
ಬೌದ್ಧಿಕ ಸವಾಲು ಗೆದ್ದ ಬಾಡಿಬಿಲ್ಡರ್: ಅಮ್ಮನ ಮಮತೆಯ ಪಟ್ಟು; ಒಲಿಯಿತು ವಿಶ್ವ ʼಪಟ್ಟʼ
ಯಶಸ್ ಬಾಲ್ಯವು ಇತರ ಸಾಮಾನ್ಯ ಮಕ್ಕಳಂತೆಯೇ ಇರಬಹುದೆಂದು ತಾಯಿ ಸಹನಾ ಭಾವಿಸಿದ್ದರು. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಯಶಸ್‌ಗೆ ಏಳು ವರ್ಷ ತುಂಬಿದಾಗ ಕಾಲದ ಸುಳಿ ಬದಲಾಯಿತು.
ದೇಹದಾರ್ಢ್ಯ ತರಬೇತುದಾರ ಸವೀನ್ ವಿ. ಮೆನನ್‌ಬದುಕು ಎಲ್ಲರಿಗೂ ಒಂದೇ ತರಹದ ಹಾದಿಯನ್ನು ರೂಪಿಸುವುದಿಲ್ಲ. ಸುಖ-ದುಃಖದ ನಡುವೆ ತಮ್ಮದೇ ಛಾಪು ಮೂಡಿಸಿ, ಸಮಾಜ ಬೆರಗಾಗುವಂತೆ ಮಾಡುವವರು ಕೆಲವೇ ಕೆಲವು ಮಂದಿ. ಅಂತಹ ಸಾಲಿನಲ್ಲಿ ನಿಲ್ಲುವ ಅಪರೂಪದ ವ್ಯಕ್ತಿತ್ವ ವಿ.ಯಶಸ್. ಹುಟ್ಟಿನಿಂದಲೇ ‘ಮಧ್ಯಮ ಮಟ್ಟದ ಬೌದ್ಧಿಕ ಕಲಿಕಾ ನ್ಯೂನತೆ’ಯಿಂದ ಬಳಲುತ್ತಿದ್ದರೂ, ಇಂದು ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರುವುದು ಸಾಧನೆಯೇ ಸರಿ. ಈ ಯಶೋಗಾಥೆಯ ಹಿಂದೆ ಒಬ್ಬ ತಾಯಿಯ ಮಮತೆ, ಅಚಲ ವಿಶ್ವಾಸವೂ ಅಡಗಿದೆ.
ಯಶಸ್ ಹುಟ್ಟಿದಾಗ ಮನೆಯಲ್ಲಿ ಸಂಭ್ರಮವಿತ್ತು. ಆತ ಬೆಳೆಯುತ್ತಾ ಹೋದಂತೆ ಸಣ್ಣಪುಟ್ಟ ತೊದಲುವಿಕೆ, ಕಲಿಕೆಯಲ್ಲಿನ ಹಿನ್ನಡೆ ಸಹಜವೆಂದೇ ಭಾವಿಸಲಾಗಿತ್ತು. ಯಶಸ್ ಬಾಲ್ಯವು ಇತರ ಸಾಮಾನ್ಯ ಮಕ್ಕಳಂತೆಯೇ ಇರಬಹುದೆಂದು ತಾಯಿ ಕೆ.ಸಹನಾ ಭಾವಿಸಿದ್ದರು. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಯಶಸ್‌ಗೆ ಏಳು ವರ್ಷ ತುಂಬಿದಾಗ ಕಾಲದ ಸುಳಿ ಬದಲಾಯಿತು. ವೈದ್ಯಕೀಯ ವರದಿಗಳು ‘ಮಧ್ಯಮ ಮಟ್ಟದ ಬೌದ್ಧಿಕ ಕಲಿಕಾ ನ್ಯೂನತೆ’ ಎಂದು ಹೇಳಿದಾಗ ಸಹನಾ ಅವರಿಗೆ ದಿಕ್ಕು ತೋಚದಂತಾಯಿತು. ಆದರೂ ಅವರು ಎದೆಗುಂದಲಿಲ್ಲ. ಮಗನನ್ನು ಸಾಮಾನ್ಯ ಶಾಲೆಗೆ ಕಳುಹಿಸುವ ಬದಲು, ಆತನ ಅಗತ್ಯಗಳಿಗೆ ತಕ್ಕಂತೆ ಇರುವ ಬುದ್ಧಿಮಾಂದ್ಯರ ಶಾಲೆ ಸ್ಪಾರ್ಕ್ ರೆಹಬಿಲಿಟೇಷನ್ ಸೆಂಟರ್‌ಗೆ ಸೆಂಟರ್‌ಗೆ ಸೇರಿಸಿದರು.
ಹೊಲಿಗೆ ಕೆಲಸದಲ್ಲಿ ತೊಡಗಿರುವ ಯಶಸ್ ತಾಯಿ ಕೆ.ಸಹನಾ
ಮಗನ ಏಳಿಗೆಗಾಗಿ ಸಹನಾ ಟೈಲರಿಂಗ್ ವ್ಯವಹಾರದ ಜತೆಗೆ ತಮ್ಮ ಕನಸು
ಗಳನ್ನು ಹೆಣೆಯತೊಡಗಿದರು. ಟೈಲರಿಂಗ್ ವ್ಯವಹಾರವನ್ನು ಮಾಡಿಕೊಂಡೇ ಮಗನ ಪ್ರತಿಯೊಂದು ಹೆಜ್ಜೆಯಲ್ಲೂ ಸಾಥ್ ನೀಡಿದರು. ಯಶಸ್‌ಗೆ ದೈಹಿಕವಾಗಿ ಸಶಕ್ತನನ್ನಾಗಿ ಮಾಡಲು ಮೊದಲು ಸೈಕಲಿಂಗ್ ಕಲಿಸಲಾಯಿತು. ನಂತರ ಈಜು ತರಬೇತಿ ಕೊಡಿಸಲಾಯಿತು. ಆದರೆ ಯಶಸ್‌ಗೆ ಇವುಗಳಲ್ಲಿ ಅಷ್ಟಾಗಿ ಮನಸ್ಸು ತೋರಲಿಲ್ಲ. ತಾಯಿ ಸಹನಾ ಅವರು ಮಗನ ಆಸಕ್ತಿ ಏನಿರಬಹುದು ಎಂದು ಹುಡುಕುತ್ತಲೇ ಇದ್ದರು. ತನ್ನ ಮಗನಿಗೆ ಏನಾದರೂ ಒಂದು ಕೌಶಲ್ಯ ಬೆಳೆಸಬೇಕು ಎಂದು ಹಂಬಲಿಸಿದ ಸಹನಾ, ಮೊದಲು ಆತನನ್ನು ಸೈಕಲಿಂಗ್ ತರಗತಿಗೆ ಸೇರಿಸಿದರು. ಆದರೆ ಯಶಸ್‌ಗೆ ಅಲ್ಲಿ ಆಸಕ್ತಿ ಮೂಡಲಿಲ್ಲ. ನಂತರ ಈಜು ಕಲಿಸಲು ಪ್ರಯತ್ನಿಸಿದರು. ಆದರೆ ಅಲ್ಲಿಯೂ ಯಶಸ್‌ಗೆ ತನ್ನ ಗುರಿ ಸಿಗಲಿಲ್ಲ.
ಕಬ್ಬಿಣದ ಹದದಲ್ಲಿ ಅರಳಿದ ಪ್ರತಿಭೆ
ವಿಧಿಯ ಆಟ ವಿಚಿತ್ರವಾದುದು. ಸಹನಾ ಅವರು ತಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಲು ನಿರ್ಧರಿಸಿದಾಗ, ಜತೆಯಲ್ಲಿ ಯಶಸ್ ಕೂಡ ಹೋದರು. ಲೋಹದ ಭಾರವನ್ನು ಎತ್ತುವಲ್ಲಿ, ಕಬ್ಬಿಣದ ಸದ್ದಿನಲ್ಲಿ ಯಶಸ್ ತನ್ನನ್ನು ತಾನು ಕಂಡುಕೊಂಡರು. ಸೈಕ್ಲಿಂಗ್ ಮತ್ತು ಈಜಿನಲ್ಲಿ ಕಾಣದ ಉತ್ಸಾಹ, ಆ ತೂಕದ ಯಂತ್ರಗಳನ್ನು ಎತ್ತುವಾಗ ಯಶಸ್ ಮುಖದಲ್ಲಿ ಕಂಡುಬಂತು. ಮಗನ ಆಸಕ್ತಿಯನ್ನು ಗುರುತಿಸಿದ ತಾಯಿ, ಅಲ್ಲಿಯೇ ಆತನಿಗೆ ತರಬೇತಿ ಕೊಡಿಸಲು ನಿರ್ಧರಿಸಿದರು. ಆದರೆ, ಒಬ್ಬ ಬೌದ್ಧಿಕ ನ್ಯೂನತೆ ಇರುವ ಯುವಕನಿಗೆ ಬಾಡಿಬಿಲ್ಡಿಂಗ್ ತರಬೇತಿ ನೀಡುವುದು ತರಬೇತುದಾರರಿಗೂ ದೊಡ್ಡ ಸವಾಲಾಗಿತ್ತು. ಸೂಚನೆಗಳನ್ನು ಅರ್ಥಮಾಡಿಕೊಳ್ಳುವುದು, ವ್ಯಾಯಾಮದ ಭಂಗಿಗಳನ್ನು ಸರಿಯಾಗಿ ಮಾಡುವುದು ಯಶಸ್‌ಗೆ ಸುಲಭವಾಗಿರಲಿಲ್ಲ. ಸೂಚನೆಗಳನ್ನು ಪದೇ ಪದೇ ಹೇಳಬೇಕಿತ್ತು, ಭಂಗಿಗಳನ್ನು ಸರಿಪಡಿಸಲು ಗಂಟೆಗಟ್ಟಲೆ ಶ್ರಮಿಸಬೇಕಿತ್ತು. ಸಾಮಾನ್ಯ ವ್ಯಕ್ತಿಗೆ ಐದು ನಿಮಿಷದಲ್ಲಿ ಅರ್ಥವಾಗುವ ವಿಷಯ ಯಶಸ್‌ಗೆ ಮನವರಿಕೆ ಮಾಡಲು ದಿನಗಳೇ ಬೇಕಾಗುತ್ತಿದ್ದವು. ಆದರೆ, ತರಬೇತುದಾರರ ತಾಳ್ಮೆ ಅದ್ಭುತವನ್ನೇ ಸೃಷ್ಟಿಸಿತು. ಆತನ ದೇಹವು ಬಾಡಿಬಿಲ್ಡರ್‌ನಂತೆ ರೂಪುಗೊಳ್ಳತೊಡಗಿದೆ.
ಪುತ್ರ ವಿ.ಯಶಸ್ ಜತೆ ತಾಯಿ ಕೆ.ಸಹನಾ
ಈ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಯಶಸ್ ತಾಯಿ ಕೆ.ಸಹನಾ, ಯಶಸ್ ಹುಟ್ಟಿದಾಗ ಎಲ್ಲರಂತೆಯೇ ಸಾಮಾನ್ಯ ಮಗು ಎಂದೇ ಭಾವಿಸಲಾಗಿತ್ತು. ಆತ ಬೆಳೆಯುತ್ತಾ ಹೋದಂತೆ ಶಾಲೆಯಲ್ಲಿ ಓದುವಾಗ ಸ್ವಲ್ಪ ಹಿಂದೆ ಬೀಳುತ್ತಿದ್ದ. ಬಹುತೇಕ ಮಕ್ಕಳು ಆರಂಭದಲ್ಲಿ ಹೀಗೆಯೇ ಇರುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಯಶಸ್‌ಗೆ ಏಳು ವರ್ಷವಾದ ಬಳಿಕ ಕಹಿ ಸತ್ಯ ತಿಳಿಯಿತು. ಮಗು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದೆ ಎಂಬುದು. ಮಗ ಬುದ್ಧಿಮಾಂದ್ಯನಾಗಿದ್ದರಿಂದ ಆತನಲ್ಲಿರುವ ಪ್ರತಿಭೆಯನ್ನು ಗುರುತಿಸಲು ಕಷ್ಟಪಟ್ಟೇವು. ಮೊದಲು ಸೈಕಲಿಂಗ್ ಕಲಿಸಿದೆವು, ನಂತರ ಈಜು ಕಲಿಸುವ ಪ್ರಯತ್ನ ಮಾಡಿದೆವು. ಆದರೆ, ಅದರಲ್ಲಿ ಯಶಸ್‌ಗೆ ಮನಸ್ಸು ಬರಲಿಲ್ಲ, ಯಶಸ್ಸು ಸಿಗಲಿಲ್ಲ ಎಂದು ನೋವಿನಿಂದಲೇ ನುಡಿದರು.
ಆದರೆ ವಿಧಿಯಾಟ ಬೇರೆಯೇ ಇತ್ತು ಎನಿಸುತ್ತದೆ. ಆರೋಗ್ಯಕ್ಕಾಗಿ ಜಿಮ್‌ಗೆ ಹೋಗಲು ನಿರ್ಧರಿಸಿದಾಗ, ಜತೆಯಲ್ಲಿ ಬಂದ ಯಶಸ್‌ಗೆ ಅಲ್ಲಿನ ತೂಕ ಎತ್ತುವ ಯಂತ್ರಗಳ ಮೇಲೆ ಕುತೂಹಲ ಮೂಡಿತು. ಅದೇ ಅವನ ಬದುಕಿನ ಹೊಸ ಹಾದಿಯಾಯಿತು. ದೇಹದಾರ್ಡ್ಯ ತರಬೇತಿದಾರ ಸವೀನ್ ವಿ.ಮೆನನ್ ಅವರು ಮಗನಲ್ಲಿ ಬಾಡಿಬಿಲ್ಡಿಂಗ್ ಆಸಕ್ತಿ ಇರುವುದನ್ನು ಕಂಡು ತರಬೇತಿ ನೀಡುತ್ತಿದ್ದಾರೆ. ಆತನಿಗೆ ತರಬೇತಿ ನೀಡುತ್ತಿರುವ ಎಚ್.ಡಿ.ಸಪ್ತಮಿ ಮತ್ತು ಸವೀನ್ ಅವರ ಶ್ರಮವು ಇದರಲ್ಲಿ ಇದೆ ಎಂದು ಹೇಳಿದರು.
ಥೈಲ್ಯಾಂಡ್‌ನ ವೇದಿಕೆಯಲ್ಲಿ ಮೂಡಿದ ಭಾರತದ ಛಾಪು
ಯಶಸ್ ಅವರ ಈ ಪರಿವರ್ತನೆಯು ಅವರನ್ನು ಥೈಲ್ಯಾಂಡ್‌ನಲ್ಲಿ ಪಿಸಿಎ ಎಂಬ ಸಂಸ್ಥೆ ಆಯೋಜಿಸಿದ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರೆದೊಯ್ದಿತು. ಅಲ್ಲಿನ ‘ಮಿಕ್ಸೆಡ್ ಡಿಸಾಬಿಲಿಟಿ’ ವಿಭಾಗದಲ್ಲಿ ಸ್ಪರ್ಧಿಸಲು ಹೋದಾಗ ಯಶಸ್ ಕೇವಲ ಒಬ್ಬ ಸ್ಪರ್ಧಿಯಾಗಿರಲಿಲ್ಲ. ಬದಲಾಗಿ ದೇಶದ ಕೋಟ್ಯಂತರ ವಿಶೇಷ ಚೇತನರ ಆಶಾಕಿರಣವಾಗಿದ್ದರು. ಇಡೀ ಭಾರತದಿಂದ ಈ ವಿಭಾಗಕ್ಕೆ ಆಯ್ಕೆಯಾದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆ ಅವರದಾಯಿತು. ಥೈಲ್ಯಾಂಡ್‌ನ ಮಣ್ಣಿನಲ್ಲಿ ಯಶಸ್ ಮೂಡಿಸಿದ ಛಾಪು, ವಿಶ್ವ ಚಾಂಪಿಯನ್‌ಶಿಪ್‌ಗೆ ಅಧಿಕೃತ ಪ್ರವೇಶವನ್ನು ತಂದುಕೊಟ್ಟಿದೆ. ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಯು ಪುಕೆಟ್‌ನಲ್ಲಿ ನಡೆಯಲಿದ್ದು, ಸಿದ್ಧತೆ ನಡೆಸಲಾಗುತ್ತಿದೆ.
ಯಶಸ್‌ಗೆ ತರಬೇತಿ ನೀಡುತ್ತಿರುವ ತರಬೇತುದಾರರಾದ ಎಚ್.ಡಿ.ಸಪ್ತಮಿ
ಜಿಮ್ ತರಬೇತುದಾರರಾದ ಎಚ್.ಡಿ.ಸಪ್ತಮಿ ಮಾತನಾಡಿ, ಯಶಸ್‌ಗೆ ತರಬೇತಿ ನೀಡುವುದು ಅಷ್ಟು ಸುಲಭವಾಗಿರಲಿಲ್ಲ. ದೈಹಿಕ ಸಮಸ್ಯೆ ಇರುವವರಿಗೆ ತರಬೇತಿ ನೀಡುವುದು ಬೇರೆ. ಆದರೆ ಬುದ್ಧಿಮಾಂದ್ಯತೆ ಇರುವವರಿಗೆ ಕಲಿಸುವುದು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಇಂತಹ ಮಕ್ಕಳು ತುಂಬಾ 'ಮೂಡಿ' ಆಗಿರುತ್ತಾರೆ. ಅವರು ಯಾವಾಗ ಸಹಕರಿಸುತ್ತಾರೆ, ಯಾವಾಗ ಮುನಿಸಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆರಂಭದಲ್ಲಿ ನಮಗೂ ತುಂಬಾ ಕಷ್ಟವಾಗಿತ್ತು. ಆದರೆ ತಾಳ್ಮೆಯಿಂದ ಕೆಲಸ ಮಾಡಿದೆವು. ಇಂದು ಯಶಸ್ ಎಲ್ಲಾ ಮಾತುಗಳನ್ನು ಕೇಳುತ್ತಿದ್ದಾನೆ. ಕಳೆದ ಐದು ತಿಂಗಳುಗಳಿಂದ ಯಶಸ್ ಸತತವಾಗಿ ತರಬೇತಿ ಪಡೆಯುತ್ತಿದ್ದಾನೆ. ದೈಹಿಕ ಸಮಸ್ಯೆ ಇರುವವರು ವೇದಿಕೆ ಏರುವುದು ನೋಡಿದ್ದೇವೆ. ಆದರೆ ಬುದ್ಧಿಮಾಂದ್ಯತೆ ಇರುವ ಯುವಕರು ಹೋಗುವುದು ಕಷ್ಟಕರ. ಇದಕ್ಕೆ ಪ್ರತಿಯೊಬ್ಬರ ಸಹಕಾರವು ಅಗತ್ಯ ಇರುತ್ತದೆ ಎಂದು ಹೇಳಿದರು.
ಯಶಸ್‌ನ ಅಭ್ಯಾಸ ವೀಕ್ಷಿಸುತ್ತಿರುವ ದೇಹದಾರ್ಡ್ಯ ತರಬೇತುದಾರ ಸವೀನ್ ವಿ. ಮೆನನ್
ದೇಹದಾರ್ಡ್ಯ ತರಬೇತುದಾರ ಸವೀನ್ ವಿ. ಮೆನನ್ ಮಾತನಾಡಿ, ಯಶಸ್ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ. ಹಲವು ವಿಶೇಷ ಚೇತನರಿಗೆ ತರಬೇತಿ ನೀಡಿದ್ದೇನೆ. ಆದರೆ, ಬುದ್ಧಿಮಾಂದ್ಯತೆಯ ಯುವಕ ಮೊದಲ ಬಾರಿಗೆ ವಿಶ್ವಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಆಯ್ಕೆಯಾಗಿರುವುದು ಅತ್ಯಂತ ಸಂತೋಷದ ವಿಷಯ. ಇಂತಹ ವಿಶೇಷ ಮಕ್ಕಳಿಗೆ ವೇದಿಕೆ ರೂಪಿಸಿಕೊಡುವುದು ನಮಗೆ ಹೆಮ್ಮೆ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಯಶಸ್ ಇಂದು ಕೇವಲ ಒಬ್ಬ ದೇಹದಾರ್ಡ್ಯ ಸ್ಪರ್ಧಿಯಲ್ಲ, ಲಕ್ಷಾಂತರ ಬೌದ್ಧಿಕ ಚೇತನಗಳ ಪಾಲಿಗೆ ಕತ್ತಲಲ್ಲಿನ ದೀಪವಾಗಿದ್ದಾರೆ. ಭಾರತವನ್ನು ವಿಶ್ವ ವೇದಿಕೆಯಲ್ಲಿ ಪ್ರತಿನಿಧಿಸಲು ಸಜ್ಜಾಗುತ್ತಿರುವ ಯಶಸ್, ಈಗ ತನ್ನ ಗುರಿಯನ್ನು ವಿಶ್ವ ಚಾಂಪಿಯನ್‌ಶಿಪ್ ಪದಕದ ಮೇಲೆ ಇಟ್ಟಿದ್ದಾರೆ. ಬೌದ್ಧಿಕ ಕಲಿಕಾ ನ್ಯೂನತೆ ಎಂಬುದು ಸಾಧನೆಗೆ ಅಡ್ಡಿಯಲ್ಲ, ಅದು ಕೇವಲ ಒಂದು ಸಣ್ಣ ಅಡೆತಡೆ ಮಾತ್ರ ಎಂಬುದನ್ನು ಯಶಸ್ ಸಾಬೀತುಪಡಿಸಿದ್ದಾರೆ.

