Drug Peddling|‌ ಕಡಲ ಮೀನುಗಾರಿಕೆಗೆ ಡ್ರಗ್ಸ್‌ ವಾಸನೆ; ಪಾಕಿಸ್ತಾನ, ಅಘ್ಘಾನಿಸ್ತಾನ, ಶ್ರೀಲಂಕಾದಿಂದ ಕರಾವಳಿಗೆ ಸರಬರಾಜು?
x

Drug Peddling|‌ ಕಡಲ ಮೀನುಗಾರಿಕೆಗೆ ಡ್ರಗ್ಸ್‌ ವಾಸನೆ; ಪಾಕಿಸ್ತಾನ, ಅಘ್ಘಾನಿಸ್ತಾನ, ಶ್ರೀಲಂಕಾದಿಂದ ಕರಾವಳಿಗೆ ಸರಬರಾಜು?

ಮೀನುಗಾರಿಕಾ ಬೋಟುಗಳ ಮೂಲಕ ಕರ್ನಾಕದ ಕರಾವಳಿ ಬಂದರುಳಿಗೆ ಮೀನುಗಾರಿಕಾ ಬೋಟುಗಳ ಮೂಲಕ ಪಾಕಿಸ್ತಾನ, ಅಫ್ಗಾನಿಸ್ತಾನ, ಶ್ರೀಲಂಕಾದಿಂದ ನಾರ್ಕೋಟಿಕ್‌ ಡ್ರಗ್ಸ್‌ ಸರಬರಾಜಾಗುತ್ತಿದೆಯೇ?


Click the Play button to hear this message in audio format

ಮೀನುಗಾರಿಕಾ ಬೋಟುಗಳ ಮೂಲಕ ಕರ್ನಾಕದ ಕರಾವಳಿ ಬಂದರುಗಳಾದ ಮಂಗಳೂರು, ಉಡುಪಿ ಮತ್ತು ಭಟ್ಕಳಗಳಿಗೆ ಪಾಕಿಸ್ತಾನ, ಅಫ್ಗಾನಿಸ್ತಾನ, ಶ್ರೀಲಂಕಾದಿಂದ ನಾರ್ಕೋಟಿಕ್‌ ಡ್ರಗ್ಸ್‌ ಸರಬರಾಜಾಗುತ್ತಿದೆಯೇ? ಸಮುದ್ರ ಮೀನುಗಾರಿಕೆ ವೇಳೆ ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮೀನುಗಾರಿಕಾ ಬೋಟುಗಳ ಸಿಬ್ಬಂದಿ ಜತೆ ಸಂಪರ್ಕವಾಗಿ ಅಕ್ರಮ ಡ್ರಗ್ಸ್‌ ಕರ್ನಾಟಕ, ಕೇರಳ ಕರಾವಳಿಗಲನ್ನು ತಲುಪುತ್ತಿದೆಯೇ?

ಈ ಬಗ್ಗೆ ಕೇರಳ ಪೊಲೀಸರು ಮಂಗಳೂರು ಪೊಲೀಸರ ಸಹಾಯದಿಂದ ತನಿಖೆ ಆರಂಭಿಸಿದ್ದಾರೆ. ಪ್ರಮುಖವಾಗಿ ಈ ಡ್ರಗ್ಸ್‌ ದಂಧೆ ಕರಾವಳಿ ತೀರದ ಮೂಲಕ ಗಡಿ ರಾಜ್ಯ ಕೇರಳಕ್ಕೂ ಈ ನಂಟು ವ್ಯಾಪಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಜತೆಗೆ ಕರ್ನಾಟಕ ಮತ್ತು ಕೇರಳ ಕರಾವಳಿಯಿಂದ ಇತರ ಮೈಸೂರು, ಹೈದರಾಬಾದ್‌ ಸೇರಿದಂತೆ ಇತರ ನಗರಗಳಿಗೆ ಮಾದಕವಸ್ತುಗಳ ಅಕ್ರಮ ಸರಬರಾಜುಗುತ್ತಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಕರ್ನಾಟಕ ಕರಾವಳಿ ಮೂಲಕ ಕಾನೂನು ಬಾಹಿರ ಡ್ರಗ್ಸ್ ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬ ಆಧಾರದಲ್ಲಿ ಕೇರಳ ಪೊಲೀಸರ ವಿಶೇಷ ತಂಡ ಕರಾವಳಿ ನಗರಗಳಾದ ಮಂಗಳೂರು, ಉಡುಪಿ, ಭಟ್ಕಳಗಳಲ್ಲಿ ತನಿಖೆ ನಡೆಸಿದೆ.

ಮಂಗಳೂರು ಬಂದರುಗಳಲ್ಲಿ ಕೇರಳ ಪೊಲೀಸರಿಂದ ವಿಚಾರಣೆ

ಕಳೆದೊಂದು ವಾರದಿಂದ ಕೇರಳ ಪೊಲೀಸ್ ತಂಡ ಕರಾವಳಿ ಜಿಲ್ಲೆಗಳಲ್ಲಿ ತನಿಖೆ ನಡೆಸಿದ್ದು, ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಮೂರುದಿನಗಳ ಕಾಲ ಮಫ್ತಿಯಲ್ಲಿ ಹಲವು ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿಗಳಿಂದ ಮಾಹಿತಿ ಪಡೆದಿದ್ದಾರೆ. ತನಿಖಾ ತಂಡದ ಸಿಬ್ಬಂದಿ ಬಂದರು ಸಮೀಪದಲ್ಲಿ ನೆಲೆಯೂರಿ ಮೀನುಗಾರಿಕೆಯಿಂದ ಬರುವ ಬೋಟ್‌ಗಳು ಮುಂಜಾನೆ ಮತ್ತು ಹೊರಡುವ ಸಂಜೆ ವೇಳೆ ಅಕ್ರಮ ಡ್ರಗ್ಸ್‌ ಸಾಗಣೆ ಸಂಬಂಧ ಮಾಹಿತಿ ಕಲೆಹಾಕಿದ್ದಾರೆ. ಇದರ ಜೊತೆಗೆ ಹೆಚ್ಚಿನ ಮೀನುಗಾರಿಕಾ ಬೋಟ್‌ಗಳ ಕಾರ್ಮಿಕರನ್ನು, (ಅವರಲ್ಲಿ ಹೆಚ್ಚಿನವರು ತಮಿಳುನಾಡು ಮೂಲದವರು) ಮಾತನಾಡಿಸಿದ್ದು, ಸಮಗ್ರ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೋಟ್ ಕಾರ್ಮಿಕ ತಿರುಚ್ಚಿ ನಿವಾಸಿ ವೈರಮುತ್ತು ಎಂಬವನು ಕೂಡಾ ವಿಚಾರಣೆಗೆ ಒಳಗಾದವರಲ್ಲಿ ಒಬ್ಬನಾಗಿದ್ದು, ಆತ ಮಂಗಳೂರಿನಲ್ಲಿ ವಾಸವಿರುವ ಬಾಡಿಗೆ ಮನೆಗೆ ತೆರಳಿದ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. "ನನಗೆ ಇತ್ತೀಚಿನ ಎರಡು ವರ್ಷಗಳಿಂದ ಗಾಂಜಾ (ಕೆನಬಿಸ್) ಸಿಕ್ಕಿಲ್ಲ. ಈ ಹಿಂದೆ ಬೇರೆ ಬೋಟ್‌ನವರು ಅಥವಾ ವೈನ್ ಶಾಪ್‌ಗಳಲ್ಲಿ ಸಿಗುವವರು ಕೊಡುತ್ತಿದ್ದರು. ಈಗ ಸಿಗುತ್ತಿಲ್ಲ. ಉತ್ತರ ಪ್ರದೇಶ ಮತ್ತು ವೆಸ್ಟ್ ಬೆಂಗಾಲ್‌ನವರು (ಹಿಂದಿ ಮಾತನಾಡುವವರು ) ಕೊಡುತ್ತಿದ್ದರು," ಎಂದು ಅತ ಮಾಹಿತಿ ನೀಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಮಂಗಳೂರು ಪೊಲೀಸ್ ಸ್ಪೆಷಲ್ ಬ್ರಾಂಚ್ ಮೂಲಗಳ ಪ್ರಕಾರ, ಕೇರಳ ಪೊಲೀಸ್ ತಂಡ ಮಾಹಿತಿ ಸಂಗ್ರಹಿಸಿರುವುದು ತಿಳಿದುಬಂದಿದೆ. ಅವರ ತನಿಖೆಯ ಉದ್ದೇಶದ ಬಗ್ಗೆ ಅಥವಾ ಅವರಿಗೆ ಬೇಕಾದ ಸುರಕ್ಷತೆ ಬಗ್ಗೆಯಾಗಲೀ ಇಲ್ಲಿನ ಇಲಾಖೆಯಿಂದ ಯಾವುದೇ ಸಹಾಯ ಕೋರಿಲ್ಲ. ಆದರೂ ಅವರು ನಾರ್ಕೋಟಿಕ್ ಡ್ರಗ್ಸ್ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ, ಎಂದು ಹೇಳಿವೆ.

ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ ನಂಟು ಹೇಗೆ?

ಕರ್ನಾಟಕ ಕರಾವಳಿ ಮೂಲಕ ಕೇರಳ ಸೇರಿದಂತೆ ಬೆಂಗಳೂರು, ಮೈಸೂರು ಮತ್ತು ಹೈದರಾಬಾದ್‌ಗಳಿಗೆ ಎಂಡಿಎಂಎ (Methyl​enedioxy​methamphetamine) ಮತ್ತು ಬ್ಲಾಕ್ ಶುಗರ್ (Black Tar Heroin) ಎಂಬ ಮಾದಕವಸ್ತುಗಳ ಸಾಗಣೆ ಬಗ್ಗೆ ತನಿಖೆ ಆರಂಭಿಸಿರುವ ಕೇರಳದ ಅಧಿಕಾರಿಗಳು, ಪಾಕಿಸ್ತಾನ, ಅಫ್ಗಾನಿಸ್ತಾನ ಮೂಲಕವಾಗಿ ಮಂಗಳೂರು ಕರಾವಳಿಗೆ ಮಾದಕ ವಸ್ತುಗಳ ರವಾನೆಯಾಗುತ್ತಿದೆ ಎಂಬ ಸಂಶಯದ ಮೇಲೆ ತನಿಖೆ ಆರಂಭಿಸಿದ್ದಾರೆ, ಎಂದು ಬೋಟ್ ಕಾರ್ಮಿಕರೊಬ್ಬರು ಮಾಹಿತಿ ನೀಡಿದ್ದಾರೆ.

ಯಂತ್ರಚಾಲಿತ ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ಸಮುದ್ರ ಮಾರ್ಗಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಬೋಟ್‌ಗಳ ಸಿಬ್ಬಂದಿಯನ್ನೂ ಭೇಟಿ ಮಾಡುವುದು ಸಾಮಾನ್ಯವಾಗಿದ್ದು ಅವರ ಮೂಲಕ ಗಾಂಜಾ ರವಾನೆಯಾಗುತ್ತದೆ ಎಂಬ ಸಂಶಯವೂ ಇದೆ ಎಂದು ಪೊಲೀಸರ ಅಭಿಪ್ರಾಯವಾಗಿದೆ.

ಮಂಗಳೂರು ಧಕ್ಕೆಯ ಮೀನು ಬೋಟ್ ಮಾಲಿಕ ಅಬ್ಬಾಸ್ ಹೇಳುವಂತೆ ಮಂಗಳೂರಿನಿಂದ ಹಲವು ಮೀನುಗಾರಿಕಾ ಬೋಟ್‌ಗಳು ಒಂದು ಕಡೆಯಿಂದ ಮುಂಬೈ, ಗುಜರಾತ್, ಹಾಗೆಯೇ ಇನ್ನೊಂದು ಕಡೆಯಿಂದ ಕೇರಳ, ತಮಿಳುನಾಡು ವರೆಗೆ ಹೋಗುತ್ತವೆ. ಆ ದಾರಿಯಲ್ಲಿ ಅಫ್ಗನ್, ಪಾಕಿಸ್ತಾನಿ ಹಾಗೆಯೇ ಈ ಕಡೆಯಲ್ಲಿ ಶ್ರೀಲಂಕಾ ಬೋಟ್‌ಗಳೂ ಎದುರಾಗುತ್ತವೆ. ``ಅಕ್ರಮ ಚಟುವಟಿಕೆ ಇರುವ ಬೋಟ್‌ಗಳ ಮಂದಿ ಮೊದಲೇ ಸಂಪರ್ಕ ಮಾಡಿಕೊಂಡ ರೀತಿ ವ್ಯವಹಾರ ನಡೆಸುತ್ತಿರಬಹುದು. ಆದರೆ ಎಲ್ಲರೂ ಹಾಗಿದ್ದಾರೆ ಎನ್ನಲಾಗುವುದಿಲ್ಲ. ಇತ್ತೀಚೆಗೆ ಕಾನೂನು ಕುಣಿಕೆ ಬಲವಾಗಿರುವುದರಿಂದ ಡ್ರಗ್ಸ್, ಗಾಂಜಾ ಬಳಕೆಯನ್ನು ಹೆಚ್ಚಿನ ಬೋಟ್ ಮಾಲೀಕರು ನಿರ್ಭಂಧಿಸಿದ್ದಾರೆ. ಸಮುದ್ರ ಮೀನುಗಾರಿಕೆಯಲ್ಲಿನ ಅಪಾಯದ ಹಿನ್ನೆಲೆ ಮದ್ಯ ಬಳಕೆಗೂ ಕಡಿವಾಣ ಹೇರಲಾಗಿದೆ’’ ಎಂದಿದ್ದಾರೆ.

ದಕ್ಷಿಣ ಕನ್ನಡದ ನಿವೃತ್ತ ಪೊಲೀಸ್ ಅಧಿಕಾರಿ (ಡಿವೈಎಸ್‌ಪಿ) ಕೆ. ವಿಶ್ವನಾಥ್ ಅವರು ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿ , "ಮಂಗಳೂರಿನಲ್ಲಿ ಮೀನುಗಾರಿಕೆ ಬೋಟ್‌ಗಳ ಮೂಲಕ ಗಾಂಜಾ ಸಾಗಿಸುವ ವಿಚಾರ ಕೆಲವು ಬಾರಿ ತಿಳಿದುಬಂದಿತ್ತು. ಆದರೆ ಅವರಿಗೆ ಎಚ್ಚರಿಕೆ ಕೊಟ್ಟು, ಕೆಲವರ ಮೇಲೆ ಪ್ರಕರಣ ದಾಖಲು ಮಾಡಿದ ಬಳಿಕ ಆ ಅಕ್ರಮ ಚಟುವಟಿಕೆ ನಿಂತಿತ್ತು. ಆದರೆ ಅವರು ಯಾವುದಾದರೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಯಾಕೆಂದರೆ ಡ್ರಗ್‌ ಪೆಡ್ಲರ್‌ಗಳ ವೃತ್ತಿ ಅದೇ ಆಗಿರುತ್ತದೆ. ಅವರು ಪೊಲೀಸರ ಕಣ್ಣುತಪ್ಪಿಸಿ ಬೇರೊಂದು ಉಪಾಯ ಕಂಡುಹಿಡಿದಿರುತ್ತಾರೆ," ಎಂದಿದ್ದಾರೆ. "ಗುಜರಾತಿನ ಕಛ್ ಬಂದರ್ ಮೂಲಕ ಪಾಕಿಸ್ತಾನ ಈ ಕೆಲಸ ಮಾಡುತ್ತಿರುವ ಬಗ್ಗೆ ನನಗೆ ಗುಮಾನಿಯಿದೆ" ಎಂದು ಅಭಿಪ್ರಾಯಪಟ್ಟರು.

ಕೊಚ್ಚಿನ್‌ನಲ್ಲಿ ವ್ಯಾಪಕವಾಗಿರುವ ಜಾಲ?

ಕೇರಳದ ಕೊಚ್ಚಿನ್ ನಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿರುವ ಎಂಡಿಎಂಎ ಎಂಬ ನಾರ್ಕೋಟಿಕ್ಸ್ ಡ್ರಗ್‌ ಸರಬರಾಜು ಮಾಹಿತಿ ಮೇರೆಗೆ ಅಲ್ಲಿನ ಪೊಲೀಸರ ತಂಡ ಮಂಗಳೂರಿಗೆ ಆಗಮಿಸಿದ್ದು, ಪಣಂಬೂರು ಬೀಚ್ ಸೇರಿದಂತೆ ಹಳೇ ಬಂದರು ಪ್ರದೇಶಗಳಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಕೇರಳ ಮೂಲದ ವಿದ್ಯಾರ್ಥಿಗಳಿರುವ ವಿವಿಧ ವೈದ್ಯಕೀಯ, ಅರೆ-ವೈದ್ಯಕೀಯ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಮತ್ತು ಅವರು ಇರುವ ಹಾಸ್ಟೆಲ್‌ಗಳಲ್ಲಿ ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದೂ ಮೂಲಗಳು ಖಚಿತಪಡಿಸಿವೆ.

ಇನ್ನು ಎಂಡಿಎಂಎ ಅಂತಹ ಮಾದಕ ವಸ್ತುಗಳಿಗೆ ವಿದೇಶಿ ವಿದ್ಯಾರ್ಥಿಗಳು ಮುಖ್ಯವಾಗಿ ಆಫ್ರಿಕನ್ ಮೂಲದವರು ಸರಬರಾಜು ಮಾಡುತ್ತಾರೆ ಎನ್ನಲಾಗುತ್ತಿದೆ.

ವೈದ್ಯರಲ್ಲೂ ಕಳವಳ!

ಮಂಗಳೂರು ವೈದ್ಯಕೀಯ ವಲಯದಲ್ಲಿ ಕೂಡಾ ನಾರ್ಕೋಟಿಕ್ ಡ್ರಗ್ಸ್ ಬಳಕೆ ಕಳವಳಕಾರಿಯಾಗಿದೆ ಎಂಬ ಅಭಿಪ್ರಾಯವಿದೆ. ಮಂಗಳೂರಿನ ಹೆಸರು ಹೇಳಲಿಚ್ಛಿಸದ ಮನೋವೈದ್ಯರೊಬ್ಬರ ಪ್ರಕಾರ, ಬಹುತೇಕ ಮಾದಕ ದ್ರವ್ಯಸೇವನೆಯ ಅಭ್ಯಾಸ ಉಳ್ಳವರು ಕೇರಳ ಅಥವಾ ಉತ್ತರ ಭಾರತ ಮೂಲದ ಯಾವುದಾದರೂ ಒಬ್ಬ ವ್ಯಕ್ತಿಯ ಸಂಪರ್ಕ ಉಳ್ಳವರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಜೊತೆ ಇರುವವರಾಗಿದ್ದಾರೆ.

"ಎಂಡಿಎಂಎ ತಯಾರಿಕೆಗಾಗಿ ಬಳಸುವ ಕೆಮಿಕಲ್ ಕಂಟೆಂಟ್‌ಗಳನ್ನು ಜ್ವರ, ಶೀತ ಅಥವಾ ತಲೆನೋವು ಮಾತ್ರೆಗಳ ಮಾದರಿಯಲ್ಲಿ ತಂದು ಅವುಗಳನ್ನು ಸ್ಥಳೀಯವಾಗಿ ಬೇರೆ ಮಾತ್ರೆಗಳ ಜೊತೆ ಮಿಶ್ರಣ ಮಾಡಿ ಡೋಸ್ ತೆಗೆದುಕೊಳ್ಳುತ್ತಾರೆ ಎಂಬ ವಿಚಾರ ಬಹುತೇಕ ಮಾದಕ ವ್ಯಸನಿಗಳ ಮೂಲಕ ತಿಳಿದಿದೆ. ಇದು ಹೈ-ಡೋಸ್ ಆಗುವ ಕಾರಣ ಅವರು ಬೇಗನೇ ಖಿನ್ನತೆ, ಉದ್ವಿಗ್ನತೆ ಸೇರಿದಂತೆ ಲೈಂಗಿಕ ವಾಂಛೆ, ಹೈಸ್ಪೀಡ್ ಡ್ರೈವಿಂಗ್‌, ಓವರ್ ರಿಯಾಕ್ಷನ್ ಮೊದಲಾದ ಸಮಸ್ಯೆಗಳಿಗೆ ಒಳಗಾಗುತ್ತಾರೆ," ಎನ್ನುತ್ತಾರೆ.

ಕಾಸರಗೋಡಿನ ಪೋಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಕೇರಳದ ಬಂದರುಗಳ ಮೂಲಕ ಇಂತಹಾ ಮಾದಕ ವಸ್ತುಗಳ ಪೂರೈಕೆ ಕಂಡುಬಂದಿಲ್ಲ. ಕೇರಳದ ಹೆಚ್ಚಿನ ಭಾಗಗಳಲ್ಲಿ ಗಾಂಜಾ ಸೇವನೆ ಮಾತ್ರ ಕಂಡುಬಂದಿದೆ. ಗಾಂಜಾ ಸೇವನೆ ಬಾಯಿವಾಸನೆಯಿಂದ ಕಂಡುಹಿಡಿಯಬಹುದು. ಆದರೆ ಎಂಡಿಎಂಎ ಅಂತಹಾ ನಾರ್ಕೋಟಿಕ್ ಡ್ರಗ್ಸ್ ಸೇವನೆ ರಕ್ತ ಅಥವಾ ಮೂತ್ರ ಪರೀಕ್ಷೆಯಿಂದ ತಿಳಿಯುತ್ತದೆ, ಎನ್ನುತ್ತಾರೆ.

ಕೇರಳದಲ್ಲಿ ನಡೆಯುತ್ತಿರುವ ಕೆಲವು ರಸ್ತೆ ಅಪಘಾತಗಳಲ್ಲಿ ಯುವಕರು ಡ್ರಗ್ಸ್ ಸೇವನೆ ಮಾಡಿವುದು ಕಂಡುಬಂದಿದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ. "ಸಣ್ಣ ಅಪಘಾತಗಳಲ್ಲಿ ಕೂಡಾ ವಿಪರೀತ ಚೀರಾಡುವುದು, ಎದುರು ಬದಿಯ ವಾಹನಗಳ ವ್ಯಕ್ತಿಗಳಿಗೆ ಹಲ್ಲೆ ಮಾಡುವುದು ಇಲ್ಲವೇ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುವುದು, ಅಷ್ಟೇ ಅಲ್ಲದೇ ಆಸ್ಪತ್ರೆಗಳಲ್ಲಿ ಕೂಡಾ ವೈದ್ಯರು ಮತ್ತು ನರ್ಸ್‌ಗಳ ಜೊತೆ ವಿಚಿತ್ರವಾಗಿ ಮಾತನಾಡುವುದು, ಇದೆಲ್ಲಾ ಬಹುತೇಕ ನಾರ್ಕೋಟಿಕ್ ಡ್ರಗ್ಸ್ ತೆಗೆದುಕೊಂಡವರ ಗುಣಲಕ್ಷಣವಾಗಿದೆ’’ ಎಂದವರು ವಿವರಿಸುತ್ತಾರೆ.

ಉತ್ತರದಿಂದ ದಕ್ಷಿಣಕ್ಕೆ...

ಗುಜರಾತಿನ ಸೂರತ್‌ನಲ್ಲಿರುವ ಹೋಟೇಲ್ ಒಂದರ ಮ್ಯಾನೇಜರ್ - ಉತ್ತರ ಪ್ರದೇಶದ ಬಹ್ರೈಚ್‌ ಮೂಲದ ಅಶ್ಪಕ್ ರಜಾಕ್ ಅವರು ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿ, "ಉತ್ತರ ಪ್ರದೇಶದಲ್ಲಿ ನೀರಿನಂಶ ಇರುವ ಕಡೆ ಗಾಂಜಾ ಕಳೆ ಸಸ್ಯದ ರೀತಿಯಲ್ಲಿ ಬೆಳೆಯುತ್ತದೆ. ಗಿಡಗಳು ಬೆಳೆದಂತೆ ಅವುಗಳ ಸೊಪ್ಪು ಕತ್ತರಿಸಿ ಚೀಲಗಳಲ್ಲಿ ತುಂಬಿಸಿ ರೈಲುಗಳಲ್ಲಿ ಅಕ್ರಮವಾಗಿ ಸಾಗಿಸುತ್ತಾರೆ. ಬಹುತೇಕ ಮಂದಿಗೆ ಇದು ವಾರ್ಷಿಕ ಆದಾಯವಾಗಿದೆ, ಈ ಕೆಲಸದಲ್ಲಿ ಮಹಿಳೆಯರೂ ತೊಡಗಿಸಿಕೊಳ್ಳುತ್ತಾರೆ’’ ಎಂದು ವಿವರಿಸುತ್ತಾರೆ.

ಮಂಗಳೂರು, ಉಡುಪಿ, ಭಟ್ಕಳ ಕಡೆಗಳಲ್ಲಿ ಬೋಟ್ ಕಾರ್ಮಿಕರಾಗಿ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಲ ಮೂಲದವರಿದ್ದುಇವರಲ್ಲಿ ಕೆನಬಿಸ್ ಸೇವನೆ ಹೆಚ್ಚಾಗಿದೆ. ಉತ್ತರ ಭಾರತದ ನದೀ ತಟಗಳಲ್ಲಿ ಗಾಂಜಾ ಒಂದು ಕಳೆ ಸಸ್ಯದ ಮಾದರಿಯಲ್ಲಿ ಸುಲಭವಾಗಿ ಬೆಳೆಯುವ ಕಾರಣ ಅವರು ಊರಿಗೆ ಪ್ರಯಾಣಿಸಿದಾಗ ಅಥವಾ ಊರಿನಿಂದ ಬರುವ ಮಿತ್ರರ ಮೂಲಕ ಗಾಂಜಾ ತರಿಸುತ್ತಾರೆ. ಅದನ್ನು ಇಲ್ಲಿ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕರಾವಳಿಗೆ ಆಪ್ರಿಕಾ ನಂಟು!

ಎನ್‌ಡಿಪಿಎಸ್ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಕರಾವಳಿಯಲ್ಲಿ ಆಫ್ರಿಕಾ ಮೂಲದ ವಿದ್ಯಾರ್ಥಿಗಳು ಹೆಚ್ಚಾಗಿರುವ ಕಾರಣ ಮುಖ್ಯವಾಗಿ ಎಂಡಿಎಂಎ ಮತ್ತು ಬ್ರೌನ್ ಶುಗರ್ ರೀತಿಯ ಮಾದಕ ವಸ್ತುಗಳ ಉಪಯೋಗ ಹೆಚ್ಚಾಗಿದೆ ಹಾಗೂ ಡ್ರಗ್ ಪೆಡ್ಲಿಂಗ್ ಹೆಚ್ಚಾಗಿದೆ. ಆದರೆ ಅವರೆಲ್ಲಾ (ವಿದೇಶೀಯರು)ನಿಗದಿತ ಪ್ರಮಾಣದಲ್ಲಿ ಬಳಸುತ್ತಾರೆ, ಸ್ಥಳೀಯರು ಹೆಚ್ಚಿನ ನಶೆಗಾಗಿ ಹೆಚ್ಚು ಬಾರಿ ಹಾಗೆಯೇ ಬಾರಿ-ಬಾರಿ ಸೇವಿಸುತ್ತಾರೆ. ಆಫ್ರಿಕಾ ಮೂಲದ ಹೆಚ್ಚಿನ ವಿದ್ಯಾರ್ಥಿಗಳು ಜ್ವರ,ಶೀತ, ತಲೆನೋವು ಮಾತ್ರೆಗಳಂತಹ ವಸ್ತುಗಳನ್ನು ತರುವುದು ನಮ್ಮ ಗಮನಕ್ಕೆ ಬಂದಿದೆ’’ ಎನ್ನುತ್ತಾರವರು.

ಮಂಗಳೂರು ವೈದ್ಯಕೀಯ ಕಾಲೇಜೊಂದರಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಸೂಡಾನ್ ಮೂಲದ ವಿದ್ಯಾರ್ಥಿನಿ ಸೂಸಾನ್ನೆ ಅಹಮದಿ ಮಾತನಾಡಿ, ಬಹುತೇಕ ಆಫ್ರಿಕಾ ಮೂಲದ ಯುವಕರು ಭಾರತದಲ್ಲಿ ವಿದ್ಯಾಭ್ಯಾಸದ ಬದಲಾಗಿ ನಶೆ ಅನುಭವಿಸಲು ಬರುತ್ತಾರೆ. ಯಾವುದಾದರೂ ಒಂದು ಕೋರ್ಸ್, ಮೆಡಿಕಲ್, ಇಂಜಿನಿಯರಿಂಗ್ ಅಥವಾ ಮ್ಯಾನೇಜ್‌ಮೆಂಟ್ ತೆಗೆದುಕೊಂಡು ನಶೆಯಲ್ಲಿ ಕೊನೆಗೆ ನಮಗೆ ಭಾರತದ ಇಂಗ್ಲೀಷ್ ಅರ್ಥವಾಗುತ್ತಿಲ್ಲ ಸುಳ್ಳು ಕಾರಣ ಹೇಳಿ ಎಂದು ವಾಪಸ್ ಹೋಗುತ್ತಾರೆ. ಅಥವಾ ಕೋರ್ಸ್ ಮುಗಿಸಲು ಹೆಚ್ಚಿನ ವರ್ಷ ತೆಗೆದುಕೊಳ್ಳುತ್ತಾರೆ’’ ಎಂದು ಸಾಮಾಜಿಕ ಮಾಧ್ಯಮ ಚಾಟ್‌ನಲ್ಲಿ ತಿಳಿಸಿದರು.

Read More
Next Story