
ಮೇಲ್ಮನೆಗೆ ಆಯ್ಕೆ ಕಸರತ್ತು : ಮತಬ್ಯಾಂಕ್ ಗಟ್ಟಿಗೊಳಿಸಲು ಕಾಂಗ್ರೆಸ್‌ನಿಂದ ತಂತ್ರಗಾರಿಕೆ
ಮೇಲ್ಮನೆ ಆಯ್ಕೆ ಪ್ರಕ್ರಿಯೆಯು ಖಾಲಿ ಸ್ಥಾನ ಭರ್ತಿ ಮಾಡುವುದರ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಜಾತಿಗಳ ಸಮೀಕರಣವನ್ನು ಸರಿದೂಗಿಸುವ ಲೆಕ್ಕಾಚಾರವಾಗಿದೆ.
ವಿಧಾನಸಭಾ ಉಪಚುನಾವಣೆಯ ಅಬ್ಬರ ಮುಗಿದ ಬಳಿಕ ರಾಜ್ಯವು ಮತ್ತೊಂದು ಅಧಿಕಾರ ಸಮರಕ್ಕೆ ಸಜ್ಜಾಗಲಿದೆ. ಇದೇ ಜೂನ್, ಜುಲೈ ತಿಂಗಳಲ್ಲಿ ಮೇಲ್ಮನೆಯ ಒಟ್ಟು ಒಟ್ಟು 12 ಸ್ಥಾನಗಳು ತೆರವಾಗುತ್ತಿದ್ದು, ಈ ಸ್ಥಾನ ಭರ್ತಿಗಾಗಿ ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ನಲ್ಲಿ ತೆರೆಮರೆಯಲ್ಲಿ ಕಸರತ್ತು ಪ್ರಾರಂಭಗೊಂಡಿದೆ.
ಪ್ರಸ್ತುತ ಆಯ್ಕೆ ಪ್ರಕ್ರಿಯೆಯು ಕೇವಲ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವುದಲ್ಲ, ಬದಲಿಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಜಾತಿಗಳ ಸಮೀಕರಣವನ್ನು ಸರಿದೂಗಿಸುವ ಲೆಕ್ಕಾಚಾರವಾಗಿದೆ.
ವಿಧಾನ ಪರಿಷತ್‌ನಲ್ಲಿ ಒಟ್ಟು 12 ಸ್ಥಾನಗಳು ತೆರವಾಗುತ್ತಿದ್ದು, ಎರಡು ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಿಧಾನಸಭೆಯಿಂದ 7 ಸ್ಥಾನಗಳು ಆಯ್ಕೆಯಾಗಲಿವೆ. ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಈ ಸ್ಥಾನಗಳ ಆಯ್ಕೆ ನಡೆಯಲಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 135ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವುದರಿಂದ, ಈ 7 ಸ್ಥಾನಗಳ ಪೈಕಿ ಕನಿಷ್ಠ 4 ಸ್ಥಾನಗಳು ಕಾಂಗ್ರೆಸ್‌ಗೆ ಲಭಿಸುವುದು ನಿಶ್ಚಿತ. ಉಳಿದ 3 ಸ್ಥಾನಗಳು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಹಂಚಿಕೆಯಾಗಲಿವೆ. 5 ಸ್ಥಾನಕ್ಕೆ ನಾಮನಿರ್ದೇಶನ ಮೂಲಕ ಆಯ್ಕೆಯಾಗಲಿದ್ದು, ಸರ್ಕಾರವು ಶಿಫಾರಸು ಮಾಡಲಿದ ಬಳಿಕ ರಾಜ್ಯಪಾಲರು ಅಂಗೀಕರಿಸಲಿದ್ದಾರೆ. ಈ ಐದೂ ಸ್ಥಾನಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪಾಲಾಗಲಿವೆ. ಹೀಗಾಗಿ, ಒಟ್ಟು 12 ಸ್ಥಾನಗಳಲ್ಲಿ 9 ಸ್ಥಾನಗಳ ಮೇಲೆ ಕಾಂಗ್ರೆಸ್ ನೇರ ಹಿಡಿತ ಹೊಂದಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡೇ ನಿರ್ಮಾಣವಾಗಿದೆ.
ಕಾಂಗ್ರೆಸ್‌ನಿಂದ ಸಾಮಾಜಿಕ ನ್ಯಾಯದ ಸೂತ್ರ?
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಬಾರಿ ವಿಧಾನ ಪರಿಷತ್ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯದ ಅಸ್ತ್ರವನ್ನು ಬಳಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಕಾರಣವಾದ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳ ಜತೆಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ಓಲೈಸುವ ಅನಿವಾರ್ಯತೆ ಪಕ್ಷಕ್ಕಿದೆ. ಈ ಬಾರಿ ಕೇವಲ ಪ್ರಬಲ ಜಾತಿಗಳಿಗೆ ಮಾತ್ರವಲ್ಲದೆ, ಈವರೆಗೆ ರಾಜಕೀಯ ಪ್ರಾತಿನಿಧ್ಯ ಸಿಗದ ಸಣ್ಣ ಸಮುದಾಯಗಳಿಗೆ ಅವಕಾಶ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಪಕ್ಷಕ್ಕಾಗಿ ದುಡಿದಿರುವ, ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಆರ್ಥಿಕ ಅಥವಾ ಸಾಮಾಜಿಕ ಬಲವಿಲ್ಲದ ನಿಷ್ಠಾವಂತ ಕಾರ್ಯಕರ್ತರಿಗೆ ಇಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಸ್ಲಿಂ ಸಮುದಾಯಕ್ಕೆ ಆದ್ಯತೆ ಸಾಧ್ಯತೆ
ಕಾಂಗ್ರೆಸ್ ಪಕ್ಷವು ಸಿದ್ಧಪಡಿಸುತ್ತಿದೆ ಎನ್ನಲಾದ ಸಂಭಾವ್ಯ ಪಟ್ಟಿಯಲ್ಲಿ ಎಲ್ಲಾ ಸಮುದಾಯಗಳಿಗೆ ಆದ್ಯತೆ ನೀಡುವ ಚಿಂತನೆ ನಡೆದಿದೆ. ಪರಿಶಿಷ್ಟ ಜಾತಿ (ಎಡಗೈ- ಬಲಗೈ) ದಲಿತ ಮತಬ್ಯಾಂಕ್ ಕಾಂಗ್ರೆಸ್‌ನ ಬೆನ್ನೆಲುಬು. ಹೀಗಾಗಿ ಎಸ್‌ಸಿ ಎಡಗೈ ಹಾಗೂ ಬಲಗೈ ಪಂಗಡಗಳಿಗೆ ತಲಾ ಒಂದು ಸ್ಥಾನ ನೀಡಿ ಸಮತೋಲನ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೇ, ವಾಲ್ಮೀಕಿ ಸಮುದಾಯ ಸೇರಿದಂತೆ ಎಸ್ಟಿಯ ಒಬ್ಬರಿಗೆ ಅವಕಾಶ ಕಲ್ಪಿಸುವ ಕುರಿತು ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಸಲಾಗುತ್ತಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡದಿದ್ದಕ್ಕೆ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಮಧ್ಯಪ್ರವೇಶಿಸಿ ಇದನ್ನು ತಣ್ಣಗಾಗಿಸಿದರೂ ಸಮುದಾಯದ ಮುನಿಸನ್ನು ಹೋಗಲಾಡಿಸಲು ಒಬ್ಬ ಪ್ರಭಾವಿ ಮುಸ್ಲಿಂ ನಾಯಕನಿಗೆ ವಿಧಾನ ಪರಿಷತ್ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿಗೆ.
ಇದಲ್ಲದೇ, ಲಿಂಗಾಯತ ಹಾಗೂ ಒಕ್ಕಲಿಗ ಈ ಎರಡೂ ಪ್ರಬಲ ಸಮುದಾಯಗಳನ್ನು ಕಡೆಗಣಿಸುವಂತಿಲ್ಲ. ಉತ್ತರ ಕರ್ನಾಟಕದ ಲಿಂಗಾಯತ ಮತಗಳನ್ನು ಸೆಳೆಯಲು ಒಬ್ಬರಿಗೆ ಮತ್ತು ಹಳೆ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಒಬ್ಬರಿಗೆ ಸ್ಥಾನ ನೀಡುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಂತ ಸಮುದಾಯವಾದ ಕುರುಬ ಸಮುದಾಯ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸ್ಥಾನಗಳನ್ನು ಮೀಸಲಿಡಬೇಕಿದೆ. ಇನ್ನು, ಬ್ರಾಹ್ಮಣ ಹಾಗೂ ಲಂಬಾಣಿ ಸಮುದಾಯದ ಪ್ರತಿನಿಧಿಗೆ ಅವಕಾಶ ನೀಡುವ ನಿರೀಕ್ಷೆಯೂ ಇದೆ. ಈ ಮೂಲಕ ಕಾಂಗ್ರೆಸ್ ಸರ್ವಸಮ್ಮತ ಪಕ್ಷ ಎಂಬ ಸಂದೇಶ ನೀಡಲು ಹೊರಟಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್‌ನಲ್ಲಿಯೇ ಲಾಬಿ?
ಖಾಲಿಯಾಗುವ ವಿಧಾನಪರಿಷತ್ ಸ್ಥಾನಕ್ಕೆ ಈಗಾಗಲೇ ಬೆಂಗಳೂರಿನಿಂದ ದೆಹಲಿಯವರೆಗೆ ಲಾಬಿ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಣದಲ್ಲಿ ನಿಷ್ಠಾವಂತರಿಗೆ ಹಾಗೂ ಅಹಿಂದ ನಾಯಕರಿಗೆ ಸ್ಥಾನ ಕೊಡಿಸಲು ಪ್ರಯತ್ನ ನಡೆಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಬಣದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಮತ್ತು ಒಕ್ಕಲಿಗ ಸಮುದಾಯದ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ಬೇಕು ಎಂದು ಹಠ ಹಿಡಿಯುವ ನಿರೀಕ್ಷೆ ಇದೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅವರು ಬೆಂಬಲ ನೀಡುವ ಸಾಧ್ಯತೆ ಇದೆ.
ನಿವೃತ್ತಿಯಾಗುವ ಸದಸ್ಯರು
ಕಾಂಗ್ರೆಸ್‌ನಿಂದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ನಜೀರ್ ಅಹ್ಮದ್ ಮತ್ತು ತಿಪ್ಪಣಪ್ಪ ಕಮಕನೂರ ನಿವೃತ್ತಿಯಾಗುತ್ತಿದ್ದಾರೆ. ಹರಿಪ್ರಸಾದ್ ಅವರ ಸ್ಥಾನಕ್ಕೆ ಯಾರನ್ನು ತರಲಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಮತ್ತೆ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಯಾಕಂದರೆ, ಸಚಿವ ಸಂಪುಟ ಪುನರಚನೆ ಮಾಡುವ ಉದ್ದೇಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ. ಈ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಹೀಗಾಗಿ ಮತ್ತೊಮ್ಮೆ ಅವರನ್ನು ಎಂಎಲ್‌ಸಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಿಜೆಪಿಯಿಂದ ಮಾಜಿ ಸಚಿವ ಎಂಟಿಬಿ ನಾಗರಾಜ್, ಪ್ರತಾಪ್ ಸಿಂಹ ನಾಯಕ್ ಮತ್ತು ಸುನೀಲ್ ವಲ್ಯಾಪುರ್ ನಿವೃತ್ತಿಯಾಗುತ್ತಿದ್ದಾರೆ. ನಾಮನಿರ್ದೇಶನ ಸದಸ್ಯರು ಎಚ್.ವಿ. ವಿಶ್ವನಾಥ್, ಭಾರತಿ ಶೆಟ್ಟಿ ಮುಂತಾದವರು ನಿರ್ಗಮಿಸುತ್ತಿದ್ದು, ಈ ಸ್ಥಾನಗಳನ್ನು ತುಂಬಲು ಕಾಂಗ್ರೆಸ್ ತನ್ನದೇ ಆದ ಪಟ್ಟಿ ಸಿದ್ಧಪಡಿಸುವಲ್ಲಿ ತೊಡಗಿದೆ ಎನ್ನಲಾಗಿದೆ.
ವಿಧಾನಪರಿಷತ್ ಸ್ಥಾನಗಳ ಭರ್ತಿ ಕಾಂಗ್ರೆಸ್‌ಗೆ ಎರಡು ರೀತಿಯಲ್ಲಿ ಸವಾಲಾಗಿದೆ. ಮೊದಲನೆಯದಾಗಿ, ಚುನಾವಣೆಯಲ್ಲಿ ಸೋತ ಪ್ರಮುಖ ನಾಯಕರಿಗೆ ಇಲ್ಲಿ ಪುನರ್ವಸತಿ ಕಲ್ಪಿಸಬೇಕಿದೆ. ಎರಡನೆಯದಾಗಿ, ಬಂಡಾಯ ತಲೆದೋರದಂತೆ ಸಮುದಾಯಗಳನ್ನು ಸಮಾಧಾನಪಡಿಸಬೇಕಿದೆ. ಇದನ್ನು ಹೊರತುಪಡಿಸಿ, 12 ಸ್ಥಾನಗಳ ಭರ್ತಿ ಪ್ರಕ್ರಿಯೆಯು ಕಾಂಗ್ರೆಸ್‌ನ ಆಂತರಿಕ ಶಕ್ತಿ ಪ್ರದರ್ಶನದ ವೇದಿಕೆಯೂ ಆಗಲಿದೆ. ಪಕ್ಷದ ಮುಖಂಡರು ಯಾರಿಗೆ ಅವಕಾಶ ನೀಡಲಿದೆ ಎಂಬುದರ ಮೇಲೆ ಮುಂದಿನ ದಿನದಲ್ಲಿ ಕಾಂಗ್ರೆಸ್‌ನ ಮತ ಬ್ಯಾಂಕ್ ಗಟ್ಟಿಗೊಳ್ಳಲಿದೆ. ಆಕಾಂಕ್ಷಿಗಳ ನಡುವೆ ಯಾರಿಗೆ ವಿಧಾನಪರಿಷತ್‌ನ ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

