
Sharavathi | ಕತ್ತಲೆಯಲ್ಲಿ ಶರಾವತಿ ಸಂತ್ರಸ್ತರ ಬದುಕು; ಮಲೆನಾಡಿನಲ್ಲಿ ಮುಗಿಯದ ಬವಣೆ
1980ರಲ್ಲಿ ಕೇಂದ್ರ ಅರಣ್ಯ ಕಾಯ್ದೆ ಬಂದ ನಂತರ ಅರಣ್ಯೇತರ ಉದ್ದೇಶಕ್ಕೆ ಬಳಸಲು ಕೇಂದ್ರದ ಅನುಮತಿ ಕಡ್ಡಾಯ. 12 ಸಾವಿರ ಕುಟುಂಬಗಳಿಗೆ 9500 ಎಕರೆ ಭೂಮಿ ಹಂಚಿಕೆ ಮಾಡಲಾಗಿದೆ. ಆದರೆ, ಅವರಿಗೆ ಯಾವುದೇ ಭೂಮಿಯ ಒಡೆತನ ಸಿಕ್ಕಿಲ್ಲ.
ಇಡೀ ರಾಜ್ಯಕ್ಕೆ ಬೆಳಕು ನೀಡಿದ ಮಲೆನಾಡಿನಲ್ಲಿ ಶರಾವತಿ ಸಂತ್ರಸ್ತರ ಬವಣೆ ಮಾತ್ರ ಬಗೆಹರಿದಿಲ್ಲ. ಮಲೆನಾಡು ಮಣ್ಣಿನಿಂದಲೇ ಬಂದ ಮೂವರು ಮುಖ್ಯಮಂತ್ರಿಗಳು ರಾಜ್ಯದ ಅಧಿಕಾರ ಹಿಡಿದರೂ ಸಂತ್ರಸ್ತರ ಬಾಳಲ್ಲಿ ಆವರಿಸಿರುವ ಕತ್ತಲೆ ಸರಿದಿಲ್ಲ. ಶರಾವತಿ ಜಲವಿದ್ಯುತ್ ಯೋಜನೆಗಾಗಿ ಮನೆ-ಮಠ, ತೆಂಗು-ಕಂಗು ಹಾಗೂ ಫಲವತ್ತಾದ ಕೃಷಿ ಭೂಮಿ ಕಳೆದುಕೊಂಡಿರುವ ಸಾವಿರಾರು ಕುಟುಂಬಗಳು ಆರು ದಶಕಗಳಿಂದ ಭೂ ಹಕ್ಕಿಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಹುಟ್ಟಿ ಬೆಳೆದಿರುವ ನೆಲದಲ್ಲೇ ಪರಕೀಯರಾಗಿ ಬದುಕು ಸವೆಸುವ ಅನಿವಾರ್ಯತೆ ಸಂತ್ರಸ್ತ ಕುಟುಂಬಗಳಿಗೆ ಎದುರಾಗಿದೆ.
ರೈತರ ತ್ಯಾಗಕ್ಕೆ ಸಿಗದ ಬೆಲೆ
1960ರ ದಶಕದಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳ ಸುಮಾರು 12 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರಗೊಂಡವು. ಅಂದು ಸುಮಾರು 50 ಸಾವಿರ ಎಕರೆಗೂ ಅಧಿಕ ಫಲವತ್ತಾದ ಭೂಮಿ ಶರಾವತಿ ಹಿನ್ನೀರಿನ ಪಾಲಾಯಿತು. ರಾಜ್ಯ ಸರ್ಕಾರವು ಪುನರ್ವಸತಿ ಯೋಜನೆಯಡಿ ಸಂತ್ರಸ್ತರಿಗೆ ಭೂಮಿ ಕೊಟ್ಟರೂ ಅದರ ಮೇಲೆ ಈವರೆಗೂ ಕಾನೂನುಬದ್ಧ ಹಕ್ಕು ಸಿಕ್ಕಿಲ್ಲ. ಹಾಗಾಗಿಯೇ ಸಂತ್ರಸ್ತರು ಭೂ ಹಕ್ಕಿಗಾಗಿ ದಶಕಗಳಿಂದ ಹೋರಾಟದ ಹಾದಿ ತುಳಿದಿದ್ದಾರೆ.
ಕಗ್ಗಂಟಾದ ಕೇಂದ್ರ ಅರಣ್ಯ ಸಂರಕ್ಷಣಾ ಕಾಯ್ದೆ
ಪ್ರಸ್ತುತ, ಸಂತ್ರಸ್ತರ ಪಾಲಿಗೆ 1980ರ ಕೇಂದ್ರ ಅರಣ್ಯ ಸಂರಕ್ಷಣಾ ಕಾಯ್ದೆಯೇ ಶಾಪವಾಗಿ ಪರಿಣಮಿಸಿದೆ. ರೈತರಿಗೆ ಸರ್ಕಾರ ನೀಡಿರುವ ಭೂ ದಾಖಲೆಗಳಲ್ಲಿ ಇಂದಿಗೂ ಅರಣ್ಯ ಅಂತಲೇ ಬರುತ್ತಿದೆ. 1980ಕ್ಕಿಂತ ಮೊದಲು ಇದನ್ನು ಕಂದಾಯ ಭೂಮಿಯನ್ನಾಗಿ ಬದಲಿಸಬೇಕಿತ್ತು. ಆದರೆ, ಸರ್ಕಾರ ಆ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಲಿಲ್ಲ. 1980 ರಲ್ಲಿ ಅರಣ್ಯ ಕಾಯ್ದೆ ಜಾರಿಗೆ ಬಂದ ನಂತರ ಯಾವುದೇ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಬೇಕಾದರೆ ಕೇಂದ್ರದ ಪೂರ್ವಾನುಮತಿ ಕಡ್ಡಾಯವಾಗಿದೆ. ಹಾಗಾಗಿಯೇ ರೈತರು ಸಾಗುವಳಿ ಮಾಡಿದರೂ ಅವರಿಗೆ ಭೂಮಿಯ ಹಕ್ಕು ಸಿಗದಂತಾಗಿದೆ.
ʼಮೂವರು ಸಿಎಂʼ ಕೊಟ್ಟ ಮಲೆನಾಡಿನಲ್ಲೇ ದುಸ್ಥಿತಿ
ಶಿವಮೊಗ್ಗ ಜಿಲ್ಲೆಯು ಕರ್ನಾಟಕಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದೆ. ಕಡಿದಾಳ್ ಮಂಜಪ್ಪ, ಎಸ್. ಬಂಗಾರಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದರೂ ಶರಾವತಿ ಸಂತ್ರಸ್ತರಿಗೆ ಈವರೆಗೂ ಭೂಮಿಯ ಒಡೆತನ ಸಿಕ್ಕಿಲ್ಲ. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಅವರಂತಹ ಹೋರಾಟಗಾರರು ಬಂದರೂ, ಸಾಕಷ್ಟು ರಾಜಕೀಯ ಇಚ್ಛಾಶಕ್ತಿ ಇದ್ದರೂ ಸಂತ್ರಸ್ತರ ಸಮಸ್ಯೆ ಮಾತ್ರ ಪರಿಹಾರ ಕಾಣದಾಗಿದೆ.
ಪಹಣಿ ಇಲ್ಲದೇ ನಾನಾ ಸಮಸ್ಯೆ
ಪಹಣಿ ಇಲ್ಲದ ಕಾರಣ ರೈತರಿಗೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಕೃಷಿ, ಇನ್ನಿತರೆ ವಾಣಿಜ್ಯ ಬೆಳೆ ಬೆಳೆಯಲು ಅಥವಾ ವೈಯಕ್ತಿಕ ಅನಿವಾರ್ಯತೆಗಳನ್ನು ಪೂರೈಸಿಕೊಳ್ಳಲು ದುಬಾರಿ ಬಡ್ಡಿ ನೀಡಿ ಖಾಸಗಿ ಲೇವಾದೇವಿದಾರರ ಮೊರೆ ಹೋಗುತ್ತಿದ್ದಾರೆ.
ಜಮೀನಿನ ಅಧಿಕೃತ ದಾಖಲೆ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಸಿಗುತ್ತಿಲ್ಲ. ಅಜ್ಜ ನಮ್ಮ ಜಮೀನಿನಲ್ಲಿ ಅಡಿಕೆ ಬೆಳೆಸಿದ್ದಾರೆ, ಅದೇ ಕುಟುಂಬದ ಆದಾಯವಾಗಿದೆ. ಆದರೆ, ಅರಣ್ಯ ಇಲಾಖೆಯವರು ಯಾವಾಗ ಬಂದು ಒಕ್ಕಲೆಬ್ಬಿಸುತ್ತಾರೋ ಎಂಬ ಭೀತಿಯಲ್ಲೇ ದಿನ ಕಳೆಯುತ್ತಿದ್ದೇವೆ ಎಂದು ಹೊಸನಗರದ ರೈತರು ದೂರಿದ್ದಾರೆ.
"ನಮಗೆ ಸರ್ಕಾರದ ಹಣ ಬೇಡ, ನಾವು ವಾಸವಿರುವ ಮತ್ತು ಬೆಳೆ ಬೆಳೆಯುತ್ತಿರುವ ಭೂಮಿಗೆ ಕಾನೂನುಬದ್ಧ ಹಕ್ಕು ನೀಡಬೇಕು. ರಾಜ್ಯಕ್ಕೆ ಬೆಳಕು ನೀಡಿದ ನಮ್ಮ ಬದುಕು ಕತ್ತಲಿಗೆ ತಳ್ಳಬೇಡಿ." ಎಂದು ಅಳಲು ತೋಡಿಕೊಂಡಿದ್ದಾರೆ.
"ಭೂಮಿ ಹಕ್ಕಿಗಾಗಿ ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಪ್ರತಿಯೊಂದು ಸರ್ಕಾರವೂ ಚುನಾವಣೆ ಸಮಯದಲ್ಲಿ ಜನರಿಗೆ ಆಶ್ವಾಸನೆ ನೀಡುತ್ತದೆ. ಆದರೆ, ಭೂಮಿ ಮಂಜೂರಿಗೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಲ್ಲ, ಕೇಂದ್ರದ ಮೇಲೆ ಒತ್ತಡ ಹೇರುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಶರಾವತಿ ಸಂತ್ರಸ್ತರ ಪರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಸರ್ಕಾರಗಳಲ್ಲಿ ಕಾಣದ ಇಚ್ಛಾಶಕ್ತಿ
2017 ರಲ್ಲಿ ರಾಜ್ಯ ಸರ್ಕಾರವು 9500 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿತ್ತು. ಆದರೆ, ಖಾತೆ ಬದಲಾವಣೆ ಮಾಡಿರಲಿಲ್ಲ. ಕಂದಾಯ ಇಲಾಖೆ ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 1980ರಲ್ಲಿ ಕೇಂದ್ರ ಅರಣ್ಯ ಕಾಯ್ದೆ ಬಂದ ನಂತರ ಅರಣ್ಯೇತರ ಉದ್ದೇಶಕ್ಕೆ ಬಳಸಲು ಕೇಂದ್ರದ ಅನುಮತಿ ಕಡ್ಡಾಯವಾಗಿದೆ. 12 ಸಾವಿರ ಕುಟುಂಬಗಳಿಗೆ 9500 ಎಕರೆ ಭೂಮಿ ಹಂಚಿಕೆ ಮಾಡಲಾಗಿದೆ. ಇನ್ನೂ 25 ಸಾವಿರ ಕುಟುಂಬಗಳಿಗೆ ಯಾವುದೇ ಭೂಮಿ ಅಥವಾ ಪುನರ್ವಸತಿ ಕಲ್ಪಿಸಿಲ್ಲ.
1959ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾ ನಂತರ ಸಂತ್ರಸ್ತ ಕುಟುಂಬಗಳಿಗೆ ನೀಡಿದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. 60 ವರ್ಷದಲ್ಲಿ ಭೂಮಿಯ ಸ್ವರೂಪ ಬದಲಾಗಿದೆ. ಕಾನೂನುಗಳು ಬದಲಾಗಿವೆ. ಆದರೆ, ಭೂಮಿ ಕೊಟ್ಟ ಸಂತ್ರಸ್ತರ ಬದುಕು ಮಾತ್ರ ಬದಲಾಗಿಲ್ಲ. ಜಲಾಶಯ ನಿರ್ಮಿಸುವಾಗ, ಪುನರ್ವಸತಿ ಕಲ್ಪಿಸಿದಾಗ ಯಾವುದೇ ಕಾನೂನುಗಳು ಇರಲಿಲ್ಲ. ತದನಂತರ ಅರಣ್ಯ ಹಾಗೂ ವನ್ಯಜೀವಿ ಕಾಯ್ದೆಗಳು ಬಂದವು, ಈಗ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಸಂತ್ರಸ್ತರಿಗೆ ಭೂಮಿ ಸಿಗುತ್ತಿಲ್ಲ ಎಂದು ಪತ್ರಕರ್ತ ಹಾಗೂ ಪರಿಸರ ಹೋರಾಟಗಾರ ಶಶಿ ಸಂಪಳ್ಳಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಡಿನೋಟಿಫಿಕೇಶನ್ ರದ್ದು ಮಾಡಿದ್ದ ಸರ್ಕಾರ
ಶರಾವತಿ ಹಿನ್ನೀರು ಪ್ರದೇಶದ ಸಂತ್ರಸ್ತರಿಗೆ ಭೂ ಹಕ್ಕು ನೀಡುವ ಸಂಬಂಧ ಹೊರಡಿಸಿದ್ದದ 56 ಡಿನೋಟಿಫಿಕೇಷನ್‌ಗಳನ್ನು ರದ್ದುಗೊಳಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ 2023 ರಲ್ಲಿ ತಡೆಯಾಜ್ಞೆ ನೀಡಿತ್ತು.
ಸಂತ್ರಸ್ತ ಕುಟುಂಬಗಳ ಪುನರ್ವಸತಿಗಾಗಿ 2017ರ ಅ.14ರಂದು ಶಿವಮೊಗ್ಗ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕುಗಳ ವ್ಯಾಪ್ತಿಯ 9,934 ಎಕರೆ 2 ಗುಂಟೆ ಮೈಸವಿ ಮೀಸಲು ಅರಣ್ಯ ಪ್ರದೇಶವನ್ನು ಡಿನೋಟಿಫಿಕೇಷನ್ ಮಾಡಲು ರಾಜ್ಯ ಸರ್ಕಾರ ಆದೇಶಿಸಿತ್ತು. ಸರ್ಕಾರದ ಈ ಆದೇಶವು 1978ರ ಅರಣ್ಯ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆ ಎಂದು ಜನಸಂಗ್ರಾಮ ಪರಿಷತ್ ಮುಖಂಡ ಗಿರೀಶ್ ಆಚಾರ್ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೇಂದ್ರದ ಪೂರ್ವಾನುಮತಿ ಇಲ್ಲದೆ ಮೀಸಲು ಅರಣ್ಯವನ್ನು ಡಿನೋಟಿಫಿಕೇಶನ್ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಹೈಕೋರ್ಟ್ 2021ರ ಮಾರ್ಚ್ 4ರಂದು ಡಿನೋಟಿಫಿಕೇಷನ್ ರದ್ದುಗೊಳಿಸಿ ತೀರ್ಪು ನೀಡಿತ್ತು.
ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರ 2023ರ ಫೆಬ್ರವರಿ 16ರಂದು ಅಧಿಸೂಚನೆ ಹೊರಡಿಸಿ ತನ್ನ ಹಳೆಯ ಡಿನೋಟಿಫಿಕೇಷನ್ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಿತು. ಇದರಿಂದ ಸಂತ್ರಸ್ತರಿಗೆ ಭೂ ಹಕ್ಕು ಕಳೆದುಕೊಳ್ಳುವ ಭೀತಿ ಎದುರಾಗಿತ್ತು.
ಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತರು
ಡಿನೋಟಿಫಿಕೇಶನ್ ರದ್ದು ಮಾಡಿದ್ದ ರಾಜ್ಯ ಸರ್ಕಾರ ಕ್ರಮ ಪ್ರಶ್ನಿಸಿ ಸಿಗಂದೂರು ಶ್ರೀಕ್ಷೇತ್ರದ ಧರ್ಮದರ್ಶಿ ಎಸ್. ರಾಮಪ್ಪ ನೇತೃತ್ವದಲ್ಲಿ ಸುಮಾರು 305 ಮಂದಿ ಸಂತ್ರಸ್ತರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ರಾಜ್ಯ ಸರ್ಕಾರವು ಡಿನೋಟಿಫಿಕೇಷನ್ ರದ್ದುಪಡಿಸಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿತ್ತು.
ಸಂತ್ರಸ್ತರು ಭೂಮಿಯಲ್ಲಿ ನಡೆಸುತ್ತಿರುವ ಸಾಗುವಳಿ ಹಕ್ಕಿಗೆ ಯಾವುದೇ ತೊಂದರೆ ನೀಡಬಾರದು ಎಂದೂ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ತಡೆಯಾಜ್ಞೆಯು ಅರ್ಜಿದಾರರಾದ 305 ಕುಟುಂಬಗಳ ಡಿನೋಟಿಫಿಕೇಷನ್ ವ್ಯಾಪ್ತಿಯ ಜಮೀನುಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. ಇದರಿಂದ ಸಂತ್ರಸ್ತ ಕುಟುಂಬಗಳಿಗೆ ಕಾನೂನುಬದ್ಧವಾಗಿ ಭೂಮಿ ಉಳಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿತ್ತು. ಒಟ್ಟಾರೆ ನಾಡಿಗೆ ಬೆಳಕು ನೀಡಿದ ತ್ಯಾಗಜೀವಿಗಳಿಗೆ 60 ವರ್ಷಗಳಾದರೂ ಹಕ್ಕುಪತ್ರದ ಭಾಗ್ಯ ದೊರೆತಿಲ್ಲ, ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ಮಲೆನಾಡಿನ ಶರಾವತಿ ಸಂತ್ರಸ್ತರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕು ಎಂಬುದು ಹೋರಾಟಗಾರರ ಅಭಿಮತವಾಗಿದೆ.

