K.C. Valley Project: Fear of toxic elements in vegetables after groundwater increase
x

ಕೋಲಾರಮ್ಮನ ಕೆರೆಗೆ ಭೇಟಿ ನೀಡಿ ರೈತರ ಅಭಿಪ್ರಾಯ ಆಲಿಸಿದ್ದ ʼದ ಫೆಡರಲ್‌ ಕರ್ನಾಟಕʼ (ಫೋಟೋ: ರಘು ಆರ್‌.ಡಿ.)

KC Valley| ತರಕಾರಿಗಳಲ್ಲಿ ವಿಷ; ಏಷ್ಯಾದಲ್ಲೇ ಹೆಚ್ಚು ಟೊಮೆಟೊ ಬೆಳೆವ ರೈತರಿಗೆ ಆತಂಕ ತಂದ ಕೆಸಿ ವ್ಯಾಲಿ ನೀರು

ಬಯಲು ಸೀಮೆ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗೆ ಕೆ.ಸಿ.ವ್ಯಾಲಿ ನೀರನ್ನು ಹರಿಸುತ್ತಿದ್ದರೂ ಯೋಜನೆಯಿಂದಾಗುವ ಅನುಕೂಲ, ಅನಾನುಕೂಲಗಳ ಬಗ್ಗೆ ʼದ ಫೆಡರಲ್‌ ಕರ್ನಾಟಕʼ ನಡೆಸಿದ ಗ್ರೌಂಡ್‌ ರಿಪೋರ್ಟ್‌ ವರದಿಗಳು ಇಲ್ಲಿದೆ.


Click the Play button to hear this message in audio format

ಬಯಲು ಸೀಮೆ ಜಿಲ್ಲೆಗಳ ಬರಿದಾದ ಕೆರೆಗಳಿಗೆ ಜೀವಕಳೆ ತಂದ ಕೋರಮಂಗಲ-ಚಲ್ಲಘಟ್ಟ (ಕೆ.ಸಿ.ವ್ಯಾಲಿ) ಕಣಿವೆಯ ಸಂಸ್ಕರಿತ ತ್ಯಾಜ್ಯ ನೀರು ಇದೀಗ ಅಂತರ್ಜಲವನ್ನೇ ವಿಷವಾಗಿಸಿದೆ. ಕೋಲಾರದಲ್ಲಿ ಕೆರೆಗಳ ಭರ್ತಿಯಿಂದ ಬೆಳೆಗಳು ನಳನಳಿಸುತ್ತಿವೆ. ಆದರೆ, ಹುಲುಸಾಗಿ ಬೆಳೆದಿರುವ ತರಕಾರಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದು ರೈತರನ್ನು ಕಂಗಾಲಾಗಿಸಿದೆ. ಏಷ್ಯಾದಲ್ಲೇ ಅತಿ ಹೆಚ್ಚಿನ ಪ್ರಮಾಣದ ಟೊಮೆಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಈಗ ಕೆರೆಗಳ ನೀರೇ ಆತಂಕ ತಂದೊಡ್ಡಿದೆ.

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್. ವ್ಯಾಲಿ ಯೋಜನೆಯಡಿ ಹರಿಸುತ್ತಿರುವ ಬೆಂಗಳೂರಿನ ತ್ಯಾಜ್ಯ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಭಾನುವಾರ (ಮಾರ್ಚ್​ ೧೫ರಂದು) ಚಿಕ್ಕಬಳ್ಳಾಪುರ ನಗರ ಬಂದ್‌ಗೆ ಕರೆ ನೀಡಿದ್ದು ಯಶಸ್ವಿಯಾಗಿತ್ತು.

ಬಯಲು ಸೀಮೆಯಲ್ಲಿ ಬರ ನೀಗಿಸಿದ ಕೆ.ಸಿ. ವ್ಯಾಲಿ ಯೋಜನೆಯನ್ನು ಸಂಭ್ರಮದಿಂದ ಸ್ವಾಗತಿಸಿದ್ದ ರೈತರೇ, ಇದೀಗ ಯೋಜನೆಯ ಅವೈಜ್ಞಾನಿಕ ಅನುಷ್ಠಾನಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಅಂತರ್ಜಲ ಕಲುಷಿತಗೊಂಡು ತರಕಾರಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ‘ದ ಫೆಡರಲ್ ಕರ್ನಾಟಕ’ ತಂಡವು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ತೆರಳಿ, ಕೆರೆಗಳಲ್ಲಿರುವ ತ್ಯಾಜ್ಯ ನೀರಿನ ವಸ್ತುಸ್ಥಿತಿ ವೀಕ್ಷಿಸಿ ರೈತರ ಅಭಿಪ್ರಾಯ ದಾಖಲಿಸಿದೆ.

ಬಯಲು ಸೀಮೆ ಜಿಲ್ಲೆಗಳಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೆ.ಸಿ. ವ್ಯಾಲಿ ಹಾಗೂ ಎಚ್.ಎನ್. ವ್ಯಾಲಿ ಯೋಜನೆಗಳನ್ನು ಘೋಷಿಸಿತ್ತು. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹರಿಸಲು ನಿರ್ಧರಿಸಲಾಗಿತ್ತು.

ಕೆರೆಯಲ್ಲಿ ಬೆಳೆದಿರುವ ಪಾಚಿ ಹಾಗೂ ಜಲಗಂಟಿ ಸಸ್ಯ (ಪೋಟೋ: ರಘು ಆರ್‌.ಡಿ)

ಎಚ್.ಎನ್. ವ್ಯಾಲಿ ಮತ್ತು ಕೆ.ಸಿ. ವ್ಯಾಲಿ ಯೋಜನೆಗಳ ಹಿನ್ನೆಲೆ

ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ 65 ಕೆರೆಗಳಿಗೆ ಹರಿಸುವ ಸಲುವಾಗಿ ಹೆಬ್ಬಾಳ-ನಾಗವಾರ (ಎಚ್.ಎನ್. ವ್ಯಾಲಿ) ಯೋಜನೆಯನ್ನು 2020ರಲ್ಲಿ ಜಾರಿಗೆ ತರಲಾಯಿತು. ಸುಮಾರು 948 ಕೋಟಿ ರೂ. ವೆಚ್ಚದ ಈ ಯೋಜನೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ 43 ಕೆರೆಗಳು ಮರುಪೂರಣಗೊಂಡಿವೆ. ಅದೇ ರೀತಿ ಕೆ.ಸಿ. ವ್ಯಾಲಿ ಯೋಜನೆಯನ್ನು ರಾಜ್ಯ ಸರ್ಕಾರ 2018ರಲ್ಲಿ ಆರಂಭಿಸಿತು. ಈ ಯೋಜನೆಯ ಮೊದಲ ಹಂತದಲ್ಲಿ ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸಲಾಗಿದೆ. ಈ ಎರಡೂ ಯೋಜನೆಗಳಲ್ಲಿ ಕೇವಲ ಎರಡು ಹಂತದ ಸಂಸ್ಕರಣೆ (Secondary Treatment) ಮಾತ್ರ ನಡೆಯುತ್ತಿದೆ. ಹಾಗಾಗಿ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಅಂತರ್ಜಲ ಸೇರುತ್ತಿದೆ. ಕನಿಷ್ಠ ಪಕ್ಷ ಮೂರು ಹಂತದ ಸಂಸ್ಕರಣೆ (Tertiary Treatment) ಮಾಡಲೇಬೇಕು ಎಂಬುದು ರೈತರ ಒತ್ತಾಯವಾಗಿದೆ.

ವರದಿಯಲ್ಲಿರುವ ಬೆಚ್ಚಿಬೀಳಿಸುವ ಸಂಗತಿಗಳು

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (NGT) ಸೂಚನೆಯ ಮೇರೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) 2026ರ ಫೆಬ್ರವರಿ 12ರಂದು ಸಲ್ಲಿಸಿದ ವರದಿಯು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದು, ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲದ ಕೃಷಿ ಭೂಮಿ ಹಾಗೂ ಬೆಂಗಳೂರಿನ ಮಾರುಕಟ್ಟೆಗಳಿಂದ ಸಂಗ್ರಹಿಸಲಾದ 72 ತರಕಾರಿ ಮಾದರಿಗಳ ಪೈಕಿ ಶೇ. 26ರಷ್ಟು (19 ಮಾದರಿಗಳು) ತರಕಾರಿಗಳಲ್ಲಿ ಮಿತಿಮೀರಿದ 'ಸೀಸ' (Lead) ಪತ್ತೆಯಾಗಿದೆ. ಎಫ್‌ಎಸ್‌ಎಸ್‌ಎಐ (FSSAI) ಸುರಕ್ಷತಾ ಮಿತಿಗಿಂತ ಬದನೆಕಾಯಿಯಲ್ಲಿ 20 ಪಟ್ಟು, ತೊಂಡೆಕಾಯಿಯಲ್ಲಿ 18 ಪಟ್ಟು, ಬೀನ್ಸ್‌ನಲ್ಲಿ 9 ಪಟ್ಟು ಹಾಗೂ ಸೊಪ್ಪು ಮತ್ತು ಎಲೆಕೋಸಿನಲ್ಲಿ 5 ಪಟ್ಟು ಹೆಚ್ಚು ಸೀಸದ ಅಂಶವಿರುವುದು ದೃಢಪಟ್ಟಿದೆ; ಇದರ ಜೊತೆಗೆ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ ಮತ್ತು ಶುಂಠಿಯಂತಹ ತರಕಾರಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೀಟನಾಶಕಗಳ (Pesticides) ಅಂಶವೂ ಇರುವುದು ಈ ವರದಿಯಿಂದ ಸಾಬೀತಾಗಿದ್ದು, ಇದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತೀವ್ರ ಕಳವಳ ಮೂಡಿಸಿದೆ.

ಹೊಲದಲ್ಲಿ ತಾವು ಬೆಳೆದ ಆಲೂಗಡ್ಡೆ ತೋರಿಸುತ್ತಿರುವ ರೈತ ಮಹಿಳೆ (ಪೋಟೋ: ರಘ ಆರ್‌.ಡಿ.)

ಡಾ. ಟಿ.ವಿ. ರಾಮಚಂದ್ರ ಅವರ ಮುನ್ನೆಚ್ಚರಿಕೆ ಏನಿತ್ತು?

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ ಅವರು 2018ರಲ್ಲೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ "Water quality of Bellandur STP and lakes of Kolar" ಎಂಬ ವರದಿಯಲ್ಲಿ, ಕೆ.ಸಿ. ವ್ಯಾಲಿ ನೀರು ಶುದ್ಧೀಕರಣ ಘಟಕದಿಂದ ಹೊರಬರುವ ನೀರಿನಲ್ಲಿ 6 ಬಗೆಯ ಭಾರಿ ಲೋಹಗಳು ಮಿತಿಮೀರಿವೆ ಎಂದು ಸಾಬೀತುಪಡಿಸಿದ್ದರು. ಈ ನೀರು ಕೃಷಿಗೆ ಬಳಕೆಯಾದರೆ, ವಿಷಕಾರಿ ಅಂಶಗಳು ಮಣ್ಣು ಸೇರಿ, ಅಲ್ಲಿಂದ ಸಸ್ಯಗಳಿಗೆ ಮತ್ತು ಅಂತಿಮವಾಗಿ ಮನುಷ್ಯರ ದೇಹವನ್ನು ಪ್ರವೇಶಿಸುತ್ತವೆ ಎಂದು ಎಚ್ಚರಿಸಿದ್ದರು. ಆದರೆ ಅಂದಿನ ಸರ್ಕಾರಗಳು ಹಾಗೂ ನೀರಾವರಿ ಇಲಾಖೆ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ

ಕೋಲಾರಮ್ಮ ಕೆರೆಯ ಸಮೀಪ ಬೆಳೆದಿರುವ ಜೋಳ (ಪೋಟೋ: ರಘು ಆರ್‌.ಡಿ)

ಟ್ರೇಟ್ ಮತ್ತು ಫ್ಲೋರೈಡ್ ಅಂಶಗಳ ಹೆಚ್ಚಳ

ಈ ಯೋಜನೆಯಿಂದ ಕೋಲಾರದ 270ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಿದ ಪರಿಣಾಮ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಆದರೆ, ಅಂತರ್ಜಲದಲ್ಲೂ ವಿಷಕಾರಿ ಅಂಶಗಳು ಕಂಡುಬರುತ್ತಿವೆ. ಇದು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ನೀರನ್ನು ಕುಡಿದ ಜಾನುವಾರುಗಳಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದು, ಹಸುಗಳ ಹಾಲು ನೀಡುವ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ತರಕಾರಿಗಳಲ್ಲಿ ರುಚಿಯಿಲ್ಲ

ರೈತ ಹೋರಾಟಗಾರ ನಾರಾಯಣಗೌಡ ಎನ್. ಮಾತನಾಡಿ, "ಕೋಲಾರಕ್ಕೆ ಕೆ.ಸಿ. ವ್ಯಾಲಿ ನೀರು ತರಬೇಕು ಎಂಬುದು ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಶ್ರಮದ ಪ್ರತಿಫಲವಾಗಿದೆ. ಕಳೆದ ಆರು ವರ್ಷಗಳಿಂದ ಈ ನೀರು ಹರಿಯುತ್ತಿದೆ. ಹಿಂದೆ ಈ ಭಾಗದ ಟೊಮೆಟೊ ಮತ್ತು ತರಕಾರಿಗೆ ಭಾರಿ ಬೇಡಿಕೆಯಿತ್ತು ಹಾಗೂ ಅವು ರುಚಿಯಾಗಿದ್ದವು. ಆದರೆ ಇದೀಗ ಇಲ್ಲಿನ ತರಕಾರಿಗಳಲ್ಲಿ ರುಚಿಯಿಲ್ಲ. ಕೋಲಾರದ ತರಕಾರಿ ಎಂದರೆ ಬೇಡ ಎನ್ನುವವರೇ ಹೆಚ್ಚಾಗಿದ್ದಾರೆ" ಎಂದರು.

ಕೆ.ಸಿ. ವ್ಯಾಲಿ ನೀರು ಹರಿಯುವ ಪ್ರದೇಶದ ಸುತ್ತಮುತ್ತ ರೋಗಗಳು ಮತ್ತು ಹಸಿರು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಸರ್ಕಾರ ಕೇವಲ ಎರಡು ಹಂತಗಳಲ್ಲಿ ನೀರನ್ನು ಸಂಸ್ಕರಿಸುತ್ತಿದೆ, ಆದರೆ ಅದಕ್ಕೆ ಯಾವ ರಾಸಾಯನಿಕ ಬಳಸಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸುತ್ತಿಲ್ಲ. "ರಾಜ್ಯ ಬಜೆಟ್‌ನಲ್ಲಿ ಕೋಟ್ಯಂತರ ರೂಪಾಯಿ ಮೀಸಲಿಡಲಾಗುತ್ತಿದೆ, ಆದರೆ ರೈತರಿಗೆ ಇದರಿಂದ ದೀರ್ಘಕಾಲೀನ ಅನುಕೂಲವಾಗುತ್ತಿಲ್ಲ. ಇದೇ ನೀರು ತಮಿಳುನಾಡಿನ ಬೇರಿಕೆ ಪ್ರದೇಶಕ್ಕೂ ಹರಿಯುತ್ತಿದೆ, ಆದರೆ ಅಲ್ಲಿನ ರೈತರು ಈವರೆಗೆ ಯಾವುದೇ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿಲ್ಲ" ಎಂದು ಅವರು ತಿಳಿಸಿದರು.

ಎಚ್‌.ಎನ್‌. ವ್ಯಾಲಿಯಿಂದ ಕಂದಾವರ ಕೆರೆಗೆ ಹರಿಯುತ್ತಿರವ ಹಸಿರು ಮಿಶ್ರಿತ ನೀರು (ಪೋಟೋ: ರಘು ಆರ್‌.ಡಿ.)

ಎಚ್.ಎನ್. ವ್ಯಾಲಿಯಲ್ಲೂ ಇದೇ ಸಮಸ್ಯೆ

ಚಿಕ್ಕಬಳ್ಳಾಪುರದ ಕಂದಾವರ ಗ್ರಾಮಸ್ಥ ಶ್ರೀಕಾಂತ್ ವಸಿಷ್ಠ ಮಾತನಾಡಿ, "ಹಿಂದೆ ಮಳೆ ನೀರಿನಿಂದ ಕೆರೆ ತುಂಬಿದಾಗ ಅಂತರ್ಜಲ ಕುಡಿಯಲು ಯೋಗ್ಯವಾಗಿತ್ತು. ಆದರೆ ಈಗಿನ ಕೊಳಚೆ ನೀರಿನಿಂದ ಕೆರೆಯ ಸಮೀಪ ಜನರು ಸಂಚರಿಸಲೂ ಸಾಧ್ಯವಾಗುತ್ತಿಲ್ಲ. ಬೆಳೆಗಳಿಗೆ ವಿಷಕಾರಿ ಅಂಶ ಸೇರುತ್ತಿದ್ದು, ಮುಂದೆ ಮಾರಣಾಂತಿಕ ಕಾಯಿಲೆಗಳು ಬರುವ ಭೀತಿ ಇದೆ. ಸರ್ಕಾರ ಸಂಪೂರ್ಣವಾಗಿ ಶುದ್ಧೀಕರಿಸಿದ ನೀರನ್ನು ಬಿಡಲಿ ಅಥವಾ ಈ ಯೋಜನೆಯನ್ನೇ ನಿಲ್ಲಿಸಲಿ" ಎಂದು ಆಗ್ರಹಿಸಿದರು.

ಎರಡು ಮತ್ತು ಮೂರನೇ ಹಂತದ ಸಂಸ್ಕರಣೆಯ ವ್ಯತ್ಯಾಸ

ಎರಡನೇ ಹಂತ (Secondary Treatment): ಇದರಲ್ಲಿ ಸಾರಜನಕ ಮತ್ತು ರಂಜಕದ ಅಂಶಗಳು ಹೆಚ್ಚಾಗಿರುತ್ತವೆ. ಇದು ಕೆರೆ ತುಂಬಿಸಲು ಸಹಕಾರಿ ಎನ್ನಲಾಗಿದ್ದರೂ, ಸಂಪೂರ್ಣ ಸುರಕ್ಷಿತವಲ್ಲ.

ಮೂರನೇ ಹಂತ (Tertiary Treatment): ಇದು ದ್ರಾವಕಗಳು, ಪೋಷಕಾಂಶಗಳು ಮತ್ತು ಸೂಕ್ಷ್ಮಜೀವಿಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಈ ನೀರು ಕೃಷಿ ಮತ್ತು ಪರಿಸರಕ್ಕೆ ದೀರ್ಘಕಾಲದ ಬಳಕೆಗೆ ಅತ್ಯಂತ ಸುರಕ್ಷಿತವಾಗಿದೆ.

ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌. ವ್ಯಾಲಿ ಬಗ್ಗೆ ʼದ ಫೆಡರಲ್‌ ಕರ್ನಾಟಕʼ ಪ್ರತ್ಯಕ್ಷ ವಿಡಿಯೋ ವರದಿಯನ್ನು ಭಿತ್ತರಿಸಿತ್ತು.

Read More
Next Story