
ಸಫಾರಿ ವೇಳೆ ಸೆಲ್ಫಿ ಗೀಳಿಗೆ ಫುಲ್ ಬ್ರೇಕ್: ರಾಷ್ಟ್ರೀಯ ಉದ್ಯಾನಗಳಲ್ಲಿ ಮೊಬೈಲ್ ಬಳಕೆ ಬಂದ್
ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಮಾಡುವ ಪ್ರವಾಸಿಗರು ಹುಲಿ ಕಂಡ ಕೂಡಲೇ ಮೊಬೈಲ್ ತೆಗೆದು ಸೆಲ್ಫಿ ಕ್ಲಿಕ್ಕಿಸುವುದು, ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಪೋಸ್ಟ್ ಮಾಡುವುದು ಚಾಳಿಯಾಗಿದೆ.
ಹುಲಿ ದರ್ಶನಕ್ಕೂ ಮೊಬೈಲ್ ಫೋನಿಗೂ ಎತ್ತಣಿಂದೆತ್ತ ಸಂಬಂಧವಯ್ಯ ಎಂದು ನೀವು ಪ್ರಶ್ನೆ ಮಾಡಬಹುದು. ಹೌದು, ಸಾಕಷ್ಟು ಸಂಬಂಧವಿದೆ. ಈ ಪ್ರಶ್ನೆ ಕಾಡಿನೊಳಗೆ ಪ್ರವೇಶಿಸುವ ಹವ್ಯಾಸಿ ಛಾಯಾಗ್ರಾಹಕರಿಗೆ ಅಲ್ಲ. ಅವರು ಇಂದಿಗೂ ತಮ್ಮ ಹಳೆಯ DSLR ಅಥವಾ ಹೊಚ್ಚ ಹೊಸ ಮಿರರ್-ಲೆಸ್ ಕ್ಯಾಮೆರಾಗಳ ಮೇಲೆಯೇ ನಂಬಿಕೆ ಇಟ್ಟಿದ್ದಾರೆ. (ದೇವರು ಅವರಿಗೆ ಒಳ್ಳೆಯದು ಮಾದಲಿ, ಯಾಕೆಂದರೆ ನಾನೂ ಕೂಡ ಅದೇ ಪಂಗಡಕ್ಕೆ ಸೇರಿದವನು). ಈಗೀಗ ಮಾಯವೇ ಆಗಿರುವ ಇಂತಹ ಪಂಗಡದವರು ಫೋಟೋಗ್ರಫಿಗೆ ಸಲ್ಲಬೇಕಾದ ಗೌರವವನ್ನು ನೀಡುತ್ತ ಬಂದಿದ್ದಾರೆ.
ಆದರೆ ನಮ್ಮ ರಾಷ್ಟ್ರೀಯ ಉದ್ಯಾನವನಗಳಿಗೆ ದಾಂಗುಡಿ ಇಡುವ ಬಹುಪಾಲು ಪ್ರವಾಸಿಗರು ಮತ್ತು ಪಿಕ್ನಿಕ್ ಪ್ರಿಯರ ಕಥೆಯೇ ಬೇರೆ. ಕಾಡಿಗೆ ಬರುವ ಅವರ ಉದ್ಧೇಶವಾದರೂ ಏನು? ಹೇಗಾದರೂ, ಎಂತಾದರೂ ಮಾಡಿ ಹಿನ್ನೆಲೆಯಲ್ಲೋ ಅಥವಾ ಪರಿಸ್ಥಿತಿ ಅನುಕೂಲವಾದರೆ ಮುನ್ನೆಲೆಯಲ್ಲೋ ಹುಲಿಯನ್ನು ಇಟ್ಟುಕೊಂಡು ಒಂದು ಸೆಲ್ಫಿ ತೆಗೆಯುವುದು ಮತ್ತು ಅದನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು. ಇಂಥವರಿಗೆ ತಮ್ಮ ಮೊಬೈಲ್ ಫೋನೇ ಅನಿವಾರ್ಯ ಆಯುಧ ಮತ್ತು ಅವರು ತಮ್ಮ ಗುರಿಯನ್ನು ಸಾಧಿಸಲು ಯಾವುದೇ ಗೆರೆ ದಾಟಲು (ಅರ್ಥಾತ್ ನಿಯಮ ಮೀರಲು) ಹಿಂಜರಿಯುವುದಿಲ್ಲ.
ಆದರೆ ಈಗ ಹಾಗೆ ಮಾಡುವಂತಿಲ್ಲ. ದೇಶದಲ್ಲಿಯೇ ದೊಡ್ಡಣ್ಣನಂತಿರುವ ಜಿಮ್ ಕಾರ್ಬೆಟ್ ಪಾರ್ಕ್ ಸೇರಿದಂತೆ ಕನಿಷ್ಠ ಮೂರು ಹುಲಿ ಸಂರಕ್ಷಿತ ಪ್ರದೇಶಗಳು ಸಫಾರಿ ವಲಯಗಳಲ್ಲಿ ಪ್ರವಾಸಿಗರು ಮೊಬೈಲ್ ಬಳಸುವುದನ್ನು ನಿಷೇಧಿಸಿವೆ. ಈ ಕಾರಣದಿಂದಾಗಿ ಅಂತಹ ಪ್ರವಾಸಿಗರು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಬರಲು ಪ್ರೇರೇಪಿಸುತ್ತಿದ್ದ ಏಕೈಕ ʼಸುಖʼದಿಂದ ಈಗ ವಂಚಿತರಾಗುತ್ತಿದ್ದಾರೆ. ಇದು ಮಗುವಿನ ಕೈಯಲ್ಲಿದ್ದ ಲಾಲಿಪಾಪ್-ನ್ನು ಕಿತ್ತುಕೊಂಡಂತಾಗಿದೆ. ಎಷ್ಟು ಘೋರ ಅಲ್ವೇ?
ವಿಶಾಲಹೃದಯಿಯ ಸಂಯಮ ಪರೀಕ್ಷೆ
ಆದರೆ ಇವೆಲ್ಲ ಸನ್ನಿವೇಶಗಳನ್ನು ಸಂಕಷ್ಟದಲ್ಲಿರುವ ಹುಲಿಯ ದೃಷ್ಟಿಕೋನದಿಂದ ಒಮ್ಮೆ ನೋಡೋಣ. ಅತ್ಯಂತ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈ ಕಾಡಿನ ರಾಜ ತನ್ನ ದಿನದ ಬಹುಪಾಲು ಸಮಯವನ್ನು ಈ ಸೆಲ್ಫಿ ಆಸೆಬುರುಕರ ಸೈನ್ಯದಿಂದ ತಪ್ಪಿಸಿಕೊಳ್ಳಲು ಅತ್ತಿಂದಿತ್ತ ಓಡುತ್ತಲೇ ಕಳೆಯುತ್ತಿದೆ. ಹುಲಿ ಪ್ರವಾಸೋದ್ಯಮದ ಈ ಕರಾಳ ಸತ್ಯವು ಈಗ ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಮಿತಿಮೀರಿದೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಒಂದು ಒಂದು ದಿನ ಮೊಬೈಲ್ ಫೋನ್ ನಿಷೇಧ ಜಾರಿಗೆ ಬಂದೇ ಬರುತ್ತದೆ ಎಂದು ನಾನು ಕೆಲವು ವರ್ಷಗಳ ಹಿಂದೆಯೇ ಊಹಿಸಿದ್ದೆ. ಭಾರತದ ಬಹುತೇಕ ಭಾಗಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾದಾಗ ಅದರ ಜೊತೆಜೊತೆಯಲ್ಲಿ ಈ ಪ್ರದೇಶಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಅಷ್ಟೇ ವೇಗವಾಗಿ ಹೆಚ್ಚಾಯಿತು. ಈ ಹಿಂದೆ ʼದ ಫೆಡರಲ್ʼಗಾಗಿ ಬರೆದ ಲೇಖನದಲ್ಲಿ ಹುಲಿಗಳ ಸಂಖ್ಯೆಯಲ್ಲಿನ ಈ ಏರಿಕೆಯು ರೆಸಾರ್ಟ್ ಮತ್ತು ಹೋಟೆಲ್ ಮಾಲೀಕರು, ಗೈಡ್-ಗಳು, ಜಿಪ್ಸಿ ಚಾಲಕರು ಮತ್ತು ಪ್ರವಾಸೋದ್ಯಮದ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಅವಲಂಬಿತವಾಗಿರುವ ನಾನಾ ವರ್ಗದ ಜನರಿಗೆ ಹೇಗೆ ಆಕಸ್ಮಿಕ ಲಾಭವನ್ನು ತಂದುಕೊಟ್ಟಿತು ಎಂಬುದನ್ನೂ ಕೂಡ ಉಲ್ಲೇಖಿಸಿದ್ದೆ.
ಆದರೆ ಜಿಮ್ ಕಾರ್ಬೆಟ್ ಅವರು ಒಮ್ಮೆ ಭಾರತದ ಹುಲಿಯನ್ನು ʼವಿಶಾಲ ಹೃದಯದ ಸಜ್ಜನʼ ಎಂದು ಬಣ್ಣಿಸಿದ್ದರಲ್ಲವೇ? ಅಂತಹ ಸಜ್ಜನನ ಮೇಲೆ ಈ ಹುಲಿ ಪ್ರವಾಸೋದ್ಯಮ ಎನ್ನುವುದು ಎಷ್ಟರಮಟ್ಟಿಗೆ ಒತ್ತಡ ಹೇರಬಹುದು ಎಂಬುದು ಆಗ ನನ್ನ ಅರಿವಿಗೆ ಬಂದಿರಲಿಲ್ಲ. ದಿನವಿಡೀ ಮೊಬೈಲ್ ಫೋಟೋಗ್ರಾಫರ್ ದಂಡು ಬಿಡದೆ ಬೆನ್ನತ್ತಿ ಕಿರುಕುಳ ನೀಡುತ್ತಿದ್ದರೆ ಎಂತಹ ಸಜ್ಜನನಿಗಾದರೂ ತಾಳ್ಮೆ ತಪ್ಪುವುದು ಸಹಜ ತಾನೇ?
ರೋಸಿದ ಹುಲಿಗಳ ವರ್ತನೆ
ಇತ್ತೀಚೆಗೆ ಕೆಲವು ರಾಷ್ಟ್ರೀಯ ಉದ್ಯಾನವನಗಳಲ್ಲಿ ಹುಲಿಗಳು ಪ್ರವಾಸಿಗರ ಮೇಲೆ ಆಕ್ರಮಣಕಾರಿಯಾಗಿ ವರ್ತಿಸಿದ ವರದಿಗಳನ್ನು ನಾವು ಓದಿದ್ದೇವೆ. ಅದು ನಿಜಕ್ಕೂ ಆತಂಕಕಾರಿ ಸಂಗತಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹುಲಿ ಜಿಪ್ಸಿ ಮೇಲೆ ಎರಗುವ ಕೆಲವು ವಿಡಿಯೋಗಳು ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಿದವು. ಆದರೆ ಅವುಗಳಲ್ಲಿ ಕೆಲವು ವಿಡಿಯೋಗಳು ನೈಜ ದೃಶ್ಯಗಳೂ ಹೌದು ಎಂಬುದನ್ನು ಮರೆಯಬಾರದು.
ರಾಷ್ಟ್ರೀಯ ಉದ್ಯಾನವನಗಳ ಸಫಾರಿ ವೇಳೆ ಒಂದು ಹುಲಿ ಕಣ್ಣಿಗೆ ಕಂಡಿತೆಂದಾರೆ ಅಲ್ಲಿಗೆ ಕ್ಷಣಾರ್ಧದಲ್ಲಿ ಹತ್ತಾರು ಜಿಸ್ಪಿಗಳು-ಪ್ರವಾಸಿಗರು ದಟೈಸಿಬಿಡುತ್ತಾರೆ. ಮೊಬೈಲ್ ಹೊರತೆಗೆದು ಪಟಪಟನೆ ಫೋಟೊ ತೆಗೆಯುತ್ತಾರೆ. ʼವಿಶಾಲ ಹೃದಯದ ಸಜ್ಜನʼ ಎಂದೇ ಜನಪ್ರಿಯನಾಗಿರುವ ಹುಲಿರಾಯ ಕಕ್ಕಾಬಿಕ್ಕಿಯಾಗುತ್ತಾನೆ…
ಹುಲಿ ಸಫಾರಿ ಸಮಯದಲ್ಲಿ ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಿರುವುದು ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ನೇರ ಫಲ. ಉದ್ಯಾನವನಗಳಲ್ಲಿ ಪ್ರವಾಸಿಗರು ಅಶಿಸ್ತಿನಿಂದ ನಡೆದುಕೊಳ್ಳುವುದನ್ನು ನಿಯಂತ್ರಿಸುವುದು ಮತ್ತು ಹುಲಿಯ ಸುತ್ತ ವಾಹನಗಳ ಅತಿಯಾದ ಜಮಾವಣೆಯನ್ನು ತಪ್ಪಿಸುವುದು ಈ ಕೋರ್ಟ್ ಆದೇಶದ ಹಿಂದಿನ ಉದ್ದೇಶವಾಗಿದೆ.
ಒಂದು ಮೊಬೈಲ್ ಫೋನ್, ಹುಲಿಯ ಸುತ್ತ ಜಿಪ್ಸಿಗಳು ಮತ್ತು ಇತರ ಪ್ರವಾಸಿ ವಾಹನಗಳು (ಕಾರ್ಬೆಟ್ ಪಾರ್ಕ್ ಮತ್ತು ರಣಥಂಬೋರ್‌ನಲ್ಲಿ ಹೆಚ್ಚಾಗಿ ಬಳಸುವ ಕ್ಯಾಂಟರ್‌ಗಳಂಥವು) ಉದ್ಯಾನವನದಲ್ಲಿ ವಿಪರೀತ ದಟ್ಟಣೆಗೆ ಕಾರಣವಾಗುತ್ತದೆ. ಒಂದು ವಾಹನಕ್ಕೆ ಹುಲಿ ಕಂಡ ತಕ್ಷಣವೇ, ಆ ವಾಹನದ ಚಾಲಕ, ಗೈಡ್ ಅಥವಾ ಪ್ರವಾಸಿಗರು ಇತರ ವಾಹನಗಳಿಗೆ ಮಾಹಿತಿ ನೀಡುತ್ತಾರೆ. ಕ್ಷಣಾರ್ಧದಲ್ಲಿ ಡಜನ್‌ಗಟ್ಟಲೆ ವಾಹನಗಳು ಬಂದು ಹುಲಿಯನ್ನು ಸುತ್ತುವರಿದು ಬಿಡುತ್ತವೆ.
ವಾಹನಗಳು ಎಲ್ಲಾ ಕಡೆಯಿಂದಲೂ ಸುತ್ತುವರಿದ ಕಾರಣ, ಹುಲಿಯು ಸರಿಯಾಗಿ ನಡೆಯಲು ಕೂಡ ಕಷ್ಟಪಡುವ ದೃಶ್ಯಗಳನ್ನು ಕೂಡ ನಾನು ನೋಡಿದ್ದೇನೆ. ಇಂತಹ ದರ್ಶನಗಳು ಇಂದು ಬಹುತೇಕ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಾಮಾನ್ಯ ನಿಯಮವಾಗಿಬಿಟ್ಟಿವೆ. ಈಗ ಪ್ರವಾಸಿಗರಷ್ಟೇ ಅಲ್ಲದೆ, ಗೈಡ್ಗಳು ಮತ್ತು ಜಿಪ್ಸಿ ಚಾಲಕರು ಕೂಡ ಕಾಡಿನೊಳಗೆ ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಕಾರ್ಬೆಟ್ ಪಾರ್ಕ್ ಮಾತ್ರವಲ್ಲದೆ, ಬಾಂಧವಗಢ (ಮಧ್ಯಪ್ರದೇಶ) ಮತ್ತು ತಡೋಬಾ ಅಂಧಾರಿ (ಮಹಾರಾಷ್ಟ್ರ) ಹುಲಿ ಯೋಜನೆಗಳಲ್ಲೂ ಸಫಾರಿ ಸಮಯದಲ್ಲಿ ಮೊಬೈಲ್ ಬಳಕೆಯ ಮೇಲೆ ನಿಷೇಧ ಹೇರಲಾಗಿದೆ.
ಈ ಕ್ರಮವು ಪ್ರವಾಸೋದ್ಯಮದ ಮೇಲೆ ಸ್ವಲ್ಪ ಮಟ್ಟಿನ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಸಂಶಯವಿಲ್ಲ, ಆದರೆ ಇದರಿಂದ ಹುಲಿಗಳಿಗೆ ಮಾತ್ರ ಪ್ರಯೋಜನವಾಗಲಿದೆ. ಕೇವಲ ಹುಲಿಯ ಫೋಟೋ ಕ್ಲಿಕ್ಕಿಸುವುದಕ್ಕಾಗಿಯೇ ಕಾಡಿಗೆ ಬರುವ ಮೊಬೈಲ್ ಪ್ರಿಯ ಪ್ರವಾಸಿಗರು ಈಗ ಎದುರಿಸುತ್ತಿರುವ ಸಂಕಷ್ಟ ಅರ್ಥವಾಗುವಂತದ್ದೇ. ಅಂತಹವರಿಗೆ ಈಗ ಉಳಿದಿರುವ ಏಕೈಕ ಆಯ್ಕೆಯೆಂದರೆ ಕ್ಯಾಮೆರಾ ಮತ್ತು ಲೆನ್ಸ್ ಖರೀದಿಸುವುದು.
ಆದರೆ ಅದು ಬಹಳ ದುಬಾರಿ ವ್ಯವಹಾರ ಮತ್ತು ಛಾಯಾಗ್ರಹಣ ಎಲ್ಲರಿಗೂ ಒಲಿಯುವ ವಿದ್ಯೆಯಲ್ಲ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರಾಷ್ಟ್ರೀಯ ಉದ್ಯಾನವನಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳು ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಬಹುದು ಎಂದು ನಾನು ನಿರೀಕ್ಷಿಸುತ್ತಿದ್ದೇನೆ. ಹುಲಿಯ ದೃಷ್ಟಿಕೋನದಿಂದ ನೋಡಿದರೆ, ಅದು ಅಷ್ಟೇನೂ ಕೆಟ್ಟ ನಿರ್ಧಾರವಲ್ಲ ಎಂಬುದನ್ನು ನಿಶ್ಚಿತವಾಗಿ ಹೇಳುತ್ತೇನೆ.

