
ಸಾಂದರ್ಭಿಕ ಚಿತ್ರ
ಈಗ ಉಪಚುನಾವಣೆ, ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆ: 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಮರೀಚಿಕೆ?
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕೇತ್ರಕ್ಕೆ ಉಪಚುನಾವಣೆ ಘೋಷಿಸುವ ಮೂಲಕ ನೀತಿ ಸಂಹಿತೆ ಜಾರಿಯಾಗಿದ್ದು, ಹೊಸ ನೇಮಕಾತಿ ಆದೇಶ ಹೊರಡಿಸಲು ಅವಕಾಶವಿಲ್ಲ.
ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಕನಸು ಕಾಣುತ್ತಿರುವ ಲಕ್ಷಾಂತರ ಯುವ ಜನತೆ ನೇಮಕಾತಿ ಅಧಿಸೂಚನೆ ಇಲ್ಲದೆ ಮತ್ತಷ್ಟು ತಿಂಗಳುಗಳು ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಒಳ ಮೀಸಲಾತಿ ಸೇರಿದಂತೆ ಹಲವು ಗೊಂದಲಗಳಿಂದ ಕಳೆದ ಮೂರು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದಿರುವುದು ಸ್ಪರ್ಧಾರ್ಥಿಗಳಲ್ಲಿ ನಿರಾಸೆ ಮೂಡಿಸಿತ್ತು.
ಇದೀಗ ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿರುವುದರಿಂದ ಹೊಸ ಅಧಿಸೂಚನೆ ಮತ್ತೆ ಮರೀಚಿಕೆಯಾಗಿದೆ. ಉಪಚುನಾವಣೆಗಳ ನಡೆದ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಾಲುಸಾಲಾಗಿ ಬರಲಿರುವುದರಿಂದ ನೇಮಕಾತಿ ಪ್ರಕ್ರಿಯೆ ಮತ್ತೆ ಮತ್ತೆ ಮುಂಡೂಡಿಕೆ ಆಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಉದ್ಯೋಗಾಕಾಂಕ್ಷಿಗಳ ನಿರಾಸೆಯ ಜತೆ ಸಿಟ್ಟು, ಆಕ್ರೋಶ ಮತ್ತೆ ಹೆಚ್ಚಾಗಿದೆ.
ಈಗೇನು ದಾರಿ?
ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡಿದ್ದು, ಕಾಂಗ್ರೆಸ್‌ನ ಎಚ್.ವೈ. ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸುವ ಮೂಲಕ ನೀತಿ ಸಂಹಿತೆ ಜಾರಿಯಾಗಿದೆ. ಹಾಗಾಗಿ ಮೇ.೪ರಂದು ಫಲಿತಾಂಶ ಹೊರಬೀಳುವವರೆಗೂ ಯಾವುದೇ ಹೊಸ ನೇಮಕಾತಿಗಳನ್ನು ಹೊರಡಿಸಲು ಅವಕಾಶವಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕಾದರೆ ಚುನಾವಣಾ ಆಯೋಗದ ಅನುಮತಿ ಕಡ್ಡಾಯವಾಗಿದೆ.
ಮುಂದಿವೆ ಸಾಲು ಸಾಲು ಚುನಾವಣೆ
ರಾಜ್ಯ ಸರ್ಕಾರ ಶೀಘ್ರವೇ ನೇಮಕಾತಿ ಅಧಿಸೂಚನೆ ಹೊರಡಿಸದಿದ್ದರೆ ವರ್ಷಾಂತ್ಯದವರೆಗೂ ಸಾಲು ಸಾಲು ಚುನಾವಣೆಗಳು ಎದುರಾಗಲಿವೆ. ಇದೀಗ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಮೇ-ಜೂನ್ ವೇಳೆಗೆ ಗ್ರೇಟರ್ ಬೆಂಗಳೂರು ಐದು ಪಾಲಿಕೆಗಳ ಚುನಾವಣೆ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿವೆ. ನಂತರ ಆಗಸ್ಟ್ - ಸೆಪ್ಟಂಬರ್ ವೇಳೆಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವುದರಿಂದ ವರ್ಷಾಂತ್ಯದವರೆಗೂ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ವೇಳೆ ಯಾವುದೇ ಅಧಿಸೂಚನೆ ಹೊರಡಿಸುವಂತಿಲ್ಲ. ಆದ್ದರಿಂದ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಸ್ಪರ್ಧಾರ್ಥಿಗಳು ಆಗ್ರಹಿಸಿದ್ದಾರೆ.
ರಾಜಕೀಯ ನಾಯಕರಿಗೆ ಇಚ್ಛಾಶಕ್ತಿ ಕೊರತೆ
"ಸರ್ಕಾರ ನೇಮಕಾತಿಗಳನ್ನು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದೆ. ಒಳ ಮೀಸಲಾತಿಗೆ ರಾಜ್ಯಪಾಲರು ಅಂಕಿತ ಹಾಕಿದರೂ ಸರ್ಕಾರ ಹಲವಾರು ಗೊಂದಲಗಳಲ್ಲಿ ಸಿಲುಕಿ ಪರಿಶಿಷ್ಟ ಜಾತಿಗೆ ಮೀಸಲು ಕಲ್ಪಿಸುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳು ಧಾರವಾಡದಲ್ಲಿ ನಡೆಸಿದ ಬೃಹತ್ ಹೋರಾಟದಿಂದ ಎಚ್ಚೆತ್ತಿದ್ದ ರಾಜ್ಯ ಸರ್ಕಾರ ಮಾರ್ಚ್ ಅಂತ್ಯದೊಳಗೆ 56 ಸಾವಿರ ಹುದ್ದೆಗಳನ್ನು ನೇಮಕ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ," ಎಂದು ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿ ಅಂಕೇಶ್ ಆರ್. ʼದ ಪೆಢರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಇದರ ನಡುವೆಯೇ ರಾಜ್ಯದ ಎರಡು ಕ್ಷೇತ್ರಗಳಿಗೆ ಉಪ ಚನಾವಣೆ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆಯೂ ಅಡ್ಡಿ ಬರುತ್ತದೆ. ಈಗ ಸರ್ಕಾರವನ್ನು ಪ್ರಶ್ನಿಸಿದರೆ ಕೇಂದ್ರ ಚುನಾವಣಾ ಆಯೋಗದ ಮೇಲೆ ಬೊಟ್ಟು ಮಾಡುತ್ತಾರೆ. ರಾಜ್ಯದ ರಾಜಕೀಯ ನಾಯಕರಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಒಳ ಮೀಸಲಾತಿ ಅನ್ವಯವೇ ಮುಂದಿನ ನೇಮಕಗಳು ನಡೆಯಬೇಕು" ಎಂದು ಅಭಿಪ್ರಾಯಪಟ್ಟರು.
ನೇಮಕಗಳಿಗೆ ವೇಗ ನೀಡಲಿ
ಫಾರ್‌ಸೈಟ್ ಅಕಾಡೆಮಿಯ ಸಂಸ್ಥಾಪಕ ತೌಸೀಫ್ ಪಾಷಾ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, "ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಯಾವುದೇ ಬೃಹತ್ ನೇಮಕಾತಿಗಳು ನಡೆದಿಲ್ಲ. ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಒಳಮೀಸಲಾತಿ ಕಾರಣ ನೀಡಿ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿಲ್ಲ. ಈಗಾಗಲೇ ಅಧಿಸೂಚನೆಯಾಗಿರುವ ಪಶುವೈದ್ಯಕೀಯ ವೈದ್ಯರು ಹಾಗೂ ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿಗಳ ಹುದ್ದೆಗಳ ಪರೀಕ್ಷೆಗಳನ್ನೂ ಕೆಪಿಎಸ್‌ಸಿ ನಡೆಸುತ್ತಿಲ್ಲ. ಎಲ್ಲಾ ನೇಮಕಗಳು ವಿಳಂಬವಾಗುತ್ತಿವೆ. ಸರ್ಕಾರ ಶೀಘ್ರವೇ ಬಜೆಟ್‌ನಲ್ಲಿ ಘೋಷಿಸಿರುವಂತೆ 56 ಸಾವಿರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕು" ಎಂದು ಅಭಿಪ್ರಾಯಪಟ್ಟರು.
ಚುನಾವಣೆ ನೀತಿ ಸಂಹಿತೆಯಿಂದ ನೇಮಕಾತಿಗೆ ಅಡ್ಡಿ
ರಾಜ್ಯದಲ್ಲಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿರುವುದರಿಂದ ಕೇಂದ್ರ ಚುನಾವಣಾ ಆಯೋಗದ ನೀತಿ ಸಂಹಿತೆ ಪ್ರಕಾರ, ಯಾವುದೇ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಬಾರದು. ಆದರೆ ಈಗಾಗಲೇ ನೇಮಾಕತಿಗೆ ಅಧಿಸೂಚನೆ ಹೊರಡಿಸಿರುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಅವುಗಳ ಪ್ರಕ್ರಿಯೆ ಮುಂದುವರಿಸಬಹುದು. ಆದರೆ, ಸರ್ಕಾರ ಹೊಸ ಅಧಿಸೂಚನೆ ಹೊರಡಿಸಬೇಕಾದರೆ ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಆ ಸಾಧ್ಯತೆ ಕಡಿಮೆ. ಇನ್ನು ಅನುಮತಿ ನೀಡದಿದ್ದರೆ ಎರಡು ತಿಂಗಳು ಕಾಯಬೇಕಾದ ಪರಿಸ್ಥಿತಿ ಸ್ಪರ್ಧಾರ್ಥಿಗಳದ್ದು.
ಹೋರಾಟದ ಎಚ್ಚರಿಕೆ
ಸ್ಪರ್ಧಾರ್ಥಿ ವಿಜಯಪುರದ ಕವಿತಾ ಪಾಟೀಲ್ ಮಾತನಾಡಿ, "ಕಳೆದ ಮೂರು ವರ್ಷಗಳಿಂದ ಗ್ರೂಪ್ -ಸಿ ಪರೀಕ್ಷೆಗಳಿಗೆ ಧಾರವಾಡದಲ್ಲಿ ತಯಾರಿ ನಡೆಸುತ್ತಿದ್ದೇನೆ. ಸರ್ಕಾರ ನೇಮಕಾತಿಗೆ ಅಧಿಸೂಚನೆ ಮಾಡದೇ ಕೇವಲ ನೆಪಗಳನ್ನು ಹುಡುಕುತ್ತಿದೆ. ಬಜೆಟ್‌ನಲ್ಲಿ ಹೇಳಿದಂತೆ ಸಿಎಂ ಸಿದ್ದರಾಮಯ್ಯ 56 ಸಾವಿರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಸರ್ಕಾರ ವಿದ್ಯಾರ್ಥಿಗಳ ತಾಳ್ಮೆಯನ್ನು ಪರೀಕ್ಷೆ ಮಾಡಬಾರದು. ಇದೀಗ ಉಪಚುನಾವಣೆ ಕೇವಲ ಎರಡು ಕ್ಷೇತ್ರಗಳಿಗೆ ಮಾತ್ರ ಘೋಷಣೆಯಾಗಿದ್ದು, ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಿ. ಇಲ್ಲವಾದರೆ ಮುಂದನ ದಿನಗಳಲ್ಲಿ ಮತ್ತೊಮ್ಮೆ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಸೂಚನೆಗೆ ಸಿದ್ಧವಾಗಿರುವ ಹುದ್ದೆಗಳು
ಆರ್ಥಿಕ ಇಲಾಖೆ 24 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮತಿ ನೀಡಿದೆ. ಅವುಗಳಲ್ಲಿ ಪ್ರಮುಖವಾಗಿ ಪೊಲೀಸ್ ಇಲಾಖೆ 8,100, ಶಿಕ್ಷಣ ಇಲಾಖೆಯಲ್ಲಿ 15,000, ಉನ್ನತ ಶಿಕ್ಷಣ ಇಲಾಖೆಯ ಪದವಿ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 3,000, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2,500 ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ಕಂದಾಯ ಇಲಾಖೆಯಲ್ಲಿನ 500 ಗ್ರಾಮ ಆಡಳಿತಾಧಿಕಾರಿಗಳು ಸೇರಿದಂತೆ ಒಟ್ಟು 56 ಸಾವಿರಕ್ಕೂ ಹುದ್ದೆಗಳಿಗೆ ನೇಮಕಾತಿ ನಡೆಸಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿವೆ 2.80 ಲಕ್ಷ ಖಾಲಿ ಹುದ್ದೆಗಳು
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಬಹುತೇಕ ಇಲಾಖೆಗಳಲ್ಲೂ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕಾದ ಒತ್ತಡದಲ್ಲಿ ನೌಕರರಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವಿದ್ಯಾರ್ಥಿಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ʼಎʼ ದರ್ಜೆಯ 16,017 ಹುದ್ದೆಗಳು ಖಾಲಿ ಇವೆ. ʼಬಿʼ ದರ್ಜೆಯ 16,734 ಹುದ್ದೆಗಳು. ʼಸಿʼ ದರ್ಜೆಯ 1,66,021 ಹುದ್ದೆಗಳು. ʼಡಿʼ ದರ್ಜೆಯ 77,614 ಹುದ್ದೆಗಳು ಖಾಲಿ ಇವೆ. ಗೃಹ ಇಲಾಖೆಯಲ್ಲಿ 26,168, ಕಂದಾಯ ಇಲಾಖೆಯಲ್ಲಿ11,145, ಪಶು ಸಂಗೋಪನೆ ಇಲಾಖೆಯಲ್ಲಿ 10,755, ಸಮಾಜ ಕಲ್ಯಾಣ ಇಲಾಖೆಯಲ್ಲಿ 9,980, ಆರ್ಥಿಕ ಇಲಾಖೆ 9,536, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334, ಕಾನೂನು ಇಲಾಖೆಯಲ್ಲಿ 7,853, ಕೃಷಿ ಇಲಾಖೆಯಲ್ಲಿ 6,773, ಅರಣ್ಯ ಇಲಾಖೆಯಲ್ಲಿ 6,337 ಸೇರಿದಂತೆ ವಿವಿಧ ಇಲಾಖೆಯಲ್ಲಿ 2.80 ಲಕ್ಷ ಹುದ್ದೆಗಳನ್ನು ಸರ್ಕಾರ ಹಂತ ಹಂತವಾಗಿ ಭರ್ತಿ ಮಾಡಬೇಕಿದೆ.

