Laughing Hyena: ವನ್ಯಜೀವಿ ಲೋಕದ ಅಚ್ಚರಿ: ಗದಗದ ಜನವಸತಿ ಪ್ರದೇಶದ ಬಳಿ ಕಾಣಿಸಿಕೊಂಡ ಕತ್ತೆ ಕಿರುಬ!
x
8 ರಿಂದ 10 ದಿನದ ಮರಿಗಳೊಂದಿಗೆ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕಲ್ಲಾಪುರ ಗ್ರಾಮದ ಸಮೀಪ ಪಟ್ಟೆ ಹೈನಾ ಕಾಣಿಸಿಕೊಂಡಿದೆ.

Laughing Hyena: ವನ್ಯಜೀವಿ ಲೋಕದ ಅಚ್ಚರಿ: ಗದಗದ ಜನವಸತಿ ಪ್ರದೇಶದ ಬಳಿ ಕಾಣಿಸಿಕೊಂಡ ಕತ್ತೆ ಕಿರುಬ!

ಜನವಸತಿ ಪ್ರದೇಶದಲ್ಲಿ ಮರಿಗಳೊಂದಿಗೆ ಪಟ್ಟೆ ಹೈನಾ ಕಾಣಿಸಿಕೊಂಡಿರುವುದು ವನ್ಯಜೀವಿ ತಜ್ಞರಲ್ಲಿ ಕುತೂಹಲ ಮೂಡಿಸಿದ್ದು, ಈ ವಿಶಿಷ್ಟ 'ಪರಿಸರ ಶುಚಿಗಾರ' ಪ್ರಾಣಿಗಳು, ಸುರಂಗ ಕೊರೆಯುವ ಚಾಣಾಕ್ಷತನ ಹೊಂದಿದೆ.


Click the Play button to hear this message in audio format

ಅತ್ಯಂತ ಅಪರೂಪದ ಹಾಗೂ ನಾಚಿಕೆ ಸ್ವಭಾವದ ಪ್ರಾಣಿಯಾದ ಪಟ್ಟೆ ಹೈನಾ (ಕತ್ತೆ ಕಿರುಬ), ಇದೇ ಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ತನ್ನೆರಡು ಮರಿಗಳೊಂದಿಗೆ (8 ರಿಂದ 10 ದಿನದ ಮರಿಗಳು) ಕ್ಯಾಮೆರಾ ಕಣ್ಣಿಗೆ ಬಿದ್ದಿರುವುದು ವನ್ಯಜೀವಿ ಲೋಕದ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಅಂದಾಜು 2 ರಿಂದ 3 ಸಾವಿರದಷ್ಟಿರುವ ಪಟ್ಟೆ ಹೈನಾಗಳು ಸಾಮಾನ್ಯವಾಗಿ ಬಹಿರಂಗವಾಗಿ ಕಾಣಿಸಿಕೊಳ್ಳುವುದೇ ಇಲ್ಲ. ಮನುಷ್ಯರನ್ನು ಕಂಡರೆ ದೂರ ಓಡಿಹೋಗುವ ಈ ವಿಶಿಷ್ಟ ಪ್ರಾಣಿ, ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕಲ್ಲಾಪುರ ಗ್ರಾಮದ ಸಮೀಪ ಇತ್ತೀಚೆಗಷ್ಟೇ ದರ್ಶನ ನೀಡಿದೆ. ಏಕಾಂತ ಬಯಸುವ ಹೈನಾ, ಜನವಸತಿ ಪ್ರದೇಶದ ಬಳಿ ಕಾಣಿಸಿಕೊಂಡಿರುವುದು ವನ್ಯಜೀವಿ ತಜ್ಞರಲ್ಲಿ ತೀವ್ರ ಆಸಕ್ತಿ ಮೂಡಿಸಿದೆ.

ಜನವರಿಯಲ್ಲಿಯೇ ಪತ್ತೆಯಾದ ಸುಳಿವು

ವಾಸ್ತವವಾಗಿ ಈ ವರ್ಷದ ಜನವರಿ ತಿಂಗಳಿನಲ್ಲಿಯೇ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕಲ್ಲಾಪುರ ಗ್ರಾಮದ ಸಮೀಪ ಹೈನಾ ಇರುವಿಕೆ ಪತ್ತೆಯಾಗಿತ್ತು. ಸ್ಥಳೀಯ ರೈತರು ರಸ್ತೆ ಬದಿಯ ಪೊದೆಯೊಂದರ ಗುಹೆಯಲ್ಲಿ ಹೈನಾ ಮರಿಗಳನ್ನು ಮೊದಲು ಗಮನಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಜೀವವೈವಿಧ್ಯ ಸಂಶೋಧಕರಾದ ಮಂಜುನಾಥ ಎಸ್‌ ನಾಯಕ, ಸಂಗಮೇಶ ಕಡಗದ, ಶಶಿಕಾಂತ ಕಂಬನ್ನವರ ಹಾಗೂ ಗದಗ ಅರಣ್ಯ ವಿಭಾಗದ ಡಿಸಿಎಫ್ ಸಂತೋಷ ಕುಮಾರ್ ಕೆಂಚಪ್ಪ ಅವರ ತಂಡ ಆ ಪ್ರದೇಶದಲ್ಲಿ ವಿಶೇಷ ಸಮೀಕ್ಷೆ ನಡೆಸಿ, ತಾಯಿ ಹೈನಾ ತನ್ನ ಎರಡು ಪುಟಾಣಿ ಮರಿಗಳೊಂದಿಗೆ ಹೊಸ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದನ್ನು ದೃಢಪಡಿಸಿದೆ.

ಡೆಕ್ಕನ್ ಪ್ರಸ್ತಭೂಮಿಯ ಶುಷ್ಕ ಮತ್ತು ಕಲ್ಲುಬಂಡೆಗಳಿಂದ ಕೂಡಿದ ಭೂಭಾಗವು ಇವುಗಳ ವಾಸಕ್ಕೆ ಸೂಕ್ತವಾದ ತಾಣವಾಗಿದ್ದು, ಗದಗ ಜಿಲ್ಲೆಯ ಈ ಭಾಗವು ಇವುಗಳ ಸಂತಾನೋತ್ಪತ್ತಿಗೆ ಅತ್ಯಂತ ಪೂರಕವಾಗಿದೆ ಎಂದು ಸಮೀಕ್ಷೆ ನಡೆಸಿದ ತಂಡ ಅಭಿಪ್ರಾಯಪಟ್ಟಿದೆ. ಬಳಿಕ ಈ ಹೈನಾ ಮತ್ತು ಅದರ ಮರಿಗಳ ಸಂಚಾರ ಮತ್ತೆ ಎಲ್ಲಿಯೂ ಕಂಡುಬಂದಿಲ್ಲ. ಇವು ಸಂತಾನೋತ್ಪತ್ತಿ ನಡೆಸಿದ್ದ ಕಲ್ಲಾಪುರ ಗ್ರಾಮದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕುಳಗೇರಿ ಗ್ರಾಮದತ್ತ ಮುಖ ಮಾಡಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಈ ಬಗ್ಗೆ ಗದಗ ಅರಣ್ಯ ವಿಭಾಗದ ಡಿಸಿಎಫ್ ಸಂತೋಷ ಕುಮಾರ್ ಕೆಂಚಪ್ಪನವರ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿ, "ಪಟ್ಟೆ ಹೈನಾದ ಸಂತತಿ ರಕ್ಷಿಸಲು ಗದಗ ಜಿಲ್ಲೆಯ ಹಳ್ಳಿಗಳಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಮಾನವ-ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮ ಸಿಬ್ಬಂದಿ ವನ್ಯಜೀವಿಗಳ ಚಲನವಲನಗಳನ್ನು ಗಮನಿಸುತ್ತಿದ್ದಾರೆ," ಎಂದರು.

ಏನಿದು ಪಟ್ಟೆ ಹೈನಾ?

ದೇಶದಲ್ಲಿ ಪಟ್ಟೆ ಹೈನಾಗಳ ನಿಖರ ಸಂಖ್ಯೆಯ ಬಗ್ಗೆ ಅಧಿಕೃತ ಅಂಕಿಅಂಶಗಳಿಲ್ಲದಿದ್ದರೂ, ಇವುಗಳ ಒಟ್ಟು ಸಂಖ್ಯೆ 2 ರಿಂದ 3 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರಾಣಿಗಳ ಮೈಮೇಲೆ ಕಪ್ಪು ಬಣ್ಣದ ಲಂಬವಾದ ಪಟ್ಟೆಗಳಿದ್ದು, ಇವು ಪೊದೆಗಳಲ್ಲಿ ಸುಲಭವಾಗಿ ಅಡಗಿಕೊಳ್ಳಲು ಸಹಾಯ ಮಾಡುತ್ತವೆ. ಅನೇಕರು ಹೈನಾಗಳನ್ನು ಕ್ರೂರ ಪ್ರಾಣಿಗಳೆಂದು ತಪ್ಪಾಗಿ ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ ಇವು ಪರಿಸರ ವ್ಯವಸ್ಥೆಯ ಅತ್ಯಂತ ಪ್ರಮುಖ 'ಶುಚಿಗಾರರು' (Scavengers) ಎನ್ನಬಹುದು.

ಹೈನಾಗಳ ಮುಂಭಾಗದ ಕಾಲುಗಳು ಹಿಂಭಾಗದ ಕಾಲುಗಳಿಗಿಂತ ಉದ್ದವಾಗಿರುತ್ತವೆ. ಇದರಿಂದಾಗಿ ಇವುಗಳು ನಡೆಯುವಾಗ ಸ್ವಲ್ಪ ಓರೆಯಾಗಿ (ಕುತ್ತಿಗೆ ಕೆಳಕ್ಕೆ ಹಾಕಿ) ನಡೆದಂತೆ ಭಾಸವಾಗುತ್ತದೆ. ಇವುಗಳ ಮೈಮೇಲೆ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಹೆಚ್ಚಾಗಿ ಕಪ್ಪು ಮೂತಿ ಮತ್ತು ಕುತ್ತಿಗೆಯಿಂದ ಬಾಲದವರೆಗೆ ವಿಸ್ತರಿಸಿರುವ ದಪ್ಪ, ಉದ್ದವಾದ ಕಪ್ಪು ಜುಟ್ಟನ್ನು ಹೊಂದಿರುತ್ತವೆ. ಪಟ್ಟೆಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಎದ್ದು ಕಾಣುತ್ತವೆ, ಆದರೆ ಚಳಿಗಾಲದಲ್ಲಿ ದಟ್ಟವಾಗಿ ಬೆಳೆಯುತ್ತವೆ. ಸತ್ತ ಪ್ರಾಣಿಗಳ ಅವಶೇಷಗಳನ್ನು ತಿನ್ನುವ ಮೂಲಕ ಇವು ಪರಿಸರದಲ್ಲಿ ರೋಗರುಜಿನಗಳು ಹರಡದಂತೆ ತಡೆಯುತ್ತವೆ. ಪ್ರಾಣಿ ಪ್ರಪಂಚದಲ್ಲೇ ಇವು ಅತ್ಯಂತ ಬಲಿಷ್ಠವಾದ ದವಡೆಗಳನ್ನು ಹೊಂದಿದ್ದು, ಎಂತಹ ಗಟ್ಟಿಯಾದ ಮೂಳೆಗಳನ್ನಾದರೂ ಪುಡಿಮಾಡಿ ಜೀರ್ಣಿಸಿಕೊಳ್ಳಬಲ್ಲವು. ಹಗಲಿನಲ್ಲಿ ಗುಹೆ ಅಥವಾ ಪೊದೆಗಳಲ್ಲಿ ವಿಶ್ರಮಿಸುವ ಇವು, ಸೂರ್ಯ ಮುಳುಗಿದ ನಂತರವಷ್ಟೇ ಆಹಾರದ ಹುಡುಕಾಟದಲ್ಲಿ ಹೊರಬರುತ್ತವೆ. ಇವುಗಳ ಧ್ವನಿಯು ಮನುಷ್ಯರು ವಿಚಿತ್ರವಾಗಿ ನಗುತ್ತಿರುವಂತೆ ಕೇಳಿಸುವುದರಿಂದ ಇದನ್ನು 'ಹೈನಾ ನಗು' (Hyena's laugh) ಎಂದೂ ಕರೆಯಲಾಗುತ್ತದೆ. ಈ ಮೂಲಕವೇ ಅವುಗಳು ಸಂವಹನ ನಡೆಸುತ್ತವೆ.

ಇವು ಹುಲಿ ಅಥವಾ ಚಿರತೆಗಳಂತೆ ಆಕ್ರಮಣಕಾರಿ ಅಲ್ಲ. ಆದರೆ ತನ್ನ ಮರಿಗಳಿಗೆ ಅಪಾಯ ಬಂದಾಗ ಮಾತ್ರ ರಕ್ಷಣೆಗೆ ಮುಂದಾಗುತ್ತವೆ. ಇವು ಸ್ವತಃ ಗುಹೆಗಳನ್ನು ತೋಡುವುದಕ್ಕಿಂತ ಹೆಚ್ಚಾಗಿ, ನೈಸರ್ಗಿಕವಾಗಿ ಇರುವ ಕಲ್ಲುಬಂಡೆಗಳ ನಡುವಿನ ಸಂದುಗಳು ಅಥವಾ ಮುಳ್ಳುಹಂದಿಗಳು ಮಾಡಿದ ಬಿಲಗಳನ್ನು ಅತಿಕ್ರಮಿಸಿಕೊಂಡು ವಾಸಿಸುತ್ತವೆ. ಸಂಶೋಧಕರ ಪ್ರಕಾರ, ಪಟ್ಟೆ ಹೈನಾಗಳು ಅಗತ್ಯಬಿದ್ದರೆ, ಸುಮಾರು 4 ರಿಂದ 5 ಮೀಟರ್ ಉದ್ದದ ಸುರಂಗಗಳನ್ನು ತೋಡುತ್ತವೆ. ಇಸ್ರೇಲ್‌ನಂತಹ ದೇಶಗಳಲ್ಲಿ ಇವು ಬರೋಬ್ಬರಿ 27 ಮೀಟರ್‌ಗಳಷ್ಟು ಉದ್ದದ ಸುರಂಗ ಕೊರೆದ ಉದಾಹರಣೆಗಳೂ ಇವೆ. ತಾವು ಸಂಗ್ರಹಿಸಿದ ಎಲುಬುಗಳನ್ನು ಈ ಸುರಂಗಗಳಲ್ಲಿ ಅಡಗಿಸಿಡುವ ವಿಶಿಷ್ಟ ಅಭ್ಯಾಸವನ್ನು ಇವು ಹೊಂದಿವೆ.

ಈ ಬಗ್ಗೆ ಜೀವವೈವಿಧ್ಯ ಸಂಶೋಧಕ ಮಂಜುನಾಥ್ ಎಸ್. ನಾಯಕ್ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿ, "ಆವಾಸಸ್ಥಾನದ ನಾಶದಿಂದಾಗಿ ಭಾರತದಲ್ಲಿ ಪಟ್ಟೆ ಹೈನಾಗಳ ಸಂಖ್ಯೆ ಕುಸಿತಗೊಂಡಿದ್ದು ಅಳಿವಿನಂಚಿನ ಪಟ್ಟಿಯಲ್ಲಿವೆ. ಇವು ನೈಸರ್ಗಿಕವಾಗಿ ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಇವುಗಳ ಸಂರಕ್ಷಣೆಯಲ್ಲಿ ರೈತರು, ಸಾರ್ವಜನಿಕರು ಅರಣ್ಯ ಇಲಾಖೆಯ ಜೊತೆ ಸಹಕರಿಸಬೇಕು," ಎಂದರು.

ಹೈನಾಗಳು ಸಮಾಧಿಯಲ್ಲಿ ಹೂತಿರುವ ಹೆಣಗಳನ್ನು ಅಗೆದು ತೆಗೆಯುತ್ತವೆ ಎಂಬ (ಸಮಾಧಿ ದರೋಡೆಕೋರರು) ಅಪಖ್ಯಾತಿ ಹೊಂದಿವೆ. ಕೆಲವೊಮ್ಮೆ ನಾಯಿ, ಕುರಿ ಹಾಗೂ ಸಣ್ಣಗಾತ್ರದ ಸಸ್ತನಿಗಳನ್ನು ಬೇಟೆಯಾಡಬಲ್ಲ ಸಾಮರ್ಥ್ಯ ಹೊಂದಿದ್ದು, ಮಾಂಸಾಹಾರಿಗಳಾಗಿದ್ದರೂ ಬೇಸಿಗೆ ಋತುವಿನಲ್ಲಿ ಸೌತೆಕಾಯಿ, ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳನ್ನು ಸೇವಿಸುವ ಮೂಲಕ ದೇಹದ ಉಷ್ಣಾಂಶವನ್ನು ಸರಿದೂಗಿಸಿಕೊಳ್ಳುತ್ತವೆ. ಗದಗದ ಜನವಸತಿ ಪ್ರದೇಶದಲ್ಲಿ ಇವು ತನ್ನ ಮರಿಗಳಿಗೆ ಜನ್ಮ ನೀಡಿರುವುದು ಇದೇ ಮೊದಲು ಎಂದು ವಿವರಿಸಿದರು.

ಗದಗದಲ್ಲಿ ಕಾಣಿಸಿಕೊಂಡ ಬಲು ಅಪರೂಪದ ಕತ್ತೆ ಕಿರುಬದ ವಿಡಿಯೋ ಇಲ್ಲಿದೆ.

ಹೈನಾ ಸಂರಕ್ಷಣಾ ಪ್ರದೇಶ

ಹೈನಾಗಳ ಸಂರಕ್ಷಣೆಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕದ ಮೊಟ್ಟಮೊದಲ 'ಪಟ್ಟೆ ಹೈನಾ (ಕತ್ತೆಕಿರುಬ) ಸಂರಕ್ಷಣಾ ಪ್ರದೇಶ' ಸ್ಥಾಪಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಬೆಳಗಾವಿ ಮತ್ತು ಗೋಕಾಕ ತಾಲ್ಲೂಕುಗಳ ಗಡಿಭಾಗದಲ್ಲಿರುವ ಸುಮಾರು 120 ಚದರ ಕಿಲೋಮೀಟರ್ ಮೀಸಲು ಅರಣ್ಯ ಪ್ರದೇಶವನ್ನು ಇದಕ್ಕಾಗಿ ಗುರುತಿಸಲಾಗಿದೆ. ದೇಶದ ಇತರ ಭಾಗಗಳಲ್ಲಿ ಹೈನಾಗಳನ್ನು ಇತರೆ ಪ್ರಾಣಿಗಳ ಜೊತೆಗೆ ಸಂರಕ್ಷಿಸಲಾಗುತ್ತಿದ್ದರೆ, ಬೆಳಗಾವಿಯ ಈ ವಲಯವು ಕತ್ತೆಕಿರುಬಗಳಿಗಾಗಿಯೇ ಮೀಸಲಾದ ದೇಶದ ಮೊದಲ ವಿಶೇಷ ಅಭಯಾರಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸವದತ್ತಿ, ಗೋಕಾಕ ಹಾಗೂ ಹುಕ್ಕೇರಿ ಭಾಗದ ಶುಷ್ಕ ಪರ್ಣಪಾತಿ ಕಾಡುಗಳು ಹೈನಾಗಳಿಗೆ ಅತ್ಯಂತ ಸುರಕ್ಷಿತ ತಾಣಗಳೆಂದು ತಜ್ಞರು ಗುರುತಿಸಿದ್ದಾರೆ.

ಹಂಪಿ ಸುತ್ತಮುತ್ತಲ ಪ್ರದೇಶ ಮತ್ತು ಕರಡಿ ಧಾಮಗಳ ಸಮೀಪ ಇವುಗಳ ಸಂಖ್ಯೆ ಹೆಚ್ಚಿದ್ದು, ಅಂಜನಾದ್ರಿ ಬೆಟ್ಟ ಮತ್ತು ಗಂಗಾವತಿ ಸುತ್ತಮುತ್ತಲಿನ ಕಲ್ಲಿನ ಬೆಟ್ಟಗಳಲ್ಲಿ ಇವು ವಾಸಿಸುತ್ತವೆ. ಬಂಡೀಪುರ ಮತ್ತು ನಾಗರಹೊಳೆಯಂತಹ ಕಾಡುಗಳ ಅಂಚಿನಲ್ಲಿರುವ ಶುಷ್ಕ ಭಾಗಗಳಲ್ಲಿ ಇವು ಅಪರೂಪವಾಗಿ ಕಂಡುಬರುತ್ತಿದ್ದು, ಇತ್ತೀಚೆಗಷ್ಟೇ ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಇವು ಕಾಣಿಸಿಕೊಂಡಿರುವುದು ವಿಶೇಷ.

ಅಳಿವಿನಂಚಿನಲ್ಲಿರುವ ಪ್ರಭೇದ ಜೀವವೈವಿಧ್ಯದ ದೃಷ್ಟಿಯಿಂದ ಹೈನಾಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಾಲಿಗೆ ಸೇರುತ್ತಿವೆ. ಗಣಿಗಾರಿಕೆ ಮತ್ತು ಕಲ್ಲು ಕ್ವಾರಿಗಳಿಂದಾಗಿ ಇವುಗಳ ಆವಾಸಸ್ಥಾನವಾದ ಬೆಟ್ಟಗಳು ನಾಶವಾಗುತ್ತಿರುವುದು ದೊಡ್ಡ ಸವಾಲಾಗಿದೆ. ಇವುಗಳ ಸಂರಕ್ಷಣೆಗಾಗಿ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪಟ್ಟೆ ಹೈನಾಗಳನ್ನು 'ಶೆಡ್ಯೂಲ್ 1' ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸುವ ಪ್ರಸ್ತಾಪಗಳಿವೆ. ಇದರಿಂದಾಗಿ ಭವಿಷ್ಯದಲ್ಲಿ ಇವುಗಳಿಗೂ ಹುಲಿ ಅಥವಾ ಆನೆಗಳಂತೆಯೇ ಕಟ್ಟುನಿಟ್ಟಿನ ರಕ್ಷಣೆ ದೊರೆಯಲಿದೆ.

ಕರ್ನಾಟಕದಲ್ಲಿ ಪಟ್ಟೆ ಹೈನಾಗಳು ಮಾತ್ರವೇ ಕಂಡುಬರುತ್ತವೆ. ಆಫ್ರಿಕಾದಲ್ಲಿ ಕಂಡುಬರುವ ಚುಕ್ಕೆ ಹೈನಾವು ಅತ್ಯಂತ ಬಲಿಷ್ಠವಾಗಿದ್ದು ಗುಂಪಿನಲ್ಲಿ ಬೇಟೆಯಾಡುತ್ತದೆ. ದಕ್ಷಿಣ ಆಫ್ರಿಕಾದ ಮರುಭೂಮಿಗಳಲ್ಲಿ ಕಂದು ಹೈನಾ ಕಾಣಸಿಗುತ್ತದೆ. ಜೊತೆಗೆ ಆರ್ಡ್‌ವುಲ್ಫ್ ಹೈನಾಗಳು ಕೇವಲ ಗೆದ್ದಲುಗಳನ್ನು ತಿಂದು ಬದುಕುವ ಸಣ್ಣ ಗಾತ್ರದ ಹೈನಾಗಳಾಗಿವೆ.

Read More
Next Story