ಕೆಇಎ ನಿರ್ದೇಶಕ ಪ್ರಸನ್ನ ವರ್ಗಾವಣೆಗೆ ಆಕ್ರೋಶ: ರಾಜ್ಯ ಸರ್ಕಾರಕ್ಕೆ ಸ್ಪರ್ಧಾರ್ಥಿಗಳ ಸಂಘಟನೆಗಳ ಎಚ್ಚರಿಕೆ
x

ಸಾಂದರ್ಭಿಕ ಚಿತ್ರ

ಕೆಇಎ ನಿರ್ದೇಶಕ ಪ್ರಸನ್ನ ವರ್ಗಾವಣೆಗೆ ಆಕ್ರೋಶ: ರಾಜ್ಯ ಸರ್ಕಾರಕ್ಕೆ ಸ್ಪರ್ಧಾರ್ಥಿಗಳ ಸಂಘಟನೆಗಳ ಎಚ್ಚರಿಕೆ

ಕೆಇಎ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದ ಎಚ್‌. ಪ್ರಸನ್ನ ಅವರು ಕೇವಲ ಆರು ತಿಂಗಳಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೆ 17 ಅಧಿಸೂಚನೆಗಳನ್ನು ಅತ್ಯಂತ ಪಾರದರ್ಶಕವಾಗಿ ಪೂರ್ಣಗೊಳಿಸಿದ್ದರು.


Click the Play button to hear this message in audio format

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ (ED) ಪ್ರಸನ್ನ ಅವರನ್ನು ವರ್ಗಾವಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯ ವಿರುದ್ಧ ಸ್ಪರ್ಧಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಿದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ (AKSSA) ಎಚ್ಚರಿಕೆ ನೀಡಿದೆ.

ಈ ಕುರಿತು ʼದ ಫೆಡರಲ್‌ ಕರ್ನಾಟಕʼದ ವಿಡಿಯೋ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ʼಅಕ್ಸಾʼ ಅಧ್ಯಕ್ಷ ಕಾಂತಕುಮಾರ್‌ ಆರ್‌, "ಕೆಪಿಎಸ್‌ಸಿ (KPSC) ಮೂಲಕ ನಡೆಯುವ ನೇಮಕಾತಿಗಳಲ್ಲಿ ವಿಳಂಬ ಹಾಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬೇಸತ್ತಿದ್ದ ವಿದ್ಯಾರ್ಥಿಗಳು, ನೇಮಕಾತಿ ಪ್ರಕ್ರಿಯೆಗಳನ್ನು ಕೆಇಎಗೆ ವಹಿಸುವಂತೆ ಈ ಹಿಂದೆ ಹೋರಾಟ ನಡೆಸಿದ್ದರು. ಅದರಂತೆ ಕೆಇಎ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದ ಎಚ್‌. ಪ್ರಸನ್ನ ಅವರು ಕೇವಲ ಆರು ತಿಂಗಳಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೆ 17 ಅಧಿಸೂಚನೆಗಳನ್ನು ಅತ್ಯಂತ ಪಾರದರ್ಶಕವಾಗಿ ಪೂರ್ಣಗೊಳಿಸಿದ್ದರು. ಒಎಂಆರ್ (OMR) ಶೀಟ್ ಅಪ್‌ಲೋಡ್ ಹಾಗೂ ವೈಯಕ್ತಿಕ ಸ್ಕೋರ್ ಲಿಸ್ಟ್ ಬಿಡುಗಡೆ ಮಾಡುವ ಮೂಲಕ ನಂಬಿಕೆ ಹುಟ್ಟುಹಾಕಿದ್ದ ಇಂತಹ ದಕ್ಷ ಅಧಿಕಾರಿಯನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಲು ಹೊರಟಿರುವುದು ಸ್ಪರ್ಧಾರ್ಥಿಗಳ ಕಳವಳಕ್ಕೆ ಕಾರಣವಾಗಿದೆ" ಎಂದು ಅಭಿಪ್ರಾಯಪಟ್ಟರು.

ಪ್ರಾಮಾಣಿಕ ಅಧಿಕಾರಿಗಳಿಗೆ 'ವರ್ಗಾವಣೆ ಭಾಗ್ಯ'

ಸ್ಪರ್ಧಾರ್ಥಿ ಅಭಿಲಾಷಾ ಎಂ. ʼದ ಫೆಡರಲ್‌ ಕರ್ನಾಟಕʼ ಜತೆ ಮಾತನಾಡಿ, "ಜನಸಾಮಾನ್ಯರಿಗೆ ಐದು ಗ್ಯಾರಂಟಿಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರ, ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಉಚಿತವಾಗಿ 'ವರ್ಗಾವಣೆ ಭಾಗ್ಯ' ಕರುಣಿಸುತ್ತಿದೆ. ಸುಮಾರು 56,432 ಹುದ್ದೆಗಳನ್ನು ಕೇವಲ ಒಂದು ತಿಂಗಳಲ್ಲಿ ಭರ್ತಿ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ತಿಂಗಳು ಕಳೆದರೂ ಅಧಿಸೂಚನೆ ಹೊರಡಿಸಿಲ್ಲ. ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೆಇಎ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ನೇಮಕಾತಿ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬ ಮಾಡುವ ಹುನ್ನಾರವಾಗಿದೆ" ಎಂದು ಅವರು ಆರೋಪಿಸಿದ್ದಾರೆ.

ಉಗ್ರ ಹೋರಾಟದ ಎಚ್ಚರಿಕೆ

"ಪ್ರಸನ್ನ ಅವರನ್ನು ಕೆಇಎಯಲ್ಲಿಯೇ ಕಾಯಂಗೊಳಿಸಬೇಕು ಮತ್ತು ಮುಂಬರುವ ಎಲ್ಲಾ ಪ್ರಮುಖ ನೇಮಕಾತಿಗಳನ್ನು ಕೆಇಎ ಮೂಲಕವೇ ಪಾರದರ್ಶಕವಾಗಿ ನಡೆಸಬೇಕು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು. ಜೊತೆಗೆ ರಾಜ್ಯಾದ್ಯಂತ ಯುವಕರನ್ನು ಸಂಘಟಿಸಿ ಬೀದಿಗಿಳಿದು ಬೃಹತ್ ಹೋರಾಟ ಮಾಡಲಾಗುವುದು. ಸದನದಲ್ಲಿ ಐಪಿಎಲ್ (IPL) ಟಿಕೆಟ್ ಕೇಳುವ ಜನಪ್ರತಿನಿಧಿಗಳು, ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯದ ಬಗ್ಗೆ ಮತ್ತು ನೇಮಕಾತಿ ಸಮಸ್ಯೆಗಳ ಬಗ್ಗೆ ಕನಿಷ್ಠ ಚರ್ಚೆಯನ್ನೂ ನಡೆಸುತ್ತಿಲ್ಲ ಎಂಬುದು ಪ್ರಸ್ತುತ ರಾಜಕೀಯ ವ್ಯವಸ್ಥೆಯ ದುರಂತ ಎಂದು ಸ್ಪರ್ಧಾರ್ಥಿ ಅಶೋಕ್‌ ಎಸ್. ಬೇಸರ ವ್ಯಕ್ತಪಡಿಸಿದ್ದಾರೆ.

Read More
Next Story