
Internal Reservation| ʼಅಹಿಂದʼಕ್ಕೆ ಮುಳುವಾಗಲಿದೆಯೇ ಎಡಗೈ 'ರಾಜಕೀಯ ನಿರ್ಣಯ'?
ಕಾಂಗ್ರೆಸ್ ಪಕ್ಷವು ದಶಕಗಳಿಂದ 'ಅಹಿಂದ' ಮತಗಳನ್ನೇ ನೆಚ್ಚಿಕೊಂಡಿದೆ. ಆದರೆ, ಒಳ ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಗಳ ʼಮಾಡು ಇಲ್ಲವೇ ಮಡಿʼ ಹೋರಾಟವು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
35 ವರ್ಷಗಳ ಸುದೀರ್ಘ ಹೋರಾಟದ ಹೊರತಾಗಿಯೂ ಒಳ ಮೀಸಲಾತಿಯಿಂದ ವಂಚಿತರಾಗಿರುವ ಪರಿಶಿಷ್ಟ ಜಾತಿಯ ಮಾದಿಗ (ಎಡಗೈ) ಸಮುದಾಯವು ಇದೀಗ ʼರಾಜಕೀಯ ನಿರ್ಣಯʼ ತೆಗೆದುಕೊಳ್ಳುವ ಅಂಚಿಗೆ ಬಂದು ನಿಂತಿದೆ.
ಆಳುವ ಸರ್ಕಾರಗಳ ಇಚ್ಛಾಶಕ್ತಿ ಕೊರತೆ, ಎಡಗೈ ಸಮುದಾಯದ ಬಗೆಗಿನ ನಿರ್ಲಕ್ಷ್ಯ, ಬಲಗೈ ಸಮುದಾಯದ ಪ್ರಭಾವದ ಕಾರಣ ಒಳ ಮೀಸಲಾತಿ ಹಂಚಿಕೆ ಮರೀಚಿಕೆಯಾಗಿದೆ. 1980 ರಿಂದಲೂ ವೋಟ್‌ಬ್ಯಾಂಕ್ ಮುಂದಿಟ್ಟುಕೊಂಡೇ ಒಳ ಮೀಸಲಾತಿಗಾಗಿ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಆಯೋಗದ ವರದಿ ಅಂಗೀಕಾರದಿಂದ ಇನ್ನೇನು ಒಳ ಮೀಸಲಾತಿ ಜಾರಿಯಾಯಿತು ಎನ್ನುವಷ್ಟರಲ್ಲೇ ಕಾನೂನು ಗೊಂದಲ ಸೃಷ್ಟಿಸಿರುವುದು ಎಡಗೈ ಸಮುದಾಯಗಳಲ್ಲಿ ಕಿಚ್ಚು ಹೊತ್ತಿಸಿದೆ. ಇದೇ ಆಕ್ರೋಶ ʼಕಾಂಗ್ರೆಸ್ ಹಠಾವೋʼ ವರೆಗೆ ಬಂದು ನಿಂತಿದೆ.
1975 ರ ಎಲ್.ಜಿ.ಹಾವನೂರು ಆಯೋಗದಿಂದ ಹಿಡಿದು ಒಳ ಮೀಸಲಾತಿ ಕುರಿತಾದ ನ್ಯಾ.ಎ.ಜೆ.ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ, ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಗಳವರೆಗೂ ಅಡೆತಡೆಗಳು ನಿರಂತರವಾಗಿವೆ. ಇದರಿಂದ ಹತಾಶರಾಗಿರುವ ಎಡಗೈ ಸಮುದಾಯವು ಕಾಂಗ್ರೆಸ್ ವಿರುದ್ಧ ರಾಜಕೀಯ ನಿರ್ಣಯ ಕೈಗೊಳ್ಳಲು ತೀರ್ಮಾನಿಸಿವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವಧಿಯಿಂದಲೂ ಎಡಗೈ ಸಮುದಾಯವು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ಸಮುದಾಯವು ಈಗ ಅದೇ ಪಕ್ಷದ ವಿರುದ್ಧ ನಿಲ್ಲುವಂತಾಗಿದೆ.
ರಾಜಕೀಯ ಪಕ್ಷಗಳಿಗೆ ಮತಬ್ಯಾಂಕ್
ರಾಜಕೀಯ ಪಕ್ಷಗಳು ಪ್ರತಿ ಚುನಾವಣೆಯಲ್ಲಿ ಒಳ ಮೀಸಲಾತಿಯನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು ಎಡಗೈ ಸಮುದಾಯ ಮತ ಸೆಳೆಯುತಿದ್ದ ಸಂಗತಿ ಹೊಸದೇನಲ್ಲ. 2018 ರಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲೂ ಎಡಗೈ ಸಮುದಾಯದ ಮತಗಳು ನಿರ್ಣಾಯಕವಾಗಿದ್ದವು. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಕುರಿತು ಅಂದಿನ ಬಿಜೆಪಿ ನೀಡಿದ್ದ ಭರವಸೆ ನಂಬಿಕೊಂಡು ಬೆಂಬಲ ನೀಡಿದ್ದವು. ವೈಜ್ಞಾನಿಕ ಅಂಕಿ ಅಂಶಗಳಿಲ್ಲ ಎಂಬ ಕಾರಣ ಹೇಳಿ ವರದಿ ಅನುಷ್ಠಾನಕ್ಕೆ ಬಲಗೈ ಸಮುದಾಯ ಬಿಟ್ಟಿರಲಿಲ್ಲ.
2023 ರ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಕೈ ಹಿಡಿದರೂ ನೆಪಗಳಿಂದಲೇ ವರದಿ ಜಾರಿ ವಿಳಂಬವಾಗುತ್ತಿದೆ. ಈಗ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ 56,432 ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಕೈಬಿಟ್ಟಿರುವುದು ಸಮುದಾಯವನ್ನು ತುಳಿಯುವ ಹುನ್ನಾರ ಎಂದು ಒಳ ಮೀಸಲಾತಿ ಹೋರಾಟಗಾರ ಶಂಕರಪ್ಪ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಅಹಿಂದ' ನಾಯಕ ಎಂದು ಗುರುತಿಸಿಕೊಂಡರೂ ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ನಡುವಿನ ಸಂಘರ್ಷ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಲಗೈ ಸಮುದಾಯದ ಸಚಿವರು ಮಾತಿಗೆ ಓಗೊಟ್ಟು ಒಳ ಮೀಸಲಾತಿ ಜಾರಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ಇಡೀ ಸಮುದಾಯದ ಮತಗಳನ್ನೇ ಕಳೆದುಕೊಳ್ಳಬೇಕಾಗಬಹುದು ಎಂದು ಎಚ್ಚರಿಸಿದರು.
ದಶಕಗಳ ಬೇಡಿಕೆ, ದೂರಾಗದ ಅಸಮಾಧಾನ
ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳ ಪೈಕಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕು ಎಂಬುದು ಎಡಗೈ ಸಮುದಾಯದ ಬಹುದಿನಗಳ ಬೇಡಿಕೆಯಾಗಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಳ ಮೀಸಲಾತಿ ಜಾರಿ ಮಾಡುವುದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಶ್ವಾಸನೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ, ಪರಿಶಿಷ್ಟ ಜಾತಿಯ ಉಪಪಂಗಡಗಳ ಅಂಕಿ ಅಂಶ ಕಲೆ ಹಾಕಿದ್ದರೂ ವರದಿ ಜಾರಿ ವಿಳಂಬ ಮಾಡುತ್ತಿರುವುದು ಎಡಗೈ ಸಮುದಾಯದಲ್ಲಿ ಕಿಚ್ಚು ಹೊತ್ತಿಸಿದೆ.
ರಾಜಕೀಯ ಪರಿಣಾಮ ಏನು?
ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಎಡಗೈ ಸಮುದಾಯದ ಪ್ರಮುಖರು ಹಾಗೂ ಮಠಾಧೀಶರ ಸಭೆಯಲ್ಲಿ ಕಾಂಗ್ರೆಸ್ಗೆ ಬಿಸಿ ಮುಟ್ಟಿಸುವ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಮುಂಬರುವ ಎರಡು ಕ್ಷೇತ್ರಗಳ ಉಪಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸದಿರಲು ನಾಯಕರು ತೀರ್ಮಾನಿಸಿದ್ದು, ಕಾಂಗ್ರೆಸ್ ಪಕ್ಷವನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಎಡಗೈ ಸಮುದಾಯದ ದೊಡ್ಡ ಮತಬ್ಯಾಂಕ್ ಇದೆ. ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿರುವ ಎಡಗೈ ಸಮುದಾಯವು ಒಳ ಮೀಸಲಾತಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ತೀರ್ಮಾನಕ್ಕೆ ಅಂಟಿಕೊಂಡು ಹೋರಾಟ ಆರಂಭಿಸಿದೆ. ಕಾಂಗ್ರೆಸ್‌ನಿಂದ ದೂರವಾದ ನಂತರ ಬಿಜೆಪಿ ಅಥವಾ ಜೆಡಿಎಸ್ ಬೆಂಬಲಿಸುವ ಮಾತುಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮಾರ್ಚ್ 27ರವರೆಗೆ ರಾಜ್ಯ ಸರ್ಕಾರ ಸಮಯ ಕೇಳಿರುವುದು ಸಮುದಾಯದ ತಾಳ್ಮೆ ಪರೀಕ್ಷಿಸುತ್ತಿದೆ. ಇದು ತಾಂತ್ರಿಕ ಕಾರಣವೋ ಅಥವಾ ಬಲಗೈ ಸಮುದಾಯಕ್ಕೆ ನೆರವಾಗುವ ತಂತ್ರವೋ ಎಂಬ ಅನುಮಾನಗಳು ಪ್ರತಿಭಟನಾಕಾರರಲ್ಲಿ ಮೂಡುತ್ತಿವೆ.
'ಅಹಿಂದ' ಮತಬ್ಯಾಂಕ್‌ನಲ್ಲಿ ಒಡಕು
ಕಾಂಗ್ರೆಸ್ ಪಕ್ಷವು ದಶಕಗಳಿಂದ 'ಅಹಿಂದ' (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು)ಮತಗಳ ಮೇಲೆ ಅವಲಂಬಿತವಾಗಿದೆ. ಆದರೆ, ಪರಿಶಿಷ್ಟ ಜಾತಿಯೊಳಗೆ ಎಡಗೈ ಮತ್ತು ಬಲಗೈ ಸಮುದಾಯಗಳ ನಡುವಿನ ಸ್ಪರ್ಧೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕಾಂಗ್ರೆಸ್ ಸರ್ಕಾರವು ಬಲಗೈ ಸಮುದಾಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದೆ ಎಂದು ದೂರಿರುವ ಬಿಜೆಪಿ, ಎಡಗೈ ಸಮುದಾಯದ ಪರವಾಗಿ ನಾವಿದ್ದೇವೆ ಎನ್ನುವ ಮೂಲಕ ಕಾಂಗ್ರೆಸ್‌ನ ಮತಬ್ಯಾಂಕ್‌ಗೆ ಲಗ್ಗೆ ಇಡುತ್ತಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಗಿಂತ ಮೊದಲು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಒಳ ಮೀಸಲಾತಿಗೆ ಶಿಫಾರಸು ಮಾಡುವ ಧೈರ್ಯ ಪ್ರದರ್ಶಿಸಿತ್ತು. ಇದನ್ನೇ ಈಗ ಮುನ್ನೆಲೆಗೆ ತಂದಿರುವ ಆ ಪಕ್ಷದ ನಾಯಕರು, ಕಾಂಗ್ರೆಸ್ ಕೇವಲ ಭರವಸೆ ನೀಡುತ್ತಿದೆ. ಎಡಗೈ ಸಮುದಾಯದ ಬಗ್ಗೆ ಕಾಳಜಿ ಇಲ್ಲ ಎಂದು ಬಿಂಬಿಸುವಲ್ಲಿ ನಿರತವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕ ಎಂದು ಗುರುತಿಸಿಕೊಂಡವರು. ಆದರೆ, ಒಳ ಮೀಸಲಾತಿ ಜಾರಿಗೆ ತರಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಬಿಜೆಪಿಯು ಅವರ 'ದಲಿತ ವಿರೋಧಿ' ಎಂಬ ಇಮೇಜ್ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದು ಕಾಂಗ್ರೆಸ್ ಒಳಗಿನ ದಲಿತ ನಾಯಕರ ನಡುವೆಯೂ ಮುಸುಕಿನ ಗುದ್ದಾಟಕ್ಕೆ ಕಾರಣವಾಗುತ್ತಿದ್ದು, ಇದರ ನೇರ ಲಾಭ ಬಿಜೆಪಿಗೆ ಸಿಗುತ್ತಿದೆ.

