Lokayukta| ರಾಜ್ಯದಲ್ಲಿ ಧೂಳು ಹಿಡಿಯುತ್ತಿವೆ 1.20 ಲಕ್ಷ ಮಾಜಿ ಯೋಧರ ಅರ್ಜಿಗಳು..!
x

Lokayukta| ರಾಜ್ಯದಲ್ಲಿ ಧೂಳು ಹಿಡಿಯುತ್ತಿವೆ 1.20 ಲಕ್ಷ ಮಾಜಿ ಯೋಧರ ಅರ್ಜಿಗಳು..!

ಕೊಪ್ಪಳದ ನಿವೃತ್ತ ಯೋಧ ಇರಳಪ್ಪ ಹುಲ್ಲಪ್ಪ1984ರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದವರು. ತಮಗೆ ಬರಬೇಕಾದ ಭೂಮಿಗಾಗಿ ಸುಮಾರು 40 ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ.


Click the Play button to hear this message in audio format

ದೇಶದ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಯೋಧರು, ಇಂದು ತಮ್ಮ ಹಕ್ಕಿಗಾಗಿ ಹೋರಾಡುವಂತಾಗಿದೆ. ನಿಯಮಬದ್ಧವಾಗಿ ಸಿಗಬೇಕಾದ ನಿವೇಶನ, ಜಮೀನು ಸರ್ಕಾರಿ ಕಚೇರಿಗಳ ಮೆಟ್ಟಿಲು ಹತ್ತಿ ಇಳಿದು ತ್ರಾಸ ಪಡುತ್ತಿದ್ದಾರೆ.

ಸೈನಿಕರು ತಮ್ಮ ಸೇವಾವಧಿಯಲ್ಲಿ ಯುದ್ಧ ಭೂಮಿಯಲ್ಲಿ ಎದುರಿಸುವ ಸವಾಲುಗಳಿಗಿಂತ ಹೆಚ್ಚಿನ ಸವಾಲುಗಳನ್ನು ನಿವೃತ್ತಿಯ ನಂತರ ತಮ್ಮದೇ ನಾಡಿನ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎದುರಿಸುವಂತಾಗಿದೆ!

ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಮಾಜಿ ಯೋಧರಿಗೆ ಕೃಷಿ ಜಮೀನು ಅಥವಾ ನಿವೇಶನ ನೀಡುವ ಸ್ಪಷ್ಟ ನಿಯಮಗಳಿದ್ದರೂ, ದಶಕಗಳಿಂದ ಲಕ್ಷಾಂತರ ಅರ್ಜಿಗಳು ಧೂಳು ಹಿಡಿಯುತ್ತಿವೆ. ಇತ್ತೀಚೆಗೆ ಉಪ ಲೋಕಾಯುಕ್ತರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ವ್ಯವಸ್ಥೆಯ ಲೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮಾರ್ಚ್‌ ತಿಂಗಳವರೆಗೆ ಈ ವಿಚಾರ ಇತ್ಯರ್ಥವಾಗಬೇಕು ಎಂದು ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸುಮಾರು 1.20 ಲಕ್ಷ ಮಾಜಿ ಯೋಧರ ಅರ್ಜಿಗಳು ಮಂಜೂರಾತಿಗಾಗಿ ಬಾಕಿ ಇವೆ ಎಂದು ಹೇಳಲಾಗಿದೆ. ಬೆಳಗಾವಿ, ಕೊಡಗು, ಧಾರವಾಡ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಮಾಜಿ ಯೋಧರು ನಿವೇಶನ ಅಥವಾ ಜಮೀನಿಗಾಗಿ ಕಾಯುತ್ತಿದ್ದಾರೆ.

ರಾಜ್ಯದಲ್ಲೇ ಅತಿ ಹೆಚ್ಚು ಮಾಜಿ ಯೋಧರನ್ನು ಹೊಂದಿರುವ ಜಿಲ್ಲೆ ಬೆಳಗಾವಿಯಾಗಿದ್ದು, ಅಲ್ಲಿ ಸುಮಾರು 24 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇವೆ. ದಶಕಗಳಿಂದ ಮಾಜಿ ಯೋಧರು ಜಮೀನಿಗಾಗಿ ಕಾಯುತ್ತಿದ್ದಾರೆ. ಸೈನಿಕರ ತವರು ಎಂದು ಕರೆಯಲ್ಪಡುವ ಕೊಡಗಿನಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ. ಇಲ್ಲಿ ಭೂಮಿಯ ಲಭ್ಯತೆ ಇದ್ದರೂ ತಾಂತ್ರಿಕ ಕಾರಣ ನೀಡಿ ವಿಳಂಬ ಮಾಡಲಾಗುತ್ತಿದೆ.

ಧಾರವಾಡದಲ್ಲಿ ಸುಮಾರು 4,200, ಉತ್ತರ ಕನ್ನಡದಲ್ಲಿ 3,800 ಅರ್ಜಿಗಳು ಬಾಕಿ ಇವೆ. ಹಾಸನ, ಮೈಸೂರು ಭಾಗದಲ್ಲಿ ಕ್ರಮವಾಗಿ 3,500 ಮತ್ತು 4 ಸಾವಿರ ಅರ್ಜಿಗಳು ಕಂದಾಯ ಇಲಾಖೆಯ ಕಡತಗಳಲ್ಲಿ ಸಿಲುಕಿಕೊಂಡಿವೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಯೋಧರು ಭೂಮಿಗಾಗಿ ಕಾಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಹಾಗೂ ನಗರದಲ್ಲಿ ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ, ಸರ್ಕಾರಿ ಭೂಮಿ ಲಭ್ಯವಿಲ್ಲ ಎಂಬ ಕಾರಣ ನೀಡಿ ಸಾವಿರಾರು ಅರ್ಜಿಗಳನ್ನು ದಶಕಗಳಿಂದ ಬಾಕಿ ಇಡಲಾಗಿದೆ ಎಂದು ಮೂಲಗಳು ಹೇಳಿವೆ.

ಜಮೀನು ನೀಡಲು ಸರ್ಕಾರದ ಹಿಂದೇಟಿಗೆ ಕಾರಣಗಳು

ಮಾಜಿ ಯೋಧರಿಗೆ ಜಮೀನು ನೀಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವುದರ ಹಿಂದೆ ಹಲವಾರು ಕಾರಣಗಳಿವೆ. ಯೋಧರ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡುವ ಬದಲು ಸಾಮಾನ್ಯ ಕಡತಗಳಂತೆ ಪರಿಗಣಿಸುವುದು. ಗೋಮಾಳ ಅಥವಾ ಸರ್ಕಾರಿ ಭೂಮಿ ಲಭ್ಯತೆಯ ಸಮಸ್ಯೆಗಳನ್ನು ಮುಂದಿಟ್ಟು ಅರ್ಜಿಗಳನ್ನು ತಿರಸ್ಕರಿಸುವುದು ಅಥವಾ ಬಾಕಿ ಇಡುವ ಕೆಲಸ ಮಾಡಲಾಗುತ್ತಿದೆ.

ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಗೋಮಾಳ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವುದು ಕಷ್ಟಕರವಾಗಿದೆ. ಜಿಲ್ಲಾಡಳಿತವು ಜಮೀನು ಲಭ್ಯವಿಲ್ಲ ಎಂಬ ಸಿದ್ಧ ಉತ್ತರ ನೀಡಿ ಅರ್ಜಿಗಳನ್ನು ಬದಿಗಿಡುತ್ತಿದೆ ಎನ್ನುವುದು ಮಾಜಿ ಯೋಧರ ಆರೋಪವಾಗಿದೆ. ನಿಯಮಗಳಿದ್ದರೂ ಸಹ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ.

ರಾಜಕಾರಣಿಗಳು, ರಿಯಲ್‌ ಎಸ್ಟೇಟ್‌ ಮಾಫಿಯಾದ ಕಣ್ಣು?

ನಗರ ಪ್ರದೇಶಗಳಿಗೆ ಹತ್ತಿರವಿರುವ ಸರ್ಕಾರಿ ಜಮೀನುಗಳನ್ನು ಪ್ರಭಾವಿ ರಾಜಕಾರಣಿಗಳು ಅಥವಾ ರಿಯಲ್ ಎಸ್ಟೇಟ್ ಮಾಫಿಯಾಗಳು ಕಣ್ಣಿಟ್ಟಿರುತ್ತವೆ. ಅಂತಹ ಜಮೀನುಗಳನ್ನು ಯೋಧರಿಗೆ ನೀಡುವ ಬದಲು ಕಬಳಿಸುವ ಸಂಚುಗಳು ನಡೆಯುತ್ತಿವೆ ಎಂಬ ಆರೋಪಗಳಿವೆ.

ಭೂ ಮಂಜೂರಾತಿ ನಿಯಮ 1969ರ ಅಡಿಯಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳಿವೆ. ಆದಾಯದ ಮಿತಿ ಮತ್ತು ಸೇವಾವಧಿಯ ಲೆಕ್ಕಾಚಾರದಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಹುಡುಕಿ ಅರ್ಜಿಗಳನ್ನು ತಿರಸ್ಕರಿಸುವ ಪ್ರವೃತ್ತಿ ಅಧಿಕಾರಿಗಳಲ್ಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಹೆಸರು ಹೇಳಲಿಚ್ಛಿಸದ ಬೆಂಗಳೂರಿನ ತಹಶೀಲ್ದಾರ್‌ ಒಬ್ಬರು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿ, "ಭೂಮಿಯ ಕೊರತೆಯಿಂದಾಗಿ ಮಾಜಿ ಯೋಧರಿಗೆ ಭೂಮಿ ನೀಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ರಾಜಕೀಯ ಹಿತಾಸಕ್ತಿ ಕೊರತೆಯೂ ಇದಕ್ಕೆ ಕಾರಣವಾಗಿದೆ," ಎಂದರು.

"ಸರ್ಕಾರಗಳು ಮನಸು ಮಾಡಿದರೆ ಸರ್ಕಾರಿ ಭೂಮಿಯನ್ನು ನೀಡಬಹುದು. ಆದರೆ, ಉದ್ಯಮಿಗಳ ಲಾಬಿಯಿಂದಾಗಿ ಕಷ್ಟಕರವಾಗಿದೆ. ಇಬ್ಬರು ಉಪಲೋಕಾಯುಕ್ತರು ಈ ಬಗ್ಗೆ ವಿಶೇಷ ಗಮನಹರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಜಿಲ್ಲಾಡಳಿತಗಳಿಗೆ ಮಾರ್ಚ್‌ ವರೆಗೆ ಗಡುವು ನೀಡಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಗಮನಕ್ಕೆ ತರುವ ಕೆಲಸವನ್ನು ಮಾಡಲಾಗುತ್ತದೆ. ಸರ್ಕಾರ ಕೈಗೊಳ್ಳುವ ಕ್ರಮದ ಮೇಲೆ ಅಧಿಕಾರಿಗಳು ಕೆಲಸ ಮಾಡುತ್ತಾರೆ," ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಉಪ ಲೋಕಾಯುಕ್ತರ ಮಧ್ಯಪ್ರವೇಶ

ಪ್ರಕರಣದಲ್ಲಿ ಉಪ ಲೋಕಾಯುಕ್ತರಾದ ನ್ಯಾ. ಕೆ.ಎನ್. ಫಣೀಂದ್ರ ಮತ್ತು ನ್ಯಾ.ಬಿ. ವೀರಪ್ಪ ಮಧ್ಯಪ್ರವೇಶಿಸಿ ಮಾಜಿ ಯೋಧರಿಗೆ ಜಮೀನು ಅಥವಾ ನಿವೇಶನ ಕೊಡಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಯೋಧರ ದಯನೀಯ ಸ್ಥಿತಿಯನ್ನು ಕಂಡ ಉಪಲೋಕಾಯುಕ್ತರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಎಲ್ಲಾ 31 ಜಿಲ್ಲೆಗಳಲ್ಲಿ ಯೋಧರ ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಸತತ ಸಭೆಗಳನ್ನು ನಡೆಸಿ, ಕಾರ್ಯಯೋಜನೆ ಸಿದ್ಧಪಡಿಸಲು ಗಡುವು ನೀಡಿದರು.

ಇದರ ಫಲವಾಗಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈಗಾಗಲೇ ಭೂಮಿ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 2025ರ ಮಾರ್ಚ್ ತಿಂಗಳೊಳಗೆ ಕನಿಷ್ಠ ಶೇ.50 ರಷ್ಟು ಯೋಧರಿಗೆ ಭೂಮಿ ಅಥವಾ ನಿವೇಶನ ಸಿಗುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಉಪಲೋಕಾಯುಕ್ತ ಬಿ.ವೀರಪ್ಪ, "ಜಿಲ್ಲೆಗಳ ಪ್ರವಾಸ ಕೈಗೊಂಡು ಮಾಹಿತಿ ಪಡೆದುಕೊಳ್ಳಲಾಗಿದೆ. ಮಾಜಿ ಯೋಧರಿಗೆ ನಿವೇಶನ ಅಥವಾ ಜಮೀನು ನೀಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ನೊಟೀಸ್‌ ನೀಡಲಾಗಿದೆ. ಕೆಲವರು ಉತ್ತರ ನೀಡಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂಬ ಉತ್ತರ ನೀಡಿದ್ದಾರೆ. ಮಾರ್ಚ್‌ ತಿಂಗಳವರೆಗೆ ಗಡುವು ನೀಡಲಾಗಿದೆ. ಸಾಧ್ಯವಾದಷ್ಟು ಮಾಜಿ ಯೋಧರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ," ಎಂದರು.

ಜಮೀನು ಇಲ್ಲ ಎಂಬ ನೆಪ

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಬೆಳಗಾವಿಯ ಮಾಜಿ ಯೋಧ ಜೆ.ಎಂ.ಕೋತ್‌, "10 ವರ್ಷಗಳ ಹಿಂದೆಯೇ ಜಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈವರೆವಿಗೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತವು ಜಮೀನು ಇಲ್ಲ ಎಂಬ ಉತ್ತರ ನೀಡಿದೆ. ಇತ್ತೀಚೆಗೆ ಉಪಲೋಕಾಯುಕ್ತರು ಆಸಕ್ತಿ ವಹಿಸಿ ಮಾಜಿಯೋಧರಿಗೆ ಜಮೀನು ಕೊಡಿಸುವಲ್ಲಿ ಮುಂದಾಗಿದ್ದಾರೆ. ನಿಯಮದ ಪ್ರಕಾರ ಮಾಜಿ ಯೋಧರಿಗೆ ಜಮೀನು ಅಥವಾ ನಿವೇಶನ ನೀಡಬೇಕು. ಆದರೆ ಭೂಮಿ ಇಲ್ಲ ಎಂಬ ಕಾರಣಕ್ಕಾಗಿ ಕೊಡುತ್ತಿಲ್ಲ," ಎಂದು ನೋವಿನಿಂದ ನುಡಿದರು.

ರಾಯಚೂರಿನ ಮಹಮ್ಮದ್‌ ಸಲೀಂ ಮಾತನಾಡಿ, "ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಹಲವು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಮಾಜಿ ಯೋಧರಿಗೆ ಭೂಮಿ ಅಥವಾ ನಿವೇಶನ ನೀಡಲು ಮನಸ್ಸು ಮಾಡಬೇಕು. ಸರ್ಕಾರದ ನಿಯಮಗಳು ಮತ್ತು ಷರತ್ತುಗಳು ಏನು ಇವೆಯೋ? ಅವುಗಳ ಪ್ರಕಾರವೇ ನೀಡಿದರೆ ಸಾಕು. ಯಾರಿಗೆ ಅನಿವಾರ್ಯತೆ ಇದೆ ಅವರಿಗೆ ನೀಡಿದರೆ ಜೀವನಕ್ಕೆ ಆಧಾರವಾಗಲಿದೆ,"
ಎಂದು ಹೇಳಿದರು.

ಆಪರೇಷನ್‌ ಬ್ಲೂಸ್ಟಾರ್‌: 40 ವರ್ಷದ ಬಳಿಕ ಸಿಕ್ಕ ಜಮೀನು

ಲೋಕಾಯುಕ್ತ ಸಂಸ್ಥೆಯ ಮೂಲಗಳ ಪ್ರಕಾರ, ಕೊಪ್ಪಳ ಜಿಲ್ಲೆಯ ನಿವೃತ್ತ ಯೋಧ ಇರಳಪ್ಪ ಹುಲ್ಲಪ್ಪ ಪ್ರಕರಣ ಇಡೀ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಹೇಳಿದೆ. ಇರಳಪ್ಪ ಅವರು 1984ರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದವರು. ದೇಶಕ್ಕಾಗಿ ರಕ್ತ ಸುರಿಸಿದ ಈ ಸೈನಿಕ 1985ರಲ್ಲಿ ನಿವೃತ್ತರಾದರು. ತಮಗೆ ಬರಬೇಕಾದ 2 ಎಕರೆ ಭೂಮಿಗಾಗಿ ಅವರು ಸುಮಾರು 40 ವರ್ಷಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಿದ್ದಾರೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಮಧ್ಯಪ್ರವೇಶದಿಂದ ಅವರಿಗೆ ಕುಷ್ಟಗಿ ತಾಲೂಕಿನ ಕಾಟಾಪುರದಲ್ಲಿ 2 ಎಕರೆ ಭೂಮಿ ಮಂಜೂರಾಗಿದೆ. 40 ವರ್ಷಗಳ ನಂತರ ಸಿಕ್ಕ ಈ ಜಯ ಸಮಾಧಾನ ತಂದಿದ್ದರೂ, ಇಷ್ಟು ವರ್ಷಗಳ ವಿಳಂಬವು ಆಡಳಿತ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.

ನಿಯಮ ಏನು ಹೇಳುತ್ತದೆ?

ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಪ್ರಕಾರ ಮಾಜಿ ಯೋಧವರಿಗೆ ನಿವೇಶನ ಅಥವಾ ಕೃಷಿ ಜಮೀನು ನೀಡಬೇಕು. 2019ರ ಸರ್ಕಾರಿ ಆದೇಶದ ಪ್ರಕಾರ ಭೂಮಿ ಲಭ್ಯವಿದ್ದಲ್ಲಿ ಎರಡು ಎಕರೆ ಕೃಷಿ ಭೂಮಿ, ಇಲ್ಲವಾದರೆ ವಾಸಕ್ಕೆ ನಿವೇಶನ ನೀಡಬೇಕು. ಅಷ್ಟೇ ಅಲ್ಲದೆ, ವಾಸಕ್ಕೆ ನಿವೇಶನ ನೀಡುವಲ್ಲಿಯೂ ಮಾಜಿ ಯೋಧರಿಗೆ ಶೇ.10 ರಷ್ಟು ಮೀಸಲಾತಿ ಇರಬೇಕು. ಆದರೆ ಈ ಆದೇಶ ಕಾಗದದ ಮೇಲೆಯೇ ಉಳಿದಿದೆ. ಲೋಕಾಯುಕ್ತರ ಮಧ್ಯಪ್ರವೇಶದ ಬಳಿಕವಷ್ಟೇ ಅಧಿಕಾರಿಗಳಲ್ಲಿ ಒಂದು ರೀತಿಯ ಚಟುವಟಿಕೆ ಕಂಡುಬಂದಿದೆ.


Read More
Next Story