
ಒಬಿಸಿ ಕೆನೆಪದರ ಮಿತಿ ಹೆಚ್ಚಳ ಪ್ರಸ್ತಾವ; ಕಾಂಗ್ರೆಸ್ ʼಅಹಿಂದʼ ಮತಬ್ಯಾಂಕ್‌ಗೆ ಅಡಿಪಾಯ?
ರಾಜ್ಯದ ಕೆನೆಪದರದ ವಾರ್ಷಿಕ ಆದಾಯದ ಮಿತಿ 8 ಲಕ್ಷ ರೂ. ಗಳಿಷ್ಟಿದೆ. ಇದನ್ನು 15 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ.
ಹಿಂದುಳಿದ ವರ್ಗಗಳಿಗೆ ಕೆನೆಪದರ ನೀತಿಯಡಿ ನಿಗದಿಯಾಗಿರುವ ವಾರ್ಷಿಕ ಆದಾಯ ಮಿತಿ ಪರಿಷ್ಕರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಆ ಮೂಲಕ ʼಅಹಿಂದ ನಾಯಕʼನ ಪಟ್ಟವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಪ್ರಸ್ತುತ, ರಾಜ್ಯ ಕೆನೆಪದರದ ವಾರ್ಷಿಕ ಆದಾಯದ ಮಿತಿ 8 ಲಕ್ಷ ರೂ. ಗಳಿದೆ. ಈ ಮಿತಿಯನ್ನು 15 ಲಕ್ಷ ರೂ.ಗಳಿಗೆ ಹೆಚ್ಚಿಸುವ ಸರ್ಕಾರ ಯೋಜಿಸಿದೆ. ಹಿಂದುಳಿದ ವರ್ಗಗಳ ಸಂಘಟನೆಗಳಿಂದ ಬಂದಿರುವ ಮನವಿಯಲ್ಲಿ ಪರಿಶೀಲಿಸಲು ನಿರ್ಧರಿಸಿರುವ ಸರ್ಕಾರ, ಈ ಸಂಬಂಧ ಸಾಮಾಜಿಕ ನ್ಯಾಯದ ತತ್ವ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳ ಕುರಿತು ತಜ್ಞರ ಸಲಹೆ ಪಡೆಯಲು ತೀರ್ಮಾನಿಸಿದೆ.
ಕೆನೆಪದರ ನೀತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ, ತೀರ್ಪುಗಳನ್ನು ಅಧ್ಯಯನ ನಡೆಸಲಾಗುತ್ತಿದೆ. ಜತೆಗೆ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲು ಸರ್ಕಾರ ಒಲವು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಮೀಸಲಾತಿ ವ್ಯವಸ್ಥೆಯಲ್ಲಿ ಕೆನೆಪದರ (Creamy Layer) ಎಂಬುದು ಅತ್ಯಂತ ಚರ್ಚಿತ ವಿಷಯ. ಹಿಂದುಳಿದ ವರ್ಗಗಳಲ್ಲಿನ (ಒಬಿಸಿ) ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದವರನ್ನು ಮೀಸಲಾತಿ ಸೌಲಭ್ಯದಿಂದ ಹೊರಗಿಟ್ಟು, ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸುವುದು ಇದರ ಮೂಲ ಉದ್ದೇಶ. ಸದ್ಯಕ್ಕೆ ವಾರ್ಷಿಕ ಆದಾಯದ ಮಿತಿ 8 ಲಕ್ಷ ರೂ.ಗಿಂತ ಮೇಲಿರುವವರು ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಲ್ಲ. ಈಗ ಆದಾಯ ಮಿತಿಯನ್ನು ಹೆಚ್ಚಿಸುವುದರಿಂದ ಇನ್ನಷ್ಟು ಹಿಂದುಳಿದ ವರ್ಗಗಳವರು ಮೀಸಲಾತಿ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂಬುದು ಈ ಯೋಜನೆಯ ಹಿಂದಿನ ರಹಸ್ಯ ಎಂದು ಹೇಳಲಾಗಿದೆ.
ಸರ್ಕಾರದ ಗಮನದಲ್ಲಿದೆ
ʼದ ಫೆಡರಲ್ ಕರ್ನಾಟಕʼದ ಜತೆ ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಮಾತನಾಡಿ, "2018ರಿಂದ ಈವರೆಗೆ ಹಿಂದುಳಿದ ವರ್ಗಗಳ ಕೆನೆಪದರ ಮಿತಿ ಹೆಚ್ಚಳವಾಗದಿರುವುದು ರಾಜ್ಯ ಸರ್ಕಾರದ ಗಮನದಲ್ಲಿದೆ. ವಾರ್ಷಿಕ ಆದಾಯ 8 ಲಕ್ಷ ರೂ.ನಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಕೋರಿ ಹಲವು ಮನವಿಗಳಿವೆ. ಪ್ರಸ್ತಾವನೆಗಳು ಸರ್ಕಾರದ ಮುಂದೆ ಇವೆ. ಈ ಕುರಿತು ಸುಪ್ರೀಂಕೋರ್ಟ್ ಆದೇಶವನ್ನು ಪರಿಶೀಲನೆ ನಡೆಸಬೇಕು," ಎಂದು ವಿವರಿಸಿದ್ದಾರೆ.
ರಾಜ್ಯದಲ್ಲಿ ಜಾರಿಯಲ್ಲಿರುವ ಮೀಸಲಾತಿ ಅನುಪಾತದ ಪ್ರಕಾರ ಶೇ.32 ರಷ್ಟು ಮೀಸಲಾತಿ ಒಬಿಸಿ ವರ್ಗಗಳಿಗೆ ಮೀಸಲಾಗಿದೆ. ವಾರ್ಷಿಕ 8ಲಕ್ಷ ರೂ. ಆದಾಯ ಮಿತಿ ಹೊಂದಿರುವ ಹಿಂದುಳಿದ ವರ್ಗಗಳು ಮಾತ್ರ ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂತರಾಜ್ ಆಯೋಗದ ವರದಿ ಪ್ರಕಾರ 4.16ಕೋಟಿ ಹಿಂದುಳಿದ ವರ್ಗಗಳ ಜನಸಂಖ್ಯೆ ಇದೆ. ರಾಜ್ಯದಲ್ಲಿ ಕೆನೆಪದರ ನೀತಿಯಡಿ ಮೀಸಲಾತಿಯ ಲಾಭ ಪಡೆಯುತ್ತಿರುವವರ ಸಂಖ್ಯೆ ಅಂದಾಜು 20-22 ಲಕ್ಷ ಕುಟುಂಬಗಳಿವೆ. ಸರ್ಕಾರ ಕೆನೆಪದರದಡಿ ವಾರ್ಷಿಕ ಆದಾಯ ಮಿತಿಯನ್ನು 15 ಲಕ್ಷ ರೂ.ಗಳಿಗೆ ಏರಿಸಿದರೆ ಸುಮಾರು 28-30 ಲಕ್ಷ ಕುಟುಂಬಗಳು ಮೀಸಲಾತಿ ಲಾಭ ಪಡೆಯಲಿವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮೂಲಗಳು ತಿಳಿಸಿವೆ.
ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು!
ಸರ್ಕಾರವು ಕೇವಲ ಹಣದುಬ್ಬರ ನೆಪವಾಗಿಟ್ಟುಕೊಂಡು ಆದಾಯ ಮಿತಿಯನ್ನು 15 ಲಕ್ಷ ರೂ.ಗೆ ಹೆಚ್ಚಿಸಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. 15 ಲಕ್ಷ ರೂ. ಆದಾಯ ಇರುವ ವ್ಯಕ್ತಿಯು ಸಮಾಜದಲ್ಲಿ ಗೌರವಯುತ ಸ್ಥಾನಮಾನ ಹೊಂದಿರುತ್ತಾರೆ. ಆತನಿಗೆ ಮೀಸಲಾತಿಯ ಅಗತ್ಯವಿಲ್ಲ ಎಂಬುದನ್ನು ಸಾಬೀತುಪಡಿಸಲು ಸರ್ಕಾರ ವೈಜ್ಞಾನಿಕ ದತ್ತಾಂಶ ಒದಗಿಸಬೇಕಾಗಿದೆ. ಕುಟುಂಬದ ಉದ್ಯೋಗದ ಸ್ವರೂಪ, ಅವರ ಶೈಕ್ಷಣಿಕ ಮಟ್ಟ, ಸಮಾಜದಲ್ಲಿ ಅವರಿಗೆ ಸಿಗುತ್ತಿರುವ ಪ್ರಾತಿನಿಧ್ಯ ಮೊದಲಾದ ಅಂಶಗಳನ್ನು ಗಮನಿಸಿದರೆ, ಕೇವಲ 15 ಲಕ್ಷ ಆದಾಯ ಮಿತಿ ನಿಗದಿಪಡಿಸಿದರೆ ಮೀಸಲಾತಿ ಸೌಲಭ್ಯ ಪಡೆಯಲು ಸಹಾಯವಾಗುವುದಿಲ್ಲ. ಹಾಗಾಗಿ ಆ ಬಗ್ಗೆ ಇನ್ನಷ್ಟ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಇಂದ್ರ ಸಾಹ್ನಿ ಪ್ರಕರಣ
1992ರ ಐತಿಹಾಸಿಕ ಇಂದ್ರ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಹಿಂದುಳಿದ ವರ್ಗಗಳಲ್ಲಿರುವ ಶ್ರೀಮಂತ ಮತ್ತು ಪ್ರಭಾವಶಾಲಿ ವ್ಯಕ್ತಿಗಳನ್ನು ಮೀಸಲಾತಿಯಿಂದ ಹೊರಗಿಡಬೇಕು ಎಂದು ಆದೇಶಿಸಿತ್ತು. 1993ರಲ್ಲಿ ಮೊದಲ ಬಾರಿಗೆ ಕೆನೆಪದರ ಮಿತಿಯನ್ನು 1 ಲಕ್ಷ ರೂ. ಎಂದು ನಿಗದಿಪಡಿಸಿತ್ತು. ನಂತರ ಕಾಲಕಾಲಕ್ಕೆ ಇದನ್ನು 2.5 ಲಕ್ಷ (2004), 4.5 ಲಕ್ಷ (2008), 6 ಲಕ್ಷ (2013) ಮತ್ತು ಕೊನೆಯದಾಗಿ 2017ರಲ್ಲಿ 8 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಕಳೆದ ಏಳು ವರ್ಷಗಳಿಂದ ಕೆನೆಪದರದ ವಾರ್ಷಿಕ ಆದಾಯ ಮಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಾಗಾಗಿ, ಮಿತಿ ಹೆಚ್ಚಳದ ಬೇಡಿಕೆ ಮುಂದಿಡಲಾಗಿದೆ.
ಹಣದುಬ್ಬರಕ್ಕೆ ಪರಿಹಾರ!
ಸರ್ಕಾರವು ಕೆನೆಪದರದ ಆದಾಯ ಮಿತಿಯನ್ನು ಹೆಚ್ಚಿಸಲು ಪ್ರಮುಖವಾಗಿ ಮೂರು ಕಾರಣಗಳನ್ನು ನೀಡಲು ಉದ್ದೇಶಿಸಿದೆ. ಕಳೆದ ಏಳು ವರ್ಷಗಳಲ್ಲಿ ಹಣದುಬ್ಬರ ಗಣನೀಯವಾಗಿ ಏರಿಕೆಯಾಗಿದೆ. 2017ರಲ್ಲಿ 8 ಲಕ್ಷ ರೂಪಾಯಿಯ ಮೌಲ್ಯ ಇಂದಿನ ಮಾರುಕಟ್ಟೆಯಲ್ಲಿ ಕಡಿಮೆಯಾಗಿದೆ. ಮಧ್ಯಮ ವರ್ಗದ ಕುಟುಂಬಗಳು ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಮಾಡುವ ವೆಚ್ಚ ಹೆಚ್ಚಾಗಿರುವುದರಿಂದ 8 ಲಕ್ಷದ ಮಿತಿ ಅಪ್ರಸ್ತುತ ಎನಿಸುತ್ತಿದೆ. ಸರ್ಕಾರಿ ನೌಕರರ ವೇತನವು 7ನೇ ವೇತನ ಆಯೋಗದ ಜಾರಿಯ ನಂತರ ಹೆಚ್ಚಾಗಿದೆ. ಇದರಿಂದಾಗಿ ಅನೇಕ 'ಸಿ' ಮತ್ತು 'ಡಿ' ದರ್ಜೆಯ ನೌಕರರ ಮಕ್ಕಳೂ ಸಹ ಕೆನೆಪದರದ ಮಿತಿ ಮೀರುತ್ತಿದ್ದಾರೆ. ಇದರಿಂದ ಆ ಕುಟುಂಬಗಳು ಮೀಸಲಾತಿಯಿಂದ ವಂಚಿತವಾಗುತ್ತಿವೆ ಎಂಬುದು ಸರ್ಕಾರದ ವಾದವಾಗಿದೆ.
15 ಲಕ್ಷಕ್ಕೆ ಮಿತಿಯನ್ನು ಹೆಚ್ಚಿಸುವುದರಿಂದ ಹೆಚ್ಚಿನ ಸಂಖ್ಯೆಯ ಹಿಂದುಳಿದ ವರ್ಗದ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪಡೆಯಲು ಅರ್ಹರಾಗುತ್ತಾರೆ. ಸರ್ಕಾರವು ಕೇವಲ ಆದಾಯದ ಆಧಾರದ ಮೇಲೆ ಮಿತಿ ಹೆಚ್ಚಿಸಲು ಮುಂದಾದರೆ ಅದು ನ್ಯಾಯಾಂಗದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯೂ ಇದೆ.
ಸುಪ್ರೀಂಕೋರ್ಟ್ ಹಲವು ಬಾರಿ ಸ್ಪಷ್ಟಪಡಿಸಿರುವಂತೆ, ಕೆನೆಪದರವನ್ನು ಕೇವಲ ಆರ್ಥಿಕ ಸ್ಥಿತಿಯ ಮೇಲೆ ನಿರ್ಧರಿಸಬಾರದು. ಮೀಸಲಾತಿಯ ಮೂಲ ಉದ್ದೇಶವು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸುವುದೇ ಹೊರತು ಬಡತನ ನಿರ್ಮೂಲನೆಯಲ್ಲ. ಕೆನೆಪದರ ನೀತಿ ನಿರ್ಧರಿಸುವಾಗ ಆ ಕುಟುಂಬದ ಸಾಮಾಜಿಕ ಸ್ಥಾನಮಾನ, ಅಧಿಕಾರ ಮತ್ತು ಸಮಾಜದಲ್ಲಿ ಅವರ ಪ್ರಭಾವ ಪರಿಗಣಿಸಬೇಕು. ಮಿತಿಯನ್ನು ಅತಿಯಾಗಿ ಹೆಚ್ಚಿಸಿದರೆ ಹಿಂದುಳಿದ ವರ್ಗಗಳಲ್ಲಿರುವ ಅತ್ಯಂತ ಬಡವರು ಮತ್ತು ಶೋಷಿತ ಸಮುದಾಯಗಳಿಗೆ ಸಿಗಬೇಕಾದ ಅವಕಾಶಗಳನ್ನು ಅದೇ ವರ್ಗದ ಶ್ರೀಮಂತರು ಕಿತ್ತುಕೊಳ್ಳಬಹುದು ಎಂಬ ಆತಂಕವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.
ಈ ಕುರಿತು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಶಿವರುದ್ರಪ್ಪ.ಎನ್.ಬಿ., "ಕೆನೆಪದರ ಹೆಚ್ಚಳ ಮಾಡುವುದು ಸೂಕ್ತ ಕ್ರಮ. ಹಿಂದುಳಿದ ವರ್ಗಗಳಲ್ಲಿ ಸಾಕಷ್ಟು ಸಮುದಾಯಗಳು ಸಂವಿಧಾನದ ಸೌಲಭ್ಯಗಳನ್ನು ಪಡೆಯುತ್ತಿಲ್ಲ. ಒಂದು ಹಂತಕ್ಕೆ ಹೋದ ಬಳಿಕ ಅವರೇ ಅರಿತುಕೊಂಡು ಮೀಸಲಾತಿಯಿಂದ ಹೊರಗುಳಿಯಬೇಕು," ಎಂದು ಹೇಳಿದರು.
" ಬಹಳಷ್ಟು ಮಂದಿಗೆ ಇಂದಿಗೂ ಮೀಸಲಾತಿ ಅಗತ್ಯವಿದೆ ಎಂಬ ನ್ಯಾಯಾಲಯದ ಅಭಿಪ್ರಾಯವು ಒಪ್ಪುವಂತಹದ್ದಾಗಿದೆ. ಆದಾಯ ಮಿತಿಯೊಂದನ್ನೇ ಪರಿಗಣಿಸಲು ಸಾಧ್ಯವಿಲ್ಲ. ಅವರ ಸಾಮಾಜಿಕ ಸ್ಥಾನಮಾನವನ್ನು ಸಹ ಗಮನಿಸಬೇಕಾಗಿದೆ. ಸರ್ಕಾರವು ಕೆನೆ ಪದರ ಜಾರಿಗೊಳಿಸುವಲ್ಲಿ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಬೇಕು," ಎಂದು ಹೇಳಿದರು.
ಹೊಸ ಮಾರ್ಗಸೂಚಿಗಳ ಅಗತ್ಯತೆ
ಸರ್ಕಾರ ಕೇವಲ ಆದಾಯದ ಪ್ರಮಾಣಪತ್ರ ನೋಡದೆ ಹೊಸ ಮಾನದಂಡಗಳನ್ನು ರೂಪಿಸಬೇಕಿದೆ. ಪೋಷಕರು ಸಾಂವಿಧಾನಿಕ ಹುದ್ದೆಗಳಲ್ಲಿ ಅಥವಾ ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಇದ್ದರೆ, ಅವರ ಆದಾಯ ಎಷ್ಟೇ ಇದ್ದರೂ ಅವರನ್ನು ಕೆನೆಪದರಕ್ಕೆ ಸೇರಿಸುವುದು ಸರಿಯಾದ ಕ್ರಮ. ಕೃಷಿ ಆದಾಯವನ್ನು ಕೆನೆಪದರ ಮಿತಿಗೆ ಲೆಕ್ಕ ಹಾಕಬೇಕೆ? ಅಥವಾ ಬೇಡವೇ? ಎಂಬುದು ದಶಕಗಳ ಕಾಲದ ವಿವಾದ. ಹೊಸ ಮಾರ್ಗಸೂಚಿಗಳು ವೇತನ, ವ್ಯವಹಾರ ಮತ್ತು ಕೃಷಿ ಆದಾಯದ ನಡುವೆ ಸ್ಪಷ್ಟ ವ್ಯತ್ಯಾಸವನ್ನು ತೋರಿಸಬೇಕಿದೆ.
ಈ ಸೂಕ್ಷ್ಮ ವಿಷಯವನ್ನು ಬಗೆಹರಿಸಲು ತಜ್ಞರ ಸಮಿತಿಯ ರಚನೆ ಅನಿವಾರ್ಯವಾಗಿದೆ. ಈ ಸಮಿತಿಯು ಈ ಕೆಳಗಿನ ಅಂಶಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. 8 ಲಕ್ಷದಿಂದ 15 ಲಕ್ಷಕ್ಕೆ ಏರಿಸಿದರೆ ಎಷ್ಟು ಜನ ಹೊಸದಾಗಿ ಸೇರ್ಪಡೆಯಾಗುತ್ತಾರೆ? ಇದರಿಂದ ಅತ್ಯಂತ ಹಿಂದುಳಿದವರಿಗೆ ತೊಂದರೆಯಾಗುತ್ತದೆಯೇ? ಎಂಬ ಪ್ರಶ್ನೆಯೂ ಉದ್ಭವಿಸಲಿದೆ.
ಕರ್ನಾಟಕದಂತಹ ರಾಜ್ಯಗಳಲ್ಲಿ ಈಗಾಗಲೇ ಪ್ರವರ್ಗ-1, 2A, 2B, 3A, 3B ಎಂಬ ಆಂತರಿಕ ವರ್ಗೀಕರಣಗಳಿವೆ. ಕೇಂದ್ರದ 8 ಲಕ್ಷ ರೂ. ಮಿತಿ ರಾಜ್ಯದ ಈ ವರ್ಗೀಕರಣದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಮುಖ್ಯ. ಕೇವಲ ಸ್ವಯಂ ಘೋಷಿತ ಆದಾಯದ ಬದಲು ಐಟಿ ರಿಟರ್ನ್ಸ್ ಮತ್ತು ಇತರೆ ಅಧಿಕೃತ ದಾಖಲೆಗಳನ್ನು ಕಡ್ಡಾಯಗೊಳಿಸುವ ಮೂಲಕ ನಕಲಿ ಆದಾಯ ಪ್ರಮಾಣಪತ್ರಗಳ ಹಾವಳಿ ತಡೆಯಬೇಕಿದೆ ಎಂಬುದು ಸಂವಿಧಾನ ತಜ್ಞರ ಅಭಿಪ್ರಾಯವಾಗಿದೆ.
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
ವಿವಿಧ ಹೈಕೋರ್ಟ್‌ಗಳು ನೀಡಿದ್ದ ತೀರ್ಪುಗಳನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, ಇತ್ತೀಚೆಗೆ ಮಾ. 11 ರಂದು ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ಕೇವಲ ಸಂಬಳದಿಂದ ಬರುವ ಆದಾಯವನ್ನು ಆಧಾರವಾಗಿಟ್ಟುಕೊಂಡು ಒಬ್ಬ ಅಭ್ಯರ್ಥಿಯನ್ನು ಕೆನೆಪದರಕ್ಕೆ ಸೇರಿಸುವುದು ತಪ್ಪು. ಕೆನೆಪದರವನ್ನು ನಿರ್ಧರಿಸಬೇಕಾದದು ಪೋಷಕರು ಹೊಂದಿರುವ ಹುದ್ದೆಯ ಸ್ಥಾನಮಾನದ ಆಧಾರದ ಮೇಲೆ. ಸರ್ಕಾರದ1993ರ ಟಿಪ್ಪಣಿಯಲ್ಲಿಯೇ ಸಂಬಳದ ಆದಾಯ ಮತ್ತು ಇತರ ಮೂಲಗಳ ಆದಾಯವನ್ನು ಪ್ರತ್ಯೇಕವಾಗಿ ನೋಡಬೇಕು ಎಂದು ಹೇಳಲಾಗಿದೆ. ಅಧಿಕಾರಿಗಳು ಇದನ್ನು ತಪ್ಪಾಗಿ ಅರ್ಥೈಸಬಾರದು ಎಂದು ನ್ಯಾಯಾಲಯ ಹೇಳಿದೆ.
ಸಾಮಾಜಿಕ ನ್ಯಾಯದ ದೃಷ್ಟಿಕೋನದಲ್ಲಿ, ಒಬ್ಬ ವ್ಯಕ್ತಿಯ ಸಾಮಾಜಿಕ ಸ್ಥಾನಮಾನವು ಕೇವಲ ಅವನ ಸಂಬಳದ ಮೇಲೆ ನಿರ್ಧರಿತವಾಗುವುದಿಲ್ಲ. ಒಬ್ಬ ವ್ಯಕ್ತಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಥವಾ ಉದ್ದಿಮೆಗಳಲ್ಲಿ ಕೆಳಹಂತದ ನೌಕರನಾಗಿದ್ದು, ದಶಕಗಳ ಸೇವೆಯ ನಂತರ ಹೆಚ್ಚಿನ ಸಂಬಳ ಪಡೆಯುತ್ತಿರಬಹುದು. ಆದರೆ, ಸಾಮಾಜಿಕವಾಗಿ ಆತ ಇನ್ನೂ ಕೆಳಸ್ತರದಲ್ಲೇ ಇರುತ್ತಾನೆ. ಮತ್ತೊಂದೆಡೆ, ಒಬ್ಬ ಗ್ರೂಪ್-ಎ ಅಧಿಕಾರಿಯ ಸಂಬಳ ಮತ್ತು ಆತನ ಅಧಿಕಾರ ನೀಡುವ ಸಾಮಾಜಿಕ ಸ್ಥಾನಮಾನ ದೊಡ್ಡದಿರುತ್ತದೆ. ಸರ್ಕಾರವು ಈ ವ್ಯತ್ಯಾಸವನ್ನು ಮರೆತು, ಕೇವಲ ಸಂಬಳದ ಅಂಕಿ-ಅಂಶಗಳನ್ನು ನೋಡಿ ಅನೇಕ ಪ್ರತಿಭಾವಂತ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಮೀಸಲಾತಿಯಿಂದ ಹೊರಗಿಟ್ಟಿತು. ವಿಶೇಷವಾಗಿ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಇದರಿಂದ ದೊಡ್ಡ ಮಟ್ಟದ ಅನ್ಯಾಯವಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ರಾಜಕೀಯ ಉಪಯೋಗ ಏನು?
ಮೀಸಲಾತಿಯ ಸೌಲಭ್ಯಗಳು ತಲೆಮಾರುಗಳಿಂದ ಒಂದೇ ಗುಂಪು ಅಥವಾ ಕೆಲವು ಪ್ರಭಾವಿ ಕುಟುಂಬಗಳಿಗೆ ಸೀಮಿತವಾಗುವುದನ್ನು ತಪ್ಪಿಸಬಹುದು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಇನ್ನೂ ಹಿಂದುಳಿದಿರುವವರಿಗೆ ಮೀಸಲಾತಿಯ ಲಾಭ ಸಿಗುವಂತೆ ಮಾಡಲು ಸರ್ಕಾರಕ್ಕೆ ಇದು ಸಹಕಾರಿ. ಕೆನೆಪದರವನ್ನು ಗುರುತಿಸುವುದರಿಂದ ಮೀಸಲಾತಿ ವ್ಯವಸ್ಥೆಯಲ್ಲಿ ಸಮಾನರಲ್ಲಿ ಸಮಾನತೆ ತರಲು ಸಾಧ್ಯವಾಗುತ್ತದೆ. ಇದು ಅತಿ ಹಿಂದುಳಿದ ವರ್ಗಗಳ ವಿಶ್ವಾಸವನ್ನು ಗೆಲ್ಲಲು ಸರ್ಕಾರಕ್ಕೆ ರಾಜಕೀಯವಾಗಿ ಸಹಾಯ ಮಾಡುತ್ತದೆ.
ಸುಪ್ರೀಂಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಗಳಿಗೆ ಎಸ್‌ಸಿ/ಎಸ್‌ಟಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಅವಕಾಶ ನೀಡಿದೆ. ಕೆನೆಪದರವನ್ನು ಪ್ರತ್ಯೇಕಿಸುವುದರಿಂದ, ಯಾವ ಉಪಜಾತಿಗಳು ಹೆಚ್ಚು ವಂಚಿತವಾಗಿವೆ ಎಂಬುದನ್ನು ಗುರುತಿಸಿ ಅವರಿಗೆ ಹೆಚ್ಚಿನ ಪಾಲು ನೀಡಲು ಸರ್ಕಾರಕ್ಕೆ ವೈಜ್ಞಾನಿಕ ಆಧಾರ ಸಿಗುತ್ತದೆ. ಮೀಸಲಾತಿ ಪಟ್ಟಿಯಲ್ಲಿದ್ದು, ಇದುವರೆಗೆ ಸೌಲಭ್ಯಗಳಿಂದ ವಂಚಿತವಾಗಿರುವ ಸಣ್ಣ ಮತ್ತು ಅತಿ ಹಿಂದುಳಿದ ಸಮುದಾಯಗಳನ್ನು ತನ್ನತ್ತ ಸೆಳೆಯಲು ಸರ್ಕಾರಕ್ಕೆ ಇದೊಂದು ದೊಡ್ಡ ರಾಜಕೀಯ ಅಸ್ತ್ರವಾಗಬಲ್ಲದು. ಪ್ರಭಾವಿ ಸಮುದಾಯಗಳ ಪ್ರಾಬಲ್ಯವನ್ನು ತಗ್ಗಿಸಿ, ತಳಮಟ್ಟದ ಸಮುದಾಯಗಳ ಬೆಂಬಲ ಗಳಿಸಲು ಇದು ಸಹಕಾರಿಯಾಗಲಿದೆ.

