ಕ್ಷೀಣಿಸುತ್ತಿದೆ ಕೊರಗರ ಜನಸಂಖ್ಯೆ; ಕಾರಣಗಳೇನು? ಪತ್ತೆಗೆ ಸದ್ಯದಲ್ಲೇ ಹೊಸ ಸಮೀಕ್ಷೆ
x

ಕರ್ನಾಟಕ ಬುಡಕಟ್ಟು ಕಲ್ಯಾಣ ಇಲಾಖೆಯು ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ 5 ಜಿಲ್ಲೆಗಳಲ್ಲಿ ಸಮಗ್ರ ಸರ್ವೇ ನಡೆಸಲಿದೆ.

ಕ್ಷೀಣಿಸುತ್ತಿದೆ ಕೊರಗರ ಜನಸಂಖ್ಯೆ; ಕಾರಣಗಳೇನು? ಪತ್ತೆಗೆ ಸದ್ಯದಲ್ಲೇ ಹೊಸ ಸಮೀಕ್ಷೆ

ಲಭ್ಯವಿರುವ ಮಾಹಿತಿ ಪ್ರಕಾರ ಕೊರಗರ ಮೂಲವು ಸುಮಾರು 4,400 ವರ್ಷಗಳ ಹಿಂದೆ, ಸಿಂಧೂ ನಾಗರಿಕತೆಯ ಉಗಮದ ಕಾಲದಲ್ಲಿ ಇರಾನ್ ಪ್ರಸ್ಥಭೂಮಿ ಮತ್ತು ಸಿಂಧೂ ಕಣಿವೆಯ ನಡುವಿನ ಪ್ರದೇಶದ್ದಾಗಿದೆ.


Click the Play button to hear this message in audio format

ರಾಜ್ಯದ ಬುಡಕಟ್ಟು ಸಮುದಾಯ ಕೊರಗ ಸಮುದಾಯದ ಜನಸಂಖ್ಯೆ ಕ್ಷೀಣಿಸುತ್ತಿದೆ. ಒಂದು ಅಪರೂಪದ ಸಂಸ್ಕೃತಿಯೇ ಅಳಿವಿನಂಚಿಗೆ ತಲುಪುತ್ತಿರುವ ಮುನ್ಸೂಚನೆ. ಈ ಆತಂಕಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಬುಡಕಟ್ಟು ಕಲ್ಯಾಣ ಇಲಾಖೆಯ ವತಿಯಿಂದ ಅತಿ ಶೀಘ್ರದಲ್ಲೇ ರಾಜ್ಯದ ಐದು ಜಿಲ್ಲೆಗಳಲ್ಲಿ ಸಮೀಕ್ಷೆ ಆರಂಭವಾಗಲಿದೆ.

2011 ರಲ್ಲಿ ನಡೆದ ಜನಗಣತಿಯ ಬಳಿಕ ಕೊರಗ ಸಮುದಾಯದ ಜನಸಂಖ್ಯೆಯ ಬಗ್ಗೆ ಅಧಿಕೃತ ಸಮೀಕ್ಷೆ ನಡೆದಿಲ್ಲ. ಆದರೆ ಕೊರಗ ಸಮುದಾಯಗಳ ಸ್ಥಿತಿಗತಿ ಕುರಿತು ಪ್ರತ್ಯೇಕವಾಗಿ ಸಮೀಕ್ಷೆ ನಡೆಸುವುದು ಸರ್ಕಾರ ಇದೀಗ ಮುಂದಾಗಿದೆ. ಈ ಬಗ್ಗೆ ಕರ್ನಾಟಕ ಬುಡಕಟ್ಟು ಕಲ್ಯಾಣ ಇಲಾಖೆಯ ನಿರ್ದೇಶಕ ಯೋಗೇಶ್ ಟಿ.ಕೆ.ಎ.ಎಸ್ ಅವರು ವಿವರ ನೀಡಿದ್ದಾರೆ.

ಅವರು ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, "ಬುಡಕಟ್ಟು ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಲು ಸರ್ಕಾರವು ಶೀಘ್ರದಲ್ಲೇ ಒಂದು ಸಮಗ್ರ ಸರ್ವೇಯನ್ನು ಆರಂಭಿಸಲಿದೆ. ಈ ಸರ್ವೇಯನ್ನು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಸೇರಿದಂತೆ ಒಟ್ಟು ಐದು ಜಿಲ್ಲೆಗಳಲ್ಲಿ ನಡೆಸಲಾಗುವುದು. ಸುಮಾರು 20,000 ಕುಟುಂಬಗಳನ್ನು 15 ದಿನಗಳ ಅವಧಿಯಲ್ಲಿ ಸರ್ವೇಯನ್ನು ಮುಗಿಸುವ ಗುರಿ ಇದೆ. ಈ ಸರ್ವೇಯನ್ನು ಖಾಸಗಿ ಏಜೆನ್ಸಿಗಳ ಬದಲಾಗಿ ಇಲಾಖೆಯ ಶಿಕ್ಷಕರ ಮೂಲಕವೇ ನಡೆಸಲು ತೀರ್ಮಾನಿಸಲಾಗಿದೆ," ಎಂದು ಅವರು ತಿಳಿಸಿದ್ದಾರೆ.

"ಕೊರಗ ಸಮುದಾಯಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತಿದೆ. ಇದಕ್ಕೆ ಹೆಚ್ಚಿನ ಮರಣ ಪ್ರಮಾಣ ಅಥವಾ ಕಡಿಮೆ ಜನನ ಪ್ರಮಾಣ ಕಾರಣವಾಗಿರಬಹುದು ಎಂದು ಚರ್ಚಿಸಲಾಗುತ್ತಿದೆ. ಸರ್ವೇಯ ವರದಿ ಬಂದ ನಂತರ ಅಗತ್ಯಬಿದ್ದರೆ ಆರೋಗ್ಯ ಇಲಾಖೆಯ ಸಹಾಯ ಪಡೆದು ಸಮುದಾಯದ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಸಲಾಗುವುದು," ಎಂದು ಅವರು ತಿಳಿಸಿದರು.

ಒಂದು ಕಾಲದಲ್ಲಿ ಕೊರಗ ಸಮುದಾಯದವರು ಊರಿನಲ್ಲಿ ನಡೆಯುವ ಮದುವೆ, ಉಪನಯನ, ಇನ್ನಿತರ ಸಮಾರಂಭಗಳಲ್ಲಿ ಹೊರಗೆ ದೂರದಲ್ಲಿ ಕಾಯುತ್ತಾ ಕೂತು, ಊಟದ ಬಳಿಕ ಎಸೆಯುತ್ತಿದ್ದ ಎಂಜಲು ಎಲೆಗಳಿಂದ ಅನ್ನವನ್ನು ಹೆಕ್ಕಿ ಬುಟ್ಟಿಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರು. ಹೀಗೆ ಸಂಗ್ರಹಿಸಿದ ಅನ್ನವನ್ನು ಕೊರಗರು ಬಿಸಿಲಿಗೆ ಹಾಕಿ ಒಣಗಿಸಿ ಮತ್ತೆ ಬಳಸಿಕೊಳ್ಳುತ್ತಿದ್ದರು. ಆದರೆ ಇದೀಗ ಕೊರಗರು ಅನ್ನಕ್ಕಾಗಿ ಆ ಪರದಾಟ ಪಡುವುದಿಲ್ಲ. ಗುಡಿಸಲುಗಳು ಮನೆಗಳಾಗಿವೆ. ಮನೆಗಳ ಸುತ್ತಮುತ್ತ ನೈರ್ಮಲ್ಯವಿದೆ. ಬದುಕು ಸ್ವಲ್ಪ ಸುಧಾರಣೆ ಕಂಡಿದೆ. ಶೈಕ್ಷಣಿಕವಾಗಿಯೂ ಸಮುದಾಯದಲ್ಲಿ ಮುಂದಿದ್ದಾರೆ. ಇಷ್ಟು ಹೊರತುಪಡಿಸಿ ಭಾರೀ ಬದಲಾವಣೆಗಳು ಅವರ ಬದುಕಿನಲ್ಲಿ ಈಗಲೂ ಆಗಿಲ್ಲ.

ಸಾವಿರಾರು ವರ್ಷಗಳ ಇತಿಹಾಸವಿರುವ ಕೊರಗ ಸಮುದಾಯವು ಇಂದು ಅಳಿವಿನಂಚಿನಲ್ಲಿದೆ. ಅಂಕಿ-ಅಂಶಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. 1991ರ ಜನಗಣತಿಯಲ್ಲಿ ಸುಮಾರು 17 ಸಾವಿರದಷ್ಟಿದ್ದ ಇವರ ಸಂಖ್ಯೆ, 2011ರ ವೇಳೆಗೆ 15,991ಕ್ಕೆ ಕುಸಿದಿತ್ತು. ಪ್ರಸ್ತುತ ಅಂದಾಜಿನ ಪ್ರಕಾರ ಈ ಸಂಖ್ಯೆ ಕೇವಲ 10 ರಿಂದ 12 ಸಾವಿರಕ್ಕೆ ಇಳಿಕೆಯಾಗಿರುವ ಸಾಧ್ಯತೆಯಿದೆ. ಒಂದು ವಿಶಿಷ್ಟ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ಸಮುದಾಯದ ಜನಸಂಖ್ಯೆ ಹೀಗೆ ಕುಸಿಯುತ್ತಾ ಹೋದರೆ, ಮುಂದೊಂದು ದಿನ ಆ ಸಂಸ್ಕೃತಿಯೇ ಇತಿಹಾಸದ ಪುಟ ಸೇರಬಹುದು ಎಂಬ ಭೀತಿ ಎದುರಾಗಿದೆ.

ಈ ಗಂಭೀರ ಸಮಸ್ಯೆಯ ಹಿಂದೆ ಅನೇಕ ವೈಜ್ಞಾನಿಕ ಮತ್ತು ಸಾಮಾಜಿಕ ಕಾರಣಗಳಿವೆ. ಈ ಬಗ್ಗೆ ʼ ದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿರುವ ಸಮುದಾಯದ ಮೊದಲ ಮಹಿಳಾ ಪಿಹೆಚ್‌ಡಿ ಪದವೀಧರೆ ಸಬಿತಾ ಕೊರಗ, "ಸಮುದಾಯದಲ್ಲಿ ಅಪೌಷ್ಟಿಕತೆ ಮತ್ತು ಆನುವಂಶಿಕ ತೊಂದರೆಗಳು ಹೆಚ್ಚಾಗಿವೆ. ಇದೇ ಕಾರಣಕ್ಕಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೊನಾ ಕಾಲದಲ್ಲಿ ಈ ಸಮುದಾಯದ ಅನೇಕರು ಪ್ರಾಣ ಕಳೆದುಕೊಂಡಿರುವುದು ಸಮುದಾಯಕ್ಕೆ ದೊಡ್ಡ ಹೊಡೆತವಾಗಿದೆ," ಎಂದು ಅವರು ತಿಳಿಸಿದರು.

ಅತೀ ಹಿಂದುಳಿದ ಬುಡಕಟ್ಟು ಸಮುದಾಯ (PVTG) ಎಂಬ ಹಣೆಪಟ್ಟಿಯ ನಡುವೆ ಈ ಜನಾಂಗ ನಿಜವಾಗಿಯೂ ನಶಿಸಿಹೋಗುವ ಹಂತಕ್ಕೆ ಬಂದಿದೆಯೆ? ಈ ಬಗ್ಗೆ ಈ ಸಮೀಕ್ಷೆ ಬೆಳಕು ಚೆಲ್ಲಲಿದೆ.

ಗ್ರಾಫಿಕ್ಸ್‌ - ಪ್ರದೀಪ್‌ ಕುಮಾರ್‌ ಜೆ

ಅಧ್ಯಯನ ಏನು ಹೇಳುತ್ತದೆ?

ಮಂಗಳೂರು ವಿಶ್ವವಿದ್ಯಾಲಯದ ತಜ್ಞರು ನಡೆಸಿದ ಡಿಎನ್ಎ ಅಧ್ಯಯನದ ಪ್ರಕಾರ, ಸಮುದಾಯದಲ್ಲಿರುವ 'ಅಂತರ್ ವಿವಾಹ' ಪದ್ಧತಿಯಿಂದಾಗಿ ವಂಶವಾಹಿ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಶಿಶು ಮರಣ, ಬಂಜೆತನ, ದೃಷ್ಟಿಹೀನತೆ ಮತ್ತು ನರಸಂಬಂಧಿ ತೊಂದರೆಗಳು ಇವರ ಜೀವಿತಾವಧಿಯನ್ನು ಕಡಿಮೆ ಮಾಡುತ್ತಿವೆ ಎಂದು ಅಧ್ಯಯನ ತಿಳಿಸಿದೆ. ಇನ್ನು ಸಾಮಾಜಿಕವಾಗಿ ನೋಡುವುದಾದರೆ, 'ಅಜಲು' ಪದ್ಧತಿಯಂತಹ ಅನಿಷ್ಟಗಳು ಮತ್ತು ಅಸ್ಪೃಶ್ಯತೆಯ ಕಳಂಕ ಈ ಸಮುದಾಯವನ್ನು ಮಾನಸಿಕವಾಗಿ ಕುಗ್ಗಿಸಿದೆ. ಶಿಕ್ಷಣ ಪಡೆದಿದ್ದರೂ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ತಾರತಮ್ಯದ ಭಾವನೆಗಳು ಯುವಜನರಲ್ಲಿ ಕೀಳರಿಮೆ ಉಂಟುಮಾಡುತ್ತಿವೆ. ಜಾಗತೀಕರಣದ ಅಬ್ಬರಕ್ಕೆ ಸಿಲುಕಿ ಕೆಲವರು ವ್ಯಸನಗಳಿಗೆ ತುತ್ತಾಗುತ್ತಿರುವುದು ಕೂಡ ಸಂತತಿ ನಾಶಕ್ಕೆ ಮತ್ತೊಂದು ಕಾರಣವಾಗಿದೆ. ಸೋದರ ಮಾವನ ಮಕ್ಕಳ ನಡುವೆಯೇ ಮದುವೆ ಸಂಬಂಧಗಳು ಏರ್ಪಡುವುದರಿಂದ ವಂಶವಾಹಿಗಳಲ್ಲಿ ವೈವಿಧ್ಯತೆ ಇಲ್ಲದಂತಾಗಿ ಕಾಯಿಲೆಗಳು ಹರಡುತ್ತಿವೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಕೊರಗರ ಮೂಲ ಯಾವುದು?

ಕರ್ನಾಟಕ ಮತ್ತು ಕೇರಳದ ಕಾಸರಗೋಡು ಭಾಗದಲ್ಲಿ ವಾಸಿಸುವ ಕೊರಗ ಬುಡಕಟ್ಟು ಜನಾಂಗದ ಮೇಲೆ ನಡೆದ ಸಂಶೋಧನೆಯೊಂದು ಭಾರತೀಯರ ಪೂರ್ವಜರ ಇತಿಹಾಸದ ಬಗ್ಗೆ ಹೊಸ ಬೆಳಕು ಚೆಲ್ಲಿದೆ. ಮಂಗಳೂರು ವಿಶ್ವವಿದ್ಯಾನಿಲಯ, ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ಸ್ವಿಟ್ಜರ್ಲೆಂಡ್‌ನ ಬರ್ನ್ ವಿಶ್ವವಿದ್ಯಾನಿಲಯದ ಸಂಶೋಧಕರು ಜಂಟಿಯಾಗಿ ನಡೆಸಿದ ಈ ಅಧ್ಯಯನದಲ್ಲಿ, ಭಾರತೀಯರ ಡಿಎನ್‌ಎ ರಚನೆಯಲ್ಲಿ ಇದುವರೆಗೆ ಯಾರಿಗೂ ತಿಳಿಯದ ಆನುವಂಶಿಕ ಮೂಲವೊಂದು ಪತ್ತೆಯಾಗಿದೆ. ಇದನ್ನು ಸಂಶೋಧಕರು 'ಪ್ರೊಟೊ ದ್ರಾವಿಡಿಯನ್' (ಮೂಲ ದ್ರಾವಿಡ) ಪೂರ್ವಜರ ಮೂಲ ಎಂದು ಕರೆದಿದ್ದಾರೆ.

ಇದುವರೆಗೆ ಲಭ್ಯವಿದ್ದ ಮಾಹಿತಿಯ ಪ್ರಕಾರ, ಕೊರಗರ ವಂಶವಾಹಿ ರಚನೆಯು ದಕ್ಷಿಣ ಏಷ್ಯಾದ ಬೇಟೆಗಾರರು, ಇರಾನಿನ ಕೃಷಿಕರು, ಮಧ್ಯ ಏಷ್ಯಾದ ಪಶುಪಾಲಕರು ಮತ್ತು ಈಶಾನ್ಯದ ಗುಂಪುಗಳು ಸೇರಿದಂತೆ ಐದು ಪ್ರಮುಖ ಪೂರ್ವಜರ ಮಿಶ್ರಣ ಎಂದು ಭಾವಿಸಲಾಗಿತ್ತು. ಆದರೆ ಈಗ ಪತ್ತೆಯಾಗಿರುವ ಈ ಆರನೇ ಮೂಲವು ಸುಮಾರು 4,400 ವರ್ಷಗಳ ಹಿಂದೆ, ಅಂದರೆ ಸಿಂಧೂ ನಾಗರಿಕತೆಯ ಉಗಮದ ಕಾಲದಲ್ಲಿ ಇರಾನ್ ಪ್ರಸ್ಥಭೂಮಿ ಮತ್ತು ಸಿಂಧೂ ಕಣಿವೆಯ ನಡುವಿನ ಪ್ರದೇಶದಿಂದ ಬಂದಿರುವುದಾಗಿ ತಿಳಿದುಬಂದಿದೆ. ಈ ಸಂಶೋಧನೆಯು ದಕ್ಷಿಣ ಏಷ್ಯಾದ ಜನರ ವಲಸೆಯ ಇತಿಹಾಸವನ್ನು ಮತ್ತಷ್ಟು ಸಂಕೀರ್ಣಗೊಳಿಸಿದ್ದು, ಆಧುನಿಕ ಭಾರತೀಯರ ಡಿಎನ್‌ಎಯಲ್ಲಿ ಈ ಮೂಲ ದ್ರಾವಿಡ ಅಂಶವು ಸರಾಸರಿ ಶೇಕಡಾ 20 ರಷ್ಟು ಇರುವುದನ್ನು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

ಕೊರಗ ಜನಾಂಗದವರು ಮಾತನಾಡುವ ಭಾಷೆಯು ಉತ್ತರ ದ್ರಾವಿಡ ಭಾಷಾ ಕುಟುಂಬಕ್ಕೆ (ಉದಾಹರಣೆಗೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಮಾತನಾಡುವ ಬ್ರಾಹುಯಿ ಭಾಷೆ) ಹತ್ತಿರವಾಗಿದೆ ಎಂಬುದು ಈ ಅಧ್ಯಯನದ ಮತ್ತೊಂದು ವಿಶೇಷ. ದಶಕಗಳಿಂದ ತಮ್ಮದೇ ಸಮುದಾಯದೊಳಗೆ ಮದುವೆಯಾಗುವ (Endogamy) ಪದ್ಧತಿಯನ್ನು ಅನುಸರಿಸಿಕೊಂಡು ಬಂದಿರುವುದರಿಂದ, ಇವರಲ್ಲಿ ಈ ಪುರಾತನ ವಂಶವಾಹಿ ಗುಣಲಕ್ಷಣಗಳು ಬದಲಾಗದೆ ಉಳಿದುಕೊಂಡಿವೆ. ಆದರೆ ಇದೇ ಕಾರಣದಿಂದಾಗಿ ಇವರಲ್ಲಿ ಜನ್ಮಜಾತ ಕಿವುಡುತನ, ರಕ್ತಹೀನತೆ ಮತ್ತು ನರಸಂಬಂಧಿ ಕಾಯಿಲೆಗಳಂತಹ ಗಂಭೀರ ಆನುವಂಶಿಕ ಸಮಸ್ಯೆಗಳು ಹೆಚ್ಚು ಕಂಡುಬರುತ್ತಿವೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಶೋಧನೆಯು ಯುರೋಪಿಯನ್ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್‌ನಲ್ಲಿ ಪ್ರಕಟವಾಗಿದ್ದು, ಭಾರತೀಯರು ಯಾರು ಮತ್ತು ಎಲ್ಲಿಂದ ಬಂದವರು ಎಂಬ ಪ್ರಶ್ನೆಗೆ ಹೊಸ ಆಯಾಮವನ್ನು ನೀಡಿದೆ.

ಕುಂಟು, ಸೊಪ್ಪು, ಒಂಟಿ ಮತ್ತು ಕಪ್ಪಡ ಎಂಬ ನಾಲ್ಕು ಪಂಗಡಗಳಾಗಿ ಹಂಚಿಹೋಗಿರುವ ಕೊರಗರು ತಮ್ಮ ವಿಶಿಷ್ಟ ಭಾಷೆ ಮತ್ತು ಆಚಾರಗಳನ್ನು ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಅವರು ಭೌಗೋಳಿಕವಾಗಿ ಹೊರಗಿನ ಸಂಬಂಧಗಳನ್ನು ಬೆಳೆಸುವುದು ಮತ್ತು ಮುಖ್ಯವಾಹಿನಿಯ ಸಮಾಜವು ಅವರನ್ನು ಸಮಾನವಾಗಿ ಗೌರವಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸಂಶೋಧನೆಗಳು ತಿಳಿಸಿದೆ.

Read More
Next Story