
ಮರಗಳ ಮಾರಣ ಹೋಮ| ಕೃಷ್ಣರಾಜ ಒಡೆಯರ್ ಖ್ಯಾತಿಯ ಮೈಸೂರು ರೇಷ್ಮೆ ಘಟಕಕ್ಕೆ ಗ್ರಹಣ
"ಮೈಸೂರು ಸಿಲ್ಕ್ " ಸೀರೆಗೆ ನೂಲು ಪೂರೈಸುವ ಟಿ.ನರಸೀಪುರದ ʼಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದʼ (KSIC) ಆವರಣವು ಈಗ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಯುದ್ಧಕ್ಕೆ ಸಾಕ್ಷಿಯಾಗಿದೆ.
ರಾಜ್ಯದ ಸಾಂಸ್ಕೃತಿಕ ಹೆಗ್ಗುರುತು ಮತ್ತು ವಿಶ್ವದ ರೇಷ್ಮೆ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ "ಮೈಸೂರು ಸಿಲ್ಕ್ " ಸೀರೆಗೆ ನೂಲು ಪೂರೈಸುವ ಟಿ.ನರಸೀಪುರದ ʼಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದʼ (KSIC) ಆವರಣವು ಈಗ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಯುದ್ಧಕ್ಕೆ ಸಾಕ್ಷಿಯಾಗಿದೆ.
ಒಂದೆಡೆ ತಾಲೂಕು ಕ್ರೀಡಾಂಗಣಕ್ಕಾಗಿ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕ್ರೀಡಾಂಗಣಕ್ಕಾಗಿ ನಿಗದಿಪಡಿಸಿರುವ ಸ್ಥಳವೇ ವಿವಾದಿತ ಕೇಂದ್ರವಾಗಿ ಮಾರ್ಪಟ್ಟಿದೆ. ಮೈಸೂರು ರೇಷ್ಮೆ ಸೀರೆಗೆ ಕಚ್ಚಾ ನೂಲು ಪೂರೈಸುತ್ತಿರುವ ಟಿ.ನರಸೀಪುರದ ರೇಷ್ಮೆ ನೂಲು ಬಿಚ್ಚಳಿಕೆ ಘಟಕದ ಆವರಣದಲ್ಲಿಯೇ ಕ್ರೀಡಾಂಗಣ ನಿರ್ಮಿಸಲು ಸರಕಾರ ಮುಂದಾಗಿದೆ.
ಶತಮಾನ ದಾಟಿರುವ ಐತಹಾಸಿಕ ಕೆಎಸ್‌ಐಸಿಯ ರೇಷ್ಮೆ ನೂಲು ಬಿಚ್ಚಳಿಕೆ ಕೇಂದ್ರವಿರುವ ಆವರಣದಲ್ಲಿಯೇ ತಾಲೂಕು ಕ್ರೀಡಾಂಗಣ ನಿರ್ಮಿಸಲು ಮುಂದಾಗಿರುವ ಕ್ರಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಆವರಣದಲ್ಲಿನ 500ಕ್ಕೂ ಹೆಚ್ಚು ಮರಗಳ ಮಾರಣ ಹೋಮ ನಡೆಯಲಿದೆ ಎಂಬ ಆರೋಪಗಳಿವೆ. ಒಂದು ವೇಳೆ ಮರಗಳ ಮಾರಣ ಹೋಮ ನಡೆದರೆ, ಇಲ್ಲಿನ ಕೆಎಸ್‌ಐಸಿಯಲ್ಲಿ ದುಡಿಯುತ್ತಿರುವ 200ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಜತೆಗೆ ನೂರಾರು ಪಕ್ಷಿಗಳು, ವಿವಿಧ ಜಾತಿಯ ಚಿಟ್ಟೆಗಳ ಬದುಕು ಅತಂತ್ರಗೊಳ್ಳುವ ಆತಂಕ ಎದುರಾಗಿದೆ.
ನೂಲು ಬಿಚ್ಚಳಿಕೆ ಕೇಂದ್ರದಲ್ಲಿನ ಬಾಯ್ಲರ್‌ಗಳಿಗೆ ಬಳಕೆಯಾಗುತ್ತಿರುವ ಕಲ್ಲಿದ್ದಲಿನಿಂದ ಸೃಷ್ಟಿಯಾಗುತ್ತಿರುವ ಬೂದಿಯಿಂದ ಇಲ್ಲಿನ ಕಾರ್ಮಿಕರಿಗೆ ಸೃಷ್ಟಿಯಾಗಬಹುದಾದ ಊಸಿರಾಟದ ಸಮಸ್ಯೆಯೊಂದಿಗೆ ಇತರೆ ಕಾಯಿಲೆಗಳಿಗೆ ಇಲ್ಲಿನ ಮರಗಳೇ ನೈಸರ್ಗಿಕವಾಗಿ ಮದ್ದು ನೀಡುತ್ತಿವೆ. ಈಗ ಮರಗಳನ್ನು ನೆಲಕ್ಕುರುಳಿಸಿ, ಬಟ್ಟಬಯಲಿನ ಮೈದಾನ ನಿರ್ಮಿಸಿದರೆ, ಕಾರ್ಮಿಕರ ಆರೋಗ್ಯ ಸಂಪೂರ್ಣ ಹದಗೆಡುವ ಸಾಧ್ಯತೆಗಳೊಂದಿಗೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ವಾದ ಕೇಳಿಬಂದಿದೆ.
ಏನಿದು ವಿವಾದ?
ಜಿಐ (Geographical Indication) ಟ್ಯಾಗ್ ಹೊಂದಿರುವ ʼಮೈಸೂರು ಸಿಲ್ಕ್ ಸೀರೆʼಗೆ ಟಿ.ನರಸೀಪುರದಲ್ಲಿನ ಕೆಎಸ್‌ಐಸಿಗೆ ಸೇರಿದ ಫಿಲೇಚೆರ್ ಘಟಕದಿಂದಲೇ ರೇಷ್ಮೆ ನೂಲು ಬಿಚ್ಚಳಿಕೆ (Silk Reeling) ನಡೆಯುತ್ತದೆ. ಈ ಘಟಕವನ್ನು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ಸ್ಥಾಪಿಸಿದರು. ಇದು ಭಾರತದ ಅತ್ಯಂತ ಹಳೆಯ ರೇಷ್ಮೆ ನೂಲು ಕಾರ್ಖಾನೆಗಳಲ್ಲಿ ಒಂದಾಗಿದೆ. ಇಲ್ಲಿನ ರೇಷ್ಮೆ ನೂಲನ್ನು, ಮೈಸೂರು ಹಾಗೂ ಚನ್ನಪಟ್ಟಣದಲ್ಲಿನ ಕೆಎಸ್‌ಐಸಿಗೆ ರವಾನಿಸಿ, ರೇಷ್ಮೆ ಸೀರೆ ಸಿದ್ಧಪಡಿಸಲಾಗುತ್ತದೆ. ಈ ರೇಷ್ಮೆ ಸೀರೆಗೆ ರಾಜ್ಯದಲ್ಲಿ ಸಾಕಷ್ಟು ಬೇಡಿಕೆ ಇದ್ದು, ದಿನವಿಡೀ ಸರದಿ ಸಾಲಿನಲ್ಲಿ ನಿಂತು ಮೈಸೂರು ಸಿಲ್ಕ್ ಸೀರೆ ಖರೀದಿಸುವ ಸ್ಥಿತಿ ಇದೆ.
ಆದರೆ, ಇಂತಹ ರೇಷ್ಮೆ ಸೀರೆಗೆ ನೂಲು ಬಿಚ್ಚುವ ಟಿ.ನರಸೀಪುರದ ಘಟಕದಲ್ಲಿ ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಕೆಎಸ್‌ಐಸಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟು 13.5 ಎಕರೆಯಷ್ಟು ಭೂಮಿ ಹೊಂದಿರುವ ಇಲ್ಲಿ 900ಕ್ಕೂ ಹೆಚ್ಚು ಮರಗಳಿವೆ. ಇದರ ನಡುವೆ, ಟಿ.ನರಸೀಪುರ ತಾಲೂಕಿಗೆ ಸುಸಜ್ಜಿತ ಕ್ರೀಡಾಂಗಣವಿಲ್ಲ ಎಂಬ ಬೇಡಿಕೆಯ ಮೇರೆಗೆ ಸರ್ಕಾರವು 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಇದಕ್ಕಾಗಿ ಪಟ್ಟಣದ ಹೃದಯಭಾಗದಲ್ಲಿರುವ ಕೆಎಸ್‌ಐಸಿ ರೇಷ್ಮೆ ಕಾರ್ಖಾನೆಯ ಆವರಣದ 5 ಎಕರೆ ಜಮೀನನ್ನು ಕಂದಾಯ ಇಲಾಖೆಯು ಇತ್ತೀಚೆಗಷ್ಟೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದೆ. ಆದರೆ, ಈ 5 ಎಕರೆ ಜಾಗವು ದಟ್ಟವಾದ ಮರಗಿಡಗಳಿಂದ ಕೂಡಿದ್ದು, ಕಿರು ಅರಣ್ಯದಂತಿದೆ. ಹಚ್ಚ ಹಸಿರಿನ ಭೂಮಿಯಲ್ಲಿರುವ ಕೆಎಸ್‌ಐಸಿ ಘಟಕದ ಆವರಣದೊಳಗಿರುವ 500ಕ್ಕೂ ಹೆಚ್ಚು ಮರಗಳನ್ನು ಕಡಿದು, ಕ್ರೀಡಾಂಗಣ ನಿರ್ಮಿಸುತ್ತಿರುವುದನ್ನು ವಿರೋಧಿಸಿ ಪರಿಸರಪ್ರೇಮಿಗಳು ಹೋರಾಟ ಆರಂಭಿಸಿದ್ದಾರೆ. ಮತ್ತೊಂದೆಡೆ ನಮಗೆ ಎಲ್ಲಿಯಾದರೂ ಸರಿ ಕ್ರೀಡಾಂಗಣ ಬೇಕು ಎಂದು ಕ್ರೀಡಾಪಟುಗಳು ಪಟ್ಟು ಹಿಡಿದಿದ್ದಾರೆ.
ಮರಗಳು ಇರಲೇಬೇಕೆಂಬ ನಿಯಮ
ಕೆಎಸ್‌ಐಸಿ ಹೆಸರಿನಲ್ಲಿ ಒಟ್ಟು 13.5 ಎಕರೆ ಭೂಮಿ ಟಿ.ನರಸೀಪುರದಲ್ಲಿದೆ. ಇಲ್ಲಿನ ಫಿಲೇಚೆರಿ ಘಟಕದಲ್ಲಿನ ಬಾಯ್ಲರ್‌ಗಳಲ್ಲಿನ ಬಿಸಿನೀರಿನಲ್ಲಿ ರೇಷ್ಮೆ ಗೂಡು ಹಾಕಿ, ನೂಲು ತೆಗೆಯಬೇಕು. ಇದಕ್ಕಾಗಿ ಕಲ್ಲಿದ್ದಲು ಬಳಕೆ ಮಾಡಬೇಕು. ಹೀಗಾಗಿ, ಇಲ್ಲಿನ ಕಾರ್ಮಿಕರಿಗೆ ಸಿಂಡರ್ ಆಷ್ (Cinder Ash - ಕಲ್ಲಿದ್ದಲು ಬೂದಿ)ನಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಿಂಡರ್ ಆಷ್ ಅತ್ಯಂತ ಸೂಕ್ಷ್ಮವಾದ ಕಣಗಳನ್ನು ಹೊಂದಿರುತ್ತದೆ. ಗಾಳಿ ಬೀಸಿದಾಗ ಈ ಬೂದಿ ಹರಡಿ, ಉಸಿರಾಟದ ಮೂಲಕ ಶ್ವಾಸಕೋಶವನ್ನು ಸೇರುತ್ತದೆ. ಇದರಿಂದ ಅಸ್ತಮಾ ಮತ್ತು ಬ್ರಾಂಕೈಟಿಸ್ ಸಮಸ್ಯೆ ಉಂಟಾಗುತ್ತದೆ. ಕಲ್ಲಿದ್ದಲು ಬೂದಿಯಲ್ಲಿರುವ ಸಿಲಿಕಾ ಅಂಶವು ಶ್ವಾಸಕೋಶಕ್ಕೆ ಹಾನಿ ಮಾಡಬಹುದು. ಬೂದಿ ಕಣಗಳು ಕಣ್ಣಿಗೆ ಬಿದ್ದಾಗ ಕಣ್ಣು ಉರಿ, ನೀರು ಬರುವುದು ಮತ್ತು ಕೆಂಪಾಗುವ ಸಾಧ್ಯತೆ ಇರುತ್ತದೆ. ಚರ್ಮದ ಮೇಲೆ ಈ ಧೂಳು ಕುಳಿತಾಗ ತುರಿಕೆ ಅಥವಾ ಅಲರ್ಜಿ ಉಂಟಾಗಬಹುದು.ಮರಗಳ ಮಾರಣ ಹೋಮ
ಕೆಎಸ್‌ಐಸಿಗೆ ಸೇರಿದ ಐದು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಸಂಬಂಧ ನಾಲ್ಕು ದಿನದ ಹಿಂದಷ್ಟೇ ಟಿ.ನರಸೀಪುರ ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಅವರು ಈ ಭೂಮಿಯ ಹಕ್ಕುಪತ್ರವನ್ನು ಅಧಿಕೃತವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಉದ್ದೇಶಿತ 5 ಎಕರೆ ಜಾಗದಲ್ಲಿ ಸುಮಾರು 552 ಮರಗಳಿವೆ. ಇವುಗಳಲ್ಲಿ ತೇಗ, ಶ್ರೀಗಂಧ, ತೆಂಗು, ಹುಣಸೆ ಮತ್ತು ದಶಕಗಳ ಹಳೆಯದಾದ ಅರಳಿ ಮರಗಳು ಸೇರಿವೆ. ಕ್ರೀಡಾಂಗಣ ನಿರ್ಮಾಣಕ್ಕಾಗಿ ಈ ಮರಗಳನ್ನು ಧರೆಗುರುಳಿಸುವುದು ಪರಿಸರಕ್ಕೆ ದೊಡ್ಡ ಹಾನಿ ಉಂಟು ಮಾಡುತ್ತದೆ ಎಂಬುದು ಪರಿಸರ ಪ್ರೇಮಿಗಳ ಆತಂಕ.
ಈ ಆವರಣದಲ್ಲಿ 40ಕ್ಕೂ ಹೆಚ್ಚು ಪಕ್ಷಿ ಸಂಕುಲಗಳು ಮತ್ತು 30ಕ್ಕೂ ಹೆಚ್ಚು ತಳಿಯ ಚಿಟ್ಟೆಗಳು ವಾಸಿಸುತ್ತಿವೆ ಎಂದು ಸಮೀಕ್ಷೆಗಳು ತಿಳಿಸಿವೆ. ಹೀಗಾಗಿ, ಕ್ರೀಡಾಂಗಣದ ನೆಪದಲ್ಲಿ ಮರಗಳ ಮಾರಣಹೋಮ ನಡೆಸಿದರೆ, ಇಲ್ಲಿನ ಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಇಲ್ಲಿನ ಪಕ್ಷಿಸಂಕುಲಗಳ ಆವಾಸ ಸ್ಥಾನವನ್ನೇ ಕಸಿದುಕೊಳ್ಳಲಿದೆ ಎನ್ನುವುದು ಪರಿಸರ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿದೆ.
ಕೆಎಸ್‌ಐಸಿ ಆವರಣದಲ್ಲಿನ ಕಿರು ಅರಣ್ಯದಲ್ಲಿ ಕಾಣಸಿಗುವ ವಿವಿಧ ಜಾತಿಯ ಪಕ್ಷಿ ಹಾಗೂ ಚಿಟ್ಟೆಗಳು
ಸರ್ಕಾರಕ್ಕೆ ಪತ್ರ
ಕೆಎಸ್‌ಐಸಿಗೆ ಸೇರಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವುದರಿಂದ ಮರಗಳ ಮಾರಣಹೋಮ ನಡೆಯುತ್ತದೆ. ಇದರಿಂದಾಗಿ ರೇಷ್ಮೆಗೂ ಸಂಕಷ್ಟ ಎದುರಾಗಲಿದೆ. ರೇಷ್ಮೆ ನೂಲಿಗೆ ಧೂಳು ಕುಳಿತರೆ, ರೇಷ್ಮೆ ಗುಣಮಟ್ಟ ಕಡಿಮೆಯಾಗಲಿದ್ದು, ರೇಷ್ಮೆ ಸೀರೆ ತಯಾರಿಕೆಗೆ ಹೊಡೆತ ಬೀಳಲಿದೆ ಎನ್ನುವ ಬಗ್ಗೆ ಕೆಎಸ್‌ಐಸಿ ವ್ಯವಸ್ಥಾಪಕ ನಿರ್ದೇಶಕಿ ಜೆಹೆರಾ ನಸೀಮ್ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.
ಉದ್ದೇಶಿತ ಕ್ರೀಡಾಂಗಣಕ್ಕಾಗಿ ಮರಗಳನ್ನು ಕಡಿದರೆ ಅಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಲಿದೆ. ಈ ಧೂಳು ರೇಷ್ಮೆ ನೂಲಿನ ಮೇಲೆ ಕುಳಿತರೆ ಅದರ ಹೊಳಪು ಮತ್ತು ಗುಣಮಟ್ಟ ಕುಸಿಯುತ್ತದೆ. ಇದು ವಿಶ್ವವಿಖ್ಯಾತ 'ಮೈಸೂರು ಸಿಲ್ಕ್' ಸೀರೆಗಳ ತಯಾರಿಕೆಯ ಮೇಲೆ ನೇರ ಪರಿಣಾಮ ಬೀರಲಿದೆ. ಗುಣಮಟ್ಟದ ನೂಲು ಸಿಗದಿದ್ದರೆ ಸೀರೆಗಳ ತಯಾರಿಕೆ ಮತ್ತು ಮಾರಾಟಕ್ಕೆ ದೊಡ್ಡ ಹೊಡೆತ ಬೀಳಲಿದ್ದು, ಸಂಸ್ಥೆಯ ಆರ್ಥಿಕ ಸ್ಥಿತಿಗತಿಯ ಮೇಲೆಯೂ ಪ್ರಭಾವ ಬೀರಬಹುದು. ನೂಲು ಬಿಚ್ಚುವ ಘಟಕಗಳಲ್ಲಿ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಶೇ. 33ರಷ್ಟು ಪ್ರದೇಶದಲ್ಲಿ ಮರಗಳಿರಬೇಕೆಂಬ ನಿಯಮವಿದೆ. ಕ್ರೀಡಾಂಗಣಕ್ಕಾಗಿ 500ಕ್ಕೂ ಹೆಚ್ಚು ಮರಗಳನ್ನು ಕಡಿಯುವುದು ಈ ನಿಯಮದ ಉಲ್ಲಂಘನೆಯಾಗಲಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗಿದ್ದರೂ, ಸರ್ಕಾರ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ಲಾಭದಲ್ಲಿದೆ ಸಂಸ್ಥೆ
ರೇಷ್ಮೆ ನೂಲು ಬಿಚ್ಚುವ ಈ ಕೇಂದ್ರ ಲಾಭದಲ್ಲಿದೆ. 2020ನೇ ಸಾಲಿನಲ್ಲಿ ಇದಕ್ಕಾಗಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದಿದ್ದ ಈ ಘಟಕದ ಆವರಣದಲ್ಲಿನ ಮರಗಳನ್ನು ಕಡಿದು, ಕ್ರೀಡಾಂಗಣ ಮಾಡುವುದರಿಂದ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ ಘಟಕವನ್ನು ಸಂಪೂರ್ಣವಾಗಿ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪವು ಪ್ರತಿಭಟನಾಕಾರರಿಂದ ಕೇಳಿಬಂದಿದೆ. ಈ ಕ್ರೀಡಾಂಗಣ ವಿರೋಧಿಸಿ ಕೊಳ್ಳೆಗಾಲ ಕ್ಷೇತ್ರದ ಮಾಜಿ ಶಾಸಕ ಎನ್.ಮಹೇಶ್ ಸಹ ಹೋರಾಟ ಆರಂಭಿಸಿದ್ದಾರೆ.ಇಲ್ಲಿನ "ಮರಗಳನ್ನು ಕಡಿಯದೆ ಪರಿಸರ ಸ್ನೇಹಿ ಕ್ರೀಡಾಂಗಣ ನಿರ್ಮಿಸಲಾಗುವುದು" ಎಂದು ಹೇಳುತ್ತಿದ್ದಾರೆ. ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಬ್ಯಾಸ್ಕೆಟ್‌ಬಾಲ್, ವಾಲಿಬಾಲ್ ಮತ್ತು ಖೋ-ಖೋ ಮೈದಾನಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಪರಿಸರ ಸ್ನೇಹಿ ಕ್ರೀಡಾಂಗಣಕ್ಕೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ. ಆದರೆ, ಮರಗಳನ್ನು ಕಡಿಯದೆ ಕ್ರೀಡಾಂಗಣ ನಿರ್ಮಿಸಲು ಸಾಧ್ಯವೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಈ ಬಗ್ಗೆ 'ಪರಿಸರಕ್ಕಾಗಿ ನಾವು' ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ಮಹಾರಾಜರು ಕಟ್ಟಿರುವ ರೇಷ್ಮೆ ನೂಲು ಬಿಚ್ಚುವ ಘಟಕವನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಲಾಗುತ್ತಿದೆ. ಇಲ್ಲಿ ಐದು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವುದರಿಂದ 500ಕ್ಕೂ ಹೆಚ್ಚು ಮರಗಳು ನಾಶಗೊಳ್ಳುತ್ತವೆ. ಈ ಜೀವವೈವಿಧ್ಯವನ್ನು ಸಂಪೂರ್ಣವಾಗಿ ನಾಶಪಡಿಸಲು ಕೊಡಲಿ ಸಿದ್ಧವಾಗಿದೆ. ಉದ್ಯಮ ನಷ್ಟಕ್ಕೀಡಾದರೆ ನೂರಾರು ಕುಟುಂಬಗಳ ಜೀವನೋಪಾಯಕ್ಕೆ ಧಕ್ಕೆ ಬರಲಿದೆ. ಈ ಮರಗಳನ್ನೇ ನಂಬಿರುವ ಪಕ್ಷಿ ಸಂಕುಲಗಳು ಎಲ್ಲಿಗೆ ಹೋಗಬೇಕು?" ಎಂದು ಪ್ರಶ್ನಿಸಿದ್ದಾರೆ.
"ಅಭಿವೃದ್ಧಿ ಎಂದರೆ ವಿನಾಶವಲ್ಲ. ಸರ್ಕಾರಕ್ಕೆ ಕ್ರೀಡೆಯ ಬಗ್ಗೆ ಕಾಳಜಿ ಇದ್ದರೆ ಬಂಜರು ಭೂಮಿಯನ್ನು ಬಳಸಿಕೊಳ್ಳಲಿ. ಜೀವಂತ ಮರಗಳನ್ನು ಕಡಿದು ಕ್ರೀಡಾಂಗಣ ನಿರ್ಮಿಸುವುದು ಪರಿಸರಕ್ಕೆ ಮಾಡುವ ದ್ರೋಹ. ಮೈಸೂರು ನಗರದಾದ್ಯಂತ ಮರಗಳ ಗಣತಿ (Tree Audit) ನಡೆಸಿ, ಹಳೆಯ ಮರಗಳನ್ನು ಪಾರಂಪರಿಕ ಮರಗಳೆಂದು ಘೋಷಿಸಬೇಕು" ಎಂದು ಒತ್ತಾಯಿಸಿದರು.
ಹಿಂದೆಯೂ ಮರಗಳಿಗೆ ಕೊಡಲಿ ಹಾಕಲಾಗಿತ್ತು
ಸಾಂಸ್ಕೃತಿಕ ನಗರಿ, ನಿವೃತ್ತರ ಸ್ವರ್ಗವಾಗಿರುವ ಮೈಸೂರಿನಲ್ಲಿ ಮರಗಳ ಮಾರಣಹೋಮ ಅನೇಕ ಬಾರಿ ನಡೆದಿತ್ತು. ಮೈಸೂರಿನ ಔಟರ್ ರಿಂಗ್ ರಸ್ತೆಯ ದೇವಲಾಪುರ ಜಂಕ್ಷನ್ ಬಳಿ ಫ್ಲೈ ಓವರ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ವಿಭಾಗವು 48 ಮರಗಳನ್ನು ಕಡಿಯಲು ಮುಂದಾಗಿದೆ.
ಕಳೆದ ವರ್ಷದಿಂದಲೂ ಚರ್ಚೆಯಲ್ಲಿರುವ ಹೈದರ್ ಅಲಿ ರಸ್ತೆಯ ವಿಸ್ತರಣೆಗಾಗಿ ಈಗಾಗಲೇ 40ಕ್ಕೂ ಹೆಚ್ಚು ಬೃಹತ್ ಮರಗಳನ್ನು ಕಡಿಯಲಾಗಿದೆ. ರಾತ್ರೋರಾತ್ರಿ ಮರಗಳನ್ನು ಕಡಿದು ಹಾಕಿದ್ದನ್ನು ಖಂಡಿಸಿ 'ಪರಿಸರಕ್ಕಾಗಿ ನಾವು' ಮತ್ತು 'ಗಂಧದಗುಡಿ ಫೌಂಡೇಶನ್' ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಮೇಲೆ ನಡೆಯುತ್ತಿರುವ ಕಾಮಗಾರಿಗಳು ಹಾಗೂ ರಸ್ತೆ ವಿಸ್ತರಣೆ ಯೋಜನೆಗಳಿಂದಾಗಿ ಬೆಟ್ಟದ ಹಸಿರು ಹೊದಿಕೆ ನಾಶವಾಗುತ್ತಿದೆ ಎಂದು 'ಮೈಸೂರು ಗ್ರಾಹಕರ ಪರಿಷತ್' ಮತ್ತು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

