Israel-Iran War Impact| ಇರಾನ್-ಇಸ್ರೇಲ್‌ ಯುದ್ಧ: ಮೈಸೂರು ರೇಷ್ಮೆ, ಗಾರ್ಮೆಂಟ್ಸ್ ಉದ್ಯಮಕ್ಕೆ ಗಾಯ
x

Israel-Iran War Impact| ಇರಾನ್-ಇಸ್ರೇಲ್‌ ಯುದ್ಧ: ಮೈಸೂರು ರೇಷ್ಮೆ, ಗಾರ್ಮೆಂಟ್ಸ್ ಉದ್ಯಮಕ್ಕೆ ಗಾಯ

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಸಾಗಣೆ ಮಾರ್ಗಗಳು ಬದಲಾಗಿ ರಫ್ತು ವೆಚ್ಚ ದುಪ್ಪಟ್ಟಾಗಿದೆ. ರೇಷ್ಮೆ ಮತ್ತು ಗಾರ್ಮೆಂಟ್ಸ್ ವಲಯಗಳು ಆರ್ಡರ್ ರದ್ದತಿ ಹಾಗೂ ಆರ್ಥಿಕ ನಷ್ಟದ ಭೀತಿಯನ್ನು ಎದುರಿಸುತ್ತಿವೆ.


Click the Play button to hear this message in audio format

ಮಧ್ಯಪ್ರಾಚ್ಯದ ಯುದ್ಧದ ಕಾರ್ಮೋಡ ರಾಜ್ಯದ ನೇಯ್ಗೆ ಮಗ್ಗಗಳು ಮತ್ತು ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೂ ಹಬ್ಬಿದೆ. ಕೇವಲ ತೈಲ ಬೆಲೆ ಏರಿಕೆಗೆ ಸೀಮಿತವಾಗಿದ್ದ ಯುದ್ಧದ ಪರಿಣಾಮಗಳು, ಈಗ ನೇರವಾಗಿ ಭಾರತದ ಜಿಡಿಪಿಗೆ ದೊಡ್ಡ ಕೊಡುಗೆ ನೀಡುತ್ತಿತುವ ʼಸಿದ್ಧ ಉಡುಪು (Garments) ಮತ್ತು ಮೈಸೂರು ರೇಷ್ಮೆʼಯಂತಹ ಪರಂಪರೆಯುಳ್ಳ ರೇಷ್ಮೆ ಉದ್ಯಮಗಳನ್ನು ಸಂಕಷ್ಟಕ್ಕೆ ತಳ್ಳಿದೆ.

ದೇಶದ ಗಾರ್ಮೆಂಟ್ಸ್ ಹಬ್‌ಗಳಾದ ಸೂರತ್‌, ಬೆಂಗಳೂರು ಹಾಗೂ ಇತರ ಘಟಕಗಳಾದ ತಿರುಪುರ್, ಬಳ್ಳಾರಿಯಲ್ಲಿನ ಉದ್ಯಮಗಳು ಅತಂತ್ರ ಸ್ಥಿತಿಯಲ್ಲಿವೆ. ವಿದೇಶಗಳಿಗೆ ರಫ್ತಾಗುತ್ತಿದ್ದ ಸಿದ್ಧ ಉಡುಪುಗಳಿಗೆ ಬೇಡಿಕೆ ಹೆಚ್ಚಿದ್ದರೂ, ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸಮುದ್ರ ಮಾರ್ಗ ಹಾಗೂ ವಾಯುಮಾರ್ಗಗಳ ಸೇವೆಯಲ್ಲಿ ವ್ಯತ್ಯಯಗೊಂಡಿರುವುದರಿಂದ ನೀಡಿದ್ದ ಆರ್ಡರ್‌ಗಳು ಸಮಯಕ್ಕೆ ಸರಿಯಾಗಿ ತಲುಪದ ಕಾರಣ, ಅಂತಾರಾಷ್ಟ್ರೀಯ ಖರೀದಿದಾರರು ಆರ್ಡರ್‌ಗಳನ್ನು ರದ್ದುಗೊಳಿಸುತ್ತಿದ್ದು, 2026ರ ಮಾರ್ಚ್ ತಿಂಗಳ ವರದಿಗಳ ಪ್ರಕಾರ, ಹೊಸ ಆರ್ಡರ್‌ಗಳ ಪ್ರಮಾಣದಲ್ಲಿ ಶೇ. 25 ರಿಂದ 30 ರಷ್ಟು ಕುಸಿತ ಕಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2024-25ರಲ್ಲಿ ಭಾರತವು ವಾರ್ಷಿಕವಾಗಿ ಸುಮಾರು 16 ಬಿಲಿಯನ್‌ನಿಂದ 18 ಬಿಲಿಯನ್ ಡಾಲರ್‌ ನಷ್ಟು (ಸುಮಾರು 1.35 ಲಕ್ಷ ಕೋಟಿಗೂ ಹೆಚ್ಚು) ಮೌಲ್ಯದ ಸಿದ್ಧ ಉಡುಪುಗಳನ್ನು ರಫ್ತು ಮಾಡುತ್ತಿತ್ತು. ಕೇಂದ್ರ ಸರ್ಕಾರವು 2030ರ ವೇಳೆಗೆ ಜವಳಿ ರಫ್ತನ್ನು 100 ಬಿಲಿಯನ್‌ಗೆ ಕೊಂಡೊಯ್ಯುವ ಗುರಿ ಹೊಂದಿತ್ತು. ಆದರೆ ಪ್ರಸ್ತುತ ಯುದ್ಧದ ಬಿಕ್ಕಟ್ಟಿನಿಂದಾಗಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ.

ಯುರೋಪಿಯನ್ ಯೂನಿಯನ್ ದೇಶಗಳಾದ ಜರ್ಮನಿ, ಫ್ರಾನ್ಸ್, ಇಟಲಿಗಳಿಗೆ ಶೇ. 32 , ಅಮೆರಿಕ ಶೇ. 27 , ಯುಎಇ ಮತ್ತು ಅರಬ್ ದೇಶಗಳಿಗೆ ಶೇ. 12 ರಿಂದ 15 , ಬ್ರಿಟನ್ ಗೆ ಶೇ. 10 ರಷ್ಟು ಜವಳಿ ಉತ್ಪನ್ನಗಳು ರಫ್ತಾಗುತ್ತವೆ. ಪ್ರತಿವರ್ಷ ಅಂದಾಜು 1.2 ಬಿಲಿಯನ್‌ನಿಂದ 1.5 ಬಿಲಿಯನ್ ಯುನಿಟ್‌ಗಳಷ್ಟು (ಪೀಸ್‌ಗಳು) ಉಡುಪುಗಳನ್ನು ಜಾಗತಿಕ ಮಾರುಕಟ್ಟೆಗೆ ಭಾರತವು ಪೂರೈಸುತ್ತಿದ್ದು, ಇದರಲ್ಲಿ ಟಿ-ಶರ್ಟ್, ಶರ್ಟ್, ಲೇಡಿಸ್ ಗೌನ್ ಮತ್ತು ಮಕ್ಕಳ ಉಡುಪುಗಳು ಸಿಂಹಪಾಲನ್ನು ಹೊಂದಿವೆ.

ಆದರೆ, ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಕಳೆದ ಕೆಲ ತಿಂಗಳಿನಿಂದ ರಫ್ತು ಪ್ರಮಾಣದಲ್ಲಿ ಸುಮಾರು ಶೇ. 15 ರಿಂದ 20 ರಷ್ಟು ತಾತ್ಕಾಲಿಕ ಕುಸಿತ ದಾಖಲಾಗಿದೆ. ಯುದ್ದದಿಂದಾಗಿ ಕೆಂಪು ಸಮುದ್ರದ ಹಾದಿ ಮುಚ್ಚಿರುವುದರಿಂದ ಸುಮಾರು 2 ಬಿಲಿಯನ್ ಮೌಲ್ಯದ ಸರಕುಗಳು ಹಡಗುಗಳಲ್ಲಿ ಅಥವಾ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿವೆ ಎಂದು ಅಂದಾಜಿಸಲಾಗಿದೆ.

ಹೆಸರೇಳಲು ಇಚ್ಛಿಸದ ಗಾರ್ಮೆಂಟ್ಸ್‌ ಉದ್ಯಮಿಯೊಬ್ಬರು "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿ, ಭಾರತದ ಒಟ್ಟು ರಫ್ತಿನಲ್ಲಿ ಕರ್ನಾಟಕವು ಶೇ. 20 ರಷ್ಟು ಪಾಲು ಹೊಂದಿದೆ. ಯುದ್ಧದಿಂದಾಗಿ ಸದ್ಯಕ್ಕೆ ದೊಡ್ಡ ಮಟ್ಟದ ಹೊಡೆತ ಬಿದಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ, ಭವಿಷ್ಯದಲ್ಲಿ ರಾಜ್ಯದ ಗಾರ್ಮೆಂಟ್ಸ್ ವಲಯಕ್ಕೆ ತಿಂಗಳಿಗೆ ಸರಾಸರಿ 1,000 ಕೋಟಿಗೂ ಅಧಿಕ ವಹಿವಾಟು ನಷ್ಟವಾಗಬಹುದು. ದೇಶಿಯ ಮಾರುಕಟ್ಟೆಗೆ ಯಾವುದೆ ಸಮಸ್ಯೆ ಇಲ್ಲ. ಆದರೆ, ವಿದೇಶಿ ಮಾರುಕಟ್ಟೆಗೆ ದೊಡ್ಡ ಸಮಸ್ಯೆಯಾಗಲಿದೆ. ಭಾರತದ ಜಿಡಿಪಿಗೆ ಗಾರ್ಮೆಂಟ್ಸ್ ವಲಯವು ದೊಡ್ಡ ಕೊಡುಗೆ ನೀಡುತ್ತಿದ್ದು, ರಫ್ತು ಕುಂಠಿತವಾದರೆ, ದೇಶಕ್ಕೆ ಬರುವ ವಿದೇಶಿ ಹಣವು ಕಡಿಮೆಯಾಗಲಿದೆ ಎಂದರು.

ರೇಷ್ಮೆ ಮಾರುಕಟ್ಟೆಗೆ ಭವಿಷ್ಯದಲ್ಲಿ ಸಂಕಷ್ಟ

ಬೆಂಗಳೂರು, ಮೈಸೂರು ಸೇರಿದಂತೆ ಭಾರತೀಯ ರೇಷ್ಮೆ ಮತ್ತು ಎಂಬ್ರಾಯ್ಡರಿ ಉಡುಪುಗಳಿಗೆ ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಂತಹ ಜಿ.ಸಿ.ಸಿ (Gulf Cooperation Council) ರಾಷ್ಟ್ರಗಳು ಅತಿದೊಡ್ಡ ಮಾರುಕಟ್ಟೆಗಳಾಗಿವೆ. ಯುದ್ಧದ ಭೀತಿಯಿಂದಾಗಿ ಅಲ್ಲಿನ ಗ್ರಾಹಕರು ಐಷಾರಾಮಿ ವಸ್ತುಗಳಿಗಿಂತ ಅಗತ್ಯ ವಸ್ತುಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಭಾರತದಿಂದ ರಫ್ತಾಗುತ್ತಿದ್ದ ರೇಷ್ಮೆಯ ಬೇಡಿಕೆಯಲ್ಲಿ ಶೇ.8 ರಷ್ಟು ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ.

ಇದರ ನೇರ ಪರಿಣಾಮ ಈಗ ದೇಶೀಯ ಮಾರುಕಟ್ಟೆಯ ಮೇಲಾಗುತ್ತಿದೆ. ರಫ್ತಾಗಬೇಕಿದ್ದ ರೇಷ್ಮೆ ಉತ್ಪನ್ನಗಳು ದೇಶೀಯ ಮಾರುಕಟ್ಟೆಗೆ ಹರಿಯುತ್ತಿರುವುದರಿಂದ, ಪೂರೈಕೆ ಹೆಚ್ಚಾಗಿ ಬೆಲೆ ಕುಸಿಯುವ ಭೀತಿ ಎದುರಾಗಿದೆ. ರಾಮನಗರ ಮತ್ತು ಶಿಡ್ಲಘಟ್ಟದಂತಹ ಮಾರುಕಟ್ಟೆಗಳಲ್ಲಿ ರೇಷ್ಮೆ ಗೂಡಿನ ಬೆಲೆಯು ಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದು, ರೈತರು ಮತ್ತು ನೂಲು ತೆಗೆಯುವವರು (Reelers) ಆತಂಕದಲ್ಲಿದ್ದಾರೆ. ಈ ಮೊದಲು ಕೆಜಿ ರೇಷ್ಮೆ ಗೂಡಿನ ಬೆಲೆ ಸಾವಿರದ ಗಡಿ ತಲುಪಿತ್ತು. ಕಳೆದೊಂದು ವಾರದಿಂದ ಗೂಡಿನ ದರ ಕೆ.ಜಿ.ಗೆ 700 ರ ಗಡಿ ದಾಟಿಲ್ಲ.

ಭಾರತವು ವಾರ್ಷಿಕವಾಗಿ ಸುಮಾರು 250 ಮಿಲಿಯನ್‌ ಡಾಲರ್ ನಿಂದ 300 ಮಿಲಿಯನ್ ಡಾಲರ್‌ ಮೌಲ್ಯದ ರೇಷ್ಮೆ ಉತ್ಪನ್ನಗಳನ್ನುವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದರಲ್ಲಿ ಸಿದ್ಧ ಉಡುಪುಗಳು, ಸೀರೆಗಳು, ರೇಷ್ಮೆ ನೂಲು (Yarn) ಮತ್ತು ಕರಕುಶಲ ವಸ್ತುಗಳು ಸೇರಿದ್ದು, ಭಾರತೀಯ ರೇಷ್ಮೆಯು ಸುಮಾರು 80ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿದೆ. ಅಮೆರಿಕ ದೇಶಕ್ಕೆ ಒಟ್ಟು ರಫ್ತಿನ ಶೇ. 25 ರಿಂದ 30 ರಷ್ಟು ಪಾಲು ಹೊಂದಿದ್ದರೆ, ಯುರೋಪಿಯನ್‌ ದೇಶಗಳಿಗೆ ಶೇ. 20 ರಷ್ಟು ಪಾಲು ಹೊಂದಿವೆ. ಯುಎಇ ಮತ್ತು ಅರಬ್ ರಾಷ್ಟ್ರಗಳಿಗೆ ಸುಮಾರು ಶೇ. 15 ರಷ್ಟು ರೇಷ್ಮೆ ಉತ್ಪನ್ನಗಳು ರಫ್ತುಗೊಳ್ಳುತ್ತಿವೆ. ವಿಶೇಷವಾಗಿ ಎಂಬ್ರಾಯ್ಡರಿ ಉಡುಪುಗಳು ದುಬೈ ಮೂಲಕ ಅರಬ್ ರಾಷ್ಟ್ರಗಳಿಗೆ ರಫ್ತಾಗುತ್ತವೆ.

ರೇಷ್ಮೆಯು ಐಷಾರಾಮಿ ಉತ್ಪನ್ನವಾಗಿರುವುದರಿಂದ, ಇದರ ಸಾಗಣೆ ವೆಚ್ಚ ಶೇ. 30 ರಷ್ಟು ಹೆಚ್ಚಾಗಿರುವುದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೇಷ್ಮೆಯ ಬೆಲೆ ಏರುವಂತೆ ಮಾಡಿದೆ. ಆದರೆ, ಈಗ ಯುದ್ದದ ಪರಿಸ್ಥಿತಿಯಿಂದಾಗಿ, ಸಾಗಣೆಯ ಮಾರ್ಗಗಳು ಬದಲಾಗುತ್ತಿರುವುದರಿಂದ ಪೂರೈಕೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಜತೆಗೆ ರಫ್ತು ಮಾಡಲಾದ ಸರಕುಗಳಿಗೆ ಹಣ ಬರುವುದು ಸರಾಸರಿ 45 ರಿಂದ 60 ದಿನಗಳಷ್ಟು ವಿಳಂಬವಾಗುತ್ತಿರುವುದು ರೇಷ್ಮೆ ಉದ್ಯಮದ ಮೇಲೆ ಪರೋಕ್ಷ ಪರಿಣಾಮ ಬೀರುತ್ತಿದೆ ಎನ್ನುತ್ತಿದ್ದಾರೆ ರೇಷ್ಮೆ ವ್ಯಾಪಾರಿಯೊಬ್ಬರು.

ಕರ್ನಾಟಕವು ಭಾರತದ ಒಟ್ಟು ಮಲ್ಬರಿ ರೇಷ್ಮೆ ಉತ್ಪಾದನೆಯಲ್ಲಿ ಸುಮಾರು ಶೇ. 45 ರಿಂದ 50 ರಷ್ಟು ಪಾಲು ಹೊಂದಿದೆ. ರಾಮನಗರದ ರೇಷ್ಮೆ ಮಾರುಕಟ್ಟೆಯಿಂದ ದಿನನಿತ್ಯ ಟನ್‌ಗಟ್ಟಲೆ ಗೂಡು ಮಾರಾಟವಾಗುತ್ತದೆ. ವಿದೇಶಿ ರಫ್ತು ಕುಸಿದಾಗ, ದೊಡ್ಡ ರಫ್ತುದಾರರು ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಾರೆ. ಇದು ನೇರವಾಗಿ ಸಣ್ಣ ಬೆಳೆಗಾರರಿಗೆ ಸಿಗುವ ಬೆಲೆಯ ಮೇಲೆ ಹೊಡೆತ ನೀಡುತ್ತದೆ.

ಈ ಬಗ್ಗೆ ಕೆಎಸ್‌ಎಂಬಿ (Karnataka Silk Marketing Board Limited) ಅಧ್ಯಕ್ಷ ಎಸ್.ಗಂಗಾಧರ್‌ "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿ, "ರೇಷ್ಮೆ ಉದ್ಯಮಕ್ಕೆ ಸದ್ಯಕ್ಕೆ ಯಾವುದೇ ದೊಡ್ಡಪ್ರ,ಮಾಣದ ಹಾನಿಯಾಗಿಲ್ಲ. ಹೆಚ್ಚಾಗಿ ಸ್ಥಳೀಯ ಮಾರುಕಟ್ಟೆಗಳನ್ನೆ ಅವಲಂಭಿಸಿರುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ರಫ್ತು ಮಾರ್ಗಗಳು ಬದಲಾಗಿದ್ದರೂ, ರಫ್ತು ಪ್ರಮಾಣವು ಈ ಹಿಂದನಷ್ಟೆಯೇ ಇದೆ. ಪರಿಸ್ಥಿತಿ ಮುಂದುವರಿದರೆ, ಪೆಟ್ರೋಲ್-ಡೀಸಲ್‌ಗಳ ದರ ಏರಿಕೆಯಾದರೆ, ರಫ್ತು ದರ ಏರಿಕೆಯಾಗುತ್ತಿದೆ. ಇದು ಇಲಾಖೆಗೆ ನಷ್ಟವನ್ನುಂಟು ಮಾಡಲಿದೆ," ಎಂದರು.

ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಕೃತಕ ರೇಷ್ಮೆ (Polyester) ತಯಾರಿಕೆಗೆ ಬೇಕಾದ ಪೆಟ್ರೋಕೆಮಿಕಲ್ ವಸ್ತುಗಳ ಬೆಲೆ ಶೇ. 15 ರಿಂದ 20 ರಷ್ಟು ಹೆಚ್ಚಾಗಿದೆ. ಇದು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳೊಂದಿಗೆ ಸ್ಪರ್ಧಿಸಲು ಭಾರತಕ್ಕೆ ಕಷ್ಟವಾಗುತ್ತಿದೆ. ಸಿದ್ಧ ಉಡುಪುಗಳ ಉತ್ಪಾದನೆಗೆ ಹೆಸರಾಗಿರುವ ಬೆಂಗಳೂರು ಸಹ ಯುದ್ಧದ ಬಿಸಿಯನ್ನು ಎದುರಿಸುತ್ತಿದೆ.

ರಫ್ತು ಮಾರ್ಗಗಳು ಬದಲು

ಅರಬ್ ದೇಶಗಳ ಸಂಘರ್ಷದಿಂದಾಗಿ ಕೆಂಪು ಸಮುದ್ರದ (Red Sea) ಹಡಗು ಮಾರ್ಗಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಈ ಹಿಂದೆ ಸುಯೆಜ್ ಕಾಲುವೆಯ ಮೂಲಕ ಸುಲಭವಾಗಿ ಯುರೋಪ್ ತಲುಪುತ್ತಿದ್ದ ಭಾರತೀಯ ಹಡಗುಗಳು, ಈಗ ಆಫ್ರಿಕಾ ಖಂಡವನ್ನು ಸುತ್ತಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬದಲಾವಣೆಯಿಂದಾಗಿ ಸಾಗಣೆ ದೂರ ಸುಮಾರು 6 ಸಾವಿರ ಕಿಲೋಮೀಟರ್‌ಗಳಷ್ಟು ಹೆಚ್ಚಾಗಿದ್ದು, ಸರಕು ತಲುಪುವ ಸಮಯ ಕನಿಷ್ಠ 20 ದಿನಗಳಷ್ಟು ವಿಳಂಬವಾಗುತ್ತಿದೆ. ಜತೆಗೆ ಒಂದು ಕಂಟೈನರ್‌ನ ಬಾಡಿಗೆ ಬೆಲೆಯು ಏರಿಕೆಯಾಗಿದ್ದು, ಶೇ. 30 ರಷ್ಟು ಹೆಚ್ಚುವರಿ ದರ ರಫ್ತುದಾರರಿಗೆ ಹೊರೆಯಾಗಿ ಪರಿಣಮಿಸಿದೆ.

ಇದರೊಂದಿಗೆ ಬಹುತೇಕ ವಿಮಾನಗಳು ಯುದ್ದಪೀಡಿತ ದೇಶಗಳ ಮೇಲೆ ಹಾರಾಟ ನಡೆಸುತ್ತಿಲ್ಲ. ಹೀಗಾಗಿ ವಿಮಾನದ ಮೂಲಕ ಸರಕು ರಫ್ತುಗೊಳಿಸಲು ಸಹ ಅಕ್ಕಪಕ್ಕದ ರಾಷ್ಟ್ರಗಳ ಮೂಲಕ ರವಾನಿಸಬೇಕಿದೆ. ವಿಮಾನದ ಮೂಲಕ ತುರ್ತಾಗಿ ಸರಕು ಕಳುಹಿಸಲು ಹೋದರೆ, ವಿಮಾನಗಳ ಮೂಲಕ ಸಾಗಾಣಿಗೆದರಗಳು ಪ್ರತಿ ಕೆ.ಜಿಗೆ 400ರ ಗಡಿ ದಾಟಿದ್ದು, ಲಾಭದ ಬದಲು ರಫ್ತುದಾರರಿಗೆ ನಷ್ಟವುಂಟಾಗುತ್ತಿದೆ.

ಮಧ್ಯಪ್ರಾಚ್ಯದ ವೈಮಾನಿಕ ಮಾರ್ಗಗಳು ಬಂದ್ ಆಗಿರುವುದರಿಂದ ಅಥವಾ ವಿಮಾನಯಾನ ಸಂಸ್ಥೆಗಳು (Emirates, Qatar Airways) ಸೇವೆ ಸ್ಥಗಿತಗೊಳಿಸಿರುವುದರಿಂದ ಬೆಂಗಳೂರು ಸೇರಿದಂತೆ ಹಲವು ಗಾರ್ಮೆಂಟ್ಸ್‌ ಹಬ್‌ಗಳ ಉತ್ಪನ್ನಗಳು ವಿಮಾನ ನಿಲ್ದಾಣಗಳಲ್ಲೇ ಸಿಲುಕಿಕೊಂಡಿವೆ. ಜಾಗತಿಕ ಬ್ರ್ಯಾಂಡ್‌ಗಳಾದ Zara, H&M ನಂತಹ ಸಂಸ್ಥೆಗಳಿಗೆ ಹೋಗಬೇಕಾದ ಸರಕುಗಳು ವಿಳಂಬವಾಗುತ್ತಿವೆ.

ಉದ್ಯೋಗದ ಮೇಲೆ ತೂಗುಗತ್ತಿ

ಕರ್ನಾಟಕದ ಗಾರ್ಮೆಂಟ್ಸ್ ವಲಯದಲ್ಲಿ ಲಕ್ಷಾಂತರ ಮಹಿಳೆಯರು ಉದ್ಯೋಗ ಮಾಡುತ್ತಿದ್ದಾರೆ. ರಫ್ತು ವಹಿವಾಟು ಇನ್ನಷ್ಟು ಕುಂಠಿತಗೊಂಡರೆ, ಕಂಪನಿಗಳು ಉತ್ಪಾದನೆಯನ್ನು ಕಡಿಮೆ ಮಾಡುತ್ತಿವೆ. ಇದು ಶಿಫ್ಟ್‌ಗಳ ಕಡಿತಕ್ಕೆ ಕಾರಣವಾಗಿದ್ದು, ಕೂಲಿ ಕಾರ್ಮಿಕರ ಮಾಸಿಕ ಆದಾಯದ ಮೇಲೆ ಹೊಡೆತ ಬಿದ್ದಿದೆ. ಇದರ ಜತೆಗೆ, ರಫ್ತು ಮಾಡಿದ ಸರಕುಗಳಿಗೆ ಬರಬೇಕಾದ ಹಣವು ಮಧ್ಯಪ್ರಾಚ್ಯದ ಬ್ಯಾಂಕಿಂಗ್ ಬಿಕ್ಕಟ್ಟಿನಿಂದಾಗಿ ವಿಳಂಬವಾಗುತ್ತಿದ್ದು, ಸಣ್ಣ ಉದ್ದಿಮೆದಾರರು (MSME) ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಿವೆ ಎಂದು ವಿಶ್ಲೇಷಿಸಲಾಗಿದೆ.

Read More
Next Story