ಇರಾನ್ ಪರಮೋಚ್ಛ ನಾಯಕ ಖಮೇನಿ ಬಂದಿದ್ದ ಬೆಂಗಳೂರು ಪಕ್ಕದ ಬೇಬಿ ಆಫ್‌ ಇರಾನ್- ಅಲಿಪುರ ನೀರವ
x
ಅಲಿಪುರದಲ್ಲಿ ಶಿಯಾ ಮುಸ್ಲಿಮರು ಕಪ್ಪುಬಟ್ಟೆ ಧರಿಸಿ ಶೋಕಾಚರಣೆ ಮಾಡುತ್ತಿರುವುದು

ಇರಾನ್ ಪರಮೋಚ್ಛ ನಾಯಕ ಖಮೇನಿ ಬಂದಿದ್ದ ಬೆಂಗಳೂರು ಪಕ್ಕದ ಬೇಬಿ ಆಫ್‌ ಇರಾನ್- ಅಲಿಪುರ ನೀರವ

ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು 1986 ರಲ್ಲಿ ಅಲಿಪುರಕ್ಕೆ ಬಂದಿದ್ದರು.


Click the Play button to hear this message in audio format

ಇಸ್ರೇಲ್-ಅಮೆರಿಕ ಜಂಟಿ ವಾಯುದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಹತರಾದ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರದಲ್ಲಿ ಮೌನ ಮನೆಮಾಡಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಉದ್ಯಮ ಹಾಗೂ ವ್ಯಾವಹಾರಿಕ ನಂಟು ಹೊಂದಿರುವ ಅಲಿಪುರದಲ್ಲಿ, ಇರಾನ್ ಧರ್ಮಗುರು ಅಯಾತೊಲ್ಲಾ ಖಮೇನಿ ಅವರ ಆಣತಿಯಂತೆಯೇ ಎಲ್ಲವೂ ನಡೆಯುತ್ತಿತ್ತು. ಶಿಯಾ ಮುಸ್ಲಿಮರು ಹೆಚ್ಚಾಗಿರುವ ಅಲಿಪುರದಲ್ಲಿ ಅವರ ಮಾತೇ ವೇದವಾಕ್ಯವಾಗಿತ್ತು. ತಮ್ಮ ಧಾರ್ಮಿಕ ಗುರುವಿನ ಹತ್ಯೆಯಿಂದ ಇದೀಗ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.

ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಯ ನಂತರ, ಶನಿವಾರ ಇರಾನ್‌ನ ಒಳಿತಿಗಾಗಿ ಗ್ರಾಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು. ಆದರೆ, ಶನಿವಾರ ರಾತ್ರಿ 11.30ರಿಂದಲೇ ಖಮೇನಿ ಹತ್ಯೆಯ ಸುದ್ದಿ ಹರಿದಾಡಿತ್ತು.‌ ಭಾನುವಾರ ಅಮೆರಿಕ ಹಾಗೂ ಇಸ್ರೇಲ್ ಖಮೇನಿಯವರ ಹತ್ಯೆಯನ್ನು ಅಧಿಕೃತವಾಗಿ ಖಚಿತಪಡಿಸಿದ ಬಳಿಕ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.

ಅಲಿಪುರದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿರುವುದು

ಅಂಗಡಿ-ಮುಂಗಟ್ಟುಗಳು ಬಂದ್: ಮೂರು ದಿನ ಶೋಕಾಚರಣೆ

ಖಮೇನಿಯವರ ಹತ್ಯೆಯ ಹಿನ್ನೆಲೆಯಲ್ಲಿ ಅಲಿಪುರದಲ್ಲಿ ಮೂರು ದಿನಗಳ ಶೋಕಾಚರಣೆ ಕೈಗೊಳ್ಳಲಾಗಿದೆ. ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ, ಜನರು ಕಪ್ಪು ಬಟ್ಟೆ ಧರಿಸಿ ಶೋಕಾಚರಣೆ ಆಚರಿಸುತ್ತಿದ್ದಾರೆ‌.

ಶಿಯಾ‌ ಮುಸ್ಲಿಮರಿರುವ ಎಲ್ಲಾ ರಾಷ್ಟ್ರಗಳಲ್ಲೂ ಖಮೇನಿ ಹತ್ಯೆಯ ಹಿನ್ನೆಲೆಯಲ್ಲಿ ಶೋಕಾಚರಣೆ ಆಚರಿಸಲಾಗುತ್ತಿದೆ. ಖಮೇನಿ ಅವರ ಕಚೇರಿಯನ್ನೇ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಖಮೇನಿ, ಅವರ ಮಗ, ಅಳಿಯ ಸೇರಿದಂತೆ ರಕ್ಷಣಾ ಸಚಿವರು ಹಾಗೂ ಕಮಾಂಡರ್ ಹತ್ಯೆಯಾಗಿರುವುದು ಖಚಿತವಾಗಿದೆ. "ಇರಾನ್‌ನಲ್ಲಿರುವ ಅಲಿಪುರದ ಗ್ರಾಮಸ್ಥರು ಹಾಗೂ ಎಲ್ಲ ಭಾರತೀಯರು ಸುರಕ್ಷಿತವಾಗಿದ್ದಾರೆ," ಎಂದು ಅಲಿಪುರದ ನಿವಾಸಿ ಮಿರ್ ತಸ್ವೀರ್ ಅಬ್ಬಾಸ್ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

"ಶಿಯಾ ಮುಸ್ಲಿಮರು ಯಾರಿಗೂ ತೊಂದರೆ‌ ಮಾಡುವುದಿಲ್ಲ, ನಾವು ಸಾವಿಗೆ ಹೆದರುವುದಿಲ್ಲ.‌ ಇರಾನ್‌ನಲ್ಲಿರುವ ಪೆಟ್ರೋಲ್, ಗ್ಯಾಸ್ ಹಾಗೂ ಯುರೇನಿಯಂ ಸಂಪತ್ತನ್ನು ದೋಚಲು ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಹುಚ್ಚಾಟವಿದು," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಖಮೇನೊ ಅವರು ಅಲಿಪುರಕ್ಕೆ ಬಂದಿದ್ದ ಸಂದರ್ಭ

1986ರಲ್ಲಿ ಅಲಿಪುರಕ್ಕೆ ಭೇಟಿ ನೀಡಿದ್ದ ಖಮೇನಿ

ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು 1986ರಲ್ಲಿ ಅಲಿಪುರಕ್ಕೆ ಭೇಟಿ ನೀಡಿದ್ದರು. ಆಗಿನ್ನೂ ಅವರು ರಾಜಕೀಯ ಪ್ರವೇಶಿಸಿರಲಿಲ್ಲ, ಬದಲಾಗಿ ಕೇವಲ ಧರ್ಮಗುರುವಾಗಿ ಅಲಿಪುರಕ್ಕೆ ಬಂದಿದ್ದರು. ಅವರ ಆ ಭೇಟಿಯ ನೆನಪಿಗಾಗಿ ಅವರ ಗುರುಗಳಾದ ಇಮಾಮ್ ಖೊಮೇನಿ ಹೆಸರಿನಲ್ಲಿ ಆಸ್ಪತ್ರೆಯೊಂದನ್ನು ನಿರ್ಮಿಸಲಾಗಿದ್ದು, ಅಂದು ಆಸ್ಪತ್ರೆಗೆ ಶಂಕುಸ್ಥಾಪನೆಯನ್ನು ಖುದ್ದು ಖಮೇನಿ ಅವರೇ ನೆರವೇರಿಸಿದ್ದರು.

ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿ ಹೋದ ನಂತರ ಇರಾನ್ ಜೊತೆಗಿನ ಅಲಿಪುರದ ಒಡನಾಟ ಮತ್ತಷ್ಟು ಹೆಚ್ಚಾಯಿತು.

ಭಾರತ ಮೂಲದವರಾಗಿದ್ದ ಖೊಮೇನಿ ಪೂರ್ವಜರು

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಕಿಂತೂರು ಗ್ರಾಮದಲ್ಲಿ ಜನಿಸಿದ್ದ ಸೈಯದ್ ಅಹ್ಮದ್ ಮೌಸವಿ ಹಿಂದಿ ಎನ್ನುವ ಧಾರ್ಮಿಕ ಗುರುಗಳು, ಇಲ್ಲಿಂದ ಇರಾನ್‌ಗೆ ತೆರಳಿ 'ಖಮೇನಿ' ಕುಟುಂಬವನ್ನು ಶಿಯಾ ಪರಂಪರೆಯಲ್ಲಿ ಮುಂಚೂಣಿಗೆ ತರುವಲ್ಲಿ ಶ್ರಮಿಸಿದ್ದರು.

ಇರಾನ್‌ನ ದಾಖಲೆಗಳಲ್ಲೂ ಸೈಯದ್ ಅಹ್ಮದ್ ಮೌಸವಿ ಹಿಂದಿ ಅವರ ಹೆಸರು ದಾಖಲಾಗಿದೆ. ಮೌಸವಿ ಅವರು ಇರಾನ್‌ಗೆ ವಲಸೆ ಹೋದರೂ, ತಮ್ಮ ಜನ್ಮಸ್ಥಾನವು ಹಿಂದೂಸ್ತಾನ ಎಂದು ಪರಿಚಯಿಸಿಕೊಳ್ಳುವ ನಿಟ್ಟಿನಲ್ಲಿ 'ಹಿಂದಿ' ಎಂಬ ಉಪನಾಮವನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಖಮೇನಿ‌ ಆಜ್ಞೆ ಪಾಲಿಸುತ್ತಿದ್ದ ಸುಪ್ರೀಂ ಮಂಡಳಿ

ಅಲಿಪುರ ಗ್ರಾಮದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಬೇಕಾದರೂ 'ಅಂಜುಮನ್-ಇ-ಜಾಫರಿಯಾ' (ಸುಪ್ರೀಂ ಮಂಡಳಿ) ನಿರ್ಣಯ ಕೈಗೊಳ್ಳುತ್ತದೆ. ಆದರೆ ಅದಕ್ಕೂ ಮೊದಲು, ಇಲ್ಲಿನ ಪ್ರತಿ ಆಗುಹೋಗುಗಳನ್ನು ಸಮಿತಿಯ ಮುಖ್ಯಸ್ಥರಾದ ಅಲ್ಲಾಮ ಹುಜಾತುಲ್ ಇಸ್ಲಾಂ ಸೈಯದ್ ಮೊಹಮ್ಮದ್ ಝಕಿ ಅಲಿ ಬಖ್ರಿ ಸಾಹೇಬ್ ಖಿಬ್ಲಾ ಅವರಿಗೆ ತಲುಪಿಸಲಾಗುತ್ತದೆ. "ಕೆನಡಾದಲ್ಲಿ ವಾಸವಿರುವ ಅವರು ನಮ್ಮ ನಿರ್ಧಾರಗಳನ್ನು ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರಿಗೆ ತಿಳಿಸಿ, ಅವರಿಂದ ಅಂತಿಮ ಆದೇಶ ಪಡೆಯುತ್ತಿದ್ದರು. ಆ ನಂತರವೇ ಇಲ್ಲಿ ನಿರ್ಣಯ ಕೈಗೊಳ್ಳಲಾಗುತ್ತಿತ್ತು" ಎಂದು ಅಂಜುಮನ್-ಇ-ಜಾಫರಿಯಾ ಸದಸ್ಯ ಮಿರ್ ಶಬಾಹತ್ ಹುಸೇನ್ ವಿವರಿಸಿದರು.

Read More
Next Story