆ" ಎಂದು ಡಾ. ಉಲ್ಲಾಸ್ ಕಾರಂತ್ ನೇರ ಅರೋಪ ಮಾಡಿದ್ದಾರೆ.
ಕಾಡಂಚಿನ ಗ್ರಾಮಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೈಗೊಂಡ ಹುಲಿಗಳ ಸೆರೆ ಕಾರ್ಯಾಚರಣೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹುಲಿ ಸಂರಕ್ಷಣೆ ಹೆಸರಿನಲ್ಲೇ ಸಮಸ್ಯೆ ಸೃಷ್ಟಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಖ್ಯಾತ ಪ್ರಾಣಿಶಾಸ್ತ್ರಜ್ಞ ಹಾಗೂ ವನ್ಯಜೀವಿ ತಜ್ಞ ಡಾ. ಉಲ್ಲಾಸ್ ಕಾರಂತ್ ಕಿಡಿಕಾರಿದ್ದಾರೆ.
ಅತಿಯಾದ ಮಾನವ ಹಸ್ತಕ್ಷೇಪ, ಬೇಟೆಗಾರರ ಹಾವಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಕರ್ನಾಟಕದ ನಾಗರಹೊಳೆ, ಬಂಡೀಪುರ ಹಾಗೂ ಬಿಳಿಗಿರಿ ರಂಗನ ಬೆಟ್ಟದ ಅಭಯಾರಣ್ಯಗಳಲ್ಲಿ ಹುಲಿಗಳ ಸರಣಿ ಸಾವಿನ ಪ್ರಕರಣಗಳು ವನ್ಯಜೀವಿ ಪ್ರಿಯರಲ್ಲಿ ಆತಂಕ ಮೂಡಿಸಿವೆ. ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಹುಲಿಗಳನ್ನು ಸೆರೆ ಹಿಡಿದು ಬೇರೆಡೆ ಬಿಡುತ್ತಿರುವ ಕುರಿತು ʼದ ಫೆಡರಲ್ ಕರ್ನಾಟಕʼ ಅವರ ಜತೆ ಮಾತುಕತೆ ನಡೆಸಿತು.
ವಿವರವಾಗಿ ಮಾತನಾಡಿದ ಅವರು, "ಕರ್ನಾಟಕದಲ್ಲಿ ಹುಲಿ ಸಂರಕ್ಷಣೆಗೆ ವೈಜ್ಞಾನಿಕ ತಳಹದಿಯೇ ಇಲ್ಲ. ಆವಾಸ ಸ್ಥಾನ ವಿರೂಪಗೊಳಿಸುವುದನ್ನು ಮೊದಲು ನಿಲ್ಲಿಸಬೇಕು. ಅನಗತ್ಯವಾಗಿ ದಟ್ಟಾರಣ್ಯದೊಳಗೆ ಟ್ಯಾಂಕರ್ ನೀರು, ಸೋಲರ್ ಪಂಪ್, ಜೆಸಿಬಿಗಳ ಪ್ರವೇಶಕ್ಕೆ ಕಡಿವಾಣ ಹಾಕಬೇಕು. ಬೇಡದಿರುವ ಕೆಲಸವನ್ನೇ ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ. ಇದರಿಂದ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿವೆ" ಎಂದು ಬೇಸರ ವ್ಯಕ್ತಪಡಿಸಿದರು.
"ಹುಲಿ ದಾಳಿ ಅಥವಾ ಹುಲಿ ಸೆರೆ ಕಾರ್ಯಾಚರಣೆಗೂ ಮುನ್ನ ಮೂಲ ಸಮಸ್ಯೆಯನ್ನು ನೋಡಬೇಕು. ಕಳೆದ ಐದು ವರ್ಷಗಳಿಂದ ಜಾನುವಾರುಗಳ ಮೇಲೆ ಹುಲಿಗಳು ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆಯವರು ಲಂಟಾನ ತೆರವು, ಹುಲ್ಲು ಹಾಸು ಬೆಳೆಸುವ ಸಲುವಾಗಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಜೆಸಿಬಿಗಳನ್ನು ನುಗ್ಗಿಸುತ್ತಿದ್ದಾರೆ. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ನೈಸರ್ಗಿಕ ಪ್ರಾಣಿ ಪ್ರಬೇಧಗಳು ಹೆಚ್ಚುತ್ತಿರುತ್ತವೆ. ಬಲಿ ಪ್ರಾಣಿಗಳ ಸಂಖ್ಯೆಯಂತೆ ಹುಲಿಗಳೂ ಹೆಚ್ಚುತ್ತಿವೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳ ದೂರದೃಷ್ಟಿ ಕೊರತೆಯಿಂದಲೇ ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿದೆ " ಎಂದು ನೇರವಾಗಿ ಆರೋಪಿಸಿದರು.
"ಚಿಕ್ಕಮಗಳೂರಿನಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ.ಅರಣ್ಯ ಇಲಾಖೆಯವರು ಅರಣ್ಯ ಪ್ರವಾಸೋದ್ಯಮ ಹೆಸರಲ್ಲಿ ಸಂರಕ್ಷಿತ ಪ್ರದೇಶಗಳಿಗೆ ಜನರನ್ನು ಗುಂಪು ಗುಂಪಾಗಿ ಕರೆದೊಯ್ಯಲಾಗುತ್ತಿದೆ. ಜನರು ಮೊಬೈಲ್, ಕ್ಯಾಮೆರಾ ಹಿಡಿದು ವನ್ಯಜೀವಿಗಳ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ. ಮನುಷ್ಯ ನಿಸರ್ಗದೊಂದಿಗೆ ಚೆಲ್ಲಾಟ ಆಡುತ್ತಿದ್ದಾನೆ" ಎಂದು ಕಿಡಿಕಾರಿದರು.
ಲಯ ತಪ್ಪಿದ ಅರಣ್ಯ ಸಂರಕ್ಷಣೆ
1980-90ರ ದಶಕದಲ್ಲಿ ಅರಣ್ಯದಲ್ಲಿ ಯಾವುದೇ ಹಸ್ತಕ್ಷೇಪ ಇರಲಿಲ್ಲ. ಅರಣ್ಯದ ಸಾಮರ್ಥ್ಯಕ್ಕೆ ತಕ್ಕಷ್ಟು ಹುಲಿಗಳ ಸಂಖ್ಯೆ ಇತ್ತು. ಆದರೆ, 2010ರ ಬಳಿಕ ಎಲ್ಲವೂ ಲಯ ತಪ್ಪಿದೆ. ಅರಣ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಪರಿಣಾಮ ಇಂದು ಕಾಡೇ ಪ್ರವಾಸಿ ತಾಣವಾಗಿ ಬದಲಾಗಿದೆ. ನೈಸರ್ಗಿಕ ಕಾಡುಗಳಲ್ಲಿ ಕೃತಕ ಇಂಗುಗುಂಡಿಗಳು ತಲೆ ಎತ್ತಿರುವ ಹಿನ್ನೆಲೆ ಪರಿಸರದ ಸಮತೋಲನ ಹಾಳಾಗಿದೆ. ಅರಣ್ಯ ಇಲಾಖೆಗೆ ಪ್ರವಾಸೋದ್ಯಮದಿಂದ ಆದಾಯ ಹೆಚ್ಚಬಹುದು, ಆದರೆ ವನ್ಯಜೀವಿಗಳಿಗೆ ಸಂಕಷ್ಟ ತಪ್ಪಿಲ್ಲ ಎಂಬುದು ವನ್ಯಜೀವಿ ಪ್ರಿಯರ ಅಳಲಾಗಿದೆ.
ಹುಲಿ ಸಂರಕ್ಷಿತ ಅರಣ್ಯ ಸಮೀಪದ ಗ್ರಾಮಗಳ ಸ್ಥಳಾಂತರಕ್ಕೆ ಕಟ್ಟುನಿಟ್ಟಿನ ಯೋಜನೆ ರೂಪಿಸಬೇಕು. ಚಾಲ್ತಿಯಲ್ಲಿರುವ ಪುನರ್ವಸತಿ ಪ್ಯಾಕೇಜ್ ಅನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಈಗಾಗಲೇ ಸ್ಥಳಾಂತರವಾದವರಿಗೆ ಅಗತ್ಯ ಮೂಲ ಸೌಕರ್ಯ, ಪರಿಹಾರ ನೀಡಬೇಕು. ಆ ಮೂಲಕ ಹಂತ ಹಂತವಾಗಿ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಉಲ್ಲಾಸ್ ಕಾರಂತ ಅವರು ನೀಡುವ ಸಲಹೆ.
ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜನವಸತಿ ಹಾಗೂ ಮಾನವನ ಹಸ್ತಕ್ಷೇಪವು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ. ಮೊದಲು ಮೂಲ ಸಮಸ್ಯೆ ಬಗೆಹರಿಸಬೇಕು. ಅರಣ್ಯವನ್ನು ಅರಣ್ಯವಾಗಿಯೇ ನೋಡಬೇಕು. ನರಭಕ್ಷಕ ಅಥವಾ ಸಮಸ್ಯಾತ್ಮಕ ಹುಲಿಗಳನ್ನು ತಕ್ಷಣ ಸ್ಥಳಾಂತರಿಸುವ, ಅನಿವಾರ್ಯ ಸಂದರ್ಭದಲ್ಲಿ ಸಂಹರಿಸುವ ದೃಢ ನಿರ್ಧಾರಗಳನ್ನು ಸರ್ಕಾರಗಳು ತೆಗೆದುಕೊಳ್ಳಬೇಕು. ಆದರೆ, ಅಧಿಕಾರಿಗಳು ಇಕೋ- ಟೂರಿಸಂ ಹೆಸರಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಉಲ್ಲಾಸ್ ಕಾರಂತ್ ದೂರಿದರು.
ಭದ್ರಾ ಹುಲಿ ಸಂರಕ್ಷಿತ ಅಭಯಾರಣ್ಯದ ಮಾದರಿಯಲ್ಲೇ ಕಾಡಂಚಿನ ಗ್ರಾಮಗಳನ್ನು ಗೌರವಯುತವಾಗಿ ಸ್ಥಳಾಂತರಿಸಬೇಕು. ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಆಗ ಮಾತ್ರ ಕಾಡಿನಲ್ಲಿ ಹುಲಿಗಳ ಆವಾಸಸ್ಥಾನ ಸಂರಕ್ಷಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಇನ್ನು ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಅರಣ್ಯ ಇಲಾಖೆಯು ಏಕಸ್ವಾಮ್ಯವಾಗಿ ವರ್ತಿಸಬಾರದು. ವನ್ಯಜೀವಿ ಪ್ರಿಯರು, ಪರಿಸರ ತಜ್ಞರು ಹಾಗೂ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ನಾಗರಿಕ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಉಲ್ಲಾಸ ಕಾರಂತರು ಸಲಹೆ ನೀಡಿದರು.
ವೈಜ್ಞಾನಿಕ ಗಣತಿಗೆ ಅಡಿಪಾಯ ಹಾಕಿದ್ದವರು
ಈ ಹಿಂದೆ ಹುಲಿ ಗಣತಿಯನ್ನು ಸಾಂಪ್ರದಾಯಿಕ ವಿಧಾನಗಳಾದ ಹೆಜ್ಜೆಗುರುತಿನ ಮೂಲಕ ನಡೆಸಲಾಗುತ್ತಿತ್ತು. ಆದರೆ, ದೇಶದಲ್ಲಿ ಮೊದಲ ಬಾರಿಗೆ ಡಾ. ಉಲ್ಲಾಸ ಕಾರಂತ ಅವರು ʼಕ್ಯಾಮೆರಾ ಟ್ರಾಪ್ʼ ಆಧರಿತ ಸಮೀಕ್ಷೆ ಪರಿಚಯಿಸಿದ ಪರಿಣಾಮ ಇಂದು ನಿಖರವಾಗಿ ವನ್ಯಜೀವಿಗಳ ಗಣತಿ ನಡೆಯುತ್ತಿದೆ.
ಪ್ರಾಜೆಕ್ಟ್ ಟೈಗರ್ ಯೋಜನೆಗೆ ಶ್ರಮಿಸಿದ್ದ ಕಾರಂತ
ದೇಶದ ವನ್ಯಜೀವಿ ಸಂರಕ್ಷಣೆ ಮತ್ತು ಹುಲಿ ಸಂಶೋಧನೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು ಡಾ. ಕೆ. ಉಲ್ಲಾಸ ಕಾರಂತ. ನಾಗರಹೊಳೆ, ಬಂಡೀಪುರಗಳಲ್ಲಿ ಸಾಕಷ್ಟು ವೈಜ್ಞಾನಿಕ ಅಧ್ಯಯನ ನಡೆಸಿ, ಪ್ರಾಜೆಕ್ಟ್ ಟೈಗರ್ ಯೋಜನೆ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹುಲಿಗಳ ಮೈಮೇಲಿನ ಪಟ್ಟೆಗಳು ಮನುಷ್ಯನ ಬೆರಳಚ್ಚಿನಂತೆ ವಿಶಿಷ್ಟವಾಗಿರಲಿವೆ ಎಂಬ ಅಂಶ ಆಧರಿಸಿಯೇ ವೈಜ್ಞಾನಿಕ ಗಣತಿಗೆ ಕಾರಂತರು ನಾಂದಿ ಹಾಡಿದ್ದರು. 1990ರಲ್ಲಿ ಮೊದಲ ಬಾರಿಗೆ ಹುಲಿಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನವಲನ, ವರ್ತನೆ ಅಧ್ಯಯನ ಮಾಡಿದ್ದರು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA), ಕರ್ನಾಟಕ ಸರ್ಕಾರದ ಹುಲಿ ಸಂರಕ್ಷಣಾ ಪ್ರತಿಷ್ಠಾನದ ಸದಸ್ಯರಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಬೆಂಗಳೂರಿನಲ್ಲಿ ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ ಎಂಬ ಸಂಸ್ಥೆ ಸ್ಥಾಪಿಸಿ, ನೂರಾರು ಯುವ ವನ್ಯಜೀವಿ ತಜ್ಞರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ವನ್ಯಜೀವಿ ಸಂರಕ್ಷಣೆಯತ್ತ ವಾಲಿದ್ದು ಹೇಗೆ?
ಕನ್ನಡದ ಖ್ಯಾತ ಸಾಹಿತಿ ಶಿವರಾಮ ಕಾರಂತರ ಪುತ್ರರಾಗಿರುವ ಡಾ. ಉಲ್ಲಾಸ ಕಾರಂತ ಅವರು ಸಣ್ಣ ವಯಸ್ಸಿನಲ್ಲೇ ಪಕ್ಷಿ ಪ್ರೇಮಿ ಸಲೀಂ ಅಲಿ ಹಾಗೂ ಖ್ಯಾನ ವನ್ಯಜೀವಿ ಪ್ರಿಯರಾಗಿದ್ದ ಜಿಮ್ ಕಾರ್ಬೆಟ್ ಅವರಿಂದ ಪ್ರೇರಿತರಾಗಿ ವನ್ಯಜೀವಿ ಸಂರಕ್ಷಣೆಯ ಒಲವು ಬೆಳೆಸಿಕೊಂಡರು.
1971ರಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿದ ಉಲ್ಲಾಸ ಕಾರಂತರು ಅಮೆರಿಕಾದ ಸ್ಮಿತ್ಸೋನಿಯನ್ ಸಂಸ್ಥೆಯಲ್ಲಿ ವನ್ಯಜೀವಿ ನಿರ್ವಹಣೆ ಕೋರ್ಸ್ ಅಧ್ಯಯನ ಮಾಡಿದರು. 1988ರಲ್ಲಿ ವೈಲ್ಡ್ ಲೈಫ್ ಇಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1993 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅನ್ವಯಿಕ ಪ್ರಾಣಿ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಅದೇ ವರ್ಷ ನ್ಯೂಯಾರ್ಕ್ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿಯ ಭಾರತದ ಕಾರ್ಯಕ್ರಮ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.
ಭಾರತದ ನಾಗರಹೊಳೆ, ಖಾಜೀರಂಗ, ನಾಮ್ ದಫಾ ಮುಂತಾದ ಉದ್ಯಾನಗಳಲ್ಲಿ ಅಧ್ಯಯನ ನಡೆಸಿದ್ದು, ಲಂಡನ್ನ ಜೂಲಾಜಿಕಲ್ ಸೊಸೈಟಿ ಮತ್ತು ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಗಳಿಂದ ‘ಸೈಂಟಿಫಿಕ್ ಫೆಲೋ’ ಗೌರವ ಪಡೆದುಕೊಂಡಿದ್ದಾರೆ. ಭಾರತವಲ್ಲದೇ ಅಮೆರಿಕ, ಬ್ರಿಟನ್, ಮಲೇಷ್ಯಾ, ಇಂಡೋನೆಷ್ಯಾ, ಥೈಲ್ಯಾಂಡ್, ಟರ್ಕಿ ಮೊದಲಾದ ದೇಶಗಳಲ್ಲಿ ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ನೆರವಾಗುತ್ತಿದ್ದಾರೆ.

