Hippopotamus Attack| ನೀರಾನೆ ದಾಳಿಗೆ ಡಾ. ಸಮೀಕ್ಷಾ ಸಾವು; ತಪಾಸಣೆಗೆ ಕಳುಹಿಸಿದ್ದ ಅಧಿಕಾರಿ ಯಾರು?
x
ಪಕ್ಷಿಗೆ ಕೊನೆಯದಾಗಿ ಚಿಕಿತ್ಸೆ ನೀಡುತ್ತಿರುವ ಸಮೀಕ್ಷಾ, ವಿಶ್ವ ನೀರಾನೆ ದಿನದಂದು ಹಾಕಿದ ಸೋಶಿಯಲ್ ಮೀಡಿಯಾ ಪೋಸ್ಟ್​​. (ಸಂಗ್ರಹ ಚಿತ್ರ)

Hippopotamus Attack| ನೀರಾನೆ ದಾಳಿಗೆ ಡಾ. ಸಮೀಕ್ಷಾ ಸಾವು; ತಪಾಸಣೆಗೆ ಕಳುಹಿಸಿದ್ದ ಅಧಿಕಾರಿ ಯಾರು?

ಪ್ರಕರಣದ ಹಿಂದಿನ ಸತ್ಯಾಸತ್ಯತೆಗಳನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆಯೇ ಎಂಬ ಸಂಶಯಗಳು ವ್ಯಕ್ತವಾಗಿವೆ. ಈ ನಡುವೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿಸಿದ್ದಾರೆ.

 &

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಗರ್ಭಿಣಿ ನೀರಾನೆಯ ದಾಳಿಗೆ ತುತ್ತಾಗಿ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಮೃತಪಟ್ಟಿರುವ ಘಟನೆಯು ಇದೀಗ ಕೆಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆ ನಡೆದಿರುವ ಸಮಯ, ಸಂದರ್ಭ ಮತ್ತು ಭದ್ರತಾ ಲೋಪಗಳ ಕುರಿತು ಹಲವು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.

ಪ್ರಕರಣದ ಹಿಂದಿನ ಸತ್ಯಾಸತ್ಯತೆಗಳನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆಯೇ ಎಂಬ ಸಂಶಯಗಳು ವ್ಯಕ್ತವಾಗಿವೆ. ಈ ನಡುವೆ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದು ಈ ಸಂಶಯಕ್ಕೆ ಪೂರಕ.

ಸಮೀಕ್ಷಾ ರೆಡ್ಡಿ ಬೆಂಗಳೂರು ವಾಸಿಯಾಗಿದ್ದು, ಪ್ರಾಣಿಪ್ರಿಯೆಯಾಗಿದ್ದರಿಂದ ಪಶುವೈದ್ಯಕೀಯ ವೃತ್ತಿಯನ್ನು ಅರಿಸಿಕೊಂಡಿದ್ದರು. ತ್ಯಾವರೆಕೊಪ್ಪ ಪ್ರಾಣಿಧಾಮದಲ್ಲಿ ಗುತ್ತಿಗೆ ಆಧಾರದಲ್ಲಿ ಪಶುವೈದ್ಯೆಯಾಗಿ ಕೆಲಸಕ್ಕೆ ಸೇರಿ ಒಂದೂವರೆ ತಿಂಗಳಾಗಿತ್ತು. ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲೇ ಪ್ರಾಣಿಪ್ರೀತಿಯನ್ನು ಮೆರೆದಿದ್ದ ಡಾ. ಸಮೀಕ್ಷಾ ರೆಡ್ಡಿ, ಕಳೆದ ಫೆ. 15 ರ ಮರುದಿನ ವಿಶ್ವ ನೀರಾನೆ ದಿನ (World Hippo Day) ನೀರಾನೆ ಕಾಣುವಂತೆ ತಮ್ಮ ಫೋಟೋ ತೆಗೆಸಿಕೊಂಡಿದ್ದರು.

ಸಾಲು ಸಾಲು ಅನುಮಾನಗಳು

ಡಾ. ಸಮೀಕ್ಷಾ ಅವರು ಮಾ. 18ರಂದು ರಾತ್ರಿ ವೇಳೆ ಹಕ್ಕಿಯೊಂದಕ್ಕೆ ಚಿಕಿತ್ಸೆ ನೀಡಲು ತೆರಳಿದ್ದರು ಎನ್ನಲಾಗಿದ್ದು, ಇದರ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಆ ನಂತರ ಅವರು ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಅದರ ಆವರಣದ ಬಳಿ ತೆರಳಿದ ವೇಳೆ ಕೆರಳಿದ ಪ್ರಾಣಿ ದಿಢೀರ್ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ. ಗಂಭೀರ ಪರಿಸ್ಥಿತಿಯಲ್ಲಿದ್ದ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಶುಕ್ರವಾರ(ಮಾ. 20) ಬೆಳಗ್ಗೆ 6.15ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಹಕ್ಕಿಗಳಿಗೆ ರಾತ್ರಿ ವೇಳೆ ಚಿಕಿತ್ಸೆ ನೀಡುವ ತುರ್ತು ಅಗತ್ಯವೇನಿತ್ತು? ಥರ್ಮಲ್ ಉಷ್ಣತೆ ಪರೀಕ್ಷೆಯನ್ನು ದೂರದಿಂದಲೇ ಮಾಡಬಹುದಾಗಿದ್ದರೂ ಅಪಾಯಕಾರಿ ಪ್ರಾಣಿಯ ಅಷ್ಟು ಹತ್ತಿರಕ್ಕೆ ತೆರಳಿದ್ದೇಕೆ ಎಂಬ ಮೂಲಭೂತ ಪ್ರಶ್ನೆಗಳು ಮೂಡಿವೆ. ಸೂಕ್ತ ತರಬೇತಿ ಪಡೆದ ಪಶುವೈದ್ಯರಾಗಿದ್ದರೂ ಇಂತಹ ನಿರ್ಲಕ್ಷ್ಯ ಏಕೆ ತೋರಿದರು ಮತ್ತು ರಾತ್ರಿ ನಡೆದ ಘಟನೆಯು ಬೆಳಗಾಗುವವರೆಗೂ ಯಾರಿಗೂ ತಿಳಿಯದಿರಲು ಕಾರಣವೇನು ಎಂಬುದು ಅನುಮಾನಕ್ಕೆ ಕಾರಣವಾಗಿದೆ.

ಘಟನೆಯ ಕುರಿತು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಅಧಿಕೃತ ಮಾಹಿತಿ ನೀಡಿದ್ದಾರೆ. ಗುರುವಾರ ರಾತ್ರಿ 10.30ರ ಸುಮಾರಿಗೆ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದ ಡಾ. ಸಮೀಕ್ಷಾ ಅವರು, ಸನ್ ಕೊನ್ಯೂರ್ ಎಂಬ ಪಕ್ಷಿಗೆ ಫಾಲೋ-ಅಪ್ ಚಿಕಿತ್ಸೆ ನೀಡಿದ್ದರು. ತದನಂತರ ರಾತ್ರಿ 11. 45ರ ಸಮಯದಲ್ಲಿ ಥರ್ಮಲ್ ಕ್ಯಾಮೆರಾವನ್ನು ಬಳಸಿಕೊಂಡು ಗರ್ಭಿಣಿ ನೀರಾನೆಯ (ಹಿಪ್ಪೊಪೊಟಮಸ್) ತಾಪಮಾನ ಪರೀಕ್ಷಿಸಲು ತೆರಳಿದ್ದರು. ಸಿಂಹಧಾಮದಲ್ಲಿ ಒಟ್ಟು ಎರಡು ನೀರಾನೆಗಳಿದ್ದು, ಅದರಲ್ಲಿ ಒಂದು ಎಂಟು ತಿಂಗಳ ಗರ್ಭಿಣಿಯಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಅದು ಮರಿ ಹಾಕುವ ನಿರೀಕ್ಷೆ ಇತ್ತು. ಈ ಸೂಕ್ಷ್ಮ ಸಮಯದಲ್ಲಿ ಆವರಣದ ಬಳಿ ತೆರಳಿದಾಗ ಕೆರಳಿದ ನೀರಾನೆ ದಿಢೀರನೆ ಯುವ ವೈದ್ಯೆಯ ಮೇಲೆ ಎರಗಿದೆ. ತೀವ್ರ ಸ್ವರೂಪದ ದಾಳಿಯಿಂದಾಗಿ ಅವರು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಎಸ್‌ಒಪಿ ನಿಯಮಗಳ ಸಂಪೂರ್ಣ ಉಲ್ಲಂಘನೆ?

ವನ್ಯಜೀವಿಗಳಿಗೆ, ಅದರಲ್ಲೂ ವಿಶೇಷವಾಗಿ ಗರ್ಭಸ್ಥ ಪ್ರಾಣಿಗಳಿಗೆ ಚಿಕಿತ್ಸೆ ನೀಡುವಾಗ ಕಡ್ಡಾಯವಾಗಿ ಪಾಲಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ನಿಯಮಗಳ ಪ್ರಕಾರ, ರಾತ್ರಿ ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ವನ್ಯಪ್ರಾಣಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ. ಒಂದು ವೇಳೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡಲೇಬೇಕಾದರೂ ಅರಿವಳಿಕೆ ಚುಚ್ಚುಮದ್ದನ್ನು ಬಳಸುವುದು ಕಡ್ಡಾಯ. ಜೊತೆಗೆ ಅಗತ್ಯ ಸಂಖ್ಯೆಯ ಸಿಬ್ಬಂದಿ, ಪ್ರಾಣಿಗಳನ್ನು ಬೆದರಿಸಲು ಪಟಾಕಿ ಹಾಗೂ ಏರ್‌ಗನ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಆದರೆ, ಈ ಯಾವುದೇ ಕನಿಷ್ಠ ಮುಂಜಾಗ್ರತಾ ಕ್ರಮಗಳಿಲ್ಲದೆ, ಭದ್ರತಾ ಸಾಧನಗಳಿಲ್ಲದೆ ಒಂಟಿಯಾಗಿ ನೀರಾನೆಯ ಬಳಿ ತೆರಳಿರುವುದು ದುರಂತಕ್ಕೆ ಕಾರಣವಾಗಿದೆ.

ನೀರಾನೆಯ ತಾಪಮಾನ ಪರೀಕ್ಷೆಗೆ ಅಲ್ಲಿನ ಅಧಿಕಾರಿಯೊಬ್ಬರು ಸಮೀಕ್ಷಾಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಅವರು ಯಾಕೆ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಪಾಲಿಸಲು ಅಥವಾ ಆಕೆಗೆ ರಕ್ಷಣೆ ಕ್ರಮ ವಹಿಸಲು ಸೂಚಿಸಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ.

ಆಡಳಿತಾತ್ಮಕ ಲೋಪ ಮತ್ತು ಅನುಭವದ ಕೊರತೆ

ಈ ಘಟನೆಯು ಮೃಗಾಲಯದ ಆಡಳಿತಾತ್ಮಕ ಲೋಪಗಳನ್ನು ಕೂಡ ಬಯಲಿಗೆಳೆದಿದೆ. ಈ ಹಿಂದೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಾಲ್ಕು ತಿಂಗಳು ಕಳೆದಿದ್ದರೂ, ಆಡಳಿತ ಮಂಡಳಿಯು ಅವರನ್ನೇ ಮುಂದುವರಿಸಿಕೊಂಡು ಬರುತ್ತಿತ್ತು. ಇದರ ಜೊತೆಗೆ, ಮೃತ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಸೇವೆಗೆ ಸೇರ್ಪಡೆಯಾಗಿ ಕೇವಲ ಒಂದೂವರೆ ತಿಂಗಳಷ್ಟೇ ಕಳೆದಿತ್ತು. ವನ್ಯಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಮುನ್ನ ಪಡೆಯಬೇಕಾದ ಸೂಕ್ತ ತರಬೇತಿ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಅರಿವು ಅವರಿಗಿನ್ನೂ ಸಂಪೂರ್ಣವಾಗಿ ಇರಲಿಲ್ಲ ಎನ್ನಲಾಗಿದೆ.

ಇಂತಹ ಅನನುಭವಿ ವೈದ್ಯೆಗೆ ರಾತ್ರಿ ವೇಳೆ ಅಪಾಯಕಾರಿ ಪ್ರಾಣಿಯ ಬಳಿ ತೆರಳಿ ಚಿಕಿತ್ಸೆ ನೀಡಲು ಯಾರು ಮತ್ತು ಯಾವ ಆಧಾರದ ಮೇಲೆ ಅನುಮತಿ ನೀಡಿದರು ಎಂಬ ಗಂಭೀರ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿವೆ.

ತನಿಖೆಗೆ ಆದೇಶಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ

ಈ ಆಘಾತಕಾರಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಇದೊಂದು ಅತ್ಯಂತ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮತ್ತು ಅರಣ್ಯ ಇಲಾಖೆಯು ಮೃತ ವೈದ್ಯೆಯ ಕುಟುಂಬದ ಜೊತೆಗಿದೆ. ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಪಾಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾತ್ರಿ 11. 30 ರ ಸಮಯದಲ್ಲಿ ಆವರಣದೊಳಗೆ ಹೋಗಿ ಚಿಕಿತ್ಸೆ ನೀಡಲು ಯಾರು ಪರವಾನಗಿ ನೀಡಿದ್ದರು ಎಂಬ ಬಗ್ಗೆ ತನಿಖೆ ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಜೊತೆಗೆ, ಕುಟುಂಬಕ್ಕೆ ಅಗತ್ಯ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಮುಂದಿನ ಎರಡು ದಿನಗಳಲ್ಲಿ ಮೃತರ ಕುಟುಂಬವನ್ನು ಖುದ್ದಾಗಿ ಭೇಟಿ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ: ಡಾ. ಶಿವಶರಣಪ್ಪ ಆರೋಪ

ವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ ಎಂದು ಕರ್ನಾಟಕ ರಾಜ್ಯ ಪಶುವೈದ್ಯರ ಸಂಘದ ಅಧ್ಯಕ್ಷ ಡಾ. ಶಿವಶರಣಪ್ಪ ಯಲಗೋಡು ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಅಪಾಯಕಾರಿ ಪ್ರಾಣಿಗಳಿಗೆ ಚಿಕಿತ್ಸೆ ನೀಡುವಾಗ ವೈದ್ಯರ ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಅರಣ್ಯ ಸಿಬ್ಬಂದಿ ಇರಬೇಕಿತ್ತು, ಆದರೆ ಕೇವಲ ಕೆಳಹಂತದ ಒಂದಿಬ್ಬರು ಸಿಬ್ಬಂದಿ ಮಾತ್ರ ಜೊತೆಗಿದ್ದರು ಎಂಬ ಮಾಹಿತಿ ಇದೆ.

ಅರಣ್ಯ ಇಲಾಖೆಯು ಈವರೆಗೆ ಕಾಯಂ ಪಶುವೈದ್ಯರನ್ನು ನೇಮಕ ಮಾಡಿಕೊಳ್ಳದೆ, ಪಶುವೈದ್ಯಕೀಯ ಇಲಾಖೆಯ ವೈದ್ಯರನ್ನು ಎರವಲು ಪಡೆದು ದುಡಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಎರವಲಾಗಿ ತೆರಳಿರುವ ಎಲ್ಲಾ ಪಶುವೈದ್ಯರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸೋಮವಾರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆಯಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಗರ್ಭಿಣಿ ನೀರಾನೆಯ ಆಕ್ರಮಣಶೀಲತೆ

ನೀರಾನೆಗಳು ನೋಡಲು ಮೃದು ಸ್ವಭಾವದ ಪ್ರಾಣಿಗಳಂತೆ ಕಂಡರೂ, ವಾಸ್ತವದಲ್ಲಿ ಅವು ಅತ್ಯಂತ ಆಕ್ರಮಣಕಾರಿಯಾಗಿರುತ್ತವೆ (ಅಗ್ರೆಸಿವ್) ಎಂದು ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಮಾಹಿತಿ ನೀಡಿದ್ದಾರೆ. ಇತರೆ ಪ್ರಾಣಿಗಳಿಗೆ ನೀಡುವಂತೆ ನೀರಾನೆಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ನೀರಿನಲ್ಲಿ ಹೋಗುವ ಬೋಟ್‌ಗಳನ್ನೇ ಅಟ್ಟಿಸಿಕೊಂಡು ಬರುವ ಇವು, ಸುಮಾರು 1 ಅಡಿಯಷ್ಟು ಉದ್ದದ ಹಲ್ಲುಗಳನ್ನು ಹೊಂದಿದ್ದು, ಮೊಸಳೆಗಳನ್ನೇ ಕಚ್ಚಿ ಸಾಯಿಸುವ ಸಾಮರ್ಥ್ಯ ಪಡೆದಿವೆ. ಅದರಲ್ಲೂ ಗರ್ಭಿಣಿಯಾಗಿದ್ದಾಗ ಇವುಗಳ ಆಕ್ರಮಣಶೀಲತೆ ನೂರ್ಮಡಿಯಾಗಿರುತ್ತದೆ ಎಂದು ಅವರು ವಿವರಿಸಿದ್ದಾರೆ.

ನೀರಾನೆಗೆ ಚಿಕಿತ್ಸೆಗೆ ಕೊಡಲು ಸಾಕಷ್ಟು ಸಿಬ್ಬಂದಿ ಬೇಕಾಗಿದೆ. ಆದರೆ, ಮೃಗಾಲಯಗಳಲ್ಲಿ ಅಷ್ಟೊಂದು ಸಿಬ್ಬಂದಿಗಳು ಇರುವುದಿಲ್ಲ. ಹೀಗಾಗಿ ಒಬ್ಬೊಬ್ಬರೇ ಹೋಗಿ ಚಿಕಿತ್ಸೆ ಕೊಡಬೇಕಾದ ಅನಿವಾರ್ಯತೆ ಇದೆ. ಇಂಥ ಪರಿಸ್ಥಿತಿಯಲ್ಲಿ ಅಚಾತುರ್ಯಗಳು ನಡೆದು ಹೋಗುತ್ತವೆ ಎಂದು ಹೂವರ್​ ಅವರು ಹೇಳಿದ್ದಾರೆ.

Read More
Next Story