
Keralam Elections|ʼಭರಣಂ ಮಾರಣಮ್ʼ: ಕೇರಳದಲ್ಲಿ ಬದಲಾವಣೆಯ ತುಡಿತ ಯುಡಿಎಫ್‌ಗೆ ವರವಾದೀತೇ?
ಈ ಬಾರಿ ಬದಲಾವಣೆಗೆ ಪಣ ತೊಟ್ಟಿದ್ದೇವೆʼ ಎನ್ನುತ್ತಿದ್ದಾರೆ ಕೇರಳದ ಜನತೆ. ಆದರೆ ಬದಲಾಗಿರುವ ಮೂಡ್‌ಗೆ ಯುಡಿಎಫ್ ಸಿದ್ಧವಾಗಿದ್ಯಾ? ಹಾಗೆ ಕಾಣುತ್ತಿಲ್ಲ. ದೇವರನಾಡಿನಲ್ಲಿ ಸುತ್ತಾಡಿ ಸಿದ್ಧಪಡಿಸಿದ ವಿಶೇಷ ವರದಿ ಇಲ್ಲಿದೆ.
ʼಭರಣಂ ಮಾರಣಮ್!ʼ
ಹಾಗೆಂದು ಹೇಳಿದ ಆ ಯುವತಿ ಗಂಭೀರವಾಗಿ ನನ್ನ ಮುಖವನ್ನು ದಿಟ್ಟಿಸುತ್ತ, “ಹಾಗೇ ಆಗಬೇಕಾದ್ದು ನ್ಯಾಯ ಅಲ್ಲವೇ?” ಎಂಬ ಮಾತನ್ನೂ ಜೊತೆಗೆ ಸೇರಿಸಿದರು. ಕೇರಳದ ನೀಲೇಶ್ವರಂಗೆ ಸಮೀಪದ ರೆಸಾರ್ಟ್‌ನಲ್ಲಿ ಊಟ ಸೇವಿಸಿ ಈಚೆ ಬಂದು ನಿಂತ ಈ ವರದಿಗಾರನಿಗೆ ಆಕೆ ಹೇಳಿದ ಮಾತಿನಲ್ಲಿ ತೂಕವಿದೆ ಅನ್ನಿಸದೇ ಇರಲಿಲ್ಲ.
ʼಭರಣಂ ಮಾರಣಮ್ʼ ಅಂದರೆ ʼಸರ್ಕಾರ ಬದಲಾಗಬೇಕಿದೆ,ʼ ಎಂದು. ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ವರ್ಷಗಳು ಕಳೆದಿವೆ. ಅಂದರೆ ಎರಡು ಅವಧಿಗಳನ್ನು ಪೂರೈಸಿದ ಸರ್ಕಾರ ಬದಲಾಗಬೇಕಾದ ಅಗತ್ಯವಿದೆ ಎಂಬುದು ಆಕೆಯ ನಿರೀಕ್ಷೆಯಾಗಿತ್ತು. ಹಾಗಂತ ಪಿಣರಾಯಿ ವಿಜಯನ್ ಅವರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದೇನೂ ತಮ್ಮ ಮಾತಿನ ಅರ್ಥ ಅಲ್ಲ ಎಂಬುದನ್ನು ಅವರು ಸೇರಿಸದೇ ಬಿಡಲಿಲ್ಲ.
ಶಬರಿಮಲೆ ಚಿನ್ನ ಕಳವು ಪ್ರಕರಣ, ಶಬರಿಮನೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ತಟಸ್ಥ ನಿಲುವು, ಭ್ರಷ್ಟಾಚಾರ, ಸರ್ವಾಧಿಕಾರಿ ಧೋರಣೆಯಂತಹ ಆರೋಪಗಳ ನಡುವೆಯೂ ರಾಜಕೀಯವಾಗಿ ಪಿಣರಾಯಿ ವಿಜಯನ್ ಅವರ ನಾಯಕತ್ವ ಅತ್ಯಂತ ಗಟ್ಟಿಯಾಗಿಯೇ ಇದೆ. ಇಡೀ ಕೇರಳದಲ್ಲಿ ಎಲ್ಲೆಲ್ಲೂ ಅದ್ದೂರಿಯಾಗಿ ಕಾಣಿಸುವುದು ಎಲ್‌ಡಿಎಫ್‌ನ ಬೃಹತ್ ಗಾತ್ರದ ಹೋರ್ಡಿಂಗ್‌ಗಳು. ಅದರಲ್ಲಿ ಇರುವುದು ಏಕೈಕ ದೈತ್ಯಾಕಾರದ ಚಿತ್ರ ವಿಜಯನ್ ಅವರದ್ದು. ಆ ಜಾಹೀರಾತಿನ ಶೇ.80ರಷ್ಟು ಭಾಗ ಅವರ ಚಿತ್ರವೇ ಆವರಿಸಿಕೊಂಡಿದೆ. ಇನ್ನು ಒಬ್ಬೇ ಒಬ್ಬ ನಾಯಕನ ಚಿತ್ರ ಅಲ್ಲಿ ಕಾಣಿಸದು.
ಕೇರಳದ ಉದ್ದಗಲಕ್ಕೂ ಕಾಣಿಸುವ ಎಲ್ಡಿಎಫ್ ಹೋರ್ಡಿಂಗ್ಗಳಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಬ್ಬರೇ ಆವರಿಸಿಕೊಂಡಿದ್ದಾರೆ. ಆ ಬಣದ ಯಾರೊಬ್ಬರ ಚಿತ್ರ ಕೂಡ ಅದರಲ್ಲಿ ಇಲ್ಲ. (ಚಿತ್ರ : ಮಂಜುನಾಥ್ ಚಾಂದ್)
ಕಮ್ಯುನಿಸ್ಟ್ ಪಕ್ಷದ ಮೋದಿ!
ಅಷ್ಟೂ ಜಾಹೀರಾತುಗಳನ್ನು, ಹೋರ್ಡಿಂಗ್ಸ್ ನೋಡುತ್ತ ಹೋದ ಹಾಗೆ ಅನ್ನಿಸಿದ್ದು ಈ ಪಿಣರಾಯಿ ವಿಜಯನ್ ಕಮ್ಯುನಿಸ್ಟ್ ಪಕ್ಷದ ಮೋದಿ ಆಗಿದ್ದಾರಲ್ಲವೇ ಎಂದು. ಯಾಕೆಂದರೆ ಈ ಹೋರ್ಡಿಂಗ್ಸ್ ಬಿಜೆಪಿಯ ಪಡಿಯಚ್ಚಿನಂತೆ ಕಾಣಿಸುತ್ತವೆ. ಅದರಲ್ಲಿರುವುದೂ ಆಳೆತ್ತರದ ಮೋದಿ ಚಿತ್ರ. ಅಲ್ಲಿ ಉಳಿದ ಛೋಟಾ-ಮೋಟಾ ನಾಯಕರುಗಳು ಕಾಣಿಸಿಕೊಳ್ಳುವುದೇ ಇಲ್ಲ. ಇದಕ್ಕೆ ಪೂರಕವೆಂಬಂತೆ ಮಾತನಾಡಿದವರು ಪಯ್ಯನೂರಿನ ಮೋಹನ್ ಕುಮಾರ್. ಅವರು ಸಿಪಿಐ(ಎಂ)ನ ಸ್ಥಳೀಯ ನಾಯಕರು.
“ಎನ್ಡಿಎ ನರೇಂದ್ರ ಮೋದಿ ಅವರನ್ನು ಮಾತ್ರ ಮುಂದಿಟ್ಟುಕೊಂಡು ಚುನಾವಣೆಯನ್ನು ಗೆಲ್ಲುತ್ತದೆ. ಅಲ್ಲಿ ಉಳಿದವರು ನಗಣ್ಯ. ಹಾಗೇ ಎಲ್‌ಡಿಎಫ್‌ಗೆ ಪಿಣರಾಯಿ ವಿಜಯನ್ ಕೂಡ. ಪಿಣರಾಯಿ ಅವರ ನಾಯಕತ್ವ ಇಲ್ಲಿ ಭದ್ರವಾಗಿ ಇರುವ ಕಾರಣದಿಂದಲೇ ಅಭ್ಯರ್ಥಿಗಳಿಗೆ ಗೆಲವು ಸುಲಭವಾಗುತ್ತಿದೆ. ನಮಗೆ ಮೂರನೇ ಬಾರಿ ಎಲ್‌ಡಿಎಫ್ ಅಧಿಕಾರಕ್ಕೆ ಬಂದು ದಾಖಲೆ ಬರೆಯುತ್ತದೆ ಎಂಬ ವಿಶ್ವಾಸವಿರುವುದು ಕೂಡ ವಿಜಯನ್ ಇರುವುದರಿಂದಲೇ,” ಎಂದು ಅವರು ಹೇಳುತ್ತಾರೆ.
ಆದರೆ ಇದಕ್ಕೆ ಸಂಪೂರ್ಣ ವಿರುದ್ಧವಾಗಿರುವುದು ಯುಡಿಎಫ್ ಪ್ರಚಾರ. ಅಬ್ಬಬ್ಬಾ ಎಂದರೆ ಐವತ್ತು ಕಿ.ಮೀ.ಗೊಂದು ಕಾಣಿಸುವ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್)ದ ಹೋರ್ಡಿಂಗ್ನಲ್ಲಿ ಕನಿಷ್ಠ ಇಪ್ಪತ್ತು ಜನ ನಾಯಕರ ಗಢಣವೇ ದಟ್ಟೈಸಿದೆ. ಅಲ್ಲಿರುವುದು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂಬ ವಿಷಯಾಧಾರಿತ ಪ್ರಚಾರಕ್ಕೆ ಆದ್ಯತೆ. ಇದು ಕೇರಳ ರಾಜಕೀಯವನ್ನು ಆದ್ಯಂತವಾಗಿ ಆವರಿಸಿಕೊಂಡಿರುವ ಎರಡು ಪ್ರಮುಖ ಒಕ್ಕೂಟಗಳ ತದ್ವಿರುದ್ಧವಾದ ಸ್ಥಿತಿ. ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಯಿಸುವ ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸಿಕೊಂಡು ಬಂದಿರುವ ಕೇರಳದ ಮತದಾರರು ಕಳೆದ ಬಾರಿ ಅತ್ಯಪರೂಪಕ್ಕೆಂಬಂತೆ ಪಿಣರಾಯಿ ಸರ್ಕಾರಕ್ಕೆ ಇನ್ನೊಂದು ಅವಕಾಶ ನೀಡುವ ಹೃದಯ ವೈಶಾಲ್ಯತೆ ತೋರಿಸಿದ್ದರು.
ನಾಯಕರ ಸಾಲು ಸಾಲು ಸಂತೆ
ಅದಕ್ಕಾಗಿಯೇ ಈ ಬಾರಿ ಸರ್ಕಾರ ಬದಲಾಯಿಸಲೇಬೇಕು ಎಂಬ ʼತೀರ್ಮಾನʼ ಕೇರಳದ ಮತದಾರರ ಮನಸ್ಸಿನಲ್ಲಿ ಸ್ಥಾಯಿಯಾಗಿ ಕುಳಿತಂತೆ ಕಾಣುತ್ತಿದೆ. ಅದಕ್ಕೆ ಪರ್ಯಾಯವಾಗಿ ಅವರು ಯೋಚಿಸುತ್ತಿರುವುದು ಯುಡಿಎಫ್ ಸರ್ಕಾರವನ್ನು. ಆದರೆ ಅಲ್ಲಿ ನಿರ್ದಿಷ್ಟವಾಗಿ ಬೊಟ್ಟುಮಾಡಿ ತೋರಿಸಲು, ಪಿಣರಾಯಿ ಅವರ ವರ್ಚಸ್ಸಿಗೆ ತಕ್ಕುನಾಗಿ ನಿಲ್ಲಬಲ್ಲ ಒಬ್ಬ ನಾಯಕನೂ ಇಲ್ಲ. ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಅವರ ನಿರ್ಗಮನದ ನಂತರ ಯುಡಿಎಫ್‌ನಲ್ಲಿ ಬಹುದೊಡ್ಡ ನಿರ್ವಾತ ಸೃಷ್ಟಿಯಾಗಿದೆ. ಕಾಂಗ್ರೆಸ್‌ನಲ್ಲಿ ಈಗ ಬಲವಾಗಿ ಗುರುತಿಸಿಕೊಂಡಿರುವ ವಿ.ಡಿ.ಸತೀಶನ್, ರಮೇಶ್ ಚೆನ್ನಿತ್ತಾಲ, ಕೆ.ಸುಧಾಕರನ್, ಕೆ.ಸಿ. ವೇಣುಗೋಪಾಲ್, ಶಶಿ ತರೂರ್ ಹಾಗೂ ಈಗಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಅವರಿಗೆ ಇಡೀ ಕೇರಳದ ಜನಮಾನಸದ ಮೇಲೆ ಪ್ರಭಾವ ಬೀರುವ ಛಾತಿ ಇಲ್ಲ.
“ಕಾಂಗ್ರೆಸ್ಸಲ್ ತಮ್ಮಿಲ್ಲಡಿ” ಎನ್ನುತ್ತಾರೆ ತಲಶ್ಶೇರಿಯ ಬಿ.ಕೆ. ಸುರೇಂದ್ರನ್. ಅಂದರೆ ಒಂದು ರಾಜಕೀಯ ರಂಗವನ್ನು ಒಗ್ಗಟ್ಟಿನಿಂದ ಮುನ್ನಡೆಸಲು ಬೇಕಾದ ಗಟ್ಟಿತನ ಯಾರಲ್ಲಿಯೂ ಕಾಣಿಸುವುದಿಲ್ಲ. ಹಾಗಾಗಿ ಅವರೆಲ್ಲರೂ ಚೂರು ಚೂರಾಗಿದ್ದಾರೆ. ತಮ್ಮದೇ ಬಣಗಳನ್ನು ಕಟ್ಟಿಕೊಳ್ಳುವುದರ ಕಡೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ. ತಾವು ಬಯಸಿರುವ ಬದಲಾವಣೆ ರಾಜ್ಯದಲ್ಲಿ ʼಅಸ್ಥಿರ ಸರ್ಕಾರʼ ರಚನೆಗೆ ಬಾಗಿಲು ತೆರೆದಂತಾಗುತ್ತದೆ ಎಂಬ ಗೊಂದಲ ಕೂಡ ಕೇರಳದ ಜನರಲ್ಲಿದೆ ಎಂಬುದು ಸತ್ಯ.
ʼಈ ಬಾರಿ ಬದಲಾವಣೆ ಬೇಕಿದೆʼ ಎಂದು ಜನ ನಿರ್ಧಾರ ಮಾಡಿದ್ದರೂ ಕೂಡ, ನಾವು ಮಾತನಾಡಿಸಿದ ಬಹಳಷ್ಟು ಮಂದಿ ಅಂತಹ ತುಡಿತವನ್ನು ವ್ಯಕ್ತಪಡಿಸಿದರೂ ಕೂಡ ಅದರ ಲಾಭವನ್ನು ಜಿದ್ದಿಗೆ ಬಿದ್ದು ಪಡೆದುಕೊಳ್ಳಲೇಬೇಕು ಎಂಬ ಛಾತಿ ಕಾಂಗ್ರೆಸ್ ನಾಯಕರಿಗೆ ಇದ್ದಂತೆ ಕಾಣಿಸಲಿಲ್ಲ. ಅದು ಅವರು ಮುಂಚೂಣಿಯಲ್ಲಿ ನಿಂತಿರುವ ರಂಗದ ಪ್ರಚಾರದಲ್ಲಿಯೂ ಕಾಣಿಸುವುದಿಲ್ಲ, ಒಟ್ಟಾರೆ ಕಾರ್ಯವೈಖರಿಯಲ್ಲಿಯೂ ಕಾಣಿಸುವುದಿಲ್ಲ. ಅದಕ್ಕೆ ಬೇಕಾದ ಸಿದ್ಧತೆಯನ್ನಾಗಲಿ, ಪಕ್ಕಾ ಯೋಜನೆಯನ್ನಾಗಲಿ ಮಾಡಿಕೊಳ್ಳುವಲ್ಲಿ ಅದು ವಿಫಲವಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಜನ ಯುಡಿಎಫ್ ಅನ್ನು ಈ ಬಾರಿ ಅಧಿಕಾರಕ್ಕೆ ತರಲು ಮಾನಸಿಕವಾಗಿ ಸಜ್ಜಾಗಿದ್ದರೂ ಅಂತಹ ಸುವರ್ಣ ಅವಕಾಶವನ್ನು ಬಾಚಿಕೊಳ್ಳುವ ಸಾಮರ್ಥ್ಯ ಅವರ ನಾಯಕರಿಗೆ ಇಲ್ಲ. ಅದೇನೂ ಸದ್ಯದ ಎಲ್‌ಡಿಎಫ್ ಸರ್ಕಾರದ ಬಗ್ಗೆ ಜನಮಾನಸದಲ್ಲಿ ಇರುವ ಋಣಾರಾತ್ಮಕ ಅಭಿಪ್ರಾಯದಿಂದ ದಕ್ಕಿರುವ ಅವಕಾಶವಲ್ಲ. ಹಾಗೇ ಯುಡಿಎಫ್ ಬಗ್ಗೆ ಜನಕ್ಕೆ ಅಪಾರ ಒಲವಿದೆ ಎಂದೇನೂ ಅಲ್ಲ. ಎಲ್‌ಡಿಎಫ್ ಸರ್ಕಾರವನ್ನು ಎರಡನೇ ಬಾರಿ ಅಧಿಕಾರಕ್ಕೆ ತಂದಿರುವುದರ ಬಗ್ಗೆಯೇ ಜನರಿಗೆ ಪಶ್ಚಾತ್ತಾಪವಿದೆ. ಈ ಅವಕಾಶವನ್ನು ಯುಡಿಎಫ್ ಬಳಸಿಕೊಳ್ಳದೇ ಹೋದರೆ ಅದಕ್ಕೆ ಖಂಡಿತಕ್ಕೂ ಉಳಿಗಾಲವಿಲ್ಲ.
ಈಳವರಲ್ಲಿ ಅಸಮಾಧಾನ
“ಕೇರಳದಲ್ಲಿ ಬಹುದೊಡ್ಡ ಪ್ರಾಬಲ್ಯ ಹೊಂದಿರುವ ಈಳವ ಸಮುದಾಯವನ್ನು ಈ ಬಾರಿ ಕಾಂಗ್ರೆಸ್ ಕಡೆಗಣಿಸಿದೆ. ಇದಕ್ಕೆ ಮೂಲ ಕಾರಣ ಕೆ.ಸಿ.ವೇಣುಗೋಪಾಲ್. ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರು ತಮ್ಮದೇ ಮಾತು ನಡೆಯುವಂತೆ ನೋಡಿಕೊಂಡಿದ್ದಾರೆ. ತಮಗೆ ಬೇಕಾದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಈ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ,” ಎಂದು ಕಣ್ಣೂರು ತಿಯಾಸ್ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಹೇಳುತ್ತಾರೆ. ರಾಜ್ಯದಲ್ಲಿ ಶೇ.24ರಷ್ಟು ಮತದಾರರನ್ನು ಹೊಂದಿರುವ ಈ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸ ಅವರಿಗಿದೆ.
ರಾಜ್ಯದಲ್ಲಿ ಶೇ.15ರಷ್ಟು ಜನಸಂಖ್ಯೆಯನ್ನು ಹೊಂದಿರುವ ನಾಯರ್ ಸಮುದಾಯಕ್ಕೆ ಸೇರಿದ ವೇಣುಗೋಪಾಲ್, ಶಶಿ ತರೂರ್, ರಮೇಶ್ ಚೆನ್ನಿತ್ತಾಲ ಅವರಂತಹ ನಾಯಕರು ಕುಳಿತುಕೊಂಡು ಶೇ.24ರಷ್ಟು ಜನಸಂಖ್ಯೆಯಿರುವ ಈಳವ ಅಭ್ಯರ್ಥಿಯ ಭವಿಷ್ಯವನ್ನು ನಿರ್ಧಾರ ಮಾಡುತ್ತಾರೆ ಎಂದರೆ ನಾವು ಸಂಘಟಿತರಾಗುವಲ್ಲಿ ಎಷ್ಟರ ಮಟ್ಟಿಗೆ ವಿಫಲರಾಗಿದ್ದೇವೆ ಎಂಬುದನ್ನು ತೋರಿಸುತ್ತದೆ ಎನ್ನುತ್ತಾರೆ ಪ್ರಕಾಶ್.
ಆದರೆ ಕರ್ನಾಟಕದಲ್ಲಿರುವಂತೆ ಕೇರಳದಲ್ಲಿ ಕೂಡ ಜನ ಜಾತಿ ನೋಡಿ ಮಣೆ ಹಾಕುವರೇ? ಇಂತಹ ಪ್ರಶ್ನೆಯನ್ನು ಕೇಳಿದರೆ ಅವರು ನಮ್ಮನ್ನೇ ಅನುಮಾನದಿಂದ ನೋಡುತ್ತಾರೆ. “ನಾರಾಯಣ ಗುರು ಏನು ಹೇಳಿದರು? ಜಾತಿ ಚೋದಿಕ್ಕರುತ್, ಪರಯರುತ್, ಚಿಂತಿಕ್ಕರತು ಸೋದರ ಎಂದರು. ಅಂದರೆ ಜಾತಿ ಕೇಳಬೇಡ, ಜಾತಿ ಹೇಳಬೇಡ, ಜಾತಿ ಬಗ್ಗೆ ಯೋಚಿಸಬೇಡ ಎಂಬುದು ಅವರ ಧ್ಯೇಯವಾಕ್ಯವಾಗಿತ್ತು. ಆದ್ದರಿಂದ ನಾವು ಜಾತಿ-ಧರ್ಮ ನೋಡಿ ಯಾವತ್ತೂ ಮತಹಾಕುವುದಿಲ್ಲ,” ಎಂದು ನಗುತ್ತಲೇ ನನ್ನನ್ನು ಛೇಡಿಸಿದಳು ಹೆಸರು ಹೇಳಲು ಇಚ್ಛಿಸದ ಆ ರೆಸಾರ್ಟ್ ಪರಿಚಾರಕಿ. ಆಕೆಯಲ್ಲಿರುವ ರಾಜಕೀಯ ಪ್ರಜ್ಞೆ ನನ್ನನ್ನು ಅಚ್ಚರಿಗೊಳಿಸಿದ್ದು ನಿಜ.
ಪ್ರಶ್ನೆ ಮಾಡುವುದರಿಂದಲೇ ಹುಟ್ಟಿಕೊಂಡ ಪಕ್ಷ ಸಿಪಿಎಂ. ಅದರಲ್ಲೊಬ್ಬರು ಪ್ರಶ್ನಾತೀತ ನಾಯಕನಿದ್ದಾನೆ ಎಂದರೆ ಅದನ್ನು ಕೇರಳದ ಜನ ಒಪ್ಪುವುದಿಲ್ಲ. ಹಾಗಾಗಿ ಪಿಣರಾಯಿ ವಿಜಯನ್ ಎಷ್ಟೇ ದೊಡ್ಡ ನಾಯಕರಾಗಿದ್ದರೂ ಅವರಿಗದು ಅನ್ವಯವಾಗುವುದಿಲ್ಲ. “ಸ್ಥಳೀಯವಾಗಿ ಯಾರು ನಮಗಾಗಿ ಕೆಲಸ ಮಾಡುವವರಿದ್ದಾರೆ ಅವರನ್ನು ನಾವು ಆಯ್ಕೆ ಮಾಡುತ್ತೇವೆ. ನಾಯಕನ ಹೆಸರು ಹೇಳಿಕೊಂಡು ಮತ ಕೇಳಲು ಬಂದವರನ್ನು ನಾವು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತ ಬಂದಿದ್ದೇವೆ. ಆ ಕಾರಣದಿಂದಲೇ ನಮಗೆ ಈ ಬಾರಿ ಬದಲಾವಣೆ ಬೇಕಾಗಿದೆ,” ಎನ್ನುತ್ತಾರೆ ಕಣ್ಣೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಹೋಟೆಲ್ ನಡೆಸುತ್ತಿರುವ ಯಶಸ್ವಿ ಉದ್ಯಮಿ ಕಡಪಟ್ಟಿ ರಾಮಚಂದ್ರನ್. ಹಾಗಾಗಿ ಎಡರಂಗದ ಮೋದಿಯಾಗಲು ಹೊರಟಿರುವ ಪಿಣರಾಯಿ ಅವರನ್ನು ಸಾರಾಸಗಟಾಗಿ ತಿರಸ್ಕರಿಸಲು ಅವರು ಸಿದ್ಧರಿದ್ದಾರೆ ಎಂಬುದು ಸ್ಪಷ್ಟ.
ಕೇರಳದ ಕಣ್ಣೂರು ಸಮೀಪದ ಪಯ್ಯನೂರಿನಲ್ಲಿ ಎಸ್ಎಫ್ಐ ವಿದ್ಯಾರ್ಥಿಗಳ ಮೂಲಕ ರೋಡ್ ಶೋ ನಡೆಸುತ್ತಿರುವ ಎಲ್‌ಡಿಎಫ್ (ಚಿತ್ರ : ಮಂಜುನಾಥ್ ಚಾಂದ್)
ಯುವಕರ ಚಿತ್ತ ಎತ್ತ?
ಇನ್ನು ಮೊದಲ ಬಾರಿ ಓಟು ಹಾಕಲು ಉತ್ಸುಕರಾಗಿ ನಿಂತಿರುವ, ಒಂದು ಸರ್ಕಾರವನ್ನು ಸೂಕ್ಷ್ಮವಾಗಿ ಗಮನಿಸುವ ಯುವ ಸಮುದಾಯದ ಮನಸ್ಥಿತಿ ಕೂಡ ಬದಲಾವಣೆಯ ಕಡೆಗೇ ಇದೆ. ಅವರು ಯುಡಿಎಫ್ ರಂಗವನ್ನು ಬೆಂಬಲಿಸಲು ಟೊಂಕ ಕಟ್ಟಿ ನಿಂತಂತೆ ಕಾಣುತ್ತಿದೆ. ಅದಕ್ಕೆ ತಕ್ಕಂತೆ ಯುಡಿಎಫ್ ಯುವ ಸಮುದಾಯದ ಪ್ರತಿನಿಧಿಗಳನ್ನು ಕಣಕ್ಕಿಳಿಸುವ ಪ್ರಯೋಗವನ್ನು ಕೆಲವು ಕಡೆ ಮಾಡಿದೆ. ಎಡರಂಗದ ಬಿಗಿ ಹಿಡಿತವಿರುವ ಪೆರಂಬ್ರ ಕ್ಷೇತ್ರದಲ್ಲಿ 32 ವರ್ಷ ವಯಸ್ಸಿನ ಫಾತಿಮಾ ಥಹಿಲಿಯಾ (ಮುಸ್ಲಿಂ ಲೀಗ್) ಅವರನ್ನು ಕಣಕ್ಕಿಳಿಸಿದೆ. ಅದೇ ರೀತಿ ಕುತ್ತುಪರಂಬಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಜಯಂತಿ ರಾಜನ್ (ಮುಸ್ಲಿಂ ಲೀಗ್) ಯುವ ಸಮುದಾಯದಲ್ಲಿ ಹೊಸ ಉತ್ಸಾಹವನ್ನು ಮೂಡಿಸಿರುವುದು ನಿಚ್ಚಳವಾಗಿ ಕಾಣಿಸುತ್ತಿದೆ.
ಕುತ್ತುಪರಂಬಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಜಯಂತಿ ರಾಜನ್ ಪ್ರಚಾರದ ವೈಖರಿ. (ಚಿತ್ರ: ಮಂಜುನಾಥ್ ಚಾಂದ್)
ಫಾತಿಮಾ ಎಂಬ ಪುಟ್ಟ ಹುಡುಗಿ ಇಡೀ ಕ್ಷೇತ್ರದಲ್ಲಿ ಪಾದರಸದಂತೆ ಓಡಾಡುತ್ತಿರುವುದು ಎಡರಂಗದ ಅಭ್ಯರ್ಥಿ ಟ.ಪಿ.ರಾಮಕೃಷ್ಣನ್ ಅವರ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿದೆ. ಜಯಂತಿ ರಾಜನ್ ಕುತ್ತುಪರಂಬಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷ ವರ್ಚಸ್ಸಿನಿಂದ ಸಂಚಲನ ಮೂಡಿಸುತ್ತಿದ್ದಾರೆ. ಈ ಇಬ್ಬರೂ ಯುವತಿಯರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರು ಯುವ ಸಮುದಾಯವನ್ನು ಪ್ರತಿನಿಧಿಸುವ ಭವಿಷ್ಯದ ನಾಯಕರಾಗುವ ಭರವಸೆ ಮೂಡಿಸಿದ್ದಾರೆ. ಫಾತಿಮಾ ಥಹಿಲಿಯಾ ಅವರು ಅನೇಕ Gen-Z ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದು ಯುವಕರ ದೊಡ್ಡ ಪಡೆಯೇ ಅವರ ಹಿಂದೆ ಇರುವಂತೆ ಕಾಣುತ್ತಿದೆ.
“ಇಂತಹ ಪ್ರಯೋಗಗಳನ್ನು ಕಾಂಗ್ರೆಸ್ ಆಗಲಿ, ಯುಡಿಎಫ್ ಆಗಲಿ ಅನೇಕ ಕ್ಷೇತ್ರಗಳಲ್ಲಿ ಮಾಡುತ್ತಿರುವುದು ಈ ಬಾರಿಯ ಚುನಾವಣೆಯ ವಿಶೇಷ. ಈ ರೀತಿಯ ಪ್ರಯತ್ನಗಳು ಸದ್ದಿಲ್ಲದೆ ಕೆಲಸ ಮಾಡುತ್ತಿವೆ. ಅದು ಯುಡಿಎಫ್ಗೆ ವರವಾಗಿ ಪರಿಣಮಿಸಿದರೆ ಆಶ್ಚರ್ಯವೇನೂ ಇಲ್ಲ. ಎಡರಂಗದ ರಾಮಕೃಷ್ಣನ್ ಅವರಂತಹ ಹಿರಿಯ ನಾಯಕರ ಸಮ್ಮುಖದಲ್ಲಿ ಫಾತಿಮಾ ಈ ಬಾರಿ ಗೆಲ್ಲುವ ಎಲ್ಲ ಲಕ್ಷಣ ಕಾಣುತ್ತಿವೆ,” ಎನ್ನುವ ಪೆರಂಬ್ರದ ಯುವಕ ಅಜು ಇಮ್ಯಾನುಯೆಲ್ ಅವರ ಮಾತಿನಲ್ಲಿಯೂ ಈಗಿರುವ ಸರ್ಕಾರ ಬದಲಾಗಬೇಕು ಎಂಬ ಕಳಕಳಿ ದಟ್ಟವಾಗಿ ಕಾಣುತ್ತಿದೆ.
ಎನ್‌ಡಿಎ ಭವಿಷ್ಯ ಏನು?
ಹಾಗಂತ ಕೇರಳದಲ್ಲಿ ಎನ್‌ಡಿಎಗೆ ಭವಿಷ್ಯವಿದೆಯೇ? ಎಂಬ ಪ್ರಶ್ನೆಯನ್ನು ಯುವಸಮುದಾಯದ ಮುಂದಿಟ್ಟರೆ ಅದನ್ನವರು ಸಾರಾಸಗಟಾಗಿ ತಿರಸ್ಕರಿಸಿಬಿಡುತ್ತಾರೆ. ಸರಿಸುಮಾರು ಮಂಗಳೂರಿನ ಮಗ್ಗುಲಲ್ಲೇ ಇರುವ ಮಂಜೇಶ್ವರ ಕ್ಷೇತ್ರದಲ್ಲಿ ಈ ಬಾರಿಯೂ ಕಣಕ್ಕಿಳಿದಿರುವ ಬಿಜೆಪಿಯ ಕೆ.ಸುರೇಂದ್ರನ್ ಅವರೂ ಸೇರಿದಂತೆ ರಾಜ್ಯದಲ್ಲಿ ಕನಿಷ್ಠ ಐದಾರು ಕ್ಷೇತ್ರಗಳಲ್ಲಿ ವಿಜಯದ ನಿರೀಕ್ಷೆಯನ್ನು ಹೊಂದಿದೆ. ಮಂಜೇಶ್ವರ ಕ್ಷೇತ್ರದ ಸುತ್ತಮುತ್ತ ಓಡಾಡಿ ಬಂದರೆ ಆ ಸಾಧ್ಯತೆ ಕ್ಷೀಣಿಸಿದಂತೆ ಕಾಣುತ್ತಿದೆ. ಇನ್ನು ಕಳೆದ ವರ್ಷ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ನೇಮಮ್ (ರಾಜೀವ್ ಚಂದ್ರಶೇಖರ್) ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದಾರೆ,. ಇಲ್ಲಿ ಸಿಪಿಐ(ಎಂ)ನಿಂದ ಸ್ಪರ್ಧಿಸುತ್ತಿರುವವರು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ದೊಡ್ಡ ಮಟ್ಟಿನ ಪೈಪೋಟಿ ನೀಡುವ ನಿರೀಕ್ಷೆಯಿದೆ. ಪಾಲಕ್ಕಾಡ್, ತ್ರಿಶೂರ್ ಮತ್ತು ಕಳಕ್ಕೂಟಂನಲ್ಲಿ ಗೆಲ್ಲುವ ಭರವಸೆ ಬಿಜೆಪಿಗಿದೆ.
“ರಾಜ್ಯದಲ್ಲಿ ನಮಗೆ ಬದಲಾವಣೆ ಬೇಕು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್‌ಡಿಎಫ್ ಈ ಬಾರಿ ಮತ್ತೊಮ್ಮೆ ಸರ್ಕಾರ ರಚಿಸದಂತೆ ಕೇರಳದ ಜನ ನಿರ್ಧಾರ ಕೈಗೊಂಡೇ ತೀರುತ್ತಾರೆ. ಹಾಗಂತ ಕೇರಳದ ಡಿಎನ್ಎಗೆ ಎನ್ಡಿಎ ಯಾವತ್ತೂ ಹೊಂದಿಕೆಯಾಗುವುದಿಲ್ಲ. ಧರ್ಮನಿರಪೇಕ್ಷಿತ ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಸಾಧ್ಯವಿಲ್ಲ,” ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಕಾಸರಗೋಡಿನ ಯುವಕ ಮನೋಹರನ್. ಇಂತಹ ಭಾವನೆ ರಾಜ್ಯದಾದ್ಯಂತ ಇದೆ.
ಗೆಲುವುದು ಪ್ರಭುಗಳೋ ಪ್ರಜೆಗಳೋ
“ಈ ಬಾರಿ ನಾವು ಎಂಭತ್ತು ಸೀಟು ಗೆಲ್ಲುವುದು ನಿಶ್ಚಿತ” – ಎನ್ನುತ್ತಾರೆ ಸಿಪಿಎಂನ ಕಟ್ಟಾ ಬೆಂಬಲಿಗ ಪ್ರೇಮ್ಕುಮಾರ್. ಪಿಣರಾಯಿ ವಿಜಯನ್ ಅವರ ಕ್ಷೇತ್ರವಾದ ಧರ್ಮಡಂ ವ್ಯಾಪ್ತಿಯಲ್ಲಿ ಬರುವ ಪಿಣರಾಯಿಯಲ್ಲಿರುವ ಸಿಪಿಎಂ ಕಚೇರಿಯ ಮುಂಭಾಗದಲ್ಲಿ ಮಾತನಾಡಿದ ಅವರಿಗೆ ಹಾಗೆ ಹೇಳುವುದರಿಂದ ಈಗಿರುವ ಎಲ್‌ಡಿಎಫ್ ಬಲ(99)ದಲ್ಲಿ 19 ಸೀಟುಗಳಿಗೆ ಕತ್ತರಿ ಹಾಕಿದಂತಾಯಿತು ಎಂಬ ಅರಿವು ಇದ್ದಂತೆ ಕಾಣಲಿಲ್ಲ. ಎರಡು ಅವಧಿಗೆ ಅಧಿಕಾರ ನಡೆಸಿದ ಎಲ್‌ಡಿಎಫ್ ಶತಕ ದಾಟುವ ಭರವಸೆ ಇರಬೇಕಾಗಿತ್ತು. ಅದು ಇಲ್ಲ ಎನ್ನುವುದು ಸಾಮಾನ್ಯ ಕಾರ್ಯಕರ್ತರಲ್ಲೂ ಕಾಣುತ್ತಿದೆ.
ಈ ಬಾರಿ ಯುಡಿಎಫ್ ಕೇರಳದಲ್ಲಿ ಸರ್ಕಾರ ರಚಿಸಲಿದೆʼ ಎನ್ನುತ್ತಾರೆ ವಯನಾಡಿನ ಮಗ್ಗುಲಲ್ಲಿರುವ ಪುರುಂಜಿಯ ನಾಸಿರ್. ಇಲ್ಲಿ ಯುಡಿಎಫ್ ಅಭ್ಯರ್ಥಿ ಲತಾ ಭಾರೀ ಪೈಪೋಟಿ ನೀಡಿದ್ದಾರೆ. (ಚಿತ್ರ: ಮಂಜುನಾಥ್ ಚಾಂದ್)
“ಇಂತಹ ಪರಿಸ್ಥಿತಿಯ ಪೂರ್ತಿ ಲಾಭವನ್ನು ಯುಡಿಎಫ್ ಪಡೆದರೆ ನೂರು ಸೀಟು ಗ್ಯಾರೆಂಟಿ” ಎನ್ನುತ್ತಾರೆ ವಯನಾಡು ಮಗ್ಗುಲಲ್ಲಿರುವ ಪುರಿಂಜಿಯ ಕಾಂಗ್ರೆಸ್ ಕಾರ್ಯಕರ್ತ ನಾಸಿರ್. ಅವರಿಗೂ ಗೊತ್ತಿದೆ ತಮ್ಮ ಪಕ್ಷ ಅಂತಹ ಪ್ರಯತ್ನವನ್ನೇ ಮಾಡಿಲ್ಲ ಎಂಬುದು. ಯುಡಿಎಫ್ ಅನ್ನು ಅಧಿಕಾರದ ಗದ್ದುಗೆಯ ಹತ್ತಿರ ತರಬೇಕೆಂಬ ಜಿದ್ದು ರಾಹುಲ್ ಗಾಂಧಿಗೆ ಇದ್ದಿದ್ದರೆ, ಅವರು ʼವೇಣುನಾದʼಕ್ಕೆ ತಲೆದೂಗುವುದು ಕಡಿಮೆ ಮಾಡಿದ್ದರೆ ಅದು ಇನ್ನಷ್ಟು ಸುಲಭವೂ ಆಗುತ್ತಿತ್ತು.
ಈ ಎರಡೂ ರಂಗಗಳ ಇಂತಹ ಸ್ಥಿತಿಯನ್ನು ಗಮನಿಸಿದರೆ ʼಸ್ಟ್ರಟಜಿ ಮಾಸ್ಟರ್ʼ ಪಿಣರಾಯಿ ಕೊನೆಯ ಕ್ಷಣದಲ್ಲಿ ಚಲಾಯಿಸುವ ಚದುರಂಗದ ಕಾಯಿಗಳು ನಿರ್ಣಾಯಕ. ಆದರೆ ಕೇರಳದ ಜನರ ಅಂತರಂಗವನ್ನು ಅಳೆದು ನೋಡಿದರೆ ಅವರು ʼಬದಲಾವಣೆಯ ಮುದ್ರೆʼ ಹಿಡಿದು ಕುಳಿತಿದ್ದಾರೆ. ಅಂತಿಮವಾಗಿ ಗೆಲ್ಲುವುದು ಪ್ರಭುಗಳೋ ಪ್ರಜೆಗಳೋ?
ಅದಕ್ಕಾಗಿಯೇ ಕಾಯುವುದೇ ನಿಜವಾದ ಪ್ರಜಾಪ್ರಭುತ್ವದ ಬ್ಯೂಟಿ.

