Congress vs RSS| ಮೈಸೂರು ಮುಕ್ತ ವಿ.ವಿ. ಬ್ಯಾಂಕ್ ಖಾತೆಗಳ ಸ್ಥಗಿತ: ಇದರ ಹಿಂದಿದೆ ಸೈದ್ಧಾಂತಿಕ ಸಂಘರ್ಷ?
x

Congress vs RSS| ಮೈಸೂರು ಮುಕ್ತ ವಿ.ವಿ. ಬ್ಯಾಂಕ್ ಖಾತೆಗಳ ಸ್ಥಗಿತ: ಇದರ ಹಿಂದಿದೆ ಸೈದ್ಧಾಂತಿಕ ಸಂಘರ್ಷ?

ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿರುವುದು ಶೈಕ್ಷಣಿಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.


ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಎಲ್ಲೆಡೆ ಎಲ್ಲರಿಗೂ ಎಂಬ ಧ್ಯೇಯವಾಕ್ಯದೊಂದಿಗೆ ಜ್ಞಾನದಾಸೋಹ ಮಾಡುತ್ತಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಇದೀಗ ರಾಜ್ಯ ಸರ್ಕಾರ ಮತ್ತು ಆರ್‌ಎಸ್‌ಎಸ್‌ ನಡುವಿನ ಸೈದ್ಧಾಂತಿಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿರುವುದು ಶೈಕ್ಷಣಿಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅಲ್ಲದೇ, ಇದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಆರ್‌ಎಸ್‌ಎಸ್ ನಡುವಿನ ಸುದೀರ್ಘ ಕಾಲದ ಜಟಾಪಟಿ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ದೆಹಲಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನದ ಸಹಯೋಗದೊಂದಿಗೆ ಕೆಎಸ್‌ಒಯುನಲ್ಲಿ ನಡೆದ 'ಏಕಾತ್ಮ ಮಾನವ ದರ್ಶನ - ಭಾರತದ ವಿಶ್ವದೃಷ್ಟಿ' ಎಂಬ ಮೂರು ದಿನಗಳ ಸಮ್ಮೇಳನವು ಸೇಡಿನ ರಾಜಕಾರಣ ಎಂಬ ಆರೋಪಗಳು ಕೇಳಿಬಂದಿವೆ. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪ್ರತಿಷ್ಠಾನವು ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಿದ್ಧಾಂತಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. 'ಏಕಾತ್ಮ ಮಾನವ ದರ್ಶನ' ಎಂಬುದು ಜನಸಂಘದ ಪ್ರಮುಖ ನಾಯಕ ದೀನ್ ದಯಾಳ್ ಉಪಾಧ್ಯಾಯ ಅವರ ಪರಿಕಲ್ಪನೆಯಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ಕೇಸರಿ ಸಿದ್ಧಾಂತದ ಪ್ರೇರಿತ ಕಾರ್ಯಕ್ರಮಗಳು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳಲ್ಲಿ ನಡೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಈ ಕಾರ್ಯಕ್ರಮವನ್ನು ತಡೆಯಲು ಸರ್ಕಾರವು ಪ್ರಯತ್ನ ನಡೆಸಿದ್ದರೂ, ಹೈಕೋರ್ಟ್ ಮಧ್ಯಪ್ರವೇಶಿಸಿ ತಡೆಯಾಜ್ಞೆ ನೀಡಿದ್ದರಿಂದ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ರಾಜ್ಯ ಸರ್ಕಾರವು ಪರೋಕ್ಷವಾಗಿ ವಿಶ್ವವಿದ್ಯಾಲಯಕ್ಕೆ ಬಿಸಿ ಮುಟ್ಟಿಸಲು ಬ್ಯಾಂಕ್ ಖಾತೆಗಳನ್ನೇ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿದೆ ಎಂದು ಹೇಳಲಾಗಿದೆ.

ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿರುವ ಮುಕ್ತ ವಿಶ್ವವಿದ್ಯಾಲಯವು ಕಳೆದ 35 ವರ್ಷಗಳಿಂದ ಶೈಕ್ಷಣಿಕ ಸೇವೆಯಲ್ಲಿ ತೊಡಗಿದೆ. ಹಲವು ಏಳು-ಬೀಳುಗಳೊಂದಿಗೆ ಮುಕ್ತ ವಿಶ್ವವಿದ್ಯಾಲಯವು ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಆರ್ಥಿಕ ಅನುದಾನವನ್ನು ಪಡೆಯುತ್ತಿಲ್ಲ. ಇದು ಸಂಪೂರ್ಣವಾಗಿ ವಿದ್ಯಾರ್ಥಿಗಳ ಶುಲ್ಕ ಮತ್ತು ತನ್ನಲ್ಲಿರುವ ಆವರ್ತನ ನಿಧಿಯಿಂದ ಬರುವ ಬಡ್ಡಿಯ ಮೇಲೆ ಅವಲಂಬಿತವಾಗಿದೆ. ಸರ್ಕಾರದ ಯಾವುದೇ ಹಣಕಾಸಿನ ನೆರವಿಲ್ಲದೆ ನಡೆಯುತ್ತಿರುವ ಸಂಸ್ಥೆಯ ಮೇಲೆ ಸರ್ಕಾರವು ಇಂತಹ ಕಠಿಣ ಆರ್ಥಿಕ ನಿಯಂತ್ರಣ ಹೇರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಪ್ರಿಯಾಂಕ್ ಖರ್ಗೆ - ಆರ್‌ಎಸ್‌ಎಸ್ ಮುಂದುವರಿದ ಸಮರ

ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮೊದಲಿನಿಂದಲೂ ಆರ್‌ಎಸ್‌ಎಸ್ ಸಿದ್ಧಾಂತಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಘದ ವಿಚಾರಧಾರೆಗಳು ಶಿಕ್ಷಣ ಸಂಸ್ಥೆಗಳಿಗೆ ಧಾವಿಸುತ್ತಿವೆ ಎಂದು ಬಹಿರಂಗವಾಗಿಯೇ ಬೇಸ ವ್ಯಕ್ತಪಡಿಸಿದ್ದರು. ಈ ಹಿಂದೆ ಪ್ರಿಯಾಂಕ್ ಖರ್ಗೆ ಮತ್ತು ಸಂಘದ ನಾಯಕರ ನಡುವೆ ನಡೆದಿದ್ದ ವಾಕ್ಸಮರ ಈಗ ಕೆಎಸ್‌ಒಯು ವಿಚಾರದಲ್ಲಿ ಪ್ರತಿಫಲಿಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ. ಸಂಘಟನೆಯ ಕಾರ್ಯಕ್ರಮಕ್ಕೆ ವೇದಿಕೆ ನೀಡಿದ ವಿಶ್ವವಿದ್ಯಾಲಯಕ್ಕೆ ಬಿಸಿ ಮುಟ್ಟಿಸಲು ಸರ್ಕಾರ ಈ ತಂತ್ರ ಹೂಡಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಅಂಕಿ-ಅಂಶಗಳ ವಿಶ್ಲೇಷಣೆ

ವಿಶ್ವವಿದ್ಯಾಲಯದ ವಾರ್ಷಿಕ ಆದಾಯವು ವಿದ್ಯಾರ್ಥಿಗಳ ಶುಲ್ಕದಿಂದ ಅಂದಾಜು 40 ಕೋಟಿ ರೂ., ಆವರ್ತನ ನಿಧಿಯ (ಸುಮಾರು 350 ಕೋಟಿ ರೂ.) ಮೇಲಿನ ಬಡ್ಡಿ ಅಂದಾಜು 20 ಕೋಟಿ ರೂ.ಗೂ ಹೆಚ್ಚು ಇದೆ. ವಾರ್ಷಿಕ ವೆಚ್ಚ ಸಿಬ್ಬಂದಿ ವೇತನಕ್ಕಾಗಿ 69.83 ಕೋಟಿ ರೂ., ಪಿಂಚಣಿಗಾಗಿ 9.16 ಕೋಟಿ ರೂ. ಇದೆ. ವಿಶ್ವವಿದ್ಯಾಲಯವು ತನ್ನ ಆದಾಯಕ್ಕಿಂತ ಹೆಚ್ಚಿನ ವೆಚ್ಚವನ್ನು ಹೊಂದಿದ್ದು, ಅದನ್ನು ಸರಿದೂಗಿಸಲು ಆವರ್ತನ ನಿಧಿಯನ್ನು ಅವಲಂಬಿಸಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು ಸಂಸ್ಥೆಯ ದೈನಂದಿನ ಕಾರ್ಯಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಲಿದೆ.

ಮುಕ್ತ ವಿಶ್ವವಿದ್ಯಾಲಯವು ರಾಜ್ಯ ಸರ್ಕಾರದಿಂದ ಬರುವ ಅನುದಾನದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿಲ್ಲ. ವಿಶ್ವವಿದ್ಯಾಲಯವೇ ತನ್ನದೇ ಆದ ಸಂಪನ್ಮೂಲಗಳನ್ನು ಸಂಗ್ರಹಿಸಿಕೊಳ್ಳುವುದರಿಂದ, ಸರ್ಕಾರದ ಈ ಕ್ರಮವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಸಂಬಳ ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ಅಡ್ಡಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಆದರೂ, ವಿಶ್ವವಿದ್ಯಾಲಯದ ಆಂತರಿಕ ನಿಧಿಯ ಲಭ್ಯತೆಯಿಂದಾಗಿ ತಕ್ಷಣಕ್ಕೆ ಆರ್ಥಿಕ ಸಂಕಷ್ಟ ಎದುರಾಗದಿರಬಹುದು ಎಂದು ಹೇಳಲಾಗುತ್ತಿದ್ದರೂ, ಖಾತೆಗಳ ಮೇಲೆ ನಿಯಂತ್ರಣ ಸಾಧಿಸುವುದು ವಿಶ್ವವಿದ್ಯಾಲಯದ ಸ್ವಾಯತ್ತತೆಗೆ ಧಕ್ಕೆ ತರುವ ವಿಷಯವಾಗಿದೆ.

ಸಿಬ್ಬಂದಿ ಮೇಲೆ ಉಂಟಾಗುವ ಪರಿಣಾಮ

ವಿಶ್ವವಿದ್ಯಾಲಯವು ಬೃಹತ್ ಗಾತ್ರದ ಸಿಬ್ಬಂದಿ ವರ್ಗವನ್ನು ಹೊಂದಿದೆ. ಖಾತೆಗಳ ಸ್ಥಗಿತದಿಂದ ಇವರ ವೇತನ ಪಾವತಿಗೆ ತೀವ್ರ ಅಡಚಣೆಯಾಗಲಿದೆ. ಬೋಧಕ ಸಿಬ್ಬಂದಿ ಕಾಯಂ 70, ತಾತ್ಕಾಲಿಕ 25, ಹೊರಗುತ್ತಿಗೆ 49 ಇದ್ದಾರೆ. ಬೋಧಕೇತರ ಸಿಬ್ಬಂದಿ ಕಾಯಂ 272, ತಾತ್ಕಾಲಿಕ 1204, ಹೊರಗುತ್ತಿಗೆ 90 ಸಿಬ್ಬಂದಿ ಇದ್ದಾರೆ. ಒಟ್ಟಾರೆಯಾಗಿ ಸುಮಾರು 1700ಕ್ಕೂ ಹೆಚ್ಚು ಕುಟುಂಬಗಳು ಈ ವಿಶ್ವವಿದ್ಯಾಲಯದ ಮೇಲೆ ಅವಲಂಬಿತವಾಗಿವೆ. ವೇತನ ಸ್ಥಗಿತಗೊಂಡರೆ ಈ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂಬುದು ವಿಶ್ವವಿದ್ಯಾಲಯ ಸಿಬ್ಬಂದಿಯ ಅಳಲಾಗಿದೆ.

ಭ್ರಷ್ಟಾಚಾರದ ಆರೋಪಗಳು

ಈ ನಡುವೆ, ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಕ್ರಮಗಳ ಕುರಿತು ನ್ಯಾ.ಬಿ.ಎ.ಪಾಟೀಲ್ ಅವರ ನೇತೃತ್ವದ ಸಮಿತಿಯು ತನಿಖೆ ನಡೆಸುತ್ತಿದೆ. ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗಳು ನಡೆಯುತ್ತಿರುವುದು ಸಹ ಸರ್ಕಾರದ ಇಂತಹ ಕ್ರಮ ಕೈಗೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ. ತನಿಖೆಯಲ್ಲಿ ಹಗರಣ ನಡೆದಿರುವುದು ಸಾಬೀತಾದರೆ ಸರ್ಕಾರವು ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲು ಕಾನೂನುಬದ್ಧವಾಗಿ ಅವಕಾಶವಿದೆ. ಆದರೆ, ವಿಚಾರಣೆಯು ಇನ್ನು ಪೂರ್ಣಗೊಳ್ಳುವ ಮೊದಲೇ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದು ಎಷ್ಟು ಸರಿ? ವಿಚಾರಣೆ ಮುಗಿಯುವ ಮುನ್ನವೇ ಇಂತಹ ತೀವ್ರಗತಿಯ ಆರ್ಥಿಕ ನಿರ್ಬಂಧಗಳನ್ನು ಹೇರುವುದು ಸಂಸ್ಥೆಯ ದೈನಂದಿನ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಕ್ಕೆ ಅಧಿಕಾರ ಇಲ್ಲ

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತಿ ಕುಲಪತಿ ಡಾ. ಕೆ.ಎಸ್. ರಂಗಪ್ಪ, ಸರ್ಕಾರವು ಅನುದಾನ ನೀಡಿದ್ದರೆ ಬ್ಯಾಂಕ್‌ ಖಾತೆ ಸ್ಥಗಿತ ಮಾಡುವ ಅಧಿಕಾರ ಇತ್ತು. ಆದರೆ, ಸರ್ಕಾರದ ನಡೆಯು ಸರಿಯಲ್ಲ. ಕೆಎಸ್‌ಒಯು ನಡೆಯುತ್ತಿರುವುದು ವಿದ್ಯಾರ್ಥಿಗಳ ಪಾವತಿಸುವ ಶುಲ್ಕ ಮತ್ತು ತಮ್ಮದೇ ಆದ ಮೂಲಗಳಿಂದ ನಡೆಯುತ್ತಿದೆ. ಒಂದು ರೀತಿಯಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸಿದಂತಾಗಿದೆ. ಸರ್ಕಾರದ ಆದೇಶವು ನಮ್ಮ ಮನೆಯ ಖಾತೆಯನ್ನು ಬೇರೆಯವರು ನಿಲ್ಲಿಸಿದಂತಿದೆ. ಯಾವುದೇ ಅನುದಾನ ನೀಡದ ಮೇಲೆ ಖಾತೆ ಸ್ಥಗಿತಗೊಳಿಸುವುದು ತಪ್ಪು. ರಾಜಕೀಯ ಸಿದ್ಧಾಂತ ವಿಚಾರವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಸರ್ಕಾರ ಬ್ಯಾಂಕ್ ಖಾತೆ‌ ಸ್ಥಗಿತಗೊಂಡಿರುವುದು ಸೂಕ್ತವಲ್ಲ ಎಂದು ಹೇಳಿದರು.

ಬೋಧಕ ಸಂಘದ ಅಧ್ಯಕ್ಷ ಡಾ. ಎನ್‌.ಜಿ. ರಾಜು ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಖಾತೆ ಸ್ಥಗಿತ ಮಾಡಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಕೈಗೊಂಡಿರುವ ಕ್ರಮ ಹಿನ್ನೆಲೆಯಲ್ಲಿ ಕೆಎಸ್‌ಒಯು ಪತ್ರ ಬರೆದಿದೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವುದು ಅನಿವಾರ್ಯವಾದರೂ, ನೌಕರರ ಹಿತಾಸಕ್ತಿ ಕಾಪಾಡುವುದು ಮುಖ್ಯ. ನ್ಯಾ.ಬಿ.ಎ.ಪಾಟೀಲ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಶೀಘ್ರದಲ್ಲಿಯೇ ವರದಿ ನೀಡಲಿದೆ. ಸರ್ಕಾರದಿಂದಲೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಹೈಕೋರ್ಟ್ ಮಧ್ಯಪ್ರವೇಶ

ವಿವಾದದ ನಡುವೆ, ಮುಕ್ತ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ಏಕಾತ್ಮ ಮಾನವ ದರ್ಶನ' ಸಮ್ಮೇಳನವು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಸರ್ಕಾರವು ಈ ಕಾರ್ಯಕ್ರಮವನ್ನು ತಡೆಯಲು ಅಥವಾ ರದ್ದುಗೊಳಿಸಲು ಪ್ರಯತ್ನಿಸಿತ್ತು ಎನ್ನಲಾಗಿದೆ. ಆದರೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದೆಂದು ತಡೆಯಾಜ್ಞೆ ನೀಡಿತು. ಹೈಕೋರ್ಟ್ ನೀಡಿದ ಈ ತಡೆಯಾಜ್ಞೆಯಿಂದಾಗಿ ಮಾ. 25 ರಿಂದ 27 ರವರೆಗೆ ನಡೆಯಬೇಕಿದ್ದ ಸಮ್ಮೇಳನವು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಜರುಗಿತು. ಇದೇ ಕಾರಣಕ್ಕಾಗಿ ಸರ್ಕಾರ ಪರೋಕ್ಷವಾಗಿ ಬ್ಯಾಂಕ್‌ ಖಾತೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಗಳ ಸ್ಥಗಿತವು ಕೇವಲ ಒಂದು ಆಡಳಿತಾತ್ಮಕ ನಿರ್ಧಾರವಲ್ಲ, ಅದು ಸಾವಿರಾರು ಸಿಬ್ಬಂದಿ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ವಿಷಯವಾಗಿದೆ. ಸರ್ಕಾರದ ಅಸಮಾಧಾನ ಅಥವಾ ತನಿಖೆಗಳು ತಮ್ಮದೇ ಆದ ಹಾದಿಯಲ್ಲಿ ಸಾಗಬೇಕಾದರೂ, ಒಂದು ಶೈಕ್ಷಣಿಕ ಸಂಸ್ಥೆಯ ಆರ್ಥಿಕತೆಯ ಹಾದಿಯನ್ನು ಬಂದ್ ಮಾಡುವುದು ಸರಿಯಾದ ಕ್ರಮವಲ್ಲ ಎಂಬುದು ತಜ್ಞರ ಅಭಿಪ್ರಾಯ. ರಾಜಕೀಯ ಸಿದ್ಧಾಂತಗಳ ಸಂಘರ್ಷದಲ್ಲಿ ಶಿಕ್ಷಣ ಸಂಸ್ಥೆಗಳು ಬಲಿಯಾಗಬಾರದು. ರಾಜ್ಯಪಾಲರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಒಂದು ಸಮತೋಲಿತ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ. ಇಲ್ಲದಿದ್ದರೆ, ಇದು ಕಾನೂನು ಸಮರಕ್ಕೆ ದಾರಿಯಾಗಿ ವಿಶ್ವವಿದ್ಯಾಲಯದ ಘನತೆಗೆ ಮತ್ತಷ್ಟು ಧಕ್ಕೆ ತರಬಹುದು ಎಂದು ಹೇಳಲಾಗಿದೆ.

Read More
Next Story