
ಆನ್‌ಲೈನ್ ಪೈಪೋಟಿಗೆ ಸುಸ್ತಾದ ಹಾಪ್‌ಕಾಮ್ಸ್: ರಾಜ್ಯದಲ್ಲಿ 147 ಮಳಿಗೆಗಳು ಬಂದ್
ರಾಜ್ಯದಲ್ಲಿ ಒಟ್ಟು 24 ಹಾಪ್‌ಕಾಮ್ಸ್ ಘಟಕಗಳಿವೆ. ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 557 ಮಳಿಗೆಗಳ ಪೈಕಿ 147 ಮಳಿಗೆಗಳು ಇಂದು ಕಾರ್ಯಾಚರಣೆ ನಿಲ್ಲಿಸಿವೆ.
ರೈತರಿಗೆ ಯೋಗ್ಯ ಬೆಲೆ ಒದಗಿಸುವುದರ ಜತೆಗೆ ಗ್ರಾಹಕರಿಗೆ ರಾಸಾಯನಿಕ ಮುಕ್ತ, ತಾಜಾ ಹಣ್ಣು-ತರಕಾರಿಗಳನ್ನು ಕೈಗೆಟುಕುವ ದರದಲ್ಲಿ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಹಾಪ್‌ಕಾಮ್ಸ್ ಇಂದು ಅಸ್ತಿತ್ವದ ಹೋರಾಟ ನಡೆಸುತ್ತಿದೆ. ರಾಜ್ಯಾದ್ಯಂತ ಇರುವ 557 ಮಳಿಗೆಗಳಲ್ಲಿ ಈಗಾಗಲೇ 147 ಮಳಿಗೆಗಳು ಬೀಗ ಹಾಕಿರುವುದು ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಒಟ್ಟು 24 ಹಾಪ್‌ಕಾಮ್ಸ್ ಘಟಕಗಳಿವೆ. ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 557 ಮಳಿಗೆಗಳ ಪೈಕಿ 147 ಮಳಿಗೆಗಳು ಇಂದು ಕಾರ್ಯಾಚರಣೆ ನಿಲ್ಲಿಸಿವೆ. ಬೆಂಗಳೂರಿನಂತಹ ಮಹಾನಗರದಲ್ಲಿಯೇ ಅತಿ ಹೆಚ್ಚು ಮಳಿಗೆಗಳು ಮುಚ್ಚಲ್ಪಟ್ಟಿರುವುದು ಆಘಾತಕಾರಿ ಸಂಗತಿಯಾಗಿದೆ. ಸಂಸ್ಥೆಯ ವಾರ್ಷಿಕ ವಹಿವಾಟು ಪ್ರತಿ ವರ್ಷವೂ ಇಳಿಕೆಯಾಗುತ್ತಿದ್ದು, ನಷ್ಟದ ಪ್ರಮಾಣ ಕೋಟ್ಯಂತರ ರೂಪಾಯಿಗಳನ್ನು ದಾಟಿದೆ.
ಆರ್ಥಿಕ ಅಸ್ಥಿರತೆ
ಹಾಪ್‌ಕಾಮ್ಸ್ ಮಳಿಗೆಗಳು ಮುಚ್ಚಲು ಮೊದಲ ಮತ್ತು ಪ್ರಮುಖ ಕಾರಣ ಆರ್ಥಿಕ ಅಸ್ಥಿರತೆಯಾಗಿದೆ. ನಗರ ಪ್ರದೇಶಗಳಲ್ಲಿನ ಮಳಿಗೆಗಳ ಬಾಡಿಗೆ, ದುಬಾರಿ ವಿದ್ಯುತ್ ಬಿಲ್ ಮತ್ತು ಸಿಬ್ಬಂದಿಯ ವೇತನವು ದಿನನಿತ್ಯದ ವಹಿವಾಟಿನಿಂದ ಬರುವ ಲಾಭಕ್ಕಿಂತ ಹೆಚ್ಚಾಗಿದೆ. ಅನೇಕ ಮಳಿಗೆಗಳಲ್ಲಿ ದಿನದ ಸರಾಸರಿ ಮಾರಾಟ ಮೂರು ಸಾವಿರ ರೂ.ಗೆ ಕುಸಿದಿದೆ. ಈ ಹಣದಲ್ಲಿ ಕನಿಷ್ಠ ನಿರ್ವಹಣೆಯೂ ಅಸಾಧ್ಯವಾಗಿದೆ. ಹಾಪ್‌ಕಾಮ್ಸ್ ಅತ್ಯಂತ ಕಡಿಮೆ ಲಾಭಾಂಶದಲ್ಲಿ ಕಾರ್ಯನಿರ್ವಹಿಸುತ್ತದೆ. ಖಾಸಗಿ ಕಂಪನಿಗಳಂತೆ ಇದು ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುವುದಿಲ್ಲ. ಈ ಕಡಿಮೆ ಲಾಭಾಂಶವು ಮಾರುಕಟ್ಟೆಯ ಏರಿಳಿತಗಳನ್ನು ತಡೆದುಕೊಳ್ಳಲು ಸಂಸ್ಥೆಗೆ ಶಕ್ತಿ ನೀಡುತ್ತಿಲ್ಲ.
ಹಣ್ಣು ಮತ್ತು ತರಕಾರಿಗಳು ಅತ್ಯಂತ ಸೂಕ್ಷ್ಮ ಪದಾರ್ಥಗಳು. ಇವುಗಳ ಜೀವಿತಾವಧಿ ಬಹಳ ಕಡಿಮೆ. ಹೆಚ್ಚಿನ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಆಧುನಿಕ ಶೈತ್ಯಾಗಾರಗಳಿಲ್ಲ. ಮುಂಜಾನೆ ಬಂದ ತರಕಾರಿಗಳು ಸಂಜೆಯ ವೇಳೆಗೆ ಬಾಡಿ ಹೋಗುತ್ತವೆ ಅಥವಾ ಕೊಳೆಯುತ್ತವೆ. ಸರಿಯಾದ ಸಮಯದಲ್ಲಿ ಮಾರಾಟವಾಗದಿದ್ದಲ್ಲಿ ಭಾರಿ ಪ್ರಮಾಣದ ತೂಕದ ನಷ್ಟ ಮತ್ತು ಆರ್ಥಿಕ ಹಾನಿ ಉಂಟಾಗುತ್ತದೆ. ಖಾಸಗಿ ಆನ್‌ಲೈನ್ ಆ್ಯಪ್‌ಗಳಂತೆ ಇಲ್ಲಿ ಮುನ್ಸೂಚನೆಯ ಆಧಾರದ ಮೇಲೆ ದಾಸ್ತಾನು ನಿರ್ವಹಣೆ ಮಾಡುವ ಸಾಫ್ಟ್‌ವೇರ್ ವ್ಯವಸ್ಥೆ ಇಲ್ಲದಿರುವುದು ನಷ್ಟಕ್ಕೆ ಇನ್ನೊಂದು ಕಾರಣ ಎಂದು ಹೇಳಲಾಗಿದೆ.
ನಗರೀಕರಣ, ಮೂಲಸೌಲಭ್ಯ ಕಾಮಗಾರಿಗಳ ಪೆಟ್ಟು
ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಾಪ್‌ಕಾಮ್ಸ್‌ಗೆ ಮಾರಕವಾಗಿ ಪರಿಣಮಿಸಿವೆ. ಬೆಂಗಳೂರಿನಂತಹ ನಗರಗಳಲ್ಲಿ ರಸ್ತೆ ಅಗಲೀಕರಣ, ಮೆಟ್ರೋ ರೈಲು ಯೋಜನೆ ಮತ್ತು ಮೇಲ್ಸೇತುವೆಗಳ ನಿರ್ಮಾಣದ ಕಾರಣದಿಂದ ರಸ್ತೆ ಬದಿಯಲ್ಲಿದ್ದ ದಶಕಗಳ ಹಳೆಯ ಮಳಿಗೆಗಳನ್ನು ಕಿತ್ತು ಹಾಕಲಾಗಿದೆ. "ಸರ್ಕಾರ ಅಥವಾ ಮಹಾನಗರ ಪಾಲಿಕೆಗಳು ಮಳಿಗೆಗಳನ್ನು ತೆರವುಗೊಳಿಸುವಾಗ ಪರ್ಯಾಯ ಜಾಗವನ್ನು ನೀಡುತ್ತಿಲ್ಲ. ಹಳೆಯ ಗ್ರಾಹಕರು ಇರುವ ಸ್ಥಳದಿಂದ ಮಳಿಗೆ ಸ್ಥಳಾಂತರಗೊಂಡಾಗ ವ್ಯಾಪಾರ ಸಂಪೂರ್ಣ ಕುಸಿಯುತ್ತಿದೆ" ಎಂದು 'ದ ಫೆಡರಲ್ ಕರ್ನಾಟಕ'ಕ್ಕೆ ಯಶವಂತಪುರ ವ್ಯಾಪ್ತಿಯ ಹಾಪ್‌ಕಾಮ್ಸ್ ಮಳಿಗೆಯ ವ್ಯಾಪಾರಿ ಆರ್. ಪ್ರಕಾಶ್ ಹೇಳಿದ್ದಾರೆ.
ಸಂಸ್ಥೆಯ ಬೆನ್ನೆಲುಬಾದ ಸಿಬ್ಬಂದಿ ವರ್ಗದ ಕೊರತೆಯು ಪ್ರಮುಖ ಸಮಸ್ಯೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದ 15-20 ವರ್ಷಗಳಿಂದ ಕಾಯಂ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ. ಹಳೆಯ ನುರಿತ ಸಿಬ್ಬಂದಿಗಳು ಸತತವಾಗಿ ನಿವೃತ್ತರಾಗುತ್ತಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗುವ ಸಿಬ್ಬಂದಿಗಳಿಗೆ ತೋಟಗಾರಿಕೆ ಉತ್ಪನ್ನಗಳ ನಿರ್ವಹಣೆ ಅಥವಾ ಗ್ರಾಹಕರೊಂದಿಗೆ ವ್ಯವಹರಿಸುವ ಸರಿಯಾದ ತರಬೇತಿ ಇರುವುದಿಲ್ಲ. ಇದರಿಂದ ಸೇವೆಯ ಗುಣಮಟ್ಟ ಕುಸಿದಿದೆ. "ಸಿಬ್ಬಂದಿ ಕೊರತೆಯಿಂದಾಗಿ ಒಬ್ಬನೇ ವ್ಯಕ್ತಿ ಎರಡು-ಮೂರು ಮಳಿಗೆಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಇದೆ, ಇದು ಅಂತಿಮವಾಗಿ ಮಳಿಗೆಯ ಮುಚ್ಚುವಿಕೆಗೆ ದಾರಿ ಮಾಡಿಕೊಡುತ್ತಿದೆ" ಎಂದು ಅವರು ತಿಳಿಸಿದರು.
ಫ್ರಾಂಚೈಸಿ ಮಾದರಿಯಲ್ಲಿ ಅಭಿವೃದ್ಧಿ
ಹಾಪ್‌ಕಾಮ್ಸ್‌ನ ಅಧಿಕಾರಿ ವಿನಾಯಕ ರೆಡ್ಡಿ ಬಿ. ಮಾಲಿಪಾಟೀಲ್ ಮಾತನಾಡಿ, "ಹಾಪ್‌ಕಾಮ್ಸ್‌ನಲ್ಲಿ ಹಳೆಯ ಸಿಬ್ಬಂದಿಗಳು ನಿವೃತ್ತರಾಗುತ್ತಿದ್ದಾರೆ. ಆದರೆ, ಆ ಸ್ಥಾನಕ್ಕೆ ಹೊಸ ನೇಮಕಾತಿಯಾಗುತ್ತಿಲ್ಲ. ಉದ್ಯೋಗಿಗಳ ಕೊರತೆಯಿಂದಲೂ ಮಳಿಗೆಗಳು ಮುಚ್ಚಲ್ಪಟ್ಟಿವೆ. ಲಾಭಕ್ಕಿಂತ ಹೆಚ್ಚಾಗಿ ವೆಚ್ಚವಾಗುತ್ತಿರುವ ಕಾರಣ ಹಾಪ್‌ಕಾಮ್ಸ್ ಮಳಿಗೆಗಳು ಮುಚ್ಚುವಂತಾಗಿದೆ. ಹಾಪ್‌ಕಾಮ್ಸ್‌ಗಳನ್ನು ಪುನರುಜ್ಜೀವನಗೊಳಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ. ಅಲ್ಲದೇ, ಫ್ರಾಂಚೈಸಿ ಮಾದರಿಯಲ್ಲಿ ಹಾಪ್‌ಕಾಮ್ಸ್‌ಗಳನ್ನು ಅಭಿವೃದ್ಧಿಗೊಳಿಸುವ ಚಿಂತನೆ ಇದೆ. ಇದು ಕಾರ್ಯರೂಪಗೊಂಡು ಯಶಸ್ವಿಯಾದರೆ ಮತ್ತೆ ಹಾಪ್‌ಕಾಮ್ಸ್‌ಗಳು ಅಭಿವೃದ್ಧಿಗೊಳ್ಳಲಿವೆ" ಎಂದರು.
ಗ್ರಾಹಕ ಜಿ. ಗಣೇಶ್ ಮಾತನಾಡಿ, "ಇಂದು ಗ್ರಾಹಕರು ಕೇವಲ ತಾಜಾತನವನ್ನಷ್ಟೇ ಅಲ್ಲ, ಸುಲಭ ಲಭ್ಯತೆಯನ್ನೂ ಬಯಸುತ್ತಾರೆ. ಬಿಗ್‌ಬಾಸ್ಕೆಟ್, ಜೆಪ್ಟೋ, ಬ್ಲಿಂಕಿಟ್ ಮತ್ತು ರಿಲಯನ್ಸ್ ಫ್ರೆಶ್‌ನಂತಹ ಸಂಸ್ಥೆಗಳು ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುತ್ತಿವೆ. ಹಾಪ್‌ಕಾಮ್ಸ್ ಇನ್ನೂ ಹಳೆಯ ಕೌಂಟರ್ ಸೇಲ್ ಪದ್ಧತಿಯಲ್ಲೇ ಉಳಿದಿದೆ. ಏಕಕಾಲಕ್ಕೆ ಎಲ್ಲಾ ದಿನಸಿ ವಸ್ತುಗಳು ಸಿಗುವ ಮಾಲ್‌ಗಳಿಗೆ ಜನ ಹೋಗುತ್ತಿದ್ದಾರೆ. ಹಾಪ್‌ಕಾಮ್ಸ್‌ನಲ್ಲಿ ಕೇವಲ ಹಣ್ಣು-ತರಕಾರಿ ಮಾತ್ರ ಸಿಗುವುದು ಇಂದಿನ ಧಾವಂತದ ಜೀವನದಲ್ಲಿ ಅನಾನುಕೂಲವಾಗಿ ಕಾಣುತ್ತಿದೆ" ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚಾಗಿ ಮುಚ್ಚಲ್ಪಟ್ಟ ಮಳಿಗೆಗಳು
ಒಟ್ಟು 557 ಮಳಿಗೆಗಳ ಪೈಕಿ 147 ಮಳಿಗೆಗಳು ಮುಚ್ಚಲ್ಪಟ್ಟಿವೆ. ಈ ಪೈಕಿ ಬೆಂಗಳೂರು ವ್ಯಾಪ್ತಿಯಲ್ಲಿಯೇ 80ಕ್ಕೂ ಹೆಚ್ಚು ಮಳಿಗೆಗಳು ಮುಚ್ಚಿವೆ. ಮೈಸೂರಿನಲ್ಲಿ 20ಕ್ಕೂ ಹೆಚ್ಚು, ಬೆಳಗಾವಿಯಲ್ಲಿ 15ಕ್ಕೂ ಹೆಚ್ಚು, ಹುಬ್ಬಳ್ಳಿ-ಧಾರವಾಡದಲ್ಲಿ 10ಕ್ಕೂ ಹೆಚ್ಚು ಮಳಿಗೆಗಳು ಬಂದ್ ಆಗಿವೆ ಎಂದು ಮೂಲಗಳು ಹೇಳಿವೆ. ಬೆಂಗಳೂರಿನಲ್ಲಿ ಮಳಿಗೆಗಳು ಹೆಚ್ಚಾಗಿ ಮುಚ್ಚಲು ನಮ್ಮ ಮೆಟ್ರೋ ಕಾಮಗಾರಿ, ರಸ್ತೆ ಅಗಲೀಕರಣ ಮತ್ತು ಫ್ಲೈಓವರ್ ನಿರ್ಮಾಣ ಸೇರಿದಂತೆ ಹಲವು ಕಾರಣಗಳಿವೆ ಎನ್ನಲಾಗಿದೆ.
ಅಭಿವೃದ್ಧಿಗೆ ಕ್ರಮ ಅಗತ್ಯ
ಹಾಪ್‌ಕಾಮ್ಸ್ ಅನ್ನು ಉಳಿಸಿಕೊಳ್ಳುವುದು ಕೇವಲ ಒಂದು ಸಂಸ್ಥೆಯನ್ನು ಉಳಿಸಿಕೊಳ್ಳುವುದಲ್ಲ, ಬದಲಾಗಿ ಸಾವಿರಾರು ರೈತರ ಬದುಕನ್ನು ಉಳಿಸಿಕೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಆಧುನಿಕತೆಗೆ ತಕ್ಕಂತೆ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕಿದೆ ಎಂಬ ಮಾತುಗಳು ಕೇಳಿಬಂದಿವೆ. ಹಾಪ್‌ಕಾಮ್ಸ್ ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಆರಂಭಿಸಬೇಕು. ನಗರ ಪ್ರದೇಶಗಳಲ್ಲಿ ಸ್ವಿಗ್ಗಿ ಅಥವಾ ಜೊಮ್ಯಾಟೊದೊಂದಿಗೆ ಒಪ್ಪಂದ ಮಾಡಿಕೊಂಡು ಮನೆ ಬಾಗಿಲಿಗೆ ತರಕಾರಿ ತಲುಪಿಸುವ ವ್ಯವಸ್ಥೆ ಜಾರಿಗೆ ತರಬೇಕು. ಕೇವಲ ಹಣ್ಣು-ತರಕಾರಿ ಮಾತ್ರವಲ್ಲದೆ, ಹಾಪ್‌ಕಾಮ್ಸ್‌ನಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಸಂಸ್ಕರಿಸಿದ ಉತ್ಪನ್ನಗಳು, ನಂದಿನಿ ಹಾಲು ಮತ್ತು ಇತರ ದಿನಸಿ ಪದಾರ್ಥಗಳನ್ನು ಮಾರಾಟ ಮಾಡಲು ಅನುಮತಿ ನೀಡಬೇಕು. ಮಳಿಗೆಗಳಲ್ಲಿ ಸಣ್ಣ ಮಟ್ಟದ ಎಸಿ ಅಥವಾ ಕೂಲಿಂಗ್ ವ್ಯವಸ್ಥೆ ಅಳವಡಿಸಿ ಉತ್ಪನ್ನಗಳ ಬಾಳಿಕೆಯನ್ನು ಹೆಚ್ಚಿಸಬೇಕು. ನಷ್ಟದಲ್ಲಿರುವ ಮಳಿಗೆಗಳನ್ನು ಖಾಸಗಿ ಯುವ ಉದ್ಯಮಿಗಳಿಗೆ ಫ್ರಾಂಚೈಸಿ ಆಧಾರದ ಮೇಲೆ ನೀಡುವ ಮೂಲಕ ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರ ಎರಡನ್ನೂ ವೃದ್ಧಿಸಬಹುದು. 'ನೇರವಾಗಿ ರೈತರಿಂದ' ಎಂಬ ಟ್ಯಾಗ್‌ಲೈನ್ ಅನ್ನು ಸರಿಯಾಗಿ ಪ್ರಚಾರ ಮಾಡಬೇಕು ಎಂಬ ಸಲಹೆಗಳು ವ್ಯಕ್ತವಾಗಿವೆ.

