Rabies  Prevention|ನಾಯಿ ಕಚ್ಚಿದರೆ ಚುಚ್ಚು ಮದ್ದು ಬೇಡ,  ಬಾಯಿಗೇ ರೇಬಿಸ್‌ ಲಸಿಕೆ!
x

Rabies Prevention|ನಾಯಿ ಕಚ್ಚಿದರೆ ಚುಚ್ಚು ಮದ್ದು ಬೇಡ, ಬಾಯಿಗೇ ರೇಬಿಸ್‌ ಲಸಿಕೆ!

ರೇಬಿಸ್‌ ತಡೆಗೆ ಓರಲ್ ಲಸಿಕೆಯ ಪ್ರಯೋಗವನ್ನು 2026 ಡಿಸೆಂಬರ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ರೇಬಿಸ್ ನಿಯಂತ್ರಣಕ್ಕೆ ಪಶು ಸಂಗೋಪನಾ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.


Click the Play button to hear this message in audio format

ರಾಜ್ಯದಲ್ಲಿ ರೇಬಿಸ್‌ಗೆ ಒಂದೇ ವರ್ಷ 17 ಮಂದಿ ಜನ ಹಾಗೂ 87 ಜಾನುವಾರು ಬಲಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕದ ಗೆರೆ ಮೂಡಿಸಿದೆ. ರೇಬಿಸ್‌ಗೆ ಕಡಿವಾಣ ಹಾಕಲು ಸಾಕಷ್ಟು ಲಸಿಕಾ ಅಭಿಯಾನ ಕೈಗೊಂಡರೂ ಕಾಯಿಲೆ ಮಾತ್ರ ತಹಬದಿಗೆ ಬರುತ್ತಿಲ್ಲ.ಇದಕ್ಕೆ ಜನರಲ್ಲಿರುವ ಮೂಢನಂಬಿಕೆ, ಕಠಿಣ ಚಿಕಿತ್ಸಾ ವಿಧಾನಗಳೇ ಕಾರಣ ಎಂಬ ದೂರುಗಳು ಕೇಳಿ ಬರುತ್ತಿವೆ.

ಪ್ರಸ್ತುತ, ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಂಪೆನಿಗಳ ರೇಬಿಸ್‌ ಚುಚ್ಚುಮದ್ದುಗಳು ಲಭ್ಯವಿವೆ. ಆದರೆ, ಲಸಿಕೆ ಪಡೆದುಕೊಳ್ಳಲು ಇರುವ ವಿಧಾನಗಳು ಕೊಂಚ ಕ್ಲಿಷ್ಟಕರವಾಗಿರುವ ಕಾರಣ ಜನ ಹಿಂದೆ ಸರಿಯುತ್ತಿದ್ದಾರೆ. ಈ ಸಂಗತಿಯನ್ನು ಗಮನದಲ್ಲಿ ಇಟ್ಟುಕೊಂಡು ಜನರಿಗೆ ಸುಲಭವಾಗಿ ಸಿಗುವ ರೀತಿಯ ಹೊಸ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಹೊಸ ತಂತ್ರಜ್ಞಾನದಡಿ ಅಭಿವೃದ್ಧಿಪಡಿಸುತ್ತಿರುವ ಓರಲ್‌ ಲಸಿಕೆಯಿಂದ (ಬಾಯಿಗೆ ಹಾಕುವ ಡ್ರಾಪ್‌) ರೋಗ ತಡೆಯಬಹುದು. ಅಲ್ಲದೇ ಲಸಿಕೆ ಸುಲಭವಾಗಿ ಲಭ್ಯವಾಗಲಿದೆ.

2019ರ ಗಣತಿಯಲ್ಲಿ ಕರ್ನಾಟಕದಾದ್ಯಂತ ಒಟ್ಟು 2.9 ಕೋಟಿ ಜಾನುವಾರುಗಳು ಇದ್ದವು. 2025 ಫೆಬ್ರುವರಿವರೆಗೆ ಪಶುಗಣತಿ ನಡೆದಿದೆ. ಕ್ಷೇತ್ರ ಮಟ್ಟದ ಅಂಕಿ-ಅಂಶಗಳ ಪರಿಶೀಲನೆ ಮುಕ್ತಾಯವಾಗಿದ್ದು, ಶೀಘ್ರವೇ ಅಧಿಕೃತ ಗಣತಿಯ ವರದಿ ಹೊರಬರುವ ಸಾಧ್ಯತೆಯಿದೆ. ದತ್ತಾಂಶವನ್ನು ಪ್ರತ್ಯೇಕ ಮೊಬೈಲ್ ಆಪ್ ಮತ್ತು ಡಿಜಿಟಲ್ ಡ್ಯಾಶ್‌ಬೋರ್ಡ್‌ ಮೂಲಕ ಸಂಗ್ರಹಿಸಲಾಗಿದೆ. ಜಿಯೋ ಟ್ಯಾಗಿಂಗ್ ಮೂಲಕ ಪ್ರಾಣಿಗಳ ಗಣತಿ ನಡೆಸಲಾಗಿದೆ.

ಕರ್ನಾಟಕದಲ್ಲಿ ಅಂದಾಜು 11,41,173 ಬೀದಿ ನಾಯಿಗಳಿವೆ. ಬೆಂಗಳೂರು ನಗರದಲ್ಲೇ 2,79,000 ಬೀದಿ ನಾಯಿಗಳಿವೆ ಎನ್ನಲಾಗಿದೆ. ಇವುಗಳಲ್ಲಿ ಶೇ 70ಕ್ಕಿಂತ ಹೆಚ್ಚು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ. 2019ರಲ್ಲಿ ನಡೆಸಿದ ಜನಗಣತಿ ಅಂಕಿ ಅಂಶಗಳ ಪ್ರಕಾರ, ನಗರ ಪ್ರದೇಶಗಳಲ್ಲಿ ಸಾಕಿದ ನಾಯಿಗಳ ಸಂಖ್ಯೆಯೂ ವೇಗವಾಗಿ ಬೆಳೆಯುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಸುಮಾರು 24,615 ಸಾಕಿದ ನಾಯಿಗಳಿದ್ದರೆ, ಬೆಂಗಳೂರು ನಗರದಲ್ಲಿ 2.79 ಲಕ್ಷ, ಮೈಸೂರಿನಲ್ಲಿ 1.2 ಲಕ್ಷ, ಮಂಡ್ಯದಲ್ಲಿ 51,531ಹಾಗೂ ಕೊಡಗು ಜಿಲ್ಲೆಯಲ್ಲಿ 5,602 ನಾಯಿಗಳಿವೆ.

ಹೆಚ್ಚಿದ ರೇಬಿಸ್‌ ಪ್ರಕರಣಗಳು

ರಾಜ್ಯದಲ್ಲಿ ರೇಬಿಸ್ ರೋಗದ ಭೀತಿ ಹೆಚ್ಚುತ್ತಿದೆ. ಪ್ರಾಣಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ರೇಬಿಸ್ ಕುತ್ತು ತರುತ್ತಿದೆ. 2025ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಬರೋಬ್ಬರಿ 87 ಜಾನುವಾರುಗಳು ರೇಬಿಸ್‌ಗೆ ಬಲಿಯಾಗಿವೆ.

ರೇಬಿಸ್‌ನಿಂದ ಜಾನುವಾರುಗಳ ಸಾವು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗಿದೆ. 2024-25ರಲ್ಲಿ 9 ಜಾನುವಾರುಗಳು, 42 ಜನರು ರೇಬಿಸ್‌ನಿಂದ ಮೃತಪಟ್ಟಿದ್ದರು. 2025-26 ನೇ ಸಾಲಿನ ಡಿಸೆಂಬರ್‌ವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಕೇವಲ 9 ತಿಂಗಳಲ್ಲಿ 87ಜಾನುವಾರುಗಳ ಮೃತಪಟ್ಟರೆ, 17 ಮಂದಿ ರೇಬಿಸ್ ಕಾಯಿಲೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಓರಲ್‌ ರೇಬಿಸ್‌ ಲಸಿಕೆ ಅಭಿವೃದ್ಧಿ

ಬೀದಿ ನಾಯಿಗಳ ನಿಯಂತ್ರಣಕ್ಕೆ 'ಓರಲ್ ವ್ಯಾಕ್ಸಿನ್' ತಯಾರಿಸುತ್ತಿದ್ದು, ಬೀದಿ ನಾಯಿಗಳಿಂದ ರೇಬಿಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ. ನಾಯಿಗಳಿಗೆ ಬಾಯಿ ಮೂಲಕ ನೀಡಬಹುದಾದ 'ಓರಲ್ ರೇಬಿಸ್ ಲಸಿಕೆ' ಅಭಿವೃದ್ಧಿಪಡಿಸುತ್ತಿದೆ.

ಬೀದರ್‌ನ ಪಶುವೈದ್ಯಕೀಯ ವಿಶ್ವವಿದ್ಯಾಲಯ, ಹೈದರಾಬಾದ್‌ನ ಎನ್‌ಐಎಬಿ ಮತ್ತು ಎನ್‌ಎಂಆರ್‌ಐ, ಬೆಂಗಳೂರಿನ ನಿವೇದಿ( NIVEDI ) ಹಾಗೂ ದೆಹಲಿಯ ಐಸಿಎಂಆರ್‌ ಜಂಟಿಯಾಗಿ ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಇದಕ್ಕಾಗಿ 2,89,03,452 ರೂ. ಅನುದಾನ ಒದಗಿಸಲಾಗಿದ್ದು, ಆವಿಷ್ಕಾರ ಪ್ರಗತಿಯಲ್ಲಿದೆ.

ಇದೇ ವರ್ಷ ಪ್ರಾಯೋಗಿಕ ಪರೀಕ್ಷೆ

ರೇಬಿಸ್‌ ತಡೆಗಾಗಿ ನೀಡುವ ಓರಲ್ ಲಸಿಕೆಯ ಪ್ರಯೋಗವನ್ನು 2026 ಡಿಸೆಂಬರ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ರೇಬಿಸ್ ನಿಯಂತ್ರಣಕ್ಕೆ ಪಶು ಸಂಗೋಪನಾ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಲಸಿಕಾ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

2025-26ನೇ ಸಾಲಿನಲ್ಲಿ ಒಟ್ಟು 7,93,907 ನಾಯಿಗಳಿಗೆ ರೇಬಿಸ್ ವಿರೋಧಿ ಲಸಿಕೆ ಹಾಕಲಾಗಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರೇಬಿಸ್ ಬಗ್ಗೆ ಅರಿವು ಮೂಡಿಸಲು 9,175 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್‌ ತಿಳಿಸಿದ್ದಾರೆ.

ಆತಂಕ ಮೂಡಿಸಿದ ಜಾನುವಾರು ಸಾವು

ರಾಜ್ಯದಲ್ಲಿ ಜಾನುವಾರುಗಳ ಸಾವು ಹತ್ತು ಪಟ್ಟು ಹೆಚ್ಚಾಗಿರುವುದು ರೈತರಲ್ಲಿ ಆತಂಕ ಮೂಡಿಸಿದ್ದು, ಸರ್ಕಾರವು ಲಸಿಕಾ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಬೇಕೆಂಬ ಒತ್ತಾಯಗಳು ಕೇಳಿ ಬಂದಿವೆ.

ರೇಬಿಸ್‌ ಕಾಯಿಲೆ ಹರಡದಂತೆ ತಡೆಯಲು ಓರಲ್‌ ಲಸಿಕೆಯನ್ನು ಪಶು ವಿಜ್ಞಾನಗಳ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಈಗಾಗಲೇ ಲಸಿಕೆಯನ್ನು ಪ್ರಯೋಗಾಲಯದ ಪ್ರಾಣಿಗಳ ಮೇಲೆ ಪ್ರಯೋಗಿಸಿದ್ದು, ಯಶಸ್ವಿಯಾಗಿದೆ. ಇದಾದ ಬಳಿಕ ಹೊರಗಿನ ಪ್ರಾಣಿಗಳ ಮೇಲೆ ಪ್ರಯೋಗಿಸಿ, ನಂತರ ಮನುಷ್ಯರ ಮೇಲೆ ಪ್ರಯೋಗಿಸಲಾಗುವುದು ಎಂದು ಬೀದರ್‌ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ನರಸಪ್ಪ ದೇವಗೊಂಡ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಓರಲ್‌ ಲಸಿಕೆಯನ್ನು ಕಳೆದ 11ವರ್ಷಗಳಿಂದ ಸಂಶೋಧಿಸಲಾಗುತ್ತಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ಬಸ್‌ ನಿಲ್ದಾಣ, ಶಾಲಾ-ಕಾಲೇಜು ಆವರಣದಲ್ಲಿರುವ ನಾಯಿಗಳನ್ನು ಹಿಡಿದು ಪುನರ್ವಸತಿ ಕೇಂದ್ರಕ್ಕೆ ಬಿಡಲಾಗುತ್ತಿದೆ. ಎಬಿಸಿ (Animal Birth Control ) ಕಾರ್ಯಕ್ರಮದಡಿ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಮತ್ತು ರೇಬೀಸ್ ಲಸಿಕೆ ಹಾಕುವ ಕೆಲಸ ನಡೆಯುತ್ತಿದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಸಾಕಷ್ಟು ರೇಬಿಸ್‌ ಲಸಿಕೆಗಳಿವೆ. ಆದರೆ, ಅವುಗಳ ಬಳಕೆ, ಚಿಕಿತ್ಸಾ ವಿಧಾನಗಳು ಕ್ಲಿಷ್ಟಕರವಾಗಿವೆ. ಓರಲ್‌ ಲಸಿಕೆ ಸಿದ್ಧವಾದರೆ ತಕ್ಷಣವೇ ಪಡೆಯಬಹುದು. ತಜ್ಞ ವೈದ್ಯರಿಗಾಗಿ ಕಾಯುವ ಅಗತ್ಯ ಇರುವುದಿಲ್ಲ, ಅಲೆದಾಟವೂ ಇರುವುದಿಲ್ಲ ಎಂದು ಹೇಳಿದರು.

ಜನರಿಗೆ ಜಾಗೃತಿಯ ಕೊರತೆ

ರೇಬಿಸ್‌ನಿಂದ ಜನರ ಸಾವು ಸಂಭವಿಸಲು ಜಾಗೃತಿ ಕೊರತೆಯೇ ಪ್ರಮುಖ ಕಾರಣ. ನಾಯಿ ಕಚ್ಚಿದ ಜಾಗದಲ್ಲಿ ಸುಣ್ಣ ಹಚ್ಚಿದರೆ ಸರಿ ಹೋಗಲಿದೆ ಎಂಬ ಮೂಢನಂಬಿಕೆ ಜನರಲ್ಲಿದೆ. ಇನ್ನು ಕೆಲವರು ನಾಯಿ ಕಚ್ಚಿದ ಎರಡು ದಿನಗಳ ಬಳಿಕ ಲಸಿಕೆ ಹಾಕಿಕೊಳ್ಳಲು ಹೋಗುತ್ತಾರೆ. ಇದರಿಂದ ಅಪಾಯ ಎದುರಾಗಲಿದೆ. ಸಾಮಾನ್ಯವಾಗಿ ನಾಯಿ ಕಚ್ಚಿದ ದಿನವೇ ಚುಚ್ಚುಮದ್ದು ತೆಗೆದುಕೊಳ್ಳಬೇಕು. ನಂತರ ಮೂರನೇ ದಿನ, ಏಳನೇ ದಿನ, 14ನೇ ದಿನ ಹಾಗೂ 28 ನೇ ದಿನ ಚುಚ್ಚುಮದ್ದು ತೆಗೆದುಕೊಳ್ಳಬೇಕು. ಸಾಮಾನ್ಯ ನಾಯಿ ಕಚ್ಚಿದರೆ ಯಾವುದೇ ಸಾವು ಸಂಭವಿಸುವುದಿಲ್ಲ. ರೇಬಿಸ್‌ ಕಾಯಿಲೆಯಿರುವ ನಾಯಿ ಕಚ್ಚಿದರೆ ಮಾತ್ರ ಮಾರಣಾಂತಿಕವಾಗಿ ಇರಲಿದೆ ಎಂದು ವಿವರಿಸಿದರು.

ಮನುಷ್ಯನಿಗೆ ಕಚ್ಚಿದ ನಾಯಿ 10 ದಿನದಲ್ಲಿ ಸತ್ತರೆ ಅಥವಾ ಜೊಲ್ಲು ಸುರಿಸುತ್ತಿದ್ದರೆ, ದಾಳಿ ಮನೋಭಾವ ಹೊಂದಿದ್ದರೆ ಅದಕ್ಕೆ ರೇಬಿಸ್‌ ತಗುಲಿದೆ ಎಂದೇ ಅರ್ಥ. ಪ್ರತಿಯೊಂದು ನಾಯಿಗೂ ಲಸಿಕೆ ಹಾಕಿದಾಗ ರೇಬಿಸ್‌ ಹರಡುವ ಸಾಧ್ಯತೆ ಇರುವುದಿಲ್ಲ, ಸುಪ್ರೀಂಕೋರ್ಟ್‌ ಆದೇಶದಂತೆ ಎಲ್ಲ ನಾಯಿಗಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.

ಮನುಷ್ಯರ ಮೇಲೆ ಪ್ರಯೋಗ ಹೇಗೆ?

ರೇಬಿಸ್ ಲಸಿಕೆಯನ್ನು ಮನುಷ್ಯರಿಗೆ ನೀಡುವುದಕ್ಕೂ ಮುನ್ನ ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರಯೋಗಾಲಯದ ಪರೀಕ್ಷೆ ಬಳಿಕ ಲಸಿಕೆಯನ್ನು ಇಲಿ, ಹಂದಿಗಳ ಮೇಲೆ ಪ್ರಯೋಗಿಸಬೇಕು. ಅವುಗಳ ಮೇಲೆ ಲಸಿಕೆ ಬೀರುವ ಪರಿಣಾಮಗಳನ್ನು ವಿಶ್ಲೇಷಿಸಿದ ಬಳಿಕ ಮೂರನೇ ಹಂತದ ಪ್ರಯೋಗವಾಗಿ ಮನುಷ್ಯರ ಮೇಲೆ ಲಸಿಕೆ ಪ್ರಯೋಗ ಆರಂಭಿಸಬೇಕು. ಇದಕ್ಕಾಗಿ ವಿವಿಧ ವಯೋಮಾನದ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಐಸಿಎಂಆರ್‌ ನಿಯಮಗಳಿಗೆ ಅನುಗುಣವಾಗಿ ಒಪ್ಪಿಕೊಂಡು ಸಹಿ ಹಾಕಬೇಕು. ಮನುಷ್ಯರ ಆರೋಗ್ಯದ ಮೇಲೆ ಯಾವುದೇ ಪರಿಣಾಮಗಳು ಆಗದಂತೆ ನೋಡಿಕೊಳ್ಳಬೇಕು. ಆಗೊಮ್ಮೆ ಸಮಸ್ಯೆಯಾದರೆ ಪರಿಹಾರ ಒದಗಿಸುವ ಬಗ್ಗೆಯೂ ಮೊದಲೇ ಒಪ್ಪಂದ ಮಾಡಿಕೊಳ್ಳಬೇಕು. ನಾಯಿ ಕಡಿತದ ಮೊದಲ ದಿನದಿಂದ ಹಂತ ಹಂತವಾಗಿ ಒಂದು ವರ್ಷದವರೆಗೂ ರಕ್ತ ಪರೀಕ್ಷೆ ನಡೆಸಬೇಕು. ಪ್ರತಿಕಾಯಗಳ ಅಭಿವೃದ್ಧಿಯನ್ನು ವಿಶ್ಲೇಷಿಸಬೇಕು, ಆನಂತರವ ಎಂದು ಹೇಳುತ್ತಾರೆ ಪಶುವೈದ್ಯರು.

Read More
Next Story