WomenS Day 2026| ಭಾವನೆಗಳ ಒಡತಿ ಮೇಘಾ ಜಕಾತಿ, ಕಾರ್ಟೂನ್‌ ಲೋಕದ ಅಶರೀರವಾಣಿ
x
ಕಂಠದಾನ ಕಲಾವಿದೆ ಮೇಘಾ ಜಕಾತಿ ಚಿತ್ರ: ರಘು ಆರ್‌.ಡಿ

Women'S Day 2026| ಭಾವನೆಗಳ ಒಡತಿ ಮೇಘಾ ಜಕಾತಿ, ಕಾರ್ಟೂನ್‌ ಲೋಕದ ಅಶರೀರವಾಣಿ

15 ವರ್ಷಗಳಿಂದ ಕಂಠದಾನ ಕಲಾವಿದೆಯಾಗಿ ಕಾರ್ಟೂನ್ ಲೋಕದಲ್ಲಿ ಹಿಡಿತ ಸಾಧಿಸಿರುವ ಮೇಘಾ ಜಕಾತಿ ಒಂದು ಲಕ್ಷಕ್ಕೂ ಅಧಿಕ ಆನಿಮೇಷನ್ ಸಂಚಿಕೆಗಳಿಗೆ ದನಿಯಾಗಿದ್ದಾರೆ. ಅವರ ಪಯಣ ಕೇವಲ ವೃತ್ತಿಯಲ್ಲ, ಅದೊಂದು ಶಬ್ದಗಳ ತಪಸ್ಸು.


ಮಕ್ಕಳ ಜಗತ್ತಿನ ಅದ್ಭುತ ಲೋಕದಲ್ಲಿ 'ಡೋರಾ'ಳ ಮೋಡಿ ಇದೆ.. ಚೋಟಾ ಭೀಮ್‌ನ ಸಾಹಸವಿದೆ... ಪುಟಾಣಿ ಪ್ರಾಣಿಗಳು ಹರಟುತ್ತವೆ, ನಗಿಸುತ್ತವೆ. ಇವು ಕಾರ್ಟೂನ್‌ ಲೋಕದಲ್ಲಿ ಪುಟಾಣಿಗಳ ಮನ ಸೆಳೆವ ಕಾಮಿಕ್‌ಗಳು. ಇಂತಹ ಚಿತ್ರಗಳಲ್ಲಿ ಕನ್ನಡದ ದನಿಯೊಂದು ಅಶರೀರವಾಣಿಯಂತೆ ಕೇಳಿಬರುತ್ತವೆ. ಪರದೆ ಮೇಲಿನ ಬಣ್ಣದ ಗೊಂಬೆಗಳಿಗೆ ಜೀವ ತುಂಬುವ, ಅವುಗಳ ನಗು-ಅಳುವಿಗೆ ದನಿಯಾಗುವ ಆ ಅದೃಶ್ಯ ಶಕ್ತಿಯೇ ಕಂಠದಾನ ಕಲಾವಿದೆ ಮೇಘಾ ಜಕಾತಿ.

2026 ನೇ ಸಾಲಿನ ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ ಅತಿಥಿಯಾಗಿರುವ ಮೇಘಾ ಜಕಾತಿ ಅವರು ʼದ ಫೆಡರಲ್‌ ಕರ್ನಾಟಕʼದ ಜತೆ ಮುಕ್ತವಾಗಿ ಮಾತನಾಡಿದ್ದಾರೆ. ಕಳೆದ 15 ವರ್ಷಗಳಿಂದ ಕಂಠದಾನ ಕಲಾವಿದೆಯಾಗಿ ಕಾರ್ಟೂನ್ ಲೋಕದ ಮೇಲೆ ಹಿಡಿತ ಸಾಧಿಸಿದ್ದಾರೆ. ಸರಿಸುಮಾರು ಒಂದು ಲಕ್ಷಕ್ಕೂ ಹೆಚ್ಚು ಆನಿಮೇಷನ್ ಸಂಚಿಕೆಗಳಿಗೆ ದನಿ ನೀಡಿರುವ ಮೇಘಾ ಜಕಾತಿ ಅವರ ಪಯಣವು ಕೇವಲ ವೃತ್ತಿಯಷ್ಟೇ ಅಲ್ಲ, ಅದೊಂದು ಶಬ್ದಗಳ ತಪಸ್ಸು.

ಸಿನಿಮಾಗೂ, ಕಾರ್ಟೂನ್‌ಗೂ ವ್ಯತ್ಯಾಸ

ಸಾಮಾನ್ಯ ಸಿನಿಮಾ ಡಬ್ಬಿಂಗ್‌ಗೂ, ಕಾರ್ಟೂನ್ ಡಬ್ಬಿಂಗ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಸಿನಿಮಾದಲ್ಲಿ ನಟರ ಮುಖಭಾವ ನೋಡಿ ದನಿ ನೀಡಬಹುದು. ಆದರೆ, ಕಾರ್ಟೂನ್ ಲೋಕದ ಪಾತ್ರಗಳಿಗೆ ಧ್ವನಿ ನೀಡುವುದು ಸುಲಭವಲ್ಲ. ಅಲ್ಲಿ ಧ್ವನಿ ಎಂಬುದು ಕೇವಲ ಸಂವಹನವಲ್ಲ, ಅದು ಪಾತ್ರದ ವ್ಯಕ್ತಿತ್ವ. ಮೇಘಾ ಜಕಾತಿ ಅವರು ಈ ಕಲೆಯಲ್ಲಿ ಸಿದ್ಧಹಸ್ತರು. ಒಂದು ಕ್ಷಣದಲ್ಲಿ ಪುಟ್ಟ ಮಗುವಿನ ಅತಿ ಮೃದುವಾದ ದನಿ, ಮರುಕ್ಷಣವೇ ಕುತಂತ್ರಿ ವಿಲನ್‌ನ ಕರ್ಕಶ ದನಿ, ಇನ್ನೊಂದೆಡೆ ಹಾಸ್ಯದ ಚಟಾಕಿ – ಹೀಗೆ ವೈವಿಧ್ಯಮಯ ‘ವಾಯ್ಸ್ ಮಾಡ್ಯುಲೇಷನ್’ ಮೂಲಕ ಅವರು ಅಚ್ಚರಿ ಮೂಡಿಸುತ್ತಾರೆ.

ಒಂದು ಲಕ್ಷಕ್ಕೂ ಅಧಿಕ ಸಂಚಿಕೆಗಳಿಗೆ ದನಿ ನೀಡುವುದೆಂದರೆ ಅದು ಕೇವಲ ಪರಿಶ್ರಮವಲ್ಲ, ಶಬ್ದಗಳ ಮೇಲೆ ಅವರಿಗಿರುವ ಅಪ್ರತಿಮ ಹಿಡಿತ. ಇವರ ದನಿಯ ಏರಿಳಿತಗಳೇ ಕನ್ನಡದ ಕಾರ್ಟೂನ್ ಚಾನೆಲ್‌ಗಳ ಜೀವಾಳವಾಗಿವೆ.

ಕಂಠದಾನ ಮಾಡುತ್ತಿರುವ ಮೇಘಾ ಜಕಾತಿ ಚಿತ್ರ: ರಘು ಆರ್‌.ಡಿ

ಮನರಂಜನೆ ಕ್ಷೇತ್ರದ ಹಲವು ವಲಯದಲ್ಲಿ ಕಾರ್ಯ

ಕಾರ್ಟೂನ್ ಲೋಕದ ಯಶಸ್ಸಿನ ಜೊತೆಗೆ ಮೇಘಾ ಅವರು 1,200ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಸಾವಿರಾರು ಧಾರಾವಾಹಿಗಳಿಗೆ ದನಿಯಾಗಿದ್ದಾರೆ. ಮೇಘಾ ಜಕಾತಿ ಕೇವಲ ಕಂಠದಾನ ಕಲಾವಿದೆ ಅಲ್ಲ, ಬದಲಿಗೆ ಅವರು ನಟನೆ, ಬರವಣಿಗೆ, ಮತ್ತು ನಿರ್ದೇಶನದ ವಿಭಾಗಗಳಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿರುವ ಅಪ್ರತಿಭೆ.

ಬಿಗ್ ಬಾಸ್ ಕನ್ನಡದಂತಹ ಬೃಹತ್ ರಿಯಾಲಿಟಿ ಶೋಗಳಲ್ಲಿ ಟಾಸ್ಕ್ ಮ್ಯಾನೇಜರ್ ಆಗಿ ಮತ್ತು ಪ್ರೊಡಕ್ಷನ್ ತಂಡದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಕಲರ್ಸ್ ಕನ್ನಡ, ಜೀ ಕನ್ನಡದಂತಹ ವಾಹಿನಿಗಳ ಯಶಸ್ಸಿನ ಹಿಂದಿರುವ ತಾಂತ್ರಿಕ ತಂಡದ ಪ್ರಮುಖ ಕೊಂಡಿಯಾಗಿ ಶ್ರಮಿಸಿದ್ದಾರೆ. ಇದು ಅವರ ಸಂಘಟನಾ ಚಾತುರ್ಯ ಮತ್ತು ವೃತ್ತಿಪರತೆಗೆ ಸಾಕ್ಷಿಯಾಗಿದೆ. ಕಲಾ ರತ್ನ ಮತ್ತು ಗೋಲ್ಡನ್ ವಾಯ್ಸ್ ಪ್ರಶಸ್ತಿಗಳು ಅವರ 15 ವರ್ಷಗಳ ಸುದೀರ್ಘ ಶ್ರಮಕ್ಕೆ ಸಂದ ಗೌರವಗಳಾಗಿವೆ.

ಪ್ರಶಸ್ತಿ ಸ್ವೀಕರಿಸುತ್ತಿರುವ ಮೇಘಾ ಜಕಾತಿ

ಇವರ ಧ್ವನಿ ಶೈಲಿಯು ಮೃದು, ವೃತ್ತಿಪರ, ಭಾವನಾತ್ಮಕ ಮತ್ತು ಎನರ್ಜಿಟಿಕ್ ಆಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗಿನ ಯಾವುದೇ ಪಾತ್ರಕ್ಕೆ ಇವರು ದನಿ ನೀಡಬಲ್ಲರು. ಒಂದು ಲಕ್ಷ ಆನಿಮೇಷನ್ ಸಂಚಿಕೆಗಳೆಂದರೆ ಅದೊಂದು ಸಾಧನೆ. ಸ್ಟುಡಿಯೋದಲ್ಲಿ ಏಕಾಗ್ರತೆಯಿಂದ ಕೆಲಸ ಮಾಡುವ ಅವರ ಶಿಸ್ತು ಮೆಚ್ಚುವಂತದ್ದು. ಕೇವಲ ಕಲಾವಿದೆಯಾಗಿ ಮಾತ್ರವಲ್ಲದೆ ಮನರಂಜನಾ ಕ್ಷೇತ್ರದ ವಿವಿಧ ಆಯಾಮಗಳ ಅರಿವಿರುವುದು ಅವರಿಗೆ ಅವಕಾಶಗಳು ಲಭಿಸಲು ಸಹಕಾರಿಯಾಗಿದೆ.

ಕಾಸ್ಟಿಂಗ್‌ ಕೌಚ್‌ ಎಲ್ಲಾ ಕ್ಷೇತ್ರದಲ್ಲೂ ಇದೆ

ಸಿನಿಮಾ ಕ್ಷೇತ್ರದ ಕರಾಳ ಮುಖಗಳು ಮತ್ತು ಮಹಿಳೆಯರ ಸ್ಥಾನಮಾನದ ಬಗ್ಗೆ ಅತ್ಯಂತ ಗಂಭೀರ ಮತ್ತು ವಸ್ತುನಿಷ್ಠವಾದ ಅಭಿಪ್ರಾಯಗಳನ್ನು ಮೇಘಾ ಜಕಾತಿ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಪಾರ ಪ್ರತಿಭಾವಂತ ಮಹಿಳೆಯರು ಇದ್ದಾರೆ. ಆದರೆ ಅವರಿಗೆ ಸಿಗಬೇಕಾದ ಅವಕಾಶಗಳು ಇನ್ನೂ ಸೀಮಿತವಾಗಿವೆ. ಕೇವಲ ಪರದೆಯ ಮೇಲೆ ಕಾಣಿಸಿಕೊಳ್ಳುವ ನಟಿಯರಿಗಷ್ಟೇ ಅಲ್ಲದೆ, ತೆರೆಯ ಹಿಂದೆ ಕೆಲಸ ಮಾಡುವ ಮಹಿಳಾ ತಂತ್ರಜ್ಞರಿಗೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ.

ಜೀವನದಲ್ಲಿ ಸಾಧನೆ ಮಾಡುವ ಛಲ ಇದ್ದರೆ ಅದಕ್ಕೆ ಮೊದಲು ಬೇಕಾದ ಅಡಿಪಾಯ ಗಟ್ಟಿಯಾಗಿ ಹಾಕಿಕೊಳ್ಳಬೇಕು. ಯಾವುದೇ ಯಶಸ್ಸು ರಾತ್ರೋರಾತ್ರಿ ಬರುವುದಿಲ್ಲ. ಅದಕ್ಕೆ ವರ್ಷಗಳ ಪರಿಶ್ರಮ, ಶಿಸ್ತು ಮತ್ತು ಕಲಿಕೆಯ ಹಸಿವು ಇರಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕರು ಶೀಘ್ರ ಯಶಸ್ಸಿಗಾಗಿ ಅಡ್ಡದಾರಿಗಳನ್ನು ಹುಡುಕುತ್ತಾರೆ. ಆದರೆ, ಸಾಧನೆಗೆ ಅಡ್ಡದಾರಿ ಹಿಡಿಯಬಾರದು. ಅಡ್ಡದಾರಿ ಹಿಡಿಯದಿದ್ದರೆ ತಡವಾಗಬಹುದಾದರೂ ಗಟ್ಟಿಯಾಗಿ ನಿಲ್ಲಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಂಠದಾನ ಮಾಡುತ್ತಿರುವ ಮೇಘಾ ಜಕಾತಿ

ಸಿನಿಮಾ ಕ್ಷೇತ್ರದಲ್ಲಿ ದಶಕಗಳಿಂದ ಚರ್ಚೆಯಾಗುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಅವರು, ಇದು ಕೇವಲ ಸಿನಿಮಾ ಕ್ಷೇತ್ರಕ್ಕೆ ಸೀಮಿತವಲ್ಲ, ಪ್ರತಿ ಕ್ಷೇತ್ರದಲ್ಲಿಯೂ ಇದೆ. ಮಹಿಳೆಯರು ಗಟ್ಟಿತನದಿಂದ ಸಮಸ್ಯೆಗಳನ್ನು ಎದುರಿಸುವುದನ್ನು ಕಲಿಯಬೇಕು. ಶೀಘ್ರವಾಗಿ ಹೆಸರು ಮತ್ತು ಹಣ ಗಳಿಸುವ ಆಸೆಗೆ ಬಿದ್ದು ಇಂತಹ ಬಲೆಗೆ ಬಿದ್ದರೆ, ಮುಂದಿನ ಜೀವನದ ದಾರಿಗಳು ಶಾಶ್ವತವಾಗಿ ಮುಚ್ಚಿಹೋಗುತ್ತವೆ ಎಂದು ಹೇಳಿದರು.

ಪ್ರತಿನಿತ್ಯ ಅಭ್ಯಾಸ ಅಗತ್ಯ

ತೆರೆಯ ಮೇಲಿರುವ ಪಾತ್ರವು ಓಡುತ್ತಿದ್ದರೆ, ನಾವೂ ಸ್ಟುಡಿಯೋದಲ್ಲಿ ನಿಂತ ಜಾಗದಲ್ಲೇ ಓಡುವ ಆತಂಕವನ್ನು, ಉಸಿರಾಟದ ಏರಿಳಿತವನ್ನು ಅನುಭವಿಸಬೇಕು. ಪಾತ್ರವು ಕೋಪದಲ್ಲಿದ್ದಾಗ ಕೈಕಾಲುಗಳ ಚಲನೆ ಮತ್ತು ಮುಖದ ಭಾವನೆಗಳು ಬದಲಾದಂತೆ, ಡಬ್ಬಿಂಗ್ ಕಲಾವಿದನ ದೇಹದ ಭಾಷೆಯೂ ಬದಲಾಗಬೇಕು. ದೇಹದ ಚಲನೆಯು ಧ್ವನಿಗೆ ಜೀವ ತುಂಬುತ್ತದೆ. ಪಾತ್ರವು ಅಳುವಾಗ ಶರೀರ ನಡುಗಿದರೆ ಮಾತ್ರ ಧ್ವನಿಯಲ್ಲಿ ಆ ಆರ್ದ್ರತೆ ಮೂಡಲು ಸಾಧ್ಯ. ಈ ದೇಹದ ಭಾಷೆ ಇಲ್ಲದಿದ್ದರೆ ಧ್ವನಿಯು ಕೇವಲ ಒಂದು ಯಾಂತ್ರಿಕ ಶಬ್ದವಾಗಿ ಉಳಿಯುತ್ತದೆ. ಪ್ರತಿನಿತ್ಯ ಅಭ್ಯಾಸ ಮಾಡುವುದು ಕಂಠದಾನ ಕಲಾವಿದನ ಧರ್ಮ. ಧ್ವನಿಯನ್ನು ಪಳಗಿಸುವುದು, ವಿಭಿನ್ನ ಪಾತ್ರಗಳಿಗೆ ತಕ್ಕಂತೆ ಶಬ್ದಗಳನ್ನು ಹೊರಹಾಕುವ ಕೌಶಲ್ಯ ಸಿದ್ಧಿಸುವುದು ನಿರಂತರ ಅಭ್ಯಾಸದಿಂದ ಮಾತ್ರ. ವಿಚಿತ್ರ ಧ್ವನಿಗಳನ್ನು ಸೃಷ್ಟಿಸಲು ಗಂಟಲಿನ ಸ್ನಾಯುಗಳ ಮೇಲೆ ಹಿಡಿತವಿರಬೇಕು. ದಿನನಿತ್ಯದ ಓದು, ಸ್ಪಷ್ಟ ಉಚ್ಚಾರಣೆ ಮತ್ತು ಉಸಿರಾಟದ ನಿಯಂತ್ರಣದ ಅಭ್ಯಾಸ ಅತ್ಯಗತ್ಯ ಎಂದು ಹೇಳಿದರು.

ಸ್ಟುಡಿಯೋ ಮಾಲೀಕರ ಜತೆ ಕಂಠದಾನ ಕಲಾವಿದೆ ಮೇಘಾ ಜಕಾತಿ

ಕಂಠದಾನ ಕ್ಷೇತ್ರಕ್ಕೆ ಎಐ ಕಂಟಕ

ಡಬ್ಬಿಂಗ್ ಎಂಬುದು ಕೇವಲ ಶಬ್ದವಲ್ಲ, ಅದು ಭಾವನೆಗಳ ಅನುವಾದ. ಮನುಷ್ಯನ ದನಿಯಲ್ಲಿರುವ ನಗು, ಅಳು, ವ್ಯಂಗ್ಯ ಅಥವಾ ನಡುಕವನ್ನು ಕೃತಕ ಬುದ್ಧಿಮತ್ತೆ (ಎಐ) ಸಂಪೂರ್ಣವಾಗಿ ನಕಲು ಮಾಡಲು ಸಾಧ್ಯವಾಗಿಲ್ಲ. ಆದರೆ, ತಂತ್ರಜ್ಞಾನ ಬೆಳೆದಂತೆ ಈ ವ್ಯತ್ಯಾಸ ಕ್ಷೀಣಿಸಬಹುದು. ಎಐ ಈಗ ಮನುಷ್ಯನ ಉಸಿರಾಟದ ಶಬ್ದವನ್ನೂ ನಕಲು ಮಾಡಿದರೆ ಕಲಾವಿದರ ನಿದ್ದೆಗೆಡಿಸಲಿದೆ. ಇತ್ತೀಚಿನ ಎಐ ತಂತ್ರಜ್ಞಾನವು ಧ್ವನಿಯನ್ನು ನಕಲು ಮಾಡಬಹುದು. ಆದರೆ ದೇಹದ ಭಾಷೆ ಅಭ್ಯಾಸದಿಂದ ಬಂದ ಅನುಭವವನ್ನು ಎಐ ನೀಡಲು ಸಾಧ್ಯವಿಲ್ಲ. ಕಲಾವಿದ ಮಾತ್ರ ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನು ಹೆಚ್ಚು-ಕಡಿಮೆ ಮಾಡಬಲ್ಲ. ಎಐ ಸಂಭಾಷಣೆಯನ್ನು ಉಚ್ಚರಿಸಬಹುದು. ಆದರೆ ಮನುಷ್ಯ ಮಾತ್ರ ಸಂಭಾಷಣೆಯನ್ನು ಅನುಭವಿಸಬಲ್ಲ ಎಂದು ಅಭಿಪ್ರಾಯಪಟ್ಟರು.

ಒಟ್ಟಾರೆ ತೆರೆಯ ಮೇಲೆ ಕಾಣದಿದ್ದರೂ, ನೋಡುಗರ ಕಿವಿಯಲ್ಲಿ ಮತ್ತು ಮನದಲ್ಲಿ ಮೇಘಾ ಜಕಾತಿ ನೆಲೆಸಿದ್ದಾರೆ. ಧ್ವನಿ ಮಾಂತ್ರಿಕಿಯಾಗಿ ಇನ್ನೂ ಅನೇಕ ಮೈಲಿಗಲ್ಲುಗಳನ್ನು ಅವರು ಸಾಧಿಸಲಿ ಎಂಬುದು ಕಲಾಭಿಮಾನಿಗಳ ಆಶಯವಾಗಿದೆ. ಒಬ್ಬ ಮಹಿಳೆಯಾಗಿ ಮನರಂಜನಾ ಲೋಕದ ವಿವಿಧ ಆಯಾಮಗಳಲ್ಲಿ ಮೇಘಾ ಜಕಾತಿ ಮೂಡಿಸಿರುವ ಮುದ್ರೆ ನಿಜಕ್ಕೂ ಸ್ಫೂರ್ತಿದಾಯಕ.

Read More
Next Story