
ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಬಿ.ವೈ. ರಾಘವೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಮೋದಿ ಸಂಪುಟ ಪುನರ್ ರಚನೆ: ಕರ್ನಾಟಕದಲ್ಲಿ ಜಾತಿ ಲೆಕ್ಕಾಚಾರ, ರಾಜ್ಯಾಧ್ಯಕ್ಷರ ಬದಲಾವಣೆಯ ಕುತೂಹಲ
ಸದ್ಯದ ಅಂಕಿಸಂಖ್ಯೆಗಳು ಹಾಗೂ ರಾಜಕೀಯ ಚಿತ್ರಣವನ್ನು ಗಮನಿಸುವುದಾದರೆ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಎನ್‌ಡಿಎ ಮೈತ್ರಿಕೂಟದ ಒಟ್ಟು 19 ಸಂಸದರು ಆಯ್ಕೆಯಾಗಿದ್ದಾರೆ.
ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ಪುನರ್ ರಚನೆ ಪ್ರಕ್ರಿಯೆ ಬಹುತೇಕ ಖಚಿತಗೊಂಡಿದೆ. ದೆಹಲಿ ಮಟ್ಟದಲ್ಲಿ ನಡೆಯುತ್ತಿರುವ ಈ ಮಹತ್ವದ ಬೆಳವಣಿಗೆಯು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹಾಗೂ ವಿಶೇಷವಾಗಿ ಬಿಜೆಪಿ ಪಾಳೆಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಮುಂಬರುವ 2028ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ರಾಜ್ಯಕ್ಕೆ ಹೆಚ್ಚುವರಿ ಪ್ರಾತಿನಿಧ್ಯ ನೀಡುವ ಮೂಲಕ ಹೊಸ ಜಾತಿ ಸಮೀಕರಣಕ್ಕೆ ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಈ ಬದಲಾವಣೆಯು ರಾಜ್ಯದ ನಾಯಕರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಇದೀಗ ಕೆರಳಿದೆ.
ಹಾಲಿ ಸಂಪುಟದಲ್ಲಿ ಕರ್ನಾಟಕದ ಸ್ಥಾನಮಾನ
ಸದ್ಯದ ಅಂಕಿಸಂಖ್ಯೆಗಳು ಹಾಗೂ ರಾಜಕೀಯ ಚಿತ್ರಣವನ್ನು ಗಮನಿಸುವುದಾದರೆ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಎನ್‌ಡಿಎ ಮೈತ್ರಿಕೂಟದ ಒಟ್ಟು 19 ಸಂಸದರು ಆಯ್ಕೆಯಾಗಿದ್ದಾರೆ. ಇದರಲ್ಲಿ 17 ಮಂದಿ ಬಿಜೆಪಿಯಿಂದ ಜಯಭೇರಿ ಬಾರಿಸಿದ್ದರೆ, ಇಬ್ಬರು ಜೆಡಿಎಸ್‌ನಿಂದ ಸಂಸತ್ ಪ್ರವೇಶಿಸಿದ್ದಾರೆ. ಪ್ರಸ್ತುತ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಒಟ್ಟು 71 ಸಚಿವರಿದ್ದಾರೆ. ಈ ಪೈಕಿ 30 ಮಂದಿ ಸಂಪುಟ ದರ್ಜೆ, 36 ಮಂದಿ ರಾಜ್ಯ ಖಾತೆ ಮತ್ತು 5 ಮಂದಿ ಸ್ವತಂತ್ರ ಖಾತೆ ಸಚಿವರಾಗಿದ್ದಾರೆ. ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರನ್ನು ಒಳಗೊಂಡಂತೆ ಒಟ್ಟು ಐದು ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಬಿಜೆಪಿಯ ಹಿರಿಯ ನಾಯಕ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈತ್ರಿಕೂಟದ ಕೋಟಾದಡಿ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರಿಗೂ ವರಿಷ್ಠರು ಮಣೆ ಹಾಕಿದ್ದಾರೆ. ವಿಶೇಷವೆಂದರೆ, ಈ ಐವರ ಪೈಕಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಷಿ ಅವರಿಗೆ ಮಾತ್ರ ಸಂಪುಟ ದರ್ಜೆಯ (ಕ್ಯಾಬಿನೆಟ್) ಉನ್ನತ ಸ್ಥಾನಮಾನ ನೀಡಲಾಗಿದೆ.
ಹೆಚ್ಚುವರಿ ಸಚಿವ ಸ್ಥಾನ: ದಲಿತ ಮತ್ತು ಒಬಿಸಿ ಲೆಕ್ಕಾಚಾರ
2028ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ಬಾರಿಯ ಸಂಪುಟ ಪುನರ್ ರಚನೆಯಲ್ಲಿ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ಒಂದು ಅಥವಾ ಎರಡು ಸಚಿವ ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ಪ್ರಮುಖವಾಗಿ, ಹಾಲಿ ಕೇಂದ್ರ ಸಂಪುಟದಲ್ಲಿ ಕರ್ನಾಟಕದ ದಲಿತ (ವಿಶೇಷವಾಗಿ ಎಡಗೈ) ಮತ್ತು ಹಿಂದುಳಿದ ವರ್ಗಕ್ಕೆ (ಓಬಿಸಿ) ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ದೊಡ್ಡ ಕೊರತೆಯಿದೆ. ಎರಡನೇ ಅವಧಿಯ ಮೋದಿ ಸಂಪುಟದಲ್ಲಿ ರಾಜ್ಯದ ಇಬ್ಬರು ದಲಿತ ನಾಯಕರಿಗೆ ಸಚಿವ ಸ್ಥಾನ ಒಲಿದಿತ್ತು. ಚುನಾವಣಾ ದೃಷ್ಟಿಯಿಂದ ಈ ವರ್ಗಗಳಿಗೆ ಆದ್ಯತೆ ನೀಡಲೇಬೇಕು ಎಂದು ಹೈಕಮಾಂಡ್ ತೀರ್ಮಾನಿಸಿದರೆ, ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಪಿ.ಸಿ. ಮೋಹನ್ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ಹೊಸ ಸಮೀಕರಣ: ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಹಾಗೂ ರಾಘವೇಂದ್ರಗೆ ಒಲಿಯಲಿದೆಯೇ ಲಕ್?
ರಾಜ್ಯ ಬಿಜೆಪಿಯಲ್ಲಿ ಈಗ ಬಹುದೊಡ್ಡ ಚರ್ಚೆಯಾಗುತ್ತಿರುವುದು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಬದಲಾವಣೆ ಹಾಗೂ ಕೇಂದ್ರ ಸಚಿವ ಸ್ಥಾನದ ಜಾತಿ ಹೊಂದಾಣಿಕೆಯ ಬಗ್ಗೆ. ಕರ್ನಾಟಕದಲ್ಲಿ ನಿರ್ಣಾಯಕವಾಗಿರುವ ಲಿಂಗಾಯತ ಮತಬ್ಯಾಂಕ್ ಹಿನ್ನೆಲೆಯಲ್ಲಿ ಈ ಸಮುದಾಯಕ್ಕೆ ಮತ್ತಷ್ಟು ಒತ್ತು ನೀಡುವ ಚಿಂತನೆ ವರಿಷ್ಠರಲ್ಲಿದೆ. ವಿ. ಸೋಮಣ್ಣ ಅವರು ಸದ್ಯ ಲಿಂಗಾಯತ ಕೋಟಾದಡಿಯಲ್ಲೇ ಸಚಿವರಾಗಿದ್ದರೂ, ಅವರಿಗೆ ಕ್ಯಾಬಿನೆಟ್ ದರ್ಜೆಯಿಲ್ಲ. ಹೀಗಾಗಿ ಲಿಂಗಾಯತ ಸಮುದಾಯದ ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡುವ ಲೆಕ್ಕಾಚಾರ ಬಂದರೆ, ಬಿ.ವೈ. ರಾಘವೇಂದ್ರ ಅವರ ಹೆಸರು ಮೊದಲ ಪಟ್ಟಿಯಲ್ಲಿ ಬರುತ್ತದೆ.
ಅಧಿಕಾರದ ಸಮತೋಲನ
ಆದರೆ ಇಲ್ಲೊಂದು ದೊಡ್ಡ ಅಧಿಕಾರದ ಸಮತೋಲನದ ಸಮಸ್ಯೆ ಎದುರಾಗುತ್ತದೆ. ಒಂದೆಡೆ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದಾರೆ, ಮತ್ತೊಂದೆಡೆ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ 'ಸಂಸದೀಯ ಮಂಡಳಿ'ಯ ಸದಸ್ಯರಾಗಿದ್ದಾರೆ. ಇದರ ನಡುವೆ ರಾಘವೇಂದ್ರ ಅವರಿಗೂ ಸಚಿವ ಸ್ಥಾನ ನೀಡಿದರೆ, ಪಕ್ಷದಲ್ಲಿ ಸಮತೋಲನ ಕಾಯ್ದುಕೊಂಡಂತೆ ಆಗುವುದಿಲ್ಲ ಎಂಬ ಅಸಮಾಧಾನವಿದೆ.
ಹೀಗಾಗಿ, ಒಂದು ವೇಳೆ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಆ ಹುದ್ದೆಯನ್ನು 'ಒಕ್ಕಲಿಗ' ಸಮುದಾಯಕ್ಕೆ ನೀಡಿದರೆ, ಆಗ ಲಿಂಗಾಯತ ಸಮುದಾಯದ ಬಿ.ವೈ. ರಾಘವೇಂದ್ರ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಲು ಹಾದಿ ಸುಗಮವಾಗಲಿದೆ. ಇದೇ ವೇಳೆ, ಶೋಭಾ ಕರಂದ್ಲಾಜೆ ಅಥವಾ ವಿ. ಸೋಮಣ್ಣ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಗಳಿವೆ ಎಂಬ ಗಂಭೀರ ಚರ್ಚೆಗಳೂ ನಡೆಯುತ್ತಿವೆ. ವಿಜಯೇಂದ್ರ ಬದಲಾವಣೆ ಆದರೆ ಮಾತ್ರ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗುತ್ತಿದೆ. ಆದರೆ, ಇಂತಹ ಷರತ್ತಿಗೆ ಯಡಿಯೂರಪ್ಪ ಅಥವಾ ವಿಜಯೇಂದ್ರ ಒಪ್ಪುತ್ತಾರಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಮತ್ತೆ ರಾಜ್ಯ ರಾಜಕಾರಣದತ್ತ ಎಚ್‌ಡಿಕೆ ಒಲವು: ಭವಿಷ್ಯದ ಹೆಜ್ಜೆಗಳೇನು?
ಈ ಮೈತ್ರಿ ಲೆಕ್ಕಾಚಾರಗಳ ಮಧ್ಯೆ, ಕೇಂದ್ರ ಸಂಪುಟದಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಲು ನಿರ್ಧರಿಸಿದ್ದಾರೆ ಎಂಬುದು ಮತ್ತೊಂದು ಪ್ರಮುಖ ವಿಚಾರ. ತಮ್ಮ ರಾಜಕೀಯ ಆಸಕ್ತಿಯ ಬಗ್ಗೆ ಅವರು ಈಗಾಗಲೇ ಪ್ರಧಾನಿ ಮೋದಿ ಅವರ ಬಳಿ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸದ್ಯಕ್ಕೆ ಅವರು ದಿಢೀರ್ ಆಗಿ ಕೇಂದ್ರ ಸಂಪುಟದಿಂದ ಹೊರಬರುವ ಸಾಧ್ಯತೆ ತೀರಾ ವಿರಳ. ಮೂಲಗಳ ಖಚಿತ ಮಾಹಿತಿಯ ಪ್ರಕಾರ, ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿರುವಾಗ ಕುಮಾರಸ್ವಾಮಿಯವರು ಕೇಂದ್ರ ಸಚಿವ ಸ್ಥಾನದಿಂದ ಹೊರಬಂದು, ಸಂಪೂರ್ಣವಾಗಿ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

