Transportation| ಎರಡ್ಮೂರು ಬಸ್‌ಗಳಿಗೆ ಒಂದೇ ಪರ್ಮಿಟ್‌; ನಕಲಿ ಜಾಲಕ್ಕೆ ಹಾಕಬೇಕಿದೆ ಕಡಿವಾಣ
x

Transportation| ಎರಡ್ಮೂರು ಬಸ್‌ಗಳಿಗೆ ಒಂದೇ ಪರ್ಮಿಟ್‌; ನಕಲಿ ಜಾಲಕ್ಕೆ ಹಾಕಬೇಕಿದೆ ಕಡಿವಾಣ

ವಾಹನಗಳ ಕಳ್ಳತನ ತಡೆ, ಅಪರಾಧ ಕೃತ್ಯಗಳಲ್ಲಿ ವಾಹನಗಳ ಬಳಕೆಗೆ ನಿಯಂತ್ರಣ ಹೇರುವ ಹಾಗೂ ತೆರಿಗೆ ಸಂಗ್ರಹದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಎಚ್‌ಎಸ್‌ಆರ್‌ಪಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.


Click the Play button to hear this message in audio format

ಸಾರಿಗೆ ಇಲಾಖೆಯಲ್ಲಿ 'ನಕಲಿ ನಂಬರ್ ಪ್ಲೇಟ್' ದಂಧೆ ವ್ಯವಸ್ಥಿತ ಜಾಲವಾಗಿ ಬದಲಾಗಿದೆ. ಹಲವು ವಾಹನಗಳಿಗೆ ಒಂದೇ ಪರ್ಮಿಟ್ (ಪರವಾನಗಿ) ಬಳಸಿ ರಸ್ತೆಗೆ ಇಳಿಸುವ ಮೂಲಕ ಸಾರಿಗೆ ಇಲಾಖೆಯನ್ನೇ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ಕೋಟ್ಯಂತರ ರೂಪಾಯಿ ತೆರಿಗೆ ಹಣವು ಖಾಸಗಿ ವ್ಯಕ್ತಿಗಳ ಜೇಬು ಸೇರುತ್ತಿದೆ.

ವಾಹನಗಳ ಸುರಕ್ಷತೆ ಮತ್ತು ಪಾರದರ್ಶಕತೆ ಖಚಿತಪಡಿಸಲು ರಾಜ್ಯ ಸರ್ಕಾರವು 'ಅತಿ ಸುರಕ್ಷಿತ ನೋಂದಣಿ ಫಲಕ' (ಎಚ್‌ಎಸ್‌ಆರ್‌ಪಿ) ವ್ಯವಸ್ಥೆ ಕಡ್ಡಾಯಗೊಳಿಸಿದೆ. ಆ ಮೂಲಕ ವಾಹನಗಳ ಕಳ್ಳತನ ತಡೆ, ಅಪರಾಧ ಕೃತ್ಯಗಳಲ್ಲಿ ವಾಹನಗಳ ಬಳಕೆ ನಿಯಂತ್ರಣ ಹಾಗೂ ತೆರಿಗೆ ಸಂಗ್ರಹದಲ್ಲಿ ಪಾರದರ್ಶಕತೆ ತರುವ ಉದ್ದೇಶ ಹೊಂದಿದೆ. ವಿಪರ್ಯಾಸವೆಂದರೆ ಎಚ್‌ಎಸ್‌ಆರ್‌ಪಿ ವ್ಯವಸ್ಥೆ ಜಾರಿಯಾದರೂ ಅಕ್ರಮಗಳು ತಹಬದಿಗೆ ಬಂದಿಲ್ಲ. ಎಚ್‌ಎಸ್‌ಆರ್‌ಪಿ ವ್ಯವಸ್ಥೆಯು ದಂಧೆಯಾಗಿ ಬದಲಾಗಿರುವುದನ್ನು ಮನಗಂಡ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಇದೀಗ ಕಾರ್ಯಾಚರಣೆಗೆ ಇಳಿದಿದ್ದಾರೆ. ನೂರಾರು ವಾಹನಗಳು ಒಂದೇ ನಂಬರಿನ ಎರಡೆರಡು ನಾಮಫಲಕ ಅಳವಡಿಸಿಕೊಂಡು ಸಂಚರಿಸುತ್ತಿರುವುದನ್ನು ಅಧಿಕಾರಿಗಳು ಪತ೭ತೆ ಮಾಡಿದ್ದಾರೆ.

ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿರುವ ಬಹುತೇಕ ವಾಹನಗಳು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಪುದುಚೇರಿಯಂತಹ ಹೊರ ರಾಜ್ಯಗಳಲ್ಲಿ ನೋಂದಣಿಯಾಗಿವೆ. ಈ ವಾಹನಗಳ ಮಾಲೀಕರು ಉದ್ದೇಶಪೂರ್ವಕವಾಗಿಯೇ ತೆರಿಗೆ ವಂಚಿಸಲು ನಕಲಿ ದಾಖಲೆ ಸೃಷ್ಟಿಸುತ್ತಿರುವ ಅನುಮಾನಗಳು ದಟ್ಟವಾಗಿವೆ. ಕೆಲವು ರಾಜ್ಯಗಳಲ್ಲಿ ತೆರಿಗೆ ಕಡಿಮೆ ಇರುವುದರಿಂದ ಅಥವಾ ದಾಖಲೆಗಳ ಪರಿಶೀಲನೆ ಕಷ್ಟವಾಗಿರುವುದರಿಂದ ಈ ಮಾರ್ಗವನ್ನು ವಾಹನ ಮಾಲೀಕರು ಆರಿಸಿಕೊಂಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಎಆರ್‌-06-ಬಿ-9988' ಸಂಖ್ಯೆಯ ಬಸ್ಸಿಗೆ ಅರುಣಾಚಲ ಪ್ರದೇಶದ ನಕಲಿ ದಾಖಲೆ ಸೃಷ್ಟಿಸಿ ರಸ್ತೆಗೆ ಇಳಿಸಲಾಗಿದೆ. ಇದೇ ಸಂಖ್ಯೆಯಲ್ಲಿ ಮತ್ತೆರಡು ವಾಹನಗಳು ಓಡಾಡುತ್ತಿವೆ. ಸದ್ಯ ವಾಹನವನ್ನು ಜಪ್ತಿ ಮಾಡಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಇಲಾಖೆ ಅಧಿಕಾರಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಹೇಗೆ ವಂಚನೆ ಮಾಡಲಾಗುತ್ತದೆ?

ಒಬ್ಬ ಮಾಲೀಕ ಒಂದೇ ಕಂಪನಿಯ, ಒಂದೇ ಮಾದರಿಯ ಮತ್ತು ಒಂದೇ ಬಣ್ಣದ ಎರಡು ಅಥವಾ ಮೂರು ವಾಹನಗಳನ್ನು ಖರೀದಿ ಮಾಡುತ್ತಾರೆ. ಆದರೆ, ದಾಖಲೆಗಳ ಪ್ರಕಾರ ಕೇವಲ ಒಂದು ವಾಹನ ಮಾತ್ರ ಅಧಿಕೃತವಾಗಿ ಸಾರಿಗೆ ಇಲಾಖೆಯಲ್ಲಿ ನೋಂದಣಿ ಆಗಿರಲಿದೆ. ಕಾನೂನುಬದ್ಧವಾಗಿ ಪಡೆಯುವ ಎಚ್‌ಎಸ್‌ಆರ್‌ಪಿ ಪ್ಲೇಟ್ ಅನ್ನು ಎರಡು ವಾಹನಗಳಿಗೆ ಅಳವಡಿಸಿ ತೆರಿಗೆ ವಂಚಿಸುತ್ತಿದ್ದಾರೆ. ಹೊರಗೆ ಈ ಎಲ್ಲಾ ವಾಹನಗಳು ಒಂದೇ ರೀತಿ ಕಾಣುವುದರಿಂದ ಸಂಚಾರಿ ಪೊಲೀಸರಿಗಾಗಲಿ ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳಿಗಾಗಲಿ ಇದು ನಕಲಿಯೋ, ಅಸಲಿಯೋ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟಕರವಾಗುತ್ತಿದೆ.

ವಾಹನದ ಇಂಜಿನ್ ಮತ್ತು ಚಾಸಿಸ್ ನಂಬರನ್ನು ತಿದ್ದುವ ಮೂಲಕ ಅವುಗಳ ಮೂಲ ಗುರುತು ಅಳಿಸಿ ಹಾಕಲಾಗುತ್ತದೆ. ಇದರಿಂದ ತಪಾಸಣೆಯ ಸಮಯದಲ್ಲಿ ಅಧಿಕಾರಿಗಳು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗದಂತೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಆರ್ಥಿಕ ನಷ್ಟದ ಭೀಕರತೆ

ಇಂತಹ ವಂಚನೆ ಪ್ರಕರಣಗಳಿಂದಲೇ ಸಾರಿಗೆ ಇಲಾಖೆಯ ಬೊಕ್ಕಸಕ್ಕೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. 30 ಸೀಟಿನ ಒಂದು ಬಸ್ಸಿಗೆ ಪ್ರತಿ ಮೂರು ತಿಂಗಳಿಗೆ ಸುಮಾರು 1 ಲಕ್ಷ ರೂ. ತೆರಿಗೆ ಪಾವತಿಸಬೇಕು. ಅಂದರೆ ವರ್ಷಕ್ಕೆ 4 ಲಕ್ಷ ರೂಪಾಯಿ. ಒಬ್ಬ ಮಾಲೀಕ ಒಂದು ನಂಬರ್ ಮೇಲೆ ಮೂರು ಬಸ್ ಓಡಿಸಿದರೆ, ಆತ ಸರ್ಕಾರಕ್ಕೆ ಸಲ್ಲಿಸಬೇಕಾದ 8 ಲಕ್ಷ ರೂ. ತೆರಿಗೆ ಹಣ ವಂಚಿಸಬಹುದು. ಬೆಂಗಳೂರು ನಗರವೊಂದರಲ್ಲೇ ಸುಮಾರು 3,207 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ 42 ಕೋಟಿ ರೂ. ದಂಡ ವಿಧಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 39 ವಾಹನಗಳಿಂದ 27 ಸಾವಿರ ರೂ. ದಂಡ ಮತ್ತು ತೆರಿಗೆ ವಸೂಲಿ ಮಾಡಲಾಗಿದೆ ಎನ್ನಲಾಗಿದೆ.

ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನಗಳಿಗೆ ಅಧಿಕೃತ ವಿಮೆ ಇರುವುದಿಲ್ಲ. ಒಂದು ವೇಳೆ ಇಂತಹ ವಾಹನಗಳು ಅಪಘಾತಕ್ಕೀಡಾದರೆ, ಅದರಲ್ಲಿರುವ ಪ್ರಯಾಣಿಕರಿಗೆ ಅಥವಾ ಅಪಘಾತಕ್ಕೊಳಗಾದವರಿಗೆ ವಿಮಾ ಕಂಪನಿಗಳಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ನಕಲಿ ನಂಬರ್ ಪ್ಲೇಟ್ ವಾಹನಗಳು ಯಾವುದೇ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡರೂ ಅವುಗಳ ಮೂಲ ಮಾಲೀಕರನ್ನು ಪತ್ತೆಹಚ್ಚುವುದು ಅಸಾಧ್ಯ. ಇದು ಸಮಾಜದ ಸುರಕ್ಷತೆಗೆ ದೊಡ್ಡ ಸವಾಲಾಗಿದೆ.

ಅಧಿಕಾರಿಗಳ ಕಣ್ಣೆದುರೇ ಈ ವಾಹನಗಳು ಓಡಾಡುತ್ತಿದ್ದರೂ ಪತ್ತೆಹಚ್ಚುವುದು ಕಷ್ಟ. ಚಾಸಿಸ್ ನಂಬರ್ ಪರಿಶೀಲಿಸಿದಾಗ ಮಾತ್ರ ಸತ್ಯ ಹೊರಬರುತ್ತದೆ. ಇತ್ತೀಚಿನ ಒಂದು ಪ್ರಕರಣದಲ್ಲಿ, ಕೋಲಾರ ಆರ್.ಟಿ.ಓ ಅಧಿಕಾರಿಗಳು ಜಪ್ತಿ ಮಾಡಿದ್ದ ಎರಡು ಬಸ್‌ಗಳನ್ನು ಯಾವುದೇ ಪ್ರಕರಣ ದಾಖಲಿಸದೇ ಬಿಡುಗಡೆ ಮಾಡಿದ್ದರು. ಇದು ವ್ಯವಸ್ಥೆಯೊಳಗಿನ ಭ್ರಷ್ಟಾಚಾರ ಅಥವಾ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಆದರೆ, ಆರ್‌ಟಿಒ ಅಧಿಕಾರಿಗಳು ಬಿಟ್ಟು ಕಳುಹಿಸಿದ ವಾಹನಗಳ ಮೇಲೆಯೇ ನಂತರ ಪೊಲೀಸರ ನೆರವಿನಿಂದ ಕೇಸ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ʼದ ಫೆಡರಲ್‌ ಕರ್ನಾಟಕʼ ಜತೆ ಮಾತನಾಡಿದ ಸಾರಿಗೆ ಇಲಾಖೆ ಜಂಟಿ ಆಯುಕ್ತರಾದ ಎಂ.ಪಿ. ಓಂಕಾರೇಶ್ವರಿ, ಕೇವಲ ದಂಡ ವಿಧಿಸುವುದಲ್ಲದೆ, ನಕಲಿ ನಂಬರ್ ಅಳವಡಿಸಿದ ವಾಹನ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತಿದೆ. ಸಂಶಯಾಸ್ಪದ ವಾಹನಗಳನ್ನು ತಕ್ಷಣವೇ ಜಪ್ತಿ ಮಾಡಿ ತನಿಖೆಗೊಳಪಡಿಸಲಾಗುತ್ತಿದೆ. ಕೋಲಾರ, ನೆಲಮಂಗಲ, ದೇವನಹಳ್ಳಿ ಮುಂತಾದೆಡೆ ಇಂತಹ ನೂರಾರು ಪ್ರಕರಣಗಳು ಪತ್ತೆಯಾಗಿವೆ. ಎಚ್‌ಎಸ್‌ಆರ್‌ಪಿ ವ್ಯವಸ್ಥೆಯಿಂದಾಗಿ ಅಕ್ರಮ ವಾಹನಗಳ ಓಡಾಟವು ಪತ್ತೆಯಾಗುತ್ತಿದೆ. ಪ್ರತಿಯೊಂದು ವಾಹನದ ದತ್ತಾಂಶವನ್ನು ರಾಷ್ಟ್ರೀಯ ಮಟ್ಟದ 'ವಾಹನ್' ತಂತ್ರಾಂಶದೊಂದಿಗೆ ಕಟ್ಟುನಿಟ್ಟಾಗಿ ಜೋಡಿಸಬೇಕು ಎಂದು ಹೇಳಿದರು.

ರಸ್ತೆಗಳಲ್ಲಿ ಹಠಾತ್ ತಪಾಸಣೆಗಳನ್ನು ನಡೆಸಿ ಚಾಸಿಸ್ ಮತ್ತು ಇಂಜಿನ್ ಸಂಖ್ಯೆಗಳನ್ನು ಪರಿಶೀಲಿಸುವ ವ್ಯವಸ್ಥೆ ಬಲಗೊಳಿಸಲಾಗುತ್ತಿದೆ. ತೆರಿಗೆ ವಂಚಕರಿಗೆ ಕೇವಲ ದಂಡವಲ್ಲದೆ, ಜೈಲು ಶಿಕ್ಷೆ ಮತ್ತು ವಾಹನ ಚಾಲನಾ ಪರವಾನಗಿ ರದ್ದುಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ದಂಧೆಯನ್ನು ಹತ್ತಿಕ್ಕುವ ಭಾಗವಾಗಿ ಅಧಿಕಾರಿಗಳು ಈವರೆಗೆ ಒಟ್ಟು 42 ಕೋಟಿ ರೂ. ದಂಡವನ್ನು ವಿಧಿಸಲಾಗಿದೆ. ಇದು ಕೇವಲ ಒಂದು ಹಂತದ ಕಾರ್ಯಾಚರಣೆಯ ಫಲಿತಾಂಶವಾಗಿದ್ದು, ಇನ್ನು ಆಳವಾಗಿ ತನಿಖೆ ನಡೆಸಿದರೆ ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದರು.

ಪತ್ತೆ ಹಚ್ಚುವಲ್ಲಿ ಎದುರಾಗುವ ಸವಾಲುಗಳು

ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳಲ್ಲಿ ಲೇಸರ್ ಕೋಡಿಂಗ್ ಮತ್ತು ಕ್ರೋಮಿಯಂ ಹಾಲೋಗ್ರಾಮ್ ಇರುತ್ತದೆ. ಆದರೂ, ವಂಚಕರು ಚಾಣಾಕ್ಷತನದಿಂದ ಅದನ್ನು ಹೋಲುವ ನಕಲಿ ಪ್ಲೇಟ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಹೆದ್ದಾರಿಗಳಲ್ಲಿ ಇರುವ ಟೋಲ್ ನಾಕಾಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಇರುವುದರಿಂದ ಒಂದು ವಾಹನದ ಸಂಚಾರ ದಾಖಲಾಗುತ್ತದೆ. ಆದರೆ, ವಂಚಕರು ನಕಲಿ ಗಾಡಿಗಳಿಗೆ ಬೇರೆ ರೀತಿಯ ತಾಂತ್ರಿಕ ಉಪಾಯಗಳನ್ನು ಮಾಡುತ್ತಿದ್ದಾರೆ ಅಥವಾ ಟೋಲ್ ರಹಿತ ರಸ್ತೆಗಳನ್ನು ಬಳಸುತ್ತಿದ್ದಾರೆ. ಇಂತಹ ವಾಹನಗಳು ಅಪಘಾತ ಮಾಡಿ ಪರಾರಿಯಾದಾಗ ಸಿಸಿಟಿವಿ ದೃಶ್ಯಾವಳಿಗಳಿದ್ದರೂ ನೈಜ ಆರೋಪಿಯನ್ನು ಪತ್ತೆ ಹಚ್ಚುವುದು ಅಸಾಧ್ಯವಾಗುತ್ತದೆ. ದೇಶ ವಿರೋಧಿ ಚಟುವಟಿಕೆಗಳಿಗೆ ಇಂತಹ ನಕಲಿ ದಾಖಲೆಯ ವಾಹನಗಳು ಬಳಕೆಯಾಗುವ ಅಪಾಯವಿರುತ್ತದೆ ಎಂದು ಮೂಲಗಳು ಹೇಳಿವೆ.

ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳೇನು?

ಈ ದಂಧೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಕೇವಲ ದಂಡ ವಿಧಿಸುವುದು ಸಾಕಾಗುವುದಿಲ್ಲ. ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಪೊಲೀಸ್ ಇಲಾಖೆಯ ಡೇಟಾಬೇಸ್ ಅನ್ನು ಸಂಯೋಜಿಸಿ, ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಬೇಕು. ಒಂದೇ ನಂಬರಿನ ವಾಹನ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಏಕಕಾಲಕ್ಕೆ ಕಂಡುಬಂದಲ್ಲಿ ತಕ್ಷಣ ಎಚ್ಚರಿಕೆ ರವಾನೆಯಾಗುವ ವ್ಯವಸ್ಥೆ ಬರಬೇಕು. ಗಡಿ ಭಾಗಗಳಲ್ಲಿ ಮತ್ತು ಕೈಗಾರಿಕಾ ವಲಯಗಳಲ್ಲಿ ಸಾರಿಗೆ ಅಧಿಕಾರಿಗಳು ನಿರಂತರವಾಗಿ ವಾಹನಗಳ ಚಾಸಿಸ್ ನಂಬರ್ ಮತ್ತು ಇಂಜಿನ್ ನಂಬರ್‌ಗಳನ್ನು ಅಧಿಕೃತ ದಾಖಲೆಗಳೊಂದಿಗೆ ಪರಿಶೀಲಿಸಬೇಕು. ಇಂತಹ ದಂಧೆಯಲ್ಲಿ ತೊಡಗಿರುವ ಮಾಲೀಕರ ಮತ್ತು ಏಜೆನ್ಸಿಗಳ ಪರವಾನಗಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಅವರಿಗೆ ಕಠಿಣ ಜೈಲು ಶಿಕ್ಷೆ ವಿಧಿಸಬೇಕು ಎಂದು ಇಲಾಖೆಯ ಆಗ್ರಹವಾಗಿದೆ.

Read More
Next Story