
Internal Reservation| ಎಡಗೈಗೆ ಪ್ರಾತಿನಿಧ್ಯ; ಬಲಗೈ, ಸ್ಪೃಶ್ಯ ಜಾತಿಗಳ ಒಗ್ಗಟ್ಟು; ಕಿಚ್ಚು ಎಬ್ಬಿಸಿದ ʼರೋಸ್ಟರ್ʼ
ಸರ್ಕಾರದ ರಾಜಕೀಯ ಲಾಭದ ಲೆಕ್ಕಾಚಾರಗಳು ಈ ವಿವಾದವನ್ನು ಮತ್ತಷ್ಟು ಜಟಿಲಗೊಳಿಸಿವೆ. ರೋಸ್ಟರ್ ಪದ್ಧತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಸಮುದಾಯಗಳು ಪ್ರತಿಭಟನೆಯ ಹಾದಿ ತುಳಿಯಲು ಸಜ್ಜಾಗಿವೆ.
ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಅವೈಜ್ಞಾನಿಕ ನಡೆ ಮತ್ತು ರಾಜಕೀಯ ಲಾಭದ ಹಪಾಹಪಿಯಿಂದ ಎಡಗೈ ಹಾಗೂ ಬಲಗೈ ನಡುವೆ ಸಂಘರ್ಷ ಏರ್ಪಟ್ಟಿದೆ. ಪರಿಶಿಷ್ಟ ಜಾತಿಗಳ ಒಳ ಸಮುದಾಯಗಳ ನಡುವೆ ಕಿಚ್ಚು ಹೊತ್ತಿಕೊಂಡಿರುವುದು ಸರ್ಕಾರದ ರಾಜಕೀಯ ಲಾಭದ ಲೆಕ್ಕಾಚಾರವನ್ನು ಮತ್ತಷ್ಟು ಜಟಿಲಗೊಳಿಸಿದೆ. ಶೇ50 ಮೀಸಲಾತಿಯಲ್ಲೂ ಒಳ ಮೀಸಲು ಜಾರಿಯಾಗಬೇಕೆಂದು ಎಡಗೈ ಸಮುದಾಯ ಪಟ್ಟು ಹಿಡಿದರೆ, ರೋಸ್ಟರ್ ವ್ಯವಸ್ಥೆ ಹಾಗೂ ಒಳ ಮೀಸಲಾತಿ ಕುರಿತ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ತಿರಸ್ಕರಿಸಬೇಕೆಂದು ಬಲಗೈ ಸಮುದಾಯ ಆಗ್ರಹಿಸಿದೆ. ಎರಡೂ ಸಮುದಾಯಗಳು ಈಗ ಸೂಕ್ತ ಪ್ರಾತಿನಿಧ್ಯಕ್ಕಾಗಿ ಪರಸ್ಪರ ಕಾಳಗಕ್ಕೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜಕೀಯ ಪಕ್ಷಗಳು ಒಳಮೀಸಲಾತಿಯನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು ಬರೋಬ್ಬರಿ 40 ವರ್ಷ ಅಧಿಕಾರ ನಡೆಸಿದವು. ಒಳ ಮೀಸಲಾತಿ ಹಂಚಿಕೆಗೆ ಒತ್ತಡ, ಆಗ್ರಹ ತೀವ್ರಗೊಂಡಾಗ ಸಮಿತಿ, ಆಯೋಗಗಳನ್ನು ರಚಿಸಿ ಕೈ ತೊಳೆದುಕೊಳ್ಳುವ, ಇಲ್ಲವೇ ವಿವಾದ ಎಬ್ಬಿಸಿ ನ್ಯಾಯಾಲಯ ಕಟಕಟೆಗೆ ಎಳೆದು ತರುವ ಸರ್ಕಾರಗಳ ಧೋರಣೆಗೆ ಪರಿಶಿಷ್ಟರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಲಿತ ಸಮುದಾಯದಲ್ಲಿ ಎಡ-ಬಲದ ದ್ವೇಷ ಬಿತ್ತುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ 'ದಲಿತ ಏಕತೆ'ಯ ಬದಲು ಸಮುದಾಯದ ಒಳಗೆ ಜಾತಿ ಜಗಳಗಳು ಬೀದಿಗೆ ಬರುತ್ತಿವೆ. ಇದಕ್ಕೆ ಸರ್ಕಾರದ ಅಸ್ಪಷ್ಟ ಧೋರಣೆಯೇ ಕಾರಣ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ನ್ಯಾ. ನಾಗಮೋಹನ್ ದಾಸ್ ನೀಡಿದ್ದ ವರದಿಯನ್ನು ಅಂಗೀಕರಿಸಿದರೂ ಸರ್ಕಾರವೇ ರಾಜಕೀಯ ಕಾರಣಕ್ಕಾಗಿ ಮನಸೋಇಚ್ಛೆ ವರ್ಗೀಕರಣ ಮಾಡಿದ್ದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ ಎನ್ನಲಾಗುತ್ತಿದೆ.
ಸರ್ಕಾರವು ಒಳಮೀಸಲಾತಿ ಜಾರಿಗೆ ತರಲು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಎಡಗೈ ಸಮುದಾಯದ ಆಪೇಕ್ಷೆಯಂತೆ ಹಳೆ ಮೀಸಲಾತಿಯಲ್ಲೇ ಒಳ ಮೀಸಲು ಕಲ್ಪಿಸಲು ಹಿಂದೇಟು ಹಾಕುತ್ತಿದೆ ಎಂಬ ಆರೋಪಗಳು ಒಂದೆಡೆಯಾದರೆ, ರೋಸ್ಟರ್‌ನಲ್ಲಿ ಆದ್ಯತೆ ಸಿಗದ ಕಾರಣ ಹಳೆಯ ರೋಸ್ಟರ್ ಅನ್ನೇ ಮುಂದುವರಿಸಬೇಕು ಎಂಬುದು ಬಲಗೈ ಸಮುದಾಯದ ವಾದವಾಗಿದೆ. ಒಳ ಮೀಸಲಾತಿಯಿಂದ ದಲಿತರನ್ನೂ ವಿಭಜಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಗೊಂದಲದ ಹಿಂದೆ ರಾಜಕೀಯ
ರೋಸ್ಟರ್ ಗೊಂದಲದ ಹಿಂದೆ ಬಲವಾದ ರಾಜಕೀಯ ಲೆಕ್ಕಾಚಾರವಿದೆ. ದಲಿತ ಮತಬ್ಯಾಂಕ್ ಒಡೆಯದಂತೆ ನೋಡಿಕೊಳ್ಳುವುದು ಎಲ್ಲಾ ರಾಜಕೀಯ ಪಕ್ಷಗಳಿಗೆ ಅನಿವಾರ್ಯವಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಬಲಗೈ ಸಮುದಾಯ ಗಟ್ಟಿ ಬೆಂಬಲ ನೀಡುತ್ತಾ ಬಂದಿದೆ. ಆದರೆ ಒಳಮೀಸಲಾತಿ ನೀಡದಿದ್ದರೆ ಎಡಗೈ ಸಮುದಾಯದ ಮತಗಳು ಬಿಜೆಪಿಗೆ ಹೋಗುತ್ತವೆ ಎಂಬ ಭಯವಿದೆ. ಹೀಗಾಗಿ ಒಳಮೀಸಲಾತಿ ನೀಡುತ್ತೇವೆ ಎಂದು ಹೇಳುತ್ತಲೇ, ರೋಸ್ಟರ್ ಗೊಂದಲ ಎಂಬ ನೆಪವೊಡ್ಡಿ ವಿಳಂಬ ಮಾಡುತ್ತಿದೆ. ರಾಜ್ಯ ಸರ್ಕಾರವು ಸಂವಿಧಾನದ 341(3)ಕ್ಕೆ ತಿದ್ದುಪಡಿ ತರಬೇಕೆಂದು ಕೇಂದ್ರದ ಕಡೆಗೆ ಬೆರಳು ತೋರಿಸಿದರೆ, ಕೇಂದ್ರವು ಸುಪ್ರೀಂಕೋರ್ಟ್ ತೀರ್ಪಿನ ಆಧಾರದ ಮೇಲೆ ರಾಜ್ಯಕ್ಕೇ ಅಧಿಕಾರವಿದೆ ಎಂದು ಮರಳಿ ಹೇಳುತ್ತಿದೆ. ಈ ಚೆಂಡಾಟದಲ್ಲಿ ದಲಿತ ಯುವಕರ ಭವಿಷ್ಯ ಕಮರುತ್ತಿದೆ ಎಂಬ ಆರೋಪಗಳು ಬಂದಿವೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಶಿಫಾರಸ್ಸಿನಂತೆ ರಾಜ್ಯದಲ್ಲಿ ಎಸ್‌ಸಿ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ಶೇ.2ರಷ್ಟು ಮೀಸಲಾತಿಯನ್ನು ರೋಸ್ಟರ್‌ನಲ್ಲಿ ಎಲ್ಲಿ ಅಳವಡಿಸಬೇಕು ಮತ್ತು ಅದನ್ನು ಯಾವ ಸಮುದಾಯಕ್ಕೆ ಹಂಚಬೇಕು ಎಂಬ ಗೊಂದಲಕ್ಕೆ ಸರ್ಕಾರದಿಂದ ಇನ್ನೂ ಸ್ಪಷ್ಟ ಉತ್ತರ ನೀಡಿಲ್ಲ. ನಾಗಮೋಹನ್ ದಾಸ್ ವರದಿಯು ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟರೂ ಆಂತರಿಕವಾಗಿ ರೋಸ್ಟರ್ ಬಿಂದುಗಳನ್ನು ವೈಜ್ಞಾನಿಕವಾಗಿ ಹಂಚುವ ಜವಾಬ್ದಾರಿಯನ್ನು ಸರ್ಕಾರಕ್ಕೆ ಬಿಟ್ಟಿತ್ತು. ಆದರೆ, ಸರ್ಕಾರವು ಜನಸಂಖ್ಯೆಯ ನಿಖರ ದತ್ತಾಂಶ ಬಳಸದೆ ರೋಸ್ಟರ್ ಸಿದ್ಧಪಡಿಸಿರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ನಡೆಯಿಂದಾಗಿ ಸಂಘರ್ಷದ ಹಾದಿ
ಈ ಬಗ್ಗೆ ʼದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಎಸ್‌ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ, ರೋಸ್ಟರ್ ಪದ್ಧತಿಯನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಎಡವಿದೆ. ನ್ಯಾ.ನಾಗಮೋಹನ್ ದಾಸ್ ಸಮಿತಿಯಲ್ಲಿ ಐದು ಗುಂಪುಗಳಾಗಿ ವಿಂಗಡಿಸಿದ್ದನ್ನು ಸರ್ಕಾರ ಮೂರು ಗುಂಪುಗಳಾಗಿ ವಿಂಗಡಿಸಿ ರೋಸ್ಟರ್ ನಿಗದಿ ಮಾಡಿದೆ. ಇದರಿಂದ ದಲಿತ ಸಮುದಾಯದಲ್ಲಿಯೇ ಒಡಕು ಮೂಡುವಂತೆ ಮಾಡಿದೆ. ದಲಿತ ಸಚಿವರು, ಶಾಸಕರು, ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಿತ್ತು. ಆದರೆ ಸರ್ಕಾರದ ನಡೆಯಿಂದಾಗಿ ಸಮುದಾಯಗಳ ನಡುವೆ ಸಂಘರ್ಷದ ಹಾದಿ ತುಳಿಯುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸ್ಪೃಶ್ಯ ಜಾತಿಗಳ ಹೋರಾಟ
ರೋಸ್ಟರ್ ಪದ್ಧತಿಯಿಂದಾಗಿ ಬಂಜಾರ, ಭೋವಿ, ಕೊರಚ, ಕೊರಮ ಸಮಾಜಗಳಿಗೆ ಅನ್ಯಾಯವಾಗಿದೆ ಎಂದು ಈ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಾಮರಾವ ಕೆ.ಪವಾರ ಕಿಡಿಕಾರಿದ್ದಾರೆ. ಈ ವರ್ಗವನ್ನು ಸಿ ವರ್ಗಕ್ಕೆ ಸೇರಿಸಲಾಗಿದ್ದು, ಇದಕ್ಕೆ ನೀಡಿರುವ ಶೇಕಡಾವಾರು ಸಮಂಜಸವಾಗಿಲ್ಲ. ಸುಪ್ರೀಂಕೋರ್ಟ್ ಸೂಚನೆಗಳಿಗೆ ವಿರುದ್ಧವಾಗಿದೆ. ಅಸ್ಪಶೃ ಅಥವಾ ಸ್ಪಶ್ಯ ಎಂಬ ಪದಗಳ ಬಳಕೆ ಸಂವಿಧಾನ ವಿರೋಧಿಯಾಗಿದೆ. ಇತ್ತೀಚೆಗಿನ ಅಧಿಸೂಚನೆಯಲ್ಲಿ ಬಿ ಮತ್ತು ಸಿ ವರ್ಗದ ಜಾತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವೇ ನೀಡಿಲ್ಲ. ಆದ್ದರಿಂದ ಅ ಅಧಿಸೂಚನೆನ್ನು ಹಿಂಪಡೆದು ಹೊಸ ಅಧಿಸೂಚನೆಯನ್ನು ಹೊರಡಿಸಬೇಕು. ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಾ. 25 ರಂದು ʼಎಡ-ಬಲʼ ಹೋರಾಟ
ಎಸ್‌ಸಿ ಸಮುದಾಯದ ರೋಸ್ಟರ್ ವಿವಾದ ಕಿಚ್ಚು ಈಗ ಬೀದಿಗೆ ಬಂದಿದೆ. ಇದೇ 25ರಂದು ಎಡಗೈ ಮತ್ತು ಬಲಗೈ ಸೇರಿದಂತೆ ಸಮುದಾಯದವರು ತಮ್ಮ ಅಸ್ತಿತ್ವ ಮತ್ತು ಹಕ್ಕಿಗಾಗಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಇದು ರಾಜ್ಯ ಸರ್ಕಾರದ ನಿದ್ದೆಗೆಡಿಸಿದೆ. ಒಂದೆಡೆ ರೋಸ್ಟರ್ ಜಾರಿಗೆ ಆಗ್ರಹಿಸಿ ಎಡಗೈ ಸಮುದಾಯದವರು ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಿದ್ದರೆ, ಮತ್ತೊಂದೆಡೆ ಇದಕ್ಕೆ ವಿರೋಧಿಸಿ ಬಲಗೈ ಸಮುದಾಯದವರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಎಡ ಸಮುದಾಯದವರು ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಸಜ್ಜಾದರೆ, ಬಲ ಸಮುದಾಯವದವರು ಪ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ವರದಿ ಲಭ್ಯವಾದ ನಂತರ ಅಂಕಿ-ಅಂಶಗಳೊಂದಿಗೆ ನ್ಯಾ. ನಾಗಮೋಹನ್‌ದಾಸ್ ಅವರ ಆಯೋಗದ ಅಂಕಿ ಅಂಶಗಳನ್ನು ಹೋಲಿಕೆ ಮಾಡಬೇಕು. ವ್ಯತ್ಯಾಸಗಲು ಕಂಡುಬಂದರೆ ಎಸ್‌ಸಿ ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳಬೇಕು. ಎಸ್‌ಸಿ ಸಮುದಾಯಕ್ಕೆ ಈಗಾಗಲೇ ನೀಡಿರುವ ಕಾಯಂ ಜಾತಿ ಪ್ರಮಾಣ ಪತ್ರಗಳನ್ನು ಹೊಸ ಜಾತಿ ಪ್ರಮಾಣ ಪತ್ರಗಳೊಂದಿಗೆ ಪರಿಗಣಿಸಲು ಸೂಕ್ತ ಆದೇಶ ಹೊರಡಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

