Womens Day 2026| ಶೋಷಣೆ ಮುಕ್ತಿಗಾಗಿ ಮಾಜಿ ದೇವದಾಸಿಯ ಅವಿರತ ಹೋರಾಟ
x
ಪಡಿಯಮ್ಮ ಕ್ಯಾದಿಗುಂಪಿ

Women's Day 2026| ಶೋಷಣೆ ಮುಕ್ತಿಗಾಗಿ ಮಾಜಿ ದೇವದಾಸಿಯ ಅವಿರತ ಹೋರಾಟ

ಬಾಲ್ಯದಲ್ಲೇ ದೇವದಾಸಿ ಪದ್ಧತಿಯ ಶೋಷಣೆಗೆ ಬಲಿಯಾಗಿ ನೋವುಂಡ ಪಡಿಯಮ್ಮ ಕ್ಯಾದಿಗುಂಪಿ ಅವರು, ಇಂದು ಅದೇ ಅನಿಷ್ಟ ಪದ್ಧತಿಯ ವಿರುದ್ಧ ಸಂಘಟಿತ ಹೋರಾಟದ ಮೂಲಕ ಸಾವಿರಾರು ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಲ್ಪಿಸುತ್ತಿದ್ದಾರೆ.


Click the Play button to hear this message in audio format

ʼದೇವರ ಸೇವೆʼಯ ಅರ್ಥ ತಿಳಿಯುವ ಮೊದಲೇ ಆಕೆಯ ಕೊರಳಿಗೆ ಮುತ್ತು ಕಟ್ಟಿ 'ದೇವದಾಸಿ'ಯ ಪಟ್ಟ ಕಟ್ಟಿತ್ತು. ಎಂಟು ವರ್ಷವಿದ್ದಾಗಲೇ ತಾಯಿ ಬಿಟ್ಟು ಹೋದರು, ತಂದೆ ಕುಡಿದು ಸತ್ತರು. ಅನಾಥವಾದ ಬಳಿಕ ಹಸಿದ ಹೊಟ್ಟೆಯನ್ನೇ ಬಂಡವಾಳ ಮಾಡಿಕೊಂಡ ಈ ವ್ಯವಸ್ಥೆ ದೇವದಾಸಿಯ ಪಟ್ಟ ಕಟ್ಟಿತು. ಆದರೆ, ಇಂದು ಅದೇ ಹೆಣ್ಣು ಮಗಳು ಮಾಜಿ ದೇವದಾಸಿಯಾಗಿ, ಅನಿಷ್ಟ ಪದ್ಧತಿ ಹಾಗೂ ಮಾಜಿ ದೇವದಾಸಿಯರ ಹಕ್ಕುಗಳಿಗಾಗಿ ಹೋರಾಟದ ಹಾದಿ ತುಳಿದಿದ್ದಾರೆ.

ಇದು, ಕೊಪ್ಪಳ ಜಿಲ್ಲೆಯ ಪಡಿಯಮ್ಮ ಕ್ಯಾದಿಗುಂಪಿ ಅವರ ಹೋರಾಟದ ಕಥೆ. ದೇವದಾಸಿಯಾಗಿ ಅನೇಕ ದೌರ್ಜನ್ಯ ಎದುರಿಸಿ, ಹೋರಾಟದ ಮೂಲಕವೇ ಬದುಕು ಕಟ್ಟಿಕೊಂಡಿರುವ ಇವರು, ಈಗ ದೇವದಾಸಿಯರಿಗಾಗಿ ಸಂಘಟನೆ ಕಟ್ಟಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ʼದ ಫೆಡರಲ್‌ ಕರ್ನಾಟಕʼಕ್ಕೆ ಪಡಿಯಮ್ಮ ಅವರು ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಎದುರಿಸಿದ ಸವಾಲುಗಳು, ನಡೆಸಿದ ಹೋರಾಟವನ್ನು ಮೆಲುಕು ಹಾಕಿದ್ದಾರೆ.

"ನನಗೆ ಆಗ ಎಂಟು ವರ್ಷ. ಮೈಮೇಲೆ ಅರಿವಿಲ್ಲದ ವಯಸ್ಸು. ಹೊಲದಿಂದ ಮೇವು ಹೊತ್ತು ತಂದವಳಿಗೆ ಜೋಗಪ್ಪಗಳು ಪದ ಹಾಡಿ ಸೀರೆ ಉಡಿಸಿ ಮುತ್ತು ಕಟ್ಟಿದರು. ನಾನೊಬ್ಬಳೇ ಅನಾಥೆ ಎಂದು ನನ್ನನ್ನು ದೇವರ ಹೆಸರಿನಲ್ಲಿ ಗುಲಾಮಗಿರಿಗೆ ತಳ್ಳಿದರು," ಎಂದು ನೆನೆಯುವಾಗ ಪಡಿಯಮ್ಮ ಅವರ ಕಣ್ಣಾಲಿಗಳು ತೇವವಾದವು.

ತನ್ನ ಅಜ್ಜಿಯೇ ಪಡಿಯಮ್ಮ ಅವರನ್ನು ಅನಿಷ್ಟ ಪದ್ಧತಿಗೆ ದೂಡಿದ್ದರು. 12 ವರ್ಷಕ್ಕೆ ಮುಂಬೈನ ಕರಾಳ ಕೂಪಕ್ಕೆ ಮಾರಲು ಯತ್ನ ನಡೆದಾಗ, ಈ ಮಗು ಅನುಭವಿಸಿದ ಅಸಹಾಯಕತೆ ದೇವರಿಗೇ ಪ್ರೀತಿ ಎನಿಸಿರಲಿಲ್ಲವೇನೋ?, ಯೌವನಕ್ಕೆ ಬರುತ್ತಿದ್ದಂತೆ ಊರಿನವರ ಕಾಮದ ದೃಷ್ಟಿ ಪಡಿಯಮ್ಮ ಅವರ ಮೇಲೆ ಬಿತ್ತು. "ಹುಡುಗಿ ಇದ್ದಾಳೆ" ಎಂಬ ಮಾತು ಇಡೀ ಊರಿನ ಬೀದಿಗಳಲ್ಲಿ ಹರಿದಾಡಿತು. ಈಚಲು ಚಾಪೆ ಹೆಣೆದು ಬದುಕುತ್ತಿದ್ದ ಅವರಿಗೆ ಗೌಡರ ಹಲ್ಲೆ, ಪೊಲೀಸರ ನಿರ್ಲಕ್ಷ್ಯ ನಿತ್ಯದ ಬದುಕಾಗಿತ್ತು. ನಾಲ್ಕು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ನೋವು, ಕುಡುಕ ಗಂಡನ ಕಿರುಕುಳ, ಮಕ್ಕಳ ಹಸಿವಿಗೆ ಹಾಲು ನೀಡಲಾಗದ ದಾರಿದ್ರ್ಯದ ನಡುವೆ ಅವರು ತಮ್ಮ ಬದುಕನ್ನು ಹಸನು ಮಾಡಲು ಹೆಣಗಾಡಿದರು.

ತಿನ್ನಲೂ ಕೂಳಿರಲಿಲ್ಲ

"ನನಗೆ ವಯಸ್ಸು ತುಂಬುತ್ತಿದ್ದಂತೆ ಯಾರು ಬೇಕಿದ್ದರೂ ಮನೆಗೆ ಬರಲು ಶುರು ಮಾಡಿಬಿಟ್ಟರು. ಇಲ್ಲಿ ಹುಡುಗಿ ಇದ್ದಾಳೆ ಎಂದು ಇಡೀ ಊರೇ ಮಾತನಾಡುತ್ತಿದ್ದರು. ನನ್ನ ಕಷ್ಟ ಸುಖ ಕೇಳಲು ಯಾರು ಇರಲಿಲ್ಲ. ದೇವದಾಸಿಯಾಗಿ ಸತತ ಇಪ್ಪತ್ತು ವರ್ಷ ಸಾಕಷ್ಟು ಕಷ್ಟಪಟ್ಟಿದ್ದೇನೆ. ಕೂಳು (ಅನ್ನ), ಬಟ್ಟೆ ಇಲ್ಲದೆ, ಕೆಟ್ಟ ಬಡತನದಲ್ಲಿ ಒದ್ದಾಡಿದ್ದೇನೆ. ನನ್ನ ಗಂಡ ಕಂಠಪೂರ್ತಿ ಕುಡಿದು ಸತ್ತುಹೋದ. ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಪಡಬಾರದ ವನವಾಸ ಅನುಭವಿಸಿದ್ದೇನೆ. ಬರೀ ಉಪ್ಪು, ಸೊಪ್ಪನ್ನು ಕಲಸಿ ತಿನ್ನುತ್ತಿದ್ದೆವು. ಮಕ್ಕಳಿಗೆ ಹಾಲು ಸಿಗುತ್ತಿರಲಿಲ್ಲ" ಎಂದು ಬಿಕ್ಕಳಿಸುತ್ತಲೇ ಕಣ್ಣೊರೆಸಿಕೊಂಡರು.

"ಜೀವನದಲ್ಲಿ ದೇವದಾಸಿ ಮಾತ್ರ ಆಗಬಾರದು. ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಯೂ ಕಷ್ಟ ಅನುಭವಿಸುವ ನಮ್ಮ ನೋವುಗಳಿಗೆ ಕೊನೆಯೇ ಇರುವುದಿಲ್ಲ. ಇಂತಹ ಹೆಣ್ಣುಮಕ್ಕಳಿಗೆ ಮರ್ಯಾದೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ, ಯಾರೊಬ್ಬರೂ ಸಹ ದೇವದಾಸಿಯಾಗಬಾರದು. ತಮ್ಮ ಕಾಲ ಮೇಲೆ ನಿಂತು ಜೀವನ ಸಾಗಿಸಬೇಕು. ಇಲ್ಲವೇ, ಗಂಡ-ಮಕ್ಕಳು ಸಂಸಾರದೊಂದಿಗೆ ನೆಮ್ಮದಿಯಾಗಿರಬೇಕು" ಎಂದರು.

ಹೋರಾಟ ಬಿಡುವುದಿಲ್ಲ

"ಒಬ್ಬ ನಮ್ಮ ಮನೆ ಬಳಿ ಬಂದು, ನನ್ನ ಸೀರೆಗೆ ಬೆಂಕಿ ಹಾಕಿದ್ದ. ಕುಡಿದ ಮತ್ತಿನಲ್ಲಿ ಇಂತಹ ಸಾಕಷ್ಟು ಶೋಷಣೆಗಳನ್ನು ಅನುಭವಿಸಿದ್ದೇನೆ. ಬೀದಿಯಲ್ಲಿ ಮಾನ ಕಳೆದಿದ್ದಾರೆ. ಹೀಗಾಗಿ ಬಾವಿಗೆ ಬೀಳಲು ಸಹ ಹೋಗಿದ್ದೆ. ನಾನು ಎಲ್ಲರಂತೆ ಮದುವೆಯಾಗಿ ಸಂಸಾರ ಮಾಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಎಂದು ಅನೇಕ ಬಾರಿ ಅಂದುಕೊಂಡಿದ್ದೇನೆ. ನನ್ನ ನಾಲ್ಕು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು ಸಹ ಮೃತಪಟ್ಟರು. ಇನ್ನುಳಿದ ಇಬ್ಬರು ಹೆಣ್ಣುಮಕ್ಕಳನ್ನು ಕಟ್ಟಿಕೊಂಡು ದೇವದಾಸಿ ಪದ್ಧತಿ ವಿರುದ್ಧ ಹೋರಾಟ ಶುರು ಮಾಡಿದೆ. 12 ವರ್ಷಕ್ಕೆ ದೇವದಾಸಿಯಾಗಿ ನಾನು ಅನುಭವಿಸಿದ ನೋವು, ಸಂಕಷ್ಟ ಇನ್ಯಾವ ಹೆಣ್ಣುಮಕ್ಕಳಿಗೆ ಆಗಬಾರದು ಎಂಬ ಉದ್ದೇಶಕ್ಕೆ ಹೋರಾಟ ಮಾಡುತ್ತಿದ್ದೇನೆ. ನನ್ನನ್ನು ಜೈಲಿಗೆ ಹಾಕಿದರೂ ಸರಿ, ಇಂತಹ ಹೋರಾಟ ಬಿಡುವುದಿಲ್ಲ." ವ್ಯವಸ್ಥೆಯಡೆಗಿನ ತಮ್ಮ ಆಕ್ರೋಶ ಹೊರಹಾಕಿದರು.

2014 ರಲ್ಲಿ ಸರ್ಕಾರ ನೀಡುತ್ತಿದ್ದ ಗೋಧಿ, ಅಕ್ಕಿಯನ್ನು ಮಾರಿಕೊಂಡು, ರೈಲು ಹತ್ತಿ ಬೆಂಗಳೂರಿಗೆ ಬಂದು, 'ವಿಮುಕ್ತ ದೇವದಾಸಿ ಮಹಿಳೆ ವೇದಿಕೆ' ಕಟ್ಟಿದರು. ಅಂದು ವಿಜಯರಾಜನ್‌ ಎಂಬ ಅಧಿಕಾರಿ ಸಾಕಷ್ಟು ಸಹಾಯ ಮಾಡಿದ್ದರು.

ಬಳಿಕ ದೇವದಾಸಿ ಪದ್ಧತಿಗಳ ವಿರುದ್ಧ ಹೋರಾಟ ಶುರು ಮಾಡಿ, ದೇವರ ಹೆಸರಿನಲ್ಲಿ ಮೌಢ್ಯ ತುಂಬುತ್ತಿದ್ದವರ ಮೇಲೆ ತಿರುಗಿಬೀಳುತ್ತಿದ್ದರು. ದೇವದಾಸಿಯಾಗುತ್ತಿದ್ದ ಹೆಣ್ಣುಮಕ್ಕಳ ಕೂದಲು ಕತ್ತರಿಸುತ್ತಿದ್ದರು. ಅನೇಕ ಮಕ್ಕಳನ್ನು ಸಂರಕ್ಷಿಸಿದ್ದಾರೆ. ವೇದಿಕೆ ಮೂಲಕ ದೇವದಾಸಿ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಸ್ವಯಂ ಉದ್ಯೋಗ ಮಾಡುವವರಿಗೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಗರಿಷ್ಠ ಹತ್ತು ಲಕ್ಷದವರೆಗೂ ಸಾಲ ಕೊಡಿಸಲಾಗುತ್ತಿದೆ ಎಂದರು.

ಇಂದಿಗೂ ಜಾರಿಯಲ್ಲಿದೆ

ಹೋರಾಟದ ಆರಂಭದಲ್ಲಿ, ಒಂದು ದೇವದಾಸಿ ಪದ್ಧತಿ ತಡೆದಿದ್ದರು. ಆದರೆ, ಪೊಲೀಸರಿಗೆ ಐವತ್ತು ಸಾವಿರ ನೀಡಿ, ಅಮಾಯಕಿಯೊಬ್ಬಳನ್ನು ಕೊನೆಗೂ ದೇವದಾಸಿ ಮಾಡಿಯೇ ಬಿಟ್ಟರು. ಎಷ್ಟೇ ಆದರೂ, ಈ ಪದ್ಧತಿಯನ್ನು ನಿಯಂತ್ರಿಸಲು ಸಾಧ್ಯವೇ ಆಗುತ್ತಿಲ್ಲ. ಇಂದಿಗೂ ಕಡಿಮೆ ಪ್ರಮಾಣದಲ್ಲಿ ಆದರೂ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು

ಹೀಗೆ, ಒಂದು ಪ್ರಕರಣ ತಡೆಗಟ್ಟುವ ವೇಳೆ ಪೊಲೀಸ್‌ ಠಾಣೆಗೆ ಹೋಗಿದ್ದರು. ಆ ವೇಳೆ ಜಾತಿಯನ್ನು ಹಿಡಿದು ಅವಮಾನಿಸಿದ್ದರು. ಕೊನೆಗೆ ಆ ಹುಡುಗಿ ಮೇಲೆ ಶೋಷಣೆ ನಡೆಸಿದ್ದ ಯುವಕ ಮದುವೆಯಾಗಲು ಒಪ್ಪಿದ್ದ. ಆದರೆ, ಆತನಿಗೆ ಈಗಾಗಲೇ ಎರಡು ಮದುವೆಯಾಗಿದ್ದವು. ಕೊನೆಗೆ ಆತ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಪಡಿಯಮ್ಮ ಅವರ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿದ್ದ. ಹೋರಾಟಗಾರರನ್ನು ಹತ್ತಿಕ್ಕುವ ಇಂತಹ ಪ್ರಕರಣಗಳನ್ನು ಸರ್ಕಾರವೇ ಮುಚ್ಚಿಹಾಕುತ್ತಿದೆ. ಅಂದು ಶಾಸಕರೊಬ್ಬರು ಸಹ ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿ, ಆ ಯುವಕನ ಪರ ನಿಂತಿದ್ದರು ಎಂದು ಶೋಷಣೆಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿದರು.

ಗ್ರಾ.ಪಂ ಅಧ್ಯಕ್ಷೆಯಾಗಿ ಆಯ್ಕೆ

1994 ರಿಂದ 1996 ರ ಅವಧಿಯಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಕುಷ್ಟಗಿಯ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಮೀಸಲು ಕ್ಷೇತ್ರ ನಿಗದಿಯಾಗಿತ್ತು. ಅಂದು ಗ್ರಾಪಂ ಅಧ್ಯಕ್ಷರಾಗಿ ಪಡಿಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಆ ವೇಳೆ ಹೋರಾಟ ಇನ್ನಷ್ಟು ವಿಸ್ತಾರಗೊಂಡಿತ್ತು. ಶಾದಿ ಮಹಲ್ ಮಾದರಿಯಲ್ಲಿಯೇ ದೇವದಾಸಿ ಸಮುದಾಯಕ್ಕೆ ಸಮುದಾಯ ಭವನ ನೀಡಲು ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರಿಗೆ ಮನವಿ ಮಾಡಿದ್ದರು. ಆದರೆ, ಈ ವರೆಗೂ ಯಾವುದೇ ಸೌಲಭ್ಯ ನೀಡಿಲ್ಲ. "ನಮಗೂ ಭವನ ನೀಡಿದ್ದರೆ, ಎಷ್ಟೋ ಮಕ್ಕಳಿಗೆ ಮದುವೆಯಾಗುತ್ತಿದ್ದವು" ಎನ್ನುತ್ತಾರೆ ಅವರು.

ಬಳಿಕ ದೇವದಾಸಿ ಮಗಳ ಮದುವೆಗಾಗಿ ಹೆಣ್ಣುಮಕ್ಕಳಿಗೆ ಐದು ಲಕ್ಷ ಹಾಗೂ ಗಂಡು ಮಕ್ಕಳಿಗೆ ಮೂರು ಲಕ್ಷ ಹಣ ನೀಡಿದ್ದರು. ಹೀಗಾಗಿ ತಮ್ಮ ಮಕ್ಕಳಿಗೂ ಮದುವೆ ಮಾಡಿದ್ದರು. ಆದರೆ, ಸರ್ಕಾರ ನೀಡಿದ್ದ ಇತರೆ ಭರವಸೆಗಳು ಈವರೆಗೂ ಈಡೇರಿಲ್ಲ. "ನನಗೆ ಇರಲು ಈಗಲೂ ಮನೆ ಇಲ್ಲ. ತಗಡಿನ ಮನೆಯಲ್ಲಿಯೇ ಇಂದಿಗೂ ವಾಸಿಸುತ್ತಿದ್ದೇನೆ. ರಾಜ್ಯದಲ್ಲಿ 46 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದೇವದಾಸಿಯರಿದ್ದಾರೆ. ಸರ್ಕಾರ ಎಷ್ಟೇ ಕಾಯ್ದೆ ಜಾರಿಗೊಳಿಸಿದರೂ ಸಹ ಇಂತಹ ಪದ್ಧತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ವ್ಯವಸ್ಥೆಗಳು ಸರಿಯಿಲ್ಲ. ಕೆಲ ಹೆಣ್ಣುಮಕ್ಕಳು ಸರಾಯಿ ಕುಡಿದು ಮೈ ಮಾರಿಕೊಳ್ಳುತ್ತಿದ್ದಾರೆ. ಇಂತಹವರು ಮೊದಲು ವೃತ್ತಿ ಬಿಟ್ಟು ಗೌರವಯುತ ಜೀವನ ನಡೆಸಬೇಕು. ಇಂದಿನ ಕಾಲದಲ್ಲಿ ದುಡ್ಡು ಮಾಡುವ ಉದ್ದೇಶಕ್ಕಾಗಿ ಇಂತಹ ವೃತ್ತಿಗಳನ್ನು ಮಹಿಳೆಯರು ಮುಂದುವರಿಸುತ್ತಿದ್ದಾರೆ. ನಮ್ಮ ತಲೆಮಾರಿಗೆ ಇಂತಹ ದೌರ್ಜನ್ಯ, ಕ್ರೌರ್ಯಗಳು ಮುಗಿಯಬೇಕು ಎನ್ನುವುದು ಪಡಿಯಮ್ಮ ಅವರ ಆಶಯ.

"ಹೆಣ್ಣು ಅಬಲೆಯಲ್ಲ, ಅವಳು ಮನಸ್ಸು ಮಾಡಿದರೆ ವ್ಯವಸ್ಥೆಯನ್ನೇ ಬದಲಿಸಬಲ್ಲಳು. ನಾವು ಗುಲಾಮಗಿರಿಯಿಂದ ಹೊರಬಂದು ಸಂಘಟಿತರಾದ ಮೇಲೆ ನಮಗೆ ನಮ್ಮ ಶಕ್ತಿಯ ಅರಿವಾಯಿತು. ಮಹಿಳೆಯರು ಯಾರ ಮುಂದೆಯೂ ಕೈಚಾಚಬಾರದು, ನಮ್ಮ ಹಕ್ಕನ್ನು ನಾವು ಹೋರಾಡಿ ಪಡೆಯಬೇಕು". ದೇವದಾಸಿ ಪದ್ಧತಿಯಿಂದ ಹೊರಬಂದ ಮೇಲೆ ಸಮಾಜವು ಇಂದಿಗೂ ನೋಡುವ ದೃಷ್ಟಿ ಬದಲಾಗಿಲ್ಲ. "ನಾವು ಮುಕ್ತರಾದೆವು, ಆದರೆ ಸಮಾಜದ ಪೂರ್ವಗ್ರಹ ಪೀಡಿತ ಮನಸ್ಥಿತಿಗಳಿಂದ ಮುಕ್ತರಾಗಲಿಲ್ಲ. ದೇವದಾಸಿ ಮಹಿಳೆಯರಿಗೆ ಮಾಸಾಶನ ಹೆಚ್ಚಳ, ನಿವೇಶನ ಮತ್ತು ಅವರ ಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ ನೀಡಬೇಕು. ಮಾಜಿ ದೇವದಾಸಿಯರಿಗೆ ಕೇವಲ ಭಿಕ್ಷೆಯ ರೂಪದ ಮಾಸಾಶನ ಬೇಡ, ಬದಲಿಗೆ ಸ್ವಯಂ ಉದ್ಯೋಗಕ್ಕೆ ನೆರವು ಮತ್ತು ಭೂಮಿ ಬೇಕು" ಎನ್ನುವುದು ಇವರ ಹೋರಾಟದ ಮುಖ್ಯ ಗುರಿ.

Read More
Next Story