ಪಂಚನದಿಗಳ ಉಗಮಸ್ಥಾನ ನಂದಿ ಗಿರಿಧಾಮ; ತಪ್ಪಲಿನ ಜಿಲ್ಲೆಗಳಲ್ಲಿ ತಪ್ಪದ ಬರ
ಪೆನ್ನಾರ್ (ದಕ್ಷಿಣ ಪಿನಾಕಿನಿ)ನಂತೆ ನಂದಿಬೆಟ್ಟದಿಂದ ಉಗಮವಾಗುವ ಉತ್ತರ ಪಿನಾಕಿನಿ, ಚಿತ್ರಾವತಿ, ಪಲಾರ್, ಅರ್ಕಾವತಿ ನದಿಗಳೂ ಅಂತಾರಾಜ್ಯ ಜಲ ವಿವಾದಕ್ಕೆ ಕಾರಣವಾಗುವ ಮುನ್ನ ಎಚ್ಚರವಹಿಸಬೇಕು.

ನಂದಿ ಬೆಟ್ಟದಲ್ಲಿರುವ ಅರ್ಕಾವತಿ ನದಿ ಉಗಮ ಸ್ಥಾನ ಚಿತ್ರ ಕೃಪೆ- ಎಕ್ಸ್ ಪೋಸ್ಟ್ HennurBlr
ಪಂಚನದಿಗಳ ಉಗಮ ಸ್ಥಾನವಾದ ವಿಶ್ವಪ್ರಸಿದ್ಧ ನಂದಿಗಿರಿಧಾಮದ ಬುಡದಲ್ಲಿರುವ ಜಿಲ್ಲೆಗಳಿಗೇ ನದಿ ನೀರಿನ ಭಾಗ್ಯ ದಕ್ಕುತ್ತಿಲ್ಲ. ದೀಪದ ಕೆಳಗೆ ಕತ್ತಲು ಎಂಬಂತೆ ಐದು ನದಿಗಳಿದ್ದರೂ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಜಲಕ್ಷಾಮ ಹೆಚ್ಚುತ್ತಿದೆ. ಆದರೆ ನೀರು ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪಾಲಾಗುತ್ತಿದೆ.
ಬರಗಾಲದಲ್ಲೂ ದ್ರಾಕ್ಷಿ, ರೇಷ್ಮೆ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಇಲ್ಲಿನ ರೈತರ ಭೂಮಿಗೆ ಸಮೀಪವೇ ನದಿಗಳು ಉಗಮಿಸಿದರೂ ಹನಿ ನೀರು ಅನ್ನದಾತರಿಗೆ ಸಿಗುತ್ತಿಲ್ಲ, ಜತೆಗೆ ಕುಡಿಯಲೂ ಬಳಕೆಯಾಗುತ್ತಿಲ್ಲ. ಆದರೆ ಈ ನದಿಗಳೇ ಈಗ ಅಂತರ ರಾಜ್ಯ ವಿವಾದಗಳಿಗೆ ಎಡೆ ಮಾಡಿಕೊಟ್ಟಿರುವುದಂತೂ ಸತ್ಯ.
ನಂದಿ ಬೆಟ್ಟದ ವೈಮಾನಿಕ ನೋಟ (ಲೋಕಸಭಾ ಸದಸ್ಯ ಡಾ. ಕೆ ಸುಧಾಕರ್ ಅವರ ಎಕ್ಸ್ ಪೋಸ್ಟ್ ನಿಂದ
ಪಂಚನದಿಗಳ ನಾಡು ಹೇಗೆ?
ಪಂಚನದಿಗಳ ರಾಜ್ಯವಾಗಿರುವ ಪಂಜಾಬಿನಲ್ಲಿ ಸಟ್ಲೆಜ್, ಬಿಯಾಸ್, ರವಿ, ಚೆನಾಬ್ ಮತ್ತು ಝೇಲಂ ನದಿಗಳು ಹರಿಯುತ್ತಿದ್ದರೆ, ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ, ಡೋಣಿ, ಭೀಮಾ, ಘಟ್ಟಪ್ರಭಾ, ಮಲಪ್ರಭಾನದಿಗಳು ಹರಿಯುತ್ತಿವೆ. ಆದರೆ, ಕರ್ನಾಟಕದ ಸೀಮೆಗೆ ಸೇರಿದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ನಂದಿ ಬೆಟ್ಟದಲ್ಲಿ ದಕ್ಷಿಣ ಪಿನಾಕಿನಿ, ಉತ್ತರ ಪಿನಾಕಿನಿ, ಅರ್ಕಾವತಿ, ಚಿತ್ರಾವತಿ ಹಾಗೂ ಪಲಾರ್ ನದಿಗಳು ಉಗಮಿಸುತ್ತವೆ. ಒಂದೇ ಕಡೆ 5 ನದಿಗಳು ಉಗಮಗೊಳ್ಳುವ ಮೊದಲ ಗಿರಿ ಇದಾಗಿದೆ. ಆದರೆ, ಈ ಎಲ್ಲ ನದಿಗಳು ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣಕ್ಕೆ ಹರಿದು ಅಲ್ಲಿನವರಿಗೆ ಹೆಚ್ಚು ಉಪಯೋಗವಾಗುತ್ತಿವೆ. ಒಂದೇ ಸ್ಥಳದಲ್ಲಿ 5 ನದಿಗಳ ಉಗಮವಾಗಿದ್ದರೂ, ಕರ್ನಾಟಕ ಬಯಲು ಸೀಮೆ ಜಿಲ್ಲೆಗಳಲ್ಲಿ ನೀರಿನ ಬರ ತಾಂಡವವಾಡುತ್ತಿದೆ.
ಅರ್ಕಾವತಿ ಹರಿಯುವ ಮಾರ್ಗ
ನದಿಗಳು ಹರಿಯುವ ಮಾರ್ಗ, ಲಾಭ
ಅರ್ಕಾವತಿ ನದಿಯು ಬೆಂಗಳೂರು ಗ್ರಾಮಾಂತರದ ಮೂಲಕ ಬೆಂಗಳೂರು ನಗರ, ಮಾಗಡಿ,ರಾಮನಗರ ಹಾಗೂ ಕನಕಪುರ ಮಾರ್ಗವಾಗಿ ಮೇಕೆದಾಟು ಸೇರಿ ತಮಿಳುನಾಡಿಗೆ ಹರಿಯುತ್ತದೆ. ಈ ನದಿ ಪಾತ್ರದಲ್ಲಿ ಹೆಸರಘಟ್ಟ ಕೆರೆ, ತಿಪ್ಪಗೊಂಡನಹಳ್ಳಿ ಜಲಾಶಯಗಳು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುತ್ತಿದ್ದವು. ಪ್ರಸ್ತುತ, ನೀರು ಕಲುಷಿತವಾಗಿರುವುದರಿಂದ ಸರಬರಾಜು ಸ್ಥಗಿತಗೊಂಡಿದೆ.
ಮಂಚನಬೆಲೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಈ ಹಿಂದೆ ಮಾಗಡಿ ಪಟ್ಟಣಕ್ಕೆ ಕುಡಿಯುವ ಸಲುವಾಗಿ ಪೂರೈಸಲಾಗುತ್ತಿತ್ತು. ಈಗ ಜಲಾಶಯದ ನೀರು ಕಲುಷಿತವಾಗಿದ್ದು ಮೀನು ಸಾಕಾಣಿಕೆಗೆ ಬಳಸಲಾಗುತ್ತಿದೆ. ಮೇಕೆದಾಟು ಸಮೀಪದ ಅರ್ಕಾವತಿ ಜಲಾಶಯದ ನೀರನ್ನು ನೀರಾವರಿಗೆ ಬಳಸಲಾಗುತ್ತಿದೆ.
ಉತ್ತರ ಪಿನಾಕಿನಿ ನದಿಯು ನಂದಿಬೆಟ್ಟದ ಮೂಲಕ ಪೂರ್ವದೆಡೆಗೆ ಹರಿದು ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ. ಈ ನೀರು ಮಂಚೇನಹಳ್ಳಿ ಮತ್ತು ಗೌರಿಬಿದನೂರು, ಅನಂತಪುರ (ಹಿಂದುಪುರ ಮೂಲಕ ಪ್ರವೇಶ), ಕಡಪ ಮತ್ತು ನೆಲ್ಲೂರು ಜಿಲ್ಲೆಗಳ ಮೂಲಕ ಬಂಗಾಳಕೊಲ್ಲಿ ಸೇರುತ್ತದೆ. ನದಿ ಪಾತ್ರದಲ್ಲಿ ಬರುವ ಮಂಚೇನಹಳ್ಳಿ ಹಾಗೂ ಗೌರಿಬಿದನೂರಿಗೆ ಅಲ್ಪಸ್ವಲ್ಪ ನೀರಾವರಿ ಸೌಲಭ್ಯ ಸಿಗುತ್ತಿದೆ.
ದಕ್ಷಿಣ ಪಿನಾಕಿನಿ ನದಿಯು ನಂದಿಬೆಟ್ಬೆದ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಬೆಂಗಳೂರಿನ ಬೆಳ್ಳಂದೂರು ಕೆರೆ, ತಮಿಳುನಾಡಿನ ಹೊಸೂರು ಬಳಿಯ ಕೆಳವಾರಪಲ್ಲಿ ಡ್ಯಾಂ, ಕೃಷ್ಣಗಿರಿ, ಪಂಬರ್ ಡ್ಯಾಂ, ಸಾತನೂರು, ಕಡಲೂರು ಮಾರ್ಗವಾಗಿ ಬಂಗಾಳಕೊಲ್ಲಿ ಸೇರಲಿದೆ. ಈ ನದಿ ಪಾತ್ರವು ಬಹುತೇಕ ಕೆರೆಗಳಿಂದ ಕೂಡಿದ್ದು, ಎಲ್ಲವೂ ಕೈಗಾರಿಕಾ ತ್ಯಾಜ್ಯದಿಂದ ಕಲುಷಿತಗೊಂಡಿವೆ.
ಚಿತ್ರಾವತಿ ನದಿಯು ಕೈವಾರದ ಮೂಲಕ ಆಂಧ್ರಪ್ರದೇಶದ ಸತ್ಯಸಾಯಿ (ಪುಟ್ಟಪರ್ತಿ) ಮತ್ತು ಅನಂತಪುರ ಜಿಲ್ಲೆಗಳ ಮೂಲಕ ಹರಿಯುತ್ತದೆ. ಕಡಪ ಜಿಲ್ಲೆಯ ಗಂಡಿಕೋಟ ಸಮೀಪವಿರುವ ಜಮ್ಮಲಮಡುಗು ಬಳಿ ಉತ್ತರ ಪಿನಾಕಿನಿ (ಪೆನ್ನಾರ್) ನದಿಯನ್ನು ಸೇರುತ್ತದೆ. ಧರ್ಮಾವರಂ ಬಳಿ ಈ ನದಿಗೆ ಅಡ್ಡಲಾಗಿ ಚಿತ್ರಾವತಿ ಬ್ಯಾಲೆನ್ಸಿಂಗ್ ರಿಸರ್ವಾಯರ್ (CBDR) ಎಂಬ ಜಲಾಶಯವನ್ನು ನಿರ್ಮಿಸಲಾಗಿದೆ.
ದಕ್ಷಿಣ ಪಿನಾಕಿನಿ ನದಿ ಹರಿಯುವ ಮಾರ್ಗ
ಪಲಾರ್ ನದಿಯು ದಕ್ಷಿಣ ಮತ್ತು ಆಗ್ನೇಯ ದಿಕ್ಕಿನಲ್ಲಿ ಹರಿಯುತ್ತದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಸುಮಾರು ೬೩ ಕಿಲೋಮೀಟರ್‌ಗಳಷ್ಟು ದೂರವನ್ನು ಕರ್ನಾಟಕದಲ್ಲಿ ಕ್ರಮಿಸುತ್ತದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೂಲಕ ಸುಮಾರು 33 ಕಿಲೋಮೀಟರ್‌ಗಳಷ್ಟು ಹರಿಯುತ್ತದೆ. ಬಳಿಕ ತಮಿಳುನಾಡಿನ ಪಲ್ಲಿಕೊಂಡ, ವೇಲೂರು, ಆರ್ಕಾಟ್ ಮತ್ತು ಕಾಂಚೀಪುರಂ ಜಿಲ್ಲೆಗಳ ಮೂಲಕ ವಾಯಲೂರು ಸಮೀಪ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಉತ್ತರ ಪಿನಾಕಿನಿ ಹರಿಯುವ ಮಾರ್ಗ
ಲಾಭಗಳೇನಿತ್ತು..?
ನಂದಿಬೆಟ್ಟದ ಮೂಲಕ 5 ನದಿಗಳು ಹರಿಯುವ ಮಾರ್ಗದ ಉದ್ದಕ್ಕೂ ಸಿಗುವ ನೂರಾರು ಹಳ್ಳಿಗಳ ನೀರಾವರಿಗೆ ಬಳಕೆ ಮಾಡಿಕೊಳ್ಳಬಹುದಿತ್ತು. ಜತೆಗೆ ಅಲ್ಲಲ್ಲಿ ನಿರ್ಮಿಸಿರುವ ಡ್ಯಾಂಗಳಲ್ಲಿ ಮಳೆಗಾಲದ ವೇಳೆ ನೀರು ಶೇಖರಿಸಿ ವರ್ಷವಿಡೀ ನೀರು ನೀಡಬಹುದಿತ್ತು. ಈ ನದಿಗಳು ಹರಿಯುವ ಬೆಂಗಳೂರು ದಕ್ಷಿಣ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಕೃಷಿ ಭೂಮಿ ಸಂಪತ್ಬರಿತವಾಗಿಸಬಹುದಿತ್ತು.
ಬಯಲು ಸೀಮೆಯ ಜಿಲ್ಲೆಗಳಲ್ಲಿ ಹರಿಯುವ ಈ ನದಿ ನೀರನ್ನೇ ಆಶ್ರಯಿಸಿದ ತೋಟಗಾರಿಕಾ ಬೆಳೆಗಳು, ಹೂವು, ರೇಷ್ಮೆ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಬೆಳೆಯಲಾಗುತ್ತಿತ್ತು. ಇತ್ತೀಚೆಗೆ ನದಿ ಪಾತ್ರದಲ್ಲಿ ಮಾನವ ಚಟುವಟಿಕೆಗಳು ಅತಿಯಾಗಿ, ನದಿ ಪ್ರದೇಶ ಒತ್ತುವರಿಯಾಗಿದೆ. ಜಲಮೂಲಗಳು ಕಣ್ಮರೆಯಾಗಿವೆ. ಪ್ರಸ್ತುತ, ಮಳೆಗಾಲದಲ್ಲಿ ಮಾತ್ರ ಈ ನದಿಗಳು ಕೆಲ ಕಾಲ ಜೀವಕಳೆ ಪಡೆದುಕೊಳ್ಳುತ್ತವೆ. ಉಳಿದಂತೆ ಈ ನದಿ ಮಾರ್ಗವು ಸಂಪೂರ್ಣ ಬತ್ತಿರುತ್ತದೆ. ಹೀಗಿದ್ದರೂ, ನೀರಿನ ಶೇಖರಣೆಗೆ ರಾಜ್ಯ ಸರಕಾರ ಯಾವುದೇ ಯೋಜನೆ ರೂಪಿಸಿಲ್ಲ. ಹೀಗಾಗಿ ಬರಪೀಡಿತ ಜಿಲ್ಲೆಗಳೆಂಬ ಹಣೆಪಟ್ಟಿಯಲ್ಲಿಯೇ ಬಯಲು ಸೀಮೆಯ ಈ ಜಿಲ್ಲೆಗಳು ಜೀವಿಸಬೇಕಿದೆ.
ಏನಿದು ಜಲಕ್ಷಾಮ..!
ಬರಪೀಡಿತ ಜಿಲ್ಲೆಗಳಾದ ಚಿಕ್ಕಬಾಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಈಗಾಗಲೇ ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ . 2 ಸಾವಿರ ಅಡಿಗಳವರೆಗೂ ನೀರಿನ ಹನಿ ಪತ್ತೆಯಾಗುತ್ತಿಲ್ಲ. ಮತ್ತೊಂದೆಡೆ ಈ ಭಾಗದಲ್ಲಿ ಬೆಳೆದ ತರಕಾರಿಗಳಲ್ಲಿ ಭಾರಿ ಲೋಹದ ಅಂಶಗಳು ಪತ್ತೆಯಾಗುತ್ತಿವೆ ಎಂದು “ಎಪ್ರಿಂ” ಸಂಸ್ಥೆ ವರದಿ ನೀಡಿದೆ. ಮತ್ತೊಂದೆಡೆ ಈ ಭಾಗದಲ್ಲಿನ ಅಂತರ್ಜಲದ ನೀರಿನಲ್ಲಿ ಯುರೇನಿಯಂ ಅಂಶ ಹೆಚ್ಚಾಗಿದ್ದು, ಕುಡಿಯಲು ಯೋಗ್ಯವಲ್ಲ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.
ಹೀಗಿದ್ದರೂ, ಇಲ್ಲಿನ ನದಿಗಳ ಮೂಲಕ ಜಿಲ್ಲೆಯ ಕೆರೆ ತುಂಬಿಸುವ ಯೋಜನೆ ಮಾತ್ರ ಕಾರ್ಯಗತಗೊಂಡಿಲ್ಲ. ಕೆ.ಸಿ ಹಾಗೂ ಎಚ್.ಎನ್ ವ್ಯಾಲಿ ಯೋಜನೆಗಳ ಮೂಲಕ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಎರಡನೆ ಹಂತದಲ್ಲಿ ಶುದ್ದೀಕರಿಸಿದ ನೀರನ್ನು ಮಾತ್ರವೆ ಪೂರೈಸಲಾಗುತ್ತಿದೆ. ಆದರೆ, ಅನೇಕ ಹೋರಾಟಗಳ ಬಳಿಕವು ಮೂರನೇ ಹಂತದ ಶುದ್ದೀಕರಣಕ್ಕೆ ರಾಜ್ಯ ಸರಕಾರ ಮನಸ್ಸು ಮಾಡಿಲ್ಲ. ಹೀಗಾಗಿ, ಸರಕಾರ ಹರಿಸುತ್ತಿರುವ ನೀರಿನ ಮೂಲಕವೇ ಇನ್ನಷ್ಟು ವಿಷ, ಜನ-ಜಾನುವಾರುಗಳಿಗೆ ಸೇರುತ್ತಿದೆ ಎನ್ನುವುದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ವಾದ.
ಮಳೆಯಾದರೂ, ನೀರಿಲ್ಲ !
2021ರಿಂದ 2023ರ ವರೆಗೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. 2 ಜಿಲ್ಲೆಗಳಿಂದ 120 ಟಿಎಂಸಿ ನೀರು ಮಳೆ ರೂಪದಲ್ಲಿ ದಾಖಲಾಗಿದೆ. ಆದರೆ, 1 ಟಿಎಂಸಿ ನೀರನ್ನು ಸಹ ಶೇಖರಿಸುವ ಕೆಲಸ ನಡೆದಿಲ್ಲ. ಹೀಗಾಗಿ, ಎಷ್ಟೆ ಮಳೆಯಾದರೂ ಈ ಜಿಲ್ಲೆಗಳಲ್ಲಿ ಬರಗಾಲ ಸಾಮಾನ್ಯ ಎನ್ನುವಂತ್ತಾಗಿದೆ.
ನ್ಯಾಯಮಂಡಳಿ ರಚನೆಯಿಂದ ಸಂಕಷ್ಟ
ದಕ್ಷಿಣ ಪಿನಾಕಿನಿ ನೀರು ನಮ್ಮ ರಾಜ್ಯದಿಂದ ಹರಿದು ತಮಿಳು ನಾಡು ಸೇರಲಿದೆ. ಅಲ್ಲಿ ಪೆನ್ನಾರ್ ಎಂಬ ಹೆಸರಿನಲ್ಲಿ ನದಿಯನ್ನು ಗುರುತಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಕೋಲಾರ ಬಳಿ “ಯರಗೋಳ್ ಡ್ಯಾಂ” ಮೂಲಕ ಈ ನದಿ ನೀರನ್ನು ಶೇಖರಿಸಿಕೊಳ್ಳುತ್ತಿದ್ದು, ನದಿ ಹರಿಯುವ ದಿಕ್ಕನ್ನು ಬದಲಿಸುತ್ತಿದೆ ಎಂಬುದೇ ನದಿ ನೀರು ಅಂತರಾಜ್ಯ ನೀರಾವರಿ ವಿಷಯವಾಗಿದೆ. ಹೀಗಾಗಿ ಕರ್ನಾಟಕ ಏಕಪಕ್ಷೀಯವಾಗಿ ಸರ್ವಾಧಿಕಾರಿ ಧೋರಣೆ ನಡೆಸುವಂತಿಲ್ಲ ಎಂದು ತಮಿಳು ನಾಡು ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ತಮಿಳುನಾಡು ಸರಕಾರದ ವಾದ ಆಲಿಸಿದ ನ್ಯಾಯಪೀಠವು, ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿಯ “ಜಲವಿವಾದ ನ್ಯಾಯ ಮಂಡಳಿ”ಯನ್ನು ತಿಂಗಳೊಳಗೆ ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಉಗಮಗೊಳ್ಳುವ ನದಿ ನೀರಿನ ಪರ ವಾದಿಸುವಲ್ಲಿ ವಿಫಲಗೊಂಡಿರುವ ರಾಜ್ಯ ಸರಕಾರ, ಭವಿಷ್ಯದಲ್ಲಿ ನ್ಯಾಯ ಮಂಡಳಿಯಲ್ಲಿ ವಾದಸಲಿದೆಯೇ? ಎನ್ನುವ ಪ್ರಶ್ನೆ ಕಾಡುತ್ತಿದೆ.
ಮತ್ತೊಂದು ಅರ್ಜಿ ಸಲ್ಲಿಸಿ..
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯರೆಡ್ಡಿ “ದ ಫೆಡರಲ್ ಕರ್ನಾಟಕ”ದೊಂದಿಗೆ ಮಾತನಾಡಿ, ರಾಜ್ಯ ಸರಕಾರಕ್ಕೆ ಪಿನಾಕಿನಿ ನದಿ ಇದೆ ಎನ್ನುವುದೇ ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
" ಸುಪ್ರೀಂ ಕೋರ್ಟ್ ಆದೇಶದ ಬಳಿಕ ನಮ್ಮ ನದಿಯ ಜೀವಂತಿಕೆ ಬಗ್ಗೆ ಇವರಿಗೆ ತಿಳಿದಿದೆ. ಇಲ್ಲಿನ ಯರಗೋಳ್ ಜಲಾಶಯದ ಜಲಾನಯನ ಪ್ರದೇಶದಲ್ಲಿಯೇ ನೀರಿನ ಅಭಾವ ಇದೆ ಎನ್ನುವ ವಾದವನ್ನೆ ಸರಕಾರ ಮಂಡಿಸಲಿಲ್ಲ. ಹೀಗಿರುವಾಗ, ಭವಿಷ್ಯದಲ್ಲಿಎಲ್ಲದಕ್ಕೂ ನ್ಯಾಯಮಂಡಳಿಗೆ ಹೋಗಿ ವಾದ ಮಂಡಿಸಲು ಸಾಧ್ಯವೇ? ಈಗ ರಾಜ್ಯ ನೇಣುಬೀಗಿದ ಸ್ಥಿತಿಯಲ್ಲಿದೆ. ಹೀಗಾಗಿ ನ್ಯಾಯಾಲಯದಲ್ಲಿ ರಿವ್ಯೂ ಪಿಟಿಷಿಯನ್ ಸಲ್ಲಿಸಿ, ಸರಕಾರ ತನ್ನ ವಾದ ಮಂಡಿಸಬೇಕಿದೆ ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈಗಲಾದರೂ ಎಚ್ಚೆತುಕೊಳ್ಳಲಿ
ಇಲ್ಲಿನ ಅರ್ಕಾವತಿ ನದಿ ನೀರು ಹರಿದು ಸಂಗಮದ ಬಳಿ ಕಾವೇರಿಯೊಂದಿಗೆ ವೀಲಿನಗೊಳ್ಳುತ್ತದೆ. ಇದೇ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ಇಲ್ಲಿ ಮೇಕೆದಾಟು ಡ್ಯಾಂ ಕಟ್ಟುವ ರಾಜ್ಯ ಸರಕಾರದ ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತ ಪಡಿಸುತ್ತಿದೆ. ಜತೆಗೆ ಯರಗೋಳ್ ಜಲಾಶಯದ ನಿರ್ಮಾಣದ ಬಳಿಕ ದಕ್ಷಿಣ ಪಿನಾಕಿನಿ ನದಿ ನೀರು ರಾಷ್ಟ್ರೀಯ ಸಂಪತ್ತು ಎಂಬ ತಮಿಳುನಾಡಿನ ವಾದದ ಮೇರೆಗೆ ನ್ಯಾಯಮಂಡಳಿ ರಚನೆಗೆ ನ್ಯಾಯಲಯ ನಿರ್ದೇಶನ ನೀಡಿದೆ. ಇನ್ನೂ ನಂದಿಬೆಟ್ಟದಲ್ಲಿ ಉಗಮಗೊಳ್ಳುವ ಪೆನ್ನಾರ್ ಮತ್ತು ಪಾಲಾರ್ ನದಿಗಳು ಕೋಲಾರ, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳ ಮೂಲಕ ಆಂಧ್ರಪ್ರದೇಶ ಮತ್ತು ತಮಿಳುನಾಡು ಪ್ರವೇಶಿಸುತ್ತಿದೆ. ಇಲ್ಲಿಯು ಭವಿಷ್ಯದಲ್ಲಿ ಯಾವುದಾದರೂ ರಾಜ್ಯ ಕೋರ್ಟ್ ಮೆಟ್ಟಿಲೇರಬಹುದು. ಇದಕ್ಕೂ ಮುನ್ನ ರಾಜ್ಯ ಸರಕಾರ ಎಚ್ಚೆತುಕೊಳ್ಳಬೇಕು ಎನ್ನುತ್ತಾರೆ ಎಂದು ನೀರಾವರಿ ತಜ್ಞ ಆರ್.ರಂಗಸ್ವಾಮಿ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾಹಿತಿ ಹಂಚಿಕೊಂಡರು.

