
Great Green Wall|ರಾಜ್ಯಕ್ಕೆ ಗಂಡಾಂತರ: ಥಾರ್, ಕಚ್ ಬಳಿಕ ಉತ್ತರ ಕರ್ನಾಟಕ ಆಗಲಿದೆ ಮರುಭೂಮಿ!
ಅರಣ್ಯ ನಾಶ, ಗಣಿಗಾರಿಕೆ, ಕೊಳವೆಬಾವಿ, ತಾಪಮಾನ ಏರಿಕೆಯ ಪರಿಣಾಮ ಕೆಲವೇ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ ಗುಜರಾತ್‌ನ ಕಚ್ ಮೀರಿಸಿ ದೇಶದ ಎರಡನೇ ದೊಡ್ಡ ಮರುಭೂಮಿ ಸೃಷ್ಟಿಯಾಗುವ ಆತಂಕವಿದೆ.
ಅಭಿವೃದ್ಧಿಯಿಂದ ವಂಚಿತವಾಗಿರುವ ಉತ್ತರ ಕರ್ನಾಟಕಕ್ಕೆ ದೊಡ್ಡ ಗಂಡಾಂತರ ಎದುರಾಗಿದೆ. ಅರಣ್ಯ ನಾಶ, ಗಣಿಗಾರಿಕೆ, ಭೂಗರ್ಭ ಕೊರೆಯುವ ಕೊಳವೆಬಾವಿ ಹಾಗೂ ತಾಪಮಾನ ಏರಿಕೆಯ ಪರಿಣಾಮ ಕೆಲವೇ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ ದೇಶದ ಎರಡನೇ ಅತಿ ದೊಡ್ಡ ಮರುಭೂಮಿ ಅಭಿವೃದ್ಧಿಯಾಗುವ ಆತಂಕ ಎದುರಾಗಿದೆ.
ಬೆಳಗಾವಿಯಿಂದ ಯಾದಗಿರಿವರೆಗಿನ ಪ್ರಮುಖ ಐದು ಜಿಲ್ಲೆಗಳು ಗುಜರಾತಿನ ಕಚ್ ಮಾದರಿಯ ಮರುಭೂಮಿ ಸದೃಶವಾಗಿ ಬದಲಾಗಲಿವೆ ಎಂಬ ವಿಜ್ಞಾನಿಗಳ ಎಚ್ಚರಿಕೆ ಕರೆಗಂಟೆಯಾಗಿದೆ. ಅನರ್ಥಕಾರಿ ಅಭಿವೃದ್ಧಿ ಮುಂದುವರಿದರೆ ಮುಂದಿನ 15-20 ವರ್ಷಗಳಲ್ಲಿ ದೇಶದ ಎರಡನೇ ದೊಡ್ಡ ಮರುಭೂಮಿಯನ್ನು ಉತ್ತರ ಕರ್ನಾಟಕದಲ್ಲಿ ನೋಡಬಹುದಾಗಿದೆ.
ಈ ಮರುಭೂಮಿ ಮಾದರಿ ಭೂ ಸದೃಶ ಬದಲಿಸಬೇಕಾದರೆ ಹಸಿರ ಚಾದರವೇ (Green Wall) ತ್ವರಿತ ಪರಿಹಾರ ಎಂಬುದು ಪರಿಸರ ವಿಜ್ಞಾನಿಗಳ ಅಂಬೋಣ.
ಹಸಿರು ಗೋಡೆ ಏನು, ಎತ್ತ?
ಜಗತ್ತಿನ ಎಲ್ಲ ಕಡೆ ಮರುಭೂಮಿ ವಿಸ್ತರಿಸುತ್ತಿದೆ. ಇದರ ವಿಸ್ತರಣೆ ತಡೆಯಲೆಂದೇ ಅನೇಕ ದೇಶಗಳಲ್ಲಿ ಹಸಿರು ಗೋಡೆಗಳ ನಿರ್ಮಾಣ ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲಿಯೂ ಹೆಚ್ಚುತ್ತಿರುವ ತಾಪಮಾನವು ಮರುಭೂಮಿ ಸೃಷ್ಟಿಗೆ ಪ್ರಮುಖ ಕಾರಣವಾಗುತ್ತಿದೆ. ಬರದಿಂದ ಬರಡಾಗುತ್ತಿರುವ ಉತ್ತರ ಕರ್ನಾಟಕದ ನೆಲದಲ್ಲಿ ಮತ್ತೆ ಹಸಿರು ತುಂಬಿಸುವ ಪ್ರಯತ್ನವನ್ನೇ ಹಸಿರು ಗೋಡೆ ಅಥವಾ ಹಸಿರ ಚಾದರ ಎಂದು ಕರೆಯಲಾಗುತ್ತದೆ.
ಉತ್ತರ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಇತ್ತೀಚೆಗೆ ಮರುಭೂಮಿ ಸದೃಶ ವಾತಾವರಣ ಕಾಣುತ್ತಿದೆ. ಗುಜರಾತ್‌ನ ಕಚ್ ಮರುಭೂಮಿ ಹೊರತುಪಡಿಸಿದರೆ ದೇಶದ ಎರಡನೇ ಅತಿ ದೊಡ್ಡ ಮರುಭೂಮಿ ಕರ್ನಾಟಕದಲ್ಲಿಯೇ ಅದರಲ್ಲೂ ಉತ್ತರ ಕರ್ನಾಟಕದಲ್ಲಿಯೇ ರೂಪುಗೊಳ್ಳಲಿದೆ. ತದನಂತರ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಿಗೂ ವ್ಯಾಪಿಸಲಿದೆ ಎಂಬ ಸತ್ಯ ಪರಿಸರ ವಿಜ್ಞಾನಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ.
ಮರುಭೂಮಿ ಸೃಷ್ಟಿಯಾಗುವುದನ್ನು ತಡೆಯಬೇಕಾದರೆ ʻಹಸಿರು ಗೋಡೆ‘ ನಿರ್ಮಾಣದ ಪ್ರಯತ್ನಗಳನ್ನು ತತ್ ಕ್ಷಣದಿಂದಲೇ ಆರಂಭಿಸುವಂತೆ ನೀತಿ ಹಾಗೂ ಯೋಜನಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸರ್ಕಾರಕ್ಕೆ ಎರಡು ಮಾದರಿ ಸಲ್ಲಿಕೆ
ಕರ್ನಾಟಕದಲ್ಲಿ ಮರುಭೂಮಿ ಅಭಿವೃದ್ಧಿ ಆಗುವುದನ್ನು ತಡೆಯಲು ಆಫ್ರಿಕದ ʻಮಹಾ ಹಸಿರು ಗೋಡೆ’ (’ದಿ ಗ್ರೇಟ್ ಗ್ರೀನ್ ವಾಲ್‘) ಮಾದರಿಯ ಹಸಿರು ಚಾದರ ನಿರ್ಮಿಸಬೇಕಾಗಿದೆ. ಆಫ್ರಿಕಾದಲ್ಲಿ 22 ದೇಶಗಳು ಒಟ್ಟಾಗಿ 7800 ಕಿ.ಮೀ. ಉದ್ದದ, 15 ಕಿ.ಮೀ. ಅಗಲದ ಹಸಿರುಪಟ್ಟಿ ನಿರ್ಮಿಸುತ್ತಿವೆ. ಇದು ವಿಶ್ವಸಂಸ್ಥೆ ಮತ್ತು ಆಫ್ರಿಕನ್ ಸಂಘದ ಸಹಯೋಗದಲ್ಲಿ ನಡೆಯುತ್ತಿದೆ. ಹಸಿರು ಗೋಡೆ ನಿರ್ಮಾಣದಿಂದ ಅಂದಾಜು 1 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ. ಆಫ್ರಿಕನ್ ಹಸಿರು ಗೋಡೆಯ ಥೀಮ್ ಸಾಂಗ್ ಹಾಡಿದವರು ಬೆಂಗಳೂರಿನ ರಿಕಿ ಕೇಜ್.
ಭಾರತದಲ್ಲೂ ʻಮಹಾ ಹಸಿರು ಗೋಡೆ‘ ನಿರ್ಮಿಸಲಾಗುತ್ತಿದೆ. ಇದು ಐದು ರಾಜ್ಯಗಳಲ್ಲಿ 1500 ಕಿ.ಮೀ. ಉದ್ದ, 5 ಕಿ.ಮೀ. ಅಗಲದ ಹಸಿರು ಕಾಡು ಬೆಳೆಸುವ ಯೋಜನೆಯಾಗಿದೆ. ಗುಜರಾತಿನ ಪೋರಬಂದರದಿಂದ ಆರಂಭವಾಗಿ ಹರಿಯಾಣದ ಪಾಣಿಪತ್ ವರೆಗೂ, ಕಚ್ ಮರುಭೂಮಿಗೆ ಸಮನಾಂತರವಾಗಿ ಅರಾವಳಿ ಪರ್ವತದವರೆಗೆ ಸಾಗಲಿದೆ. ಎಂಟು ವರ್ಷಗಳಿಂದ ಯೋಜನೆ ಚಾಲ್ತಿಯಲ್ಲಿದೆ. 5 ರಾಜ್ಯಗಳ 29 ಜಿಲ್ಲೆ ಜನರನ್ನು ಸೇರಿಸಿಕೊಂಡು ಅಂದಾಜು 64 ಸಾವಿರ ಹೆಕ್ಟೇರ್ ಹಸಿರು ಬೆಳೆಸಲಾಗುತ್ತಿದೆ.
ಮತ್ತೊಂದು ಮಾದರಿ ಎಂದರೆ ಚೀನಾದಲ್ಲಿ ಗೋಬಿ ಮರುಭೂಮಿ ವಿಸ್ತರಣೆ ತಡೆಯಲೆಂದು 4800 ಕಿಮೀ ಉದ್ದದ ಹಸಿರು ಗೋಡೆಯ ನಿರ್ಮಾಣ. ಇದಕ್ಕೆ ನಿರ್ದಿಷ್ಟ ಅಗಲ- ಉದ್ದವಿಲ್ಲ. ಕೆಲವೆಡೆ ಅಗಲ 1400 ಕಿ.ಮಿ.ಗೂ ಹೆಚ್ಚು ವಿಸ್ತರಿಸಿದೆ. ಆಫ್ರಿಕದ ಹಸಿರು ಗೋಡೆಯ ಕೆಲಸ ಆಗಾಗ ತುಸು ಕುಂಟುತ್ತಾ ಸಾಗಿದೆ, ಆದರೆ, ಚೀನಾ ಮಾತ್ರ ತನ್ನ ನಿರಂತರತೆ ಕಾಪಾಡಿಕೊಂಡಿದೆ. ಅಲ್ಲಿನ ತಕ್ಲಾಮಾಕನ್ ಮರುಭೂಮಿಯ 3000 ಕಿ.ಮೀ ಹಸಿರು ಪಟ್ಟಿಯನ್ನು ಈಗಾಗಲೇ ಪೂರ್ಣಗೊಳಿಸಿದೆ. ಇದಲ್ಲದೇ ಇದೇ ರೀತಿಯ ಎಂಟು ಹಸಿರು ಗೋಡೆಗಳನ್ನು ಚೀನಾ ನಿರ್ಮಿಸುತ್ತಿದೆ.
ಉತ್ತರ ಕರ್ನಾಟಕದಲ್ಲಿ ಹಸಿರುಗೋಡೆ ನಿರ್ಮಾಣಕ್ಕೆ ಶಿಫಾರಸು
ಆಫ್ರಿಕಾ ಹಾಗೂ ಚೀನಾ ಮಾದರಿಯ ಹಸಿರು ಗೋಡೆ ನಿರ್ಮಾಣ ಇದೀಗ ಉತ್ತರ ಕರ್ನಾಟಕದಲ್ಲಿ ವಿಸ್ತರಿಸುತ್ತಿರುವ ಮರುಭೂಮಿಯ ತಡೆಗೆ ಪರಿಹಾರೋಪಾಯವಾಗಿದೆ. ಬೆಳಗಾವಿಯಿಂದ ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿವರೆಗೆ ಐದು ಜಿಲ್ಲೆಗಳಲ್ಲಿ ಮೂರು ಕಿ.ಮೀ. ಅಗಲದ ಹಸಿರು ಕಾಡು ನಿರ್ಮಿಸಬೇಕೆಂದು ನೀತಿ ಆಯೋಗದ ವಿಜ್ಞಾನ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ವಿಜ್ಞಾನ ಬರಹಗಾರ, ಪರಿಸರವಾದಿ ನಾಗೇಶ್ ಹೆಗಡೆ ಅವರು, ಮರುಭೂಮಿ ವಿಸ್ತರಣೆಯಾಗುತ್ತಿರುವ ಪ್ರದೇಶದಲ್ಲಿ ಗೋಡೆ, ಕೋಟೆ ಕಟ್ಟುವುದರಿಂದ ತಡೆಯಬಹುದು. ಆದರೆ ಅದಕ್ಕಿಂತ ಹೆಚ್ಚು ಪರಿಸರ ಬೆಳೆಸುವುದು ಸೂಕ್ತ ಹಾಗೂ ಸರಳ ಉಪಾಯ. ನಾವು ಕೊಳವೆ ಬಾವಿಗಳನ್ನು ಆಳಕ್ಕೆ ಕೊರೆಸಿ ತೇವಾಂಶ ಇಲ್ಲದಂತೆ ಮಾಡುತ್ತಿದ್ದೇವೆ. ಗಿಡಮರ ಕಡಿಯುತ್ತಿದ್ದೇವೆ. ಸದ್ಯ ಗುಜರಾತಿನ ಕಚ್ ನಲ್ಲಿ ದೇಶದ ದೊಡ್ಡ ಮರುಭೂಮಿ ಇದೆ. ಎರಡನೇ ಅತಿ ದೊಡ್ಡ ಮರುಭೂಮಿ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಗಿಡಮರಗಳು ಕಡಿಮೆಯಾಗಿ, ಮಣ್ಣಿನಲ್ಲಿ ತೇವಾಂಶ ಇಲ್ಲವಾದರೆ ಮರಳು ಹಾಗೂ ಬಿಸಿಗಾಳಿಯ ಪ್ರಮಾಣ ಹೆಚ್ಚಲಿದೆ. ಅಂತರ್ಜಲ ಕಡಿಮೆಯಾಗಲಿದೆ, ಚಳಿ- ಬಿಸಲು ಕೂಡ ಜಾಸ್ತಿಯಾಗುವುದು ಮರುಭೂಮಿ ಸೃಷ್ಟಿಯಾಗುವ ಗುಣಲಕ್ಷಣಗಳು. 20 ವರ್ಷಗಳ ಹಿಂದೆಯೇ ವಿಜ್ಞಾನಿಗಳು ಇದನ್ನು ಗಮನಿಸಿದ್ದಾರೆ. ಮುಂದಿನಬ 15-20 ವರ್ಷಗಳಲ್ಲಿ ಉತ್ತರ ಕರ್ನಾಟಕದ ಬಹುಭಾಗಗಳು ಮರುಭೂಮಿ ಸದೃಶವಾಗಲಿವೆ ಎಂದರು.
'ಥಿಂಕ್ ಗ್ಲೋಬಲಿ, ಆಕ್ಟ್ ಲೋಕಲಿ'
ಅರಣ್ಯ ಇಲಾಖೆ ಚೂರು ಪಾರು ಹಸಿರೀಕರಣ ಮಾಡುತ್ತಿದೆ. ಬೃಹತ್ ಪ್ರಮಾಣದಲ್ಲಿ ಯೋಜನೆ ಜಾರಿ ಮಾಡಬೇಕಾದರೆ 'ಥಿಂಕ್ ಗ್ಲೋಬಲಿ, ಆಕ್ಟ್ ಲೋಕಲಿ' ಎಂಬ ನಿಯಮ ಅನ್ವಯಿಸಿಕೊಳ್ಳಬೇಕು. ಅಮೆರಿಕ, ಆಫ್ರಿಕಾ, ಚೀನಾದಲ್ಲಿ ಮರುಭೂಮಿ ತಡೆಗೆ ಯೋಜನೆ ಮಾಡಲಾಗುತ್ತಿದೆ. ಇದರ ಮಾದರಿಯಲ್ಲೇ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿಗಳಲ್ಲಿ ಹಸಿರು ಗೋಡೆ ನಿರ್ಮಿಸುವ ಅನಿವಾರ್ಯತೆ ಎದುರಾಗಿದೆ ಎಂದು ನಾಗೇಶ್ ಹೆಗಡೆ ಹೇಳಿದರು.
ರಾಜಸ್ತಾನದ ಇಂದಿರಾ ಗಾಂಧಿ ಕೆನಾಲ್ ರೀತಿ ಅಣೆಕಟ್ಟು ಕಟ್ಟಿ ನೀರು ಹರಿಸಬಹುದು. ಸದ್ಯ ಉತ್ತರ ಕರ್ನಾಟಕದಲ್ಲಿ ಕೃಷ್ಣ, ಗೋದಾವರಿ, ಭೀಮಾ, ತುಂಗಭದ್ರಾ ನೀರು ಬಳಸುತ್ತಿದ್ದೇವೆ. ಆದಾಗ್ಯೂ, ಮರುಭೂಮಿ ವಿಸ್ತರಣೆ ಆಗುತ್ತಿದೆ. ಆದ್ದರಿಂದ ಸಿದ್ಧ ಮಾದರಿಗಳು ಅಗತ್ಯವಾಗಿವೆ. ಜನರೇ ಪಾಲುದಾರರಾಗಿ ಹಸಿರು ನಿರ್ಮಿಸಬಹುದಾದ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮರುಭೂಮಿ ಸದೃಶ ವಾತಾವರಣ ನಿರ್ಮಾಣ ಆಗಿರುವುದು ಉಪಗ್ರಹ ಆಧರಿತ ಚಿತ್ರಗಳಿಂದ ತಿಳಿದುಬಂದಿದೆ. ಉತ್ತರ ಕರ್ನಾಟಕದಲ್ಲಿ ಬೀದರ್, ಕಲಬುರಗಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಹಾಗೂ ಗದಗಿನ ಕೆಲ ಭಾಗಗಳು ಮರುಭೂಮಿ ಸದೃಶ್ಯವಾಗಿವೆ.
ಪ್ರಸ್ತಾವಿಕವಾಗಿ ಐದು ಜಿಲ್ಲೆಗಳಲ್ಲಿ ಹಸಿರು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರೀತಿ ಹಸಿರು ಗೋಡೆ ನಿರ್ಮಿಸಿದರೆ ಉತ್ತರ ಭಾರತದ ಕಡೆಯಿಂದ ಮರಳು ಕಣಗಳು ಬರುವುದಿಲ್ಲ. ಬಿಸಿಲಿನ ಪ್ರಭಾವ ಇರುವುದಿಲ್ಲ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದ್ದೇವೆ ಎಂದು ನಾಗೇಶ್ ಹೆಗಡೆ ಹೇಳಿದರು.
ಭೂಮಿಯ ರಕ್ಷಣೆಗೂ ಅನುದಾನ ಇಡಲಿ
ರಾಜಸ್ತಾನದ ನಂತರ ಕರ್ನಾಟಕವೇ ಈಗ ಮರುಭೂಮಿಯಾಗಿ ಮಾರ್ಪಡುತ್ತಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಕೆಲ ಭಾಗಗಳು ಮರುಭೂಮಿಯಾಗಿ ಬದಲಾಗುತ್ತಿರುವುದಕ್ಕೆ ವೈಜ್ಞಾನಿಕ ಆಧಾರಗಳಿವೆ. ಗಣಿಗಾರಿಕೆ, ಅರಣ್ಯ ನಾಶ, ಪ್ರವಾಹ, ಕಾಡ್ಗಿಚ್ಚು ಸೇರಿದಂತೆ ಇನ್ನಿತರ ಕಾರಣಗಳಿಂದ ಭೂಮಿ ಬರಡಾಗುತ್ತಿದೆ ಎಂದು ಪರಿಸರವಾದಿ ಯಲ್ಲಪ್ಪರೆಡ್ಡಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ಪದೇ ಪದೇ ಪ್ರವಾಹ ಸೃಷ್ಟಿಯಾಗಿ ಎಲ್ಲವೂ ಕೊಚ್ಚಿ ಹೋಗುತ್ತಿದೆ. ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ಭೂಮಿ ತಾಯಿಯನ್ನು ಗೋಳಾಡಿಸುತ್ತಿವೆ. ಬಾಂಬ್, ಕ್ಷಿಪಣಿ ಸ್ಫೋಟ, ಕಲ್ಲುಗಣಿಗಾರಿಕೆ ಸೇರಿದಂತೆ ಹಲವು ರೀತಿಯಲ್ಲಿ ಭೂಮಿಯ ಶೋಷಣೆಯಾಗುತ್ತಿದೆ. ಬೆಳೆಗಳಿಗೆ ಕೀಟನಾಶಕ ಬಳಸುವುದರಿಂದ ಹಸಿರು ಮಾಯವಾಗುತ್ತಿದೆ. ನದಿಗಳು ಬತ್ತುತ್ತಿವೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ಪ್ರತಿನಿತ್ಯ ತಾಪಮಾನ ಏರಿಕೆಯಾಗುತ್ತಿರುವುದು ಮರುಭೂಮಿಯಾಗಿ ಬದಲಾಗುವ ಲಕ್ಷಣಗಳಾಗಿವೆ. ಇದು ಆತಂಕಕಾರಿ ವಿಚಾರ ಎಂದು ಹೇಳಿದರು.
ಮರುಭೂಮಿ ವಿಸ್ತರಣೆ ಹೇಗೆ ತಡೆಯಬಹುದು?
ಹಸಿರು ಗೋಡೆ ನಿರ್ಮಾಣ ಮಾಡುವುದರಿಂದ ಮಹಾರಾಷ್ಟ್ರ, ಉತ್ತರ ಭಾರತದಿಂದ ಬರುವ ಶಾಖದ ಪ್ರವಾಹ ಕಡಿಮೆಯಾಗಲಿದೆ. ಬಂಜರು ಭೂಮಿಯಲ್ಲಿ ಕೊಂಚ ಹಸಿರು ಉಕ್ಕುವಂತೆ ಮಾಡಿದರೆ ಪ್ರಕೃತಿಯೇ ಇಡೀ ಜಾಗವನ್ನು ತನ್ನದಾಗಿಸಿಕೊಂಡು ಹಸಿರಾಗಿಸುತ್ತದೆ.
ನೆಲ ತಂಪಾಗಲಿದೆ. ಮಳೆ ನೀರು ಸಂಗ್ರಹವಾಗಿ, ಆವಿ ಆಗಲಿದೆ. ನಂತರ ಜೀವವೈವಿದ್ಯತೆಗೆ ತಾಣವಾಗಲಿದೆ. ಇದರಿಂದ ಮರಳಿನ ಕಣಗಳನ್ನು ತಡೆಯಬಹುದು. ಈ ಹಿಂದೆ ನಾವೇ ಧ್ವಂಸ ಮಾಡಿರುವ ಅರಣ್ಯಕ್ಕೆ ಪರ್ಯಾಯವಾಗಿ ಹಸಿರೀಕರಣಕ್ಕೆ ಸಹಕಾರ ಕೊಡಬೇಕು. ಈ ಮೊದಲು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾಗ ಬಂಜರಾಗಿತ್ತು. ಸುತ್ತ ಗೋಡೆ ನಿರ್ಮಿಸಿದ್ದರಿಂದ ಈಗ ಹಸಿರಾಗಿದೆ. ಕೋಲಾರವನ್ನೂ ಬರದ ಛಾಯೆ ಆವರಿಸುತ್ತಿದೆ. ಉತ್ತರದಿಂದ ದಕ್ಷಿಣದ ಕಡೆ ವೇಗವಾಗಿ ಬರುತ್ತಿದೆ. ಈಗಾಗಲೇ ಉತ್ತರ ಪ್ರದೇಶ, ಚನ್ನೈನಲ್ಲೂ ಮರುಭೂಮಿ ವಿಸ್ತರಿಸುತ್ತಿದೆ. ಹಾಗಾಗಿ ನಾವು ಸ್ಪಷ್ಟವಾದ ಗಡಿ ಗುರುತಿಸಿ ಹಸಿರೀಕರಣ ಮಾಡಿದರಷ್ಟೇ ಬರ ತಡೆಯಬಹುದಾಗಿದೆ ಎಂದು ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.
ಹಸಿರು ಗೋಡೆ ನಿರ್ಮಾಣದಲ್ಲಿ ಸರ್ಕಾರ, ಸಂಘಟನೆಗಳು, ಜನರು ಕೂಡ ಭಾಗಿಯಾಗಬೇಕು. ಇದು ಸರ್ಕಾರದ ಯೋಜನೆಯಾದರೆ ಇಸ್ರೋದಿಂದ ಉಪಗ್ರಹ ಚಿತ್ರಗಳನ್ನು ಪಡೆಯಬಹುದು. ಐಐಎಸ್‌ಸಿಯಿಂದ ತಾಂತ್ರಿಕ ನೆರವು ಕೋರಬಹುದು. ಸಂಘ ಸಂಸ್ಥೆಗಳು ಧನಸಹಾಯ ಮಾಡಬೇಕು. ಆದರೆ, ಯೋಜನೆಯ ಪ್ರಾರಂಭ ಹಾಗೂ ನಿರ್ದೇಶನ ಸರ್ಕಾರದಿಂದಲೇ ಆಗಬೇಕು. ಇದಕ್ಕಾಗಿ ಪ್ರಾಧಿಕಾರ ನೇಮಕವಾಗಬೇಕು. ಆಗ ತನ್ನಿಂದ ತಾನೇ ನೆರವು ಹರಿದುಬರಲಿದೆ
ಹಣಕಾಸಿನ ಅವಕಾಶ ಇಲ್ಲವೆಂದು ಹೇಳಿ ಆರಂಭ ಮಾಡದೇ ಕುಳಿತುಕೊಳ್ಳಬಾರದು. ಇದಕ್ಕೆ ಹಣದ ಮುಗ್ಗಟ್ಟು ಬರುವುದಿಲ್ಲ. ವಿಶ್ವಸಂಸ್ಥೆಯಲ್ಲಿ ಬರ ನಿರೋಧಕ ತಡೆ ಯೋಜನೆ ಇದೆ, ಎಡಿಬಿ ಬ್ಯಾಂಕ್ ನೆರವು ನಿಡಲಿದೆ. ಸರ್ಕಾರಿ ಭೂಮಿ ಅಲಭ್ಯವಿರುವ ಕಡೆ ರೈತರನ್ನು ಮನವೊಲಿಸಿ ತಂತ್ರಜ್ಞಾನ ಬಳಕೆಯೊಂದಿಗೆ ಹಸಿರೀಕರಣ ಮಾಡಬಹುದು. ಈ ಯೋಜನೆಯಲ್ಲಿ ಯಾವುದೇ ಜಾತಿ, ಧರ್ಮ, ರಾಜಕೀಯ ಮಾಡಬಾರದು ಎಂದು ಸಲಹೆ ನೀಡಿದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹ ತಲೆದೋರಿದ ಸಂದರ್ಭ ಸಂಗ್ರಹ ಚಿತ್ರ
ಪ್ರಸ್ತಾವನೆಯ ತಾರ್ಕಿಕ ಹಿನ್ನೆಲೆ
ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಎರಡೂ ಒಟ್ಟೊಟ್ಟಾಗಿ ನಡೆಯಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಅಭಿವೃದ್ಧಿಯ ಮಹಾ ಯೋಜನೆಗಳು ಮಾತ್ರ ಒಂದರ ಮೇಲೊಂದರಂತೇ ಬರುತ್ತಿವೆ ವಿನಾ ಪರಿಸರ ರಂಗದಲ್ಲಿ ಎದ್ದು ಕಾಣುವಂಥ, ಹೆಮ್ಮೆಯಿಂದ ಹೇಳಿಕೊಳ್ಳುವಂಥ ಒಂದೇ ಒಂದು ಯೋಜನೆಯೂ ನಮ್ಮಲ್ಲಿಲ್ಲ.
ಕರ್ನಾಟಕ ಸರ್ಕಾರ ಇಂಥ ಮಹಾಗೋಡೆಯ ಘೋಷಣೆ ಮಾಡಿದರೆ ಅದು ಭಾರತದ ಮೊದಲನೆಯ ʻರಾಜ್ಯಮಟ್ಟದ’ ಯೋಜನೆ ಆಗಲಿದೆ. ನಮ್ಮ ನಾಡಿನ ಹೊಸ ಹೆಗ್ಗುರುತಾಗಲಿದೆ.
ಆಫ್ರಿಕಾದಲ್ಲಿ ಮಹಾಗೋಡೆಯ ಭಾಗವಾಗಿ ಹಸಿರು ಬೆಳೆಸಿದವರಿಗೆ ಅದೇ ಭೂಮಿಯನ್ನು ನೀಡುವ ಯೋಜನೆ ಇದೆ. ಇಲ್ಲಿ ಅಂಥ ಸಾಧ್ಯತೆ ಕಷ್ಟವಾದರೂ ಅದೇ ರೀತಿಯ ಬೇರೆ ಯೋಜನೆ ಮಾಡಬಹುದು. ಅನುಕೂಲಸ್ಥ ಟೆಕಿಗಳು ಬಂಜರು ಭೂಮಿಯನ್ನು ಖರೀದಿಸಿ ಹಸಿರು ಬೆಳೆಸಲು ಉತ್ಸಾಹಿತರಾಗಿದ್ದಾರೆ ಎಂದು ನಾಗೇಶ್ ಹೆಗಡೆ ಹೇಳಿದರು.
ಪರಿಸರವಾದಿ ಯಲ್ಲಪ್ಪ ರೆಡ್ಡಿ ಅವರು ಕೂಡ ಹಸಿರು ಗೋಡೆ ನಿರ್ಮಾಣ ಪ್ರಸ್ತಾವನೆಗೆ ದನಿಗೂಡಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹಸಿರು ಗೋಡೆ ನಿರ್ಮಿಸುವುದರಿಂದ ಮರುಭೂಮಿ ವಿಸ್ತರಣೆ ತಡೆಯಬಹುದು. ಸರ್ಕಾರಗಳು ತುರ್ತು ರೀತಿಯಲ್ಲಿ ಯೋಜನೆ ಜಾರಿ ಮಾಡಬೇಕು. ಸಿಎಂ ಸಿದ್ದರಾಮಯ್ಯ ಒಳಗೊಂಡಂತೆ ಈವರೆಗೆ ಬಂದ ಎಲ್ಲ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ನಾನಾ ಯೋಜನೆ ಪ್ರಕಟಿಸಿದ್ದಾರೆ. ಯಾರಾದರೂ ಒಬ್ಬರು ಭೂಮಿ ರಕ್ಷಣೆಗಾಗಿ ಯೋಜನೆ ಪ್ರಕಟಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಸಹಸ್ರಾರು ಉದ್ಯೋಗ ಸೃಷ್ಟಿ
ಎಐ ಕ್ರಾಂತಿಯಿಂದಾಗಿ ಉದ್ಯೋಗ ವಲಯದಲ್ಲಿ ಭಾರೀ ಬರಗಾಲ ಬರಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಸಮಯದಲ್ಲಿ ಖಾಲಿ ಕೈಗಳಿಗೆ ಕೆಲಸ ನೀಡುವ ಯೋಜನೆಯಾಗಿ ಇದು ರೂಪುಗೊಂಡರೆ ಎರಡೂ ಬಗೆಯ ಬರಗಾಲಗಳ ನಿವಾರಣೆ ಸಾಧ್ಯವಾಗಲಿದೆ. ಜತೆಗೆ ಪರಿಸರ ಸಂರಕ್ಷಣೆಯೂ ಆಗಲಿದೆ. ಮರುಭೂಮಿ ವಿಸ್ತರಣೆಗೆ ತಡೆ ಬೀಳಲಿದೆ ಎಂಬುದು ಪರಿಸರವಾದಿಗಳು, ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಪರಿಸರ ವಿಜ್ಞಾನಿ ನಾಗೇಶ ಹೆಗಡೆ ಏನಂತಾರೆ? ಅವರ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

