
Human- Elephant Conflict| ಕಾಫಿನಾಡು ಕೊಡಗಲ್ಲಿದೆ 114 ಕಾಡಾನೆಗಳು! ಹಿಂಡು ಬಿಟ್ಟು ನಾಡಿಗೆ ಬಂದ ಸೆರೆಯಾದ ಸಲಗದ ಹಿಂದಿನ ಸತ್ಯ!
ಕಾಫಿನಾಡಿನ ಆವಾಸಸ್ಥಾನದ ಆ ಆನೆ, ಕಾಫಿತೋಟಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ನಾಡಿಗೆ ನುಗ್ಗುವ ಅನಿವಾರ್ಯ ಸ್ಥಿತಿ ಉದ್ಭವವಾಗಿರುವುದೇ ಚರ್ಚೆಯ ವಿಷಯವಾಗಿದೆ.
ಕಾಫಿನಾಡು ಕೊಡಗಿನ ಕಾಡುಗಳಲ್ಲೇ ಬೀಡುಬಿಟ್ಟ ಮತ್ತು ಸ್ಬಭಾವತಹ ʼಶಾಂತ ರೂಪಿʼಗಳಾದ ʼಕಾಫಿನಾಡಿನʼ ಆನೆಗಳು ಈಗ ನಾಡಿಗೆ ನುಗ್ಗಿ ಜನರ ಬದುಕು ತಲ್ಲಣ ಮಾಡುತ್ತಿವೆ. ಇದಕ್ಕೆ ಭಾನುವಾರ (ಮಾ. 22) ಅರಣ್ಯ ಇಲಾಖೆಯಿಂದ ಸೆರೆಯಾದ ಒಂಟಿ ಸಲಗವೇ ಸಾಕ್ಷಿ!
ಇದರಿಂದ ಗೊತ್ತಾಗಿದ್ದು, ಕೊಡಗಿನ ಕಾಫಿ ತೋಟಗಳಲ್ಲೇ ಸುಮಾರು 114 ಆನೆಗಳು ವಾಸ್ತವ್ಯ ಹೂಡಿವೆ. ಹಾಗೂ ಕೊಡಗಿನ ಜನವಸತಿ ಪ್ರದೇಶಗಳಿಗೆ ಭಯದ ವಾತಾವರಣವನ್ನೂ ಸೃಷ್ಟಿಸಿವೆ. ಇದಕ್ಕೆ ಪುಷ್ಟಿ ನೀಡಿದ್ದು, ಭಾನುವಾರ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದ ಒಂಟಿ ಸಲಗ..
ಕಾಫಿನಾಡಿನ ಈ ಸಲಗ ಕಾಡಿನಿಂದ ಹೊರಬಂದು ಹಳ್ಳಿಗಳಿಗೆ ನುಗ್ಗಿ ಇನ್ನೇನು ಆಪತ್ತು ಸಂಭವಿಸಲಿದೆ ಎನ್ನುವ ಹಂತದಲ್ಲೇ ಎಚ್ಚತ್ತುಕೊಂಡ ಅರಣ್ಯ ಇಲಾಖೆ ಅದರ ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಆದರೆ, ಕಾಫಿನಾಡಿನ ಆವಾಸಸ್ಥಾನದ ಆ ಆನೆ ಕಾಫಿತೋಟಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ನಾಡಿಗೆ ನುಗ್ಗುವ ಅನಿವಾರ್ಯ ಸ್ಥಿತಿ ಉದ್ಭವವಾಗಿರುವುದೇ ವನ್ಯಜೀವಿ ತಜ್ಞರ ಚರ್ಚಾ ವಿಷಯವಾಗಿದೆ.
ವಿಶೇಷವೆಂದರೆ ಈ ಕಾಫಿನಾಡಿನ ಸಲಗ ಸದ್ಯಕ್ಕೆ ಯಾವುದೇ ಪ್ರಾಣಹಾನಿ ಮಾಡಿಲ್ಲ. ಆದರೆ, ಅದರ ಬಳಗದ ಇನ್ನೊಂದು ಸಲಗ ಇತ್ತೀಚೆಗೆ ಕೊಡಗಿನ ವಿರಾಜಪೇಟೆಯಲ್ಲಿ ಮಹಿಳೆಯೊಬ್ಬರ ಬಲಿತೆಗೆದುಕೊಂಡ ಬಳಿಕ ಎಚ್ಚತ್ತುಕೊಂಡ ಇಲಾಖೆ ಈ ಸಲಗದ ಮೇಲೆ ವಿಶೇಷ ನಿಗಾ ಇರಿಸಿತ್ತು. ಕಾಫಿನಾಡಿನ ಪರಿಸರಕ್ಕೆ ಹೊಂದಿಕೊಂಡು ಯಾವುದೇ ಪ್ರಾಣ ಹಾನಿ ಮಾಡಿದ ದಾಖಲೆಗಳಿಲ್ಲದ ಈ ಸಲಗ ನಾಡಿಗೆ ನುಗ್ಗಿದ ಕಾರಣ ಇಲ್ಲಿನ ಮಾನವ ನಡವಳಿಕೆ ಆದರಿಸಿ ಅಪಾಯ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸೆರೆಹಿಡಿಯಾಗಿದೆ ಎನ್ನುವುದು ಇಲಾಖೆ ಅಧಿಕಾರಿಗಳ ವಾದವಾಗಿದೆ.
ಸಲಗದ ಸ್ವಭಾವ, ದಾಂಧಲೆ
ಈಗ ಸೆರೆ ಸಿಕ್ಕಿರುವ 34 ವರ್ಷದ ಗಂಡಾನೆಯ ಸ್ವಭಾವವೇ ವಿಭಿನ್ನವಾಗಿತ್ತು ಎನ್ನಲಾಗಿದೆ. ಈ ವರೆಗೂ ಈ ಆನೆ ಯಾವುದೇ ಮನುಷ್ಯರ ಮೇಲೆ ದಾಳಿ ನಡೆಸಿರಲಿಲ್ಲ. ಆದರೆ, ಕಳೆದೊಂದು ವಾರದಿಂದ ಇದ್ದಕ್ಕಿದ್ದಂತೆ ಕೋಪ ಪ್ರದರ್ಶಿಸುತ್ತಿದ್ದುದು ಈ ಆನೆಯ ನಿಗಾ ವಹಿಸಿದ್ದ ಇಲಾಖೆ ಸಿಬ್ಬಂದಿಗೆ ಕಂಡುಬಂದಿತ್ತು.
ವಿರಾಜಪೇಟೆಯ ಕಾಫಿ ತೋಟಗಳ ಅಂಚಿನಲ್ಲಿರುವ ಚೆಂಬೆಬೆಳ್ಳೂರು ಗ್ರಾಮಕ್ಕೆ ಮಾತ್ರ ಸೀಮಿತವಾಗದ ಈ ಒಂಟಿ ಸಲಗ, ದೇವಣಗೇರಿ, ಬೆಳ್ಳರಿಮಾಡು, ಕುಕ್ಲೂರು, ಪೊದಕೋಟೆ, ಐಮಂಗಲ, ಮೈತಾಡಿ, ಕದನೂರು, ಬಿಳುಗುಂದ, ಹಾಲುಗುಂದ ಹಾಗೂ ಅಮ್ಮತ್ತಿ ಸೇರಿದಂತೆ ಹತ್ತಾರು ಗ್ರಾಮಗಳ ಕಾಫಿ ತೋಟಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿತ್ತು. ಒಂದು ವಾರದಿಂದ ರೈತರು ಕಷ್ಟಪಟ್ಟು ಬೆಳೆದಿದ್ದ ಕಾಫಿ, ಮೆಣಸು ಮುಂತಾದ ಕೃಷಿ ಫಸಲನ್ನು ವ್ಯಾಪಕವಾಗಿ ನಾಶಪಡಿಸುತ್ತಿದ್ದ ಈ ಆನೆ, ತೋಟದ ಕಾರ್ಮಿಕರು ಹಾಗೂ ಸ್ಥಳೀಯರ ಮೇಲೂ ಏಕಾಏಕಿ ದಾಳಿಗೆ ಯತ್ನಿಸುವ ಮೂಲಕ ಜನರಲ್ಲಿ ಪ್ರಾಣಭಯ ಹುಟ್ಟಿಸಿತ್ತು. ಆನೆಯ ನಿರಂತರ ಹಾವಳಿಯಿಂದಾಗಿ ಜನರು ಕತ್ತಲಾಗುತ್ತಿದ್ದಂತೆಯೇ ಮನೆಯಿಂದ ಹೊರಬರಲು ಬೆಚ್ಚಿಬೀಳುವಂತಹ ವಾತಾವರಣ ನಿರ್ಮಾಣವಾಗಿತ್ತು ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಸಾಧು ಸ್ವಭಾವದ ಈ ಒಂಟಿ ಸಲಗ!
ಈ ಒಂಟಿ ಸಲಗ ಕಳೆದ ಕೆಲವು ವರ್ಷಗಳಿಂದ ಇದೇ ಭಾಗದ ಕಾಫಿ ತೋಟಗಳಲ್ಲಿಯೇ ಸುತ್ತಾಡುತ್ತಿತ್ತು. ಎಷ್ಟೇ ಪ್ರಯತ್ನಪಟ್ಟು ಅರಣ್ಯದತ್ತ ಓಡಿಸಿದರೂ, ಅದು ಮರಳಿ ಕಾಡಿಗೆ ಹೋಗುತ್ತಿರಲಿಲ್ಲ. ವಿಶೇಷವೆಂದರೆ, ಈ ಕಾಡಾನೆಯ ದಾಳಿಗೆ ಸಿಲುಕಿ ಈ ಹಿಂದೆ ಯಾರೊಬ್ಬರೂ ಮೃತಪಟ್ಟಿರಲಿಲ್ಲ. ಹೀಗಾಗಿಯೇ, ಮೂರು ತಿಂಗಳ ಹಿಂದೆಯೇ ಈ ಕಾಡಾನೆಯನ್ನು ಸೆರೆಹಿಡಿಯಲು ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ಮಾನವ ಹಾನಿ ಮಾಡದ ಕಾರಣಕ್ಕೆ ಮೇಲಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದ್ದರು.
ಆದರೆ, ಇತ್ತೀಚಿನ ದಿನಗಳಲ್ಲಿ ಈ ಆನೆಯ ಸ್ವಭಾವ ದಿಢೀರ್ ಬದಲಾಗಿತ್ತು. ಜನರನ್ನು ಅಡ್ಡಾದಿಡ್ಡಿ ಅಟ್ಟಾಡಿಸಲು ಶುರುಮಾಡಿತ್ತು. ಕೆಲವರು ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಜೊತೆಗೆ ಅಪಾರ ಪ್ರಮಾಣದ ಫಸಲನ್ನು ಕೂಡ ನಾಶ ಮಾಡುತ್ತಿದ್ದ ಕಾರಣ, ಸ್ಥಳೀಯರ ಆಕ್ರೋಶ ಕಟ್ಟೆಯೊಡೆದಿತ್ತು. ಹಾಗಾಗಿ ಜನರ ಒತ್ತಾಯದ ಮೇರೆಗೆ ಇಲಾಖೆ ಈ ಆನೆಯನ್ನು ಸೆರೆಹಿಡಿದಿದೆ.
ಈ ಬಗ್ಗೆ ಕೊಡಗಿನ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ಈಗ ಸೆರೆ ಸಿಕ್ಕಿರುವ ಗಂಡಾನೆ, ಯಾವ ಪ್ರಾಣಿಹಾನಿಯನ್ನು ನಡೆಸಿಲ್ಲ. ಈ ಹಿಂದೆ ಸೆರೆ ಸಿಕ್ಕಿಂದ ಒಂಟಿಸಲಗ ಒಬ್ಬ ಮಹಿಳೆಯನ್ನು ಸಾಯಿಸಿತ್ತು. ಆದರೆ, ಈ ಪುಂಡಾನೆಯು ಅಪಾರ ಆಸ್ತಿಪಾಸ್ತಿ ನಷ್ಟ ಮಾಡಿದ್ದು, ಕಾಫಿ ತೋಟವನ್ನೆ ದ್ವಂಸ ಮಾಡಿತ್ತು. ಇತ್ತೀಚೆಗೆ ಕೋಪಿಷ್ಟನಾಗಿ ದಾಳಿ ನಡೆಸಲು ಯತ್ನಿಸಿತ್ತು. ಹೀಗಾಗಿ ಸೆರೆ ಕಾರ್ಯಚರಣೆ ಮೂಲಕ ಒಂಟಿಸಲಗವನ್ನು ಸೆರೆ ಹಿಡಿಯಲಾಗಿದೆ ಎಂದರು.
ಸೆರೆ ಹಿಡಿದಿದ್ದು ಹೇಗೆ?
ಸಾರ್ವಜನಿಕರ ತೀವ್ರ ಒತ್ತಾಯಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು, ಆನೆ ಹಿಡಿಯುವ ಕಾರ್ಯಾಚರಣೆ ನಡೆಸುವಂತೆ ಅರಣ್ಯ ಇಲಾಖೆಗೆ ಸೂಚನೆ ರವಾನಿಸಿದ್ದರು. ಅವರ ಸೂಚನೆ ಬೆನ್ನಲ್ಲೇ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ ರೂಪುಗೊಂಡಿತ್ತು.
ಈ ಕೋಪಿಷ್ಠ ಕಾಡಾನೆಯನ್ನು ಮಣಿಸಲು ದುಬಾರೆ ಹಾಗೂ ಮತ್ತಿಗೋಡು ಶಿಬಿರಗಳ ಅಭಿಮನ್ಯು, ಮಹೇಂದ್ರ, ರಂಜನ್, ಭೀಮಾ, ಸುಗ್ರೀವ ಹಾಗೂ ಹರ್ಷ ಎಂಬ ಆರು ಬಲಿಷ್ಠ ಕುಮ್ಕಿ ಆನೆಗಳನ್ನು ಕಣಕ್ಕಿಳಿಸಲಾಯಿತು. ಚೆಂಬೆಬೆಳ್ಳೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಸತತ ಐದು ಗಂಟೆಗಳ ಕಾಲ ನಡೆದ ಜಿದ್ದಾಜಿದ್ದಿನ ಕಾರ್ಯಾಚರಣೆಯಲ್ಲಿ, ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಹಾಗೂ ನುರಿತ ಅರಿವಳಿಕೆ ಮದ್ದಿನ ಶಾರ್ಪ್ ಶೂಟರ್ ಕನ್ನಂಡ ರಂಜನ್ ಅವರು ಅತ್ಯಂತ ಎಚ್ಚರಿಕೆಯಿಂದ ಕಾಡಾನೆಗೆ ಅರವಳಿಕೆ ಮದ್ದು (ಡಾರ್ಟ್) ನೀಡುವಲ್ಲಿ ಯಶಸ್ವಿಯಾದರು. ಅರವಳಿಕೆ ಪ್ರಭಾವದಿಂದ ತೂರಾಡತೊಡಗಿದ ಸಲಗವನ್ನು ಆರು ಸಾಕಾನೆಗಳು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡವು.
ಕಾಫಿನಾಡು ಕೊಡಗಲ್ಲಿ 114 ಆನೆಗಳು!
ಕೊಡಗು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೊಸದೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಫಿ ತೋಟಗಳೇ ಆನೆಗಳ ಖಾಯಂ ಆವಾಸಸ್ಥಾನವಾಗಿ ಬದಲಾಗುತ್ತಿದೆ. ಇಂತಹ ಕಾಫಿ ನಾಡಿನ ಆನೆಗಳ ಬಗ್ಗೆಯು ಸ್ಥಳೀಯರು ಅಸಮಧಾನ ಹೊರಹಾಕುತ್ತಿದ್ದಾರೆ.
ಅರಣ್ಯ ಇಲಾಖೆಯ ಅಂದಾಜಿನ ಪ್ರಕಾರ, ಕೊಡಗು ಜಿಲ್ಲೆಯಲ್ಲೇ ಸುಮಾರು 114 ಆನೆಗಳು ಕಾಡಿಗೂ ಮರಳದೆ, ಸಂಪೂರ್ಣವಾಗಿ ನಾಡಿಗೂ ಬಾರದೆ ಕಾಫಿ ತೋಟಗಳಲ್ಲೇ ತಮ್ಮ ಬದುಕನ್ನು ಕಂಡುಕೊಂಡಿವೆ. ಅಚ್ಚರಿಯೆಂದರೆ, ಇವುಗಳಲ್ಲಿ ಬಹುತೇಕ ಆನೆಗಳು ಮನುಷ್ಯರೊಂದಿಗೆ ಹೊಂದಿಕೊಂಡು ಮಾನವಸ್ನೇಹಿಗಳಾಗಿ ಸಾಧು ಸ್ವಭಾವದಿಂದ ಇರುತ್ತವೆ. ಕಾಫಿನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗಿನಲ್ಲಿ ಒಟ್ಟು ಅಂದಾಜು 161 ಆನೆಗಳು (2023ರ ಅನೆಗಣತಿ ಅಂಶಗಳು) ಬೀಡುಬಿಟ್ಟಿವೆ.
ಅರಣ್ಯಾಧಿಕಾರಿಗಳ ಪ್ರಕಾರ, ಕೊಡಗಿನಲ್ಲಿ ಮಾತ್ರ ಕಾಡು ಪ್ರದೇಶದೊಳಗೇ (ಬ್ರಿಟಿಷರ ಕಾಲದಿಂದ) ಕಾಫಿಯನ್ನು ಬೆಳೆಯುತ್ತಿರುವುದು ಅಲ್ಲಿ ಅನೆಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ಆದರೆ, ಇನ್ನು ಕೆಲವು ಆನೆಗಳು ಮಾತ್ರ ದಿಢೀರ್ ಕೋಪಗೊಂಡು ಮನುಷ್ಯರ ಪ್ರಾಣಹಾನಿಗೆ ಕಾರಣವಾಗುತ್ತಿವೆ. ಆನೆ ಓಡಾಟದ ಕಾಫಿ ತೋಟಗಳು ಕಾಲಕ್ರಮೇಣ ಜನವಸತಿ ಪ್ರದೇಶಗಳಾಗಿ, ಲೇ ಔಟ್‌ಗಳಾಗಿ, ರೆಸಾರ್ಟ್‌ಗಳಾಗಿ ಬದಲಾದ ಹೊತ್ತಿನಲ್ಲೇ ಆನೆಗಳ ಸಾಧುಸ್ವಭಾವ ಮರೆಯಾಗಿ ತಮಗೆದುರಾಗುವ ಮನುಷ್ಯನ ಮೇಲೆ ದಾಳಿ ನಡೆಸುವ ಘಟನೆಗಳು ಹೆಚ್ಚುತ್ತಿವೆ.
ಹಾಗಾಗಿಯೇ ವಿರಾಜಪೇಟೆ ತಾಲೂಕಿನಲ್ಲಿ ಸಾರ್ವಜನಿಕರ ನಿದ್ದೆಗೆಡಿಸಿದ್ದ 34 ವರ್ಷದ ʼಕಾಫಿನಾಡಿʼನ ಒಂಟಿ ಸಲಗವನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದು ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಹೆಚ್ಚುತ್ತಿದ್ದ ಸಾವು-ನೋವು
ಈ ಒಂಟಿ ಸಲಗದ ಸೆರೆಗೂ ಮುನ್ನ ಕೊಡಗಿನ ಪರಿಸ್ಥಿತಿ ಅತ್ಯಂತ ಭೀಕರವಾಗಿತ್ತು. ಕೇವಲ ಹತ್ತು ದಿನಗಳ ಅಂತರದಲ್ಲಿ ವಿರಾಜಪೇಟೆ ತಾಲೂಕಿನಲ್ಲಿ ಸೆರೆಯಾದ ಎರಡನೇ ಆನೆ ಇದಾಗಿದೆ. ವಾರದ ಹಿಂದೆಯಷ್ಟೇ ಸೆರೆ ಸಿಕ್ಕಿದ್ದ ಮತ್ತೊಂದು ಗಂಡಾನೆಯು ಮಹಿಳೆಯೊಬ್ಬರನ್ನು ಬಲಿ ಪಡೆದಿತ್ತು. ಸೆರೆ ಕಾರ್ಯಾಚರಣೆಯ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಗೆ ಸಿಗದೆ ಬರೋಬ್ಬರಿ 14 ಕಿ.ಲೋ.ಮೀಟರ್‌ಗಳವರೆಗೆ ಓಡಾಡಿ, ಇಲಾಖೆ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಆಟವಾಡಿಸಿತ್ತು. ಆ ಕಾಡಾನೆಯನ್ನು ಸೆರೆಹಿಡಿದ ಬಳಿಕ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು.
ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಒಟ್ಟು ಐದು ಮಂದಿ ಬಲಿಯಾಗಿದ್ದಾರೆ. ಅದರಲ್ಲೂ ಮಾರ್ಚ್ ತಿಂಗಳ ಕೇವಲ 22 ದಿನಗಳ ಅವಧಿಯಲ್ಲಿಯೇ ಮೂವರು ಮೃತಪಟ್ಟಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ದಿನೇದಿನೇ ಹೆಚ್ಚಾಗುತ್ತಿದ್ದ ಆನೆಗಳ ದಾಂಧಲೆ ಮತ್ತು ಸಾವು-ನೋವುಗಳಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಸೆರೆಯಾದ ಆನೆಗಳು ಮರಳಿ ಕಾಫಿನಾಡಿಗೋ ಅಥವಾ ಕಾಡಿಗೋ?
ವಾರದ ಹಿಂದೆ ಸೆರೆ ಸಿಕ್ಕಿದ್ದ ಆನೆ ಹಾಗೂ ಈಗ ಸೆರೆಯಾಗಿರುವ ಈ ಒಂಟಿ ಸಲಗ ಎರಡನ್ನೂ ಮತ್ತಿಗೋಡು ಆನೆ ಶಿಬಿರಕ್ಕೆ ಬಿಗಿ ಭದ್ರತೆಯಲ್ಲಿ ಅತ್ಯಂತ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೂ, ಕಾಫಿ ತೋಟಗಳಲ್ಲೇ ಉಳಿದುಕೊಂಡಿರುವ ನೂರಕ್ಕೂ ಹೆಚ್ಚು ಆನೆಗಳ ಮುಂದಿನ ಭವಿಷ್ಯ ಹಾಗೂ ಮಾನವ-ವನ್ಯಜೀವಿ ಸಂಘರ್ಷದ ಶಾಶ್ವತ ಪರಿಹಾರವು ಆಡಳಿತ ವ್ಯವಸ್ಥೆಯ ಮುಂದಿರುವ ಬಹುದೊಡ್ಡ ಸವಾಲಾಗಿ ಮುಂದುವರಿದಿದೆ.
ಸೆರೆ ಕಾರ್ಯಾಚರಣೆಯ ಹಿಂದಿನ ಶ್ರಮ
ಕಾಡಾನೆಯನ್ನು ಸೆರೆ ಹಿಡಿಯುವುದು ಸಾಮಾನ್ಯದ ಮಾತಲ್ಲ. ಅದೊಂದು ಅತ್ಯಂತ ತ್ರಾಸದಾಯಕ ಹಾಗೂ ದುಬಾರಿ ಪ್ರಕ್ರಿಯೆ. ಚೆಂಬೆಬೆಳ್ಳೂರು ಕಾರ್ಯಾಚರಣೆಯೊಂದಕ್ಕೇ ಬರೋಬ್ಬರಿ 110ಕ್ಕೂ ಅಧಿಕ ಮಂದಿ ನುರಿತ ಸಿಬ್ಬಂದಿ ಹಾಗೂ 6 ಬಲಿಷ್ಠ ಸಾಕಾನೆಗಳನ್ನು (ಕುಮ್ಕಿ ಆನೆಗಳು) ಬಳಸಿಕೊಳ್ಳಲಾಗಿದೆ. ಇಂತಹ ಕಾರ್ಯಾಚರಣೆಗೆ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ.
ಸೆರೆ ಹಿಡಿದರೂ, ನಷ್ಟ ಜನರಿಗೇ!...
ಶೋಚನೀಯ ಸಂಗತಿಯೆಂದರೆ, ಕಾರ್ಯಾಚರಣೆ ನಡೆಯುವ ಕಾಫಿ ತೋಟದ ಮಾಲೀಕರು ಅನುಭವಿಸುವ ನಷ್ಟ. ಬೃಹತ್ ಗಾತ್ರದ ಒಂಟಿ ಸಲಗವನ್ನು ಮಟ್ಟಹಾಕಲು ಆರು ಸಾಕಾನೆಗಳು, ನೂರಾರು ಸಿಬ್ಬಂದಿ ತೋಟದೊಳಗೆ ಇಳಿದು ಹೋರಾಡುವಾಗ ಅಲ್ಲಿನ ಕಾಫಿ, ಮೆಣಸು ಸೇರಿದಂತೆ ಅಪಾರ ಪ್ರಮಾಣದ ಬೆಳೆ ಸಂಪೂರ್ಣವಾಗಿ ನೆಲಸಮವಾಗುತ್ತದೆ. ಕಾಡಾನೆಯಿಂದ ಆಗುವ ನಷ್ಟಕ್ಕಿಂತ, ಅದನ್ನು ಸೆರೆಹಿಡಿಯುವಾಗ ಆಗುವ ನಷ್ಟವೇ ಕೆಲವೊಮ್ಮೆ ಅಧಿಕವಾಗಿರುತ್ತದೆ.
ತುಂಬಿ ತುಳುಕುತ್ತಿವೆ ಆನೆ ಶಿಬಿರಗಳು!
ವರ್ಷಗಳು ಉರುಳಿದಂತೆ ಹಾಗೂ ಅನೆ-ಮಾನವ ಸಂಘರ್ಷ ಹೆಚ್ಚಾದಂತೆ ಕಾಡಿನಿಂದ ನಾಡಿಗೆ ಬಂದು ಸೆರೆಯಾಗುತ್ತಿರುವ ಆನೆಗಳ ಸಂಖ್ಯೆಯೂ ಮಿತಿಮೀರುತ್ತಿದೆ. ಇದರಿಂದಾಗಿ ರಾಜ್ಯದ ಆನೆ ಶಿಬಿರಗಳೆಲ್ಲವೂ ತುಂಬಿ ತುಳುಕುತ್ತಿವೆ.
ಕುಶಾಲನಗರ ತಾಲ್ಲೂಕಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರವೊಂದರಲ್ಲೇ ಪ್ರಸ್ತುತ 28 ಆನೆಗಳಿವೆ. ನಾಗರಹೊಳೆಯ ಮತ್ತಿಗೋಡು ಶಿಬಿರದಲ್ಲಿ 15 ಆನೆಗಳಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚುವರಿಯಾಗಿ ತೆರೆಯಲಾದ ಹಾರಂಗಿ ಸಾಕಾನೆ ಶಿಬಿರದಲ್ಲಿ 4 ಆನೆಗಳಿಗೆ ಆಶ್ರಯ ನೀಡಲಾಗಿದೆ.
ಹೀಗೆ ನಾಡಿಗೆ ಬಂದ ಆನೆಗಳನ್ನೆಲ್ಲ ಸೆರೆ ಹಿಡಿದು ಶಿಬಿರಕ್ಕೆ ಅಟ್ಟುತ್ತಾ ಹೋದರೆ, ಹೊಸ ಹೊಸ ಶಿಬಿರಗಳನ್ನು ತೆರೆಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಜೊತೆಗೆ, ಈ ಬೃಹತ್ ಪ್ರಾಣಿಗಳಿಗೆ ನಿತ್ಯವೂ ಮೇವು, ವೈದ್ಯಕೀಯ ಆರೈಕೆ ಒದಗಿಸುವುದು ಹಾಗೂ ಮಾವುತರನ್ನು ನೇಮಿಸುವುದು ಸರ್ಕಾರದ ಬೊಕ್ಕಸದ ಮೇಲೆ ತೀವ್ರ ಆರ್ಥಿಕ ಹೊರೆ ಬೀಳುವಂತೆ ಮಾಡುತ್ತದೆ.
ಪರಿಸರ ತಜ್ಞರು ಹೇಳುವಂತೆ, ಕಾಡಾನೆಗಳನ್ನು ಸೆರೆ ಹಿಡಿಯುವುದೊಂದೇ ಈ ಸಂಘರ್ಷವನ್ನು ತಡೆಗಟ್ಟುವ ಅಂತಿಮ ಪರಿಹಾರವಲ್ಲ. ಕಾಡಿನ ಒಳಗೆ ಆನೆಗಳಿಗೆ ಅಗತ್ಯವಿರುವ ಕುಡಿಯುವ ನೀರು ಹಾಗೂ ಮೇವಿನ ಕೊರತೆಯನ್ನು ನೀಗಿಸುವುದು, ಆನೆ ಕಾರಿಡಾರ್‌ಗಳ ಒತ್ತುವರಿ ತೆರವುಗೊಳಿಸುವುದು ಅತ್ಯಗತ್ಯ. ಇದರೊಂದಿಗೆ, ರೈಲ್ವೆ ಹಳಿಗಳ ಬ್ಯಾರಿಕೇಡ್ ಅಳವಡಿಕೆ, ನೇತಾಡುವ ಸೌರ ವಿದ್ಯುತ್ ಬೇಲಿಗಳಂತಹ ಅತ್ಯಾಧುನಿಕ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೈಗೊಂಡು ಆನೆಗಳು ಕಾಡಿನಿಂದ ಹೊರಬಾರದಂತೆ ತಡೆಯಬೇಕಿದೆ.

