
ನೆಹರೂ ಆಡಳಿತಾವಧಿ ದಾಖಲೆ ಮುರಿದ ಪ್ರಧಾನಿ ಮೋದಿ: ಭಾರತ ಗಳಿಸಿದ್ದಾದರೂ ಏನು? ಶ್ರೀನಿವಾಸನ್ ವಿಶ್ಲೇಷಣೆ
ಭಾರತದ ರಾಜಕೀಯ ಮತ್ತು ಸೈದ್ಧಾಂತಿಕ ಭೂದೃಶ್ಯವನ್ನು ಮರುರೂಪಿಸುವುದರಲ್ಲಿ ಮೋದಿ ಅವರ ಶಾಶ್ವತ ಪ್ರಭಾವ ಅಡಗಿದೆ ಎಂದು ವಿಶ್ಲೇಷಿಸಿದ್ದಾರೆ ʼದಿ ಫೆಡರಲ್ʼನ ಪ್ರಧಾನ ಸಂಪಾದಕ ಶ್ರೀನಿವಾಸನ್ ಅವರು.
ಪ್ರಧಾನಿ ನರೇಂದ್ರ ಮೋದಿ ಅವರು ಜವಾಹರ್ಲಾಲ್ ನೆಹರೂ ಅವರ ಅಧಿಕಾರದ ದಾಖಲೆಯನ್ನು ಮೀರಿಸಿದ್ದಾರೆ. ಆ ಮೂಲಕ ಅವರು ಭಾರತದ ಅತೀ ದೀರ್ಘಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಬಗ್ಗೆ ವಿಶ್ಲೇಷಣೆ ಮಾಡಿರುವ ʼದಿ ಫೆಡರಲ್ʼ ಪ್ರಧಾನ ಸಂಪಾದಕ ಎಸ್.ಶ್ರೀನಿವಾಸ ಅವರು, ಮೋದಿಯವರ ಅಧಿಕಾರಾವಧಿಯ ಅತ್ಯಂತ ಪರಿಣಾಮಕಾರಿ ಪರಂಪರೆ ಎಂದರೆ ರಾಜಕೀಯ ಮತ್ತು ಸೈದ್ದಾಂತಿಕ ಸ್ವರೂಪದಲ್ಲಿಯೇ ಉಂಟಾದ ಮೂಲಭೂತ ಬದಲಾವಣೆ ಎಂದು ಹೇಳುತ್ತಾರೆ.
ದಿ ಫೆಡರಲ್‌ನ ಇಂಗ್ಲಿಷ್ ಅವತರಣಿಕೆಯ Talking Sense With Srini ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀನಿವಾಸನ್ ಅವರು, ನರೇಂದ್ರ ಮೋದಿ ಅವರ ಅತಿದೊಡ್ಡ ಸಾಧನೆ ಕೇವಲ ಚುನಾವಣಾ ಯಶಸ್ಸು ಮಾತ್ರವಲ್ಲ ಬದಲಾಗಿ ಅವರು ಭಾರತದ ʼನಾಗರಿಕತೆಯ ಪರಿವರ್ತನೆʼಯೇ ಬಹಳ ದೊಡ್ಡ ಬದಲಾವಣೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯದ ಸಮಯದಲ್ಲಿ ಭಾರತಕ್ಕಿದ್ದುದು ಜಾತ್ಯತೀತ ಗಣರಾಜ್ಯ ಎಂಬ ಹೆಗ್ಗಳಿಕೆ. ಅದೀಗ ಹಿಂದೂ ಬಹುಸಂಖ್ಯಾತ ರಾಷ್ಟ್ರ ಎಂಬ ಮನಸ್ಥಿತಿಯತ್ತ ವಾಲಿದೆ. ಇಂತಹುದೊಂದು ಪರಿವರ್ತನೆ ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎಂಬುದು ಚರ್ಚೆಗೆ ಒಳಪಟ್ಟ ವಿಷಯವಾಗಿದ್ದರೂ ಇದು ಮೋದಿ ಅವರ ಆಡಳಿತ ಯುಗದ ಅತ್ಯಂತ ಮಹತ್ವದ ರಾಜಕೀಯ ಬದಲಾವಣೆ ಎಂಬುದು ಮಾತ್ರ ಸತ್ಯ ಎಂಬ ಪ್ರತಿಪಾದನೆಯನ್ನು ಅವರು ಮುಂದಿಡುತ್ತಾರೆ.
ಮೋದಿ ಅವರ ಚುನಾವಣಾ ಪ್ರಾಬಲ್ಯವನ್ನು ಮಾಡಿದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತವನ್ನು ಗಿಟ್ಟಿಸಿಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿತಾದರೂ ಆ ಬಳಿಕ ರಾಜ್ಯ ಮಟ್ಟದಲ್ಲಿ ಸರಣಿ ಗೆಲುಗಳನ್ನು ಸಾಧಿಸುವ ಮೂಲಕ ಪಕ್ಷ ಶೀಘ್ರ ಚೇತರಿಕೆಯನ್ನು ಕಂಡಿತು ಎಂದು ಹೇಳಿದರು.
ಬಿಜೆಪಿಯ ಚುನಾವಣಾ ಯಂತ್ರವು 2024ರಲ್ಲಿ ಮೊದಲ ಪ್ರಮುಖ ಹಿನ್ನಡೆಯನ್ನು ಅನುಭವಿಸಿತು. ಆದರೆ, ಈ ಹಿನ್ನಡೆಗೆ ಕೇವಲ ಪ್ರತಿಪಕ್ಷಗಳು ಒಡ್ಡಿದ ಸವಾಲಷ್ಟೇ ಕಾರಣವಲ್ಲ, ಬದಲಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ನಡುವಿನ ಭಿನ್ನಾಭಿಪ್ರಾಯಗಳ ವರದಿಗಳೂ ಕಾರಣ ಎಂಬುದರ ಕಡೆಗೆ ಶ್ರೀನಿವಾಸನ್ ಅವರು ಬೊಟ್ಟುಮಾಡಿದರು.
ಆದಾಗ್ಯೂ, ಪಕ್ಷದ ನಾಯಕತ್ವವು ತನ್ನ ತಪ್ಪುಗಳನ್ನು ಅತಿಶೀಘ್ರದಲ್ಲಿ ತಿದ್ದಿಕೊಂಡು, ದೇಶದ ಬಹುಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು ಎಂದು ಅವರು ಹೇಳಿದರು.
ಬಹುಸಂಖ್ಯಾತ ರಾಷ್ಟ್ರೀಯತೆ
ಶ್ರೀನಿವಾಸನ್ ಅವರ ಪ್ರಕಾರ, ಮೋದಿ ಸರ್ಕಾರವು 370ನೇ ವಿಧಿಯ ರದ್ದತಿ, ರಾಮ ಮಂದಿರ ನಿರ್ಮಾಣ ಮತ್ತು ಸಮಾನ ನಾಗರಿಕ ಸಂಹಿತೆಯ ಪರವಾಗಿರುವ ಕ್ರಮಗಳ ಮೂಲಕ ಏಕಕಾಲದಲ್ಲಿ ವಿಶಾಲವಾದ ಸೈದ್ಧಾಂತಿಕ ಯೋಜನೆಯನ್ನು ಅನುಸರಿಸುತ್ತಿದೆ.
"ಇವೆಲ್ಲವೂ ಒಂದೇ ವಿಷಯದ ನಾನಾ ಭಾಗಗಳಾಗಿವೆ; ನೆಹರೂ ಮಾದರಿಯ ಜಾತ್ಯತೀತತೆಯನ್ನು ಹೆಚ್ಚು ದೃಢವಾದ 'ಬಹುಸಂಖ್ಯಾತ ರಾಷ್ಟ್ರೀಯತೆ'ಯಾಗಿ ಪರಿವರ್ತಿಸುತ್ತಿದೆ" ಎಂದು ಅವರು ಹೇಳಿದರು.
ಕಾರ್ಯತಂತ್ರದ ಸ್ವಹಿತಾಸಕ್ತಿ
ವಿದೇಶಾಂಗ ನೀತಿಯ ಕುರಿತು ಮಾತನಾಡಿದ ಅವರು, ಹಿಂದಿನ ದಶಕಗಳಿಗಿಂತ ಇಂದು ಭಾರತವು ಹೆಚ್ಚು ಸಂಕೀರ್ಣವಾದ ಭೌಗೋಳಿಕ ರಾಜಕೀಯ ಪರಿಸರವನ್ನು ಎದುರಿಸುತ್ತಿದೆ ಎಂದು ವಾದಿಸಿದರು. ಚೀನಾದ ಏರಿಕೆ ಮತ್ತು ಭಾರತದ ನೆರೆಹೊರೆಯ ಅಸ್ಥಿರತೆಯಿಂದ ಉಂಟಾಗುವ ಸವಾಲುಗಳನ್ನು ಒಪ್ಪಿಕೊಳ್ಳುತ್ತಲೇ, ಭಾರತವು ತನ್ನ ಬೆಳೆಯುತ್ತಿರುವ ಸ್ಥಾನಮಾನಕ್ಕೆ ತಕ್ಕಂತೆ ಪ್ರಭಾವವನ್ನು ಬೀರುತ್ತಿದೆಯೇ ಎಂಬುದು ಮುಖ್ಯವಾಗಿದೆ ಅವರು ಹೇಳಿದರು.
"ಭಾರತೀಯರು ವಿದೇಶಗಳಲ್ಲಿ ಹೆಚ್ಚಿನ ಗೌರವವನ್ನು ಪಡೆಯುತ್ತಿದ್ದೇವೆ ಎಂದು ಭಾವಿಸಬಹುದು, ಆದರೆ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಭಾವ ಬೀರುತ್ತಿದ್ದೇವಾ? ಎಂದೇನಾದರೂ ಕೇಳಿದರೆ ನಾನು ಇಲ್ಲ ಎಂದೇ ಹೇಳುತ್ತೇನೆ," ಎಂದು ಅವರು ಅಭಿಪ್ರಾಯಪಟ್ಟರು.
ಜಾಗತಿಕ ವಿಷಯಗಳಲ್ಲಿ ನೈತಿಕ ನಿಲುವುಗಳನ್ನು ತೆಗೆದುಕೊಳ್ಳಲು ಭಾರತ ಹಿಂದೆ ತೋರುತ್ತಿದ್ದ ಸಿದ್ಧತೆಯನ್ನು, ಇಂದಿನ ವಿದೇಶಾಂಗ ನೀತಿಯೊಂದಿಗೆ ಹೋಲಿಸಿದ ಅವರು, ಈಗ ಕಾರ್ಯತಂತ್ರದ ಸ್ವಹಿತಾಸಕ್ತಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ ಎಂಬ ಅಭಿಪ್ರಾಯವನ್ನು ಮಂಡಿಸಿದರು.
ಆರ್ಥಿಕ ಸಾಧನೆ
ಆರ್ಥಿಕವಾಗಿ, ಮೋದಿ ಸರ್ಕಾರವು ಮೂಲಸೌಕರ್ಯ, ಡಿಜಿಟಲ್ ಪಾವತಿಗಳು, ಆರ್ಥಿಕ ಸೇರ್ಪಡೆ ಮತ್ತು ಕಲ್ಯಾಣ ವಿತರಣೆಯಲ್ಲಿ ಪ್ರಮುಖ ಸುಧಾರಣೆಗಳನ್ನು ತಂದಿರುವುದು ದಿಟ ಎಂದು ಶ್ರೀನಿವಾಸನ್ ಶ್ಲಾಘಿಸಿದರು. ಜನ್ ಧನ್ ಯೋಜನೆ, ಆಧಾರ್ ಸಂಪರ್ಕಿತ ನೇರ ನಗದು ವರ್ಗಾವಣೆ, ಗ್ರಾಮೀಣ ವಿದ್ಯುದೀಕರಣ ಮತ್ತು ಶೌಚಾಲಯ ನಿರ್ಮಾಣದಂತಹ ಕಾರ್ಯಕ್ರಮಗಳು ಸ್ಪಷ್ಟವಾದ ಪರಿಣಾಮವನ್ನು ಬೀರಿವೆ ಎಂದು ಅವರು ವಿಶ್ಲೇಷಿಸಿದರು.
ಅದೇ ಸಮಯದಲ್ಲಿ, ಒಟ್ಟಾರೆ ಜಿಡಿಪಿ ಬೆಳವಣಿಗೆಯು ಅತ್ಯಂತ ಗಹನವಾದ ರಚನಾತ್ಮಕ ಕಾಳಜಿಗಳನ್ನು ಮರೆಮಾಚುತ್ತದೆ ಎಂದು ಅವರು ಎಚ್ಚರಿಸಿದರು.
ಒಟ್ಟಾರೆ ಜಿಡಿಪಿ ಸ್ವಯಂಚಾಲಿತವಾಗಿ ಸಾಮೂಹಿಕ ಸಮೃದ್ಧಿಯಾಗಿ ಪರಿವರ್ತನೆಯಾಗುವುದಿಲ್ಲ ಎಂದು ಹೇಳಿದ ಶ್ರೀನಿವಾಸನ್, ಭಾರತದ ತುಲನಾತ್ಮಕ ಕಡಿಮೆ ತಲಾ ಆದಾಯ, ದುರ್ಬಲ ಉತ್ಪಾದನಾ ವಲಯ ಮತ್ತು ನಿರಂತರವಾಗಿರುವ ಉದ್ಯೋಗದ ಸವಾಲುಗಳತ್ತ ಗಮನ ಹರಿಸಬೇಕಾಗಿದೆ ಎಂದರು.
ತುರ್ತು ಗಮನ ಹರಿಸಬೇಕಾದ ಕ್ಷೇತ್ರಗಳು
ವಿದೇಶಿ ಹೂಡಿಕೆಯಲ್ಲಿನ ಕುಸಿತ ಮತ್ತು ಸ್ವದೇಶಿ ಕೃತಕ ಬುದ್ಧಿಮತ್ತೆ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತವು ಹಿಂದೆ ಬಿದ್ದಿರುವುದನ್ನು ಅವರು ತುರ್ತು ಗಮನ ಹರಿಸಬೇಕಾದ ಕ್ಷೇತ್ರಗಳಾಗಿ ಗುರುತಿಸಿದ್ದಾರೆ.
"ರಾಜಕೀಯವಾಗಿ, ಬಿಜೆಪಿ ಪ್ರತಿ ಚುನಾವಣೆಯಲ್ಲೂ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಆದರೆ, ಸರ್ಕಾರವು ಆರ್ಥಿಕ ವಿಷಯಗಳತ್ತ ಗಮನ ಹರಿಸುವುದನ್ನು ಮರೆತಿದೆ ಎಂದು ಅನೇಕ ಅರ್ಥಶಾಸ್ತ್ರಜ್ಞರು ವಾದಿಸುತ್ತಾರೆ," ಎಂದು ಅವರು ಹೇಳಿದರು.
ಮೋದಿಯವರ ಅಧಿಕಾರಾವಧಿಯ ಹನ್ನೆರಡು ವರ್ಷಗಳ ನಂತರ, ಅವರ ಪರಂಪರೆಯ ಕುರಿತಾದ ಚರ್ಚೆಯು ಇನ್ನೂ ಮುಕ್ತಾಯಗೊಂಡಿಲ್ಲ ಎಂದು ಶ್ರೀನಿವಾಸನ್ ಅಭಿಪ್ರಾಯಪಟ್ಟರು. ಆದಾಗ್ಯೂ, ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಥಿಕ ಭೂದೃಶ್ಯವನ್ನು ಇಷ್ಟೊಂದು ಆಳವಾಗಿ ಮರುರೂಪಿಸಿದ ನಾಯಕರು ವಿರಳ ಎಂಬುದು ವಿವಾದಾತೀತ ಸಂಗತಿ ಎಂಬುದನ್ನು ಹೇಳಲು ಮರೆಯಲಿಲ್ಲ.

