ಕರುನಾಡ ಕಣ್ಣಲ್ಲಿ ಪಂಚರಾಜ್ಯ ಚುನಾವಣೆ| ʼಮೇಕೆದಾಟುʼ: ತಮಿಳುನಾಡು ಚುನಾವಣಾ ಕಣದಲ್ಲಿ ಪ್ರಚಾರದ ಅಸ್ತ್ರ!
x
ಮೇಕೆದಾಟು

ಕರುನಾಡ ಕಣ್ಣಲ್ಲಿ ಪಂಚರಾಜ್ಯ ಚುನಾವಣೆ| ʼಮೇಕೆದಾಟುʼ: ತಮಿಳುನಾಡು ಚುನಾವಣಾ ಕಣದಲ್ಲಿ ಪ್ರಚಾರದ ಅಸ್ತ್ರ!

ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಮೇಕೆದಾಟು ಯೋಜನೆ ಮತ್ತೆ ಮುನ್ನೆಲೆಗ ಬಂದಿದೆ. ದ್ರಾವಿಡ ಪಕ್ಷಗಳು ಕಾವೇರಿ ಡೆಲ್ಟಾ ಮತಗಳನ್ನು ಸೆಳೆಯಲು ಯೋಜನೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ.


Click the Play button to hear this message in audio format

ಕಾವೇರಿ ನದಿ ಕೇವಲ ಜಲಮೂಲವಲ್ಲ, ಕರ್ನಾಟಕ ಹಾಗೂ ತಮಿಳುನಾಡಿನ ಭಾವನಾತ್ಮಕ ವಿಷಯ. ಪ್ರತಿ ಚುನಾವಣೆಯಲ್ಲೂ ರಾಜಕೀಯ ಅಸ್ತಿತ್ವದ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಪ್ರಸ್ತುತ, ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಬಿಸಿ ತಾರಕಕ್ಕೇರಿದೆ. ಅಲ್ಲಿನ ಚುನಾವಣಾ ಕಣದಲ್ಲಿ ಕರ್ನಾಟಕದ ಮೇಕೆದಾಟು ಯೋಜನೆಯು ರಾಜಕೀಯ ದಾಳವಾಗಿ ಮಾರ್ಪಟ್ಟಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕು ವ್ಯಾಪ್ತಿಯಲ್ಲಿ ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳ ಒಂಟಿಗುಂಡ್ಲು ಬಳಿ ಮೇಕೆದಾಟು ಸಮಾನಾಂತರ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ. ಇದೀಗ ಯೋಜನೆಗೆ ಉಭಯ ರಾಜ್ಯಗಳ ರಾಜಕೀಯ ಮೇಲಾಟದಿಂದಲೇ ಗ್ರಹಣ ಹಿಡಿಯುವ ಸಾಧ್ಯತೆಗಳು ದಟ್ಟವಾಗಿವೆ.

ಉಭಯ ರಾಜ್ಯಗಳ ವಾದವೇನು?

1960-70ರ ದಶಕದಲ್ಲಿ ಅಂದಿನ ಮೈಸೂರು ರಾಜ್ಯದಲ್ಲೇ ಕಾವೇರಿ ಕೊಳ್ಳದ ಹೆಚ್ಚುವರಿ ನೀರು ಸಂಗ್ರಹಿಸಲು ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವ ಚಿಂತನೆ ನಡೆದಿತ್ತು. ಆಗಿನ ಮೂಲ ಉದ್ದೇಶ ಕೇವಲ ವಿದ್ಯುತ್ ಉತ್ಪಾದನೆಯಾಗಿತ್ತು. ಈಗ ಕುಡಿಯುವ ನೀರಿನ ಉದ್ದೇಶಕ್ಕೆ ಮೇಕೆದಾಟು ಯೋಜನೆ ರೂಪಿಸಲು 2013ರಲ್ಲಿ ಕರ್ನಾಟಕ ಸರ್ಕಾರ DPR ಸಿದ್ಧಪಡಿಸಿತು. ಆದರೆ, ತಮಿಳುನಾಡು ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

2014ರಲ್ಲಿ ತಮಿಳುನಾಡು ಸರ್ಕಾರವು ಯೋಜನೆ ತಡೆಯುವಂತೆ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತು. ಅಂದಿನಿಂದ ಇಂದಿನವರೆಗೂ ಕಾನೂನು ಹೋರಾಟ ಮುಂದುವರಿದಿದೆ. ತಮಿಳುನಾಡು ವಿಧಾನಸಭಾ ಚುನಾವಣಾ ಸಂದರ್ಭ ಮತ್ತು ನಂತರದ ಅವಧಿಗಳಲ್ಲಿ ಮೇಕೆದಾಟು ವಿರುದ್ಧ ಹಲವು ಬಾರಿ ಸರ್ವಾನುಮತದ ನಿರ್ಣಯವನ್ನು ತಮಿಳುನಾಡು ಅಂಗೀಕರಿಸುತ್ತಾ ಬಂದಿದೆ.

ಕರ್ನಾಟಕಕ್ಕೆ ಇದು ಕುಡಿಯುವ ನೀರಿನ ಹಕ್ಕಿನ ಪ್ರಶ್ನೆಯಾದರೆ, ತಮಿಳುನಾಡಿಗೆ ಇದು ತನ್ನ ಕೃಷಿಯ ಹಿತಾಸಕ್ತಿ ಮತ್ತು ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿ ಮೇಕೆದಾಟು ಯೋಜನೆಯನ್ನು ತಮಿಳುನಾಡು ರಾಜ್ಯವು ಪ್ರತಿ ಹಂತದಲ್ಲಿಯೂ ವಿರೋಧಿಸುತ್ತಲೇ ಬರುತ್ತಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಸಲ್ಲಿಸಿರುವ ನೂತನ ಡಿಪಿಆರ್‌ ನಲ್ಲಿ ಯೋಜನೆಯ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಷ್ಟೇ ಬಳಕೆ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿತ್ತು. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ವಾರ್ಷಿಕವಾಗಿ ಕಾವೇರಿ ಮೂಲಕ ತಮಿಳುನಾಡಿಗೆ ಹರಿಸಬೇಕಿರುವ ನೀರು ಹರಿಸಲಾಗುವುದು ಎಂದು ಸ್ಪಷ್ಟವಾಗಿ ಉಲ್ಲೆಖಿಸಿದೆ. ಹೀಗಿದ್ದರೂ, ತಮಿಳುನಾಡು, ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಲೇ ಇದೆ. ಈ ಹಿಂದಿನ ತಮಿಳುನಾಡು ಚುನಾವಣೆಯಲ್ಲಿ ಮೇಕೆದಾಟು ಯೋಜನೆಯನ್ನು ವಿರೋಧಿಸಿದ್ದರಿಂದಲೇ ಡಿಎಂಕೆ ಪಕ್ಷದ ಗೆಲುವಿನ ಕಾರಣವಾಗಿತ್ತು. ಇಂದಿಗೂ ಸಹ ಅದೇ ವಿರೋಧವನ್ನೇ ತಮಿಳುನಾಡು ರಾಜಕೀಯ ಪಕ್ಷಗಳು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿವೆ.

ಕಾವೇರಿ ಅತ್ಯಂತ ಸೂಕ್ಷ್ಮ ವಿಚಾರ

ತಮಿಳುನಾಡಿನ ರಾಜಕಾರಣದಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ಯಾವುದೇ ರಾಜಕೀಯ ಶಕ್ತಿಗಾದರೂ ಕಾವೇರಿ ವಿಚಾರ ಅತ್ಯಂತ ಸೂಕ್ಷ್ಮವಾದದ್ದು. ಅಲ್ಲಿನ ಕಾವೇರಿ ಡೆಲ್ಟಾ ಜಿಲ್ಲೆಗಳಾದ ತಂಜಾವೂರು, ತಿರುವರೂರು, ನಾಗಪಟ್ಟಣಂ ಮುಂತಾದ ಭಾಗದ ರೈತರ ಮತಗಳು ಅಧಿಕಾರದ ಗದ್ದುಗೆ ಏರಲು ಅತ್ಯಂತ ನಿರ್ಣಾಯಕ. ಹೀಗಾಗಿ, ಚುನಾವಣಾ ಕಣದಲ್ಲಿರುವ ಪ್ರತಿಯೊಂದು ಪಕ್ಷವೂ 'ಕರ್ನಾಟಕಕ್ಕೆ ಒಂದೇ ಒಂದು ಹನಿ ಹೆಚ್ಚುವರಿ ನೀರು ಬಿಡುವುದಿಲ್ಲ. ಮೇಕೆದಾಟು ಅಣೆಕಟ್ಟು ಕಟ್ಟಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ' ಎಂಬ ಘೋಷಣೆಯನ್ನೇ ಪ್ರಚಾರ ಅಸ್ತ್ರವನ್ನಾಗಿ ಮಾಡಿಕೊಂಡಿವೆ.

ಒಂದು ವೇಳೆ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸದಿದ್ದರೆ ರೈತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾದ ಭೀತಿ ಅಲ್ಲಿನ ನಾಯಕರಲ್ಲಿದೆ. ಆದ್ದರಿಂದ, ಕಾವೇರಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರ ನಿರಂತರವಾಗಿ ನಡೆಯುತ್ತಿದೆ.

ಒಂದು ಕಡೆ ತಮಿಳುನಾಡು ಕೇವಲ ರಾಜಕೀಯ ಲಾಭಕ್ಕಾಗಿ ಮತ್ತು ವೋಟ್ ಬ್ಯಾಂಕ್‌ಗಾಗಿ ಈ ಯೋಜನೆಯನ್ನು ವಿರೋಧಿಸುತ್ತಿದ್ದರೆ, ಇತ್ತ ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮತ್ತು ರಾಮನಗರ ಭಾಗದ ಜನತೆಗೆ ಯೋಜನೆ ಜೀವನಾಡಿಯಾಗಿದೆ. ಸುಮಾರು 9 ಸಾವಿರ ಕೋಟಿ ರೂ., ವೆಚ್ಚದಲ್ಲಿ ನಿರ್ಮಾಣವಾಗಲಿರುವ 67.16 ಟಿಎಂಸಿ ಸಾಮರ್ಥ್ಯದ ಈ ಅಣೆಕಟ್ಟು, ಕೇವಲ ಸಿಲಿಕಾನ್ ಸಿಟಿಯ ಕುಡಿಯುವ ನೀರಿನ ಬವಣೆ ನೀಗಿಸುವುದಷ್ಟೇ ಅಲ್ಲ, ಸುತ್ತಮುತ್ತಲಿನ ಅಂತರ್ಜಲ ಮಟ್ಟ ವೃದ್ಧಿಸುವ ಸಂಜೀವಿನಿಯಾಗಿದೆ.

ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ತಮಿಳುನಾಡಿಗೆ ಹಂಚಿಕೆಯಾಗಿರುವ 177.25 ಟಿಎಂಸಿ ನೀರನ್ನು ಹರಿಸಿದ ನಂತರ, ಮಳೆಗಾಲದಲ್ಲಿ ಸುಮ್ಮನೆ ಸಮುದ್ರ ಪಾಲು ಆಗುವ ಹೆಚ್ಚುವರಿ ನೀರನ್ನು ಮಾತ್ರ ಸಂಗ್ರಹಿಸಿ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳುವುದು ಕರ್ನಾಟಕದ ನಿಲುವು. ಕುಡಿಯುವ ನೀರಿನ ಯೋಜನೆಗೆ ನೆರೆಯ ರಾಜ್ಯದ ಒಪ್ಪಿಗೆ ಬೇಕಿಲ್ಲ ಎಂಬುದು ಕರ್ನಾಟಕದ ಕಾನೂನು ತಜ್ಞರ ವಾದ.

ಆದರೆ, ವಾಸ್ತವದ ನೆಲೆಗಟ್ಟಿನಲ್ಲಿ, ತಮಿಳುನಾಡಿನ ವಿಧಾನಸಭಾ ಚುನಾವಣೆ ಮುಕ್ತಾಯಗೊಳ್ಳುವವರೆಗೂ ಕೇಂದ್ರ ಸರ್ಕಾರವಾಗಲಿ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವಾಗಲಿ ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ತೋರುವ ಸಾಧ್ಯತೆಗಳು ತೀರಾ ಕಡಿಮೆ. ಕೇಂದ್ರದಲ್ಲಿರುವ ವ್ಯವಸ್ಥೆಯು ತಮಿಳುನಾಡಿನ ಮತದಾರರ ಕೆಂಗಣ್ಣಿಗೆ ಗುರಿಯಾಗುವ ಯಾವುದೇ ರಾಜಕೀಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಮುಂದಾಗುವುದಿಲ್ಲ.

ಹೀಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಯೋಜನೆಗೆ ಅಗತ್ಯವಿರುವ ಪರಿಸರ ಇಲಾಖೆಯ ಅನುಮತಿ ಪ್ರಕ್ರಿಯೆ ನನೆಗುದಿಗೆ ಬೀಳುವ ಆತಂಕ ಹೆಚ್ಚಾಗಿದೆ. ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ರಾಜ್ಯ ಸರ್ಕಾರವು ದೆಹಲಿ ಮಟ್ಟದಲ್ಲಿ ಕೇವಲ ಕಾನೂನು ಹೋರಾಟವಷ್ಟೇ ಅಲ್ಲ, ತೆರೆಮರೆಯ ಪ್ರಯತ್ನ ಮುಂದುವರಿಸಬೇಕಾದ ಅನಿವಾರ್ಯತೆಯೂ ಇದೆ. ಯೋಜನೆಗಾಗಿ ಕಾದು ಕುಳಿತಿರುವ ಕರ್ನಾಟಕದ ಜನರಿಗೆ ಸದ್ಯಕ್ಕಂತೂ ರಾಜಕೀಯದ ಕಣ್ಣಾಮುಚ್ಚಾಲೆ ನಿರಾಸೆ ತರಿಸುವುದರಲ್ಲಿ ಎರಡು ಮಾತಿಲ್ಲ.

ಯೋಜನೆ ವಿರೋಧಿಸಲು ಕಾರಣವೇನು?

ತಮಿಳುನಾಡು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಲು ಪ್ರಮುಖವಾಗಿ ಮೂರು ತಾಂತ್ರಿಕ ಮತ್ತು ರಾಜಕೀಯ ಕಾರಣಗಳನ್ನು ನೀಡುತ್ತಿದೆ.

ಕರ್ನಾಟಕವು ಮೇಕೆದಾಟು ಅಣೆಕಟ್ಟು ಕಟ್ಟುವ ಮೂಲಕ ಕಾವೇರಿ ಕೆಳಭಾಗದಲ್ಲಿರುವ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂಬುದು ಪ್ರಮುಖ ವಾದ. ಇದು ಕಾವೇರಿ ಜಲ ವಿವಾದ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಉಲ್ಲಂಘನೆ ಎಂದು ತಮಿಳುನಾಡು ವಾದಿಸುತ್ತಿದೆ. ಮೆಟ್ಟೂರು ಜಲಾಶಯಕ್ಕೆ ಬರುವ ನೀರಿನ ನೈಸರ್ಗಿಕ ಹರಿವಿಗೆ ಮೇಕೆದಾಟು ತಡೆಯೊಡ್ಡುತ್ತದೆ. ಇದರಿಂದ ತಮಿಳುನಾಡಿನ ಕಾವೇರಿ ಡೆಲ್ಟಾ ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಮೇಕೆದಾಟು ಡ್ಯಾಂ ಬಳಿಕ ಬಿಳಿಗುಂಡ್ಲು ಮಾಪನ ಕೇಂದ್ರಕ್ಕೆ ಬರುವ ನೀರು ಇಳಿಮುಖವಾಗುತ್ತದೆ ಎಂಬ ಆತಂಕವನ್ನು ತಮಿಳುನಾಡು ವ್ಯಕ್ತಪಡಿಸಿದೆ.

ಈ ಹಿಂದೆಯೂ ಚುನಾವಣಾ ಅಸ್ತ್ರವಾಗಿತ್ತು

2013-14ರಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯ ವಿಸ್ತೃತ ವರದಿ ಸಿದ್ಧಪಡಿಸಲು ಮುಂದಾದಾಗ, ಅದು 2016ರ ತಮಿಳುನಾಡು ಚುನಾವಣೆಯಲ್ಲಿ ದೊಡ್ಡ ವಿಷಯವಾಯಿತು. ಅಂದಿನ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು, "ಕರ್ನಾಟಕವು ಮೇಕೆದಾಟು ಅಣೆಕಟ್ಟು ಕಟ್ಟದಂತೆ ತಡೆಯಲು ನಾವು ಸುಪ್ರೀಂಕೋರ್ಟ್‌ನಲ್ಲಿ ಹೋರಾಡುತ್ತಿದ್ದೇವೆ" ಎಂದು ಪ್ರಚಾರ ಮಾಡಿದರು. ಕಾವೇರಿ ಡೆಲ್ಟಾ ಜಿಲ್ಲೆಗಳ ರೈತರಿಗೆ ತಾವು ಮಾತ್ರ ರಕ್ಷಕರು ಎಂಬಂತೆ ಬಿಂಬಿಸಿಕೊಂಡರು. ಇದರ ಫಲವಾಗಿ ಅವರು ಎರಡನೇ ಬಾರಿಗೆ ಸತತವಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರು.

2019ರ ಲೋಕಸಭಾ ಚುನಾವಣೆ ವೇಳೆ, ಮೇಕೆದಾಟು ವಿವಾದವು ರಾಷ್ಟ್ರೀಯ ಪಕ್ಷಗಳಿಗೂ ಬಿಸಿ ತುಪ್ಪವಾಗಿ ಪರಿಣಮಿಸಿತು. ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ "ಮೇಕೆದಾಟು ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡದಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ" ಎಂದು ಅಧಿಕೃತವಾಗಿ ಘೋಷಿಸಿದವು. ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು, ಕರ್ನಾಟಕದಲ್ಲಿ ಯೋಜನೆಯನ್ನು ಬೆಂಬಲಿಸಿ, ತಮಿಳುನಾಡಿನಲ್ಲಿ ಮೌನ ವಹಿಸುವ ಅಥವಾ ವಿರೋಧಿಸುವ ಇಕ್ಕಟ್ಟಿಗೆ ಸಿಲುಕಿದವು.

2021ರ ವಿಧಾನಸಭಾ ಚುನಾವಣೆ ವೇಳೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರು ಚುನಾವಣೆಗೆ ಮುನ್ನವೇ ಕಾವೇರಿ ಡೆಲ್ಟಾ ಭಾಗದಲ್ಲಿ ರೈತರನ್ನು ಸಂಘಟಿಸಿ, ಕರ್ನಾಟಕದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರು. "ನಮ್ಮ ಪಾಲಿನ ನೀರನ್ನು ಕರ್ನಾಟಕ ಕಳ್ಳತನ ಮಾಡುತ್ತಿದೆ" ಎಂಬ ಭಾವನಾತ್ಮಕ ಘೋಷಣೆಗಳನ್ನು ಬಳಸಲಾಯಿತು.

ಚುನಾವಣೆ ಸಮೀಪಿಸುತ್ತಿದ್ದಂತೆ ಅಂದಿನ ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರವು ಮೇಕೆದಾಟು ವಿರುದ್ಧ ಸರ್ವಪಕ್ಷ ಸಭೆ ಕರೆದು ನಿರ್ಣಯ ಅಂಗೀಕರಿಸಿತು. ಇದು ತಮಿಳುನಾಡಿನ ಎಲ್ಲ ಪಕ್ಷಗಳು ಈ ವಿಷಯದಲ್ಲಿ ಒಂದಾಗಿವೆ ಎಂಬ ಸಂದೇಶವನ್ನು ಮತದಾರರಿಗೆ ರವಾನಿಸಿತು.

Read More
Next Story