
6 ಸಾವಿರ ʼಕೆಪಿಎಸ್ ಮ್ಯಾಗ್ನೆಟ್ʼ ಶಾಲೆ ತೆರೆದು 47 ಸಾವಿರ ಸರ್ಕಾರಿ ಶಾಲೆ ಸ್ಥಗಿತ?
'ಕೆಪಿಎಸ್ ಯೋಜನೆ' ಕೈಬಿಟ್ಟು ʼನಮ್ಮೂರ ಶಾಲೆ ಉಳಿಸಿʼ ಎಂಬ ಧ್ಯೇಯ ವಾಕ್ಯದೊಂದಿಗೆ ಜನಾಂದೋಲನ ರೂಪಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಏ.10ರಂದು ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ.
ರಾಜ್ಯದಲ್ಲಿ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆʼಗಳೊಂದಿಗೆ ವಿಲೀನಗೊಳಿಸುವ ರಾಜ್ಯ ಸರ್ಕಾರದ ಉದ್ದೇಶಿತ ಯೋಜನೆಗೆ ಶೈಕ್ಷಣಿಕ ವಲಯದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಖಾಸಗಿ ಶಾಲೆಗಳಂತೆ ಎಲ್‌ಕೆಜಿಯಿಂದ ಪಿಯುವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ಒದಗಿಸುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹಿಂದೆ ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುವ ಹುನ್ನಾರ ಅಡಗಿದೆ ಎಂದು ಆರೋಪಿಸಿ ಪ್ರಗತಿಪರರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಹಾದಿ ತುಳಿದಿದ್ದು, ಸರ್ಕಾರಿ ಶಾಲೆ ಉಳಿಸಿ ಆಂದೋಲನ ಆರಂಭಿಸಿದ್ದಾರೆ.
ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದರಂತೆ ಒಟ್ಟು 6 ಸಾವಿರ ಕೆಪಿಎಸ್ ಶಾಲೆಗಳನ್ನು ತೆರೆಯಲು ಸರ್ಕಾರ ತೀರ್ಮಾನಿಸಿದೆ. 5 ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ 8 ರಿಂದ 10 ಸರ್ಕಾರಿ ಶಾಲೆಗಳನ್ನು ಸೇರಿಸಿ ಒಂದು ಕೆಪಿಎಸ್ ಶಾಲೆ ಸ್ಥಾಪಿಸುವ 'ಮ್ಯಾಗ್ನೆಟ್ ಯೋಜನೆ'ಯನ್ನು ಸದ್ದಿಲ್ಲದಂತೆ ಜಾರಿ ಮಾಡುತ್ತಿರುವುದು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಕೆಪಿಎಸ್ ಮಾಗ್ನೆಟ್ ಯೋಜನೆ ಭಾಗವಾಗಿ ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯಲ್ಲಿ ಸುಮಾರು 7 ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಯ ಜೊತೆ ವಿಲೀನಗೊಳಿಸುವ ಪ್ರಯತ್ನ ಆರಂಭಿಸಲಾಗಿತ್ತು. ಇದಕ್ಕೆ ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳು ಪ್ರತಿರೋಧ ವ್ಯಕ್ತಪಡಿಸಿದ್ದರು. ಆದರೆ, ಸರ್ಕಾರಿ ಶಾಲೆ ವಿಲೀನ ಪ್ರಕ್ರಿಯೆ ಕೈ ಬಿಡದ ಇಲಾಖೆಯು ಹೊಂಗನೂರು ಕೆಪಿಎಸ್ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಸುವಲ್ಲಿ ವಿಫಲರಾದ 5 ಶಾಲೆಗಳ ಶಿಕ್ಷಕರಿಗೆ ʼಷೋಕಾಸ್ ನೋಟೀಸ್ ' ಕೂಡ ನೀಡಿತ್ತು. ಈಗ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೆ ಕಸರತ್ತು ಆರಂಭಿಸಿರುವ ಪರಿಣಾಮ ರಾಜ್ಯವ್ಯಾಪಿ ಸರ್ಕಾರಿ ಶಾಲೆ ಉಳಿಸಿ ಆಂದೋಲನ ತೀವ್ರಗೊಂಡಿದೆ.
ರಾಜ್ಯದಲ್ಲಿರುವ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಲುವಾಗಿ ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ತಯಾರಿ ನಡೆಸಿದೆ. ಕೆಪಿಎಸ್ ಜತೆ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಸಲುವಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ 2500 ಕೋಟಿ ರೂ. ಸಾಲ ಪಡೆದು ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಇದನ್ನು ನಮ್ಮ ಸಂಘಟನೆ ಬಲವಾಗಿ ವಿರೋಧಿಸಲಿದೆ ಎಂದು ಎಐಡಿಎಸ್ಒ ರಾಜ್ಯ ಅಧ್ಯಕ್ಷ ಅಶ್ವಿನಿ ಕೆ.ಎಸ್. ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು
ಏನಿದು ಕೆಪಿಎಸ್ ಮ್ಯಾಗ್ನೆಟ್ ಯೋಜನೆ?
ಕಾಂಗ್ರೆಸ್ ನೇತೃತ್ವದ ಸರ್ಕಾರ ಕೆಲ ದಿನಗಳ ಹಿಂದೆ ಜಾರಿಗೊಳಿಸಲು ಮುಂದಾಗಿದ್ದ 'ಹಬ್ ಅಂಡ್ ಸ್ಪೋಕ್' ಮಾದರಿಯೇ ಕೆಪಿಎಸ್ ಮ್ಯಾಗ್ನೆಟ್ ಯೋಜನೆ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮ್ಯಾಗ್ನೆಟ್ ಎಂದು ಗುರುತಿಸಿ ಅದರ ಸುತ್ತಲಿನ ಶಾಲೆಗಳನ್ನು ವಿಲೀನಗೊಳಿಸುವ ಯೋಜನೆಯಾಗಿದೆ. ಗ್ರಾಮ ಪಂಚಾಯ್ತಿಗೆ ಒಂದರಂತೆ ಕೆಪಿಎಸ್ ಶಾಲೆ ತೆರೆದು, ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳೊಂದಿಗೆ ಸೇರಿಸಿ ಸಂಯುಕ್ತ ಹಾಗೂ ಸಂಪನ್ಮೂಲ ಶಾಲೆಗಳನ್ನಾಗಿ ಏಕೀಕರಿಸುವ ಗುರಿ ಹೊಂದಿದೆ.
ಪ್ರತಿ ಕ್ಲಸ್ಟರ್‌ನಲ್ಲಿ ಗ್ರೇಡ್ ಕವರೇಜ್, ದಾಖಲಾತಿ, ಸ್ಥಳ ಮತ್ತು ಮೂಲಸೌಕರ್ಯದ ಆಧಾರದ ಮೇಲೆ ಸ್ಕೋರಿಂಗ್ ವಿಧಾನ ಬಳಸಿ ಮ್ಯಾಗ್ನೆಟ್ ಶಾಲೆ ಗುರುತಿಸಲಾಗಿದೆ. 3 ರಿಂದ 5 ಕಿ.ಮೀ. ವ್ಯಾಪ್ತಿಯೊಳಗಿನ ಸಣ್ಣ ಶಾಲೆಗಳನ್ನು ಕೆಪಿಎಸ್ ಶಾಲೆಯೊಂದಿಗೆ ವಿಲೀನಗೊಳಿಸಲಾಗುತ್ತದೆ.
ಶಿಕ್ಷಣ ವ್ಯವಸ್ಥೆಯ ಖಾಸಗೀಕರಣ ಹುನ್ನಾರ
"ಸರ್ಕಾರ ಆರಂಭಿಸಲು ಉದ್ದೇಶಿಸಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂದೆ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರವಿದೆ. ಈ ಯೋಜನೆಗೆ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ (ಎಐಡಿಎಸ್ಒ) ತೀವ್ರ ವಿರೋಧ ವ್ಯಕ್ತಪಡಿಸಲಿದೆ. ಮ್ಯಾಗ್ನೆಟ್ ಶಾಲೆಗಳಿಂದ ಕೂಲಿ ಕಾರ್ಮಿಕರು, ರೈತರ ಮಕ್ಕಳು ಮತ್ತು ವಿಶೇಷವಾಗಿ ದೂರದ ಪ್ರದೇಶಗಳಿಂದ ಬರುವ ಬಾಲಕಿಯರು ಶಿಕ್ಷಣದ ಹಕ್ಕಿನಿಂದ ವಂಚಿತರಾಗಲಿದ್ದಾರೆ. ಭವಿಷ್ಯದಲ್ಲಿ ಕೆಪಿಎಸ್ ಶಾಲೆಗಳನ್ನು ಖಾಸಗಿಯವರ ಮೂಲಕ ನಿರ್ವಹಿಸುವುದಾಗಿ ಹೇಳಲಾಗುತ್ತಿದೆ. ಹಂತ ಹಂತವಾಗಿ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಉದ್ದೇಶ ಒಳಗೊಂಡಿದೆ. ಅದಕ್ಕಾಗಿಯೇ ನಾವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸುತ್ತಿದ್ದೇವೆ" ಎಂದು ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ʼದ ಫೆಡರಲ್ ಕರ್ನಾಟಕʼ ಕ್ಕೆ ತಿಳಿಸಿದರು.
"ಪ್ರತಿ ಪಂಚಾಯ್ತಿಗೆ ಒಂದು ಕೆಪಿಎಸ್ ಶಾಲೆ ತೆರೆಯುವುದರಿಂದ ಅಂದಾಜು 47 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲಿವೆ. ಸರ್ಕಾರದ ಈ ನಿರ್ಧಾರ ಖಂಡಿಸಿ ಕಳೆದ 4 ತಿಂಗಳಿಂದ ಹೋರಾಟ ನಡೆಸಲಾಗುತ್ತಿದೆ. ಹಳ್ಳಿಗಳಲ್ಲಿ ಹೋರಾಟ ರೂಪಿಸಲಾಗಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿ ಹಾಗೂ ಪೋಷಕರ ಪ್ರತಿಭಟನಾ ಸಮಾವೇಶಗಳನ್ನು ಸಂಘಟಿಸಲಾಗುತ್ತಿದೆ" ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ಬೆಂಗಳೂರು ಜಿಲ್ಲಾ ಸೆಕ್ರೇಟಿಯೇಟ್ ಸದಸ್ಯ ತುಳಸಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ದೊಡ್ಡಬಳ್ಳಾಪುರದಲ್ಲಿ 359 ಶಾಲೆ ಸ್ಥಗಿತ?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 359 ಶಾಲೆಗಳನ್ನು ಮುಚ್ಚಿ ಆರು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ತೆರೆಮರೆಯಲ್ಲಿ ಪ್ರಕ್ರಿಯೆ ಆರಂಭವಾಗಿದೆ ಎಂದು ಎಐಡಿಎಸ್ಒ ದೂರಿದೆ.
"ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮೌಖಿಕ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಹದಿನೈದು ದಿನಗಳಿಂದ ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ. ದೊಡ್ಡಬಳ್ಳಾಪುರದಿಂದಲೇ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಆರಂಭಿಸಲಾಗಿದೆ" ಎಂದು ಎಐಡಿಎಸ್ಒ ಜಿಲ್ಲಾ ಸಮಿತಿಯ ಮುಖಂಡ ಕೃಷ್ಣಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ದೊಡ್ಡಬಳ್ಳಾಪುರದ ಕಚೇರಿಪಾಳ್ಯ, ಅರಳುಮಲ್ಲಿಗೆ, ಮಾರ್ಕೆಟ್ ಚೌಕ, ನೇಯ್ಗೆಯವರ ಬೀದಿ, ಇಸ್ಲಾಂಪುರ ಸರ್ಕಾರಿ ಶಾಲೆ, ಎಲೆಪೇಟೆ ಶಾಲೆ, ಖಾಸ್‌ಬಾಗ್ ಸರ್ಕಾರಿ ಶಾಲೆ ಸೇರಿದಂತೆ ಹಲವು ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಸೇರಿಸುವ ಪ್ರಕ್ರಿಯೆ ಶುರುವಾಗಿದೆ. ಈ ಎಲ್ಲಾ ಶಾಲೆಗಳನ್ನು ರೋಜಿಪುರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ದೂಡಲು ಸಿದ್ಧತೆ ನಡೆದಿದೆ ಎಂದು ಎಐಡಿಎಸ್‌ಒ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕಲ್ಯಾಣಕುಮಾರ್ ತಿಳಿಸಿದರು.
ಯಾವ ಜಿಲ್ಲೆಯಲ್ಲಿ ಎಷ್ಟು ಶಾಲೆಗಳು ಮೇಲ್ದರ್ಜೆಗೆ?
ಬಾಗಲಕೋಟೆ 19, ಬಳ್ಳಾರಿ 3, ಬೆಳಗಾವಿ 49, ಬೀದರ್ 14, ಚಾಮರಾಜನಗರ 11, ಚಿಕ್ಕಬಳ್ಳಾಪುರ 13, ಚಿಕ್ಕಮಗಳೂರು 15, ಚಿತ್ರದುರ್ಗ 6, ದಕ್ಷಿಣ ಕನ್ನಡ 18, ದಾವಣಗೆರೆ 20, ಧಾರವಾಡ 18, ಗದಗ 10, ಹಾಸನ 15, ಹಾವೇರಿ 18, ಕಲಬುರಗಿ 25, ಕೊಡಗು 5, ಕೋಲಾರ 16, ಕೊಪ್ಪಳ 13, ಮಂಡ್ಯ 19, ಮೈಸೂರು 30, ರಾಯಚೂರು 18, ರಾಮನಗರ 12, ಶಿವಮೊಗ್ಗ 19, ತುಮಕೂರು 21, ಉಡುಪಿ 10, ಉತ್ತರ ಕನ್ನಡ 15, ವಿಜಯನಗರ 10, ವಿಜಯಪುರ 25, ಯಾದಗಿರಿಯಲ್ಲಿ 11 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಗುರುತಿಸಿದೆ.
ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಹೇಗಿದೆ?
ಕರ್ನಾಟಕದಲ್ಲಿ 47,493 ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು, 1,319 ಪದವಿ ಪೂರ್ವ ಕಾಲೇಜುಗಳಿವೆ. ಪ್ರಸ್ತುತ, 309 ಶಾಲೆಗಳಲ್ಲಿ ಮಾತ್ರವೇ ಎಲ್ಕೆಜಿಯಿಂದ ಪಿಯುವರೆಗಿನ ಶಿಕ್ಷಣ ಸೌಲಭ್ಯವಿದೆ.
2015-16 ರಲ್ಲಿ ಸರ್ಕಾರಿ ಶಾಲೆ ಮಕ್ಕಳ ದಾಖಲಾತಿ 47.1 ಲಕ್ಷದಷ್ಟಿತ್ತು. 2025-26ನೇ ಸಾಲಿಗೆ ದಾಖಲಾತಿಯು 38.2 ಲಕ್ಷಕ್ಕೆ ಕುಸಿಯಿತು. ಅಂದರೆ ಶೇ 46 ರಷ್ಟಿದ್ದ ಸರ್ಕಾರಿ ಶಾಲೆಗಳ ದಾಖಲಾತಿಯ ಪಾಲು ಪ್ರಸ್ತುತ, ಶೇ 38ಕ್ಕೆ ಕುಸಿದಿದೆ.
ಅದೇ ರೀತಿ ಖಾಸಗಿ ಶಾಲೆಗಳ ದಾಖಲಾತಿ ಪ್ರಮಾಣವು 2015-16 ರಲ್ಲಿ36.3 ಲಕ್ಷದಿಂದ 2025-26ನೇ ಸಾಲಿನಲ್ಲಿ 47 ಲಕ್ಷಕ್ಕೆ ಏರಿಕೆಯಾಗಿದೆ. 2025-26 ರಲ್ಲಿ 50 ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಶಾಲೆಗಳ ಸಂಖ್ಯೆಯೇ 25,683ಕ್ಕೆ ಏರಿಕೆಯಾಗಿವೆ.
ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ದರವು ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶೇ. 2.50 ರಷ್ಟು ಇದ್ದರೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶೇ.2.91 ಮತ್ತು ಪ್ರೌಢಶಾಲೆಯಲ್ಲಿ ಶೇ.22.88 ಇದೆ. ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಮುಂದುವರೆಯುವ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ತಗ್ಗಿದೆ. ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ದರವನ್ನು ಕಡಿಮೆ ಮಾಡಲು ಒಂದೇ ಸೂರಿನಡಿ ಪ್ರಾಥಮಿಕ ತರಗತಿಗಳಿಂದ ಪದವಿ ಪೂರ್ವ ತರಗತಿಯವರೆಗೆ ಶಿಕ್ಷಣ ನೀಡುವುದೇ ಸೂಕ್ತ ಪರಿಹಾರ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ.
ಕೆಪಿಎಸ್ ಶಾಲೆಗಳಿಗೆ ಅನುದಾನ ಹೇಗೆ?
ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ನಿಂದ 2 ಸಾವಿರ ಕೋಟಿ ಸಾಲ ಪಡೆದು, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಸ್ಥಾಪನೆ ಹಾಗೂ ಉನ್ನತೀಕರಣಕ್ಕೆ ಸರ್ಕಾರ ನಿರ್ಧರಿಸಿದೆ.
ಕಲ್ಯಾಣ ಕರ್ನಾಟಕದಲ್ಲಿ ಕೆಕೆಆರ್‌ಡಿಬಿ ನಿಧಿ, ಗಣಿ ಬಾಧಿತ ತಾಲೂಕುಗಳಲ್ಲಿ ಕೆಎಂಇಆರ್‌ಸಿ ನಿಧಿಯನ್ನು ಬಳಸಿ ಕೆಪಿಎಸ್ ಶಾಲೆ ಆರಂಭಿಸಲು ಸರ್ಕಾರ ಆದೇಶಿಸಿದೆ. ಕಲ್ಯಾಣ ಕರ್ನಾಟಕದಲ್ಲಿ200 ಹಾಗೂ ಗಣಿಬಾಧಿತ ಪ್ರದೇಶಗಳಲ್ಲಿ100 ಹೊಸ ಕೆಪಿಎಸ್ ಶಾಲೆ ತೆರೆಯುವ ಮೂಲಕ ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಸರ್ಕಾರದ ಉದ್ದೇಶವಾಗಿದೆ. ಶಿಕ್ಷಣ ಸಚಿವರು ಸದನದಲ್ಲಿ ಮಾತನಾಡುವಾಗ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳಿದರೂ ತೆರೆಮರೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಆರಂಭಕ್ಕೆ ಪ್ರಯತ್ನಿಸುತ್ತಿರುವುದು ಜನರಿಗೆ ಮಾಡುತ್ತಿರುವ ಮೋಸ ಎಂಬ ಟೀಕೆಯೂ ಕೇಳಿಬಂದಿದೆ.
ರಾಜ್ಯದಲ್ಲಿ ಬಡ ರೈತ, ಕಾರ್ಮಿಕರ ಮಕ್ಕಳು ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಸುಮಾರು 38 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಲವರು ಬಡತನದ ಕಾರಣ ಶಾಲೆ ತೊರೆದಿದ್ದಾರೆ.
ಕಳೆದ 15 ವರ್ಷಗಳಲ್ಲಿ 17 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆ ಯಿಂದ ಹೊರಗುಳಿದಿರುವುದು ಹಲವು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಹೀಗಿರುವಾಗ, ಬಡ ಮಕ್ಕಳ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.
ಏ.10ಕ್ಕೆ ರಾಜ್ಯ ಮಟ್ಟದ ಸಮಾವೇಶ
'ಕೆಪಿಎಸ್ ಯೋಜನೆ' ಕೈಬಿಟ್ಟು ʼನಮ್ಮೂರ ಶಾಲೆ ಉಳಿಸಿʼ ಎಂಬ ಧ್ಯೇಯ ವಾಕ್ಯದೊಂದಿಗೆ ಜನಾಂದೋಲನ ರೂಪಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಏ.10ರಂದು ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಫ್ರೀಡಂ ಪಾರ್ಕಿನಲ್ಲಿ ನಡೆಯುವ ಪ್ರತಿಭಟನಾ ಸಮಾವೇಶದಲ್ಲಿ ವಿದ್ಯಾರ್ಥಿಗಳು, ಯುವಜನರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಪೋಷಕರು ಸೇರಿದಂತೆ ಪ್ರಗತಿಪರ ಚಿಂತಕರು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ.
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಿಂದ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಲಿವೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇಂತಹ ಜನವಿರೋಧಿ ಕ್ರಮ ಕೈಗೊಳ್ಳಬಾರದು ಎಂದು ಒತ್ತಾಯಿಸಲಾಗಿದೆ.
" ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಬೃಹತ್ ಜನಹೋರಾಟ ಆಗಬೇಕು. ಸರ್ಕಾರಿ ಶಾಲೆಗಳನ್ನು ಉಳಿಸುವುದರ ಜೊತೆಗೆ ಬಲಪಡಿಸಲು ಈ ಹೋರಾಟವೇ ದಾರಿಯಾಗಬೇಕು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಖಾತ್ರಿಪಡಿಸಲು ಮೊದಲಿಗೆ ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಡಬೇಕು." ಎಂದು ಕನ್ನಡಪರ ಹೋರಾಟಗಾರ ಆವಲಮೂರ್ತಿ ಒತ್ತಾಯಿಸಿದರು.
2018-19ರಲ್ಲಿ 176 ಶಾಲೆಗಳೊಂದಿಗೆ ಆರಂಭವಾದ ಕರ್ನಾಟಕ ಪಬ್ಲಿಕ್ ಶಾಲೆಗಳು(ಕೆಪಿಎಸ್) ಪ್ರಸ್ತುತ ರಾಜ್ಯದಾದ್ಯಂತ 309ಕ್ಕೆ ಏರಿಕೆಯಾಗಿವೆ. 2021ರಲ್ಲಿ ಕೆಪಿಎಸ್ ಶಾಲೆಗಳಿಗೆ 785 ವಿದ್ಯಾರ್ಥಿಗಳು ದಾಖಲಾಗಿದ್ದರು. 2025-26ರಲ್ಲಿ ಈ ಸಂಖ್ಯೆ 819 ವಿದ್ಯಾರ್ಥಿಗಳಿಗೆ ಏರಿಕೆಯಾಗಿದೆ. ಶಾಲೆಗಳ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಶೇ.79.97ರಷ್ಟಿದೆ. 2018 ಮತ್ತು 2024ರ ನಡುವೆ ಆರಂಭವಾದ 308 ಕೆಪಿಎಸ್ ಶಾಲೆಗಳಲ್ಲಿ ಈವರೆಗೆ 2.8 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.
ಕೆಪಿಎಸ್ ಶಾಲೆಯಿಂದ ಆಗುವ ಸಮಸ್ಯೆಗಳೇನು?
ಶಿಕ್ಷಣ ಇಲಾಖೆಯಿಂದ ನಿರಂತರ ಪರಿಶೀಲನೆ ಇಲ್ಲದಿರುವುದು ಕೆಪಿಎಸ್ ವ್ಯವಸ್ಥೆಯ ದೊಡ್ಡ ಲೋಪವಾಗಿದೆ. ಕೆಪಿಎಸ್ ಶಾಲೆಗಳಿಗೆ ಯಾವುದೇ ಗುಣಮಟ್ಟ ಕಾರ್ಯಾಚರಣೆಯ ನೀತಿ ಇಲ್ಲ, ಶಿಕ್ಷಕರ ಕೊರತೆ, ಒಂದೇ ಕೆಪಿಎಸ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿಗೆ ಕನಿಷ್ಠ ನಾಲ್ಕು ವರ್ಗಾವಣೆ ಪ್ರಮಾಣಪತ್ರಗಳನ್ನು ಪಡೆಯುವುದು ಅಗತ್ಯವಾಗಲಿದೆ. ನಾಲ್ಕು ವಿಭಿನ್ನ ಯುಡಿಐಎಸ್ಇ (UDISE) ಕೋಡ್ಗಳ ಇರುವಿಕೆ, ಕೆಪಿಎಸ್ ಶಾಲೆಗಳು ಮತ್ತು ಕಾಲೇಜುಗಳಿಂದ ನಾಲ್ಕು ವಿಭಿನ್ನ ಬ್ಯಾಂಕ್ ಖಾತೆಗಳ ನಿರ್ವಹಣೆ, ಅಸಮರ್ಪಕ ಧನಸಹಾಯದ ಕಾರ್ಯನಿರ್ವಹಣೆ ಅಥವಾ ವಿಭಿನ್ನವಾಗಿ ಹಣ ಉಪಯೋಗ ಸೇರಿ ಹಲವು ಸಮಸ್ಯೆಗಳನ್ನು ಕೆಪಿಎಸ್ ಶಾಲೆಗಳು ಎದುರಿಸುತ್ತಿವೆ.
500 ಕೆಪಿಎಸ್ ಶಾಲೆಗಳ ಆರಂಭಕ್ಕೆ ಸಿದ್ಧತೆ
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಾಲ ಯೋಜನೆಯಡಿ ಒಟ್ಟು 500 ಮ್ಯಾಗ್ನೆಟ್ ಶಾಲೆಗಳನ್ನು (ಕೆಪಿಎಸ್) ಆರಂಭಿಸಲು ನಿರ್ಧರಿಸಲಾಗಿದೆ.
2025-26 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ 200 ಸರ್ಕಾರಿ ಶಾಲೆಗಳನ್ನು ಗುರುತಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಡಿಪಿಆರ್ ಸಿದ್ಧಪಡಿಸಲಾಗಿದೆ. ಅದರಂತೆ ಪ್ರತಿ ಶಾಲೆಗೆ 2 ಕೋಟಿ ರೂ.ಗಳಿಂದ 4 ಕೋಟಿ ರೂ. ಅನುದಾನ ಒದಗಿಸಲು ಇಲಾಖೆ ಅನುಮತಿ ನೀಡಿ ಆದೇಶಿಸಿದೆ.
ರಾಜ್ಯಾದ್ಯಂತ ಒಟ್ಟು 800 ಮ್ಯಾಗ್ನೆಟ್ ಶಾಲೆಗಳನ್ನು ಎಡಿಬಿ ಯೋಜನೆ, ಕೆಕೆಆರ್‌ಡಿಬಿ ಹಾಗೂ ಕೆಎಂಆರ್‌ಸಿಇ ನಿಧಿಗಳಡಿ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸುವ ಸಂಬಂಧ ವಿಸ್ತ್ರತ ಯೋಜನಾ ವರದಿ ತಯಾರಿಸಲು ಕೆಟಿಪಿಪಿ ಕಾಯಿದೆ ಮತ್ತು ನಿಯಮಗಳಿಗೆ ಅನುಗುಣವಾಗಿ ಟೆಂಡರ್ ಕರೆಯಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

