
Ground Report| ಮುಟ್ಟಾದ ಬಾಲಕಿಯರಿಗೆ ಮುಚ್ಚಿದ ವಸತಿ ಶಾಲೆ! ಗೃಹ ಸಚಿವರ ಕ್ಷೇತ್ರದಲ್ಲಿ ʼದೇವಿ ಶಾಪʼದ ಮೌಢ್ಯ!!
Social Stigma: ಮುಟ್ಟಾದ ಬಾಲಕಿಯರಿಂದ ದೇವಿಗೆ ಅಪಚಾರವೆಂಬ ಮೂಢನಂಬಿಕೆಯಿಂದ 8 ವರ್ಷಗಳ ಹಿಂದೆ ಸುಸಜ್ಜಿತವಾಗಿ ನಿರ್ಮಿಸಿರುವ ವಸತಿ ನಿಲಯಕ್ಕೆ ಬೀಗ ಜಡಿಯಲಾಗಿದೆ.
ಅದು ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಸೋಲಾರ್ ವ್ಯವಸ್ಥೆ ಎಲ್ಲವೂ ಇರುವ ಬಾಲಕಿಯರ ವಿದ್ಯಾರ್ಥಿ ನಿಲಯ. ಆದರೆ, ಅಲ್ಲಿ ವಿದ್ಯಾರ್ಥಿನಿಯರೇ ಇಲ್ಲ. ಕಸ ಕಡ್ಡಿ, ಕುಡುಕರ ಅಡ್ಡೆಯಾಗಿ ಬದಲಾಗಿರುವ ಈ ವಿದ್ಯಾರ್ಥಿನಿಲಯವು ಸ್ಥಳೀಯರ ಅಂಧಶ್ರದ್ಧೆಯಿಂದ ಪಾಳು ಬಿದ್ದಿದೆ. ವಿದ್ಯಾರ್ಥಿನಿಯರು ಮುಟ್ಟಾದರೆ ಗ್ರಾಮದೇವತೆಗೆ ಅಪಚಾರ ಆಗಲಿದೆ ಎಂಬ ಮೂಢನಂಬಿಕೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮುಳುವಾಗಿದೆ.
ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಾಲಕಿಯರಿಗಾಗಿ ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಸ್ತೂರ ಬಾ ಗಾಂಧಿ ಬಾಲಿಕ ವಿದ್ಯಾರ್ಥಿನಿಲಯ ಆರಂಭಿಸಿದೆ. ಈ ವಿದ್ಯಾರ್ಥಿನಿಲಯದಲ್ಲಿ ಹೆಣ್ಣು ಮಕ್ಕಳು ವಾಸ ಮಾಡಿದರೆ ದೇವಿಗೆ ಕೋಪ ಬರಲಿದೆ ಎಂಬ ಅಜ್ಞಾನ, ಮೂಢನಂಬಿಕೆ ಜನರಲ್ಲಿದೆ. ಮಾಂಸ ಸೇವಿಸಿದ ದಿನದಂದು ಈ ರಸ್ತೆಯಲ್ಲಿ ಓಡಾಡಲೂ ಜನ ಹೆದರುವಷ್ಟರ ಮಟ್ಟಿಗೆ ಮೂಢನಂಬಿಕೆ ತುಂಬಿ ತುಳುಕುತ್ತಿದೆ. ಇನ್ನು ಋತುಚಕ್ರಕ್ಕೆ ಒಳಗಾದ ಹೆಣ್ಣು ಮಕ್ಕಳು ದೇವಸ್ಥಾನದ ಸಮೀಪವೇ ಇರುವ ಮತ್ತೊಂದು ಪ್ರೌಢಶಾಲೆಗೆ ಒಂಬತ್ತು ದಿನ ಹೆಜ್ಜೆ ಇಡುವಂತಿಲ್ಲ..!
ಹೌದು, ಇಂತಹ ಸಾಮಾಜಿಕ ಅನಿಷ್ಟ ಪದ್ಧತಿಯೊಂದು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 80ಕಿ.ಮೀ. ದೂರದಲ್ಲಿರುವ, ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಕೊರಟಗೆರೆಯಲ್ಲಿ ಆಚರಣೆಯಲ್ಲಿದೆ. ಮಹಿಳೆಯರು ಕೆಲಸ ಮಾಡುವ ಕಡೆ ಮುಟ್ಟಿನ ರಜೆ ನೀಡಬೇಕೆಂದು ಸರ್ಕಾರ ಆದೇಶ ನೀಡಿದೆ. ಆದರೆ, ಇಲ್ಲಿ ಬಾಲಕಿಯರು ನೈಸರ್ಗಿಕ ಪ್ರಕ್ರಿಯೆಯಂತೆ ಮುಟ್ಟಾದರೆ, ಅವರು ಶಾಲೆಯ ಮೆಟ್ಟಿಲು ಹತ್ತುವಂತಿಲ್ಲ ಅಥವಾ ವಸತಿ ಶಾಲೆಯಲ್ಲಿ ಇರುವಂತಿಲ್ಲ ಎಂಬ ಕ್ರೂರ ಕಟ್ಟುಪಾಡು ಚಾಲ್ತಿಯಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.
ಬಡ ಸಮುದಾಯದ ಹೆಣ್ಣುಮಕ್ಕಳು ಶಾಲೆಗೆ ಹೋಗಿ ವಿದ್ಯೆ ಕಲಿಯುವಂತಾಗಬೇಕು. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವಂತಾಗಬೇಕು ಎಂಬ ಸರ್ವೋದಯ ಕಳಕಳಿಯುಳ್ಳ ಕಸ್ತೂರಿ ಬಾ ಗಾಂಧಿ ಅವರ ಗೌರವಾರ್ಥ ಕಟ್ಟಿಸಿರುವ ವಿದ್ಯಾರ್ಥಿನಿಯರ ವಸತಿಗೃಹಕ್ಕೆ ಮೌಢ್ಯ ಆವರಿಸಿರುವುದು ದುರಂತ. ( ಸಬರಮತಿ ಆಶ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಹಾತ್ಮಾ ಗಾಂಧೀಜಿ ಅವರ ಪತ್ನಿ ಕಸ್ತೂರಿ ಬಾ ಗಾಂಧಿ). ನವ ಸಮಾಜದಲ್ಲಿ ಈ ರೀತಿಯ ಸಾಮಾಜಿಕ ಅನಿಷ್ಟವೊಂದು ಇನ್ನೂ ಆಚರಣೆಯಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ. ಏಳೆಂಟು ವರ್ಷದಿಂದ ಇಂತಹ ಅನಿಷ್ಟ ಪದ್ಧತಿ ಇದ್ದರೂ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದೇ ಇರುವುದು ಪ್ರಶ್ನಾರ್ಹವಾಗಿದೆ.
ಕರ್ನಾಟಕದಲ್ಲಿ ಮೂಢನಂಬಿಕೆ ವಿರೋಧಿ ಕಾನೂನು ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಅಧೀನದಲ್ಲೇ ಇದೆ. ಅಮಾನವೀಯ, ಅನಿಷ್ಟ ಪದ್ಧತಿಗಳನ್ನು ತಡೆಗಟ್ಟಬೇಕಾದ ಈ ಕಾನೂನು 2020 ರಿಂದ ಔಪಚಾರಿಕವಾಗಿ ಜಾರಿಯಲ್ಲಿದೆ. ಸಚಿವರ ಸ್ವಕ್ಷೇತ್ರದಲ್ಲೇ ಇಂತಹ ಅನಿಷ್ಟ ಆಚರಣೆಗಳಿದ್ದರೂ ಮೂಢನಂಬಿಕೆ ನಿರ್ಮೂಲನೆ ವಿಷಯದಲ್ಲಿ ಸರ್ಕಾರದ ಬದ್ಧತೆಯನ್ನು ಅನುಮಾನದಿಂದ ನೋಡುವಂತಾಗಿದೆ.
ಈ ಸಂಬಂಧ ʼದ ಫೆಡರಲ್ ಕರ್ನಾಟಕʼ ಕೊರಟಗೆರೆಯ ಅಕ್ಕಿರಾಂಪುರ ಎಂಬ ಹಳ್ಳಿಗೆ ತೆರಳಿ ವಿಷಯ ಪರಿಶೀಲನೆ ನಡೆಸಿತು. ಈ ವಿಚಿತ್ರ ಅಂಧಶ್ರದ್ಧೆಯ ಕುರಿತು ಕಟ್ಟಿಕೊಟ್ಟ ಗ್ರೌಂಡ್ ರಿಪೋರ್ಟ್ ಇಲ್ಲಿದೆ. ಅಂಧಶ್ರದ್ಧೆಯಿಂದ ಹೆಣ್ಣುಮಕ್ಕಳ ವಿದ್ಯಾರ್ಜನೆಗೆ ಹೇಗೆ ಕೆಡುಕಾಗುತ್ತದೆ ಎಂಬುದರ ಬಗ್ಗೆ ದ ಫೆಡರಲ್ ಕರ್ನಾಟಕದ ಕಣ್ಣಿಗೆ ಬಿದ್ದ ವಿವರ ಹೀಗಿದೆ...
ಅಕ್ಕಿರಾಂಪುರದಲ್ಲಿರುವ ಏಳು ಮಂದೆಮ್ಮ ದೇವಿಯ ದೇವಸ್ಥಾನ ಚಿತ್ರ: ರಘು ಆರ್.ಡಿ
ಋತುಮತಿಯಾದರೆ ದೇವಿಗೆ ಅಪಚಾರ?
ಹೆಣ್ಣುಮಕ್ಕಳು ಋತುಮತಿಯಾದರೆ ದೇವಿಗೆ ಅಪಚಾರವಾಗಲಿದೆ ಎಂಬ ವಿಚಿತ್ರ ನಂಬಿಕೆಯೇ ವಸತಿ ಶಾಲೆಗೆ ಬೀಗ ಬೀಳುವಂತೆ ಮಾಡಿದೆ. ಇಲ್ಲಿ ಹಿಂದೂ-ಮುಸ್ಲಿಂ ಭೇದವಿಲ್ಲದೆ ಗ್ರಾಮಸ್ಥರೆಲ್ಲರೂ ನಂಬಿಕೆಗೆ ಕಟ್ಟುಬಿದ್ದಿರುವ ಪರಿಣಾಮ ೮೦ ಲಕ್ಷ ರೂ. ಖರ್ಚು ಮಾಡಿ ಕಟ್ಟಿರುವ ವಸತಿ ಶಾಲೆ ಅಕ್ಷರಶಃ ಧೂಳು ತಿನ್ನುತ್ತಿದೆ.
ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳು ಮುಂದಿದ್ದಾರೆ. ಆದರೆ, ಸ್ವತಃ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತವರು ಕ್ಷೇತ್ರದಲ್ಲಿ ಮಾತ್ರ ಹೆಣ್ಣು ಮಕ್ಕಳು ದೇವಿಯ ಕೋಪಕ್ಕೆ ಹೆದರಿ ಶಾಲೆಯಿಂದ ದೂರ ಸರಿಯುವ ಸ್ಥಿತಿ ಬಂದಿದೆ. ಋತುಚಕ್ರದ ನೈಸರ್ಗಿಕ ಪ್ರಕ್ರಿಯೆಯನ್ನು 'ಅಂಟು-ಮುಂಟು'(ಮೈಲಿಗೆ) ಎಂದು ಕರೆದು ಬಡ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಪರೋಕ್ಷವಾಗಿ ಸರ್ಕಾರವೇ ಬೀಗಭಾಗ್ಯ ಹಾಕಿದೆ.
ಆರಂಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಸ್ಟೆಲ್
ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ನಿರ್ಮಿಸಿರುವ ಕಸ್ತೂರ ಬಾ ಬಾಲಿಕ ಗಾಂಧಿ ವಿದ್ಯಾರ್ಥಿನಿಲಯವು ಆರಂಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸುಮಾರು 45 ವಿದ್ಯಾರ್ಥಿನಿಯರು ವಸತಿ ಶಾಲೆಯಲ್ಲಿ ತಂಗಿದ್ದರು. ಕೋವಿಡ್ ನಂತರ ವಸತಿ ಶಾಲೆಗೆ ಹೆಣ್ಣು ಮಕ್ಕಳು ಬರುತ್ತಿಲ್ಲ. ಇದಕ್ಕೆ ಕಾರಣ ಹುಡುಕಿ ಹೊರಟಾಗ, ವಸತಿ ಶಾಲೆಯ ಅನತಿ ದೂರದಲ್ಲಿ ಗ್ರಾಮ ದೇವತೆ ಏಳು ಮಂದೆಮ್ಮ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಜನರೇ ಗಡಿ ಗುರುತಿಸಿದ್ದಾರೆ. ದೇವಸ್ಥಾನದ ಗಡಿಯೊಳಗೆ ಏಳು ಮಂದೆಮ್ಮ ದೇವಿ ಸಂಚರಿಸುತ್ತಾಳೆ ಎನ್ನುವ ನಂಬಿಕೆ ಜನರಲ್ಲಿದೆ. ಹಾಗಾಗಿ, ದೇವಸ್ಥಾನದ ಗಡಿಯಲ್ಲಿ ಋತುಚಕ್ರ ಆದವರು, ಬಾಣಂತಿಯರು ಹಾಗು ಮಾಂಸ ತಿಂದವರು ಓಡಾಡುವುದು ನಿಷಿದ್ಧವಾಗಿದೆ. ಹಾಗೇನಾದರೂ ಓಡಾಡಿದರೆ ದೇವಿಗೆ ಕೋಪ ಬರಲಿದೆ, ಗ್ರಾಮಕ್ಕೆ ಕೆಡುಕಾಗಲಿದೆ ಎಂಬ ಮೂಢನಂಬಿಕೆಯಿಂದ ಗ್ರಾಮಸ್ಥರೇ ವಸತಿ ನಿಲಯ ತೆರೆಯಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅಕ್ಕಿರಾಂಪುರದಲ್ಲಿ ಹಿಂದೂ-ಮುಸ್ಲಿಮರು ಸೇರಿ ಸುಮಾರು 3 ಸಾವಿರ ಜನಸಂಖ್ಯೆ ಇದೆ. ಎಲ್ಲರೂ ಕೂಡ ಇದೇ ನಂಬಿಕೆ ಮೈಗೂಡಿಸಿಕೊಂಡು ಭಾಳ್ವೆ ನಡೆಸುತ್ತಿದ್ದಾರೆ.
ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದ ಕಸ್ತೂರ ಬಾ ಗಾಂಧಿ ವಸತಿ ಶಾಲೆಯಲ್ಲಿ ಅಡುಗೆ ಉಪಕರಣಗಳು ತುಕ್ಕು ಹಿಡಿಯುತ್ತಿರುವುದು ಚಿತ್ರ: ರಘು ಆರ್.ಡಿ.
ಕುಡುಕರ ಅಡ್ಡೆಯಾದ ವಸತಿ ಶಾಲೆ
ಅಕ್ಕಿರಾಂಪುರದ ವಸತಿ ಶಾಲೆಯ ಒಳಗೆ ಖುದ್ದು ʼದ ಫೆಡರಲ್ ಕರ್ನಾಟಕʼ ತೆರಳಿದಾಗ ಹಲವು ವಿಚಾರಗಳು ಕಣ್ಣಿಗೆ ಗೋಚರಿಸಿದವು. ಕೊಠಡಿಗಳು ಧೂಳು ತಿನ್ನುತ್ತಿದ್ದರೆ, ಸೋಲಾರ್ ಪ್ಯಾನೆಲ್, ನೀರಿನ ಪೈಪುಗಳು, ಬಾಗಿಲುಗಳು ತುಕ್ಕು ಹಿಡಿಯುತ್ತಿದ್ದವು. ವಸತಿ ಶಾಲೆಯ ಬಾಲ್ಕನಿ ಹಾಗು ಮೆಟ್ಟಿಲುಗಳ ಮೇಲೆ ಮದ್ಯದ ಬಾಟಲಿ ಹಾಗೂ ಸಿಗರೇಟು ಪ್ಯಾಕುಗಳು ಕಂಡು ಬಂದವು.
ಜಲ ಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ಬಳಕೆ ಮಾಡುವ ಸಿಮೆಂಟ್, ಕಂಬಿ ಸೇರಿದಂತೆ ಇತರೆ ಸಾಮಗ್ರಿಗಳನ್ನು ಸಂಗ್ರಹಿಸಿಡಲು ವಸತಿ ನಿಲಯವನ್ನು ಬಳಸಲಾಗುತ್ತಿದೆ. ಅಲ್ಲದೇ ಜೆಜೆಎಂ ಕಾಮಗಾರಿಗಳಿಗಾಗಿ ಹೊರ ಜಿಲ್ಲೆಯಿಂದ ಬಂದಿರುವ ಕೆಲಸಗಾರರಿಗೆ ಉಳಿದುಕೊಳ್ಳಲು ಜಾಗ ನೀಡಲಾಗಿದೆ.
ದೇವರ ನಂಬಿಕೆ ಮುಂದೆ ಶಿಕ್ಷಣ ನಗಣ್ಯ... ಹೇಳುವುದೇನು?
“ವಸತಿ ಶಾಲೆಯಲ್ಲಿ ಮೊದಲು ವಿದ್ಯಾರ್ಥಿನಿಯರು ವಾಸವಾಗಿದ್ದರು. ಆದರೆ, ಈಗ ಯಾರೂ ಕೂಡ ಪ್ರವೇಶ ಪಡೆದಿಲ್ಲ. ಈ ಜಾಗದಲ್ಲಿ ಅಂಟು ಮುಂಟಾದವರು ಓಡಾಡುವಂತಿಲ್ಲ, ಏಳು ಮಂದೆಮ್ಮ ದೇವಿ ಈ ಜಾಗದಲ್ಲಿ ಸಂಚರಿಸುತ್ತಾಳೆ ಎಂಬ ನಂಬಿಕೆಯಿಂದ ಹೆಣ್ಣುಮಕ್ಕಳನ್ನು ವಸತಿ ಶಾಲೆಗೆ ಸೇರಿಸುತ್ತಿಲ್ಲ” ಎಂದು ಅಕ್ಕಿರಾಂಪುರದ ರೈತ ಶ್ರೀನಿವಾಸ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
“ಅಂಟು ಮುಂಟಾದವರಿಗೆ ಈ ಜಾಗ ಒಳ್ಳೆಯದಲ್ಲ. ಈ ಹಿಂದೆ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯರಿಗೆ ತೊಂದರೆಯಾಗಿತ್ತು, ಕಟ್ಟಡ ನಿರ್ಮಿಸುವುದಕ್ಕೂ ಮುನ್ನವೇ ನಾವೆಲ್ಲರೂ ಇಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿನಿ ನಿಲಯ ಬೇಡ ಎಂದು ಹೇಳಿದ್ದೆವು, ಆದರೂ ಕಟ್ಟಿದರು. ಈಗ ವಿದ್ಯಾರ್ಥಿನಿಯರು ಬಾರದೇ ವಸತಿ ಶಾಲೆ ಮುಚ್ಚಿದೆ. ಊರಿನ ಒಳಗೆ ಬಾಲಕರ ವಿದ್ಯಾರ್ಥಿ ನಿಲಯವಿದೆ, ಅಲ್ಲಿಗೆ ಹೆಣ್ಣುಮಕ್ಕಳನ್ನು ಕಳುಹಿಸಿ, ಈ ಕಟ್ಟಡವನ್ನು ಗಂಡು ಮಕ್ಕಳಿಗೆ ನೀಡಿದರೆ ಅನುಕೂಲವಾಗಲಿದೆ," ಎಂದು ಗೃಹಿಣಿ ಜಯಮ್ಮ ಹೇಳಿದರು.
ಹೆಣ್ಣು ಮಕ್ಕಳ ವಸತಿ ಶಾಲೆ ಊರಿನ ಹೊರಗೆ ಇರುವುದರಿಂದ ಸುರಕ್ಷಿತವೂ ಅಲ್ಲ, ಊರಿನ ಒಳಗಡೆ ವಿದ್ಯಾರ್ಥಿನಿ ನಿಲಯ ಇದ್ದರೆ ಸುರಕ್ಷತೆ ಇರಲಿದೆ. ಸಂಪ್ರದಾಯ ಪಾಲಿಸಿದಂತೆಯೂ ಆಗಲಿದೆ ಎಂದು ವಿವರಿಸಿದರು.
ಸ್ಥಳೀಯ ನಿವಾಸಿ ಷಫಿ ಅಹಮದ್ ಮಾತನಾಡಿ, "ನಾವು ಮುಸ್ಲಿಮರಾದರೂ ಏಳು ಮಂದೆಮ್ಮ ದೇವಿಯನ್ನು ನಂಬುತ್ತೇವೆ. ನಮ್ಮ ಹೊಲ ದೇವಸ್ಥಾನದ ಗಡಿಯಲ್ಲಿದೆ. ಮುಟ್ಟಾದರೆ ನಾವು ಹೊಲದ ಬಳಿ ಹೋಗುವುದಿಲ್ಲ, ಮಾಂಸ ತಿಂದಾಗಲೂ ನಾವು ಈ ರಸ್ತೆಯಲ್ಲೇ ಓಡಾಡುವುದಿಲ್ಲ. ಇಂತಹ ನಂಬಿಕೆ ಇರುವ ಜಾಗದಲ್ಲಿ ಯಾಕೆ ವಿದ್ಯಾರ್ಥಿನಿ ನಿಲಯ ಬೇಕು, ಊರಿನ ಒಳಗೆ ಇರುವ ಗಂಡು ಮಕ್ಕಳ ವಿದ್ಯಾರ್ಥಿ ನಿಲಯವನ್ನು ಇಲ್ಲಿಗೆ ಸ್ಥಳಾಂತರ ಮಾಡಿದರೆ, ಊರಿನೊಳಗಿರುವ ಕಟ್ಟಡಕ್ಕೆ ಹೆಣ್ಣು ಮಕ್ಕಳನ್ನು ಸೇರಿಸಬಹುದು," ಎಂದರು.
ಮತ್ತೊಬ್ಬ ಸ್ಥಳೀಯ ನಿವಾಸಿ ಅಲ್ಲಾಭಕ್ಷ್ ಮಾತನಾಡಿ, "ಏಳು ಮಂದೆಮ್ಮ ದೇವಿಯನ್ನು ನಂಬುತ್ತೇವೆ. ನಮ್ಮ ಮನೆಯಲ್ಲಿ ಹೆಂಗಸರು ಸಹ ಕಟ್ಟುನಿಟ್ಟಾಗಿ ದೇವಿಯನ್ನು ಆರಾಧಿಸುತ್ತಾರೆ. ನಾವು ಮಾಂಸ ತಿಂದ ದಿನ ಈ ರಸ್ತೆಯಲ್ಲಿ ಓಡಾಡುವುದಿಲ್ಲ. ಈ ವಸತಿ ಶಾಲೆಯ ಪಕ್ಕದಲ್ಲೇ ಪ್ರೌಢ ಶಾಲೆ ಇದೆ, ಇದು ಕೂಡ ದೇವಸ್ಥಾನದ ಗಡಿಯಲ್ಲೇ ಇರುವುದರಿಂದ ನಮ್ಮ ಮನೆಯ ಹೆಣ್ಣು ಮಕ್ಕಳನ್ನೂ ಋತುಮತಿಯಾದಾಗ ಒಂಬತ್ತು ದಿನ ಶಾಲೆಗೆ ಕಳಿಸಲ್ಲ," ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಅಕ್ಕಿರಾಂಪುರದ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾರ್ಥಿನಿಲಯ ಅವ್ಯವಸ್ಥೆ ಹಾಗೂ ಗ್ರಾಮದ ಮೌಢ್ಯದ ಕುರಿತ ವಿಡಿಯೊ ಇಲ್ಲಿದೆ.
ಗ್ರಾಮಸ್ಥರಲ್ಲೂ ಇದೆ ಅಪಸ್ವರ
ಗ್ರಾಮದಲ್ಲಿ ಬೇರು ಬಿಟ್ಟಿರುವ ಮೂಢನಂಬಿಕೆಗೆ ಕೆಲ ಪ್ರಜ್ಞಾವಂತ ಗ್ರಾಮಸ್ಥರೇ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಗ್ರಾಮದಲ್ಲಿರುವ ಅಂಧಶ್ರದ್ಧೆಯಿಂದ ವಸತಿ ಶಾಲೆ ಮುಚ್ಚಿದೆ. ನಾವು ಇಂತಹ ನಂಬಿಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಏಳು ಮಂದೆಮ್ಮ ದೇವಸ್ಥಾನದ ರಸ್ತೆಯಲ್ಲಿ ತಿರುಗಾಡಿದರೆ ಕೆಡುಕಾಗಲಿದೆ ಎಂಬುದನ್ನು ನಾವು ನಂಬುವುದಿಲ್ಲ, ನಾವು ಇದೇ ರಸ್ತೆಯಲ್ಲಿ ಓಡಾಡುತ್ತೇವೆ ಎಂದು ಅಕ್ಕಿರಾಂಪುರ ನಿವಾಸಿ ದಾದಾಪೀರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮತ್ತೊಬ್ಬ ಗ್ರಾಮಸ್ಥ ಸುರೇಶ್ ಮಾತನಾಡಿ, ಈ ಹಿಂದೆ ವಸತಿ ನಿಲಯವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ವಿದ್ಯಾರ್ಥಿನಿಯರೂ ವಾಸವಿದ್ದರು. ಒಂದು ದಿನ ನಿಲಯ ಪಾಲಕರು ಇಲ್ಲಿ ಏನೋ ಓಡಾಡುತ್ತಿದೆ ಎಂದು ಹಬ್ಬಿಸಿದ ಸುದ್ದಿ ಪೋಷಕರನ್ನು ಮೂಢನಂಬಿಕೆಗೆ ದೂಡಿದೆ. ಅಂದಿನಿಂದ ಹೆಣ್ಣು ಮಕ್ಕಳನ್ನು ವಸತಿ ಶಾಲೆಗೆ ಕಳುಹಿಸುತ್ತಿಲ್ಲ. ಶಾಲೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಏಳು ಮಂದೆಮ್ಮ ದೇವಸ್ಥಾನವಿದೆ. ದೇವರ ಬಗ್ಗೆ ಎಲ್ಲರಿಗೂ ಭಕ್ತಿ ಇದೆ. ಆದರೆ, ದೇವಿಯ ಕಾರಣದಿಂದಲೇ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯ ಆರಂಭಿಸದಿರುವುದು ಸರಿ ಕಾಣುತ್ತಿಲ್ಲ. ಗ್ರಾಮಸ್ಥರೆಲ್ಲರೂ ಮೂಢನಂಬಿಕೆಗೆ ಅಂಟಿಕೊಂಡಿರುವುದರಿಂದ ಏನೂ ಮಾಡಲಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.
ಮೂಢನಂಬಿಕೆ ಎಷ್ಟು ಸರಿ.. ಪ್ರಜ್ಞಾವಂತರ ವಾದವೇನು?
ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ. ಯತಿರಾಜು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿ, ಮೌಢ್ಯದ ಕಾರಣಕ್ಕೆ ವಸತಿ ಶಾಲೆ ಮುಚ್ಚಿರುವುದು ತಪ್ಪು. ದೇಗುಲದ ಸಮೀಪ ಹೆಣ್ಣು ಮಕ್ಕಳು ವಾಸಿಸುವುದರಿಂದ ದೇವಿಗೆ ಅಪಚಾರ ಆಗಲಿದೆ ಎಂಬ ಭಾವನೆಯನ್ನು ಮೊದಲು ಹೋಗಲಾಡಿಸಬೇಕು. ಪ್ರಜ್ಞಾವಂತರು ಗ್ರಾಮಸ್ಥರ ಮನವೊಲಿಸಬೇಕು. ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟವರು ಗ್ರಾಮದಲ್ಲಿ ಸಂಧಾನ ಸಭೆಗಳನ್ನು ನಡೆಸಿ ಜನರಿಗೆ ತಿಳಿವಳಿಕೆ ಹೇಳಬೇಕು. ಮೂಢನಂಬಿಕೆಗೆ ಕಟ್ಟು ಬಿದ್ದು, ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಸತಿ ಶಾಲೆಯನ್ನು ಪಾಳು ಬೀಳುವಂತೆ ಮಾಡಬಾರದು ಎಂದು ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ. ಹುಲಿಕಲ್ ನಟರಾಜು ಅವರು ʼದ ಫೆಡರಲ್ ಕರ್ನಾಟಕʼದ ಮಾತನಾಡಿ, ಸರ್ಕಾರಿ ಕಟ್ಟಡಗಳಲ್ಲೇ ಇಂತಹ ಅನಿಷ್ಠ ಪದ್ಧತಿಗಳು ಚಾಲ್ತಿಯಲ್ಲಿರುತ್ತವೆಯೇ ವಿನಃ ಖಾಸಗಿ ಕಟ್ಟಡಗಳಲ್ಲಿ ಇರುವುದಿಲ್ಲ. ನಮ್ಮ ತಂಡವು ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಅವರ ಮನವಿ ಮೇರೆಗೆ ಅಕ್ಕಿರಾಂಪುರ ಗ್ರಾಮಕ್ಕೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ಸುತ್ತಲಿನ ಎಲ್ಲ ಪ್ರೌಢಶಾಲೆಗಳ ಹೆಣ್ಣು ಮಕ್ಕಳನ್ನು ಕರೆದೋಯ್ದು, ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯಾರ್ಥಿನಿಲಯದಲ್ಲೇ ಇರಿಸಿಕೊಂಡು ಇಲ್ಲಿ ಯಾವುದೇ ಅಗೋಚರ ಶಕ್ತಿ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದೆವು. ಮಕ್ಕಳು ಬದಲಾಗಿದ್ದರು. ಆದರೆ, ಪೋಷಕರ ಮನಸ್ಥಿತಿ, ಪರಿಸ್ಥಿತಿ ಹಾಗೂ ವ್ಯವಸ್ಥೆ ಸರಿ ಹೋಗಿರಲಿಲ್ಲ. ಈ ವೇಳೆ ಇಡೀ ಕಟ್ಟಡವನ್ನು ಪರಿಶೀಲಿಸಿದಾಗ ಮದ್ಯದ ಬಾಟಲಿಗಳು, ಸಿಗರೇಟು ತುಂಡುಗಳು ಬಿದ್ದಿದ್ದವು. ಸರ್ಕಾರಿ ಕಟ್ಟಡಗಳನ್ನು ಹಾಳು ಮಾಡುವವರಿಗೆ ಆಗದ ತೊಂದರೆ ಹೆಣ್ಣು ಮಕ್ಕಳಿಗೆ ಆಗಲಿದೆಯೇ ಎಂದು ಪ್ರಶ್ನಿಸಿದರು.
ವಸತಿ ಶಾಲೆ ಸುತ್ತಮುತ್ತ ದೇವರು ಓಡಾಡುವುದಾದರೆ ಒಳ್ಳೆಯದೆ. ಋತುಮತಿಯಾದ ಹೆಣ್ಣು ಮಕ್ಕಳು ಸುಳಿದಾಡಬಾರದು ಎಂದಾದರೆ ದೇವರು ಹೆಣ್ಣೂ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಹೆಣ್ಣು ದೇವರು ಹೆಣ್ಣು ಮಕ್ಕಳಿಗೆ ಆಶಿರ್ವಾದ ಮಾಡುತ್ತಾಳೆಯೇ ಹೊರತು ಕೆಡಕು ಮಾಡುವುದಿಲ್ಲ ಎಂದರು.
ದೇವರು ಎಂದಿಗೂ ಜನರಿಗಾಗಲಿ, ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಲ್ಲ, ನಾವು ಭಯಮುಕ್ತರಾಗುವ ಸಲುವಾಗಿಯೇ ದೇವರನ್ನು ಪೂಜೆ ಮಾಡುತ್ತೇವೆ. ಇಲ್ಲಿ ಕೆಲವರು ವೃಥಾ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಮಟ್ಟಿಗೆ ಶಾಪ ಹಾಕುವ ದೇವರು ದೇವರೇ ಅಲ್ಲ. ಮೊದಲು ಜನರ ಮನಸ್ಥಿತಿ ಬದಲಾಗಬೇಕು ಎಂದು ಹೇಳಿದರು.
ಮಾನವೀಯತೆ, ಸಂವಿಧಾನಕ್ಕೆ ಹಚ್ಚಿದ ಕಳಂಕ
ಪ್ರಗತಿಪರ ಚಿಂತಕಿ ಕೆ.ಎಸ್.ವಿಮಲಾ ಅವರು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿ, ಹೆಣ್ಣಿನ ಜೈವಿಕ ಕ್ರಿಯೆಯಿಂದ ದೇವಿಗೆ ಅಪಚಾರವಾಗಲಿದೆ ಎಂಬ ಮೂಢನಂಬಿಕೆಯು ಸಂವಿಧಾನ ವಿರೋಧಿ ಆಚರಣೆ. ನಾವು ಜನರ ನಂಬಿಕೆ ಪ್ರಶ್ನಿಸುವುದಿಲ್ಲ. ಆದರೆ, ನಂಬಿಕೆ ಹಾಗೂ ಮೂಢನಂಬಿಕೆ ಮಧ್ಯೆ ಇರುವ ತೆಳುವಾದ ಗೆರೆಯನ್ನು ಅರ್ಥ ಮಾಡಿಕೊಳ್ಳದಿರುವ ಬಗ್ಗೆ ಬೇಸರವಿದೆ ಎಂದು ಹೇಳಿದರು.
ದೇವಿಯು ಕೂಡ ಮಹಿಳೆಯೇ. ಮುಟ್ಟು, ಬಸಿರು, ಹೆರಿಗೆ ಎಲ್ಲವೂ ಸಹಜವಾದ ಜೈವಿಕ ಕ್ರಿಯೆ. ಇದರಿಂದ ದೇವಿಗೆ ಮೈಲಿಗೆ ಆಗಲಿದೆ ಎಂಬ ಮೂಢನಂಬಿಕೆಯನ್ನು ತೊಡೆದುಹಾಕುವಲ್ಲಿ ನಾವು ಸೋತಿದ್ದೇವೆ. ಗೃಹ ಸಚಿವರಿಗೆ ಅಸ್ಪೃಶ್ಯತೆ, ಮೈಲಿಗೆ ಹಾಗೂ ಅಸಮಾನತೆಯ ನೋವು ಗೊತ್ತಿದೆ. ಅವರೇ ಒಂದೊಮ್ಮೆ ಸಾರ್ವಜನಿಕ ಸಭೆಯಲ್ಲಿ ಅಸ್ಪೃಶ್ಯತೆ ನೆನಪಿಸಿಕೊಂಡು ಕಣ್ಣೀರಾಕಿದ್ದಿದೆ. ಹೀಗಿದ್ದರೂ, ತಮ್ಮ ಕ್ಷೇತ್ರದಲ್ಲಿ ಮೂಢನಂಬಿಕೆ ಹೆಸರಲ್ಲಿ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯ ಪಾಳು ಬಿದ್ದಿರುವುದನ್ನು ಗಮನಿಸಿ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಅಭಿಯಾನ ಮಾಡಿ ಜನರಿಗೆ ಅರ್ಥ ಮಾಡಿಸಬೇಕಿತ್ತು. ಆದರೆ, ಕಳೆದ ಆರೇಳು ವರ್ಷಗಳಿಂದ ಅಂತಹ ಪ್ರಯತ್ನ ನಡೆಸಿಲ್ಲ. ಗೃಹ ಸಚಿವರು, ಸರ್ಕಾರ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆ ಇದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಹೆಣ್ಣು ಮಕ್ಕಳು ಮುಟ್ಟಾಗದಿದ್ದರೆ ಬಸಿರಾಗಲು ಆಗುವುದಿಲ್ಲ, ಮಗು ಹೆರದಿದ್ದರೆ ಸಮಾಜದ ಮುಂಚಲನೆಗೆ ಅಡ್ಡಿಯಾಗಲಿದೆ. ಹೆಣ್ಣಿನ ಈ ಜೈವಿಕ ಕ್ರಿಯೆಯನ್ನೇ ಮೈಲಿಗೆ ಎನ್ನುವ ಓಬಿರಾಯನ ಕಾಲದ ಮಾತನ್ನು ಇಂದಿನ ನವ ತಂತ್ರಜ್ಞಾನ, ವೈಜ್ಞಾನಿಕ ಯುಗದಲ್ಲೂ ಆಚರಿಸುವುದು ದೇಶ, ಮಾನವಿಯತೆ ಹಾಗೂ ಸಂವಿಧಾನಕ್ಕೆ ಹಚ್ಚುವ ಕಳಂಕವಾಗಿದೆ ಎಂದು ಕಿಡಿಕಾರಿದರು.
ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾರ್ಥಿನಿಲಯದಲ್ಲಿ ಮದ್ಯ ವ್ಯಸನಿಗಳು ಬಾಟಲಿ ಹೊಡೆದು ಹಾಕಿರುವುದು ಚಿತ್ರ: ರಘು ಆರ್.ಡಿ
ಅಧಿಕಾರಿಗಳು ಏನಂತಾರೆ?
ಕೋವಿಡ್ ಸಮಯದಲ್ಲಿ ವಿದ್ಯಾರ್ಥಿ ನಿಲಯವನ್ನು ಮುಚ್ಚಲಾಯಿತು. ನಂತರ ವಿದ್ಯಾರ್ಥಿನಿಯರು ಯಾರೂ ದಾಖಲಾತಿ ಪಡೆದಿಲ್ಲ. ದೇವಸ್ಥಾನದ ನಂಬಿಕೆಯ ಬಗ್ಗೆಯೂ ಒಂದು ಕಾರಣ ಇರಬಹುದು. ಈಗ ಮತ್ತೆ ಜೂನ್ ತಿಂಗಳಲ್ಲಿ ವಸತಿ ಶಾಲೆಗೆ ಅರ್ಜಿಗಳನ್ನು ಕರೆಯಲು ಮೇಲಾಧಿಕಾರಿಗಳು ಹೇಳಿದ್ದಾರೆ. ಊರಿನವರು ವಸತಿ ಶಾಲೆ ಅದಲು ಬದಲು ಮಾಡುವಂತೆ ಕೋರಿದ್ದಾರೆ. ದಾಖಲಾತಿಗಾಗಿ ಅರ್ಜಿಗಳು ಬಂದಾಗ ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ.ರಮೇಶ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

