
Women's Day 2026| 'ಕನ್ನಡದ ಕೋಗಿಲೆ' ನಿರ್ಮಲಾ; ಜಾನಪದ ಸೊಗಡು ಜಗತ್ತಿಗೆ ಪಸರಿಸುತ್ತಿರುವ ಗಾಯಕಿ
ದೊಡ್ಡಬಳ್ಳಾಪುರದ ಬೀದಿಗಳಿಂದ ದುಬೈನ ವಿಶ್ವ ವೇದಿಕೆಯವರೆಗೆ ತಮ್ಮ ಕಂಠಸಿರಿಯ ಮೂಲಕ ಕನ್ನಡದ ಕಂಪು ಪಸರಿಸಿದ 'ಜಾನಪದ ಕೋಗಿಲೆ'ಯ ಯಶೋಗಾಥೆ ನಿಜಕ್ಕೂ ಅದ್ಭುತ.
ಜಾನಪದ ಎನ್ನುವುದು ಕೇವಲ ಹಾಡಲ್ಲ, ಅದು ನಮ್ಮ ಮಣ್ಣಿನ ಉಸಿರು, ಹಿರಿಯರು ಬಿಟ್ಟುಹೋದ ಅಕ್ಷಯ ಪಾತ್ರೆ. ಅಜ್ಜಿಯ ಜೋಗುಳದಿಂದ ಆರಂಭವಾದ ಆ ನಾದದ ಪಯಣ, ಇಂದು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮೊಳಗುತ್ತಿದೆ ಎಂದರೆ ಅದಕ್ಕೆ ಕಾರಣ ನಿರ್ಮಲಾ ಡಿ.ಆರ್.
ದೊಡ್ಡಬಳ್ಳಾಪುರದ ಬೀದಿಗಳಿಂದ ದುಬೈನ ವಿಶ್ವ ವೇದಿಕೆಯವರೆಗೆ ತಮ್ಮ ಕಂಠಸಿರಿಯ ಮೂಲಕ ಕನ್ನಡದ ಕಂಪು ಪಸರಿಸಿದ 'ಜಾನಪದ ಕೋಗಿಲೆ'ಯ ಯಶೋಗಾಥೆ ನಿಜಕ್ಕೂ ಅದ್ಭುತ. ದೊಡ್ಡಬಳ್ಳಾಪುರದ ಕುಚ್ಚಪ್ಪನಪೇಟೆಯ ಈ ಪ್ರತಿಭೆ ಕನ್ನಡದ ಕೋಗಿಲೆಯಲ್ಲಿ ಮಿಂಚಿ, ಜಾನಪದ ಗಾಯನದಲ್ಲಿ ಮಿನುಗುತ್ತಿದ್ದಾರೆ.
ಅಜ್ಜಿಯಿಂದ ಬಂದ ಬಳುವಳಿ
ನಿರ್ಮಲಾ ಅವರಿಗೆ ಗಾಯನ ಕಲೆ ಎಂಬುದು ರಕ್ತಗತವಾಗಿ ಬಂದ ಬಳುವಳಿ. ಅಜ್ಜಿ ಹಾಡುತ್ತಿದ್ದ ಜಾನಪದ ಹಾಡುಗಳ ಸೊಗಡು ಇವರ ಬಾಲ್ಯದಲ್ಲೇ ಅಚ್ಚೊತ್ತಿತ್ತು. ಪ್ರಾಥಮಿಕ ಶಾಲಾ ಹಂತದಲ್ಲೇ ತಾಯಿ ವಿಜಯಲಕ್ಷ್ಮೀ ಹಾಗೂ ಗುರುಗಳ ಮಾರ್ಗದರ್ಶನದಿಂದ ಗಾಯನ ಕ್ಷೇತ್ರಕ್ಕೆ ಹೆಜ್ಜೆಯಿಟ್ಟ ಇವರು, ಅಂದಿನಿಂದ ಇಂದಿನವರೆಗೂ ಹಿಂದೆ ತಿರುಗಿ ನೋಡಿದ್ದಿಲ್ಲ. ಶಾಲಾ-ಕಾಲೇಜು ಮಟ್ಟದ 'ಪ್ರತಿಭಾ ಕಾರಂಜಿ'ಯಿಂದ ಆರಂಭವಾದ ಇವರ ಗೀತೆ ಗಾಯನ ಇಂದು ಅಂತರಾಷ್ಟ್ರೀಯ ವೇದಿಕೆಗಳವರೆಗೆ ತಲುಪಿದೆ.
ಕನ್ನಡ ಕಾರ್ಯಕ್ರಮದಲ್ಲಿ ನಿರ್ಮಲಾ ಹಾಘೂ ಸಂಗಡಿಗರಿಂದ ಗಾಯನ ಚಿತ್ರ ಕೃಪೆ: ನಿರ್ಮಲಾ ಡಿ.ಆರ್
'ಕನ್ನಡ ಕೋಗಿಲೆ'ಯಾಗಿ ಮನೆಮಾತು
ಖಾಸಗಿ ವಾಹಿನಿಯ 'ಕನ್ನಡ ಕೋಗಿಲೆ' ರಿಯಾಲಿಟಿ ಶೋನಲ್ಲಿ ನಿರ್ಮಲಾ ಅವರಿಗೆ ಸಿಕ್ಕ ವೇದಿಕೆ ಅವರ ಬದುಕಿಗೆ ದೊಡ್ಡ ತಿರುವು ನೀಡಿತು. ತಮ್ಮ ವಿಶಿಷ್ಟ ಕಂಠಸಿರಿ ಮತ್ತು ಸಹಜ ಅಭಿನಯದ ಮೂಲಕ ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದರು. ಕೇವಲ ಮನರಂಜನೆಗೆ ಸೀಮಿತವಾಗದ ಇವರು, ಸಾಮಾಜಿಕ ಕಳಕಳಿಯ ಹಾಡುಗಳ ಮೂಲಕವೂ ಜಾಗೃತಿ ಮೂಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದಾಖಲೆ
ನಿರ್ಮಲಾ ಅವರು ಹಾಡಿದ ತಂಪು ಪಾನೀಯಗಳ ದುಷ್ಪರಿಣಾಮದ ಕುರಿತ ಜಾಗೃತಿ ಗೀತೆ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಅಲೆ ಎಬ್ಬಿಸಿತ್ತು. ಯಾವುದೇ ಸಂಗೀತ ಪರಿಕರಗಳಿಲ್ಲದೆ ಸಹಜವಾಗಿ ಹಾಡಿದ್ದ ಈ ವಿಡಿಯೋ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ದಾಖಲೆ ನಿರ್ಮಿಸಿತು. ಮಕ್ಕಳ ಸಹಾಯವಾಣಿ-1098 ಕುರಿತ ಹಾಡುಗಳು ಕೂಡ ಜನಪ್ರಿಯವಾಗಿವೆ.
ಭೂಮ್ತಾಯಿ ಬಳಗದ ಸದಸ್ಯರೊಂದಿಗೆ ಗಾಯಕಿ ನಿರ್ಮಲಾ ಡಿ.ಆರ್.
'ಭೂಮ್ತಾಯಿ ಬಳಗ' ಮತ್ತು ಪರಿಸರ ಕಾಳಜಿ
ನಿರ್ಮಲಾ ಅವರು ಕೇವಲ ಗಾಯಕಿಯಾಗಿ ಉಳಿಯದೆ, 'ಭೂಮ್ತಾಯಿ ಬಳಗ' ಎಂಬ ಸಾಂಸ್ಕೃತಿಕ ತಂಡವನ್ನು ಕಟ್ಟಿಕೊಂಡು ಪರಿಸರ, ನೆಲ, ಜಲ ಮತ್ತು ಕ್ರಾಂತಿಗೀತೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
2014 ಮತ್ತು 2017ರಲ್ಲಿ ಕೇವಲ ಮೂರು ತಿಂಗಳಲ್ಲಿ 100 ಕಾರ್ಯಕ್ರಮಗಳನ್ನು ನೀಡುವ ಮೂಲಕ ಪರಿಸರ ಜಾಗೃತಿಯಲ್ಲಿ ದಾಖಲೆ ಬರೆದಿದ್ದಾರೆ. 2002ರಲ್ಲಿ ಪರಿಸರವಾದಿ ಜನಾರ್ದನ ಕೆಸರಗದ್ದೆ ಅವರ ಮಾರ್ಗದರ್ಶನದಲ್ಲಿ "ಗಂಗಮ್ಮನ ಒಕ್ಕಲು" ಎಂಬ ಬಳಗ ಆರಂಭಿಸಲಾಯಿತು. ಪರಿಸರ ಸಂರಕ್ಷಣೆ, ಜನಪರ, ಜಾನಪದ, ಜನಜಾಗೃತಿ ಮೂಡಿಸುವ ಸಲುವಾಗಿ ಗೀತೆಗಳನ್ನು ರಚಿಸಿ ಹಾಡುವುದರ ಜೊತೆಗೆ ಬೀದಿನಾಟಕ ಮಾಡುತ್ತಿದ್ದ ತಂಡವು ಮುಂದೆ 2008ರಲ್ಲಿ "ಭೂಮ್ತಾಯಿ ಬಳಗ" ಎಂದು ಮರು ನಾಮಕರಣವಾಯಿತು.
ಸಮಕಾಲೀನ ಸಾಮಾಜಿಕ ಸಂಗತಿಗಳ ಕುರಿತು ಅರಿವಿನ ಗೀತೆಗಳನ್ನು ಜಾನಪದ ಸೊಗಡಿನಲ್ಲಿ ಹಾಡುತ್ತಿರುವ ನಾಡಿನ ಪ್ರಮುಖ ತಂಡ. ಮನರಂಜನೆಯ ಜೊತೆಗೆ ನೆಲಜಲ, ಪರಿಸರ, ಜಾನಪದ, ಹೋರಾಟ,, ಜನಜಾಗೃತಿ, ಸಮಾನತೆ, ಸಾಮರಸ್ಯ ಮತ್ತು ಸುಗಮ ಸಂಗೀತದ ಹಾಡುಗಳನ್ನು ಕೇಳುಗರ ಮನಸೂರೆಗೊಳ್ಳುವಂತೆ ಹಾಡುವುದು ಬಳಗದ ಹೆಗ್ಗಳಿಕೆ. ಪ್ರಸ್ತುತ ಭೂಮಾಯಿ ಬಳಗವನ್ನು ನಾಡಿನ ಖ್ಯಾತ ಗಾಯಕಿಯಾದ ನಿರ್ಮಲಾ ಡಿ ಆರ್ ರವರು ಮುನ್ನಡೆಸುತ್ತಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಗಾಯಕಿ ನಿರ್ಮಲಾ ಹಾಗೂ ಸಂಗಡಿಗರಿಂದ ಗಾಯನ ಚಿತ್ರಕೃಪೆ: ನಿರ್ಮಲಾ ಡಿ.ಆರ್
ಪ್ರಶಸ್ತಿ, ಪುರಸ್ಕಾರಗಳ ಮಹಾಪೂರ
ನಿರ್ಮಲಾ ಅವರ ಕಲಾಸೇವೆ ಗುರುತಿಸಿ ಸರ್ಕಾರ ಮತ್ತು ವಿವಿಧ ಸಂಸ್ಥೆಗಳ ಹತ್ತಾರು ಗೌರವಗಳು ಸಂದಿವೆ. 2017ರಲ್ಲಿ ಅತೀ ಕಿರಿಯ ವಯಸ್ಸಿನಲ್ಲೇ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯತ್ವ ಪಡೆದರು.2024 ರಲ್ಲಿರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಿಸಿತು. 2019 ರಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ , 2020 ರಲ್ಲಿ ಕನ್ನಡ ಸೇವಾ ರತ್ನ, 2021 ರಲ್ಲಿ ಭೀಮ ರತ್ನ ಪ್ರಶಸ್ತಿ, 2025 ರಲ್ಲಿ ದಕ್ಷಿಣ ಭಾರತ ಮಾಧ್ಯಮ ಪ್ರಶಸ್ತಿ ಸಂದಿದೆ.
2022ರಲ್ಲಿ ದುಬೈನಲ್ಲಿ ನಡೆದ 'ವಿಶ್ವ ಕನ್ನಡ ಹಬ್ಬ'ದಲ್ಲಿ ಗಾಯನ ಪ್ರಸ್ತುತಪಡಿಸಿ ಅನಿವಾಸಿ ಕನ್ನಡಿಗರ ಮನ ಗೆದ್ದಿದ್ದಾರೆ. "ಜಾನಪದ ಎನ್ನುವುದು ನಮ್ಮ ಬೇರು. ಆ ಬೇರನ್ನು ಗಟ್ಟಿಗೊಳಿಸುವ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಹಾಡಿನ ಮೂಲಕ ಆಗಬೇಕು" ಎಂಬುದು ನಿರ್ಮಲಾ ಅವರ ಅಭಿಪ್ರಾಯವಾಗಿದೆ.
ಇಲ್ಲಿಯವರೆಗೆ ಸತತ 2000ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿ, ಹೋರಾಟದ ದನಿಯಾಗಿ, ಪರಿಸರದ ಕಾವಲುಗಾರಳಾಗಿ ಹಾಡುತ್ತಿರುವ ನಿರ್ಮಲಾ ಡಿ.ಆರ್. ಅವರ ಕಲಾ ಪಯಣ ಹೀಗೆಯೇ ಮುಂದುವರಿಯಲಿ ಎಂಬುದು ʼದ ಫೆಡರಲ್ ಕರ್ನಾಟಕʼದ ಆಶಯ.

