
POSH Act: ಸ್ಯಾಂಡಲ್‌ವುಡ್‌ನಲ್ಲಿ ಪಾಶ್ ಕಾಯ್ದೆ: ದೌರ್ಜನ್ಯ ತಡೆಗೆ ಇದೆಯೇ ಸಮಿತಿ?
ಸ್ಯಾಂಡಲ್‌ವುಡ್‌ನಲ್ಲಿ ಪಾಶ್ ಕಾಯ್ದೆಯಡಿ ಸಮಿತಿ ರಚನೆ ಮಾಡಿದರೂ ಅದರ ಕಾರ್ಯವ್ಯಾಪ್ತಿ ಸೀಮಿತವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಗೆ ಮಾತ್ರ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಕೇರಳದ 'ಹೇಮಾ ಸಮಿತಿ' ವರದಿ ಬಿಡುಗಡೆಯಾದ ನಂತರ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಯಾಯಿತು. ಈ ಅಲೆ ಸ್ಯಾಂಡಲ್‌ವುಡ್‌ಗೂ ತಟ್ಟಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪಾಶ್ (Prevention of Sexual Harassment) ಕಾಯ್ದೆಯಡಿ(ಲೈಂಗಿಕ ಕಿರುಕುಳ ತಡೆಕಾಯ್ದೆ) ಆಂತರಿಕ ದೂರು ಸಮಿತಿ ರಚನೆ ಮಾಡಿತು. ಆದರೆ, ಸಮಿತಿ ಎಷ್ಟರಮಟ್ಟಿಗೆ ಕೆಲಸ ಮಾಡಿತ್ತು ಮತ್ತು ಪ್ರಸ್ತುತ ಸಮಿತಿ ರಚನೆಯಾಗಿದೆಯೇ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಎನ್.ಎಂ. ಸುರೇಶ್ ಮತ್ತು ಎಂ.ನರಸಿಂಹಲು ಕಾಲಾವಧಿಯಲ್ಲಿ ಸಮಿತಿ ರಚನೆಯಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಫಲಪ್ರದವಾಗಿಲ್ಲ. ಎನ್.ಎಂ.ಸುರೇಶ್ ಅವಧಿಯಲ್ಲಿ ಬೆಳಗ್ಗೆ ಸಮಿತಿ ರಚನೆಯಾಗಿ ಚಿತ್ರರಂಗ ಸಂಭ್ರಮಿಸುವಷ್ಟರಲ್ಲಿ ಸಂಜೆಯ ವೇಳೆಗೆ ತೀರ್ಮಾನವನ್ನು ಹಿಂಪಡೆದು ಅಚ್ಚರಿ ಮೂಡಿಸಿತು. ಕೆಎಫ್‌ಸಿಸಿ ಅಧ್ಯಕ್ಷೀಯ ಚುನಾವಣೆಯ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ ಎಂಬ ನೆಪದಲ್ಲಿ ಸಮಿತಿ ರಚನೆಯನ್ನು ವಾಪಸ್ ಪಡೆದುಕೊಳ್ಳಲಾಯಿತು. ಇದು ವ್ಯಾಪಕ ಟೀಕೆಗೂ ಗುರಿಯಾಯಿತು.
ಬಳಿಕ ಕೆಎಫ್‌ಸಿಸಿ ಅಧ್ಯಕ್ಷರಾದ ಎಂ.ನರಸಿಂಹಲು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಆದರೆ ಯಾವೊಂದು ಸಭೆ ನಡೆಸಿದ ಉದಾಹರಣೆಗಳಿಲ್ಲ. ಹೀಗಾಗಿ ಸಮಿತಿಯು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸಿತು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿಯಿತು. ಈಗ ಹಿರಿಯ ನಟಿ, ಮಾಜಿ ಸಚಿವೆ ಡಾ. ಜಯಮಾಲಾ ಅವರ ಹೆಗಲಿಗೆ ಮಂಡಳಿಯ ಜವಾಬ್ದಾರಿ ನೀಡಲಾಗಿದೆ. ಆದರೆ, ಅವರ ನೇತೃತ್ವದಲ್ಲಿ ಸಮಿತಿ ರಚನೆಯೇ ಆಗಿಲ್ಲ ಎಂದು ಮೂಲಗಳು ಹೇಳಿವೆ.
ಮನೋರಂಜನ ಕ್ಷೇತ್ರವು ಹೊರಗಿನಿಂದ ಎಷ್ಟು ವರ್ಣರಂಜಿತವಾಗಿ ಕಾಣುತ್ತದೆಯೋ, ಒಳಗಿನಿಂದ ಅಷ್ಟೇ ಕರಾಳ ಸತ್ಯಗಳನ್ನು ಅಡಗಿಸಿಟ್ಟುಕೊಂಡಿದೆ ಎಂಬುದು ಕಾಲಕಾಲಕ್ಕೆ ಸಾಬೀತಾಗುತ್ತಿದೆ. ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, 'ಕಾಸ್ಟಿಂಗ್ ಕೌಚ್' ಮತ್ತು ಕೆಲಸದ ಸ್ಥಳದಲ್ಲಿನ ಅಸುರಕ್ಷಿತ ವಾತಾವರಣದ ವಿರುದ್ಧ ದಶಕಗಳಿಂದ ಧ್ವನಿ ಕೇಳಿಬರುತ್ತಲೇ ಇದೆ. ಆಗಾಗ ಆರೋಪಗಳು ಕೇಳಿಬಂದರೂ ಸಮಸ್ಯೆ ಮಾತ್ರ ಜೀವಂತವಾಗಿಯೇ ಇರುತ್ತದೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟಂತೆ ದೂರುಗಳನ್ನು ಪರಿಹರಿಸಲು ಆಂತರಿಕ ದೂರು ಸಮಿತಿಯನ್ನು ಹೊಂದಿರಬೇಕು ಎಂಬ ಆಶಯವನ್ನು ಕಾಯ್ದೆ ವ್ಯಕ್ತಪಡಿಸುತ್ತದೆ. ಆದರೆ ಅದು ಚರ್ಚೆಗೆ ಮಾತ್ರ ಸಿಮೀತವಾಗಿ ಅನುಷ್ಠಾನಕ್ಕೆ ಬರುವಲ್ಲಿ ವಿಫಲವಾಗಿದೆ ಎಂಬ ಮಾತುಗಳು ಚಲನಚಿತ್ರ ಕ್ಷೇತ್ರದಲ್ಲಿ ಕೇಳಿಬಂದಿವೆ.
ದೂರುಗಳೇ ಇಲ್ಲ..!
ಎನ್.ಎಂ.ಸುರೇಶ್ ಅವಧಿಯಲ್ಲಿ ಮುಂಜಾನೆ ಸಮಿತಿ ರಚನೆಯಾಗಿ ಸಂಜೆಯ ವೇಳೆಗೆ ರದ್ದಾಯಿತು. ನಂತರ ನರಸಿಂಹಲು ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಆದರೆ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸಿತು ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ. ಸಮಿತಿಯ ಬಗ್ಗೆ ಚಿತ್ರರಂಗದ ಬಹಳಷ್ಟು ನಟಿಯರಿಗೆ, ಮಹಿಳಾ ಕಾರ್ಮಿಕರಿಗೆ ಮಾಹಿತಿ ತಲುಪಲಿಲ್ಲ. ಪರಿಣಾಮವಾಗಿ, ಆ ಅವಧಿಯಲ್ಲಿ ಮಂಡಳಿಗೆ ಒಂದೇ ಒಂದು ದೂರು ಕೂಡ ದಾಖಲಾಗಲಿಲ್ಲ ಎಂದು ಹೇಳಲಾಗಿದೆ. ದೂರುಗಳು ಬಾರದಿರುವುದನ್ನು ಆಡಳಿತ ಮಂಡಳಿಯು ಚಿತ್ರರಂಗದಲ್ಲಿ ಎಲ್ಲವೂ ಸರಿ ಇದೆ ಎಂಬರ್ಥದಲ್ಲಿ ಬಿಂಬಿಸಿತು. ಇನ್ನು, ಇದೀಗ ನಟಿ, ಮಾಜಿ ಸಚಿವೆ ಡಾ. ಜಯಮಾಲಾ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಆದರೆ, ಈವರೆಗೆ ಸಮಿತಿ ರಚನೆಯೇ ಆಗಿಲ್ಲ ಎಂದು ಹೇಳಲಾಗಿದೆ. ಜಯಮಾಲಾ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾದರೆ ಮಹಿಳೆಯರಿಗೆ ಧೈರ್ಯ ಬರುತ್ತದೆ ಎಂಬ ನಿರೀಕ್ಷೆ ಇದೆ. ಆದರೆ, ಸಮಿತಿಯೇ ರಚನೆಯಾಗದಿದ್ದರೆ ಈ ನಿರೀಕ್ಷೆಗೆ ಬೆಲೆ ಇರುವುದಿಲ್ಲ ಎನ್ನಲಾಗಿದೆ.
ಈ ನಡುವೆ ಸ್ಯಾಂಡಲ್‌ವುಡ್‌ನಲ್ಲಿ ಪಾಶ್ ಕಾಯ್ದೆಯಡಿ ಸಮಿತಿ ರಚನೆ ಮಾಡಿದರೂ ಅದರ ಕಾರ್ಯವ್ಯಾಪ್ತಿ ಸೀಮಿತವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಗೆ ಮಾತ್ರ ಅನ್ವಯವಾಗಲಿದೆ. ಚಿತ್ರರಂಗದ ಶೂಟಿಂಗ್ ಕಾರ್ಯವ್ಯಾಪ್ತಿ ವಿಶಾಲವಾಗಿರುವುದರಿಂದ ಸಮಿತಿಯು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಕಾಯ್ದೆಯಲ್ಲಿನ ಅಂಶಗಳು ಚಲನಚಿತ್ರ ಕ್ಷೇತ್ರಕ್ಕೆ ಅನ್ವಯವಾಗುವಂತೆ ಇಲ್ಲ. ಕೆಲವರು ಸಮಿತಿ ರಚನೆಗೆ ಒತ್ತಾಯ ಮಾಡಿದರೂ ಎಂಬ ಕಾರಣಕ್ಕಾಗಿ ಸಮಿತಿ ರಚನೆಯಾಯಿತು. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿದೆ. ಎಷ್ಟು ಮಹಿಳಾ ನಟಿಯರು ಸಮಿತಿಗೆ ದೂರು ದಾಖಲಿಸಿದ್ದಾರೆ. ಎಷ್ಟು ಮಂದಿಗೆ ನ್ಯಾಯ ಸಿಕ್ಕಿದೆ ಎಂಬುದರ ಮಾಹಿತಿ ಎಲ್ಲಿದೆ? ಎಂದು ಕೆಲವು ನಟಿಯರು ಖಾರವಾಗಿ ಪ್ರಶ್ನಿಸಿದ್ದಾರೆ.
ಪಾಶ್ ಕಾಯ್ದೆಯಡಿ ರಚನೆಯಾಗುವ ಸಮಿತಿಯ ಕಾರ್ಯವೈಖರಿ
ಯಾವುದೇ ಸಂಸ್ಥೆಯಲ್ಲಿ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ತಡೆಯಲು ಆಂತರಿಕ ದೂರು ಸಮಿತಿ ರಚನೆ ಮಾಡಲು ಕಾಯ್ದೆಯಡಿ ಅವಕಾಶ ಇದೆ. 10 ಕ್ಕಿಂತ ಹೆಚ್ಚು ಮಹಿಳಾ ಉದ್ಯೋಗಿಗಳು ಇರುವ ಸಂಸ್ಥೆಯು ಆಂತರಿಕ ದೂರು ಸಮಿತಿ ಹೊಂದಿರಬೇಕು. ಆದರೆ, ಸಿನಿಮಾ ಕ್ಷೇತ್ರವು ಯಾವುದೇ ಒಂದು ಸ್ಥಳದಲ್ಲಿ ನಡೆಯುವ ಕಾರ್ಯವಲ್ಲ. ಅದರ ವ್ಯಾಪ್ತಿ ವಿಶಾಲವಾದುದು. ಹೀಗಾಗಿ ಸಮಿತಿ ರಚನೆ ಮಾಡಲು ಸಾಧ್ಯವಿಲ್ಲ. ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಯ ಕಚೇರಿಯಲ್ಲಿ ಸಮಿತಿ ರಚಿಸಬಹುದು. ಯಾಕೆಂದರೆ ಅಲ್ಲಿ ನಿರ್ದಿಷ್ಟ ಸಮಯದವರೆಗೆ ಮಹಿಳೆಯರು ಕೆಲಸ ಮಾಡುವವರು ಇರುತ್ತಾರೆ. ಆದರೆ, ಅದರ ಹೊರಗೆ ಸಮಿತಿ ಹೇಗೆ ರಚಿಸಲು ಸಾಧ್ಯ? ಎಂಬುದು ಪ್ರಶ್ನೆಯಾಗಿದೆ.
ಒಂದು ವೇಳೆ ಸಮಿತಿ ಇದ್ದರೆ ಅದರ ಸದಸ್ಯರು ಯಾರು? ಅದರ ಕಚೇರಿ ಎಲ್ಲಿದೆ? ದೂರು ನೀಡಲು ಇರಬೇಕಾದ ಇಮೇಲ್ ಐಡಿ ಅಥವಾ ಸಹಾಯವಾಣಿ ಸಂಖ್ಯೆಗಳಾವುವು? ಎಂಬ ಮಾಹಿತಿಯು ಸಾಮಾನ್ಯ ಕಲಾವಿದರಿಗೆ ಅಥವಾ ತಂತ್ರಜ್ಞರಿಗೆ ಲಭ್ಯವಿಲ್ಲ. ಯಾವುದೇ ಒಂದು ಸಮಿತಿ ಯಶಸ್ವಿಯಾಗಬೇಕಾದರೆ ಅದರ ಬಗ್ಗೆ ಅರಿವು ಇರಬೇಕು. ಸ್ಯಾಂಡಲ್‌ವುಡ್‌ನ ಹೆಚ್ಚಿನ ಮಹಿಳಾ ಕಾರ್ಮಿಕರಿಗೆ ಇಂತಹದೊಂದು ಸಮಿತಿ ಇದೆ ಎಂಬುದೇ ತಿಳಿದಿಲ್ಲ. ಹೀಗಾಗಿ, ಇದನ್ನು ಹೆಸರಿಗೆ ಮಾತ್ರ ಇರುವ ಸಮಿತಿಯಾಗಿದೆ ಎನ್ನಲಾಗಿದೆ.
ಚಿತ್ರರಂಗದೊಳಗೆ ವಿಭಿನ್ನ ಅಭಿಪ್ರಾಯಗಳು
ಸ್ಯಾಂಡಲ್‌ವುಡ್‌ನಲ್ಲಿ ಪಾಶ್ (ಲೈಂಗಿಕ ಕಿರುಕುಳ ತಡೆಕಾಯ್ದೆ)ಕಾಯ್ದೆಯಡಿ ಆಂತರಿಕ ದೂರು ಸಮಿತಿ ಕುರಿತು ವಿಭಿನ್ನ ಅಭಿಪ್ರಾಯಗಳು ಇವೆ. ಸ್ಯಾಂಡಲ್‌ವುಡ್‌ನಲ್ಲಿ ಲೈಂಗಿಕ ಕಿರುಕುಳ ಇದೆ. ಆದರೆ, ದೂರುಗಳು ನೀಡಲು ಹಿಂಜರಿಯಲಾಗುತ್ತದೆ. ರಾಜ್ಯದಲ್ಲಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಬೇಕು. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದರೆ ಸಿನಿಮಾದಲ್ಲಿ ಅವಕಾಶ ಸಿಗದಂತೆ ತೆರೆಮರೆಯಲ್ಲಿ ಕೆಲಸ ಮಾಡಬಹುದು. ಆದರೆ, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾದರೆ ಮುಕ್ತವಾಗಿ ದೂರು ನೀಡಲು ಅವಕಾಶ ಇರುತ್ತದೆ ಎಂಬ ವಾದಗಳು ಒಂದೆಡೆ ಕೇಳಿಬಂದಿವೆ. ಇನ್ನೊಂದೆಡೆ, ಸಮಿತಿಯಿಂದ ಯಾವುದೇ ಪ್ರಯೋಜಗಳಾಗುವುದಿಲ್ಲ. ಯಾವುದೋ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯಗಳಾದರೆ ಮಂಡಳಿಯಾದರೂ ಏನು ಮಾಡಲು ಸಾಧ್ಯ? ಎಂಬ ವಾದವೂ ಇದೆ.
ನಟಿಯರು ಧೈರ್ಯವಾಗಿ ನಿರಾಕರಿಸಿದರೆ ಯಾವುದೇ ನಟ, ನಿರ್ದೇಶಕ, ನಿರ್ಮಾಪಕರು ಬಲವಂತ ಮಾಡಲು ಬರುವುದಿಲ್ಲ. ನಟಿಯರು ಮೊದಲು ಹೊಂದಾಣಿಕೆ ಮಾಡಿಕೊಂಡು ನಂತರ ಆರೋಪ ಮಾಡಿದರೆ ಎಷ್ಟು ಸರಿ. ಶೂಟಿಂಗ್ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯಗಳು ಹೇಗೆ ನಡೆಯುತ್ತವೆ? ಅಲ್ಲಿ ಕಾರ್ಮಿಕರಿಂದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವವರು ಇರುತ್ತಾರೆ. ಹೀಗಾಗಿ ಶೂಟಿಂಗ್ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ನಡೆಯುವುದಿಲ್ಲ. ಅದೆಲ್ಲಾ ಕೆಲವರು ಖಾಸಗಿ ಸ್ಥಳದಲ್ಲಿ ದೌರ್ಜನ್ಯ ಎಸಗಬಹುದು. ಇಲ್ಲ ಎಂದು ಹೇಳುವುದಿಲ್ಲ. ಆದರೆ, ಅಂತಹ ಸ್ಥಳಕ್ಕೆ ಹೋಗದೆ ಇರುವುದು ಒಳ್ಳೆಯದಲ್ಲವೇ? ಒಬ್ಬರೇ ಹೋಗುವಂತಹ ಪರಿಸ್ಥಿತಿ ಇದ್ದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು. ಬಹುತೇಕ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಇಂತಹ ಆರೋಪಗಳು ಮಾಡಿರುವ ಉದಾಹರಣೆಗಳು ಉಂಟು ಎಂದು ಹೇಳಲಾಗುತ್ತಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್, ಪಾಶ್ ಕಾಯ್ದೆಯಡಿ ಸಮಿತಿ ರಚನೆಗೆ ಹೋರಾಟ ಮಾಡಲಾಗಿತ್ತು. ಆದರೆ, ಅದು ಲೆಕ್ಕಕ್ಕೆ ಇಲ್ಲದಂತಾಯಿತು ಎಂಬ ಮಾಹಿತಿ ಬಂತು. ಸಮಿತಿ ಇದೆಯೋ, ಇಲ್ಲವೋ ಎಂಬುದು ಸಹ ಗೊತ್ತಾಗಲಿಲ್ಲ. ಸಹಾಯವಾಣಿ ಆರಂಭಿಸುವಂತೆ ಸಲಹೆ ನೀಡಲಾಗಿತ್ತು. ಆದರೆ, ಈವರೆವಿಗೂ ಅದನ್ನು ಮಾಡಿಲ್ಲ. ಸಹಾಯವಾಣಿ ಮಾಡಿದರೆ ಕರೆಯ ಮೂಲಕ ದೂರುಗಳನ್ನು ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ನಟ ಚೇತನ್ ಅಹಿಂಸಾ ಮಾತನಾಡಿ, ಕೇರಳದಲ್ಲಿ ಹೇಮಾ ಸಮಿತಿ ಬಳಿಕ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚನೆ ಮಾಡುವ ಒತ್ತಾಯ ಮಾಡಲಾಯಿತು. ಎನ್.ಎಂ.ಸುರೇಶ್ ಅವಧಿಯಲ್ಲಿ ಬೆಳಗ್ಗೆ ಸಮಿತಿ ರಚನೆಯಾದರೂ ಸಂಜೆ ವೇಳೆಗೆ ರದ್ದು ಮಾಡಲಾಯಿತು. ಹೀಗಾಗಿ ಅದು ಏನು ಪ್ರಯೋಜನಕ್ಕೆ ಬಾರದಂತಾಯಿತು. ಬಳಿಕ ನರಸಿಂಹಲು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತಾದರೂ ಸಭೆಗಳು ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಚಿತ್ರೋದ್ರಮದಲ್ಲಿನ ಲೈಂಗಿಕ ದೌರ್ಜನ್ಯ ಕಡಿವಾಣಕ್ಕೆ ಕ್ರಮ ಕೈಗೊಳ್ಳಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ನಟಿ ನೀತು ಮಾತನಾಡಿ, ಚಲನಚಿತ್ರ ವಾಣಿಜ್ಯ ಮಂಡಳಿ ಸಮಿತಿ ರಚನೆ ಮಾಡುವಂತೆ ಒತ್ತಾಯ ಮಾಡಲಾಗಿತ್ತು. ಆದರೆ ಈ ಬಗ್ಗೆ ಮಂಡಳಿ ಏನು ಮಾಡಿತು ಎಂಬುದರ ಮಾಹಿತಿ ಇಲ್ಲ. ಸಿನಿಮಾ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ತಿಳಿಸಿದರು.
ನಟಿ ಭಾವನಾ ಮಾತನಾಡಿ, ನನಗೆ ಗೊತ್ತಿರುವ ಮಾಹಿತಿ ಪ್ರಕಾರ ಸಮಿತಿ ರಚನೆ ಮಾಡಿದರೆ ವಾಣಿಜ್ಯ ಮಂಡಳಿ ಕಚೇರಿಗೆ ಮಾತ್ರ ಸಿಮೀತವಾಗಿ ಕೆಲಸ ಮಾಡಬೇಕಾಗುತ್ತದೆ. ಶೂಟಿಂಗ್ ನಡೆಯುವ ಸ್ಥಳಗಳಿಗೆ ಇದನ್ನು ಹೇಗೆ ಅನ್ವಯಿಸಲಾಗುತ್ತದೆಯೋ ಗೊತ್ತಿಲ್ಲ. ಸ್ಥಳೀಯ ಪೊಲೀಸ್ ಠಾಣೆಗೆ ಶೂಟಿಂಗ್ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಬಹುಶಃ ದೌರ್ಜನ್ಯಗಳು ನಡೆದರೆ ಶೂಟಿಂಗ್ ನಡೆಯುವ ಪೊಲೀಸ್ ಠಾಣೆಯ ವ್ಯಾಪ್ತಿಗೆ ದೂರು ನೀಡಬಹುದು. ಅಲ್ಲದೇ, ಮಂಡಳಿಗೂ ದೂರು ಸಲ್ಲಿಕೆ ಮಾಡಬಹುದು ಎಂದರು.
ಹೇಮಾ ಸಮಿತಿಯ ನೆರಳು, ಸ್ಯಾಂಡಲ್‌ವುಡ್ ಸವಾಲು
ಕೇರಳದಲ್ಲಿ ಮಹಿಳಾ ಕಲಾವಿದರ ಸಂಘಟನೆ ಬಲವಾಗಿ ಹೋರಾಡಿದ್ದರಿಂದ ಹೇಮಾ ಸಮಿತಿ ರಚನೆಯಾಯಿತು. ಕರ್ನಾಟಕದಲ್ಲಿ ಅಂತಹ ಪ್ರಬಲ ಮಹಿಳಾ ಸಂಘಟನೆಯ ಕೊರತೆಯಿದೆ. ಕರ್ನಾಟಕದ ಕಲಾವಿದರ ಸಂಘ ಮತ್ತು ವಾಣಿಜ್ಯ ಮಂಡಳಿಗಳು ಪುರುಷ ಪ್ರಧಾನವಾಗಿವೆ. ಇಲ್ಲಿ ಮಹಿಳೆಯರು ಧ್ವನಿ ಎತ್ತಲು ಸಂಘಟಿತ ಬೆಂಬಲ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಪಾಶ್ ಕಾಯ್ದೆಯ ಪ್ರಕಾರ ಸಮಿತಿಯಲ್ಲಿ ಒಬ್ಬರು ಹೊರಗಿನ ಸದಸ್ಯರು (ಎನ್‌ಜಿಒ ಅಥವಾ ಕಾನೂನು ತಜ್ಞರು) ಇರಲೇಬೇಕು. ಆದರೆ ವಾಣಿಜ್ಯ ಮಂಡಳಿಯ ಸಮಿತಿಯಲ್ಲಿ ಅಂತಹ ಸ್ವತಂತ್ರ ಧ್ವನಿಗಳ ಕೊರತೆಯಿದೆ. ಈ ಸಮಿತಿಗಳು ಎಷ್ಟು ಬಾರಿ ಸಭೆ ಸೇರುತ್ತವೆ? ಅವರ ವಾರ್ಷಿಕ ವರದಿಗಳೇನು? ಎಂಬ ಪಾರದರ್ಶಕತೆ ಇಲ್ಲ. ವಾಣಿಜ್ಯ ಮಂಡಳಿಯು ಹೆಚ್ಚಾಗಿ ನಿರ್ಮಾಪಕರ ಪರವಾಗಿರುವ ಸಂಸ್ಥೆ. ಕಿರುಕುಳ ನೀಡುವವರಲ್ಲಿ ನಿರ್ಮಾಪಕರೇ ಹೆಚ್ಚಾಗಿರುವುದರಿಂದ, ನಿರ್ಮಾಪಕರ ಸಂಘಟನೆಯೇ ವಿಚಾರಣೆ ನಡೆಸುವುದು ಎಷ್ಟು ನ್ಯಾಯಯುತ ಎಂಬ ಪ್ರಶ್ನೆಯೂ ಇದೆ.
ಏನು ಮಾಡಬಹುದು?
ಸರ್ಕಾರವು ಸ್ಯಾಂಡಲ್‌ವುಡ್ ಮಹಿಳಾ ಸುರಕ್ಷಾ ಸಮಿತಿಯನ್ನು ರಚಿಸಬೇಕು. ಇದು ವಾಣಿಜ್ಯ ಮಂಡಳಿಯ ಹಿಡಿತದಿಂದ ಮುಕ್ತವಾಗಿರಬೇಕು. ಸಂತ್ರಸ್ತೆಯರು ತಮ್ಮ ಹೆಸರನ್ನು ಬಹಿರಂಗಪಡಿಸದೆ ದೂರು ನೀಡಲು ಮತ್ತು ಡಿಜಿಟಲ್ ಪುರಾವೆಗಳನ್ನು ಸಲ್ಲಿಸಲು ಅವಕಾಶವಿರಬೇಕು. ಪ್ರತಿ ಚಿತ್ರದ ಮುಹೂರ್ತದ ಸಮಯದಲ್ಲಿ ಅಥವಾ ಚಿತ್ರೀಕರಣದ ಸೆಟ್‌ನಲ್ಲಿ ಸಮಿತಿಯ ಮಾಹಿತಿಯಿರುವ ಫಲಕಗಳನ್ನು ಹಾಕುವುದನ್ನು ಕಡ್ಡಾಯಗೊಳಿಸಬೇಕು. ಕೇವಲ ವಾಣಿಜ್ಯ ಮಂಡಳಿಯಲ್ಲಿ ಮಾತ್ರವಲ್ಲದೆ, ಚಿತ್ರೀಕರಣ ನಡೆಯುವ ಪ್ರತಿ ಸೆಟ್‌ನಲ್ಲೂ ಚಿಕ್ಕ ಮಟ್ಟದ ಸಮಿತಿ ಇರಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

