ಮೈಸೂರು ಸ್ಯಾಂಡಲ್‌ ಸಾಬೂನಿಗೆ ಕನ್ನಡ ಸ್ಟಾರ್‌ಗಳು ರಾಯಭಾರಿಗಳಾಗಿಲ್ಲ! ಅನ್ಯ ಭಾಷಿಕರೇ ಎಲ್ಲ!
x

ಮೈಸೂರು ಸ್ಯಾಂಡಲ್‌ ಸೋಪಿಗೆ ರಾಯಭಾರಿಗಳಾಗಿದ್ದ ಕ್ರಿಕೆಟಿಗ ಎಂ.ಎಸ್‌.ಧೋನಿ, ಬಾಲಿವುಡ್ ನಟಿ ಮತ್ತು ಮಾಡೆಲ್ ಮುಗ್ಧಾ ಗೋಡ್ಸೆ, ಮಲಯಾಳಿ ಕುಟುಂಬದ ನಟಿ ಪಾರ್ವತಿ ನಾಯರ್ ಹಾಗೂ ಈಗಿನ ರಾಯಭಾರಿ ನಟಿ ತಮನ್ನಾ ಭಾಟಿಯಾ

ಮೈಸೂರು ಸ್ಯಾಂಡಲ್‌ ಸಾಬೂನಿಗೆ ಕನ್ನಡ ಸ್ಟಾರ್‌ಗಳು ರಾಯಭಾರಿಗಳಾಗಿಲ್ಲ! ಅನ್ಯ ಭಾಷಿಕರೇ ಎಲ್ಲ!

ಎಂ. ಎಸ್‌. ಧೋನಿ, ಮುಗ್ದಾ ಗೋಡ್ಸೆ, ಪಾರ್ವತಿ ನಾಯರ್..‌ ಈಗ ತಮನ್ನಾ! 2006 ರಿಂದ ರಾಯಭಾರಿಗಳನ್ನು ಆಯ್ಕೆ ಮಾಡಲಾಗುತ್ತಿದ್ದರೂ ಯಾರೂ ಕನ್ನಡಿಗರಲ್ಲ ಎನ್ನುವುದೇ ಕನ್ನಡ ಹೋರಾಟಗಾರರ ಸಿಟ್ಟಿಗೆ ಕಾರಣ.


Click the Play button to hear this message in audio format

ಕರ್ನಾಟಕದ ಹೆಮ್ಮೆಯ "ಮೈಸೂರು ಸ್ಯಾಂಡಲ್‌ ಸೋಪ್‌" ಇಡೀ ವಿಶ್ವದಲ್ಲೇ ಪ್ರಸಿದ್ದಿ ಪಡೆದಿದೆ. ಆದರೆ, ಕನ್ನಡ ನೆಲದ ಈ ಸಂಸ್ಥೆಯ ರಾಯಭಾರಿಗಳಾಗಿದ್ದವರಲ್ಲಿ ಯಾರೊಬ್ಬರು ಕನ್ನಡದವರಿಲ್ಲ ! ತಮನ್ನಾ ಅವರಿಗಿಂತ ಹೆಚ್ಚಿನ ಫಾಲೋವರ್ಸ್‌ ಇರುವ ಕನ್ನಡಿಗರಿಗೆ ಕೆಎಸ್‌ಡಿಎಲ್‌ ಮಣೆ ಹಾಕಿಯೂ ಇಲ್ಲ!

ಇದು ಆಶ್ಚರ್ಯವಾದರೂ ಸತ್ಯ. ಮೈಸೂರು ಸ್ಯಾಂಡಲ್‌ ಸಂಸ್ಥೆಗೆ 2006 ರಿಂದ ರಾಯಭಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಅವರುಗಳ ಮೂಲಕ ಈ ಸಂಸ್ಥೆಯ ಉತ್ಪನ್ನಗಳನ್ನು ಕರ್ನಾಟಕದ ಆಚೆಗೂ ಪ್ರಚಾರ ಮಾಡಲಾಗುತ್ತಿದ್ದು, ಈವರೆಗೂ ಮೂರು ಮಂದಿ ರಾಯಭಾರಿಗಳು ಕೆಲಸ ಮಾಡಿದ್ದಾರೆ. ಆದರೆ, ಯಾರೊಬ್ಬರು ಅಪ್ಪಟ ಕನ್ನಡಿಗರಲ್ಲ.

ಈಗ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಮೈಸೂರು ಸ್ಯಾಂಡಲ್‌ ಸೋಪಿನ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ಬರೊಬ್ಬರಿ 6 .20 ಕೋಟಿ ರೂ.,ಗಳನ್ನು ಸಂಭಾವನೆಯನ್ನಾಗಿ ನೀಡಲಾಗುತ್ತಿದೆ.

ಕನ್ನಡದವರನ್ನು ಬಿಟ್ಟು ಪರಭಾಷಿಕರನ್ನು ಕನ್ನಡದ ಸಂಸ್ಥೆಗೆ ರಾಯಭಾರಿಯನ್ನಾಗಿ ನೇಮಿಸಲಾಗಿದೆ ಎಂದು ಕನ್ನಡ ಪರ ಸಂಘಟನೆಗಳೊಂದಿಗೆ ಕೆಲ ಜನಪ್ರತಿನಿಧಿಗಳು ಸಹ ಅಸಮಧಾನ ವ್ಯಕ್ತ ಪಡಿಸಿದ್ದರು. ಆದರೆ, ನಟಿ ತಮನ್ನಾ ಭಾಟಿಯಾ ಮಾತ್ರವಲ್ಲ, ಈವರೆಗೂ ಸ್ಯಾಂಡಲ್‌ ಸೋಪಿನ ರಾಯಭಾರಿಗಳಾಗಿದ್ದವರು ಯಾರೂ ಕನ್ನಡಿಗರೆ ಅಲ್ಲ ಎಂಬುದು ವಿಪರ್ಯಾಸ.

ಯಾರ್ಯಾರು ರಾಯಭಾರಿಗಳಾಗಿದ್ದರು?

2006 ರಿಂದ ಮೈಸೂರು ಸ್ಯಾಂಡಲ್‌ ಸೋಪಿಗೆ ರಾಯಭಾರಿಗಳನ್ನು ಆಯ್ಕೆ ಮಾಡುವ ಕೆಲಸ ಮಾಡಲಾಗುತ್ತಿದೆ. ಮೊದಲ ರಾಯಭಾರಿಯನ್ನಾಗಿ ಜಾರ್ಖಂಡ್‌ನ ರಾಂಚಿ ಮೂಲದವರಾದ ಖ್ಯಾತ ಕ್ರಿಕೆಟಿಗ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ಮಹಾರಾಷ್ಟ್ರ ಪುಣೆ ಮೂಲದ ಬಾಲಿವುಡ್ ನಟಿ ಮತ್ತು ಮಾಡೆಲ್ ಮುಗ್ದಾ ಗೋಡ್ಸೆ ಅವರು ಮೈಸೂರು ಸ್ಯಾಂಡಲ್ ಸೋಪಿನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಅಬುಧಾಬಿಯ ಮಲಯಾಳಿ ಕುಟುಂಬದ ನಟಿ ಪಾರ್ವತಿ ನಾಯರ್ ಅವರನ್ನು 2009 ರಲ್ಲಿ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಯಿತು. "ಮಿಸ್ ಕರ್ನಾಟಕ" ಪ್ರಶಸ್ತಿ ಗೆದ್ದ ನಂತರ ಪಾರ್ವತಿ ನಾಯರ್ ಅವರು ಈ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದರು. ಕನ್ನಡದ ಒಂದು ಚಿತ್ರದಲ್ಲಿ ಮಾತ್ರವೇ ಈ ನಟಿ ಕಾಣಿಸಿಕೊಂಡಿದ್ದರು. ಈಗ ನಟಿ ತಮನ್ನಾ ಭಾಟಿಯಾ ಅವರನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಸಂಸ್ಥೆಯು ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ.

ಸಚಿವರು ಹೇಳಿದ್ದೆನು?

ಸಾಮಾಜಿಕ ಜಾಲತಾಣದಲ್ಲಿನಟಿ ತಮನ್ನಾ ಭಾಟಿಯಾ 28.3 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. ಇದನ್ನು ಮಾನದಂಡವಾಗಿ ಪರಿಗಣಿಸಿ ಸರ್ಕಾರ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ. ಅಲ್ಲದೇ, ಅವರ ಅಭಿಮಾನಿ ಬಳಗ ದಕ್ಷಿಣ ಭಾರತ ಮಾತ್ರವಲ್ಲದೆ, ಉತ್ತರ ಭಾರತದ ಹಿಂದಿ ಮಾರುಕಟ್ಟೆಯಲ್ಲೂ ವ್ಯಾಪಕವಾಗಿದೆ. ಯುವ ಪೀಳಿಗೆಯನ್ನು ತಲುಪಲು ಇಂತಹ 'ಪ್ಯಾನ್ ಇಂಡಿಯಾ' ಫೇಸ್ ಅವಶ್ಯಕ.

ಜತೆಗೆ ತಮನ್ನಾ ಅವರಿಗೆ ನೀಡುವ ಸಂಭಾವನೆಗೆ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೊಣೆ ಅವರು ಒಪ್ಪಲಿಲ್ಲ. ಉಳಿದ ನಾಯಕಿಯರು ಇತರೆ ಬ್ರ್ಯಾಂಡ್‌ಗಳಿಗೆ ರಾಯಭಾರಿಗಳಾಗಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್‌ ಮಂಗಳವಾರ ಸ್ಪಷ್ಟನೆ ನೀಡಿದ್ದರು.

ಕನ್ನಡದ ನಟಿಯರಿಗೂ ಹೆಚ್ಚಿನ ಫಾಲೋವರ್ಸ್‌

ಕನ್ನಡದ ಅನೇಕ ನಟಿಯರು ಸಹ ಜಾಲತಾಣಗಳಲ್ಲಿ ಹೆಚ್ಚಿನ ಫಾಲೋವರ್ಸ್‌ ಹೊಂದಿದ್ದಾರೆ. ನಟಿ ತಮನ್ನಾ ಭಾಟಿಯಾ 28.3 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದರೆ, ಬಹುಭಾಷಾ ನಟಿ, ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ಜಾಲತಾಣಗಳಲ್ಲಿ 48 .7 ಮಿಲಿಯನ್ ಫಾಲೋವರ್ಸ್‌ ಹೊಂದಿದಾರೆ. ಪೂಜಾ ಹೆಗ್ಡೆ 28 ಮಿಲಿಯನ್, ಶಿಲ್ಪಾ ಶೆಟ್ಟಿ 34 ಮಿಲಿಯನ್, ಐಶ್ವರ್ಯ ರೈ 15 ಮಿಲಿಯನ್ , ನಟಿ ಅನುಷ್ಕಾ ಶೆಟ್ಟಿ 71 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಜತೆಗೆ ಕನ್ನಡದವರೆ ಆದ ನಟಿ ರಮ್ಯಾ (ದಿವ್ಯಸ್ಪಂದನ) 1 ಮಿಲಿಯನ್, ರಾಧಿಕಾ ಪಂಡಿತ್‌ 5ಮಿಲಿಯನ್, ರಚಿತಾರಾಮ್‌- 3 ಮಿಲಿಯನ್, ಶ್ರೀನಿಧಿ ಶೆಟ್ಟಿ-5 .5 ಮಿಲಿಯನ್, ಆಶಿಕಾ ರಂಗನಾಥ್‌ -2 .3 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ!

ಹೀಗೆ ಅನೇಕ ನಟಿಯರನ್ನು ಮೈಸೂರು ಸ್ಯಾಂಡಲ್‌ ಸೋಪು ತನ್ನ ಪ್ರಚಾರಕ್ಕೆ ಬಳಸಿಕೊಳ್ಳಬಹುದಿತ್ತು ಎಂಬ ವಾದವು ಕೇಳಿಬರುತ್ತಿದೆ. ಜತೆಗೆ ಕಾಂತಾರ ಸಿನಿಮಾದ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳದ ರುಕ್ಮಣಿ ವಸಂತ್‌ 3 .9 ಮಿಲಿಯನ್ ಫಾಲೋವರ್ಸ್‌ ಹೊಂದಿರುವ ಅವರುಗಳ ಮೂಲಕ ಇನ್ನಷ್ಟು ಪ್ರಚಾರ ಹೆಚ್ಚಿಸಬಹುದಿತ್ತು ಎಂಬುದು ಕೆಲ ಸಂಘಟನೆಗಳ ಅಭಿಪ್ರಾಯ.

ಪುನೀತ್‌ ರಾಜ್‌ಕುಮಾರ್‌ ಮಾದರಿ

ಈ ಹಿಂದೆ ನಂದಿನಿ ಸಂಸ್ಥೆಗೆ ರಾಯಭಾರಿಯಾಗಿದ್ದ ನಟ ಪುನೀತ್‌ ರಾಜ್‌ಕುಮಾರ್‌ ನಯಾಪೈಸೆ ಸಂಭಾವನೆ ಇಲ್ಲದೆ, ರಾಯಭಾರಿಯಾಗಿ ಕೆಲಸ ಮಾಡಿದ್ದರು. ಬಿಎಂಟಿಸಿಗೂ ಸಹ ಇದೇ ಮಾದರಿಯಲ್ಲಿ ಸೇವೆ ಸಲ್ಲಿಸಿದ್ದರು. ರಾಜ್ಯ ಸರಕಾರದ ಬೆಳಕು ಯೋಜನೆಗೂ ಸಹ ಪುನೀತ್‌ ರಾಜ್‌ ಕುಮಾರ್‌ ಪುಕ್ಕಟೆಯಾಗಿಯೆ ರಾಯಭಾರಿಯಾಗಿದ್ದರು. ಬಳಿಕ ಶಿವರಾಜ್‌ಕುಮಾರ್‌ ಸಹ ಉಚಿತವಾಗಿ ರಾಯಭಾರಿಯಾಗಿದ್ದರು.

ಬಿ.ಸಿ.ಪಾಟೀಲ್‌ ಕೃಷಿ ಸಚಿವರಾಗಿದ್ದ ವೇಳೆ ಕನ್ನಡದ ನಟ ದರ್ಶನ್‌ ಸಹ ಉಚಿತವಾಗಿಯೇ ಕೃಷಿ ಇಲಾಖೆಯ ರಾಯಭಾರಿಯಾಗಿದ್ದರು. ಜತೆಗೆ ಅರಣ್ಯ ಇಲಾಖೆಯ ರಾಯಭಾರಿಯಾಗಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಸಹ ಸಂಭಾವನೆ ರಹಿತರಾಗಿಯೇ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ನಟ ಪುನಿತ್‌ ರಾಜಕುಮಾರ್‌ ಹಾಗೂ ನಟ ಶಿವರಾಜ್‌ಕುಮಾರ್‌

ಹೀಗೆ, ಅನೇಕ ನಟ-ನಟಿಯರನ್ನು, ಇತರ ಕ್ಷೇತ್ರಗಳ ಸ್ಟಾರ್‌ ವರ್ಚಸ್ಸಿರುವ ಗಣ್ಯರನ್ನು ಉಚಿತವಾಗಿ ಕರ್ನಾಟಕದ ಸ್ಯಾಂಡಲ್‌ ಸಂಸ್ಥೆಗೆ ಬಳಸಿಕೊಳ್ಳಬಹುದಿತ್ತು. ಇಲ್ಲವೇ, ಕನ್ನಡ ನೆಲದ ಅನೇಕ ನಟ-ನಟಿಯರಿಗೆ ಅವಕಾಶ ನೀಡಬಹುದಿತ್ತು. ಅನ್ಯರಾಜ್ಯದ ನಟಿಗೆ ದುಬಾರಿ ಹಣ ನೀಡಿ ರಾಯಭಾರಿಯನ್ನಾಗಿ ನೇಮಿಸಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಅನೇಕ ಕನ್ನಡ ಪರ ಸಂಘಟನೆಗಳು ಅಸಮಾಧಾನ ಹೊರಹಾಕಿದ್ದವು.

ತಮನ್ನಾಗೇಕೆ ವಿರೋಧ?

ಕೆಎಸ್‌ಡಿಎಲ್‌ ರಾಯಭಾರಿಯಾಗಿ ನಟಿ ತಮನ್ನಾ ಅವರನ್ನು ಆಯ್ಕೆ ಮಾಡಲು ರಾಜ್ಯ ಸರಕಾರ ಮುಂದಾಗಿದ್ದ ವೇಳೆಯೆ ಅನೇಕ ವಿರೋಧಗಳು ವ್ಯಕ್ತವಾಗಿದ್ದವು. ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌, ವೆಂಕಟಶಿವರೆಡ್ಡಿ ಅವರುಗಳು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ, ನಟಿಗೆ ನೀಡುವ ಸಂಭಾವನೆ ಹಣವನ್ನು ಮಾವು ಬೆಳೆಗಾರರಿಗೆ ಪ್ರೋತ್ಸಾಹ ಧನವನ್ನಾಗಿ ನೀಡಬೇಕು ಎಂದು ಒತ್ತಾಯಿಸಿದ್ದರು.
ಸಂಸದ ಯದುವೀರ್‌ ಸಹ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದ್ದರು. ಇದು ಮೈಸೂರು ರಾಜರು ಸ್ಥಾಪಿಸಿದ ಸಂಸ್ಥೆಯಾಗಿದ್ದು, ಕನ್ನಡಿಗರೆ ಹೆಚ್ಚಾಗಿ ಬಳಸುವ ಮೈಸೂರು ಸ್ಯಾಂಡಲ್‌ ಸೋಪಿಗೆ ಅನ್ಯಭಾಷಿಗರನ್ನು ರಾಯಭಾರಿಯನ್ನಾಗಿ ನೇಮಿಸಿರುವುದು ಹುಚ್ಚುತನ ಎಂದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಸುದ್ದಿಗೋಷ್ಠಿ ನಡೆಸಿ, ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ನಟಿ ರಮ್ಯಾ ಸಹ ಜಾಲತಾಣಗಳಲ್ಲಿ ಫೋಸ್ಟ್‌ ಮಾಡಿ, ಮೈಸೂರು ಸ್ಯಾಂಡಲ್‌ಗೆ ರಾಯಭಾರಿಯ ಅವಶ್ಯಕತೆಯೇ ಇರಲಿಲ್ಲ. ಈ ಸೋಪು ಬಳಸುವ ಪ್ರತಿಯೊಬ್ಬ ಕನ್ನಡಿಗನು ಸಹ ರಾಯಭಾರಿಗಳೆ ಎಂದಿದ್ದರು. ಸಂಸದ ಡಾ.ಕೆ.ಸುಧಾಕರ್‌ ಸಹ ಜಾಲತಾಣದ ಮೂಲಕ ಅಸಮಧಾನ ಹೊರಹಾಕಿದ್ದರು. ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಕನ್ನಡಿಗರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದ್ದವು.
"ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಇದೇ ಮೈಸೂರು ಸ್ಯಾಂಡಲ್‌ ಸೋಪಿನಿಂದ ಸ್ನಾನ ಮಾಡಿದ್ದರೆ ಬುದ್ದಿ ಕಲಿಯುತ್ತಿದ್ದರು," ಎಂದು ಕನ್ನಡ ಪರ ಹೋರಾಟಗಾರ ವಾಟಳ್‌ ನಾಗರಾಜ್‌ ಆಕ್ರೋಶ ಹೊರ ಹಾಕಿದ್ದರು.
ಈ ಬಗ್ಗೆ ಕರುನಾಡ ಸೇನೆಯ ಅಧ್ಯಕ್ಷ ಎಂ. ಜಗದೀಶ್‌ "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿ, "ಶ್ರೀಗಂಧದ ಸೋಪು, ಇದು ನಮ್ಮ ಕರ್ನಾಟಕದ ಹೆಮ್ಮೆ. ಇದಕ್ಕೆ ಹೊಸ ರಾಯಭಾರಿ ನಿಯೋಜಿಸುವ ಅವಶ್ಯಕತೆ ಇಲ್ಲ. ಇದು ತೆರಿಗೆ ಹಣ ಪೋಲು ಮಾಡುವ ಹುನ್ನಾರವಷ್ಟೆ. ರಾಯಭಾರಿ ಮಾಡಲೇಬೇಕಿದ್ದರೆ, ಕನ್ನಡ ಹೋರಾಟಗಾರ ವಾಟಳ್‌ ನಾಗರಾಜ್‌ ಅವರನ್ನೆ ಮಾಡಿ. ಅವರು ಉಚಿತವಾಗಿ ರಾಯಭಾರಿಯಾಗಲು ಸಿದ್ದವಿದ್ದಾರೆ," ಎಂದರು.
ಕನ್ನಡ ಹೋರಾಟಗಾರ ಕನ್ನಡ ರಮೇಶ್‌ "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿ, ಕನ್ನಡದಲ್ಲಿ ಯಾರು ನಟ-ನಟಿಯರಲಿಲ್ಲವೇ? ಆರು ಕೋಟಿ ಸಂಭಾವನೆ ನೀಡುವಷ್ಟು ಯಾವ ಜಾಹಿರಾತು ಮಾಡುತ್ತಾರೆ. ಅದೇ ಆರು ಕೋಟಿಗೆ ಇನ್ನೊಂದು ಸೋಪಿನ ಕಾರ್ಖಾನೆ ತೆರೆಯಬಹುದಿತ್ತು. ಇದರಿಂದ ಉದ್ಯೋಗ ಸೃಷ್ಟಿಯು ಆಗುತ್ತಿತ್ತು? ಎಂದು ಎಂದರು.

ಮೈಸೂರು ಸ್ಯಾಂಡಲ್‌ ಸಂಸ್ಥೆಗೆ ಭವ್ಯ ಇತಿಹಾಸ

1916 ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಾರಂಭಿಸಿದ ಮೈಸೂರು ಸ್ಯಾಂಡಲ್‌ ಸಂಸ್ಥೆಗೆ ಅಂದಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಮಾರ್ಗದರ್ಶನವಿತ್ತು. ಒಂದನೇ ಮಹಾಯುದ್ಧದ ಸಮಯದಲ್ಲಿ ಶ್ರೀಗಂಧದ ಮರಗಳನ್ನು ಯುರೋಪ್‌ಗೆ ರಫ್ತು ಮಾಡಲು ಸಾಧ್ಯವಾಗದಿದ್ದಾಗ, ಆ ಸಂಪನ್ಮೂಲವನ್ನು ಬಳಸಿಕೊಳ್ಳಲು ಈ ಸಾಬೂನು ಕಾರ್ಖಾನೆಯನ್ನು ಸ್ಥಾಪಿಸಲಾಯಿತು.

ಪ್ರಪಂಚದಾದ್ಯಂತ ಶೇ.100 ಶುದ್ಧ ನೈಸರ್ಗಿಕ ಶ್ರೀಗಂಧದ ಎಣ್ಣೆಯನ್ನು (Sandalwood oil) ಬಳಸುವ ಏಕೈಕ ಸಾಬೂನು ಇದಾಗಿದೆ ಎಂಬ ಹೆಗ್ಗಳಿಕೆ ಇದಕ್ಕಿದೆ. ಇದನ್ನು ಕರ್ನಾಟಕ ಸರ್ಕಾರದ ಸ್ವಾಮ್ಯದ 'ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ' (KSDL) ಸಂಸ್ಥೆಯು ಬೆಂಗಳೂರಿನ ಯಶವಂತಪುರದಲ್ಲಿರುವ ಕಾರ್ಖಾನೆಯಲ್ಲಿ ತಯಾರಿಸುತ್ತದೆ. ಈ ಸಾಬೂನಿಗೆ ಅದರ ಗುಣಮಟ್ಟ ಮತ್ತು ಪ್ರಾದೇಶಿಕ ಮಹತ್ವಕ್ಕಾಗಿ 'ಭೌಗೋಳಿಕ ಸೂಚಕ' (GI Tag) ಮಾನ್ಯತೆ ಲಭಿಸಿದೆ.
ಕ್ಲಾಸಿಕ್ ಮೈಸೂರು ಸ್ಯಾಂಡಲ್ ಸೋಪ್ ಅಲ್ಲದೆ, ಮೈಸೂರು ಸ್ಯಾಂಡಲ್ ಗೋಲ್ಡ್ (Mysore Sandal Gold) ಮತ್ತು ಮೈಸೂರು ಸ್ಯಾಂಡಲ್ ಮಿಲೇನಿಯಮ್‌ನಂತಹ ಪ್ರೀಮಿಯಂ ಸಾಬೂನುಗಳು ಕೂಡ ಜನಪ್ರಿಯವಾಗಿವೆ. ಕೆಎಸ್‌ಡಿಎಲ್‌ನ ವಹಿವಾಟಿನ ಅಂಕಿ-ಅಂಶಗಳ ಪ್ರಕಾರ 2024-25ನೇ ಸಾಲಿನಲ್ಲಿ ಸಂಸ್ಥೆಯು 1,785 ಕೋಟಿ ವಹಿವಾಟು ನಡೆಸಿದೆ. ಈ ವ್ಯವಹಾರದಲ್ಲಿ ಕರ್ನಾಟಕದ ಪಾಲು ಕೇವಲ ಶೇ. 18 ರಷ್ಟಿದೆ. ಸಂಸ್ಥೆಯ ಶೇ. 82ರಷ್ಟು ವ್ಯವಹಾರವು ಹೊರರಾಜ್ಯ ಮತ್ತು ವಿದೇಶಗಳಿಂದ ಬರುತ್ತಿದೆ.

Read More
Next Story