
ಧಾರವಾಡದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು. (ಸಂಗ್ರಹ ಚಿತ್ರ)
ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹ: ಖಾಸಗಿ ವಲಯದಲ್ಲೂ ಶೇ.100 ಮೀಸಲಾತಿಗೆ ಒತ್ತಾಯ
ಧಾರವಾಡದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಬೃಹತ್ ಹೋರಾಟದ ನಂತರ ರಾಜ್ಯದ ಖಾಸಗಿ ಉದ್ಯಮದಲ್ಲೂ ಮೀಸಲು ನೀಡಬೇಕು ಎಂಬ ಚರ್ಚೆ ಹೆಚ್ಚಾಗಿದೆ. ಈ ಕುರಿತು ಕನ್ನಡಪರ ಹೋರಾಟಗಾರರು ಹಾಗೂ ವಿದ್ಯಾರ್ಥಿಗಳ ಸಮೂಹದ ಅಭಿಪ್ರಾಯ ಇಲ್ಲಿದೆ.
ಧಾರವಾಡದಲ್ಲಿ ಇತ್ತೀಚೆಗೆ ನಡೆದ ಸಾವಿರಾರು ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯು ರಾಜ್ಯದ ಗಮನ ಸೆಳೆದಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಸುಮಾರು 2.80 ಲಕ್ಷ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕೆಂದು ಆಗ್ರಹಿಸಿ ಯುವಜನತೆ ಬೀದಿಗಿಳಿದಿದ್ದರು. ಖಾಸಗಿ ವಲಯದಲ್ಲಿ ಉದ್ಯೋಗದ ವಿಪುಲ ಅವಕಾಶಗಳಿದ್ದರೂ, ಇಂದಿನ ಯುವಜನತೆ ಕೇವಲ ಸರ್ಕಾರಿ ಉದ್ಯೋಗಕ್ಕಾಗಿ ಏಕೆ ಇಷ್ಟೊಂದು ಪಟ್ಟು ಹಿಡಿದಿದ್ದಾರೆ ಎಂಬ ಗಂಭೀರ ಚರ್ಚೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ಐಟಿ-ಬಿಟಿ, ಬೃಹತ್ ಕೈಗಾರಿಕೆಗಳು ಹಾಗೂ ಹೋಟೆಲ್ ಉದ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿ ಪ್ರತಿವರ್ಷ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಇಷ್ಟೊಂದು ಅವಕಾಶಗಳಿದ್ದರೂ ವಿದ್ಯಾರ್ಥಿಗಳು ಕೇವಲ ಸರ್ಕಾರಿ ಹುದ್ದೆಗಳಿಗಾಗಿಯೇ ನಿರಂತರ ಹೋರಾಟ ನಡೆಸುತ್ತಿರುವುದು ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬೆಳವಣಿಗೆಯ ಜೊತೆಯಲ್ಲೇ, ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಕಡ್ಡಾಯ ಮೀಸಲಾತಿ ಕಲ್ಪಿಸಬೇಕು ಎಂಬ ದಶಕಗಳ ಹಳೆಯ ಬೇಡಿಕೆಯು ಮತ್ತೊಮ್ಮೆ ಮುನ್ನೆಲೆಗೆ ಬಂದು ಹೊಸ ಸಂಚಲನ ಸೃಷ್ಟಿಸಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೆಲವು ತಿಂಗಳುಗಳ ಹಿಂದೆ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಹತ್ವದ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದ್ದರು. ಆದರೆ, ಐಟಿ ದಿಗ್ಗಜರು ಮತ್ತು ಕೈಗಾರಿಕೋದ್ಯಮಿಗಳಿಂದ ವ್ಯಕ್ತವಾದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಇದೀಗ ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆಯ ಬಿಸಿಗೆ ಸಿಲುಕಿರುವ ಸರ್ಕಾರಕ್ಕೆ, ಮೂಲೆಗುಂಪಾಗಿದ್ದ ಈ ಕನ್ನಡಿಗರ ಮೀಸಲಾತಿ ಮಸೂದೆಯನ್ನು ಮತ್ತೆ ಪರಿಶೀಲಿಸುವ ಅನಿವಾರ್ಯತೆ ಎದುರಾಗಿದೆ.
ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ್ ಅವರು ಈ ಬೆಳವಣಿಗೆಯ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರವು ಕೇವಲ ತನ್ನ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಷ್ಟೇ ಸೀಮಿತವಾಗಬಾರದು, ಬದಲಿಗೆ ಯುವಕರಿಗೆ ಉದ್ಯೋಗ ನೀಡುವ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ ತಕ್ಷಣವೇ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದಿಟ್ಟ ಹೆಜ್ಜೆಯಿಂದ ಮಾತ್ರ ರಾಜ್ಯದ ಲಕ್ಷಾಂತರ ಯುವಕರಿಗೆ ನೈಜ ನ್ಯಾಯ ಒದಗಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಖಾಸಗಿ ವಲಯದಲ್ಲಿ ಮೀಸಲು ಸಿಗಲಿ
ಕೈಗಾರಿಕಾ ಅಭಿವೃದ್ಧಿಯು ಕೇವಲ ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಮೈಸೂರು, ಹುಬ್ಬಳ್ಳಿ-ಧಾರವಾಡ, ವಿಜಯಪುರ ಹಾಗೂ ಕಲಬುರಗಿಯಂತಹ ಉತ್ತರ ಕರ್ನಾಟಕದ ಪ್ರಮುಖ ನಗರಗಳಿಗೂ ವಿಸ್ತರಣೆಯಾಗಬೇಕು ಎಂಬುದು ಹೋರಾಟಗಾರರ ಪ್ರಮುಖ ಹಕ್ಕೊತ್ತಾಯವಾಗಿದೆ. ಫಾರ್‌ಸೈಟ್ ಕೋಚಿಂಗ್ ಸಂಸ್ಥೆಯ ಸಂಸ್ಥಾಪಕ ತೌಸೀಫ್ ಪಾಷಾ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ ಪ್ರಕಾರ, ರಾಜ್ಯದ ಉದ್ದಿಮೆಗಳಲ್ಲಿ ಹೊರರಾಜ್ಯದವರ ಪಾರುಪತ್ಯವೇ ಹೆಚ್ಚಾಗಿದೆ. ಬಿ, ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ಮೀಸಲಾತಿ ಕಲ್ಪಿಸಿದರೆ, ಸಹಜವಾಗಿಯೇ ಸರ್ಕಾರಿ ಉದ್ಯೋಗದ ಮೇಲಿನ ಯುವಜನತೆಯ ಅವಲಂಬನೆ ತಗ್ಗಿ, ಇಂತಹ ಬೃಹತ್ ಹೋರಾಟಗಳು ಕಡಿಮೆಯಾಗುತ್ತವೆ ಎಂದು ಅವರು ವಿಶ್ಲೇಷಿಸಿದ್ದಾರೆ.
ರಾಜ್ಯದ ನೆಲ, ಜಲ ಹಾಗೂ ವಿದ್ಯುತ್ ಅನ್ನು ಧಾರಾಳವಾಗಿ ಬಳಸಿಕೊಳ್ಳುವ ಉದ್ಯಮಿಗಳು, ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಮಾತ್ರ ತೀವ್ರ ತಾತ್ಸಾರ ತೋರುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಬಂಡವಾಳಶಾಹಿಗಳ ಕೈಗೊಂಬೆಯಂತಾಗಿ ವರ್ತಿಸುತ್ತಿದ್ದು, ನಿರುದ್ಯೋಗಿ ಯುವಕರ ಆರ್ತನಾದಕ್ಕಿಂತ ಉದ್ಯಮಿಗಳ ಸಾಮಾಜಿಕ ಜಾಲತಾಣದ ಟ್ವೀಟ್‌ಗಳಿಗೆ ಹೆಚ್ಚು ಮಣೆ ಹಾಕುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಡಾ. ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ವಯ ಎಲ್ಲಾ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಸೂಕ್ತ ಮೀಸಲಾತಿ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ಸರ್ಕಾರಗಳು ಉರುಳುವ ಕಾಲ ದೂರವಿಲ್ಲ ಎಂದು ಅವರು ಎಚ್ಚರಿಕೆ ರವಾನಿಸಿದ್ದಾರೆ.
ಉದ್ಯೋಗ ಭದ್ರತೆಯ ಕೊರತೆ
ಖಾಸಗಿ ವಲಯದಲ್ಲಿ ಕಾಡುವ ಉದ್ಯೋಗ ಭದ್ರತೆಯ ತೀವ್ರ ಕೊರತೆಯೇ ಅಭ್ಯರ್ಥಿಗಳ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಕೆಎಎಸ್ ಉದ್ಯೋಗಾಕಾಂಕ್ಷಿ ದರ್ಶನ್ ಇ.ಜೆ. ಅವರು ವಿವರಿಸುವಂತೆ, ಗ್ರಾಮೀಣ ಹಿನ್ನೆಲೆಯಿಂದ ಬಂದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಕೆಲಸ ಗಿಟ್ಟಿಸುವುದು ಸುಲಭವಲ್ಲ. ಒಂದು ವೇಳೆ ಕೆಲಸ ಸಿಕ್ಕರೂ, ಅಲ್ಲಿ ಶಾಶ್ವತ ಭದ್ರತೆಯ ಖಾತರಿ ಇರುವುದಿಲ್ಲ. ಯಾವಾಗ ಬೇಕಾದರೂ ಕೆಲಸದಿಂದ ವಜಾಗೊಳಿಸಬಹುದು ಎಂಬ ಅಭದ್ರತೆಯ ಕಾರ್ಮೋಡ ಸದಾ ಆವರಿಸಿರುತ್ತದೆ. ಇದೇ ಕಾರಣಕ್ಕಾಗಿ ಯುವಜನತೆ ಸ್ಥಿರತೆ, ಭದ್ರತೆ ಮತ್ತು ನಿಶ್ಚಿತ ಪಿಂಚಣಿ ಸೌಲಭ್ಯವಿರುವ ಸರ್ಕಾರಿ ಉದ್ಯೋಗಕ್ಕೆ ಅತಿ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸತತವಾಗಿ ಅಭ್ಯಾಸ ಮಾಡುತ್ತಿದ್ದರೂ, ಸರ್ಕಾರವು ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲು ಮೀನಾಮೇಷ ಎಣಿಸುತ್ತಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಹತಾಶೆ ಮೂಡಿಸಿದೆ ಎಂದು ವಿಜಯಪುರದ ಉದ್ಯೋಗಾಕಾಂಕ್ಷಿ ಕವಿತಾ ಪಾಟೀಲ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಧಿಸೂಚನೆ ವಿಳಂಬವಾಗುತ್ತಿರುವುದರಿಂದ ವಯೋಮಿತಿ ಮೀರುತ್ತಿರುವ ಭಯ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಮತ್ತೊಂದೆಡೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಅನ್ಯಭಾಷಿಕರ ದರ್ಬಾರ್ ಮಿತಿಮೀರಿದ್ದು, ಇದರಿಂದಾಗಿ ಸ್ಥಳೀಯ ಪ್ರತಿಭೆಗಳಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂಬುದು ಅವರ ಕಳವಳವಾಗಿದೆ.
ಉದ್ಯಮಿಗಳ ವಿರೋಧ
ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಈ ವಿವಾದಿತ ಮಸೂದೆಗೆ ಸಚಿವ ಸಂಪುಟ ಒಮ್ಮೆ ಅನುಮೋದನೆ ನೀಡಿತ್ತಾದರೂ, ಹೂಡಿಕೆದಾರರ ತೀವ್ರ ವಿರೋಧದ ಬಳಿಕ ಅದನ್ನು ಮರುಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿದೆ. ಈ ಮಸೂದೆಯು 'ಸಿ' ಮತ್ತು 'ಡಿ' ದರ್ಜೆಯ ಹುದ್ದೆಗಳಲ್ಲಿ ಶೇಕಡಾ ನೂರರಷ್ಟು, ಕೌಶಲಾಧಾರಿತ ಹುದ್ದೆಗಳಲ್ಲಿ ಶೇಕಡಾ ೭೫ರಷ್ಟು ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇಕಡಾ ೫೦ರಷ್ಟು ಮೀಸಲಾತಿಯನ್ನು ಸ್ಥಳೀಯರಿಗೆ ನೀಡುವ ಸ್ಪಷ್ಟ ಪ್ರಸ್ತಾಪವನ್ನು ಒಳಗೊಂಡಿದೆ. ಮಸೂದೆಯ ಪ್ರಕಾರ, ಕರ್ನಾಟಕದಲ್ಲಿ ಕನಿಷ್ಠ ೧೫ ವರ್ಷ ವಾಸವಿದ್ದು, ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಬಲ್ಲವರನ್ನು 'ಸ್ಥಳೀಯರು' ಎಂದು ವ್ಯಾಖ್ಯಾನಿಸಲಾಗಿದೆ. ಜೊತೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು ಅಥವಾ ನಿಗದಿತ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವ ಕಂಪನಿಗಳಿಗೆ ಭಾರಿ ದಂಡ ವಿಧಿಸುವ ಮತ್ತು ಪರವಾನಗಿ ರದ್ದುಗೊಳಿಸುವ ಕಠಿಣ ಅಂಶಗಳೂ ಇದರಲ್ಲಿವೆ. ಪ್ರಸ್ತುತ ಸರ್ಕಾರವು ಉದ್ಯಮಿಗಳ ಹೂಡಿಕೆಯ ಹಿತಾಸಕ್ತಿ ಮತ್ತು ಸ್ಥಳೀಯ ಯುವಕರ ಉದ್ಯೋಗದ ಹಕ್ಕಿನ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಇತ್ತ ಉದ್ಯೋಗಾಕಾಂಕ್ಷಿಗಳ ತಾಳ್ಮೆಯ ಕಟ್ಟೆ ಮಾತ್ರ ಒಡೆಯುವ ಹಂತ ತಲುಪಿದೆ.

