
ʼಮಾಲಿನ್ಯʼ ನಗರಿಯ ಶ್ವಾಸಕೋಶಕ್ಕೆ ಲೋಕೋಪಯೋಗಿ ಇಲಾಖೆ ಲಗ್ಗೆ! 'ರೇಷ್ಮೆ ಭವನ'ಕ್ಕಾಗಿ 628 ʼಮರʼಣ ಹೋಮ?
ರೇಷ್ಮೆ ಭವನ ನಿರ್ಮಾಣಕ್ಕಾಗಿ ದಶಕಗಳ ಇತಿಹಾಸವಿರುವ 628 ಮರಗಳನ್ನು ಕಡಿಯುವ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಸಂಬಂಧ 100ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ಪರಿಸರ ಮಾಲಿನ್ಯದಿಂದ ತುಂಬಿ ತುಳುಕುತ್ತಿರುವ ಉದ್ಯಾನನಗರಿಯ ಉಸಿರಿಗೆ ಆಸರೆಯಾಗಿದ್ದ ಶ್ವಾಸಕೋಶವೊಂದನ್ನು ತುಂಡರಿಸುವ ಪ್ರಯತ್ನ ಸರ್ಕಾರದಿಂದಲೇ ನಡೆದಿದೆಯೇ?
ಶಕ್ತಿ ಕೇಂದ್ರ ವಿಧಾನಸೌಧದಿಂದ ಅಂದಾಜು ಮೂರು ಕಿ.ಮೀ. ದೂರದಲ್ಲಿರುವ, ನಗರದ ಎರಡನೇ ಅತಿ ಹೆಚ್ಚು ಮಾಲಿನ್ಯ ದಾಖಲಾಗುವ ಮೆಜೆಸ್ಟಿಕ್ -ಓಕಳೀಪುರದ ಬಳಿ ಇರುವ ರೇಷ್ಮೆ ಇಲಾಖೆ ಆವರಣದ ಅನೇಕ ಮರ ಮಾರಣಹೋಮಕ್ಕೆ ಸಿದ್ಧತೆ ನಡೆಯುತ್ತಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ಹೆಸರಿನಲ್ಲಿ ಬರೊಬ್ಬರಿ 628 ಮರಗಳನ್ನು ಕಡಿಯಲು ಲೋಕೋಪಯೋಗಿ ಇಲಾಖೆ (PWD) ಅನುಮತಿ ಕೋರಿದೆ. ರೇಷ್ಮೆ ಇಲಾಖೆಯ ಎಲ್ಲಾ ಕಚೇರಿಗಳನ್ನು ಒಂದೇ ಸೂರಿನಡಿ ತರುವ "ರೇಷ್ಮೆ ಭವನ" ಎಂಬ ಬಹುಮಹಡಿ ಕಟ್ಟಡದ ನಿರ್ಮಾಣಕ್ಕಾಗಿ ಓಕಳಿಪುರದಲ್ಲಿನ ಮುದ್ದೇನಹಳ್ಳಿಯಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಜಾಗದಲ್ಲಿ ಕಾಮಗಾರಿಗೆ ಉದ್ಧೇಶಿಸಲಾಗಿದೆ. ಈ ಆವರಣದಲ್ಲಿ ದಶಕಗಳಿಂದಿರುವ ಸಿಲ್ವರ್ ಓಕ್, ಹಲಸು, ಬೇವು ಸೇರಿ ವಿವಿಧಮಾದರಿಯ ಬೃಹತ್ ಗಾತ್ರದ ಒಟ್ಟು 628 ಮರ ಕತ್ತರಿಸಲು, ಕಟ್ಟಡ ನಿರ್ಮಾಣ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾ ಖೆ ಜಿಬಿಎನಿಂದ ಅನುಮತಿ ಕೋರಿದೆ. ಇದಕ್ಕೆ ಜಿಬಿಎ ಸಹ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೇಳಿದೆ. ಇದಕ್ಕೆ ಈಗಾಗಲೇ 100 ಕ್ಕೂ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ವಿಧಾನಸೌಧದ ಕೂಗಳತೆ ದೂರ
ಬೆಂಗಳೂರಿನ ಸಂಚಾರ ದಟ್ಟಣೆಯ ಕೇಂದ್ರಬಿಂದುಗಳಾದ ಪೀಣ್ಯ, ಮೆಜೆಸ್ಟಿಕ್ ಮತ್ತು ಓಕಳಿಪುರದಲ್ಲಿ ಮಾಲಿನ್ಯದ ಮಟ್ಟವು ಈಗಾಗಲೇ 'ಅನಾರೋಗ್ಯ' (Unhealthy) ವಲಯದಲ್ಲಿದೆ. ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಓಕಳಿಪುರದ ಹಳೆಯ ರೇಷ್ಮೆ ಘಟಕದ ಆವರಣವು ನಗರದ "ಹಸಿರು ಶ್ವಾಸಕೋಶ"ದಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ಶ್ವಾಸಕೋಶಕ್ಕೆ ಕೊಡಲಿ ಪೆಟ್ಟು ನೀಡಲು ಮುಂದಾಗಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಓಕಳಿಪುರವು, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿದೆ. ಇಲ್ಲಿ ಮರಗಳು ಇಲ್ಲದಿದ್ದರೆ ಈ ಪ್ರದೇಶದ ಉಷ್ಣಾಂಶವು ಸುತ್ತಮುತ್ತಲಿನ ಪ್ರದೇಶಗಳಿಗಿಂತ 2 ಡಿಗ್ರಿ ಸೆಲ್ಸಿಯೆಸ್ ನಿಂದ 4 ಡಿಗ್ರಿ ಸೆಲ್ಸಿಯೆಸ್ ವರೆಗೆ ಹೆಚ್ಚಾಗಲಿದೆ. ಕಾಂಕ್ರೀಟ್ ಕಟ್ಟಡಗಳು ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ ಬೇಸಿಗೆಯಲ್ಲಿ ಇಲ್ಲಿನ ತಾಪಮಾನ ಇನ್ನಷ್ಟು ಅಸಹನೀಯವಾಗಲಿದೆ.
ಈ ಪ್ರದೇಶದಲ್ಲಿ ಸಾವಿರಾರು ವಾಹನಗಳು ಹೊರಹಾಕುವ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲು ಈ ರೇಷ್ಮೆ ಘಟಕದ ಮರಗಳು ಸಹಕರಿಸುತ್ತಿದ್ದವು. ಈ ಮರಗಳ ನಾಶದಿಂದಾಗಿ ಗಾಳಿಯಲ್ಲಿನ PM (Particulate Matter) 2.5 ಮತ್ತು PM 10 (ಸೂಕ್ಷ್ಮ ಧೂಳಿನ ಕಣಗಳು) ಪ್ರಮಾಣ ಗಣನೀಯವಾಗಿ ಹೆಚ್ಚಿ, ಶ್ವಾಸಕೋಶದ ಕಾಯಿಲೆಗಳಿಗೆ ದಾರಿಯಾಗಲಿದೆ. ರೈಲ್ವೆ ಹಳಿಗಳು ಮತ್ತು ಮೇಲ್ಸೇತುವೆಗಳ ನಡುವೆ ಇರುವ ಓಕಳಿಪುರದಲ್ಲಿ ಮರಗಳು 'ಶಬ್ದ ನಿರೋಧಕ' (Sound Barriers) ಆಗಿ ಕೆಲಸ ಮಾಡುತ್ತಿದ್ದವು. ಮರಗಳು ಇಲ್ಲದಿದ್ದರೆ ವಾಹನಗಳ ಮತ್ತು ರೈಲುಗಳ ಕರ್ಕಶ ಶಬ್ದದಿಂದ ಶಬ್ದ ಮಾಲಿನ್ಯ ಇನ್ನಷ್ಟು ಹೆಚ್ಚಲಿದೆ ಎಂದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಓಕಳಿಪುರದಲ್ಲಿ ಪರಿಸರ ನಾಶ
ಈ ಹಿಂದೆ ಓಕಳೀಪುರ ಜಂಕ್ಷನ್‌ನಲ್ಲಿ ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುವಾಗ ನೂರಾರು ವರ್ಷ ಹಳೆಯದಾದ ಮರಗಳನ್ನು ಕಡಿಯಲಾಗಿತ್ತು. ಆಗಲೂ ಪರಿಸರವಾದಿಗಳು ತೀವ್ರ ಪ್ರತಿರೋಧ ಒಡ್ಡಿದ್ದರೂ, ಕಾಂಕ್ರೀಟ್ ಕಾಮಗಾರಿ ಹಸಿರನ್ನು ನುಂಗಿ ಹಾಕಿತ್ತು. ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗಿನ ಸ್ಟೀಲ್ ಫ್ಲೈ ಓವರ್ ಯೋಜನೆಗಾಗಿ 800ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಮುಂದಾದಾಗ ನಾಗರಿಕರು "ಚಿಪ್ಕೋ" ಮಾದರಿಯ ಹೋರಾಟ ನಡೆಸಿ ಅದನ್ನು ತಡೆದಿದ್ದರು. ಆದರೆ, ಮೆಟ್ರೋ ಮತ್ತು ರಸ್ತೆ ವಿಸ್ತರಣೆಯ ಹೆಸರಿನಲ್ಲಿ ಜಯನಗರ, ಮೈಸೂರು ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆಗಳಲ್ಲಿ ಸಾವಿರಾರು ಮರಗಳು ಈಗಾಗಲೇ ನಾಶವಾಗಿವೆ.
ಸಾಕಷ್ಟು ವಿರೋಧ
ಓಕಳಿಪುರದಲ್ಲಿನ ಮುದ್ದೇನಹಳ್ಳಿಯಲ್ಲಿ "ರೇಷ್ಮೆ ಭವನ" ಎಂಬ ಬಹುಮಹಡಿ ಕಟ್ಟಡದ ನಿರ್ಮಾಣಕ್ಕಾಗಿ ಕೆಎಸ್‌ಐಸಿ ಗೆ ಸೇರಿದ ಜಾಗದಲ್ಲಿನ ಮರಗಳನ್ನು ಕಡಿಯುವ ಪ್ರಸ್ತಾವನೆಗೆ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ನಗರದಲ್ಲಿ ಮರ ಕಡಿದು ರೇಷ್ಮೆ ಭವನವನ್ನು ಸ್ಥಾಪಿಸುವ ಬದಲು ರೇಷ್ಮೆ ಬೆಳೆಯುವ ಪ್ರದೇಶದಲ್ಲೇ ನಿರ್ಮಿಸುವುದು ಸೂಕ್ತ. ರಾಮನಗರ ಅಥವಾ ಚಿಕ್ಕಬಳ್ಳಾಪುರದಂತಹ ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ ಯಾಕೆ ನಿರ್ಮಿಸಬಾರದು?" ಎಂಬ ಪ್ರಶ್ನೆ ಜಾಲತಾಣಗಳಲ್ಲಿ ಮೊಳಗುತ್ತಿದೆ.
ಬೆಂಗಳೂರಿನಲ್ಲಿ ಶುದ್ಧ ಗಾಳಿ ಉಸಿರಾಡಲು ಅಳಿದುಳಿದ ಹಸಿರು ಹೊದಿಕೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಬೃಹತ್ ಸಂಖ್ಯೆಯಲ್ಲಿ ಮರಗಳನ್ನು ಕಡಿಯಲು ಅವಕಾಶ ನೀಡ ಬಾರದು..ಹೀಗೆ ಅನೇಕರು ಮರ ಕಡಿಯುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪರಿಸರ ಮಾರಣಹೋಮ ನಡೆಯುತ್ತಿದೆ. ನಗರದ ಶೇ.70 ರಷ್ಟಿದ್ದ ಹಸಿರು ಹೊದಿಕೆ ಕೇವಲ ಐದು ದಶಕಗಳಲ್ಲಿ ಶೇ.2ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ನಗರದ ಕಾಂಕ್ರೀಟೀಕರಣವು ಶೇ.8ರಷ್ಟು ಇದ್ದದ್ದು. ಶೇ.95 ಕ್ಕಿಂತ ಹೆಚ್ಚಾಗಿದೆ. ಈ ಮೂಲಕ ಉದ್ಯಾನನಗರಿಯು ಕಾಂಕ್ರೀಟ್ ಮರುಭೂಮಿಯಾಗಿ ಮಾರ್ಪಟ್ಟಿದೆ. ವಾಸ್ತವವಾಗಿ ನಗರದ ಪರಿಸರ ಸಮತೋಲನ ಕಾಪಾಡಲು ಮತ್ತು ಆರೋಗ್ಯಕರ ವಾತಾವರಣ ಉಳಿಸಿಕೊಳ್ಳಲು ಶೇ.30ರಷ್ಟು ಹಸಿರು ಹೊದಿಕೆ ಇರಬೇಕು ಎಂದು ಸಂದೀಪ್ ಅನಿರುಧನ್ ಎಂಬುವರು ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪರಿಸರ ತಜ್ಞ ಜೋಸೆಫ್ ಹೂವರ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಈಗಾಗಲೇ ಶೇ.93 ರಷ್ಟು ಮರಗಳನ್ನು ಕಡಿಯಲಾಗಿದೆ. ಕಡಿಯಲು ಇನ್ನೆನ್ನು ಉಳಿದಿದೆ. ಒಂದೆಡೆ ಕೆರೆ ಮಾಯವಾಗುತ್ತಿದೆ. ಇನ್ನೊಂದೆಡೆ ಮರಗಳು ಕ್ಷೀಣಿಸುತ್ತಿವೆ. ಪರಿಸರ ಸತ್ತು ಹೋಗಿರುವ ನಗರಿಯಾಗಿ ಬೆಂಗಳೂರು ಪರಿಣಮಿಸಿದೆ (dead city). ಈಗಾಗಲೇ ಸತ್ತಿರುವ ನಗರಿಯನ್ನು ಸುಡುಗಾಡಿಗೆ ಹಾಕುವ ಕೆಲಸ ಮಾಡಲಾಗುತ್ತಿದೆ. ಮುಂದಿನ ಪೀಳಿಗೆಗೆ ಕಾಂಕ್ರೀಟ್ ನಷ್ಟೆ ನೀಡಬೇಕಿದೆ. ಈಗಿರುವ ಮರಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಇದನ್ನು ಬಿಟ್ಟು ಎಲ್ಲವನ್ನು ಧರೆಗುರುಳಿಸಿ ಸಾಧಿಸುವುದಾದರೂ ಏನು? ಎಂದು ಪ್ರಶ್ನಿಸಿದರು.
100 ಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಕೆ
ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎಫ್ ಕೆ. ಸುದರ್ಶನ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಓಕಳಿಪುರದಲ್ಲಿನ ಮುದ್ದೇನಹಳ್ಳಿಯಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಜಾಗದಲ್ಲಿ ರೇಷ್ಮೆ ಭವನ" ಎಂಬ ಬಹುಮಹಡಿ ಕಟ್ಟಡದ ನಿರ್ಮಾಣಕ್ಕಾಗಿ 628 ಮರಗಳನ್ನು ಕಡಿಯುವ ಸಂಬಂಧ ಕರೆದಿದ್ದ ಆಕ್ಷೇಪಣೆ ಸಲ್ಲಿಕೆಯ ದಿನಾಂಕ ಮುಕ್ತಾಯಗೊಂಡಿದ್ದು, 100 ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇದನ್ನು ಜಿಬಿಎ ಮುಂದೆ ಮಂಡಿಸಲಾಗುವುದು. ಇಲಾಖೆಯ ನಿಯಾಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

