
ಉ.ಕರ್ನಾಟಕದ ರೈತರಿಗೆ ಬರೆ ಎಳೆದ ಆಲಿಕಲ್ಲು: ಕೈಗೆ ಬಂದ ದ್ರಾಕ್ಷಿ ಬಾಯಿಗೆ ಬರಲಿಲ್ಲ!
ಎನ್‌ಡಿಆರ್‌ಎಫ್ ಅಥವಾ ಎಸ್‌ಡಿಆರ್‌ಎಫ್ ನಿಯಮಾವಳಿಯಡಿ ಬೆಳೆ ಹಾನಿ ಪರಿಹಾರ ಘೋಷಿಸಬೇಕು. ಒಣ ದ್ರಾಕ್ಷಿ ಸಂಸ್ಕರಣಾ ಅವಧಿಯಲ್ಲಿ ಹವಾಮಾನ ವೈಫರೀತ್ಯದಿಂದ ಆಗುವ ಹಾನಿಯನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬೇಕು.
ಉತ್ತರ ಕರ್ನಾಟಕದ ರೈತರ ಜೊತೆಗೆ ಮಳೆ, ʼಜೂಜಾಟʼಕ್ಕೆ ಇಳಿದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಫಸಲು ದಿಢೀರ್ ಸುರಿದ ಆಲಿಕಲ್ಲು ಮಳೆಯಿಂದಾಗಿ ರೈತರಿಗೆ ʼಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲʼ ಎಂಬಂತಾಗಿದೆ.
ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಕೋಟ್ಯಂತರ ಮೌಲ್ಯದ ಒಣದ್ರಾಕ್ಷಿ ಹಾಳಾಗಿದ್ದು, ಇದು ರೈತರ ಬದುಕನ್ನೇ ಬಣ್ಣಗೆಡಿಸಿದೆ. ಸಂಸ್ಕರಣಾ ಘಟಕಗಳಲ್ಲಿ ಒಣಗುತ್ತಿದ್ದ ಒಣದ್ರಾಕ್ಷಿ ಮಳೆ ಪಾಲಾಗಿದೆ.
ಅಂದಾಜು 10 ಕೋಟಿ ರೂ. ನಷ್ಟ
ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ದ್ರಾಕ್ಷಿ ಕಟಾವು ಶೇ 90 ರಷ್ಟು ಮುಗಿದಿದೆ. ಈ ಜಿಲ್ಲೆಗಳ ಬಹುತೇಕ ರೈತರು ಹಸಿ ದ್ರಾಕ್ಷಿಯನ್ನು ಮಾರಾಟ ಮಾಡದೇ 'ಒಣ ದ್ರಾಕ್ಷಿ' ತಯಾರಿಸುತ್ತಾರೆ. ಮಾರುಕಟ್ಟೆಯಲ್ಲಿ ಒಣದ್ರಾಕ್ಷಿ ಕೆ.ಜಿ. 200 ರೂ.ಗಳಿಂದ 350 ರೂ.(ಸಗಟು) ಇದೆ. ಕಪ್ಪು ಒಣದ್ರಾಕ್ಷಿ ಕೆ.ಜಿ.300 ರಿಂದ 500 ರೂ.ವರೆಗೆ ಮಾರಾಟವಾಗುತ್ತಿದೆ. ಇನ್ನು ಚಿಲ್ಲರೆ ಮಾರಾಟದಲ್ಲಿ ಕೆ.ಜಿ. ಒಣದ್ರಾಕ್ಷಿ 400 ರಿಂದ 600ರೂ.ವರೆಗೆ ಮಾರಾಟವಾಗುತ್ತಿದೆ. ಹಸಿ ದ್ರಾಕ್ಷಿ ಕೆ.ಜಿ. 50 ರಿಂದ 70 ರೂ ಇರಲಿದೆ. ಹಾಗಾಗಿ, ಬಹುಪಾಲು ರೈತರು ಒಣ ದ್ರಾಕ್ಷಿ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತಾರೆ. ಆದರೆ, ಈ ಬಾರಿ ಸಂಸ್ಕರಣಾ ಅವಧಿಯಲ್ಲಿ ಆಲಿಕಲ್ಲು ಮಳೆ ಸುರಿದ ಕಾರಣ ಬೆಳೆಗಾರರ ಬೆನ್ನೆಲುಬೇ ಮುರಿದಂತಾಗಿದೆ.
ಬೆಳಗಾವಿಯ ಅಥಣಿಯಲ್ಲಿ ಒಣದ್ರಾಕ್ಷಿ ಸಂಸ್ಕರಣಾ ಘಟಕಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅಥಣಿ ತಾಲೂಕು ಒಂದರಲ್ಲೇ ಎರಡು ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಇನ್ನು ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅಂದಾಜು 10 ಕೋಟಿ ರೂಪಾಯಿ ಮೌಲ್ಯದ ಒಣ ದ್ರಾಕ್ಷಿ ಹಾನಿಯಾಗಿದೆ ಎಂದು ಒಣದ್ರಾಕ್ಷಿ ಸಂಸ್ಕರಣಾ ಘಟಕಗಳ ಒಕ್ಕೂಟ ಹೇಳಿದೆ.
ಮಳೆಯಲ್ಲಿ ತೋಯ್ದು ಕಪ್ಪಾದ ಒಣದ್ರಾಕ್ಷಿ
ಬೆಳಗಾವಿ ಜಿಲ್ಲೆಯಲ್ಲಿರುವ ಯಲಹಡಲಗಿ, ಬಡಚಿ, ಐಗಳಿ ಕ್ರಾಸ್, ಸಿಂಧೂರ ಘಟಕ, ಹಾಲಳ್ಳಿ ಮತ್ತು ಕಕಮರಿಯ ಸಿಕಂದರ ಮುಜಾವರ ಅವರ ಘಟಕ ಸೇರಿದಂತೆ ಹಲವೆಡೆ ರೈತರು ಒಣ ದ್ರಾಕ್ಷಿಗಾಗಿ ಶೆಡ್‌ಗಳಿಗೆ ದ್ರಾಕ್ಷಿ ಹಾಕಿದ್ದರು. ಏಕಾಏಕಿ ಸುರಿದ ಆಲಿಕಲ್ಲು ಮಳೆಯಿಂದ ದ್ರಾಕ್ಷಿ ತೊಯ್ದು ಇದೀಗ ಕಪ್ಪುಬಣ್ಣಕ್ಕೆ ತಿರುಗಿದೆ. ಒಣದ್ರಾಕ್ಷಿಯು ಗುಣಮಟ್ಟ ಕಳೆದುಕೊಂಡಿರುವುದರಿಂದ ಕನಿಷ್ಠ ಬೆಲೆಗೂ ಕೇಳುವವರಿಲ್ಲದಂತಾಗಿದೆ.
"ಮಳೆ ಬಂದಾಗ ಶೆಡ್ ಮುಚ್ಚಲು ರೈತರು ಎಷ್ಟೇ ಪ್ರಯತ್ನಿಸಿದರೂ ಬೀಸಿದ ಬಿರುಗಾಳಿಗೆ ಪ್ಲಾಸ್ಟಿಕ್ ಕವಚಗಳು ಹಾರಿ ಹೋಗಿವೆ. ಸಂಸ್ಕರಣಾ ಘಟಕಗಳ ಒಳಗೆ ನೀರು ನುಗ್ಗಿ ಇಡೀ ದಾಸ್ತಾನು ಹಾಳಾಗಿದೆ" ಎಂದು ಅಥಣಿ ರೈಸಿನ್ಸ್ ಪ್ರೋಸೆಸಿಂಗ್ ಕ್ಲಷ್ಟರ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಷಹಜಹಾನ್ ಡೊಂಗರಗಾಂವ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಅಥಣಿ ತಾಲೂಕಿನಲ್ಲಿ 2ಕೋಟಿ ರೂ. ಮೌಲ್ಯದ ಒಣ ದ್ರಾಕ್ಷಿ ಮಳೆಯಲ್ಲಿ ತೋಯ್ದು ಹಾಳಾಗಿದೆ. ಕೂಡಲೇ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿ, ಎನ್‌ಡಿಆರ್‌ಎಫ್ ಅಥವಾ ಎಸ್‌ಡಿಆರ್‌ಎಫ್ ನಿಯಮಗಳಡಿ ಪರಿಹಾರ ನೀಡಬೇಕು. ಇಲ್ಲವೇ ಬೆಳೆ ವಿಮೆಗೆ ಸೇರಿಸಬೇಕು" ಎಂದು ಒತ್ತಾಯಿಸಿದರು.
"ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಬಹುತೇಕ ರೈತರು ಟೇಬಲ್ ದ್ರಾಕ್ಷಿ(ಬೀಜರಹಿತ,, ತೆಳುವಾದ ಸಿಪ್ಪೆ ಹಾಗೂ ರಸಭರಿತ ತಿರುಳು) ಬೆಳೆಯುತ್ತಾರೆ. ಶೇ 90 ರಷ್ಟು ಬೆಳೆಯನ್ನು ಒಣದ್ರಾಕ್ಷಿಯನ್ನಾಗಿ ಸಂಸ್ಕರಿಸಲಾಗುತ್ತದೆ. ಉಳಿದ ಶೇ 10 ರಷ್ಟು ಹಸಿ ದ್ರಾಕ್ಷಿಯನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಮೂರೂ ಜಿಲ್ಲೆಗಳಲ್ಲಿ ಸುಮಾರು 400ಕ್ಕೂ ಹೆಚ್ಚು ರೈತರು ಒಣದ್ರಾಕ್ಷಿ ಸಂಸ್ಕರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ವಿವರಿಸಿದರು.
ರಂಜಾನ್‌ನಲ್ಲಿ ಮಾರಾಟಕ್ಕೆ ಸಿಗದ ಅವಕಾಶ
"ಪ್ರತಿ ವರ್ಷ ರಂಜಾನ್ ಹಬ್ಬದಂದು ಅತಿ ಹೆಚ್ಚು ಒಣದ್ರಾಕ್ಷಿ ಮಾರಾಟವಾಗುತ್ತಿತ್ತು. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ಸಂಸ್ಕರಣೆಯಾಗುವ ಒಣದ್ರಾಕ್ಷಿಯನ್ನು ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರಿನ ಮಾರುಕಟ್ಟೆಗಳಿಗೆ ಪೂರೈಸಲಾಗುತ್ತಿತ್ತು. ಆದರೆ, ಈ ಬಾರಿ ರಂಜಾನ್ ಅವಧಿಯೊಳಗೆ ಆಲಿಕಲ್ಲು ಮಳೆ ಸುರಿದು ಹಾನಿಯಾದ್ದರಿಂದ ವ್ಯಾಪಾರ ಕ್ಷೀಣಿಸಿದೆ. ಇದಲ್ಲದೇ ಬೇಕರಿ ಉದ್ಯಮಕ್ಕೂ ಪೂರೈಕೆ ಕಡಿಮೆಯಾಗಿದೆ" ಎಂದು ಡೊಂಗರಗಾಂವ ಹೇಳಿದರು.
"ಅಥಣಿಯಲ್ಲಿರುವ ನಮ್ಮ ಘಟಕವೊಂದರಲ್ಲೇ 1.5 ಕೋಟಿ ರೂ. ನಷ್ಟವಾಗಿದೆ. ದ್ರಾಕ್ಷಿ ಸೀಸನ್ ಮುಗಿಯುತ್ತಾ ಬಂದರೂ ಕೇವಲ ಶೇ.10 ರಷ್ಟು ಮಾತ್ರ ಒಣದ್ರಾಕ್ಷಿ ಮಾರಾಟವಾಗಿದೆ. ಉಳಿದ ಶೇ. 90 ರಷ್ಟು ದ್ರಾಕ್ಷಿಯನ್ನು ಈಗ ಸ್ಟೋರೇಜ್ ಇಡಬೇಕಾಗಿದೆ. ದ್ರಾಕ್ಷಿಯ ಗುಣಮಟ್ಟ ಕುಸಿದಿರುವುದರಿಂದ ವ್ಯಾಪಾರಿಗಳು ಹರಾಜಿನಲ್ಲಿ ಕನಿಷ್ಠ ಬೆಲೆಗೆ ಕೇಳುತ್ತಿದ್ದಾರೆ" ಅಳಲು ತೋಡಿಕೊಂಡರು.
ಮಹಾರಾಷ್ಟ್ರಕ್ಕೆ ಹೆಚ್ಚು ಒಣದ್ರಾಕ್ಷಿ ಪೂರೈಕೆ
ಉತ್ತರ ಕರ್ನಾಟಕದ ಮೂರೂ ಜಿಲ್ಲೆಗಳಲ್ಲಿ ಸಂಸ್ಕರಣೆಯಾಗುವ ಒಣದ್ರಾಕ್ಷಿಗೆ ಮಹಾರಾಷ್ಟ್ರದಲ್ಲಿ ಹೆಚ್ಚು ಬೇಡಿಕೆ ಇರುತ್ತದೆ. ಪ್ರತಿ ವಾರ ವಿಜಯಪುರ, ಮಹಾರಾಷ್ಟ್ರದ ನಾಸಿಕ್, ಸೋಲ್ಹಾಪುರ ಹಾಗೂ ಸಾಂಗ್ಲಿ ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ.
ಒಣದ್ರಾಕ್ಷಿ ಸಂಸ್ಕರಣಾ ಅವಧಿಯಲ್ಲಿ ಹವಾಮಾನ ವೈಫರಿತ್ಯದಿಂದ ಆಗಿರುವ ಹಾನಿಗೆ ಸರ್ಕಾರ ಪ್ರತ್ಯೇಕ ನೀತಿ ರೂಪಿಸಬೇಕು. ಪರಿಹಾರ ಹಾಗೂ ವಿಮಾ ಸೌಲಭ್ಯವನ್ನು ಈ ನೀತಿಯಡಿ ಒದಗಿಸಬೇಕು. ಸಾಮಾನ್ಯವಾಗಿ ಬೆಳೆ ವಿಮಾ ಯೋಜನೆಗಳಲ್ಲಿ ತೋಟದಲ್ಲಿರುವ ಬೆಳೆಗಳು ಹಾಳಾದರೆ ಮಾತ್ರ ಪರಿಹಾರ ಸಿಗಲಿದೆ. ಸಂಸ್ಕರಣೆ ಹಂತದಲ್ಲಿ ಆಗುವ ಹಾನಿ ಪರಿಹಾರ ಸಿಗುವುದಿಲ್ಲ. ಹಾಗಾಗಿ, ರಾಜ್ಯ ಸರ್ಕಾರ ಪ್ರತ್ಯೇಕ ನೀತಿ ಅಥವಾ ವಿಮೆ ಜಾರಿ ಮಾಡಬೇಕು ಎಂಬುದು ದ್ರಾಕ್ಷಿ ಬೆಳೆಗಾರರ ಆಗ್ರಹವಾಗಿದೆ.
ಬೆಳೆಗಾರರ ಒತ್ತಾಯವೇನು?
ಅಥಣಿ ಭಾಗದ ದ್ರಾಕ್ಷಿ ಬೆಳೆಗಾರರು ಮತ್ತು ಸಂಸ್ಕರಣಾ ಘಟಕಗಳ ಅಸೋಸಿಯೇಷನ್ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.
ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಬೇಕು. ಎನ್‌ಡಿಆರ್‌ಎಫ್ ಅಥವಾ ಎಸ್‌ಡಿಆರ್‌ಎಫ್ ನಿಯಮಾವಳಿಯಡಿ ಬೆಳೆ ಹಾನಿ ಪರಿಹಾರ ಘೋಷಿಸಬೇಕು. ಒಣ ದ್ರಾಕ್ಷಿ ಸಂಸ್ಕರಣಾ ಅವಧಿಯಲ್ಲಿ ಹವಾಮಾನ ವೈಫರೀತ್ಯದಿಂದ ಆಗುವ ಹಾನಿಯನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬೇಕು.
ವಿಜಯಪುರ, ನಾಸಿಕ್, ಸೋಲ್ಹಾಪುರ ಮತ್ತು ಸಾಂಗ್ಲಿ ಮಾರುಕಟ್ಟೆಗಳಲ್ಲಿ ಕರ್ನಾಟಕದ ರೈತರಿಗೆ ಸರಿಯಾದ ದರ ಸಿಗುವಂತೆ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂಬುದು ದ್ರಾಕ್ಷಿ ಬೆಳೆಗಾರರ ಆಗ್ರಹವಾಗಿದೆ.

