Student Elections in Karnataka| ಹಲವು ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ಇನ್ನೂ ಸಿಕ್ಕಿಲ್ಲ ಗ್ರೀನ್ ಸಿಗ್ನಲ್
x
ಭಾರತದಲ್ಲಿರುವ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ವಿದ್ಯಾರ್ಥಿ ಸಂಘಗಳಿಗೆ ನಡೆಯಬೇಕಾದ ಚುನಾವಣೆಗಳನ್ನು ಅನಿರ್ದಿಷ್ಟ ಕಾಲದಿಂದ ಸ್ಥಗಿತಗೊಳಿಸಿವೆ ಅಥವಾ ಪರ್ಯಾಯ ಮಂಡಳಿಗಳನ್ನು ರಚಿಸಿವೆ.

Student Elections in Karnataka| ಹಲವು ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ಇನ್ನೂ ಸಿಕ್ಕಿಲ್ಲ ಗ್ರೀನ್ ಸಿಗ್ನಲ್

ವಿದ್ಯಾರ್ಥಿ ಸಂಘಗಳ ಚುನಾವಣೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಇತ್ತೀಚೆಗೆ ನೀಡಿದ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದೆ. ದೇಶದ ಅನೇಕ ವಿಶ್ವವಿದ್ಯಾಲಯಗಳು ಈಗಲೂ ವಿದ್ಯಾರ್ಥಿ ಚುನಾವಣೆಗೆ ಮೀನಾ-ಮೇಷ ಎಣಿಸುತ್ತಿವೆ.


ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಹೊರಡಿಸಿದ ಘೋಷಣೆಯಿಂದಾಗಿ ಭಾರತದಲ್ಲಿ ಕ್ಯಾಂಪಸ್ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ಮುನ್ನೆಲೆಗೆ ತಂದಂತಾಗಿದೆ.

ಹತ್ತು-ಹಲವು ವಿಶ್ವವಿದ್ಯಾಲಯಗಳು ನಿಯಮಿತವಾಗಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸುತ್ತ ಬಂದಿದ್ದರೆ ಭಾರತದ ಅನೇಕ ಪ್ರಮುಖ ಕ್ಯಾಂಪಸ್‌ಗಳು ವರ್ಷಗಳಿಂದ ಚುನಾವಣೆಗಳನ್ನೇ ಸ್ಥಗಿತಗೊಳಿಸಿವೆ ಅಥವಾ ಅವುಗಳ ಬದಲಿಗೆ ಪರ್ಯಾಯ ಪ್ರಾತಿನಿಧಿಕ ವ್ಯವಸ್ಥೆಗಳನ್ನು ಜಾರಿಗೆ ತಂದಿವೆ.

ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಲು ಚುನಾಯಿತ ಸಂಘಗಳು ಅತ್ಯಗತ್ಯ ಎಂದು ವಿದ್ಯಾರ್ಥಿ ಸಂಘಟನೆಗಳು ಮತ್ತೆ ಮತ್ತೆ ವಾದಿಸುತ್ತ ಬಂದಿವೆ. ಕ್ಯಾಂಪಸ್ ಚುನಾವಣೆಗಳನ್ನು ನಡೆಸುವ ವಿಚಾರದಲ್ಲಿ ಮಾರ್ಗಸೂಚಿಗಳನ್ನು ರೂಪಿಸಿದ ಲಿಂಗಡೋ ಸಮಿತಿಯ ಶಿಫಾರಸುಗಳನ್ನು ಅವು ಉಲ್ಲೇಖಿಸುತ್ತಿವೆ.

ಹಾಗಿದ್ದೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ, ಅಲಹಾಬಾದ್ ವಿಶ್ವವಿದ್ಯಾಲಯ, ರಾಜಸ್ಥಾನ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಹಾಗೂ ಲಕ್ನೋ ವಿಶ್ವವಿದ್ಯಾಲಯವೂ ಸೇರಿದಂತೆ ರಾಷ್ಟ್ರದ ಅನೇಕ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳು ಸ್ಥಗಿತಗೊಂಡಿವೆ.

ಈ ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿ ರಾಜಕಾರಣದ ಇತಿಹಾಸ ಹಾಗೂ ಅವುಗಳ ಕೊನೆಯ ಚುನಾವಣೆಗಳು ಯಾವಾಗ ನಡೆದವು ಎಂಬುದರ ಕಡೆಗೆ ಒಂದು ಅವಲೋಕನವನ್ನು ಇಲ್ಲಿ ನೀಡಲಾಗಿದೆ:

ಬನಾರಸ್ ಹಿಂದೂ ವಿಶ್ವವಿದ್ಯಾಲಯ

ವಿದ್ಯಾರ್ಥಿ ರಾಜಕಾರಣದ ರೋಚಕ ಸಂಪ್ರದಾಯವನ್ನು ಈ ವಿಶ್ವವಿದ್ಯಾಯ ಹೊಂದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಸಮಾಜವಾದಿ ಛಾತ್ರ ಸಭಾ (ಎಸ್ಸಿಎಸ್) ಮತ್ತು ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ)ದಂತಹ ರಾಷ್ಟ್ರೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ವಿದ್ಯಾರ್ಥಿ ಸಂಘಟನೆಗಳು ಇಲ್ಲಿ ಸಕ್ರಿಯವಾಗಿವೆ. ಆದರೂ ಬನಾರಸ್ ಹಿಂದೂ ವಿಶ್ವವಿದ್ಯಾಲಯವು 1990ರ ದಶಕದ ಅಂತ್ಯದಿಂದಲೂ ತನ್ನ ವಿದ್ಯಾರ್ಥಿ ಸಂಘಕ್ಕೆ ಚುನಾವಣೆಗಳನ್ನು ನಡೆಸಿಲ್ಲ. "ಕೊನೆಯ ವಿದ್ಯಾರ್ಥಿ ಸಂಘದ ಚುನಾವಣೆ ನಡೆದದ್ದು 1996ರಲ್ಲಿ. 1997ರಲ್ಲಿ ಚುನಾವಣೆ ನಡೆಸಲು ಘೋಷಣೆ ಮಾಡಲಾಯಿತು, ಆದರೆ ಹಿಂಸಾಚಾರದ ಘಟನೆಯ ನಂತರ ವಿಶ್ವವಿದ್ಯಾಲಯವನ್ನು ಅನಿರ್ದಿಷ್ಟಾವಧಿ ತನಕ ಮುಚ್ಚಲಾಯಿತು," ಎಂದು BHUನ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್ಎ) ಕಾರ್ಯಕರ್ತ ರೋಷನ್ ಪಾಂಡೆ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ, ನೇರ ಚುನಾವಣೆಗಳನ್ನು ಪುನರಾರಂಭಿಸಬೇಕೆಂದು ವಿದ್ಯಾರ್ಥಿ ಸಂಘಟನೆಗಳಿಂದ ಬೇಡಿಕೆಗಳು ಬರುತ್ತಲೇ ಇವೆ. ಆದರೆ ಸಂಘವನ್ನು ಪುನಶ್ಚೇತನಗೊಳಿಸುವ ಬದಲು, ವಿಶ್ವವಿದ್ಯಾಲಯವು 'ವಿದ್ಯಾರ್ಥಿ ಮಂಡಳಿ'ಗಳಂತಹ ಪರ್ಯಾಯ ಪ್ರಾತಿನಿಧಿಕ ವ್ಯವಸ್ಥೆಗಳೊಂದಿಗೆ ಪ್ರಯೋಗ ನಡೆಸಿದೆ. ಈ ವ್ಯವಸ್ಥೆಗಳು ನೇರವಾಗಿ ಚುನಾಯಿತಗೊಂಡ ಸಂಸ್ಥೆಗಳಿಗಿರುವಂತಹ ಮಾನ್ಯತೆಯನ್ನು ಹೊಂದಿಲ್ಲ ಎಂದು ವಿಶ್ಲೇಷಕರು ವಾದಿಸುತ್ತಾರೆ. "2011ರಲ್ಲಿ ವಿದ್ಯಾರ್ಥಿ ಮಂಡಳಿಯ ಚುನಾವಣೆಗಳನ್ನು ಘೋಷಿಸಲಾಯಿತು, ಆದರೆ ಅವು ಕೇವಲ ಒಂದು ವರ್ಷ ಮಾತ್ರ ಉಳಿದವು. ಅದಾದ ನಂತರ 2014ರಲ್ಲಿಯೂ ಮಂಡಳಿಯ ಚುನಾವಣೆಗಳನ್ನು ಘೋಷಿಸಲಾಯಿತು, ಆದರೆ ಮತ್ತೆ ಹಿಂಸಾಚಾರದ ನೆಪವೊಡ್ಡಿ ಚುನಾವಣೆಗಳನ್ನು ನಡೆಸಲಿಲ್ಲ. ಅಂದಿನಿಂದ ಯಾವುದೇ ರೀತಿಯ ಚುನಾವಣೆಗಳು ನಡೆದಿಲ್ಲ," ಎಂದು ಪಾಂಡೆ ವಿವರಿಸಿದ್ದಾರೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು (AMUSU) ಭಾರತದ ಅತ್ಯಂತ ಹಳೆಯ ವಿದ್ಯಾರ್ಥಿ ಸಂಘಗಳಲ್ಲಿ ಒಂದಾಗಿದ್ದು, ಐತಿಹಾಸಿಕವಾಗಿ ಕ್ಯಾಂಪಸ್ ಜೀವನದಲ್ಲಿ ಅದರ ಪಾತ್ರ ಮಹತ್ವದ್ದು. ಇಲ್ಲಿನ ಪದಾಧಿಕಾರಿಗಳನ್ನು ನೇರ ಚುನಾವಣೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಸಾಮಾನ್ಯವಾಗಿ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಗಳ ಅಧಿಕೃತ ನಾಮನಿರ್ದೇಶಿತರಾಗಿ ಸ್ಪರ್ಧಿಸುವುದಕ್ಕೆ ಬದಲು ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ; ಆದರೆ ಗೆದ್ದ ನಂತರ ಯಾವುದಾದರೂ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು ಸಾಮಾನ್ಯ.

ಈ ಸಂಘವನ್ನು ವಿಶ್ವವಿದ್ಯಾಲಯದ ಒಳಗಿನ ವಿದ್ಯಾರ್ಥಿ ನಾಯಕತ್ವಕ್ಕೆ ಒಂದು ಪ್ರಭಾವಶಾಲಿ ವೇದಿಕೆಯೆಂದು ದೀರ್ಘಕಾಲದಿಂದ ಪರಿಗಣಿಸಲಾಗಿದೆ. ಕ್ಯಾಂಪಸ್ನಲ್ಲಿನ ಉದ್ವಿಗ್ನತೆ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಆಡಳಿತಾತ್ಮಕ ಕಾಳಜಿಗಳಿಂದಾಗಿ 2018-19ರ ನಂತರ AMUನಲ್ಲಿ ಚುನಾವಣೆಗಳು ನಡೆದಿಲ್ಲ. "ಸಂಘವನ್ನು ಪುನಶ್ಚೇತನಗೊಳಿಸುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಇತ್ತೀಚೆಗೆ ಉಪವಾಸ ಸತ್ಯಾಗ್ರಹವನ್ನೂ ನಡೆಸಲಾಗಿತ್ತು. ಅದರ ನಂತರ ಚುನಾವಣೆ ನಡೆಸುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ, ಈಗ ವಾತಾವರಣವು ಚುನಾವಣೆ ನಡೆಸಲು ಪೂರಕವಾಗಿಲ್ಲ ಎಂದು ಹೇಳುವ ಮೂಲಕ ಅವರು ಮತ್ತೊಮ್ಮೆ ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ," ಎಂದು NSUI ರಾಜ್ಯ ಸಮಿತಿ ಸದಸ್ಯ ಮೊಹಮ್ಮದ್ ರೆಹಾನ್ ಹೇಳಿದ್ದಾರೆ.

ಅಲಹಾಬಾದ್ ವಿಶ್ವವಿದ್ಯಾಲಯ

ಐತಿಹಾಸಿಕವಾಗಿ ಉತ್ತರ ಭಾರತದಲ್ಲಿ ರಾಜಕೀಯವಾಗಿ ಅತ್ಯಂತ ಸಕ್ರಿಯವಾಗಿರುವ ಕ್ಯಾಂಪಸ್ಗಳಲ್ಲಿ ಒಂದು ಅಲಹಾಬಾದ್ ವಿಶ್ವವಿದ್ಯಾಲಯ. ಇದು ಇತ್ತೀಚಿನ ದಶಕಗಳಲ್ಲಿ ಹಲವಾರು ಪ್ರಮುಖ ರಾಜಕೀಯ ನಾಯಕರನ್ನು ನೀಡಿದೆ. ಮಾಜಿ ಪ್ರಧಾನಿ ಚಂದ್ರಶೇಖರ್ ಮತ್ತು ವಿ.ಪಿ. ಸಿಂಗ್ ಇಬ್ಬರೂ ಈ ವಿಶ್ವವಿದ್ಯಾಲಯದ ವಿದ್ಯಾರ್ಥಿ ರಾಜಕಾರಣದೊಂದಿಗೆ ಸಂಬಂಧ ಹೊಂದಿದ್ದರು. ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವನ್ನು ಹೆಚ್ಚಾಗಿ ಮುಖ್ಯವಾಹಿನಿಯ ರಾಜಕೀಯದ ತರಬೇತಿ ಮೈದಾನವೆಂದು ನೋಡಲಾಗುತ್ತದೆ.

ಕ್ಯಾಂಪಸ್ನಲ್ಲಿ ಉಂಟಾಗಿರುವ ಅಶಾಂತಿ ಅಥವಾ ಆಡಳಿತಾತ್ಮಕ ನಿರ್ಧಾರಗಳಿಂದಾಗಿ ಚುನಾವಣೆಗಳನ್ನು ಕೆಲಕಾಲದ ಮಟ್ಟಿಗೆ ಸ್ಥಗಿತಗೊಳಿಸಲಾಗಿದ್ದರೂ, ಹಿಂದೆ ಹಲವು ಬಾರಿ ಅವುಗಳನ್ನು ಪುನರಾರಂಭಿಸಲಾಗಿತ್ತು. "ವಿದ್ಯಾರ್ಥಿ ಸಂಘದ ಇತ್ತೀಚಿನ ಚುನಾವಣೆಗಳು 2018 ರಲ್ಲಿ ನಡೆದವು, ಆಗ ಸಮಾಜವಾದಿ ಛಾತ್ರ ಸಭಾ (SCS) ಜಯಗಳಿಸಿತ್ತು. ಅದು ನಂತರ ಹೈಕೋರ್ಟ್ ಮೆಟ್ಟಿಲೇರಿತ್ತು, ಆದರೆ ವಿಶ್ವವಿದ್ಯಾಲಯದ ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಯ ಕಳಕಳಿಯನ್ನು ಮುಂದಿಟ್ಟು ಚುನಾವಣೆ ನಡೆಸಲು ನಿರಾಕರಿಸಿದರು. ಮತ್ತೆ ಚುನಾವಣೆ ನಡೆಯುವಂತೆ ಮಾಡಲು ನಿರಂತರ ಚಳವಳಿಗಳು ನಡೆದಿವೆ, ಆದರೆ ವಿಶ್ವವಿದ್ಯಾಲಯವು ಇದಕ್ಕೆ ಒಪ್ಪಿಗೆ ನೀಡಿಲ್ಲ," ಎಂದು ಎನ್ಎಸ್ಯುಐನ ಅಲಹಾಬಾದ್ ವಿವಿ ಯುನಿಟ್ ಅಧ್ಯಕ್ಷ ಸೌರಭ್ ಸಿಂಗ್ ಹೇಳಿದ್ದಾರೆ.

ರಾಜಸ್ಥಾನ ವಿಶ್ವವಿದ್ಯಾಲಯ

ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯವು ದೀರ್ಘಕಾಲದಿಂದ ರಾಜ್ಯದ ವಿದ್ಯಾರ್ಥಿ ರಾಜಕಾರಣದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ರಾಜಸ್ಥಾನ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಆರ್.ಯು.ಎಸ್.ಯು) ಚುನಾವಣೆಗಳು ಸಾಮಾನ್ಯವಾಗಿ ಎಬಿವಿಪಿ ಮತ್ತು ಎನ್ಎಸ್ಯುಐನಂತಹ ಪ್ರಮುಖ ವಿದ್ಯಾರ್ಥಿ ಸಂಘಟನೆಗಳ ನಡುವೆ ತೀವ್ರ ಪೈಪೋಟಿಗೆ ಸಾಕ್ಷಿಯಾಗುತ್ತವೆ. ಈ ಚುನಾವಣೆಗಳು ಸಾಂಪ್ರದಾಯಿಕವಾಗಿ ಪ್ರತಿವರ್ಷ ನಡೆಯುತ್ತಿದ್ದವು ಮತ್ತು ರಾಜ್ಯ ರಾಜಕಾರಣದಲ್ಲಿ ಇವುಗಳನ್ನು ಬಹಳ ಹತ್ತಿರದಿಂದ ಗಮನಿಸಲಾಗುತ್ತಿತ್ತು.

ಆದರೆ, ಕೊನೆಯ ಚುನಾವಣೆಗಳು 2022 ರಲ್ಲಿ ನಡೆದವು, ಆಗ ಸ್ವತಂತ್ರ ಅಭ್ಯರ್ಥಿಯೊಬ್ಬರು (ಈಗ ಎನ್ಎಸ್ಯುಐ ನಾಯಕ) ಜಯಗಳಿಸಿದ್ದರು. "ಅಂದಿನಿಂದ ವಿಶ್ವವಿದ್ಯಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ಅಳವಡಿಸಿಕೊಳ್ಳುವ ನೆಪವೊಡ್ಡಿ ಚುನಾವಣೆಗಳನ್ನು ನಡೆಸಿಲ್ಲ. ಆರಂಭದಲ್ಲಿ, 2023ರಲ್ಲಿ ಚುನಾವಣೆಗಳನ್ನು ಮುಂದೂಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಅವುಗಳನ್ನು ಎಂದಿಗೂ ನಡೆಸಲಿಲ್ಲ ಮತ್ತು ಅಂದಿನಿಂದ ಚುನಾವಣೆಗಳು ನಡೆದಿಲ್ಲ, ಏಕೆಂದರೆ ಚುನಾವಣೆ ನಡೆಸುವುದರಿಂದ ಎನ್ಇಪಿ ಅನುಷ್ಠಾನಕ್ಕೆ ಅಡ್ಡಿಯಾಗುತ್ತದೆ ಎಂದು ಆಡಳಿತ ಮಂಡಳಿ ಹೇಳುತ್ತಿದೆ," ಎಂದು ಎನ್ಎಸ್ಯುಐ ಕಾರ್ಯಕರ್ತ ವಿಜಯಪಾಲ್ ಕುನ್ ತಿಳಿಸಿದ್ದಾರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ

ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಸುಮಾರು ಎರಡು ದಶಕಗಳಿಂದ ಸ್ಥಗಿತಗೊಳಿಸಲಾಗಿದೆ, ಇದು ಭಾರತದ ಪ್ರಮುಖ ವಿಶ್ವವಿದ್ಯಾಲಯಗಳಲ್ಲೇ ಸುದೀರ್ಘ ಅವಧಿಯ ಅಂತರವಾಗಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಸಂಘವು ಕೊನೆಯ ಬಾರಿಗೆ 2001ರಲ್ಲಿ ಚುನಾವಣೆಗಳನ್ನು ನಡೆಸಿತ್ತು. ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪದ ನಂತರ, ಕ್ಯಾಂಪಸ್ನಲ್ಲಿ ಉಂಟಾಗುವ ಅಶಾಂತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಆಡಳಿತ ಮಂಡಳಿಯು ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತು.

2017ರಲ್ಲಿ ತಾತ್ವಿಕವಾಗಿ ಒಪ್ಪಿಕೊಂಡಿದ್ದರೂ ಕೂಡ ವಿಶ್ವವಿದ್ಯಾಲಯವು ಅಂದಿನಿಂದ ಸಂಘದ ರಚನೆಯನ್ನು ಪುನಃಸ್ಥಾಪಿಸಿಲ್ಲ. ಚುನಾವಣೆಗಳ ನಡೆಯದೇ ಇರುವುದರಿಂದ ಕ್ಯಾಂಪಸ್ ಸಮಸ್ಯೆಗಳನ್ನು ಮುನ್ನೆಲೆಗೆ ತರಲು ವಿದ್ಯಾರ್ಥಿಗಳಿಗೆ ಒಂದು ಪ್ರಾತಿನಿಧಿಕ ವೇದಿಕೆಯಿಲ್ಲದಂತಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಮತ್ತು ಕಾರ್ಯಕರ್ತರು ಪದೇ ಪದೇ ಒತ್ತಾಯಿಸುತ್ತಿದ್ದಾರೆ. "ಇತ್ತೀಚಿನ ದಿನಗಳಲ್ಲಿ ಈ ಬೇಡಿಕೆಯನ್ನು ಹಲವು ಬಾರಿ ಪ್ರಸ್ತಾಪ ಮಾಡಲಾಗಿದೆ. ಇದೇ ವಿಚಾರವಾಗಿ ಕಳೆದ ವರ್ಷ 17 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿತ್ತು," ಎಂದು ಜಾಮಿಯಾ ವಿದ್ಯಾರ್ಥಿ ರೋಷನ್ ಅಬ್ಬಾಸ್ ತಿಳಿಸಿದ್ದಾರೆ.

ಲಕ್ನೋ ವಿಶ್ವವಿದ್ಯಾಲಯ

ಲಕ್ನೋ ವಿಶ್ವವಿದ್ಯಾಲಯವು ವಿದ್ಯಾರ್ಥಿ ರಾಜಕಾರಣದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಲಕ್ನೋ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು (ಎಲ್ಯುಎಸ್ಯು) ಐತಿಹಾಸಿಕವಾಗಿ ಉತ್ತರ ಪ್ರದೇಶದ ಮುಖ್ಯವಾಹಿನಿಯ ರಾಜಕೀಯಕ್ಕೆ ಪ್ರವೇಶಿಸಿದ ನಾಯಕರಿಗೆ ವೇದಿಕೆಯಾಗಿದೆ. ಆದರೂ, ಕಳೆದ ಎರಡು ದಶಕಗಳ ಅವಧಿಯಲ್ಲಿ ಈ ಸಂಘದ ಚುನಾವಣೆಗಳನ್ನು ದೀರ್ಘಕಾಲದವರೆಗೆ ಸ್ಥಗಿತಗೊಳಿಸಲಾಗಿದೆ.

ಸೆಪ್ಟೆಂಬರ್ 2005ರಲ್ಲಿ ಕೊನೆಯ ಬಾರಿಗೆ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿತ್ತು. ಅದಾದ ನಂತರ, ಕಾನೂನು ಸಂಬಂಧಿ ವಿವಾದಗಳು ಮತ್ತು ಕ್ಯಾಂಪಸ್ ಹಿಂಸಾಚಾರದ ಆತಂಕಗಳು ಚುನಾವಣಾ ಪ್ರಕ್ರಿಯೆ ದೀರ್ಘಕಾಲದಿಂದ ನಡೆಯದಂತೆ ಮಾಡಿದವು. “ಬೇರೆ ಕಡೆಯಂತೆ ಇಲ್ಲೂ ಕೂಡ ಚುನಾವಣೆಗಳನ್ನು ರದ್ದು ಮಾಡಲು ಅರಾಜಕ ವಾತಾವರಣವನ್ನೇ ಅಧಿಕೃತ ಕಾರಣವಾಗಿ ನೀಡಲಾಯಿತು. ಆದರೆ ಅಸಲಿ ವಿಷಯವೇನೆಂದರೆ, ಆಗ ಜಯಗಳಿಸಿದವರು ಸಮಾಜವಾದಿ ಛಾತ್ರ ಸಭಾ ಅಭ್ಯರ್ಥಿಗಳಾಗಿದ್ದರಿಂದ ಅದು ಅಂದಿನ ಬಿಎಸ್ಪಿ ಸರ್ಕಾರಕ್ಕೆ ಇಷ್ಟವಿರಲಿಲ್ಲ," ಎಂದು ಲಕ್ನೋ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜ್ಯೋತಿ ಕುಮಾರ್ ರೈ ಹೇಳಿದ್ದಾರೆ.

ಕರ್ನಾಟಕದಲ್ಲಿ ಆಗಿದ್ದೇನು?

ಕರ್ನಾಟಕದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳಿಗೆ 1989-90ರ ಅವಧಿಯಲ್ಲಿ ಕಡಿವಾಣ ಹಾಕಲಾಗಿತ್ತು ಆ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ ಬೆಂಗಳೂರಿನ ಕಾಲೇಜು ಕ್ಯಾಂಪಸ್‌ಗಳಲ್ಲಿ ಹಿಂಸಾಚಾರ ವರದಿಯಾದ ಬಳಿಕ ಕಾಲೇಜು ಕ್ಯಾಂಪಸ್ ಚುನಾವಣೆಗಳಿಗೆ ನಿಷೇಧ ಹೇರಿದ್ದರು. ಆ ಕಾಲಘಟ್ಟದಲ್ಲಿ ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ, ಗುಂಪು ಘರ್ಷಣೆಗಳು ಮತ್ತು ರಾಜಕೀಯ ಪಕ್ಷಗಳ ಅತಿಯಾದ ಹಸ್ತಕ್ಷೇಪದಿಂದಾಗಿ ಶೈಕ್ಷಣಿಕ ವಾತಾವರಣ ಹದಗೆಟ್ಟಿತ್ತು. ವಿದ್ಯಾರ್ಥಿ ಸಂಘಟನೆಗಳ ನಡುವಿನ ಸಂಘರ್ಷಗಳು ಕೆಲವೊಮ್ಮೆ ಹತ್ಯೆಯಲ್ಲಿಯೂ ಅಂತ್ಯವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಅಂದಿನ ಸರ್ಕಾರ ಚುನಾವಣೆಗಳನ್ನು ನಿಷೇಧಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿಗಿನ ಬಜೆಟ್ ಭಾಷಣದಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಚುನಾವಣೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಪ್ರಕಟಿಸುವ ಮೂಲಕ ಯುವ ಪೀಳಿಗೆಯಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳೇ ನಾಳೆಯ ದೇಶದ ನಾಯಕರು. ಕ್ಯಾಂಪಸ್ ಹಂತದಲ್ಲಿಯೇ ಚುನಾವಣೆ ಎದುರಿಸುವುದರಿಂದ ಅವರಿಗೆ ಸಾರ್ವಜನಿಕ ಜೀವನದ ಸವಾಲುಗಳು ಮತ್ತು ಜವಾಬ್ದಾರಿಗಳ ಅರಿವಾಗುತ್ತದೆ. ವಿದ್ಯಾರ್ಥಿ ಸಂಘಗಳು ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಸಂವಾದ ನಡೆಸಲು ಮತ್ತು ಹಕ್ಕುಗಳಿಗಾಗಿ ಹೋರಾಡಲು ಒಂದು ವೇದಿಕೆಯನ್ನು ಒದಗಿಸುತ್ತವೆ. ಮತದಾನದ ಮಹತ್ವ, ಆಯ್ಕೆಯ ಪ್ರಕ್ರಿಯೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಯುವಜನತೆಗೆ ಪ್ರಾಯೋಗಿಕವಾಗಿ ಕಲಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿ ಸಂಘಟನೆ ಮನವಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಲೇಜು ಕ್ಯಾಂಪಸ್‌ ಗಳಲ್ಲಿ ಚುನಾವಣೆಗಳನ್ನು ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಪತ್ರ ಬರೆದಿದ್ದರು. ರಾಹುಲ್‌ ಗಾಂಧಿ ಪತ್ರದ ಬಳಿಕ ಕಾಂಗ್ರೆಸ್ ಸರ್ಕಾರ ಚುನಾವಣೆ ನಡೆಸುವ ಚಿಂತನೆಗೆ ಮುಂದಾಗಿದೆ. ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಚುನಾವಣೆ ನಡೆಸುವುದು ಅಧಿಕೃತವಾಗಿದೆ.

ರಾಜ್ಯದಲ್ಲಿ 1989-90 ರ ಅವಧಿಯಲ್ಲಿ ಚುನಾವಣೆಗೆ ನಿಷೇಧವಾಗಿದ್ದು ಏಕೆ?

ರಾಜ್ಯದ ಹಲವು ಕಾಲೇಜುಗಳಲ್ಲಿ ಚುನಾವಣೆಯು ವಿಧಾನಸಭೆಗಳಿಗೆ ನಡೆಯುವಂತೆ ತೀವ್ರ ಪೈಪೋಟಿಯ ಚುನಾವಣೆಗಳಾಗಿದ್ದವು. ಅದರಲ್ಲಿಯೂ ಬೆಂಗಳೂರು ಕಾಲೇಜುಗಳಲ್ಲಿ ನಡೆಯುತ್ತಿದ್ದ ಚುನಾವಣೆಗಳು ರಾಜ್ಯದ ಇತರೆ ಕಾಲೇಜುಗಳಿಗಿಂತ ಒಂದು ಕೈ ಮೇಲಾಗಿತ್ತು. ಪ್ರತಿಷ್ಠೆ ಕಣವಾಗಿದ್ದ ಚುನಾವಣೆ ಸಮಯದಲ್ಲಿ ಹಿಂಸಾಚಾರ ಕೃತ್ಯಗಳು ನಡೆಯುತ್ತಿದ್ದವು. 1980 ರ ದಶಕದ ಉತ್ತರಾರ್ಧದಲ್ಲಿ ವಿದ್ಯಾರ್ಥಿ ಸಂಘದ ಕೆಲವು ಸದಸ್ಯರು ಪ್ರಾಂಶುಪಾಲರೊಂದಿಗೆ ಜಗಳವಾಡಿದ್ದರು. ಹಿಂಸಾಚಾರ ಪ್ರಕರಣಗಳು ನಡೆದಿದ್ದವು.

ಆಗಿನ ಶಿಕ್ಷಣ ಸಚಿವ ಕೆ.ಎಚ್. ​​ರಂಗನಾಥ್ ಅವರು ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಜತೆ ಚರ್ಚೆ ನಡೆಸಿ ಚುನಾವಣೆಗಳನ್ನು ನಿಷೇಧ ಹೇರುವಂತೆ ಮನವಿ ಮಾಡಿದ್ದರು. ಚುನಾವಣೆಯಿಂದ ಶಿಕ್ಷಣ ಸಂಸ್ಥೆಗಳಲ್ಲಿ ಗಲಭೆಗಳು ನಡೆಯುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಚುನಾವಣೆಗಳನ್ನು ರದ್ದು ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಕಾಲೇಜಿನಲ್ಲಿ ನಡೆದ ಹಿಂಸಾತ್ಮಕ ಘಟನೆಯು ವಿದ್ಯಾರ್ಥಿ ಚುನಾವಣೆಗಳ ಮೇಲಿನ ನಿಷೇಧಕ್ಕೆ ಕಾರಣವಾಯಿತು.

Read More
Next Story